• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಕ್ಕಳೆಂದರೆ ಮಲ್ಯ ಸಾಕಿದ ಕುದುರೆಗಳಲ್ಲ...

By Staff
|

ನಮ್ಮ ಬದುಕಿನ ಭವಿಷ್ಯವನ್ನು, ಕೇವಲ ಮೂರು ಗಂಟೆಯ ಪರೀಕ್ಷೆಗಳು ಎಂದೂ ನಿರ್ಧರಿಸುವುದಿಲ್ಲ. ಒರಿಜಿನಲ್‌ ಆಗಿ ಚಿಂತಿಸುವವರು ಇಲ್ಲದೇ ಹೋದರೆ ಇಲ್ಲಿ ಯಾವುದೂ ಬದಲಾಗುವುದಿಲ್ಲ. ಹಾಗೆ ಯೋಚಿಸದೆ ಕೇವಲ ಈ CET ಎಂಬ ಮೂರಕ್ಷರದ ಮಂತ್ರ ಬದಲಾವಣೆ ತಂದುಕೊಡುತ್ತದೆ ಎಂದು ಭಾವಿಸಿದರೆ ನೀವು ಕೆಟ್ಟಿರಿ!

ಏನು ಹಟ ಮಾಡ್ತಾನೆ ನೋಡಿ. ಸಿಇಟಿಗೆ ಕಟ್ಟು ಅಂದ್ರೆ ಬೇಡ ಅಂದ. ಪಿಯೂಸಿಯಲ್ಲಿ ಬೇರೆ ಐವತ್ತೆಂಟು ಪರ್ಸೆಂಟು ತೆಗೆದಿದ್ದಾನೆ. ಇವನನ್ನು ಕಟ್ಕೊಂಡು ಏನ್ಮಾಡ್ಲಿ. ಇವನ ಅಣ್ಣ ನೋಡಿ, ಪ್ರತಿ ಕ್ಲಾಸಲ್ಲೂ ರ್ಯಾಂಕು. ಅವನಿಗೆ ಎಸ್ಸೆಸ್ಸೆಲ್ಸಿಯಲ್ಲಿ ತೊಂಬತ್ತಾರು ಪರ್ಸೆಂಟು ಬಂದಿತ್ತು. ಈಗೀಗ ಹುಡುಗರಿಗೆ ಆಸಕ್ತಿಯೇ ಇಲ್ಲ. ಅವರು ರೇಗಾಡುತ್ತಿದ್ದರು.

ಬರೀ ಆಟ ಆಡೋದು, ಟೀವಿ ನೋಡೋದು, ಯಾವ್ಯಾವುದೋ ಕತೆ ಪುಸ್ತಕ ಓದೋದು, ಯೇಸುದಾಸ್‌ ಸಂಗೀತ ಕಛೇರಿಗೆ ಹೋಗೋದು... ಇದೇ ಆಯ್ತು. ಓದಿನ ಮೇಲೆ ಲಕ್ಷ್ಯವೇ ಇಲ್ಲ. ಎಲ್ಲಾ ನಿಮ್ಮಿಂದಲೇ ಆಗಿತ್ತು, ಬೋರ್ಡಿಂಗು ಸ್ಕೂಲಿಗೆ ಕಳಿಸಿ ಅಂತ ಬಡ್ಕೊಂಡೆ. ಆಕೆ ಕೂಗಾಡುತ್ತಿದ್ದರು.

