ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರಿಗೆ ಬಂತು ಸ್ವಾತಂತ್ರ್ಯ?

By Staff
|
Google Oneindia Kannada News

;?
ಈ ದೇಶ ಗೊಂದಲಗಳ ಗೂಡಾಗಿ ‘ಯಾರಿಗೆ ಬಂತು? ಎಲ್ಲಿಗೆ ಬಂತು 47ರ ಸ್ವಾತಂತ್ರ?’ ಎಂಬುದು ಉತ್ತರಿಸಲಾಗದ ಪ್ರಶ್ನೆಯಾಗಿಯೇ ಮುಂದುವರೆದಿದೆ. ಸ್ವಾತಂತ್ರ್ಯದಿನಾಚರಣೆ ಹಿನ್ನೆಲೆಯಲ್ಲಿ, ಭಾರತೀಯರ ಕಣ್ತೆರೆಸುವ ಒಂದು ವಿಶೇಷ ಲೇಖನ ಇಲ್ಲಿದೆ.

Santhosh G.R.ಕಳೆದ ವಾರ ದೇಶದ ಸಂಸತ್ತಿನಲ್ಲಿ ಆಹಾರ ಸುರಕ್ಷತೆ ಮತ್ತು ಮಾನದಂಡ ವಿಧೇಯಕವನ್ನು ಅಂಗೀಕರಿಸಲಾಗಿದೆ. ಸಣ್ಣ ಪುಟ್ಟ ಪ್ರತಿಯೊಂದು ಆಹಾರ ಉತ್ಪನ್ನಗಳನ್ನೂ ಪ್ಯಾಕ್‌ ಮಾಡಿ ಮಾರಬೇಕೆನ್ನುವುದೇ ಇದರ ನಿಯಮ. ಆಹಾರ ಸಂಸ್ಕರಣೆಗೆ ಇದರಿಂದ ಉತ್ತೇಜನ ದೊರಕಲಿದೆ ಮತ್ತು ಜನರಿಗೆ ಸುರಕ್ಷಿತ ಆಹಾರ ದೊರೆಯಲಿದೆ ಎಂಬುದು ಭರವಸೆ. ಆದರೆ ಈ ವಿಧೇಯಕ ಜಾರಿಯಾದಲ್ಲಿ ದೇಶದ ಉದ್ದಲಕ್ಕೂ ಹರಡಿರುವ ಸಹಸ್ರಾರು ಸಣ್ಣವ್ಯಾಪಾರಿಗಳು ತಮ್ಮ ಅಂಗಡಿ ಮುಚ್ಚಿ ಮನೆಯ ಹಾದಿ ಹಿಡಿಯಬೇಕಾಗುತ್ತದೆ.

ಸಣ್ಣ ಬೇಕರಿಯಲ್ಲಿ ತಯಾರಾಗುವ ತಾಜಾ ಬ್ರೆಡ್‌, ಬರ್ಫಿ, ಸಿಹಿತಿಂಡಿಗಳು, ಬಿಡುವಿನ ವೇಳೆಯಲ್ಲಿ ತಾಯಂದಿರು ಮನೆಯಲ್ಲೇ ತಯಾರಿಸಿ ಮಾರುತ್ತಿದ್ದ ಹಪ್ಪಳ, ಸಂಡಿಗೆ, ಉಪ್ಪಿನಕಾಯಿಗಳೂ ಇನ್ನು ನಮ್ಮೆಲ್ಲರ ನಾಲಿಗೆ ತಣಿಸುವಂತಿಲ್ಲ. ಏಕೆಂದರೆ ಅಂಗೀಕಾರವಾಗಿರುವ ಹೊಸ ವಿಧೇಯಕದ ಪ್ರಕಾರ ಎಲ್ಲಾ ತಿಂಡಿಗಳನ್ನೂ ಪ್ಯಾಕ್‌ ಮಾಡಿಯೇ ಮಾರಬೇಕಾಗಿದೆ. ಪ್ಯಾಕೆಟ್‌ನ ಮೇಲೆ ಅದರ ತಯಾರಿಗೆ ಬಳಸಿದ ಪದಾರ್ಥಗಳು, ರಾಸಾಯನಿಕಗಳ ವಿವರ ಮತ್ತು ಕೆಡದೇ ಉಳಿಯುವ ಅವಧಿಗಳನ್ನು ನಮೂದಿಸುವುದು ಕಡ್ಡಾಯವಾಗಲಿದೆ.

