ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂದಿಗೂ ಮರೆಯಲಾಗದ ಮಹಾನ್‌ ಸಜ್ಜನರಿವರು!

By Staff
|
Google Oneindia Kannada News


ಹೆಮ್ಮೆಯ ಅಮೆರಿಕನ್ನಡಿಗ ಡಾ.ದೊರೆ ಸುಬ್ಬರಾವ್‌ ಅವರ ಸ್ಮರಣಾರ್ಥ ಒಂದು ವಿನೂತನ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯಿತು. ವಿವರಗಳು ಇಲ್ಲಿವೆ.

  • ಸರಳಾ ಸತ್ಯನಾರಾಯಣ, ಮೈಸೂರು
ಕೆನಡಾ ಮತ್ತು ಅಮೆರಿಕದಲ್ಲಿನ ಸಾಹಿತ್ಯಾಭ್ಯಾಸಿ ಕನ್ನಡಿಗರಲ್ಲಿ ಜನಪ್ರಿಯರಾಗಿದ್ದು, ಶಿಕ್ಷಣಕ್ಷೇತ್ರದಲ್ಲಿ ಹೆಸರು ಮಾಡಿ, ಹಲವಾರು ಜನ ಕನ್ನಡಿಗರು ಮತ್ತು ಭಾರತೀಯರ ನೆಚ್ಚಿನ ಗೆಳೆಯ ಆಗಿದ್ದ ಡಾ. ದೊರೆ ಸುಬ್ಬರಾವ್‌ ಅವರ ನೆನಪಿನಲ್ಲಿ ಒಂದು ವಿನೂತನ ಕಾರ್ಯಕ್ರಮವನ್ನ ಅವರ ಅಭಿಮಾನಿಗಳು ಮತ್ತು ಕುಟುಂಬದವರು ಇದೇ ಆಗಸ್ಟ್‌ 15 ರಂದು ಮೈಸೂರಿನಲ್ಲಿ ಹಮ್ಮಿಕೊಂಡಿದ್ದರು.

ಅಂದು ಅಲ್ಲಿ ಭಗವದ್ಗೀತೆ, ಬೈಬಲ್‌, ಕುರಾನ್‌ ಮುಂತಾದ ಧರ್ಮಗ್ರಂಥಗಳಿಂದ ಆಧ್ಯಾತ್ಮಿಕ ಸೂಕ್ತಿಗಳ ಅಮೃತಧಾರೆ ಹರಿಯಿತು. ಲಿಂಗಾಂಬುಧಿ ಬಡಾವಣೆಯ ವಿವೇಕಾನಂದ ವೃತ್ತದ ಚರ್ಚಿನ ಧರ್ಮಾಧಿಕಾರಿ ರೆವರೆಂಡ್‌ ಜಯರಾಜ್‌ ಅವರು ಕ್ರಿಶ್ಚಿಯನ್‌ ಧರ್ಮದಲ್ಲಿ ಮಾನವೀಯತೆಗೆ, ಪ್ರೇಮ ಸ್ನೇಹ ಅನುಕಂಪಕ್ಕೆ ಎಷ್ಟೊಂದು ಪ್ರಾಮುಖ್ಯತೆ ಇದೆಯೆಂಬುದನ್ನ ವಿವರಿಸಿದರು. ಏಸು ಭಗವಂತನನ್ನು ಓ ತಂದೆಯೇ- ಎಂದು ಕರೆದು, ಅವನ ಗುಣಗಾನ ಮಾಡಿದ ಪ್ರಾರ್ಥನೆಯನ್ನು ಉದಾಹರಿಸುತ್ತಾ, ಜಗತ್ತಿಗೇ ಅವನು ತಂದೆ, ನಾವೆಲ್ಲಾ ಅವನ ಮಕ್ಕಳು, ಒಂದು ಕುಟುಂಬದ ಸದಸ್ಯರಾಗಿ, ಓರೆಕೋರೆಗಳನ್ನು ಮರೆತು, ಎಲ್ಲರೂ ಹೊಂದಿಕೊಂಡು ಹೋಗುವುದು ಎಷ್ಟು ಅಗತ್ಯ- ಎಂಬುದನ್ನು ಹೃದಯಂಗಮವಾಗಿ ಅವರು ಬಣ್ಣಿಸಿದರು.

A tribute to Americannadiga Dore Subbaraoಕುರಾನ್‌ನಿನ ಆಯ್ದ ಸೂಕ್ತಿಗಳನ್ನು ವಾಚಿಸಿ ಅದರ ಭಾವಾನುವಾದ ಮತ್ತು ಟಿಪ್ಪಣಿಗಳನ್ನು ನಿಷಾದ್‌ ಗಫಾರ್‌ ಮತ್ತು ಅವರ ತಾಯಿ ವಹಿದಾ ಅವರು ವಾಚಿಸುತ್ತಾ, ಇಸ್ಲಾಂ ಧರ್ಮದಲ್ಲಿ ನಿಷ್ಠೆ ಶ್ರದ್ಧೆ ಮತ್ತು ಸಹಿಷ್ಣುತೆಗಳ ಬಗ್ಗೆ ಹೇಳಿರುವುದನ್ನ ವಿವರಿಸಿದರು. ಹಿಂದೂ ಧರ್ಮದ ಪ್ರಮುಖ ಗ್ರಂಥವಾದ ಭಗವದ್ಗೀತೆಯನ್ನ ಆಧಾರವಾಗಿರಿಸಿಕೊಂಡು ನಿಷ್ಕಾಮಕರ್ಮದ ಮಹತ್ವವನ್ನ ಜಾನಕಿ ಶೇಷಾದ್ರಿಯವರು ಬಣ್ಣಿಸಿದರು. ಸರಸ್ವತೀಪುರ ಶಿಶುವಿಹಾರ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಲಲಿತಾ ಕೃಷ್ಣಮೂರ್ತಿಯವರು ಬಾಳು ಹಸನಾಗಿರಲು ಇಟ್ಟುಕೊಳ್ಳಬೇಕಾದ ಗುರಿಗಳ ಬಗ್ಗೆ ಹಿತವಚನಗಳನ್ನ ಹೇಳಿದರು.

