ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಮ್ಮಸಂದ್ರದಲ್ಲಿ ಗಣಕ ಮತ್ತು ಕಲಿಕೆ

By Staff
|
Google Oneindia Kannada News


ಹಳ್ಳಿ ಮಕ್ಕಳಿಗೆ ಕಂಪ್ಯೂಟರ್‌ ಲೋಕದ ಅಚ್ಚರಿಗಳನ್ನು ಪರಿಚಯಿಸುವ ಮತ್ತು ಸಂಗೀತದ ಆಸಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ-ಕವಿ ಗೆಳೆಯರು ಮುಂದಾಗಿದ್ದರು. ಕಮ್ಮಸಂದ್ರ ಎಂಬ ಕುಗ್ರಾಮದಲ್ಲಿ ನಡೆದ ಎರಡು ದಿನಗಳ ಕಾರ್ಯಾಗಾರ ಮಕ್ಕಳಿಗೆ ಖುಷಿ ತಂದಿತ್ತು.

  • ಮಂಜುನಾಥ್‌ ರಾವ್‌ ವಿ.
‘ಕಂಪ್ಯೂಟರ್‌’ ಎಂದು ಉಚ್ಚರಿಸಲೂ ಬಾರದ ಕಂದಮ್ಮಗಳು ಇಂದು ಕಂಪ್ಯೂಟರ್‌ ಮುಂದೆ ಕೂತಿವೆ. ಪಾಟಿ, ಬಳಪ ಇದ್ದ ಪಾಟಿಚೀಲವನ್ನು ಎಂದೋ ಮಡಿಚಿಟ್ಟಿದ್ದಾಗಿದೆ. ಇದು ಕಂಪ್ಯೂಟರ್‌ ಯುಗ. ಒಂದನೇ ತರಗತಿಯಿಂದಲೇ ಕೀಲಿಮಣೆ ಕುಟ್ಟುವ ಪರಿಪಾಠ. ವೈವಿಧ್ಯಮಯ ಗೇಮ್ಸ್‌ಗಳು ಚಿಣ್ಣರಿಗೆ ಪ್ರಮುಖ ಆಕರ್ಷಣೆ.

ಆದರೆ, ಗೇಮ್ಸ್‌ ಒಂದೇ ಇದ್ದರೆ ಸಾಕೆ? ಗಣಕಯಂತ್ರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಡವೆ? ಕ್ರಮಬದ್ಧ ಕಲಿಕೆಯಿಂದ ಇನ್ನೂ ಹೆಚ್ಚಿನ ಆಸಕ್ತಿ ಹುಟ್ಟಲು ಸಾಧ್ಯ ಎಂದರಿತ ನಾವು ‘ಈ-ಕವಿ’ ಗೆಳೆಯರು ಕಮ್ಮಸಂದ್ರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಂಪ್ಯೂಟರ್‌ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು.

ಕಮ್ಮಸಂದ್ರ, ಬೆಂಗಳೂರಿನಿಂದ 45 ಕಿಲೊ ಮೀಟರ್‌ ದೂರದಲ್ಲಿರುವ ಒಂದು ಪುಟ್ಟ ಹಳ್ಳಿ. ಇದು ದೊಡ್ಡಬಳ್ಳಾಪುರ ತಾಲೂಕಿಗೆ ಸೇರಿದೆ. ನಮ್ಮ ಈಗಿನ ಅರಣ್ಯ ಸಚಿವರಾದ ಚೆನ್ನಿಗಪ್ಪರವರ ವಾಸ ಸ್ಥಳವಿರುವುದು ಇಲ್ಲೆ. ಅಲ್ಲಿ ಬೇರೆ ಬೇರೆ ಊರುಗಳಿಂದ ಬಂದ ಮಕ್ಕಳು ಆ ಶಾಲೆಯ ಹಾಸ್ಟೆಲ್‌ನಲ್ಲಿದ್ದು ಓದುತ್ತಿದ್ದಾರೆ.







