ಶ್ರೀಕೃಷ್ಣ ಜನ್ಮಾಷ್ಟಮಿ ಮಹತ್ವ ಮತ್ತು ಹಿನ್ನೆಲೆ

Sri Krishna Janmashtami
ಶ್ರೀಮನ್ನಾರಾಯಣನ ದಶಾವತಾರಗಳಲ್ಲಿ ಒಂಭತ್ತನೆಯ ಅವತಾರವೇ ಶ್ರೀ ಕೃಷ್ಣ. ಮನುಷ್ಯರಂತೆ ವ್ಯವಹರಿಸಿದರೂ, ಕಾಲಕ್ಕೆ ತಕ್ಕ ಹಾಗೆ ತನ್ನ ಅಪ್ರತಿಮ ಮತ್ತು ಅಮೋಘವಾದ ಜ್ಞಾನ, ಬಲ, ಶಕ್ತಿ, ತೇಜಸ್ಸುಗಳನ್ನೂ ಮತ್ತು ಆತ್ಮ ಗುಣ ಸಂಪತ್ತನ್ನೂ ಪ್ರದರ್ಶಿಸಿದ ಪರಮ ಪುರುಷ. ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಒಂದು ವಿಶೇಷ ಲೇಖನ.

ಚಾಂದ್ರಮಾನ ಪಂಚಾಗ ರೀತ್ಯಾ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ರೋಹಿಣಿ ನಕ್ಷತ್ರದಲ್ಲಿ ಶ್ರೀ ಕೃಷ್ಣನ ಜನ್ಮವಾಯಿತು. ಸೌರಮಾನ ಪಂಚಾಗ ರೀತ್ಯಾ ಸಿಂಹಮಾಸದಲ್ಲಿ ಶ್ರೀ ಕೃಷ್ಣನ ಜನ್ಮವಾಯಿತು. ಇದಲ್ಲದೇ ವರಾಹ ಪುರಾಣದ ಪ್ರಕಾರ ಶ್ರೀ ಕೃಷ್ಣ ಜನ್ಮವು ಆಷಾಢ ಮಾಸದ ಶುಕ್ಲಪಕ್ಷದ ದ್ವಾದಶಿಯಂದು ಆಯಿತು. ಆ ಸಂದರ್ಭದಲ್ಲಿ ಚಾಂದ್ರಮಾನದ ಶ್ರಾವಣ ಮಾಸವೇ ಸೌರಮಾನದ ಸಿಂಹಮಾಸವಾಗಿತ್ತು. ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿಯೇ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವುದು ವಾಡಿಕೆ. ದೇಶದ ವಿವಿಧ ಪ್ರದೇಶಗಳಲ್ಲಿ ತಮ್ಮದೇ ವೈಖರಿಯಲ್ಲಿ ಶ್ರೀಕೃಷ್ಣನನ್ನು ಆರಾಧಿಸುವರು, ಪೂಜಿಸುವರು. ಇದೇ ದಿನವನ್ನು ಗೋಕುಲಾಷ್ಟಮಿಯೆಂದೂ, ಶ್ರೀ ಕೃಷ್ಣ ಜಯಂತಿಯೆಂದೂ, ಜನ್ಮಾಷ್ಟಮಿಯೆಂದೂ ಕರೆಯುವರು.

ವರಾಹ ಪುರಾಣದಲ್ಲಿ ಉಲ್ಲೇಖಿಸಿದಂತೆ, ಅಂದು ರಾತ್ರಿ ಸ್ತ್ರೀಯು ಪತಿಯೊಡನೆ ಉಪವಾಸವಿದ್ದು ವ್ರತವನ್ನಾಚರಿಸಿದರೆ ಅವಳ ಹೃದಯದಲ್ಲಿ ಭಗವಂತನು ಕಾಣಿಸಿಕೊಳ್ಳುವನು. ಅಂತಹವರಿಗೆ ಒಳ್ಳೆಯ ಸಂತಾನ ಮತ್ತು ಸಂಪತ್ತು ದೊರೆಯುತ್ತದೆ ಎಂದು ಹೇಳಿದೆ. 'ತಿಥಿತತ್ವ' ಎಂಬ ಗ್ರಂಥದಲ್ಲಿ ಜಯಂತಿಯ ಆಚರಣೆಯ ಬಗ್ಗೆ ಹೀಗೆ ಹೇಳಿದೆ - 'ಜಯಂತಿ ಯೋಗವು ಒಂದು ದಿವಸ ಮಾತ್ರವಿದ್ದರೆ ಅಂದೇ ಉಪವಾಸ ಪೂಜೆಯನ್ನು ಮಾಡಬೇಕು. ಆ ಯೋಗವು ಎರಡು ದಿವಸ ಇದ್ದರೆ, ಎರಡನೆಯ ದಿನದಲ್ಲಿ ವ್ರತದ ಆಚರಣೆ ಮಾಡಬೇಕು.

