• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರು, ಐಟಿ ಮತ್ತು ಸಮಸ್ಯೆಗಳು

By Staff
|
    Sampige Srinivas
  • ಸಂಪಿಗೆ ಶ್ರೀನಿವಾಸ, ಬೆಂಗಳೂರು

sampiges@hotmail.com

ಇತ್ತೀಚೆಗೆ ಕೆಲವು ಪ್ರಮುಖ ಐಟಿ ಸಂಸ್ಥೆಗಳು ಬೆಂಗಳೂರಿನಲ್ಲಿ ತಮ್ಮ ಕಾರ್ಯಚಟುವಟಿಕೆಗಳನ್ನು ವಿಸ್ತರಣೆಗೊಳಿಸದಿರಲು ನಿರ್ಧರಿಸಿವೆ. ಈ ನಿರ್ಧಾರಕ್ಕೆ ಬರಲು ಆ ಸಂಸ್ಥೆಗಳು ನೀಡಿರುವ ಕಾರಣ ಏನೇ ಇದ್ದರೂ ಬೆಂಗಳೂರಿಗೆ ಇದೊಂದು ಒಳ್ಳೆಯ ಬೆಳವಣಿಗೆ ಎನ್ನಲಡ್ಡಿಯಿಲ್ಲ. ಈಗಾಗಲೇ ಬೆಂಗಳೂರಿನಲ್ಲಿ ಸಾವಿರಾರು ಐಟಿ ಸಂಸ್ಥೆಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಈ ಸಂಸ್ಥೆಗಳು ತಮ್ಮಿಂದ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಿವೆ, ಬೆಂಗಳೂರಿನ ಅಭಿವೃದ್ಧಿಗೆ ಐಟಿ ಸಂಸ್ಥೆಗಳ ಕೊಡುಗೆ ಅಪಾರ ಎಂದು ಹೇಳಿಕೊಳ್ಳುತ್ತವೆ. ಮೇಲ್ನೋಟಕ್ಕೆ ಸ್ವಲ್ಪ ಮಟ್ಟಿಗೆ ಇದು ಸರಿಯೆನಿಸಿದರೂ, ಈ ಸಂಸ್ಥೆಗಳಿಂದ ಬೆಂಗಳೂರಿನ ಮೇಲೆ ಆಗಿರುವ ದುಷ್ಪರಿಣಾಮಗಳನ್ನು ನೋಡಿದರೆ ಬೆಂಗಳೂರಿಗೆ ಇವರ ಕೊಡುಗೆಗಿಂತ ಹಾನಿಯೇ ಹೆಚ್ಚಾಗಿದೆ.

ಐಟಿ ಉದ್ಯೋಗವನ್ನರಸಿ ಬರುವ ಪರರಾಜ್ಯಗಳವರ ವಲಸೆಯಿಂದ ಬೆಂಗಳೂರಿನ ಜನಸಂಖ್ಯೆ ಮಿತಿಮೀರಿ ನಗರದ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರಿದೆ. ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸಲು ನರಕ ಯಾತನೆ ಅನುಭವಿಸಬೇಕಾಗಿದೆ. ಎಷ್ಟೇ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿದರೂ ಅತಿಯಾದ ವಾಹನ ದಟ್ಟನೆಯಿಂದ ಹಾಗೂ ರಭಸದ ಮಳೆಯಿಂದ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ. ಈ ವಾಹನ ದಟ್ಟಣೆಯಿಂದ ವಾಯುಮಾಲಿನ್ಯ, ಶಬ್ದಮಾಲಿನ್ಯ ಹೆಚ್ಚಿ ಬೆಂಗಳೂರಿಗರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗಿದೆ. ಬೆಂಗಳೂರಿನಲ್ಲಿ ಮನೆ ಬಾಡಿಗೆ, ನಿವೇಶನ, ಜೊತೆಗೆ ದಿನನಿತ್ಯದ ವಸ್ತುಗಳ ಬೆಲೆಯೂ ಗಗನಕ್ಕೇರಿ ಜನಸಾಮಾನ್ಯರಿಗೆ ಹೊರೆಯಾಗಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಐಟಿಯಿಂದ ಬೆಂಗಳೂರಿನಲ್ಲಿ ಜೀವನ ನಿರ್ವಹಣೆಯ ವೆಚ್ಚ ಅತಿ ದುಬಾರಿಯಾಗಿದೆ.

