ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್‌ 14ನ್ನು ಹಿಂದಿ ವಿರೋಧಿ ದಿನವನ್ನಾಗಿ ಆಚರಿಸೋಣವೇ?

By Staff
|
Google Oneindia Kannada News

;?
ಕನ್ನಡದ ಇಂದಿನ ಸ್ಥಿತಿಗೆ ಕನ್ನಡಿಗರ ನಿರಭಿಮಾನದ ಜತೆಗೆ, ತ್ರಿಭಾಷಾ ಸೂತ್ರ ಹಾಗೂ ಕೇಂದ್ರ ಸರ್ಕಾರದ ಅವ್ಯಾಹತ ಹಿಂದಿ ಹೇರಿಕೆ ಮುಖ್ಯ ಕಾರಣ. ನಾವು ಮುಂದಾಲೋಚನೆಯಿಂದ ಮೊದಲೇ ತ್ರಿಭಾಷಾ ಸೂತ್ರ ವಿರೋಧಿಸಿದ್ದರೆ, ತಮಿಳು ಸೋದರರಂತೆ ನಮ್ಮತನ ಉಳಿಸಿಕೊಳ್ಳಬಹುದಿತ್ತು.

ಕನ್ನಡದ ಸಮಸ್ಯೆಗಳು ಹೇಗೆ ಒಂದೊಂದಾಗಿ ಜನ್ಮ ತಳೆಯುತ್ತವೆ ನೋಡಿ. ಕೆಲ ದಿನಗಳ ಹಿಂದೆ ಗಣ್ಯ ವ್ಯಕ್ತಿಯಾಬ್ಬರು ಬೆಂಗಳೂರು ಮಹಾನಗರ ಸಾರಿಗೆ ವಾಹನಗಳ ಮಾರ್ಗ ಸೂಚಿಫಲಕಗಳು ಕನ್ನಡದಲ್ಲಿ ಮಾತ್ರ ಇರುವುದು ದೂರದೃಷ್ಟಿ ಇಲ್ಲದ ಸರಕಾರದ ಸಂಕುಚಿತ ಮನೋಭಾವವೆಂದು ಆಕ್ಷೇಪಿಸಿದ್ದಾರೆ. ಇಲ್ಲಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕೆಲ ವಿದ್ಯಾರ್ಥಿಗಳು ಮತ್ತು ಕೆಲಸವನ್ನರಸಿ ಬಂದಿರುವ ವಲಸಿಗರು ಅದನ್ನು ಅನುಮೋದಿಸಿದ್ದಾರೆ. ಆಡಳಿತ ಭಾಷೆಯಾದ ಕನ್ನಡವನ್ನು ಅನುಷ್ಠಾನಕ್ಕೆ ತರುವುದು ಮತ್ತು ಇಲ್ಲಿ ನೆಲಸಲು ಬರುವ ಎಲ್ಲರೂ ಅದನ್ನು ಅರಿತು, ಕಲಿತು, ಉಪಯೋಗಿಸಿ ಪ್ರಾಂತೀಯ ಸಂಸ್ಕೃತಿಯನ್ನು ಬೆಂಬಲಿಸಿ ಇಲ್ಲಿನ ಜನರೊಂದಿಗೆ ಒಗ್ಗೂಡಿಸುವ ಸರ್ಕಾರದ ಈ ಪ್ರಯತ್ನ ದೇಶಾಭಿಮಾನದ ಸಂಕೇತವೇ ಹೊರತು ಖಂಡಿತ ಪ್ರಾಂತೀಯ ಸೀಮಿತ ದೃಷ್ಟಿಯದಲ್ಲ.

ಇತ್ತೀಚೆಗೆ ಈ ರೀತಿಯ ಸಣ್ಣವಿಚಾರಗಳನ್ನು ಆಗಾಗ್ಗೆ ಮೆಲುಕು ಹಾಕುತ್ತ ಇಲ್ಲಿ ದುಡಿಮೆಗಾಗಿ ಬಂದಿರುವ ವಲಸಿಗರು ಮತ್ತು ಅವರ ಪರ ವಕಾಲತ್ತು ನಡೆಸುವ ನಮ್ಮ ಗಣ್ಯ ಬುದ್ಧಿ ಜೀವಿಗಳು ಮಾಡುತ್ತಿರುವ ಉದ್ಘೋಷಣೆ-ಬೆಂಗಳೂರು ಕಾಸ್ಮೋಪಾಲಿಟಿನ್‌ ನಗರ, ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಿಬಿಡಿ.