ಶಿಕಾರಿಪುರ ಹರಿಹರೇಶ್ವರ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಮೆರಿಕನ್ನಡಿಗ ದೊರೆಸುಬ್ಬರಾವ್‌ ಅವರ ಸಾಧನೆ, ಅಪ್ರತಿಮ ಮೇಧಾವಿತನ ಮತ್ತು ಸ್ನೇಹಸಂಪತ್ತುಗಳ ಬಗ್ಗೆ ಮಾತನಾಡಿದರು. ಇಲ್ಲಿ ತೌರಿನಲ್ಲಿ ಸಲ್ಲದೇ ಹೋಗಿ, ಗುರು ಕೇಳಿದಾಗಲೆಲ್ಲಾ ಹೆಬ್ಬರಳನ್ನ ಇತ್ತು ಇತ್ತು ಬಸವಳಿದು, ಅಲ್ಲಿ ಅಂಗರಾಜ್ಯಾಭಿಷೇಕಕ್ಕೆ ಸಂದಿದ್ದವರ ಕತೆಯನ್ನು ಕವನಿಸಿದರು; ಯಾತ್ರೆಗೆ ಪಯಣಿಸಿದ ಪ್ರವಾಸಿಗ ಆ ಪವಿತ್ರಕ್ಷೇತ್ರಕ್ಕೇ ಮನಸೋತು, ಹೋಗಿ, ನೋಡಿ, ಗೆದ್ದ ಪರಿಯನ್ನು ವಿವರಿಸಿದರು,

ಅಗಲಿದ ಆತ್ಮೀಯ ದೊರೆ ಸುಬ್ಬರಾಯರ ಒಡನಾಟದ ತಮ್ಮ ನೆನಪುಗಳನ್ನ ಅವರ ಬಂಧುಗಳಾದ, ನ್ಯೂಯಾರ್ಕ್‌ ಕನ್ನಡ ಕೂಟದ ಪದಾಧಿಕಾರಿಗಳಾದ ಕೃಷ್ಣಮೂರ್ತಿ, ಹೇಮಂತ್‌ ಕೃಷ್ಣಮೂರ್ತಿ, ಹರ್ಷ ಕೃಷ್ಣಮೂರ್ತಿ, ಬಿ.ಎಸ್‌. ವಿಶ್ವನಾಥ್‌ ರಾವ್‌, ವೀಣಾ ಕೆ. ಮೂರ್ತಿ, ಮುಂತಾದವರು ಹಂಚಿಕೊಂಡರು. ಈ ನೆನಪುಗಳ ಸವಿಯಾಂದಿಗೆ ಸಂಜೆಯನ್ನ ಸಂಗೀತೋಲ್ಲಾಸದಲ್ಲಿ ಕಳೆಯಲು ಭಾರತಿ ಮತ್ತು ಅವರ ಶಿಷ್ಯವೃಂದ, ಸೋಮಸುಂದರಂ, ಲತಾ ಸುಬ್ರಹ್ಮಣ್ಯಂ, ಗೀತಾ ಮತ್ತು ಇನ್ನಿತರ ಮಕ್ಕಳಿಂದ ಸಂಗೀತದ ಕಾರ್ಯಕ್ರಮವೂ ಇತ್ತು. ಕಾರ್ಯಕ್ರಮ ನಿರೂಪಣೆಯನ್ನು ರೇಖಾ ಪ್ರಕಾಶ್‌ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು.