Students eagerly awaiting to see their results onlineನಾನು ಸುಮ್ಮನೆ ನೋಡುತ್ತಾ ನಿಂತಿದ್ದೆ. ಅವರಿಬ್ಬರೂ ರೇಸ್‌ನಲ್ಲಿ ತಮ್ಮ ಕುದುರೆ ಹಿಂದಕ್ಕೆ ಬಿತ್ತು ಎಂದು ಕೊರಗಾಡುವ ರೇಸುಪ್ರೇಮಿಯ ಥರ ನನಗೆ ಕಾಣಿಸಿದರೇ ಹೊರತು ಮಗನನ್ನು ಪ್ರೀತಿಸುವ ಅಪ್ಪ ಅಮ್ಮನಂತೆ ಕಾಣಲಿಲ್ಲ. ಪಕ್ಕದ ಮನೆಯ ಪ್ರಮೀಳನ ಮಗನಿಗೆ ತೊಂಬತ್ತು ಪರ್ಸೆಂಟು ಬಂದಿದೆ, ನನ್ನ ಮಗನಿಗೆ ಬರೀ ಎಂಬತ್ತಾರು ಎಂದು ನಿಡುಸುಯ್ಯುವ ತಾಯಂದಿರ ಕತೆಯೇ ಇಷ್ಟು. ಅವರು ಪ್ರೀತಿಸುವುದು ಮಕ್ಕಳನ್ನಲ್ಲ, ಮಕ್ಕಳ ಸಾಧನೆಯನ್ನು. ಮಕ್ಕಳ ಮೂಲಕ ತಮ್ಮ ಅಹಂಕಾರಕ್ಕೆ ಕಾವು ಕೊಡುವುದಕ್ಕೆ ಅವರು ಯತ್ನಿಸುತ್ತಾ ಇರುತ್ತಾರೆ. ಮಗ ದೊಡ್ಡ ಕ್ರಿಕೆಟರ್‌ ಆದರೆ ಅಪ್ಪ ಹೆಮ್ಮೆಯಿಂದ ಬೀಗುತ್ತಾನೆ. ಹೆಂಡತಿ ಸುಂದರಿಯಾಗಿದ್ದರೆ ಗಂಡ ಹಮ್ಮಿನಿಂದ ಓಡಾಡುವಂತೆ!

ನಮ್ಮ ಯೋಚನೆಗಳೆಲ್ಲ ಎಷ್ಟು ಮಿಡಿಯೋಕರ್‌ ಆಗಿರುತ್ತವೆ? ಬದುಕೆಂದರೆ ನಕಲಿ ಅಂತ ನಾವೇಕೆ ಅಂದುಕೊಳ್ಳುತ್ತೇವೆ.

ಮಕ್ಕಳೆಂದರೆ ಮಾರುತಿ ಉದ್ಯೋಗ್‌ ಲಿಮಿಟೆಡ್‌ನಲ್ಲಿ ತಯಾರಾಗುವ ಯುರೋ-2 ಕಾರುಗಳಲ್ಲ. ಅಥವಾ ಮಾರುಕಟ್ಟೆಯಲ್ಲಿ ಸಿಗುವ ಪೆಂಟಿಯಮ್‌ ಫೋರ್‌ ಕಂಪ್ಯೂಟರುಗಳೂ ಅಲ್ಲ. ಹೀಗಾಗಿ ಎಲ್ಲರ ಕಾನ್‌ಫಿಗರೇಶನ್ನೂ ಒಂದೇ ಆಗಿರುವುದಿಲ್ಲ.

ಕಾನ್‌ಫಿಗರೇಷನ್ನು ಬೇರೆ ಬೇರೆ ಆಗಿರೋದರಿಂದ ಆಸೆಗಳೂ, ಕನಸುಗಳೂ, ಆಸಕ್ತಿಗಳೂ, ಗುರಿಗಳೂ, ಬಯಕೆಗಳೂ, ದಾರಿಗಳೂ ಬೇರೆಯಾಗುತ್ತವೆ. ಎಲ್ಲರೂ ಬಯಾಲಜಿಯನ್ನೇ ಓದಬೇಕು, ಡಾಕ್ಟರೇ ಆಗಬೇಕು ಅಂತ ಬಯಸೋದು ತಪ್ಪು.

ಎಲ್ಲರೂ ಡಾಕ್ಟರೇ ಆದರೆ ಅವರಿಗೊಂದು ಕ್ಲಿನಿಕ್ಕು ಕಟ್ಟಿಕೊಡುವ ಇಂಜಿನಿಯರ್‌ ಎಲ್ಲಿ ಸಿಗುತ್ತಾನೆ. ಎಲ್ಲರೂ ಇಂಜಿಯನಿಯರೇ ಆದರೆ ಅವರ ಕಪ್ಪು ಹಣವನ್ನು ತೊಳೆದು ಬೆಳ್ಳಗೆ ಮಾಡಿಕೊಡುವ ಚಾರ್ಟರ್ಡ್‌ ಅಕೌಂಟೆಂಟನನ್ನು ಎಲ್ಲಿ ಹುಡುಕೋಣ. ಎಲ್ಲರೂ ಚಾರ್ಟರ್ಡ್‌ ಅಕೌಂಟೆಂಟುಗಳೇ ಆದರೆ ಅವರಿಗೆ ಬಿಸಿನೆಸ್ಸು ಕೊಡುವ ವ್ಯಾಪಾರಸ್ಥರೆಲ್ಲಿರುತ್ತಾರೆ?