ಐಟಿಯೇತರ ಉದ್ಯೋಗಿಗಳಿಗಿಂತ, ಐಟಿ ಉದ್ಯೋಗಿಗಳಿಗೆ ಹೆಚ್ಚು ಸಂಬಳ ಸಿಗುತ್ತದೆಯೆನ್ನುವುದು ಸುಳ್ಳಲ್ಲ. ಆದರೆ ಇದರಿಂದ ಐಟಿ ಉದ್ಯೋಗಿಗಳಲ್ಲಿ ಕೊಳ್ಳುಬಾಕತನ ಹೆಚ್ಚಿ ಸಿಕ್ಕಾಪಟ್ಟೆ ದುಂದುವೆಚ್ಚ ಮಾಡುವುದು ಹೆಚ್ಚಾಗಿದೆ. ಬ್ಯಾಂಕಿನವರು ಕೊಡುವ ವಿವಿಧ ತರಹದ ಲೋನ್‌ಗಳ, ಕ್ರೆಡಿಟ್‌ ಕಾರ್ಡುಗಳ ಆಮಿಷಕ್ಕೆ ಬಹಳಷ್ಟು ಮಂದಿ ಐಟಿ ಉದ್ಯೋಗಿಗಳು ಬಲಿಯಾಗಿ ಸಾಲಗಾರರಾಗಿದ್ದಾರೆ. ಐಟಿಯವರಿಗೆ ಸಿಗುವ ಹೆಚ್ಚು ಸಂಬಳ ಸುಮ್ಮನೆ ಸಿಗುವುದಿಲ್ಲ. ಅದಕ್ಕೆ ತಕ್ಕಂತೆ ಕೆಲಸ ತೆಗೆಸುತ್ತಾರೆ. ದಿನಕ್ಕೆ 10ರಿಂದ 12 ಘಂಟೆ ದುಡಿಯಬೇಕಾಗುತ್ತದೆ.

ಹೆಚ್ಚಾಗಿ ಅಮೆರಿಕಾ, ಯೂರೋಪ್‌, ಆಸ್ಟ್ರೇಲಿಯಾ ಮುಂತಾದ ವಿದೇಶಿ ಕಂಪನಿಗಳಿಗೆ ಕೆಲಸ ಮಾಡಬೇಕಾಗಿರುವುದರಿಂದ ಸಾಮಾನ್ಯವಾಗಿ ಐಟಿ ಉದ್ಯೋಗಿಗಳ ಕೆಲಸದ ಸಮಯ ಆಯಾ ದೇಶಗಳ ಕಚೇರಿ ಸಮಯಕ್ಕೆ ತಕ್ಕಂತೆ ಇರುತ್ತದೆ. ಉದಾ : ಆಸ್ಟ್ರೇಲಿಯಾ ದೇಶಕ್ಕೆ ಸಂಬಂಧಿಸಿದ ಕೆಲಸವಿದ್ದರೆ ಕೆಲಸದ ಸಮಯ ಬೆಳ್ಳಿಗೆ 5 ಘಂಟೆಗೆ ಶುರುವಾಗಿ ಮಧ್ಯಾಹ್ನ ಮುಗಿಯುತ್ತದೆ. ಯೂರೋಪ್‌ ದೇಶಗಳಲ್ಲಿ ಕೆಲಸದ ಸಮಯ ಮಧ್ಯಾಹ್ನ 2 ಘಂಟೆಗೆ ಪ್ರಾರಂಭವಾಗಿ ರಾತ್ರಿ 11 ಘಂಟೆವರೆಗೂ ಇರುತ್ತದೆ.