ಜಯಂತಿ ಯೋಗವು ಇಲ್ಲದಿದ್ದರೆ ರೋಹಿಣಿ ನಕ್ಷತ್ರದಿಂದ ಕೂಡಿದ ಅಷ್ಟಮಿಯಂದು ವ್ರತವನ್ನಾಚರಿಸಬೇಕು. ಎರಡು ದಿನಗಳಲ್ಲೂ ರೋಹಿಣಿ ನಕ್ಷತ್ರಕ್ಕೆ ಸೇರಿದ ಅಷ್ಟಮಿಯಿದ್ದರೆ ಉಪವಾಸವನ್ನು ಎರಡನೆಯ ದಿನದಲ್ಲಿ ಆಚರಿಸಬೇಕು. ರೋಹಿಣಿ ನಕ್ಷತ್ರವು ಇಲ್ಲದಿದ್ದರೆ ಅರ್ಧರಾತ್ರಿಯಲ್ಲಿರುವ ಅಷ್ಟಮಿಯಲ್ಲಿ ಆಚರಿಸಬೇಕು. ಎರಡು ದಿನಗಳಲ್ಲಿಯೂ ಅಷ್ಟಮಿಯಿದ್ದರೆ ಅಥವಾ ಅಷ್ಟಮಿಯು ಎರಡು ದಿನಗಳಲ್ಲಿಯೂ ಅರ್ಧರಾತ್ರಿಯಲ್ಲಿ ಇಲ್ಲದಿದ್ದರೆ ಆಗ ಎರಡನೆಯ ದಿನದಲ್ಲಿ ವ್ರತವನ್ನಾಚರಿಸಬೇಕು. ತಿಥಿಯೋಗವಿಲ್ಲದಿದ್ದರೂ ಕೇವಲ ರೋಹಿಣೀ ನಕ್ಷತ್ರದಲ್ಲೇ ಪೂಜೆಯನ್ನು ಮಾಡಬೇಕು. ರೋಹಿಣೀ ನಕ್ಷತ್ರ ಮತ್ತು ಅಷ್ಟಮಿ ತಿಥಿ ಎರಡೂ ಒಟ್ಟಿಗೇ ಕೂಡಿ ಬರದಿದ್ದರೆ ಎರಡರಲ್ಲಿ ಯಾವುದಾದರೂ ಒಂದಕ್ಕೆ ಪ್ರಾಧಾನ್ಯ ಕೊಟ್ಟು ವ್ರತವನ್ನಾಚರಿಸಬೇಕು.'

ಆಚರಣೆ ಹೇಗೆ?
ಅಂದು ಶುದ್ಧವಾಗಿದ್ದು ಬೆಳಗಿನಿಂದ ಸಂಜೆಯವರೆವಿಗೆ ಉಪವಾಸವಿದ್ದು, ಭಕ್ತಿ ಶ್ರದ್ಧೆಗಳಿಂದ ಷೋಡಶಾಂಗ ಪೂಜೆಯನ್ನು ಶ್ರಿ ಕೃಷ್ಣ ಪರಮಾತ್ಮನಿಗೆ ಮಾಡಬೇಕು. ಇಲ್ಲಿ ಉಪವಾಸವು ಮುಖ್ಯವಾದುದು. ಉಪವಾಸವೆಂಬುದು ಶರೀರ ಶೋಷಣೆ ಮತ್ತು ಆತ್ಮಪೋಷಣೆಯಾಗಿರುತ್ತದೆ. ಅಂದು ಸಂಯಮದ ದಿವಸ. ಪರಮಾತ್ಮನ ಸಹವಾಸದಲ್ಲಿಯೇ ಇದ್ದು, ಅದಕ್ಕೆ ಸಹಾಯಕವಾಗುವಂತೆ ಇಂದ್ರಿಯಗಳಿಗೆ ಭೌತಿಕವಾಗಿ ಆಹಾರವನ್ನು ಕೊಡದೇ, ಪೂಜೆ ಮುಗಿಯುವವರೆವಿಗೆ ಉಪವಾಸವಿದ್ದು, ತದನಂತರ ಮಹಾಪ್ರಸಾದವನ್ನು ಸ್ವೀಕರಿಸಬೇಕು.