ನಮ್ಮ ಹೆತ್ತವರು ಹೀಗೆ ಯೋಚಿಸುವುದೇ ಇಲ್ಲ . ಕಲಿಕೆಗಿಂತ ಬದುಕಿನ ಸುಖ ಮುಖ್ಯ. ಅಭಿರುಚಿ ಮುಖ್ಯ. ನೆಮ್ಮದಿ ಮುಖ್ಯಎಂದು ಯಾರೂ ಯೋಚಿಸುವುದಿಲ್ಲ. ಮಕ್ಕಳು ಫ್ಯೂಚರಿಸ್ಟಿಕ್‌ ಆಗಿದ್ದರೂ ಹೆತ್ತವರು ಆಗಿರುವುದಿಲ್ಲ. ಹಾಗೆ ನೋಡಿದರೆ ನಮ್ಮ ದೇಶದ ರೈತನಿಗೂ ಹೆತ್ತವರಿಗೂ ವ್ಯತ್ಯಾಸವೇ ಇಲ್ಲ.

ಒಂದು ವರ್ಷ ಆಲೂಗಡ್ಡೆಯ ಬೆಲೆ ಹೆಚ್ಚಾದರೆ ಎಲ್ಲ ರೈತರೂ ಮುಂದಿನ ವರ್ಷ ಆಲೂಗಡ್ಡೆಯನ್ನೇ ಬೆಳೆಯುತ್ತಾರೆ. ಕೊನೆಗೆ ಕೊಳ್ಳುವವರಿಲ್ಲದೆ ಒದ್ದಾಡುತ್ತಾರೆ. ಹೆತ್ತವರೂ ಅಷ್ಟೇ. ಈಗ್ಗೆ ಮೂರು ವರ್ಷದ ಹಿಂದೆ ಪ್ರತಿ ಮಕ್ಕಳೂ ಸಾಫ್ಟ್‌ವೇರ್‌ ಇಂಜಿನಿಯರ್‌ಗಳಾದರು. ಅಮೆರಿಕಾದ ಕನಸು ಕಂಡರು. ಕೊನೆಗೆ ಕೆಲವರು ರಿಜೆಕ್ಟ್‌ ಆದ ಗಾರ್ಮೆಂಟುಗಳಂತೆ ಭಾರತಕ್ಕೆ ವಾಪಸ್ಸು ಬಂದರು. ಹೆತ್ತವರು ಕೊಂಚ ಯೋಚಿಸಿದ್ದರೆ ಈ ಅನಾಹುತ ತಪ್ಪುತ್ತಿತ್ತು.

ನಾವು ಓದುತ್ತಿದ್ದ ದಿನಗಳಲ್ಲಿ ಇಂಥ ಹಂಗಾಮ ಇರಲಿಲ್ಲ. ರಿಸಲ್ಟಿಗೆ ಮೊದಲೇ ಮುಂದೇನು ಎಂದು ಯೋಚಿಸುವ ಪಡಿಪಾಟಲು ಇರಲಿಲ್ಲ. ಈಗಿನಂತೆ ಟ್ಯೂಷನ್ನೆಂಬ ತರಲೆಯಿರಲಿಲ್ಲ. ಮನುಷ್ಯ ಗೆಲ್ಲುವುದು ಇನ್‌ಟ್ಯೂಷನ್ನಿನಿಂದಲೇ ಹೊರತು ಟ್ಯೂಷನ್ನಿನಿಂದ ಅಲ್ಲ. ಇನ್‌ಟ್ಯೂಷನ್‌ ಅಂದ್ರೆ ಅಂತಃಸ್ಫೂರ್ತಿ. ಟ್ಯೂಷನ್ನು ಅಂದರೆ ಗಿಳಿಪಾಠ.