ರೈತರ ಮತ್ತು ಗ್ರಾಹಕರ ಹಿತರಕ್ಷಣೆಯ ಹೆಸರಿನಲ್ಲಿ ಜಾರಿಗೆ ಬರುತ್ತಿರುವ ಈ ಮಾನದಂಡಗಳು ಬಡಪಾಯಿ ಸಣ್ಣವ್ಯಾಪಾರಿಗಳಿಗೆ ಪ್ರಾಣದಂಡನೆಗಳಾಗಿವೆ. ಏಕೆಂದರೆ ದೇಶದ ತೊಂಭತ್ತಕ್ಕೂ ಹೆಚ್ಚು ಸಣ್ಣವ್ಯಾಪಾರಿಗಳಿಗೆ ಪ್ಯಾಕಿಂಗ್‌ ತಂತ್ರಜ್ಞಾನವಾಗಲಿ, ಅದಕ್ಕೆ ಬೇಕಾದ ಆರ್ಥಿಕ ಬೆಂಬಲವಾಗಲಿ ಇಲ್ಲ. ಪ್ರತಿದಿನದ ಸರಕಿನ ಬಂಡವಾಳಕ್ಕೂ ಒದ್ದಾಡುವವರು ಇನ್ನೂ ಹೆಚ್ಚಿನ ವೆಚ್ಚಕ್ಕೆ ಖಂಡಿತ ತಯಾರಿರುವುದಿಲ್ಲ. ಜೊತೆಗೆ ನಿಗದಿಪಡಿಸಿರುವ ಲಕ್ಷಗಟ್ಟಲೇ ದಂಡವನ್ನೂ ತೆರಲು ಸಾಧ್ಯವಿಲ್ಲ.

ಸಿಕ್ಕಿದ್ದನ್ನೆಲ್ಲಾ ಆಕರ್ಷಕವಾಗಿ ಪ್ಯಾಕ್‌ ಮಾಡಿ ದುಬಾರಿ ಬೆಲೆಗೆ ಮಾರುವ ವಾಲ್‌ ಮಾರ್ಟ್‌, ಬಿಗ್‌ ಬಜಾರ್‌, ಫುಡ್‌ ವರ್ಡ್‌ ನಂತಹ ಭಾರೀ ಮತ್ತು ಬಹುರಾಷ್ಟ್ರೀಯ ಆಹಾರ ಮಳಿಗೆಗಳಿಗೆ ಮಾತ್ರ ಇದರಿಂದ ಅನುಕೂಲ. ಮಿಕ್ಕವರೆಲ್ಲ ತಮ್ಮ ನೆಮ್ಮದಿಯ, ಸ್ವಾಭಿಮಾನದ ಜೀವನ ಪಕ್ಕಕ್ಕಿಟ್ಟು ಇಂತಹ ಸರಣಿ ಅಂಗಡಿಗಳಲ್ಲಿ ಜೀತಕ್ಕಿರಬೇಕಾಗುತ್ತದೆ. ಒಡೆಯರಾಗಿದ್ದವರು ಗುಲಾಮರಾಗಬೇಕಾಗುತ್ತದೆ.

ಇಂತಹ ಪ್ರಕ್ರಿಯೆ ಇದೇ ಮೊದಲಲ್ಲ, ದಶಕದ ಹಿಂದೆ ದೇಶದ ಯಾವುದೋ ಕೆಲವು ಸೀಮಿತ ಪ್ರದೇಶಗಳಲ್ಲಿ ಅಗತ್ಯವಿದ್ದ ಅಯೋಡೈಸೆಡ್‌ ಉಪ್ಪಿನ ನೆಪವೊಡ್ಡಿ ಸರ್ಕಾರ ಮಾಮೂಲಿ ಉಪ್ಪಿನ ತಯಾರಿಕೆಯನ್ನೇ ಸ್ಥಗಿತಗೊಳಿಸಿತು. ದೇಶದ ಸಮುದ್ರತಡಿಯ ಉದ್ದಗಲಕ್ಕೂ ಹರಡಿಕೊಂಡಿದ್ದ ಸಾವಿರಾರು ದೇಶೀಯ ಉಪ್ಪು ತಯಾರಿಕಾ ಘಟಕಗಳು ನಿಂತುಹೋದವು.