***

ಡಾ. ಸುಬ್ಬರಾವ್‌ ಅವರು, ಡಾ।। ಬಿ ಎಸ್‌ ರಾಮಕೃಷ್ಣ ರಾವ್‌ ಮತ್ತು ಸೀತಾಲಕ್ಷ್ಮಿಯವರ ಮುದ್ದಿನ ಮಗ. (ಜನನ: ಡಿಸೆಂಬರ್‌ 25, 1941). ದೊಡ್ಡ ಸಂಸಾರದ ಚೊಚ್ಚಿಲ ಮಗ. ದೊರೆ ಎಂಬ ಅಡ್ಡ ಹೆಸರಿನೊಡನೆ ಎಲ್ಲರ ಅಚ್ಚುಮೆಚ್ಚಿನ ಕಣ್ಮಣಿಯಾಗಿ ಬೆಳೆದರು. ಬಹಳ ಚುರುಕು ಬುದ್ದಿಯ ಮಗು ಶಾಲೆಯಲ್ಲೂ ಎಲ್ಲ ಗುರುಗಳ ಪ್ರೀತಿಗೆ ಪಾತ್ರ. ಅಜ್ಜಿಗಂತೂ ಮೊಮ್ಮಗನ ಮೇಲೆ ಅತ್ಯಂತ ಪ್ರೀತಿ. ಲೋಯರ್‌ ಸೆಕೆಂಡರಿ (ಎಲ್‌.ಎಸ್‌.) ಪಾಸಾದಾಗ ಊರಿಗೆಲ್ಲ ಲಡ್ಡು ಹಂಚಿದ್ದು ಅಂದಿನ ವಿಶೇಷ. ಎಸ್‌.ಎಸ್‌.ಎಲ್‌.ಸಿ., ಇಂಟರ್‌ ಮೀಡಿಯಟ್‌ ತರಗತಿಗಳಲ್ಲೂ ಮೊದಲ ಸ್ಥಾನದಲ್ಲಿ ಹೆಚ್ಚಿನ ಅಂಕದೊಡನೆ ತೇರ್ಗಡೆಯಾದರು.

ಅವರ ತಂದೆಯವರು ಎಲ್ಲೆಡೆಗೆ ವರ್ಗಾವಣೆ ಹೊಂದುತ್ತಿದ್ದರಿಂದ ದೊಡ್ಡಮ್ಮನ ಮಕ್ಕಳೊಡನೆ ತನ್ನ ಹೆಚ್ಚಿನ ವ್ಯಾಸಂಗವನ್ನು ಬೆಂಗಳೂರಿನಲ್ಲಿ ನಡೆಸಿದ್ದರು. ಶಾಲೆಯಲ್ಲಿ ಕನ್ನಡ ಪಂಡಿತರ ವಾಗ್‌ಝರಿ ಈ ಎಳೆಯನ ಮನಸೆಳೆದಿರಬೇಕು, ಅಂದಿನಿಂದ ಕನ್ನಡ ಇಂಗ್ಲೀಷ್‌ ಮತ್ತಿತರ ಎಲ್ಲ ಅತ್ಯುತ್ತಮ ಸಾಹಿತ್ಯಗಳಲ್ಲಿ ಅಪಾರ ಆಸಕ್ತಿ ಮೊಳೆತು, ಮುಂದೆ ಅವೆಲ್ಲದರಲ್ಲೂ ಮುಳುಗೆದ್ದರು. ತಾಯಿ ಮಾವ ಮುಂತಾವರೊಡನೆ ಅವಕಾಶದೊರೆತಾಗಲೆಲ್ಲಾ ಈ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಕನ್ನಡ ಸಾಹಿತ್ಯ ಪ್ರಪಂಚದಲ್ಲಂತೂ ಅವರ ಕೈಮನಗಳು ಓಡಾಡದ ಪ್ರಕಾರವೇ ಇಲ್ಲ ಎನ್ನಬಹುದೇನೋ.

ಮೈಸೂರಿನಲ್ಲಿ ಬಿ.ಎಸ್ಸಿ. ಡಿಗ್ರಿ ಪಡೆದು, ಗಣಿತದಲ್ಲಿ ಮಾಸ್ಟರ್‌ ಡಿಗ್ರಿ ಪಡೆದು, ಬಂಡೀಪುರ, ನಾಗಪುರ, ಶಿಮ್ಲಾ ಮುಂತಾದ ಸ್ಥಳಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಸುಬ್ಬರಾವ್‌, ಬಹುಕಾಲದವರೆಗೆ ನಿರಂತರ ಅಲೆಮಾರಿ ಜೀವನವಾಯಿತು. ಅವರ ಜೀವನ ಸುಖಮಯವಾಗಿರಲಿಲ್ಲ. ಅವರ ಅತ್ಯಂತ ಸತ್ಯಕಠೋರತೆ ಅವರನ್ನ ಒಂದೆಡೆ ನೆಲೆಯಾಗಲು ಬಿಡಲಿಲ್ಲ. ಅನೇಕ ಕಡೆ ಓಡಾಟ. ನಿಷ್ಠುರತೆ ಅವರ ನಿಸ್ವೃಹತೆ ಅವರು ಹೋದೆಡೆಯೆಲ್ಲಾ ಕಹಿಯನ್ನು ತರುತ್ತಾ ಬಂತು. ಕೊನೆಗೆ ಸಾಹಸ ಮಾಡಿ ಅಮೆರಿಕಾ ಯಾತ್ರೆಗೆ ಹೆಚ್ಚಿನ ಓದಿಗಾಗಿ 1968ನೇ ಇಸವಿಯಲ್ಲಿ ತೆರಳಿದರು. ಗಣಿತ ಮತ್ತು ಭೌತಶಾಸ್ತ್ರಗಳಲ್ಲಿ ಪಿ.ಎಚ್‌ಡಿ. ಪದವಿಯನ್ನು ಗಳಿಸಿದರು. ಕಂಪ್ಯೂಟರ್‌ ವಿಜ್ಞಾನದಲ್ಲಿ ಅವರಿಗೆ ಆಸಕ್ತಿ ಮೊಳೆಯಿತು. ಸತತ ಅಭ್ಯಾಸದಿಂದ ಅದರಲ್ಲಿ ಪರಿಣತರೂ ಆದರು. ಅದರ ಫಲಶೃತಿಯೇ ಗಣಿತ, ಭೌತಶಾಸ್ತ್ರ ಮತ್ತು ಗಣಕ ವಿಜ್ಞಾನಗಳಲ್ಲಿ ಪ್ರಕಟಗೊಂಡ ಇವರ ಹಲವಾರು ಪ್ರಬುದ್ಧ ಲೇಖನಗಳು. 1978ರಲ್ಲಿ ಸ್ಟೇಟ್‌ ಯೂನಿವರ್ಸಿಟಿ ಆಫ್‌ ನ್ಯೂಯಾರ್ಕ್‌ನ ಆಲ್ಬನಿ ಕ್ಯಾಂಪಸ್‌ನಲ್ಲಿ ಅವರು ಪ್ರೊಫೆಸರ್‌ ಆಗಿದ್ದರು.