ಇದನ್ನೆಲ್ಲ ವಿವರಿಸುವುದರಿಂದ ಯಾವ ಉಪಯೋಗವೂ ಇಲ್ಲ. ಇಲ್ಲಿ ಏನೂ ಬದಲಾಗುವುದಿಲ್ಲ ಅನ್ನುವುದು ನನಗೆ ಗೊತ್ತು.

ಕಳೆದ ವರುಷ ಅನಂತಮೂರ್ತಿಯವರಿಂದ ಹಿಡಿದು ವಾಟಾಳರ ತನಕ ಎಲ್ಲರೂ ಕನ್ನಡ ಮಾಧ್ಯಮವೇ ಬೇಕು ಎಂದಾಗ ನಾನು ಹೇಳಿದೆ- ಕನ್ನಡ ಮಾಧ್ಯಮ ಬೇಕು ಅಂತ ಕೂಗಾಡಬೇಡಿ. ಮಕ್ಕಳು ಯಾವ ಮಾಧ್ಯಮದಲ್ಲಾದರೂ ಓದಲಿ, ಏನೂ ನಷ್ಟವಿಲ್ಲ. ಆದರೆ ಮನೆಯಲ್ಲಿ ಹೊಟೆಲುಗಳಲ್ಲಿ ಪಾರ್ಟಿಗಳಲ್ಲಿ ಫೋನುಗಳಲ್ಲಿ ಕನ್ನಡ ಮಾತಾಡಿ. ಓದುವಾಗ ಕನ್ನಡ ಕಾದಂಬರಿಗಳನ್ನೇ ಓದಿ.

ಮಾಧ್ಯಮ ಕನ್ನಡ ಆದಾಕ್ಷಣ ಕನ್ನಡ ಉದ್ಧಾರ ಆಗುವುದಿಲ್ಲ. ಬದಲಾಗಿ ಬೆಂಗಳೂರಿಗೆ ಬಂದಿರುವ ಬಹುರಾಷ್ಟ್ರೀಯರಿಂದಾಗಿ ಕನ್ನಡಿಗರಿಗೆ ಕೆಲಸ ಸಿಗದಂತಾಗುತ್ತದೆ. ಕನ್ನಡದಲ್ಲಿ ಓದಿದ ಕಾರಣ ಕೆಲಸ ಸಿಗಲಿಲ್ಲ ಎಂದಾದರೆ ಅಂಥವನಿಗೆ ಕನ್ನಡದ ಬಗ್ಗೆ ಎಂಥಾ ದ್ವೇಷ ಮೂಡುತ್ತದೆ ಯೋಚಿಸಿ. ಅದರ ಬದಲು ಇಂಗ್ಲಿಷಲ್ಲೇ ಕಲಿಯಿರಿ. ಒಳ್ಳೆಯ ಕೆಲಸ ಹಿಡಿಯಿರಿ. ಜೀವನದಲ್ಲಿ ಮುಂದೆ ಬನ್ನಿ. ಜೊತೆಗೆ ಕನ್ನಡ ಮಾತಾಡಿ. ಬಹುರಾಷ್ಟ್ರೀಯ ಕಂಪೆನಿ ಸೇರಿದರೂ ಕನ್ನಡದಲ್ಲೇ ಯಾಕೆ ಮಾತಾಡಬಾರದು?ಇದನ್ನು ಯಾರೂ ಹೇಳುವುದಿಲ್ಲ. ಪ್ರತಿಯಾಬ್ಬ ಸಾಹಿತಿಗೂ ಮುತ್ಸದ್ದಿಗೂ ಬೇಕಾಗಿರುವುದು ಪ್ರಚಾರ.

ಅವನ ಹೇಳಿಕೆಗಳು ಪ್ರಕಟವಾಗಬೇಕು ಅಷ್ಟೇ. ಆದರೆ, ಒರಿಜಿನಲ್‌ ಆಗಿ ಚಿಂತಿಸುವವರು ಇಲ್ಲದೇ ಹೋದರೆ ಇಲ್ಲಿ ಯಾವುದೂ ಬದಲಾಗುವುದಿಲ್ಲ. ಅದನ್ನು ನಾವು ನೆನಪಿಡಬೇಕು.