Indian Flagಪರಂಪರೆಯಿಂದ ಇದೇ ಉದ್ಯಮದಲ್ಲಿ ನೆಮ್ಮದಿ ಕಂಡುಕೊಂಡಿದ್ದವರು ಗುಳೆ ಎದ್ದು ಕೂಲಿನಾಲಿ ಮಾಡತೊಡಗಿದರು. ಅಯೋಡೈಸೆಡ್‌ ಉಪ್ಪು ತಯಾರಿಸುವ ಬಹುರಾಷ್ಟ್ರೀಯ ಕಂಪೆನಿಗಳ ವಿರುದ್ದ ಕಾನೂನು ಸಮರ ಹೂಡುವ ಚೈತನ್ಯವಾಗಲಿ, ಸಾಮರ್ಥ್ಯವಾಗಲೀ ಈ ಅಸಂಘಟಿತರಲ್ಲಿರಲಿಲ್ಲ. ವರ್ಷವೆರಡರ ನಂತರ ನ್ಯಾಯಾಲಯ ಸ್ವದೇಶೀ ಉದ್ಯಮದ ಪರವಾಗಿ ತೀರ್ಪನ್ನಿತ್ತರೂ ಸಹ ಉಪ್ಪು ತಯಾರಿಸುವವರು ಅದಾಗಲೇ ತಮ್ಮ ಹೊಟ್ಟೆಪಾಡಿಗಾಗಿ ಬೇರೆ ಬೇರೆ ಉದ್ಯಮಗಳನ್ನಾಶ್ರಯಿದ್ದರು. ಯಾವ ಉಪ್ಪಿಗಾಗಿ ಸ್ವಾಭಿಮಾನಿ ದಂಡಿ ಸತ್ಯಾಗ್ರಹದ ಅಂಕುರವಾಯಿತೋ ಅದೇ ಉಪ್ಪಿನ ತಯಾರಿಕೆಯನ್ನು ಸಂಪೂರ್ಣವಾಗಿ ವಿದೇಶೀಯರ ಮಡಿಲಿಗೆ ಸರ್ಕಾರವೇ ತಳ್ಳಿತು.

ಹಿಂದೇ ಇದ್ದಂತಹ ಒಂದು ಈಸ್ಟ್‌ ಇಂಡಿಯಾ ಕಂಪೆನಿ ತನ್ನ ವಸ್ತುಗಳನ್ನು ಇಲ್ಲಿ ಮಾರಲು, ಅಧಿಕಾರದ, ಕಾನೂನಿನ ಮತ್ತು ದೌರ್ಜನ್ಯದ ಬಲದಿಂದ ಸ್ವದೇಶಿ ಗುಡಿ ಕೈಗಾರಿಕೆಗಳನ್ನೇ ನೆಲಸಮ ಮಾಡಿತು. ಆಗಿದ್ದದ್ದು ಅವರದೇ ಸರ್ಕಾರ. ಆದರೇ ಈಗಿರುವುದು ನಮ್ಮದೇ ಸರ್ಕಾರ, ಆದರೂ ಒಂದರ ಸ್ಥಳದಲ್ಲಿ ಸಾವಿರಾರು ಈಸ್ಟ್‌ ಇಂಡಿಯಾ ಕಂಪೆನಿಗಳು ತಳವೂರಿವೆ. ಮಾತ್ರವಲ್ಲ ತಮಗೆ ಬೇಕಾದಂತೆ ಇಲ್ಲಿನ ಕಾನೂನುಗಳನ್ನು, ವ್ಯವಸ್ಥೆಗಳನ್ನೂ ಬದಲಿಸುತ್ತಿವೆ. ವರ್ಷಂಪ್ರತಿ ಸಹಸ್ರಾರು ಸ್ವದೇಶಿ ಉದ್ಯಮಿಗಳು ಮನೆ ಸೇರುತ್ತಿದ್ದಾರೆ.