ಪೂರ್ಣವಾಗಿ ಉಪವಾಸವನ್ನು ಮಾಡಲಾಗದ ಅಶಕ್ತರು ಲಘು ಆಹಾರವನ್ನು ಸೇವಿಸಬಹುದು. ರಾತ್ರಿಯೆಲ್ಲಾ ಜಾಗರಣೆ ಮಾಡಿ ಪರಮಾತ್ಮನ ಸ್ಮರಣೆಯನ್ನು ಮಾಡಬೇಕು. ಜಾಗರಣೆಯ ಸಮಯವನ್ನು ಭಗವಂತನ ಧ್ಯಾನ, ಸಂಕೀರ್ತನೆಗಳಿಗೆ ಮೀಸಲಾಗಿಡಬೇಕು. ದಾನದಕ್ಷಿಣೆಗಳನ್ನು ಯಥಾಶಕ್ತಿ ಸತ್ಪಾತ್ರರಿಗೆ ಕೊಡಬೇಕು. ಭಗವಂತನ ಪ್ರೀತ್ಯರ್ಥವಾಗಿ ದಾನ ಮಾಡುವುದು ಉತ್ತಮ ಕಲ್ಪವಾದರೆ ಕಾಮ್ಯವಾಗಿ (ಪ್ರತಿಫಲಾರ್ಥವಾಗಿ) ದಾನ ಮಾಡುವುದು ಸಾಮಾನ್ಯಕಲ್ಪ.

ಅಂದು ಭಗವಂತನ ಪೂಜಾಮಂಟಪವನ್ನು ರಸಭರಿತವಾದ ಹಣ್ಣು ಹೂವು ಕಾಯಿಗಳಿಂದ ಸಿಂಗರಿಸಬೇಕು. ಬಾಲಕೃಷ್ಣನ ಹೆಜ್ಜೆ ಗುರುತುಗಳನ್ನು ಹೊಸ್ತಿಲಿನಿಂದ ದೇವರ ಕೋಣೆಯವರೆಗೆ ಇರಿಸುವರು. ಶ್ರೀ ಕೃಷ್ಣನು ಬಾಲಕನ ರೂಪದಲ್ಲಿ ಮನೆಯೊಳಗೆ ಬರುವುದರ ಸೂಚನೆಯಿದು. ಅಂದು ದೇವಕೀ ದೇವಿಗಾಗಿ ಪ್ರಸವಗೃಹವನ್ನು ನಿರ್ಮಿಸುವರು. ಅದರಲ್ಲಿ ಮಂಗಳಕರವಾದ ಪೂರ್ಣಕುಂಭ, ಮಾವಿನ ಎಲೆಗಳು, ಪುಷ್ಪಮಾಲಿಕೆಗಳು, ಅಗರು ಧೂಪದ ಸುವಾಸನೆಯನ್ನು ಇರಿಸುವರು. ಹೊರಗೆ ಗೋಡೆಗಳ ಮೇಲೆ ದೇವ ಗಂಧರ್ವರು, ವಸುದೇವ, ದೇವಕಿ, ನಂದ, ಯಶೋದೆ, ಗೋಪಿಯರು, ಕಂಸನ ಕಾವಲುಗಾರರು, ಯಮುನಾದೇವಿ, ಕಾಳಿಂಗ, ಮತ್ತು ಗೋಕುಲದ ಚಿತ್ರಗಳನ್ನು ಚಿತ್ರಿಸುವರು.