-2-

ಕಳೆದ ವಾರ ಒಬ್ಬ ಹುಡುಗ ಬಂದಿದ್ದ. ಪತ್ರಿಕೆಯಲ್ಲಿ ಕೆಲಸ ಮಾಡಲು ಆಸಕ್ತಿಯಿದೆ ಎಂದ. ಕೆಲಸ ಕೊಟ್ಟು ನೋಡಿ, ನಿಮ್ಮ ಡಾಟ್‌ಕಾಮಿಗೆ ಒಳ್ಳೆಯ ಲೇಖನಗಳನ್ನು ಬರೆಯುತ್ತೇನೆ ಎಂದ. ನಾನು ಮತ್ತೊಂದು ದಿನ ಬರುವಂತೆ ಸೂಚಿಸಿದೆ. ಅಷ್ಟರಲ್ಲೇ ಆತ ನಮ್ಮ ಕಛೇರಿಯ ಇತರರ ಜೊತೆ ಸಂಬಳ ಎಷ್ಟು, ಬೇರೆ ಯಾವ ಯಾವ ಫೆಸಿಲಿಟಿಗಳಿವೆ, ಎಷ್ಟು ಗಂಟೆ ಕೆಲಸ ಮಾಡಬೇಕು, ರಜಾ ಸಿಗುತ್ತಾ ಎಂದೆಲ್ಲ ವಿಚಾರಿಸಿಕೊಂಡಿದ್ದ.

ಆತ ಮತ್ತೆ ಬಂದಾಗ ಹೇಳಿದೆ- ನೀನು ಮೊದಲು ಒಂದು ಒಳ್ಳೆಯ ಲೇಖನ ಬರೆದುಕೊಂಡು ಬಾ. ಎರಡು ಸಾವಿರ ರುಪಾಯಿ ಸಂಭಾವನೆ ಕೊಡುತ್ತೇನೆ. ತಿಂಗಳಿಗೆ ನಾಲ್ಕು ಲೇಖನ ಬರೆದುಕೊಟ್ಟರೆ ಎಂಟು ಸಾವಿರ ಸಂಪಾದಿಸಬಹುದು. ಆ ನಾಲ್ಕು ಲೇಖನಗಳನ್ನು ನೀನು ನಾಲ್ಕು ಗಂಟೆಯಲ್ಲೋ ನಾಲ್ಕು ದಿನಗಳಲ್ಲೋ ಬರೆಯಬಹುದು, ಅದು ನಿನ್ನ ಸಾಮರ್ಥ್ಯಕ್ಕೆ ಬಿಟ್ಟದ್ದು. ಆದರೆ ಸಂಭಾವನೆ ಎರಡು ಸಾವಿರ ರುಪಾಯಿ ಎಂದೆ. ಅದಕ್ಕೆ ಆತ ಒಪ್ಪಲಿಲ್ಲ. ಐದು ಸಾವಿರ ಕೊಟ್ಟರೂ ಸಾಕು ಕೆಲಸ ಕೊಡಿ ಅಂದ. ಇದೂ ಕೆಲಸವೇ ಅಂದೆ. ಆತ ಹೊರಟು ಹೋದವನು ಇವತ್ತಿನ ತನಕ ವಾಪಸ್ಸು ಬಂದಿಲ್ಲ.

ಈಗಿನ ಹುಡುಗರ ಮನಸ್ಸು ಹೇಗೆ ವರ್ತಿಸುತ್ತದೆ ಎಂದು ಆಶ್ಚರ್ಯವಾಗುತ್ತದೆ. ನಾವೆಲ್ಲ ಕೆಲಸ ಕೇಳಿಕೊಂಡು ಹೋದಾಗ ಸಂಬಳ ಎಷ್ಟೆಂದಾಗಲೀ, ಎಷ್ಟು ಗಂಟೆಯ ದುಡಿಮೆ ಎಂದಾಗಲೀ ಕೇಳಿದವರಲ್ಲ. ಇದು ನಮ್ಮ ಕೆಲಸ, ಇದು ಇನ್ನೊಬ್ಬರದು ಎಂದು ಬೇಧ ಮಾಡಿಕೊಂಡು ಕುಳಿತವರೂ ಅಲ್ಲ. ಕೆಲಸ ಯಾರದೇ ಆಗಿರಬಹುದು, ಅದನ್ನು ಮಾಡುವುದಕ್ಕೆ ನಿಮಗೆ ಉತ್ಸಾಹ ಇರಬೇಕು ಅಷ್ಟೇ. ಹಾಗಿದ್ದಾಗ ಮಾತ್ರ ಎಲ್ಲವೂ ಸರಳ, ಸುಂದರ.