ಕೆಲವು ವ್ಯಕ್ತಿಗಳೇ ಹಾಗೆ. ಅವರದು ಬಹುಮುಖ ಪ್ರತಿಭೆ. ಯಾವುದಾದರೊಂದು ವಿಷಯ ಪ್ರಾರಂಭಿಸಿದರೆ ಅದರ ತಲೆ ಬುಡ ಅಲ್ಲಾಡಿಸಿ ಸತ್ಯವನ್ನ ಗೆದ್ದೇ ತೀರುವ ಪ್ರವೃತ್ತಿ. ವೃತ್ತಿಯಲ್ಲೂ ನಿಷ್ಣಾತರೆಂಬ ಮಾತು ಹಾಗಿರಲಿ, ತಮ್ಮನ್ನು ತೊಡಗಿಸಿಕೊಂಡ ಹವ್ಯಾಸದಲ್ಲೂ ಶ್ರದ್ಧೆ ಮತ್ತು ಪರಿಣತಿ. ಇವರ ಮೆಚ್ಚಿನ ಹವ್ಯಾಸವೆಂದರೆ ಕನ್ನಡ ಮತ್ತು ಇಂಗ್ಲಿಷ್‌ ಸಾಹಿತ್ಯ; ಖಗೋಳ ಶಾಸ್ತ್ರ, ಜ್ಯೋತಿಷ್ಯ, ಚರಿತ್ರೆ ಸಮಾಜ ಆರ್ಥಿಕ ಶಾಸ್ತ್ರ ಮತ್ತು ರಾಜನೀತಿ ಶಾಸ್ತ್ರ. ಕನ್ನಡ ಸಾಹಿತ್ಯದಲ್ಲಿ ಇವರಿಗೆ ವಿಶೇಷ ಆಸಕ್ತಿ. ಅದರಲ್ಲಿ ಇವರ ಓದಿನ ಹರವು ಅಪಾರ. ಕಂಪ್ಯೂಟರ್‌ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿದ್ದ ದೊರೆ, ಕೊನೆಯ ದಿನಗಳಲ್ಲಿ ಯಾವಾಗಲೂ ಕಂಪ್ಯೂಟರ್‌ನಲ್ಲಿ ಮುಳುಗಿರುತ್ತಿದ್ದರು.

ಹಿಂದಿನ ಒಂದು ಪ್ರಸಂಗ ನೋಡಿ: ಮನೆಯಲ್ಲಿ ಎಲ್ಲರೂ ಸೇರಿದ್ದಾಗ, ಆಗಸ್ಟ್‌ 15, 1959-6ಂ ಇರಬೇಕು, ಏನೋ ಮಾತು ಮಾತಿಗೆ ಬಂದು, ವಾಂಗೀಬಾತ್‌ ಇನ್ನೂ ಚೆನ್ನಾಗಿ ಮಾಡಬಹುದಾಗಿತ್ತು- ಎಂದು ಅವರು ಹೇಳಿದರು ಅಂತ ಕಾಣುತ್ತೆ. ಆಡಿದಷ್ಟು ಸುಲಭವಲ್ಲ, ಮಾಡಿತೋರಿಸುವುದು- ಅಂತ ಯಾರೋ ಅಂದರು ಅಂತ ನೆನಪು. ಮರುದಿನ, ಅವರು ಬೆಳಗ್ಗೆ ಮುಂಚೆಯೇ ಎದ್ದು, ಮನೆಯಲ್ಲಿ ತಾವೇ ಸೊಗಸಾದ ವಾಂಗೀಭಾತ್‌, ಜೊತೆಗೆ ಸಜ್ಜಿಗೆಯನ್ನೂ ಮಾಡಿ ಬಡಿಸಿದ್ದು ಈಗಲೂ ನಮ್ಮ ನೆನಪಿನಂಗಳದಲ್ಲಿ ಹಚ್ಚ ಹಸುರಾಗಿದೆ. ಸಾಮಾನ್ಯವಾಗಿ ಮಹಿಳೆಯರಿಗೇ ಮಿಸಲಾಗಿದ್ದ ಕಸೂತಿ ಹಾಕಲು ತೋರುತ್ತಿದ್ದ ಅವರ ಆಸಕ್ತಿಯೂ ಹಾಗೆಯೇ. ಸಂಗೀತದಲ್ಲಿಯೂ ಅವರಿಗೆ ವಿಶೇಷ ಅಭಿರುಚಿಯಿತ್ತು; ಕೆಲವು ದಿನ ವೀಣೆ ಅಭ್ಯಾಸದಲ್ಲಿ ತೊಡಗಿದ್ದೂ ಉಂಟು.