ಮಂಟಪದಲ್ಲಿ ಸ್ವಾಮಿಯ ಮೂರ್ತಿಯನ್ನಿಟ್ಟು ಷೋಡಶಾಂಗ ಪೂಜಾವಿಧಾನದಲ್ಲಿ ಪೂಜಿಸಿ ನೈವೇದ್ಯವನ್ನು ಅರ್ಪಿಸಬೇಕು. 8 ಬಗೆಯ ಖಾರ ಮತ್ತು 8 ಬಗೆಯ ಸಿಹಿ ತಿನಿಸುಗಳನ್ನು ಮಾಡಿ ಅರ್ಪಿಸುವುದು ವಾಡಿಕೆ. ಈ ಹದಿನಾರು ಬಗೆಯ ತಿನಿಸುಗಳಲ್ಲಿ ಅವಲಕ್ಕಿಯಿಂದ ಮಾಡಿದ ತಿನಿಸುಗಳಿಗೆ ವಿಶೇಷ ಪ್ರಾಧಾನ್ಯ. ಈ ಸಂದರ್ಭದಲ್ಲಿ ವಿಷ್ಣು ಪುರಾಣ, ಶ್ರೀ ಮದ್ಭಾಗವತವನ್ನು ಪಾರಾಯಣ ಮಾಡುವರು.

ಎಲ್ಲೆಲ್ಲಿ ಏನೇನು?
ಮಥುರೆಯ ದೇಗುಲದಲ್ಲಿ ಅಂದು ಉತ್ಸವವನ್ನಾಚರಿಸುವರು. ಇಲ್ಲಿ ನೈವೇದ್ಯಕ್ಕಾಗಿ 64 ಬಗೆಯ ತಿನಿಸುಗಳನ್ನು ಅರ್ಪಿಸುವರು. ಇದರಲ್ಲಿ ವಿಶೇಷವಾದ ಒಂದು ತಿನಿಸೆಂದರೆ ಖೋವಾಪೂರಿ. ಹಾಲು ಸಕ್ಕರೆ ಮಿಶ್ರಣ ಮಾಡಿ ಕುದಿಸಿ, ಅದರಲ್ಲಿ ಬರುವ ಕೆನೆಯನ್ನು ತೆಗೆದು - ಅದನ್ನು ಪೂರಿಯಂತೆ ತುಪ್ಪದಲ್ಲಿ ಕರಿಯುವುದು. ಇದಲ್ಲದೇ ಒರಿಸ್ಸಾದಲ್ಲಿ ಜಗನ್ನಾಥನಿಗೂ ವಿಶೇಷ ಪೂಜೆ ಆಗುವುದು.

ಮುಂಬಯಿ ಮತ್ತು ಮಹಾರಾಷ್ಟ್ರದಲ್ಲಿ ಜನ್ಮಾಷ್ಟಮಿ ಎಂದಾಚರಿಸಿ, ಬೀದಿ ಬೀದಿಗಳಲ್ಲಿ ಆಲಾರೇ ಗೋವಿಂದ ಎಂದು ಹಾಡಿಕೊಂಡು ಹುಡುಗ ಹುಡುಗಿಯರು ಗುಂಪು ಗುಂಪಾಗಿ ಹೋಗುವರು. ಅಲ್ಲಲ್ಲಿ ಕಟ್ಟಡಗಳ ಸಹಾಯದಿಂದ ಮೇಲೆ ಕಟ್ಟಿರುವ ಮೊಸರು ಗಡಿಗೆಯನ್ನು ಒಡೆಯುವರು. ಇದನ್ನು ದಹಿಹಂಡಿ ಎನ್ನುವರು.

ಅವತಾರ ಪುರುಷ :

ಶ್ರೀಮನ್ನಾರಾಯಣನ ದಶಾವತಾರಗಳಲ್ಲಿ ಒಂಭತ್ತನೆಯ ಅವತಾರವೇ ಶ್ರೀ ಕೃಷ್ಣ. ಮನುಷ್ಯರಂತೆ ವ್ಯವಹರಿಸಿದರೂ, ಕಾಲಕ್ಕೆ ತಕ್ಕ ಹಾಗೆ ತನ್ನ ಅಪ್ರತಿಮ ಮತ್ತು ಅಮೋಘವಾದ ಜ್ಞಾನ, ಬಲ, ಶಕ್ತಿ, ತೇಜಸ್ಸುಗಳನ್ನೂ ಮತ್ತು ಆತ್ಮ ಗುಣ ಸಂಪತ್ತನ್ನೂ ಪ್ರದರ್ಶಿಸಿದ ಪರಮ ಪುರುಷ. ಗೋವುಗಳನ್ನೂ, ಗೋಪಾಲಕರನ್ನೂ, ಪಶು, ಪಕ್ಷಿ, ವೃಕ್ಷ, ವನಸ್ಪತಿಗಳನ್ನು ಸಂರಕ್ಷಿಸಿ ಉದ್ಧರಿಸಿದ ಪರಮಾತ್ಮ. ಮಹಾಭಾರತದ ಸೂತ್ರಧಾರ, ಭಗವದ್ಗೀತೆಯ ಮೂಲಕ ಅಧ್ಯಾತ್ಮ ತತ್ವವನ್ನು ಉಪದೇಶಿಸಿದ ಯೋಗಾಚಾರ್ಯ.

ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ನೀತಿಯನ್ನೂ ಧರ್ಮವನ್ನೂ ಉಪದೇಶಿಸುತ್ತಾನೆ. ಮಥುರೆಯ ತಾಯಿ ಮತ್ತು ತಂದೆ ಸೆರೆಮನೆಯಲ್ಲಿರುವಾಗ ಅಲ್ಲಿ ಹುಟ್ಟಿದ ವಸುದೇವ-ದೇವಕಿ ಕುಟುಂಬದ ಎಂಟನೆಯ ಮಗು ಶ್ರೀ ವಾಸುದೇವ. ಗೋಕುಲದಲ್ಲಿ ಯಶೋದೆಯ ಮುದ್ದು ಪೋರನಾಗಿ ಬೆಳೆದು, ಅಕ್ಕ ಪಕ್ಕದ ಮನೆಯಲ್ಲಿಹ ಬೆಣ್ಣೆ ಕದ್ದು ತಿಂದು, ತುಂಟತನದಲ್ಲಿ ಮಕ್ಕಳಿಗೆ ಗುರುವಾಗಿದ್ದ. ಅಷ್ಟಲ್ಲದೇ ಬಾಯಲ್ಲಿ ಮಣ್ಣು ಹಾಕಿಕೊಂಡು ತನ್ನ ತಾಯಿಗೆ ವಿಶ್ವರೂಪ ದರ್ಶನ ಮಾಡಿಸಿದ ವಿಶ್ವರೂಪಿ. ಜಾಂಬವಂತನಿಂದ ಸ್ಯಮಂತಕಮಣಿಯನ್ನು ಪಡೆದ ದೈವರೂಪಿ. ವಾಸುಕಿ ಎಂಬ ಕಾಳಸರ್ಪವನ್ನು ಸಂಹರಿಸಿ ಜನಗಳನ್ನು ಸಂರಕ್ಷಿಸಿದವನು.

ಬಲರಾಮನ ತಮ್ಮ ಮತ್ತು ಕುಚೇಲನ ಆಪ್ತ ಮಿತ್ರ. ಇವನಿಗೆ ಅವಲಕ್ಕಿ ಬಹು ಪ್ರಿಯವಾದ ತಿನಿಸು. ಮಹಾಭಾರತ ಕಾಳಗದಲ್ಲಿ ಕಪಟೋಪಾಯವನ್ನು ಬೋಧಿಸಿ, ಶತ್ರು ಸಂಹಾರದ ವೈವಿಧ್ಯವನ್ನು ಪರಿಚಯಿಸಿದ ಕಪಟಸೂತ್ರಧಾರಿ. ನರಕಾಸುರನನ್ನು ಸಂಹರಿಸಿ ಸಾವಿರಾರು ರಾಜರುಗಳನ್ನೂ, ಹದಿನಾರು ಸಾವಿರ ಸ್ತ್ರೀಯರನ್ನೂ ಬಿಡುಗಡೆಗೊಳಿಸಿದ ಮಹಾ ಪರಾಕ್ರಮಿ.

ಕೆಲವರ ಪ್ರಕಾರ ಶ್ರೀ ಕೃಷ್ಣನೂ ಮತ್ತು ಏಸು ಕ್ರಿಸ್ತನೂ ಒಬ್ಬನೇ. ಆದರೆ ಏಸುಕ್ರಿಸ್ತನು ಹುಟ್ಟುವ ಮುನ್ನೂರು ವರ್ಷಗಳ ಮೊದಲೇ ಭಾರತಕ್ಕೆ ಬಂದಿದ್ದ ಮೆಗಾಸ್ತನಿಸ್‌ ಎಂಬ ಗ್ರೀಕ್‌ ಚರಿತ್ರೆಕಾರ ಶ್ರೀ ಕೃಷ್ಣನ ಪೂಜೆಯ ಬಗ್ಗೆ ಉಲ್ಲೇಖಿಸಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+