ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಬ್ಬಿ ವೀರಣ್ಣನೆಂಬ ಸಾಧಕನ ಛಲಗಾರಿಕೆ...

By Staff
|
Google Oneindia Kannada News

ಬರಗಾಲದಲ್ಲಿ ಅಧಿಕ ಮಾಸ ಎಂಬಂತೆ ಶ್ರೀನಿವಾಸ ಮೂರ್ತಿಗಳ ಓರಿಯಂಟಲ್‌ ಕಂಪನಿ ಕೂಡ ಮುಳುಗಿ ಹೋಯಿತು. ಸ್ವಾಭಿಮಾನಿಯಾದ ವೀರಣ್ಣನವರು ಸಾರ್ವಜನಿಕ ನಿಂದೆಗಳಿಂದ ನೊಂದು ಹೋದರು. ಆತ್ಮಹತ್ಯೆಯ ಯೋಚನೆ ಮಾಡುವಷ್ಟು ನಿರಾಶರಾದರು. ಪರಿಸ್ಥಿತಿಯನ್ನು ಹೇಗೋ ನಿಭಾಯಿಸಿದ ಅವರು ವಾಕ್ಚಿತ್ರಗಳ ಯುಗ ಪ್ರಾರಂಭವಾದಾಗ ಹಳೇ ನಿರಾಸೆಗಳನ್ನೆಲ್ಲ ಬಿಟ್ಟು ತಮ್ಮ ಕಂಪನಿಯ ಜನಪ್ರಿಯ ನಾಟಕ ಸದಾರಮೆಯನ್ನು ಬೆಳ್ಳಿತೆರೆಗೆ ತಂದರು. ಅದು ಕನ್ನಡದ ಮೂರನೇ ವಾಕ್ಚಿತ್ರವಾಯಿತು. ಬಹುಮಟ್ಟಿಗೆ ಯಶಸ್ವಿಯೂ ಆಯಿತು. ಇದೇ ಉತ್ಸಾಹದಲ್ಲಿ ಅವರು ಕೆಂಪೇಗೌಡ ರಸ್ತೆಯಲ್ಲಿ ‘ಸಾಗರ್‌’ಚಿತ್ರಮಂದಿರ ನಿರ್ಮಿಸಿದರು. 1941ರಲ್ಲಿ ಕಂಪನಿಯಲ್ಲಿ ಜನಪ್ರಿಯವಾಗಿದ್ದ ಸಂಗೀತ ಸುಭದ್ರ ನಾಟಕವನ್ನು ಆಧರಿಸಿ ಸುಭದ್ರಚಿತ್ರ ತಯಾರಿಸಿದರು. ಆಗಿನ ಕಾಲಕ್ಕೇ ಒಂದು ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಇದಕ್ಕೆ ಹನ್ನೊಂದು ತಿಂಗಳ ಚಿತ್ರೀಕರಣ ನಡೆದಿತ್ತು. 1942ರಲ್ಲಿ ಜೀವನ ನಾಟಕ ನಿರ್ಮಿಸಿದರು. ಉತ್ತರ ಭಾರತದ ವರಾಟ್‌ ಕಾಶ್ಮೀರಿ ನಿರ್ದೇಶಕರಾದರೆ, ಕೆಂಪರಾಜ ಅರಸ್‌ ನಾಯಕರಾದರು. ಚಿತ್ರದ ಬಹುತೇಕ ತಾರಾಗಣದಲ್ಲಿ ಕನ್ನಡ ಬಾರದವರೇ ಇದ್ದರು. ಅವರ ಉಚ್ಛಾರಣೆಗೆ ಸರಿಯಾಗಿ ಸಂಭಾಷಣೆ ಬರೆಯಬೇಕಾದ ತಾಕಲಾಟವನ್ನು ಅ.ನ.ಕೃ ಸ್ಮರಿಸಿಕೊಂಡಿದ್ದಾರೆ.

1945ರಲ್ಲಿ ಹೇಮರೆಡ್ಡಿ ಮಲ್ಲಮ್ಮ ನಿರ್ಮಾಣವಾಯಿತು. ಮಲ್ಲಮ್ಮನ ಪಾತ್ರ ಬಿ.ಜಯಮ್ಮ ವಹಿಸಿದರೆ, ಆಕೆಯ ಪೆದ್ದು ಪತಿಯ ಪಾತ್ರವನ್ನು ವೀರಣ್ಣನವರೇ ನಿರ್ವಹಿಸಿದ್ದರು, ಚಿತ್ರ ಯಶಸ್ವಿಯಾತಿತು. ಆದರೆ ವೀರಣ್ಣನವರ ‘ ಕರ್ನಾಟಕ ಫಿಲಂಸ್‌ ಲಿಮಿಟೆಡ್‌’ ಸಾರ್ವಜನಿಕರಿಂದ ಷೇರುಗಳನ್ನು ಪಡೆದು ನಿರ್ಮಾಣವಾಗಿತ್ತು. ಇದು ತಯಾರಿಕೆಯಲ್ಲದೆ ಹಂಚಿಕೆ ಕೆಲಸವನ್ನು ನಿರ್ವಹಿಸುತ್ತಿತ್ತು. ಹಂಚಿಕೆ ಅವರ ಕೈ ಕಟ್ಟಿತ್ತು. ಇದರಿಂದ ವೀರಣ್ಣನವರು ಕೆಲಕಾಲ ಚಿತ್ರರಂಗದಿಂದ ದೂರ ಉಳಿಯುವುದು ಅನಿವಾರ್ಯವೂ ಆಯಿತು.