ಒಂದು ದಿನ ಆ ಶಾಲೆಯಲ್ಲಿ ಮಕ್ಕಳು ಕಂಪ್ಯೂಟರ್‌ ಗೇಮ್‌ ಆಡುತ್ತಿದ್ದುದ್ದನ್ನು ಗಮಸಿನಿದ ನಾನು ಈ-ಕವಿ ಸಂಘಟಕರಲ್ಲಿ ಒಬ್ಬರಾದ ಸತೀಶ್‌ಗೌಡರಿಗೆ ಈ ಶಾಲೆಯಲ್ಲಿ ಕಂಪ್ಯೂಟರ್‌ ಬಗ್ಗೆ ಒಂದು ಸೆಷನ್‌ ಮಾಡಿದರೆ ಹೇಗೆ ಎಂಬ ಪ್ಲಾನನ್ನು ಮುಂದಿಟ್ಟೆ. ಒಪ್ಪಿಗೆ ನೀಡಿದ ಸತೀಶ್‌ಗೌಡರು, ಏಪ್ರಿಲ್‌ 1 ಮತ್ತು 2ರಂದು ಕಾರ್ಯಕ್ರಮ ನಿಗದಿಪಡಿಸಿದರು. ಸರಿ ಇನ್ನೇನು, ನಮ್ಮಲ್ಲಿ ಉತ್ಸಾಹಿ ಯುವಕರಿಗೆ ಕೊರತೆಯೆ? ನಮ್ಮ ಜೊತೆ ಗೆಳೆಯರಾದ ಪ್ರದೀಪ, ಆಂಜನೇಗೌಡ ಮತ್ತಿತರರು ಕೂಡ ಸೇರಿಸಿಕೊಂಡರು.

ಸತೀಶ್‌ಗೌಡ ಅವರ ಮಾರುತಿ ಆಮ್ನಿ 8 ಘಂಟೆಗೆ ಸರಿಯಾಗಿ ಕಮ್ಮಸಂದ್ರದ ಕಡೆ ಹೊರಟಿತು. ಸ್ನೇಹಿತ ಪ್ರದೀಪನಿಗೆ ನಮ್ಮ ಯೋಜನೆಯ ಬಗ್ಗೆ ಸ್ವಲ್ಪವು ಕೂಡ ತಿಳಿದಿರಲಿಲ್ಲ. ನಮ್ಮ ಯೋಜನೆಯನ್ನು ಕೇಳಿದ್ದೇ ತಡ ಆತನ ಉತ್ಸಾಹ ಇಮ್ಮಡಿಯಾಯಿತು. ಅವನಿಂದ ಅನೇಕ ಸಲಹೆಗಳು ಒಂದೊಂದಾಗಿ ಹೊರಬರತೊಡಗಿದವು. ನೆಲಮಂಗಲದ ಒಂದು ಹೋಟೆಲ್‌ನಲ್ಲಿ ತಿಂಡಿ ತಿಂದು ಮತ್ತೆ ಕಮ್ಮಸಂದ್ರದ ಹಾದಿ ಹಿಡಿದೆವು. ನೆಲಮಂಗಲದಿಂದ ಕಮ್ಮಸಂದ್ರ 25 ಕಿಲೊ ಮೀಟರ್‌ ದೂರದಲ್ಲಿದೆ. ಮಕ್ಕಳಿಗೆ ಕೊಡಲೆಂದು ಚಾಕಲೇಟು, ಪೆನ್ಸಿಲ್ಲು, ಪೆನ್ನು, ರಬ್ಬರುಗಳನ್ನು ನಾವು ಮೊದಲೇ ಕೊಂಡಿದ್ದೆವು. ಹಾಗೆಯೇ ಮಕ್ಕಳೊಂದಿಗೆ ಮಕ್ಕಳಾಗಿ ನಾವೂ ಆಟವಾಡಲೆಂದು ಬಲೂನುಗಳನ್ನೂ ಕೊಂಡಿದ್ದೆವು.

ಕಮ್ಮಸಂದ್ರದ ಶಾಲೆ ಬರುತ್ತಿದ್ದಂತೆ ನಮ್ಮ ಬರುವಿಕೆಯನ್ನೇ ಕಾಯುತ್ತಿದ್ದ ಮಕ್ಕಳು ಹುಯ್ಯೆಂದು ಚೀರುತ್ತ, ಕುಣಿಯುತ್ತ ಹಿಂದಿಂದೆ ಓಡಿ ಬಂದರು. ಮಕ್ಕಳ ಆ ಕೇಕೆ, ಖುಷಿ ನೋಡಿ ನಮ್ಮ ಮೊಗದಲ್ಲೂ ಭರ್ತಿ ಖುಷಿ.