ಪ್ರಕೃತಿಗೆ ಪೂರಕವಾದ ಸಂಪ್ರದಾಯಗತ ಜೈವಿಕ ಸ್ವದೇಶಿ ಕೃಷಿಪದ್ದತಿಗಳ ಬದಲಿಗೆ ಟ್ರಾಕ್ಟರ್‌ಗಳ, ಕೊಳವೆ ಬಾವಿಗಳ ಮತ್ತು ರಾಸಾಯನಿಕ ಗೊಬ್ಬರಗಳ ಆಧಾರಿತವಾದ ಕೃಷಿ ಪದ್ದತಿಯನ್ನು ಆಳವಡಿಸಿಕೊಳ್ಳಲಾಗಿದೆ. ಬಹುರಾಷ್ಟ್ರೀಯ ಕಂಪೆನಿಗಳ ವಿಷಕಾರಿ ಗೊಬ್ಬರ, ಕೀಟನಾಶಕಗಳು ಫಲವತ್ತಾದ ಭೂಮಿಯನ್ನೇ ಬಂಜರು ಮಾಡಿವೆ. ವಿನಾಶ ಕ್ರಿಯೆಯಲ್ಲಿ ಇನ್ನೂ ಒಂದೆಜ್ಜೆ ಮುಂದಿಟ್ಟಿರುವ ಮೊನ್ಸಾಂಟೊದಂತಹ ಕಂಪನಿಗಳು ಕುಲಾಂತರಿ ಬೀಜೋತ್ಪಾದನೆಯ ಮೂಲಕ ರೈತರನ್ನೂ ಮತ್ತು ಇಡೀ ದೇಶವನ್ನೇ ಒತ್ತೆಯಾಳಾಗಿರಿಸಿಕೊಳ್ಳುವತ್ತ ಸಾಗಿದೆ. ದೇಶಕ್ಕೆ ಮಾರಕವಾದ ಡಂಕಲ್‌, ಗ್ಯಾಟ್‌ ಒಪ್ಪಂದಗಳನ್ನು ಯಾವುದೇ ಸಂಕೋಚವಿಲ್ಲದೇ ಆಡಳಿತಗಾರರು ಒಪ್ಪಿಕೊಳ್ಳುತ್ತಿದ್ದಾರೆ.

ನಾವೀಗ ಆಗಸ್ಟ್‌ ಹದಿನೈದರ ಸನಿಹದಲ್ಲಿದ್ದೇವೆ. ಎಲ್ಲೆಲ್ಲೂ ಮತ್ತೊಮ್ಮೆ ಸ್ವರಾಜ್ಯದ, ಸ್ವಾತಂತ್ರ್ಯದ ಘೋಷಣೆಗಳು ಮೊಳಗಲಿವೆ. ತ್ಯಾಗ ಮತ್ತು ಹೋರಾಟದ ಭಾಷಣಗಳೂ, ಬಲಿದಾನದ ಘೋಷಣೆಗಳು ಪುಂಖಾನುಪುಂಖವಾಗಿ ಹರಿದು ಬರಲಿದೆ. ಸ್ವಾತಂತ್ರ್ಯಎಂದರೆ ನಮ್ಮ ಪರಂಪರೆ ಹಾಗೂ ಜೀವನ ಪ್ರವೃತ್ತಿಯ ತಂತ್ರದಿಂದ ಚಲಾಯಿಸುವ ರಾಜ್ಯ. ಮೇಲಿನ ಉದಾಹರಣೆಗಳನ್ನು ಗಮನಿಸಿದರೆ ನಾವಿನ್ನೂ ಸ್ವಾತಂತ್ರ್ಯ ಗಳಿಸಿಲ್ಲವೇನೋ ಎಂಬ ಭಾವನೆಗಳು ದೃಢವಾಗುತ್ತಿವೆ. ಸ್ವರಾಜ್ಯವೇನೋ ಪ್ರಾಪ್ತವಾಗಿದೆ. ಆದರೆ ಸ್ವಾತಂತ್ರ್ಯವಿನ್ನೂ ಬರಬೇಕಾಗಿದೆ. ಇಂದಿನ ನಮ್ಮ ರಾಜ್ಯವು ಎಲ್ಲಾ ದೃಷ್ಟಿಯಿಂದಲೂ ಪರಕೀಯರ ತಂತ್ರದಿಂದ ನಡೆಸಲ್ಪಡುತ್ತಿದೆ.