ಅದೇ ಅಮೆರಿಕವಾದರೆ ಅವರ ದಿನದ ಸಮಯ ಅಂದರೆ ಇಲ್ಲಿ ರಾತ್ರಿಯಲ್ಲಿ ಕೆಲಸಮಾಡಬೇಕಾಗುತ್ತದೆ. ಹೀಗೆ ಬೇರೆ ಬೇರೆ ಸಮಯಗಳಲ್ಲಿ ಕೆಲಸ ಮಾಡುವುದರಿಂದ ಬಹಳಷ್ಟು ಉದ್ಯೋಗಿಗಳ ದೇಹದ ಗಡಿಯಾರದ ಮೇಲೆ ದುಷ್ಪರಿಣಾಮವಾಗಿ ಅವರ ಆರೋಗ್ಯ ಕೆಡುತ್ತದೆ. ಈ ರೀತಿಯಲ್ಲಿ ಅವೇಳೆಯಲ್ಲಿ ದುಡಿದು ಮನೆಗೆ ಬರುವ ಉದ್ಯೋಗಿಗಳಿಗೆ ಮನೆಯಲ್ಲೂ ಸರಿಯಾಗಿ ನಿದ್ರೆ ಮಾಡಲಾಗದೆ ಅವರ ಸ್ಥಿತಿ ನಿಜಕ್ಕೂ ಶೋಚನೀಯವಾಗಿರುತ್ತದೆ. ಇದು ಐಟಿ, ಬಿ.ಪಿ.ಓ ಅಥವಾ ಕಾಲ್‌ಸೆಂಟರ್‌ಗಳಲ್ಲಿ ದುಡಿಯುವ ಬಹಳಷ್ಟು ಮಂದಿಯ ದಿನಚರಿ. ಈ ರೀತಿಯ ದಿನಚರಿಯಿಂದ ಉದ್ಯೋಗಿಗಳಲ್ಲಿ ಮಾನಸಿಕ ಉದ್ವೇಗ ಹೆಚ್ಚಿ ಬೊಜ್ಜು, ಅತಿಯಾದ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಗಳಿಗೆ ತುತ್ತಾಗುವ ಮಂದಿ ಹೆಚ್ಚಾಗುತ್ತಿದ್ದಾರೆ. ಜೊತೆಗೆ ಕಚೇರಿಯಲ್ಲಿ ಒಂದೇ ಸಮನೆ ಗಣಕದ ಮುಂದೆ ಕೂತು ಕೆಲಸ ಮಾಡುವ ಉದ್ಯೋಗಿಗಳಲ್ಲಿ ಕಣ್ಣು ಬೇನೆ, ತಲೆನೋವು, ಬೆನ್ನುನೋವು ಮುಂತಾದವು ಅತಿಯಾಗಿ ಕಾಣಿಸಿಕೊಳ್ಳತೊಡಗಿವೆ. ಇದಕ್ಕೆ ಕಚೇರಿಯಲ್ಲಿನ ಉಸಿರುಗಟ್ಟುವ ವಾತಾವರಣ, ಸರಿಯಾದ ಪೀಠೋಪಕರಣಗಳಿಲ್ಲದಿರುವುದು ಮುಂತಾದವೂ ಕಾರಣವಾಗಿರುತ್ತವೆ. ಒಟ್ಟಿನಲ್ಲಿ ಐಟಿ ಉದ್ಯೋಗಿಗಳ ಜೀವನ ಶೈಲಿಯಲ್ಲಿ ಬಹಳ ಏರುಪೇರಾಗಿದೆ.

ಇನ್ನು ಐಟಿ/ಬಿ.ಪಿ.ಓಗಳ ಒತ್ತಡದ ಕೆಲಸದಲ್ಲಿ ದುಡಿದ ಮನಸ್ಸಿಗೆ ಬಿಡುವಿನ ಸಮಯದಲ್ಲಿ ಅಂದರೆ ರಜೆ ಸಿಕ್ಕಾಗ ಮನಸ್ಸನ್ನು ತಣಿಸಲು ಹಾತೊರೆಯುವ ಸ್ಥಿತಿ ನಿಜಕ್ಕೂ ಅಪಾಯಕಾರಿ. ಕುಡಿತ, ಲೈವ್‌ಬ್ಯಾಂಡ್‌, ಪಬ್‌, ಡಿಸ್ಕೋಗಳಿಗೆ ನುಗ್ಗುವವರು ಹೆಚ್ಚಾಗಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ನಾಯಿಕೊಡೆಗಳ ಹಾಗೆ ಪಬ್ಬುಗಳು, ಲೈವ್‌ಬ್ಯಾಂಡ್‌ಗಳು, ಡಿಸ್ಕೋಗಳು ತಲೆಎತ್ತಿ ಸಮಾಜದ ಸ್ವಾಸ್ಥ್ಯದಮೇಲೆ ಕೆಟ್ಟ ಪರಿಣಾಮ ಬೀರಿದೆ.