ಕಲಿಕೆ ಶುರು : ಒಂದನೇ ತರಗತಿಯಿಂದ ಏಳನೇ ತರಗತಿವರೆಗಿನ ಮಕ್ಕಳು ಓದುತ್ತಿರುವ ಶಾಲೆ ಅದು. ಶಿಸ್ತಿನ ಸಿಪಾಯಿಗಳಂತೆ ಕುಳಿತಿದ್ದ ಮಕ್ಕಳ ಪರಿಚಯವಾದ ನಂತರ 5, 6 ಮತ್ತು 7ನೇ ತರಗತಿಯ ಮಕ್ಕಳ್ಳನ್ನು ಕಂಪ್ಯೂಟರ್‌ ತರಬೇತಿಗೆ ಆಯ್ದುಕೊಂಡೆವು. ಆ ಮಕ್ಕಳ ಕಣ್ಣಲ್ಲಿನ ಹೆಚ್ಚಿಗೆ ಕಲಿಯಬೇಕೆಂಬ ಉತ್ಸಾಹ, ನಮ್ಮನ್ನು ಇನ್ನೂ ಹೆಚ್ಚು ಪ್ರೋತ್ಸಾಹಿಸಿತು.

ಕಂಪ್ಯೂಟರ್‌ ಬಗ್ಗೆ ಮೊದಲೇ ಈ ಮಕ್ಕಳಿಗೆ ಮಾಹಿತಿ ಇರಬಹುದಾ ಎಂಬ ಕುತೂಹಲ ನಮಗೆ. ನಮ್ಮ ಎಣಿಕೆಯಂತೆ ಕೇಳಲಾದ ಪ್ರಶ್ನೆಗಳಿಗೆ ಮಕ್ಕಳು ತಟ್ಟಂತ ಉತ್ತರ ನೀಡುತ್ತಿದ್ದರು. ಅವರ ತಿಳಿವಳಿಕೆ ಮಟ್ಟವನ್ನರಿತು ಅವರಿಗೆ ಕಂಪ್ಯೂಟರ್‌ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡತೊಡಗಿದೆವು. ಕಂಪ್ಯೂಟರನ್ನು ಸರಿಯಾಗಿ ಆನ್‌ ಮಾಡುವುದು, ಶಟ್‌ಡೌನ್‌ ಮಾಡುವುದು, ಡೆಸ್ಕ್‌ಟಾಪ್‌ನ ವಾಲ್‌ಪೇಪರ್‌ ಬದಲಿಸುವುದನ್ನು ಹೇಳಿಕೊಟ್ಟೆವು. ಹಾಗೆ ಹಾರ್ಡ್‌ ಡಿಸ್ಕ್‌ ಬಗ್ಗೆ, ಅದರಲ್ಲಿ ಫೊಲ್ಡರ್‌ ಮಾಡುವುದು, ಫೈಲ್‌ ಕ್ರೀಯೇಟ್‌ ಮಾಡುವುದು, ಅ ಫೈಲ್‌ನಲ್ಲಿ ಟೈಪ್‌ ಮಾಡುವುದನ್ನು ತೋರಿಸಿಕೊಟ್ಟೆವು. ಹೊಸಬಗೆಯ ಕಲಿಕೆಯಿಂದ ಮಕ್ಕಳು ಉಲ್ಲಸಿತರಾಗಿದ್ದರು. ಮಕ್ಕಳು ಕೂಡ ಮುಂದೆ ಬಂದು ಒಂದು ಪ್ರಯತ್ನವನ್ನು ಸಹ ಮಾಡಿದರು.

ನಂತರ ಪ್ರತಿಯಾಬ್ಬ ವಿದ್ಯಾರ್ಥಿಯು ಕಾತುರದಿಂದ ಕಾಯುತ್ತಿದ್ದ ಘಳಿಗೆ ಬಂದಿತು. ಆಂಜನೇಗೌಡ ತಂದಿದ್ದ ‘ಟಾಂ ಅಂಡ್‌ ಜೆರ್ರಿ’ ಕಾರ್ಟೂನ್‌ ಚಲನಚಿತ್ರವನ್ನುಮಕ್ಕಳು ತುಂಬ ಎಂಜಾಯ್‌ ಮಾಡಿದರು.