ಛಲ ಬಿಡದ ತ್ರಿವಿಕ್ರಮನಂತೆ 1953ರಲ್ಲಿ ‘ಗುಬ್ಬಿ ಕರ್ನಾಟಕ ಫಿಲಂಸ್‌’ ಸಂಸ್ಥೆ ಸ್ಥಾಪಿಸಿ ಮತ್ತೆ ಚಿತ್ರರಂಗಕ್ಕೆ ಮರಳಿದ್ದರು. ತಮ್ಮ ಮಾತೃ ಶ್ರೀ ರುದ್ರಮ್ಮನವರು ಹೇಳುತ್ತಿದ್ದ ‘ಗುಣಸಾಗರಿ’ ಕತೆಯನ್ನು ಚಿತ್ರವಾಗಿಸಿದರು. ಎಚ್‌.ಎಲ್‌.ಎನ್‌.ಸಿಂಹ ಸಂಭಾಷಣೆ ಬರೆದು ನಿರ್ದೇಶಿಸಿದರೆ, ಕು.ರಾ.ಸೀತಾರಾಮಶಾಸ್ತ್ರಿ ಗೀತೆಯನ್ನು ರಚಿಸಿದರು. ಚಿತ್ರ ಕನ್ನಡ ಮತ್ತು ತಮಿಳು ಎರಡು ಅವತರಣಿಕೆಯಲ್ಲಿ ಸಿದ್ಧವಾಯಿತು. ಕನ್ನಡ ಅವತರಿಣಿಕೆ ಗೆದ್ದರೂ ತಮಿಳು ಅವತರಣಿಕೆ ಸತ್ಯ ಶೋಧನೆ ಸೋತಿದ್ದರಿಂದ ವೀರಣ್ಣನವರಿಗೆ ಸತ್ಯ ಶೋಧನೆಯೇ ಆಯಿತು. ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಎ.ವಿ.ಎಂ ಕಂಪನಿಯಾಡಗೂಡಿ ಬೇಡರ ಕಣ್ಣಪ್ಪ ಎಂಬ ಮಹೋನ್ನತ ಚಿತ್ರ ನಿರ್ಮಿಸಿದರು. ಚಿತ್ರ ಯಶಸ್ವಿಯಾಗಿದ್ದಲ್ಲದೆ ಅಖಿಲ ಭಾರತ ಮಟ್ಟದಲ್ಲಿ ಅರ್ಹತಾ ಪತ್ರ ಪಡೆದು ರಾಷ್ಟ್ರ ಮನ್ನಣೆ ಪಡೆದ ಮೊದಲ ಕನ್ನಡ ಚಿತ್ರವಾಯಿತು.

ಶಾಲೆ ಮೆಟ್ಟಿಲನ್ನೇರದೆ, ಅ,ಆ,ಇ,ಈ ಕೂಡ ಕಲಿಯದೆ ರಂಗಭೂಮಿ ಮತ್ತು ಚಿತ್ರರಂಗಗಳೆರಡಕ್ಕೂ ಭದ್ರ ಬುನಾದಿ ಹಾಕಿದವರು ವೀರಣ್ಣ. ಗುಬ್ಬಿ ಶ್ರೀ ಚೆನ್ನಬಸವೇಶ್ವರ ಥಿಯೇಟ್ರಿಕಲ್‌ ಕಂಪನಿಗೆ ತಿಂಗಳಿಗೆ ಐದು ರೂಪಾಯಿ ಸಂಬಳದ ಜೀತದಾಳಾಗಿ ತಮ್ಮ ಆರನೇ ವರ್ಷದಲ್ಲಿ ಸೇರಿದ ಗುಬ್ಬಿ ವೀರಣ್ಣ ಕನ್ನಡ ಚಿತ್ರರಂಗದ ಮೂಲ ಪುರುಷರಾಗಿ ತ್ರಿವಿಕ್ರಮವತಾರವೆತ್ತಿದ್ದು ನಿಜಕ್ಕೂ ರೋಚಕ ಕತೆಯೇ ಸರಿ!

(ಸ್ನೇಹ ಸೇತು: ವಿಜಯ ಕರ್ನಾಟಕ )

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X