ಭಾಷೆಗಳ ಆಧಾರದ ಮೇಲೆ ಪ್ರಾಂತ್ಯಗಳು ಏಕೀಕರಣಗೊಂಡು ರಾಜ್ಯಗಳು ಉದಯವಾದಾಗ, ಹಿಂದಿಯನ್ನು ಕೇಂದ್ರ ಸರ್ಕಾರ ಆಡಳಿತ ಭಾಷೆಯಾಗಿ ಮತ್ತು ಹಿಂದಿಯೇತರ ರಾಜ್ಯಗಳ ಸಂಪರ್ಕಕ್ಕಾಗಿ ಇಂಗ್ಲಿಷನ್ನೂ ಸಹ ಆಡಳಿತ ಭಾಷೆಯಾಗಿ ಘೋಷಿಸಿದವು. ಹಿಂದಿಯೇತರ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಭಾಷೆ ಆಡಳಿತ ಭಾಷೆಯಾಯಿತು. ನಂತರದಲ್ಲಿ ಎಲ್ಲಾ ರಾಜ್ಯಗಳು ತ್ರಿಭಾಷಾ ಸೂತ್ರವನ್ನು ಎಲ್ಲಾ ವಿಧಾನಗಳಲ್ಲಿ ಅನುಸರಿಸುವ ಅನುಮೋದನೆಯಾಯಿತು. ಕಾಲಾಂತರದಲ್ಲಿ ಹಿಂದಿಯನ್ನು ದೇಶದೆಲ್ಲೆಡೆ ಸರ್ವವ್ಯಾಪಿಯಾಗಿ ಆಡಳಿತ ಭಾಷೆಯಾಗಿ ಮಾರ್ಪಾಡು ಮಾಡುವ ಗುರಿ ಅದಾಗಿತ್ತು. ದುರದೃಷ್ಟವೆಂದರೆ ಅದು ಎಲ್ಲೆಡೆ ಹಿಂದಿ ಸಾಮ್ರಾಜ್ಯವನ್ನು ಹುಟ್ಟುಹಾಕುತ್ತ ಪ್ರಾಂತೀಯ ಭಾಷೆಗಳ ಅವನತಿಗೆ ನಾಂದಿಯಾಗಿರುವುದು ಇತಿಹಾಸ.

ತ್ರಿಭಾಷೆ ಎಂಬ ತ್ರಿಶೂಲ :

ನಮ್ಮ ಕನ್ನಡದ ಇಂದಿನ ಸ್ಥಿತಿಗೆ ಕನ್ನಡಿಗರ ನಿರಭಿಮಾನದ ಜತೆಗೆ ಈ ತ್ರಿಭಾಷಾ ಸೂತ್ರ ಮತ್ತು ಕೇಂದ್ರ ಸರ್ಕಾರದ ಅವ್ಯಾಹತವಾದ ಹಿಂದಿ ಹೇರಿಕೆಯು ಬಹು ಮುಖ್ಯ ಕಾರಣವಾಗಿದೆ. ಮುಂದಾಲೋಚನೆಯಿಂದ ಅಂದೇ ಅದನ್ನು ವಿರೋಧಿಸಿ ತಮ್ಮ ತನದ ಅಸ್ತಿತ್ವವನ್ನು ಬೆಳೆಸಿಕೊಂಡಿರುವ ಸಹೋದರ ತಮಿಳರ ಉದಾಹರಣೆಯನ್ನು ನಾವು ಗಮನಿಸಬೇಕಿದೆ.

ಹಿಂದಿ ರಾಜ್ಯಗಳಲ್ಲಿ ಈ ತ್ರಿಭಾಷಾ ಸೂತ್ರ ಜಾರಿಯಲ್ಲಿದೆಯೇ ಎಂಬ ಪ್ರಶ್ನೆ ನಾವೀಗ ಮುಂದಿಡಬೇಕಿದೆ. ಜಾಗತೀಕರಣದ ಜ್ವಾಲಾಮುಖಿಯಲ್ಲಿ ಇಂದು ಇಡೀ ವಿಶ್ವದ ಸಂಬಂಧ ನಮಗೆ ಮತ್ತು ಇತರ ದೇಶ ಬಾಂಧವರಿಗೆ ನಿಕಟವಾಗಿದೆ. ದ್ವಿಭಾಷಾ ಸೂತ್ರದಡಿ ಆಯಾ ದೇಶದ ಆಡು ಭಾಷೆ, ಮತ್ತು ಜಾಗತೀಕರಣದ ಅರಿವಿಗೆ ಬೇಕಾಗಿರುವ ಇಂಗ್ಲಿಷನ್ನು ಅನುಸರಿಸುತ್ತಿರುವ ದೇಶಗಳು ತಮ್ಮ ಭಾಷೆ, ಸಂಸ್ಕೃತಿಯನ್ನು ಉಳಿಸಿ-ಬೆಳೆಸುವಲ್ಲಿ ಯಶಸ್ವಿಯಾಗಿವೆ. ನಮ್ಮ ಪಕ್ಕದ ಬಾಂಗ್ಲಾದೇಶ ಮತ್ತು ಯೂರೋಪ್‌ ಇದಕ್ಕೆ ಉತ್ತಮ ಉದಾಹರಣೆ.