ನಿಜಕ್ಕೂ ಸಂಸ್ಕಾರಯುತ ಸ್ವಾಭಿಮಾನಿ ನಾಯಕರ ಕೊರತೆಯೇ ಈ ದಾರಿದ್ರ್ಯಕ್ಕೆ ಕಾರಣ. ಇದಕ್ಕಾಗಿಯೇ ನೈಜ ರಾಷ್ಟ್ರೀಯ ದೃಷ್ಟಿಕೋನದಿಂದ ಯೋಚಿಸಿದ ಮಹನೀಯರೆಲ್ಲಾ ಸಂಸ್ಕಾರಯುತ ಯುವಜನಾಂಗದ ನಿರ್ಮಾಣಕ್ಕೆ ಒತ್ತು ನೀಡಿದ್ದರು. ಸ್ವಾಮಿ ವಿವೇಕಾನಂದರು ತಮ್ಮನ್ನು ಪ್ರಶ್ನಿಸಿದ ಕೆಲವು ನಾಯಕರಿಗೆ ‘‘ನಾನು ಬೇಕೆಂದರೆ ಇನ್ನೊಂದು ವರ್ಷದೊಳಗೆ ನಿಮಗೆ ಸ್ವಾತಂತ್ರ್ಯವನ್ನು ಗಳಿಸಿಕೊಡಬಲ್ಲೆ ಆದರೆ ಅದನ್ನು ಉಳಿಸಿಕೊಳ್ಳುವ ಸಾಮರ್ಥ್ಯಶಾಲಿಗಳು ನಿಮ್ಮಲ್ಲಿದ್ದಾರೆಯೇ?’’ ಎಂದು ಪ್ರಶ್ನಿಸಿದ್ದರು. ಡಾಕ್ಟರ್‌ ಹೆಡಗೆವಾರ್‌ರಂತಹ ಜನ್ಮಜಾತ ದೇಶಭಕ್ತರು ಬ್ರಿಟೀಷರ ವಿರುದ್ಧ ಹೋರಾಟಕ್ಕಿಂತ ಮುಖ್ಯವಾಗಿ ಇಂತಹ ಸಂಸ್ಕಾರಯುತ ತರುಣ ಪಡೆಯ ನಿರ್ಮಾಣಕ್ಕೆ ಮುಂದಾದರು.

ಯಾವುದೇ ದೇಶದ ನಿಜವಾದ ಸಂಪತ್ತು ಅಲ್ಲಿನ ಶಕ್ತಿಶಾಲಿ, ರಾಷ್ಟ್ರಭಕ್ತ ಯುವಜನಾಂಗ. ಆದರೇ ನಮ್ಮ ಇಂದಿನ ಶಾಲೆ, ಕಾಲೇಜುಗಳಿಂದ ರಾಷ್ಟ್ರದ ಬಗ್ಗೆ ನೈಜ ಕಾಳಜಿಗೆ ಬದಲಾಗಿ ನಮ್ಮತನದ ಬಗ್ಗೆ ತಿರಸ್ಕಾರವೇ ತುಂಬಿರುವವರು ಹೊರಬರುತ್ತಿರುವಂತಿದೆ. ಇಲ್ಲಿನ ಭಾಷೆ, ಇಲ್ಲಿನ ವೇಷ, ಸಂಸ್ಕೃತಿ ಸಂಪ್ರದಾಯಗಳನ್ನು ಹೀಗಳೆಯುವ ಪಾಶ್ಚಿಮಾತ್ಯರನ್ನು ಜೋಕರ್‌ಗಳಂತೆ ಅನುಕರಿಸುವವರು ಸುಶಿಕ್ಷಿತರೆನಿಸಿಕೊಳ್ಳುತ್ತಿದ್ದಾರೆ. ಅವರೇ ಮುಂದಿನ ರಾಷ್ಟ್ರನಾಯಕರೂ ಆಗುವವರಿದ್ದಾರೆ. ಈ ಅರ್ಥದಲ್ಲಿ ಮೆಕಾಲೆ ನಿಜಕ್ಕೂ ಯಶಸ್ವಿಯಾಗಿದ್ದಾನೆ. ತನ್ನ ಶಿಕ್ಷಣದ ಮೂಲಕ ಕರಿ ಚರ್ಮದ ಆಂಗ್ಲರನ್ನು ಸೃಷ್ಟಿಸುವುದೇ ಆತನ ಧ್ಯೇಯವಾಗಿತ್ತು. ನಾವೀಗ ಅನುಸರಿಸುತ್ತಿರುವುದು ಇಂದಿಗೂ ಆತನೇ ಹಾಕಿಕೊಟ್ಟ ಶಿಕ್ಷಣ ಪದ್ದತಿಯನ್ನೇ.