ಶ್ರದ್ಧೆ ಎಂದರೆ ಇದಲ್ಲದೇ ಇನ್ನೇನು? :

ಇನ್ನೊಂದು ನಿದರ್ಶನ: ನಾವೆಲ್ಲ ಆಗ ಯಳಂದೂರಿನಲ್ಲಿದ್ದೆವು, 1961ನೇ ಇಸವಿ ಇರಬಹುದು. ಮನೆಯಲ್ಲಿ ಅವರ ಉಪನಯನ ನಡೆಯಿತು; ಬಹಳ ಜನ ನೆಂಟರು ಬಂದಿದ್ದರು. ಆಗ ಧಾರಾಕಾರವಾಗಿ ಮಳೆ ಸುರಿದು ನದಿಗಳಲ್ಲಿ ಪ್ರವಾಹ ಬಂದು ಸಂಚಾರ ದುಸ್ತರವಾಯಿತು. ಬಂದ ನೆಂಟರೆಲ್ಲರು ಮುಂಜಿಯ ಮನೆಯಲ್ಲೇ ಇರುವಂತಾಯಿತು. ಬೆಳಗ್ಗೆ ಎದ್ದು ನೋಡುತ್ತೇವೆ- ಇವರು ನಿರರ್ಗಳವಾಗಿ ಮಂತ್ರಗಳನ್ನು ಹೇಳುತ್ತಾ ಯಾರ ಸಹಾಯವೂ ಇಲ್ಲದೆ, ಸಂಧ್ಯಾವಂದನೆ ಮಾಡುತ್ತಿದ್ದಾರೆ! ಈ ಏಕಸಂಧಿಗ್ರಾಹಿ, ಸಂಧ್ಯಾವಂದನೆಯ ಪುಸ್ತಕವನ್ನ ಮುಂಜಿಗೆ ಮೊದಲೇ ತಂದಿಟ್ಟುಕೊಂಡು ಅದರ ಮಂತ್ರವನ್ನೆಲ್ಲ ಬಾಯಿಪಾಠ ಮಾಡಿಬಿಟ್ಟಿದ್ದ. ಅದನ್ನು ನೋಡಿ ನೆಂಟರಿಗೆಲ್ಲರಿಗೂ ಆಶ್ಚರ್ಯವಾಗಿತ್ತು. ಇದಂತೂ ಕಣ್ಣಿನಲ್ಲಿ ಕಟ್ಟಿದಂತಿದೆ. ಶ್ರದ್ಧೆ ಎಂದರೆ ಇದಲ್ಲದೇ ಇನ್ನೇನು?

ಹಿಂದೂಧರ್ಮದಲ್ಲಿ ಇವರಿಗೆ ಅಪಾರ ಗೌರವವಿತ್ತು. ಆದರೆ, ಬಹಳ ಜನ ಅಂದುಕೊಂಡಿದ್ದಂತೆ ದೊರೆ ನಾಸ್ತಿಕರಾಗಿರಲಿಲ್ಲ; ಪೂಜೆ ಪುನಸ್ಕಾರ ವಿಧಿವಿಧಾನಗಳ ಅರ್ಥರಹಿತ ಆಚರಣೆಗೆ ಮಾತ್ರ ಅವರು ವಿರುದ್ಧವಾಗಿದ್ದರು. ಎಲ್ಲ ಧರ್ಮಗಳನ್ನ ಸಮಭಾವದಿಂದ ನೋಡುವ ಪ್ರವೃತ್ತಿ ಅವರದು. ಅವರೊಡನೆ ಹೆಚ್ಚು ಕಾಲ ಕಳೆದ ಹೇಮಂತನ ಪ್ರಕಾರ, ದೊರೆ ನಿಜಕ್ಕೂ ಒಬ್ಬ ದೊಡ್ಡ ದಾರ್ಶನಿಕ. ವೇದೋಪನಿಷತ್ತುಗಳು ಮತ್ತು ಹಿಂದೂ ಧರ್ಮದ ಇನ್ನಿತರ ಪ್ರಮುಖ ಗ್ರಂಥಗಳು ಇಸ್ಲಾಂ, ಕ್ರೈಸ್ತಧರ್ಮ, ಸೂಪಿ ಪಂಥ, ಜೈನ, ಬೌದ್ಧ ಧರ್ಮ ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ತತ್ವಶಾಸ್ತ್ರಗಳು -ಹೀಗೆ ಎಲ್ಲ ಪ್ರಕಾರಗಳನ್ನು ಆಳವಾಗಿ ಅಭ್ಯಾಸ ಮಾಡಿದ ದೊರೆಯ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಈ ರೀತಿಯಾಗಿ ಮೂರೂ ಧರ್ಮಗಳ ಹಿನ್ನೆಲೆಯಲ್ಲಿ ಒಬ್ಬ ಸಜ್ಜನನ ಗುಣಗಾನ ನಡೆದುದು ತುಂಬಾ ಅರ್ಥಪೂರ್ಣವಾಗಿತ್ತು.