ದುಡಿಯುವುದು ಶಿಕ್ಷೆ ಅಲ್ಲ ಅನ್ನುವುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ಮನುಷ್ಯ ಎಂಟು-ಹತ್ತು ಗಂಟೆಗಳ ಕಾಲ ನಿರಂತರವಾಗಿ ನಿದ್ದೆ ಮಾಡಲಾರ, ಕುಡಿಯುತ್ತಾ ಕೂರಲಾರ, ತಿನ್ನುತ್ತಲೇ ಇರಲಾರ, ಯಾಕೆ, ಪ್ರೀತಿ ಕೂಡ ಮಾಡಲಾರ. ಆದರೆ ಕೆಲಸ ಮಾಡಬಲ್ಲ. ದೇಹ ದುಡಿಮೆಯಲ್ಲಿ ಧನ್ಯತೆ ಕಾಣುತ್ತದೆ ಅನ್ನುವುದಕ್ಕೆ ಇದೇ ಸಾಕ್ಷಿ. ಹಿಂದೆ ನಡೆಸಿದ ಒಂದು ಸಮೀಕ್ಷೆಯಲ್ಲಿ ಭಾರತೀಯ ಮಹಿಳೆ, ಗಂಡಸಿಗಿಂತ ಜಾಸ್ತಿ ಆರೋಗ್ಯವಂತಳಾಗಿ ಯಾಕೆ ಬದುಕುತ್ತಾಳೆ ಎಂಬುದಕ್ಕೆ ಕೊಟ್ಟ ಕಾರಣ ಇದು.

ಆಕೆ ತಾನು ಮಾಡುವ ಕೆಲಸವನ್ನು ಪ್ರೀತಿಸುತ್ತಾಳೆ. ಮಾಡಿಟ್ಟ ಅಡುಗೆಯನ್ನು ತಿನ್ನುವುದಕ್ಕಿಂತ ಅಡುಗೆ ಮಾಡುವುದರಲ್ಲೇ ಹೆಚ್ಚು ಸುಖವಿದೆ ಅನ್ನುವುದನ್ನು ನಾವೆಲ್ಲ ತಿಳಿದುಕೊಳ್ಳಬೇಕು. ಬೇಕಿದ್ದರೆ ಒಂದು ದಿನ ಸುಮ್ಮನೆ ನಿಮ್ಮ ಬಟ್ಟೆ ನೀವೆ ಒಗೆದುಕೊಂಡು ನೋಡಿ, ಒಂದು ಭಾನುವಾರ ಗರಾಜ್‌ ಸ್ವಚ್ಛ ಮಾಡಿ, ಲಾನ್‌ ಮೂವ್‌ ಮಾಡಿ, ನಿಮ್ಮ ಷೂ ನೀವೇ ಪಾಲಿಷ್‌ ಮಾಡಿ. ಆ ನಂತರ ಸಿಗುವ ನೆಮ್ಮದಿಯನ್ನು ಬೇರೆ ಯಾವುದೂ ನೀಡಲಾರದು.

ಆದರೆ, ಇತ್ತೀಚೆಗಂತೂ ನಮ್ಮ ಬೆಂಗಳೂರಿನಲ್ಲಿ ಉದ್ಯೋಗವೇ ಸಿಗುತ್ತಿಲ್ಲ ಎಂದು ದೂರುವವರ ಸಂಖ್ಯೆ ಹೆಚ್ಚಾಗಿದೆ. ಸರ್ಕಾರಿ ಉದ್ಯೋಗವೆಂಬುದು ಕನಸಿನ ಗಂಟಾಗಿ ದಶಕವೇ ಕಳೆಯಿತು. ಈಗಂತೂ ಸರ್ಕಾರಿ ಉದ್ಯೋಗಕ್ಕೆ ಅಂಥ ಕ್ರೇಜೂ ಇಲ್ಲ. ಅದಕ್ಕಿಂತ ಖಾಸಗಿ ಉದ್ಯೋಗವೇ ಅಪ್ಯಾಯಮಾನ ಅನ್ನುವವರಿದ್ದಾರೆ.