ಐಟಿ ಉದ್ಯೋಗಿಗಳ ಐಷಾರಾಮಿ ಜೀವನದಿಂದ ಪ್ರಭಾವಿತರಾಗಿ ಕಡಿಮೆ ಸಂಬಳ ಪಡೆಯುವ, ಕೂಲಿ ಮಾಡುವ ಇತರರಿಗೆ, ಅವರಂತೆ ತಾವೂ ಮಜಾಮಾಡಬೇಕೆಂಬ ತುಡಿತ ಹೆಚ್ಚಿ ಕಳ್ಳತನ, ದರೋಡೆ, ಅತ್ಯಾಚಾರ ಮುಂತಾದ ಅಪರಾಧ ಮಾಡುವುದು ಹೆಚ್ಚಾಗಿದೆ. ವಿಶೇಷವೆಂದರೆ ಅವೇಳೆಯಲ್ಲಿ ದುಡಿಯುವ ಐಟಿ ಉದ್ಯೋಗಿಗಳೇ ಈ ಅಪರಾಧಗಳಿಗೆ ತುತ್ತಾಗುತ್ತಿದ್ದಾರೆ. ಇತ್ತೀಚೆಗೆ ನಡೆದ ಕಾಲ್‌ಸೆಂಟರ್‌ ಉದ್ಯೋಗಿ ಪ್ರತಿಭಾಳ ಮೇಲೆ ನಡೆದ ಬರ್ಬರ ಅತ್ಯಾಚಾರ ಮತ್ತು ಕೊಲೆಯೇ ಒಂದು ಜ್ವಲಂತ ಉದಾಹರಣೆ.

ಕೆಲಸ ಮುಗಿಸಿ ಮಧ್ಯರಾತ್ರಿ ಮನೆಗೆ ಹಿಂತಿರುಗುವ ಸಾಫ್ಟ್‌ವೇರ್‌ ಇಂಜಿನಿಯರ್‌ಗಳು ದುಷ್ಕರ್ಮಿಗಳ ಕೈಗೆ ಸಿಕ್ಕಿ ಹಣ, ಮೊಬೈಲ್‌ ಇತ್ಯಾದಿ ಕಳೆದುಕೊಂಡಿರುವ ಪ್ರಸಂಗಗಳು ದಿನನಿತ್ಯ ಪತ್ರಿಕೆಗಳಲ್ಲಿ ವರದಿಯಾಗುತ್ತಿವೆ.

ಒಂದು ಕಾಲದಲ್ಲಿ ನಿವೃತ್ತರ ಸ್ವರ್ಗ, ಉದ್ಯಾನ ನಗರ, ಶಾಂತಿಯುತ ನಗರ ಎಂದು ಹೆಸರು ಪಡೆದಿದ್ದ ಬೆಂಗಳೂರು ಐಟಿಯಿಂದಾಗಿ ಪಬ್ಬು-ಲೈವ್‌ಬ್ಯಾಂಡಗಳ ನಗರ, ಅಪರಾಧಗಳ ನಗರ, ಕೊಳ್ಳುಬಾಕರ ನಗರ, ಹೊಂಡಗಳ ನಗರ, ಅತಿಕಲುಷಿತ ನಗರ ಮುಂತಾದ ಕುಖ್ಯಾತಿ ಪಡೆದಿದೆ. ಜೊತೆಗೆ ಈಗ ಉಗ್ರಗಾಮಿಗಳ ಕೆಂಗಣ್ಣು ಬೆಂಗಳೂರಿನ ಮೇಲೆ ಬೀಳಲು ಐಟಿಯೇ ಕಾರಣ ಎನ್ನುವುದು ಅತಿಶಯೋಕ್ತಿಯಲ್ಲ. ಐಟಿಯಿಂದಾಗಿ ಇಷ್ಟೆಲ್ಲಾ ಸಮಸ್ಯೆಗಳು ಬೆಂಗಳೂರಿನಲ್ಲಿ ಉಲ್ಬಣಿಸಿರುವಾಗ, ಬರಿ ಹಣಮಾಡುವುದೇ ಮುಖ್ಯ ಗುರಿಯಾಗಿರುವ ಈ ಸಂಸ್ಥೆಗಳು, ಈ ಸಮಸ್ಯೆಗಳ ಪರಿಹಾರದ ಬಗ್ಗೆ ಚಿಂತಿಸದೆ ತಮ್ಮ ಉದ್ಯಮವನ್ನು ಬೆಳೆಸುವ ಬಗ್ಗೆ ಮಾತ್ರ ಯೋಚಿಸುತ್ತಿವೆ. ಈ ಐಟಿ ಸಂಸ್ಥೆಗಳಿಗೆ ನಿಜವಾಗಿಯೂ ಸಾಮಾಜಿಕ ಕಳಕಳಿ ಇದೆಯೇ?