ದೊರೆಯವರಿಗೆ ತಂಗಿಯರಲ್ಲಿ, ತಮ್ಮಂದಿರಲ್ಲಿ ಬಹಳ ಪ್ರೀತಿ ವಿಶ್ವಾಸ; ಅಜ್ಜಿಯಾಡನೆ ಹಲವು ವೇಳೆ ಹುಡುಗಾಟ ತುಂಟಾತ ಮಾಡುತ್ತಿದ್ದುದೂ ಉಂಟು. ಆದರೆ, ಜೊತೆಯಲ್ಲಿದ್ದರೂ, ಓದಿನಲ್ಲಿ ಮಗ್ನನಾಗಿಬಿಟ್ಟರೆ ಇನ್ಯಾವ ಕಡೆಯೂ ಗಮನವಿರುತ್ತಿರಲಿಲ್ಲವೆಂಬ ಮಾತು ಬೇರೆ. ದೊರೆ ಅಮೆರಿಕಾಗೆ ತೆರಳಿದ ಮೇಲೆ ಅವರ ಕಾಗದಗಳಿಂದಲ್ಲದೆ, ನಮಗೆ ಅವರ ಬಗ್ಗೆ ಹೆಚ್ಚು ವಿಷಯ ತಿಳಿದು ಬರುತ್ತಿರಲಿಲ್ಲ. ಹೋದ ಹೊಸದರಲ್ಲಿ ಅನೇಕ ದೀರ್ಘ ಪತ್ರಗಳನ್ನು ಅಲ್ಲಿನ ವಿಷಯವನ್ನೆಲ್ಲಾ ತಿಳಿಸಿ ಬರೆಯುತ್ತಿದ್ದರು. ಲಾರಿ ಬಂದು ಕಸ ತೆಗೆದುಕೊಳ್ಳುವುದರಿಂದ ಹಿಡಿದು ಆಫೀಸಿನಲ್ಲಿ ನಡೆಯುವ ಚಿಕ್ಕಪುಟ್ಟ ವಿಷಯದವರೆಗೂ ಕಾಗದದಲ್ಲಿ ಇರುತ್ತಿತ್ತು. ಭಾರತದಲ್ಲಿ ನಡೆಯುತ್ತಿರುವುದನ್ನೇಲ್ಲಾ ಪತ್ರಿಕೆಗಳ ಮುಖಾಂತರ ಓದಿ ತಿಳಿದುಕೊಂಡು ಅದನ್ನು ತಮ್ಮ ಕಾಗದಗಳಲ್ಲಿ ಫೋನ್‌ ಮಾತುಕತೆಗಳಲ್ಲಿ ಪ್ರಸ್ತಾಪಿಸುತ್ತಿದ್ದರು. ಎಷ್ಟೋ ಬಾರಿ, ನಮಗಿಂತ ಮುಂಚೆ ಅವರಿಗೇ ಇಲ್ಲಿನ ವಿದ್ಯಮಾನಗಳೆಲ್ಲಾ ತಿಳಿದುಬಿಟ್ಟಿದೆಯೇನೋ ಅನ್ನುವಷ್ಟರ ಮಟ್ಟಿಗೆ ಅವರು ಸದ್ಯೋಚಿತ-ಜ್ಞಾತ (ಅಪ್‌-ಟು-ಡೇಟ್‌) ಆಗಿರುತ್ತಿದ್ದರು.

ಅಮೆರಿಕಾದಲ್ಲಿ ಎರಡು ವಿಷಯಗಳಲ್ಲಿ ಡಾಕ್ಟರೇಟ್‌ ಗಳಿಸಿದ್ದರೂ, ಒಳ್ಳೆಯ ಉದ್ಯೋಗದಲ್ಲಿದ್ದರೂ, ಅವರ ಜೀವನ ಅಷ್ಟು ಸಂತೋಷದಾಯಕವಾಗಿರಲಿಲ್ಲ ಅಂತ ಕಾಣುತ್ತೆ. ಮೇಲಿಂದ ಮೇಲೆ ಯಾವುದೋ ವಿಷಕೂಪದಲ್ಲಿ ಸಿಲುಕಿಹಾಕಿಕೊಳ್ಳುತ್ತಿದ್ದರೇನೋ. ಹಣವಿತ್ತು; ಆದರೆ ನಾಳಿನ ಭವಿಷ್ಯಕ್ಕೆ ಯೋಚಿಸುವ ಮನೋಭಾವ ಅವರದಲ್ಲ. ಅಪಾರ ಬುದ್ಧಿ ಜ್ಞಾನ ವಿದ್ದರೂ, ದೈನಂದಿನ ಕಾರ್ಯಗಳು ಸುಖಕರವಾಗಿದ್ದರೂ, ಒಂಟಿತನವೇ ಅವರನ್ನು ಬೆಂಬತ್ತಿತ್ತೇನೋ. ಅವರದೇ ಆದ ತತ್ವಗಳು, ಸಿದ್ಧಾಂತಗಳು ಅವರಿ ಮುಳುವಾದುವೇನೋ. ಅಕ್ಕ ತಂಗಿರನ್ನು ಕುರಿತು ಯಾವಾಗಲೂ ಯೋಚಿಸುತ್ತಿದ್ದ ಅವರಿಗೆ ತಮ್ಮ ಅಮ್ಮನ ಮರಣ ಶಾಖ್‌ ತಂದಿತ್ತೆನ್ನುತ್ತಾರೆ. ಅಪ್ಪನಿಗಾಗಿಯೂ ಚಿಂತಿಸುತ್ತಿದ್ದರು. ಆದರೆ ಯಾವುದೂ ತೋರ್ಪಡಿಕೆಯಾಗಿರಲಿಲ್ಲ. ಹಿಂದೆ ಒಂದು ಮುಂದೆ ಒಂದೂ ಇಲ್ಲ; ಏನನ್ನಾದರೂ ಹೇಳಬೇಕೆಂದರೆ ಬಹಳ ನೇರವಾಗಿಯೇ ಪ್ರಸ್ತಾಪಿಸುತ್ತಿದ್ದರು.

