• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

9/11 : ದುರಂತ ಸಂಭವಿಸಿ 5 ವರ್ಷವಾದರೂ ಕಣ್ಣಲ್ಲಿ ಮಾಸದ ದಿಗಿಲು!

By Staff
|

ಸೆ.11 ಬರುತ್ತಿರುವಂತೆ ಈ ದುರಂತದಲ್ಲಿ ಮಡಿದವರ ಕುಟುಂಬಗಳಲ್ಲಿ ದುಃಖದ ಕಟ್ಟೆ ಒಡೆಯುತ್ತದೆ. ಇವರ ದುಃಖ ಸಾಗರದಲ್ಲಿ ಅಮೆರಿಕಾ ಮಾತ್ರವಲ್ಲ, ವಿಶ್ವಕ್ಕೆ ವಿಶ್ವವೇ ಭಾಗಿಯಾಗುತ್ತದೆ.

  • ವಿಶ್ವೇಶ್ವರ ಭಟ್‌
ನ್ಯೂಯಾರ್ಕ್‌(ಅಮೆರಿಕ) : ಇಡೀ ಅಮೆರಿಕ ದೇಶ ಮತ್ತೊಮ್ಮೆ ಶೋಕತಪ್ತವಾಗಿದೆ. ಸೆಪ್ಟೆಂಬರ್‌ 11ರ ದುರ್ಘಟನೆಗೆ ಇಂದು ಐದು ವರ್ಷ. ವಿಶ್ವದ ಇತಿಹಾಸದಲ್ಲಿ ಅಳಿಸಲಾಗದ ಕರಾಳ ಅಧ್ಯಾಯಕ್ಕೆ ಕಾರಣವಾದ ಈ ದುರಂತದ ದಿನ ಸಮೀಪಿಸುತ್ತಿದ್ದಂತೆ ಇಲ್ಲಿನ ಜನರಲ್ಲಿ ಶೋಕ ಮಡುವುಗಟ್ಟುತ್ತಿದೆ.

ಐದುವರ್ಷಗಳ ಹಿಂದಿನ ದುರ್ಘಟನೆ ಪುನಃ ನೆನಪಿನ ಮುಂಬಾಗಿಲಲ್ಲಿ ಕುಳಿತಿದೆ. ಅಮೆರಿಕನ್ನರಿಗೆ ಈ ದಿನ ಒಂದು ದು:ಸ್ವಪ್ನ. ನೆನಪಿನ ಭಿತ್ತಿಯಿಂದ ಅಳಿಸಲಾಗದ, ಯಾವಜ್ಜೀವ ಕಾಡುವ ಅತ್ಯಂತ ಕಹಿಘಟನೆ. ಈ ದಿನ ಹತ್ತಿರ ಬರುತ್ತಿರುವಂತೆ ತನಗರಿವಿಲ್ಲದಂತೆ ದೇಶ ತವಕ, ತಲ್ಲಣ, ಕಳವಳ, ಶೋಕಕ್ಕೆ ಜಾರುತ್ತದೆ.

US to mark 5th anniversary of 9/11ಐದು ವರ್ಷಗಳ ಹಿಂದೆ 19 ಮಂದಿ ಅಲ್‌ಖೈದ ಉಗ್ರಗಾಮಿಗಳು ಬೆಳಗ್ಗೆಯಾಗುತ್ತಿದ್ದಂತೆ ಏಕಕಾಲದಲ್ಲಿ ನಾಲ್ಕು ವಿಮಾನಗಳನ್ನು ಸಿನಿಮೀಯವಾಗಿ ಅಪಹರಿಸಿದರು. ಆ ಪೈಕಿ ಎರಡು ವಿಮಾನಗಳು ವಿಶ್ವವ್ಯಾಪಾರ ಕೇಂದ್ರ ಅವಳಿ ಕಟ್ಟಡಗಳಿಗೆ ಅಪ್ಪಳಿಸಿದವು. ಎರಡು ತಾಸಿನೊಳಗೆ ಆ ಎರಡೂ ಕಟ್ಟಡಗಳು ಸಂಪೂರ್ಣವಾಗಿ ನೆಲಕ್ಕುರುಳಿದವು. ಈ ದುರಂತದಲ್ಲಿ 2973 ಮಂದಿ ಮೃತಪಟ್ಟರು., 24 ಮಂದಿ ಕಾಣೆಯಾದರು. ಸಾವಿರಾರು ಮಂದಿ ಗಾಯಗೊಂಡರು.

ಮೂರನೆಯ ವಿಮಾನ ಅಮೆರಿಕದ ರಕ್ಷಣಾ ಕಚೇರಿ ಪೆಂಟಗಾನ್‌ ಮೇಲೆ ಬಿತ್ತು. ನಾಲ್ಕನೆ ವಿಮಾನದ ಗುರಿ ಎಲ್ಲಿತ್ತೋ, ಆದರೆ ಅದು ಪೆನ್ಸಿಲ್ವೇನಿಯಾದ ಸಾಮರ್‌ಸೆಟ್‌ನಲ್ಲಿ ಬಿತ್ತು. ಸೆಪ್ಟೆಂಬರ್‌ 11ರ ನಂತರ ಅಮೆರಿಕ ಒಂದೇ ಅಲ್ಲ, ಇಡೀ ಜಗತ್ತು ಮೊದಲಿನಂತೆ ಇಲ್ಲ. ಭಯೋತ್ಪಾದನೆಯ ಅಟ್ಟಹಾಸದ ಪರಿ ತುತ್ತತುದಿಗೆ ಏರಿದ್ದರ ಸಾಕ್ಷಿಯಾಗಿ ಈ ದುರಂತ ನಿರಂತರ ಕಾಡುತ್ತಿದೆ.