ಹಿಂದಿಗಿಂತಲೂ ಇಂಗ್ಲಿಷ್‌ ಪ್ರಸ್ತುತ :

ಜಾಗತೀಕರಣ ಸ್ಫೋಟದ ಹಿನ್ನಲೆಯಲ್ಲಿ ಮತ್ತು ನಮ್ಮ ಪ್ರಾಂತೀಯ ಭಾಷೆಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ದೇಶದೆಲ್ಲೆಡೆ ಹಿಂದಿಗಿಂತ ನಮಗೆ ಇಂದು ಇಂಗ್ಲಿಷ್‌ ಪ್ರಸ್ತುತವಾಗುತ್ತಿರುವುದು ನಿಜ. ಇನ್ನು ಮುಂದೆ ಹಿಂದಿ ಯಾವ ರಾಜ್ಯಗಳಲ್ಲಿ ಬಳಕೆಯಲ್ಲಿದೆಯೋ ಅಲ್ಲಿ ಮಾತ್ರ ಅದು ಆಡಳಿತ ಭಾಷೆಯಾಗುವುದು ಸಮಂಜಸ. ಆಗ ನಮಗೆ ಕನ್ನಡ ಮತ್ತು ಇಂಗ್ಲಿಷ್‌ ಮಾತ್ರ ಉಳಿಯುವಂತೆ ಮಿಕ್ಕೆಲ್ಲರಿಗೂ ಅವರ ರಾಜ್ಯಗಳ ಭಾಷೆ ಮತ್ತು ಇಂಗ್ಲಿಷ್‌ ಉಳಿದುಕೊಳ್ಳುತ್ತದೆ.

ಕೆಲಸ ಅರಸಿ ಯಾರ್ಯಾರು ಎಲ್ಲೆಲ್ಲಿಗೆ ವಲಸೆ ಹೋಗುತ್ತಾರೋ ಆ ರಾಜ್ಯಗಳ/ದೇಶದ ಭಾಷೆಯನ್ನು ಅನಿವಾರ್ಯವಾಗಿ ಅವರು ಕಲಿಯಬೇಕಾಗುತ್ತದೆ. ಆಗ ಕಾಸ್ಮೋಪಾಲಿಟನ್‌-ಕೇಂದ್ರಾಡಳಿತ ಎಂಬ ಪದಗಳು ಯಾರನ್ನೂ ಆಹ್ವಾನಿಸುವುದಕ್ಕೆ ಅನುಮತಿಸುವುದಿಲ್ಲ. ಇಲ್ಲದಿದ್ದಲ್ಲಿ ಮುಂದೊಂದು ದಿನ ಈ ಅಖಂಡವಾದ ದೇಶ ಭಾಷೆಯ ಹೆಸರಿನಲ್ಲಿ ಖಂಡ ಖಂಡವಾಗಿ ಹರಿದು ಹೋಗುವುದರಲ್ಲಿ ಸಂಶಯವೇ ಇಲ್ಲ.