ಇತ್ತೀಚೆಗೆ ಖಾಯಿಲೆ ಅವರನ್ನ ಕಂಗೆಡಿಸಿದ್ದು ಪತ್ರಗಳಿಂದ ತಿಳಿದು ಬರುತ್ತಿತ್ತು. ಆದರೆ ಅವರನ್ನು ಅನೇಕ ರೀತಿಯಲ್ಲಿ ದೇಹಕ್ಕೆ ಒದಗಿದ ಖಾಯಿಲೆ ಅವರನ್ನು ಕಡೆಕಡೆಗೆ ಆಸ್ಪತೆಗೂ ಮನೆಗೂ ಓಡಿಯಾಡಿಸುತ್ತಿತ್ತು. ಅವರ ಕೆನಡಾವಾಸ ಚೆನ್ನಾಗಿತ್ತು ಎನ್ನುತ್ತಾರೆ. ಆದರೂ ನೆಮ್ಮದಿಯಿರಲಿಲ್ಲವೆನಿಸುತ್ತೆ. ತಮ್ಮ ಸುಮಾರು ಮೂವತ್ತೈದು ವರ್ಷಗಳ ವಿದೇಶ ವಾಸದ ಅವಧಿಯಲ್ಲಿ ಅವರು ಭಾರತಕ್ಕೆ ಬಂದಿದ್ದು ಒಮ್ಮೆ ಮಾತ್ರ; 1984ರಲ್ಲಿ ತಂದೆಯನ್ನು ನೋಡಲು ಬಂದಿದ್ದರು. ಆಗ ಎಲ್ಲ ಕಡೆಯೂ ತಿರುಗಿದರು; ಬಂಧುಬಾಂಧವರೆಲ್ಲರೊಂದಿಗೆ ಆತ್ಮೀಯವಾಗಿ ಕಾಲ ಕಳೆದರು. ಹಿಂತಿರುಗುವಾಗ ಅವರು ಕೊಂಡುಹೋದದ್ದು ಬರೀ ಪುಸ್ತಕಗಳು, ಪುಸ್ತಕಗಳು, ಪುಸ್ತಕಗಳು ಮತ್ತು ಸ್ನೇಹಿತರಿಗಾಗಿ ಕಾಣಿಕೆಯ ಉಡುಗೊರೆಗಳು. ಜೀವನದುದ್ದಕ್ಕೂ ಸಂಗಹಿಸಿದ, ಈಗ ಅವರು ಬಿಟ್ಟುಹೋಗಿರುವ ಅಪಾರ ಗ್ರಂಥರಾಶಿಯ ಬಗ್ಗೆ ಹೇಮಂತ್‌ ಪ್ರಸ್ತಾಪಿಸುತ್ತಾ, ಯಾವ ಯಾವ ಬಗೆಯ ಪ್ರಕಾರಗಳ ಪುಸ್ತಕಗಳು ಈ ಭಂಡಾರದಲ್ಲಿ ಇವೆಯೆಂಬುದನ್ನ ಪತ್ತೆಹಚ್ಚುವುದೇ ಒಂದು ಸಾಹಸ ಎನ್ನುತ್ತಾನೆ.