ಇನ್ನು ಐಟಿಯಿಂದ ಬೆಂಗಳೂರಿನಲ್ಲಿ ಕನ್ನಡ ಸಂಸ್ಕೃತಿಯ ಮೇಲಾಗಿರುವ ದುಷ್ಪರಿಣಾಮಗಳಿಗೆ ಲೆಕ್ಕವಿಲ್ಲ. ಲಕ್ಷಾಂತರ ಉದ್ಯೋಗ ಸೃಷ್ಟಿಸುತ್ತೇವೆ ಎನ್ನುವ ಇವರು, ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ವಿಫಲರಾಗಿದ್ದಾರೆ. ಪರರಾಜ್ಯಗಳಿಂದ ಅತಿಯಾದ ವಲಸೆ ಹೆಚ್ಚಿ ಕನ್ನಡಿಗರೇ ಇಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಐಟಿ ಉದ್ಯಮ ಹರಡಿಕೊಂಡಿರುವ ಬೆಂಗಳೂರಿನ ಪೂರ್ವ ಮತ್ತು ದಕ್ಷಿಣದ ಪ್ರದೇಶಗಳಲ್ಲಿ ಎಲ್ಲಿ ಎಡತಾಕಿದರೂ ಹಿಂದಿ, ತಮಿಳು, ತೆಲುಗು, ಬಂಗಾಲಿ, ಮಲಯಾಳಿ ಅಥವಾ ಇತರೇ ಭಾಷಿಕರು ಸಿಗುತ್ತಾರೆ ಹೊರತು ಕನ್ನಡಿಗರು ಸಿಗುವುದು ಬಹಳ ವಿರಳವಾಗಿದೆ.

ಬೆಂಗಳೂರಿನಲ್ಲಿ ಐಟಿ ಸಂಸ್ಥೆ ಸ್ಥಾಪಿಸಿ ಇಲ್ಲಿನ ನೆಲ, ಜಲ, ಹಿತವಾದ ಹವಾಮಾನ, ಸರ್ಕಾರದಿಂದ ಸೌಲಭ್ಯ, ಉತ್ತೇಜನ ಪಡೆಯುವ ಇವರು ಕನ್ನಡಿಗರಿಗೆ ಉದ್ಯೋಗ ನೀಡದೆ ಬೇರೆ ರಾಜ್ಯದವರನ್ನು ಇಲ್ಲಿ ಕರೆದು ಉದ್ಯೋಗ ಕೊಡುವುದು ಯಾವ ನ್ಯಾಯ. ಅದರ ಬದಲು ಅವರು ಬೇರೆ ರಾಜ್ಯಗಳಲ್ಲೇ ತಮ್ಮ ಸಂಸ್ಥೆಗಳನ್ನು ವಿಸ್ತರಿಸಿ ಅಲ್ಲೇ ಅವರಿಗೆ ಉದ್ಯೋಗ ನೀಡುವುದು ಒಳ್ಳೆಯದಲ್ಲವೆ? ಕನ್ನಡಿಗರಿಗೆ ಉದ್ಯೋಗ ನೀಡದ ಈ ಐಟಿ ಸಂಸ್ಥೆಗಳು ಕನ್ನಡನಾಡಿನಲ್ಲಿ ಇರುವುದಕ್ಕಿಂತ ಬೇರೆಕಡೆ ಹೋಗುವುದೇ ಒಳ್ಳೆಯದು.

ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ಉದ್ಯಮ ಸ್ಥಾಪಿಸಿ, ಅಷ್ಟೇ ಲಾಭಮಾಡಿಕೊಂಡಿರುವ ಈ ಸಂಸ್ಥೆಗಳು, ಮೂಲಸೌಕರ್ಯ ಸರಿಯಿಲ್ಲದ ನೆಪಹೇಳಿ ಬೇರೆ ರಾಜ್ಯಗಳಿಗೆ ಹೋಗುತ್ತೇವೆ ಎಂದು ಸರ್ಕಾರಕ್ಕೆ ಸುಮ್ಮನೆ ಬ್ಲ್ಯಾಕ್‌ಮೇಲ್‌ ಮಾಡುತ್ತಿವೆ. ಇತ್ತೀಚೆಗೆ ಚೆನ್ನೈಗೆ ಮೈಕ್ರೋಸಾಫ್ಟ್‌ ಸಂಸ್ಥೆಯ ಮುಖ್ಯಸ್ಥರು ಭೇಟಿ ನೀಡಿದಾಗ, ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವರಾದ ದಯಾನಿಧಿ ಮಾರನ್‌ ಅವರು ಅಲ್ಲಿನ ಐಟಿ ಸಿಟಿಗೆ ಬಿಲ್‌ ಗೇಟ್ಸ್‌ ಅವರನ್ನು ಕರೆದು ಕೊಂಡು ಹೋಗಲಿಲ್ಲ. ಅದಕ್ಕೆ ಅವರು ಕೊಟ್ಟ ಕಾರಣ ಚೆನ್ನೈನ ಐಟಿ ಸಿಟಿಗೆ ಹೋಗುವ ರಸ್ತೆಯ ಸ್ಥಿತಿ ಅತಿಶೋಚನೀಯವಾಗಿದೆ ಎಂದು. ಭಾರತದ ಎಲ್ಲಾ ನಗರಗಳ ಸ್ಥಿತಿಯೂ ಒಂದೇ ಆಗಿರುವಾಗ ಐಟಿ ಸಂಸ್ಥೆಗಳು ಎಲ್ಲಿಗೆ ಹೋಗುತ್ತವೆ? ವಿದೇಶಕ್ಕೆ ಹೋಗುತ್ತವೆಯೇ?

ಬೆಂಗಳೂರಿನಲ್ಲಿ ಐಟಿ ಸಂಸ್ಥೆಗಳು ತಮ್ಮ ಕಾರ್ಯಚಟುವಟಿಕೆ ವಿಸ್ತರಣೆ ಮಾಡದಿರುವುದೇ ಮೇಲು. ಈಗಿರುವ ಐಟಿ ಸಂಸ್ಥೆಗಳು ಮತ್ತು ಅದರ ಕೆಲಸಗಾರರಿಗೆ ಸರಿಯಾದ ಸೌಲಭ್ಯ ಕಲ್ಪಿಸುವುದಕ್ಕೇ ಸರ್ಕಾರಕ್ಕೆ ಕಷ್ಟವಾಗಿರುವಾಗ, ಈ ಸಂಸ್ಥೆಗಳು ಇಲ್ಲಿ ಇನ್ನೂ ವಿಸ್ತರಣೆ ನಡೆಸಿದರೆ ಬೆಂಗಳೂರಿನ ಸ್ಥಿತಿ ಇನ್ನೂ ಅದ್ವಾನವಾಗುತ್ತದೆ. ಸರ್ಕಾರ ಇನ್ನಾದರೂ ಐಟಿ ಸಂಸ್ಥೆಗಳನ್ನು ಓಲೈಸುವುದನ್ನು ಬಿಟ್ಟು ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗ ಕೊಡಬೇಕೆಂದು ಶಿಫಾರಸ್ಸು ಮಾಡಿರುವ ಡಾ. ಸರೋಜಿನಿ ಮಹಿಷಿ ವರದಿಯ ಜಾರಿಗೆ ಕಟ್ಟು ನಿಟ್ಟಿನ ಕ್ರಮ ತೆಗೆದು ಕೊಳ್ಳಬೇಕು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more