ಸರ್ಕಾರಗಳು ಅನುಸರಿಸುತ್ತಿರುವ ಭೋಗವಾದಿ, ಅರೆ ಸಮಾಜವಾದಿ ನೀತಿಗಳಿಂದ ದೇಶ ಗೊಂದಲಗಳ ಗೂಡಾಗಿದೆ. ಅಪರಾಧಗಳು ಎಲ್ಲಾ ಸ್ತರಗಳಲ್ಲೂ ಸಾಮಾನ್ಯವೆನಿಸಿದೆ. ಭಾರತೀಯತೆಯ ಸಂಕೇತವಾದ ಅವಿಭಕ್ತ ಕುಟುಂಬ ಪದ್ದತಿಗಳು ನಾಶಗೊಂಡು, ದಿಕ್ಕಿಲ್ಲದವರ ಹಾಗೂ ಅನಾಥರ ಸಂಖ್ಯೆ ಹೆಚ್ಚಾಗುತ್ತಿದೆ. ಸಾರ್ವಜನಿಕ ಜೀವನದಲ್ಲಿ ನೈತಿಕತೆಯ ಪತನವಾಗಿ ಭ್ರಷ್ಠಾಚಾರದ ಎಲ್ಲೇ ವಿಸ್ತರಿಸುತ್ತಿದೆ. ಸಿಕ್ಕಿಹಾಕಿಕೊಂಡವ ಮಾತ್ರ ಕಳ್ಳ ಅದೂ ಸಹ ಸಾರ್ವಜನಿಕರು ಮರೆಯುವವರೆಗೆ ಮಾತ್ರ ಎಂಬಂತಾಗಿದೆ.

ಇಂದಿಗೂ ಅನುಸರಿಸುತ್ತಿರುವ ಬ್ರಿಟೀಷ ನ್ಯಾಯಾಲಯ ವ್ಯವಸ್ಥೆಯಿಂದಾಗಿ ಲಕ್ಷಗಟ್ಟಲೇ ಕೇಸುಗಳು ಬಾಕಿ ಬಿದ್ದಿವೆ. ಹಿಂದಿದ್ದ ಗೌರವಯುತ ಪಂಚಾಯಿತಿ ನ್ಯಾಯವ್ಯವಸ್ಥೆಯನ್ನು ಪುನಃ ಸ್ಥಾಪಿಸುವ ಬದಲಾಗಿ ರಾಜಕೀಯವನ್ನು ಮಾತ್ರ ಅರಳೀಕಟ್ಟೆಗೆ ತಂದು ಹಳ್ಳಿಗಳ ನೆಮ್ಮದಿಯನ್ನೂ ಕದಡಲಾಗಿದೆ. ಹಿಂದಿದ್ದ ಸ್ವತಂತ್ರ ಸ್ವಾವಲಂಬಿ ಹಳ್ಳಿಗಳಿಗೆ ಬದಲಾಗಿ ಪ್ರತಿಯೊಂದಕ್ಕೆ ರಾಜಧಾನಿಗೆ ದೌಡಾಯಿಸಬೇಕಾದ ಹಳ್ಳಿಗಳನ್ನು ನಿರ್ಮಿಸಲಾಗಿದೆ. ಪ್ರತಿಹಳ್ಳಿಯೂ ರೈತರ ಆತ್ಮಹತ್ಯೆಯ, ಕೊಲೆ ಸುಲಿಗೆಗಳ ತಾಣಗಳಾಗುತ್ತಿವೆ.