ಎಷ್ಟೇ ಕಷ್ಟ ಬಂದರೂ ತಾವೇ ನುಂಗಿಕೊಳ್ಳುತ್ತಿದ್ದರೇ ವಿನಃ ಅದರ ಬಗ್ಗೆ ಗೊಣಗುತ್ತಿರಲಿಲ್ಲ. ಮುಗ್ಧ ಸ್ವಭಾವದ ನೇರ ನಡೆನುಡಿಯ ಸುಬ್ಬರಾಯರಿಗೆ ವೃತ್ತಿಯಲ್ಲಿ ಹಲವಾರು ಜನರಿಂದ ತೊಂದರೆ ಅನ್ಯಾಯ ಆದುದು ಉಂಟು. ಆದರೆ ಆ ಮಾನಸಿಕ ವೇತನೆಯನ್ನ ಯಾರಿಗೂ ಹೇಳದೇ ತಾವೇ ನುಂಗಿಕೊಳ್ಳುತ್ತಿದ್ದರು. ಇದನ್ನು ನೆನೆಪಿಸಿಕೊಳ್ಳುತ್ತ ಶ್ರದ್ಧಾಂಜಲಿಯ ಕಾರ್ಯಕ್ರಮದಲ್ಲಿ ಕೃಷ್ಣಮೂರ್ತಿಗಳು ಹೇಳಿದ ಹಾಗೆ, ದೈಹಿಕ ಅಸ್ವಸ್ಥತೆಯನ್ನಂತೂ ಅವರು ಯಾರೊಂದಿಗೂ ಹೇಳಿಕೊಳ್ಳುತ್ತಲೇ ಇಲ್ಲ. ಒಬ್ಬಂಟಿಗನಾಗಿದ್ದರಿಂದ ಹೀಗೆ ಉದಾಸೀನ ಮಾಡಿ ರೋಗ ಉಲ್ಬಣಿಸಿರಬೇಕು. ಆದರೆ ಅದನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಸ್ವಭಾವ ದೊರೆಯವರದಲ್ಲ. ಕೊನೆಯುಸಿರೆಳೆದ ದಿನ(ಮೇ 08, 2004)ದ ಹಿಂದಿನ ದಿನ ಕೃಷ್ಣಮೂರ್ತಿಗಳೊಂದಿಗೆ ಮಾತನಾಡಿದ್ದರಂತೆ; ಆವಾಗಲೂ ತನ್ನ ಆರೋಗ್ಯದ ಬಗ್ಗೆ ಅವರು ಹೇಳಿಕೊಂಡಿರಲಿಲ್ಲ.

ನ್ಯೂಯಾರ್ಕಿನಲ್ಲಿ ಹುಟ್ಟಿ ಬೆಳೆದು ಅಲ್ಲಿಯೇ ಉನ್ನತ ವ್ಯಾಸಂಗ ಮಾಡಿ ಈಗ ಗಣಿತ ಶಾಸ್ತ್ರದ ಅಧ್ಯಾಪಕನಾಗಿರುವ ಹೇಮಂತ ಕೃಷ್ಣಮೂರ್ತಿಗೆ ತನ್ನ ದೊರೆ ಮಾಮನ ಬಗ್ಗೆ ನೆನಪುಗಳು ಹಚ್ಚ ಹಸಿರು. ನೆನಪಿನಂಗಳದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವನ ಮಾತುಗಳೇ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿ ಮಾಡಿದ್ದು. ಹೇಮಂತನ ಪ್ರಕಾರ ದೊರೆ ನಿಜಕ್ಕೂ ಮಿಸ್ಟರ್‌ ನಾಲೆಡ್ಜ್‌, ಜ್ಞಾನಮೂರ್ತಿ. ವಿಷಯ ಯಾವುದೇ ಇರಲಿ -ವಿಜ್ಞಾನ, ಸಾಹಿತ್ಯ, ಕ್ರೀಡೆ, ರಾಜಕಾರಣ, ಆಧ್ಯಾತ್ಮ ಯಾವುದೇ ಆಗಿರಲಿ, ನಿದ್ದೆಯಿಂದ ಎಬ್ಬಿಸಿದರೂ ಪರವಾಗಿಲ್ಲ ಯಾವಾಗಲೇ ಕೇಳಲಿ, ತಕ್ಷಣ ಸಮಂಜಸವಾದ ತಾರ್ಕಿಕವಾದ ಉತ್ತರವನ್ನ ಕೊಡುವ ಸ್ವಭಾವ ದೊರೆಯವರದು.

ಮಕ್ಕಳಿಗೂ ದೊಡ್ಡವರಿಗೂ ಅವರವರ ಮಟ್ಟಕ್ಕೆ ಅನುಗುಣವಾಗಿ ಸಮಸ್ಯೆಯನ್ನ ಬಗೆಹರಿಸಿ, ವಿಷಯವನ್ನು ಮನದಟ್ಟುಮಾಡಿಕೊಡುವ ಚಾಕಚಕ್ಯತೆ ಮಾಮನಿಗೆ ಇತ್ತೆಂದು ಹೇಮಂತನ ಅಭಿಪ್ರಾಯ. ತಮಗಿದ್ದ ಜ್ಞಾನದಾಹ ಮಕ್ಕಳಲ್ಲೂ ಮೊಳಕೆಯೂಡಬೇಕು ಎಂದು ಮಾಮ ಪಡುತ್ತಿದ್ದ ಶ್ರಮ, ತನ್ನದೇನನ್ನೂ ಯಾರಿಗೂ ಹೇಳಿಕೊಳ್ಳದೇ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ನಗು ನಗುತ್ತ ಕಿರಿಯರನ್ನ ಪ್ರೋತ್ಸಾಹಿಸುತ್ತಿದ್ದ ಈ ಧೀಮಂತನ ನಡವಳಿಕೆಯನ್ನ ಹೇಮಂತ ತನ್ನ ಶ್ರದ್ಧಾಂಜಲಿಯಲ್ಲಿ ವಿವರಿಸುತ್ತಿದ್ದಾಗ ಎಲ್ಲರ ಕಣ್ಣಲ್ಲಿ ನೀರೂರಿತು.

ಇಂಥವರಾಗಿದ್ದರು ನಮ್ಮ ಡಾ। ದೊರೆ ಸುಬ್ಬರಾವ್‌; ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ!


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X