ಆದರೆ ಬೆಂಗಳೂರಿನ ಕರ್ನಾಟಕದ ಮಂದಿಗೆ ಒಂದು ಅಪಾಯವಿದೆ. ಬೆಂಗಳೂರಿಗೆ ಬೇರೆ ರಾಜ್ಯಗಳ ಮಂದಿ ಬರುತ್ತಿರುವ ವೇಗ ನೋಡಿದರೆ ಗಾಬರಿಯಾಗುತ್ತದೆ. ಅವರು ಬಂದು ಇಲ್ಲಿ ಏನೇನೋ ಉದ್ಯೋಗ ಆರಂಭಿಸುತ್ತಾರೆ. ಆಮೇಲೆ ಕೆಲಸಕ್ಕೆ ಜನ ಬೇಕಾದಾಗ ತಮ್ಮವರನ್ನೇ ತೆಗೆದುಕೊಳ್ಳುತ್ತಾರೆ. ಕನ್ನಡಿಗರು ಉದ್ಯಮ ಆರಂಭಿಸುವುದೂ ಇಲ್ಲ, ಬೇರೆಯವರಿಗೆ ಕೆಲಸ ಕೊಡುವ ಪ್ರಶ್ನೆಯೂ ಬರುವುದಿಲ್ಲ. ಆದರೆ ತಮಿಳುನಾಡಿನಿಂದ ಬಂದವನು ತಮಿಳನಿಗೆ, ಕೇರಳದವನು ಕೇರಳೀಯನಿಗೆ ಗುಜರಾತಿ ಗುಜರಾತಿಗೆ ಕೆಲಸ ಕೊಡುತ್ತಾರೆ. ಕೊನೆಗೆ ಕೆಲಸವಿಲ್ಲದೆ ಉಳಿಯುವವನು ಕನ್ನಡಿಗ ಮಾತ್ರ.

ಇವತ್ತು ವಿದೇಶಿ ಕಂಪೆನಿಗಳ ರೆಡಿಮೇಡ್‌ ಶರ್ಟುಗಳು ಬಂದು ದರ್ಜಿಗಳು ಹೇಗೆ ಕಂಗಾಲಾಗಿದ್ದಾರೆ ನೋಡಿ. ಟೇಲರುಗಳಿಗೆ ವ್ಯಾಪಾರ ಆಗುತ್ತಿರುವುದು ನಮ್ಮ ಹೆಣ್ಣುಮಕ್ಕಳಿಂದಾಗಿ. ನಮ್ಮ ಕುಶಲ ಕಲೆಗಳನ್ನು ಉಳಿಸುತ್ತಿರುವವರೂ ಅವರೇ.ಆದ್ದರಿಂದ ಹೇಳುತ್ತೇನೆ, ಮೊದಲು ಒಂದು ಕೆಲಸ ಹುಡುಕಿ. ಅದು ನಿಮ್ಮ ಅಂತಸ್ತಿಗೆ ಅಂತಸ್ಸತ್ವಕ್ಕೆ ಅಹಂಕಾರಕ್ಕೆ ಹೊಂದುತ್ತದೋ ಇಲ್ಲವೋ ಅನ್ನುವ ಪ್ರಶ್ನೆಯನ್ನು ಕೇಳಿಕೊಳ್ಳಲೇ ಬೇಡಿ. ಮಾಡುವ ಕೆಲಸವನ್ನು ಪ್ರೀತಿ ಮತ್ತು ಶ್ರದ್ಧೆಯಿಂದ ಮಾಡಿ, ಅಲ್ಲಿ ಚೌಕಾಸಿ ಬೇಡ. ಅಷ್ಟು ಮಾಡಿದರೆ ನೀವು ಗೆಲ್ಲುತ್ತೀರಿ.

(‘ಸೂಜಿ ಮಲ್ಲಿಗೆ’ಯಿಂದ ಹೆಕ್ಕಿದ್ದು)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more