ಹಿಂದೂ ದೇವದೇವಿಯರ ಚಿತ್ರಗಳನ್ನು ನಗ್ನವಾಗಿ ಚಿತ್ರಿಸಿದವರಿಗೆ ಸನ್ಮಾನ ಮಾಡಲಾಗುತ್ತದೆ, ಆದರೆ ಭಯೋತ್ಪಾದಕರನ್ನು ಹಿಡಿದು ಚಚ್ಚಿ ಎನ್ನುವವರನ್ನು ಕಾನೂನು ಕ್ರಮಕ್ಕೊಳಪಡಿಸಲಾಗುತ್ತದೆ. ಲೆಬನಾನ್‌ ಮೇಲೆ ಇಸ್ರೇಲ್‌ ಧಾಳಿ ಮಾಡಿದರೆ ಬೆಂಗಳೂರಿನ ಬೀದಿಗಳಲ್ಲಿ ಸುಶಿಕ್ಷಿತರು ಪ್ರತಿಭಟನೆ ಮಾಡುತ್ತಾರೆ. ದಿನಂಪ್ರತಿ ಕಾಶ್ಮೀರದಲ್ಲಿ ಹಿಂದೂ ಹೆಣಗಳು ಬೀಳುತ್ತಿದ್ದರೂ ಚಕಾರವೆತ್ತುವುದಿಲ್ಲ, ಮುಂಬೈ ಬಾಂಬ್‌ ಸ್ಫೋಟದ ಸದ್ದು ಇವರ ಕಿವುಡು ಕಿವಿಗೆ ಕೇಳುವುದಿಲ್ಲ ಆದರೆ ‘ಡಾವಿಂಚಿ ಕೋಡ್‌’ನ ಸಂಭಾಷಣೆಗಳು ಇವರ ನಿದ್ದೆ ಕೆಡಿಸುತ್ತದೆ.

‘‘ಈ ದೇಶವನ್ನು ಬ್ರಿಟೀಷರಿಂದ ಮುಕ್ತಗೊಳಿಸಿದರೆ ಸಾಕು ಮಿಕ್ಕೆಲ್ಲಾ ತನ್ನಿಂದ ತಾನೇ ಸರಿಹೋಗುತ್ತದೆ’’ ಎನ್ನುತ್ತಿದ್ದವರ ವಾದ ಹುಸಿಯಾಗಿದೆ. ಬದಲಾಗಿ, ‘‘ಜೀವನದ ಎಲ್ಲಾ ರಂಗಗಳಲ್ಲೂ ಸಂಪೂರ್ಣ ಭಾರತೀಯತೆಗೆ ಒತ್ತು ನೀಡಬೇಕು. ಇಲ್ಲದಿದ್ದರೆ ಸ್ವತಂತ್ರ ಬಂದರೂ ಉಪಯೋಗವಿಲ್ಲ, ಏಕೆಂದರೆ ಈ ರೀತಿಯ ಸ್ವಾತಂತ್ರ್ಯ ಕೇವಲ ಅಧಿಕಾರದ ಹಸ್ತಾಂತರ ಮಾತ್ರ ಆದೀತು. ಬಿಳಿ ಆಂಗ್ಲರಿಗೆ ಬದಲಾಗಿ ಕರಿ ಆಂಗ್ಲರು ಆಡಳಿತ ನಡೆಸಿಯಾರು’’ ಎನ್ನುತ್ತಿದ್ದ ಚಿಂತಕರ ಮಾತೇ ನಿಜವಾಗಿದೆ. ಒಂದು ಕಾಲದಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದ ಶ್ರೇಷ್ಠ ಸಂಸ್ಕೃತಿಯ ಈ ದೇಶವನ್ನು ಆ ಎಲ್ಲಾ ಪುರಾತನ ಮೌಲ್ಯಗಳ ಬೆಳಕಲ್ಲಿ ಮುನ್ನಡೆಸುವ ಪಣತೊಡದಿದ್ದರೆ ಈ ನಾಡು ಗೊಂದಲಗಳ ಗೂಡಾಗಿ ಯಾರಿಗೆ ಬಂತು? ಎಲ್ಲಿಗೆ ಬಂತು 47ರ ಸ್ವಾತಂತ್ರ? ಎಂಬುದು ಉತ್ತರಿಸಲಾಗದ ಪ್ರಶ್ನೆಯಾಗಿಯೇ ಮುಂದುವರಿದೀತು.


ಪೂರಕ ಓದಿಗೆ-
ತಿರಂಗ ಹಬ್ಬ ಅಂದ್ರೆ ಮಕ್ಕಳಿಗಷ್ಟೇ ಆಚರಣೆ, ಉಳಿದವರಿಗೆ ರಜೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X