ಇಲ್ಲಿ ಕಂಪ್ಯೂಟರ್‌ ಆಟ ನಡೆಯುತ್ತಿದ್ದರೆ, ಮತ್ತೊಂದೆಡೆ ಸತೀಶ್‌ಗೌಡ ಮತ್ತು ಆಂಜನೇಗೌಡ 1ರಿಂದ 4ನೇ ತರಗತಿಯ ಮಕ್ಕಳೊಂದಿಗೆ ವಿವಿಧ ಬಗೆಯ ಆಟದಲ್ಲಿ ತೊಡಗಿಸಿದ್ದರು. ಬಲೂನು ಊದುವ ಸ್ಪರ್ಧೆ, ಸಾಲಿನಲ್ಲಿ ನಿಂತ ಮಕ್ಕಳ ಮಧ್ಯೆ ಇಟ್ಟ ಬಲೂನು ಕೆಳಬೀಳದಂತೆ ನಡೆಯುವ ಆಟ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೋಲಿನಿಂದ ಡ್ರಮ್‌ ಬಾರಿಸುವ ಆಟ. ಮಕ್ಕಳಲ್ಲಿ ನಾವೂ ಒಂದಾಗಿದ್ದೆವು.

ರಾಧಾಕೃಷ್ಣ ಅವರ ನೆಂಟ ಲಿಂಗದೇವರು ಮನೆಯಲ್ಲಿ ಮಧ್ಯಾಹ್ನದ ಊಟವಾದ ನಂತರ ಪಕ್ಕದ ಹಳ್ಳಿಯಲ್ಲಿ ‘ಕುರುಕ್ಷೇತ್ರ’ ನಾಟಕ. ದಿನ ಹೋದದ್ದೇ ಗೊತ್ತಾಗಲಿಲ್ಲ.

ಸಂಗೀತ ಪಾಠ : ಮಾರನೆಯ ದಿನ ಭಾನುವಾರ. ಈ ಟಿವಿಯ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಪಡೆದಿರುವ ವಿನಯ್‌ ಸಹ ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದರು. ಅವರು ಮಕ್ಕಳನ್ನು ಒಂದುಗೂಡಿಸಿಕೊಂಡು ಸಂಗೀತದ ಬಗ್ಗೆ ತಿಳಿವಳಿಕೆ ನೀಡಿದರು. ನಮ್ಮ ರಾಷ್ಟ್ರಗೀತೆಯನ್ನು ಎಷ್ಟು ಸಮಯದಲ್ಲಿ ಹೇಳಬೇಕು, ಉಚ್ಚಾರಣೆ ಹೇಗಿರಬೇಕು ಎಂಬುದನ್ನು ತಿಳಿಸಿಕೊಟ್ಟರು. ತದನಂತರ ಸಭಾಕಂಪನ ಹೋಗಲಾಡಿಸುವುದು ಹೇಗೆ? ವೇದಿಕೆಯ ಮೇಲೆ ಧೈರ್ಯದಿಂದ ಮಾತನಾಡುವುದು ಹೇಗೆ ಎಂಬ ಬಗ್ಗೆ ಮಾಹಿತಿ ನೀಡಿದರು.

ನಂತರ ಎಲ್ಲ ಮಕ್ಕಳಿಗೆ ಪೆನ್ಸಿಲ್‌ ಮತ್ತು ಎರೆಸರ್‌ ಹಂಚಲಾಯಿತು. 7ನೇ ತರಗತಿಯ ಮಕ್ಕಳಿಗೆ ಒಂದೊಂದು ಪೆನ್‌ ಕೊಟ್ಟು, ತಂದಿದ್ದ ಚಾಕ್ಲೇಟ್‌ಗಳನ್ನೂ ಹಂಚಿದೆವು.

ಮಕ್ಕಳೊಂದಿಗೆ ಕಳೆದ ಎರಡು ದಿನ ನಮಗೆ ಕೂಡ ಒಂದು ರೀತಿಯಲ್ಲಿ ಕಲಿಕೆಯ ಸೆಷನ್‌ ಇದ್ದಹಾಗಿತ್ತು. ಮಕ್ಕಳ ಮುಗ್ಧತೆ, ಅವರ ಜಾಣ್ಮೆಯ ಪ್ರಶ್ನೆಗಳು, ಕಲ್ಮಶವಿಲ್ಲದ ಮನಸ್ಸು, ನಮ್ಮಲ್ಲಿ ಹೊಸ ಹುಮ್ಮಸ್ಸನ್ನು ತುಂಬಿತೆಂದರೆ ಉತ್ಪ್ರೇಕ್ಷೆಯಾಗಲಾರದು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X