ಕನ್ನಡ/ಬೆಂಗಳೂರು ಬಗೆಗಿನ ಈ ಮಲತಾಯಿ ಧೋರಣೆಯನ್ನು ರಾಷ್ಟ್ರೀಯ ಪಕ್ಷಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡಿರುವ ನಮ್ಮ ರಾಜಕಾರಣಿಗಳು ಕೇಂದ್ರದ ಉನ್ನತಾಧಿಕಾರಿ/ವರಿಷ್ಠಾಧಿಕಾರಿ ಸಮಿತಿಯನ್ನು ಓಲೈಸಿಕೊಳ್ಳಲು ಹಿಂದಿಯ ಜತೆಗೂಡಿರುವುದನ್ನು ನಾವು ಕಾಣಬಹುದಾಗಿದೆ. ಹಿಂದಿ ಭಾಷೆಯ ಏಳಿಗೆಗಾಗಿ ಕೋಟ್ಯಂತರ ರೂಪಾಯಿ ಸುರಿಯುವ ಕೇಂದ್ರ ಸರ್ಕಾರ ಮತ್ತು ಅದನ್ನು ಇಲ್ಲಿ ಆಲಂಗಿಸಲು ದೊರೆಯುವ ಸಕಲ ಸವಲತ್ತು-ಸೌಲಭ್ಯಗಳಿಂದ ಒಕ್ಕೂಟದ ಇತರ ಭಾಷೆಗಳು ವಂಚಿತವಾಗಿರುವುದು ನಿಚ್ಚಳವಾಗಿ ಜನಜನಿತ.

ವ್ಯವಸ್ಥೆಗೆ ಮಾರಕವಾಗಿರುವ ಈ ನಿಲುವು ಹಿಂದಿ ಪರವಾದ ಕೇಂದ್ರದ ಸಂಕುಚಿತತೆಯನ್ನು ಬಿಂಬಿಸುವುದಿಲ್ಲವೇ? ಇತ್ತೀಚಿನ ದಿನಗಳಲ್ಲಿ ಸಮೂಹ ಮಾಧ್ಯಮಗಳ ಪಾತ್ರವೂ ಇದರಲ್ಲಿ ಹಿರಿದಾಗಿದೆ, ಎಫ್‌. ಎಮ್‌. ರೇಡಿಯೋಗಳ ಮೂಲಕ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯಾಗುತ್ತಿರುವುದು ಇದರ ಒಂದು ಸಣ್ಣ ಉದಾಹರಣೆ. ಪ್ರಾಂತೀಯ ಭಾಷಾಭಿಮಾನಿಗಳನ್ನು ಪ್ರಚೋದಿಸುವ ಇಂತಹ ನಿಲುವುಗಳು ಎಷ್ಟು ಸಮಂಜಸ?

ವಿರೋಧಿಸೋಣ ಬನ್ನಿ..

ಸೆಪ್ಟೆಂಬರ್‌ 14ರಂದು ‘‘ಹಿಂದಿ ದಿವಸ್‌’’ ಆಚರಣೆ ನಡೆಯಲಿರುವ ಸಂದರ್ಭದಲ್ಲಿ ಹಿಂದಿ ನಮಗೆ ಬೇಡ ಎಂದು ಪ್ರತಿಭಟಿಸಿ, ಕನ್ನಡ ಉಳಿಸಿಕೊಳ್ಳುವತ್ತ ಚಿಂತಿಸಿ ಬೆಂಗಳೂರು ‘‘ಕಾಸ್‌ಮಾಡೋರಿಗೆ ಪೆವಿಲಿಯನ್‌’’ ಹಾಗೂ ‘‘ತೋಟದಪ್ಪನ ಛತ್ರ’’ ಅಲ್ಲ ಎಂದು ಕೇ[ಕೇರಳ]-ಂದ್ರಾ[ಆಂದ್ರಾ]- [ಕನ್ನಡದ ಡೋಂಗಿಗಳು] ಳಿ[ಬಂಗಾಳಿ] [ತಮಿಳು] ಪ್ರದೇಶ[ಉತ್ತರ] ಕ್ಕೆ ಕರೆ ನೀಡಿರುವ ಕಿಡಿಗೇಡಿಗಳಿಗೆ ತಿಳಿಹೇಳಿ, ಅವರು ಬೆಂಗಳೂರು / ಕರ್ನಾಟಕದಲ್ಲಿ ನೆಲೆಗೊಳ್ಳಬೇಕಾದರೆ ಅವರಿಗೆ ಕನ್ನಡ ಅನಿವಾರ್ಯವಾಗುವ ವಾತಾವರಣ ಮೂಡಿಸುವತ್ತ ನಮ್ಮ ಸರ್ಕಾರ, ಆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಬೇಕಿದೆ. ಕನ್ನಡಿಗರು ತಮ್ಮ ಮೇಲಾಗುತ್ತಿರುವ ಹಿಂದಿ ಹೇರಿಕೆಯನ್ನು ಖಂಡತುಂಡವಾಗಿ ಪ್ರತಿಭಟಿಸಬೇಕಿದೆ.


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X