9/11 ಬರುತ್ತಿರುವಂತೆ ಈ ದುರಂತದಲ್ಲಿ ಮಡಿದವರ ಕುಟುಂಬಗಳಲ್ಲಿ ದುಃಖದ ಕಟ್ಟೆ ಒಡೆಯುತ್ತದೆ. ಇವರ ದುಃಖ ಸಾಗರದಲ್ಲಿ ದೇಶಕ್ಕೆ ದೇಶವೆ ಭಾಗಿಯಾಗುತ್ತದೆ. ಐದು ವರ್ಷ ತುಂಬುತ್ತಿರುವ ಈ ದುರ್ಘಟನೆಯ ಸ್ಮರಣೆಯನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದ್ದು ಅವಳಿ ಕಟ್ಟಡ ಕುಸಿದ ಜಾಗ - ಗ್ರೌಂಡ್‌ ಜೀರೋದಲ್ಲಿ ಈಗಾಗಲೇ ಪೂರ್ವ ಸಿದ್ಧತೆ, ಚಟುವಟಿಕೆಗಳು ನಡೆಯುತ್ತಿವೆ. ಮೃತರ ಸ್ಮರಣಾರ್ಥ ಇಡೀ ದಿನ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎಲ್ಲಾ ಊರುಗಳ ಅಂಗಡಿಗಳಲ್ಲಿ ದುರಂತದಲ್ಲಿ ಮೃತಪಟ್ಟವರ ಹೆಸರುಗಳನ್ನೊಳಗೊಂಡ ಕಾರ್ಡುಗಳು ಹಾಗೂ ಚಿತ್ರಗಳನ್ನು ಮಾರಾಟಕ್ಕಿಡಲಾಗಿದೆ.

ಫೆಡೆಕ್ಸ್‌ ಕೊರಿಯರ್‌ ಸಂಸ್ಥೆ ನಿಧನರಾದ ಎಲ್ಲರ ಕುಟುಂಬಗಳ ವಿಳಾಸಗಳನ್ನು ಸಂಗ್ರಹಿಸಿದ್ದು, ಶ್ರದ್ಧಾಂಜಲಿ ಕಾರ್ಡುಗಳನ್ನು ಅವರುಗಳಿಗೆ ಯಾರುಬೇಕಾದರೂ ಕಳುಹಿಸಬಹುದಾಗಿದೆ. ದುರಂತದಲ್ಲಿ ಮಡಿದವರೆಲ್ಲರ ಚಿತ್ರಗಳನ್ನೊಳಗೊಂಡ ಪೋಸ್ಟರ್‌ನ್ನು ಬಿಡುಗಡೆ ಮಾಡಲಾಗಿದ್ದು ಅದರ ಮುಂದೆ ಮೊಂಬತ್ತಿ ಬೆಳಗಿ ಹೂಗುಚ್ಛಇಟ್ಟು ಯಾರು ಎಲ್ಲಿ ಬೇಕಾದರೂ ಶ್ರದ್ಧಾಂಜಲಿ ಅರ್ಪಿಸಬಹುದಾಗಿದೆ. ಇಡೀ ವಿಶ್ವವೇ ಕಂಡು ಕೇಳರಿಯದ ಭೀಭತ್ಸ ದುರಂತಕ್ಕೆ ಸಾಕ್ಷಿಯಾದ - ಗ್ರೌಂಡ್‌ ಜೀರೋದಲ್ಲಿ ಈಗಾಗಲೇ ವಿಚಿತ್ರ ಶೋಕ ಮೌನ ಮಡುವುಗಟ್ಟಿದ್ದು. ಇದು ಇನ್ನಷ್ಟು ದಟ್ಟವಾಗಲಿದೆ.

ಈಗಾಗಲೆ ಮೇಯರ್‌ ಮೈಕೇಲ್‌ ಬ್ಲೂಮ್‌ಬರ್ಗ್‌ ಹಾಗೂ ಗವರ್ನರ್‌ ಜಾರ್ಜ್‌ ಪಟಾಕಿ 9/11 ರ ಐದನೇ ವಾರ್ಷಿಕೋತ್ಸವದ ಕಾರ್ಯಕ್ರಮಗಳನ್ನು ಪ್ರಕಟಿಸಿದ್ದಾರೆ.

ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳು ಕಸಿದ ಜಾಗದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರು ಸೇರಿ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಮೊದಲು ಈ ದುರ್ಘಟನೆಯಲ್ಲಿ ಮೃತಪಟ್ಟವರ ಎಲ್ಲರ ಹೆಸರುಗಳನ್ನು ಓದಲಾಗುವುದು. ಹಿಂಬದಿಯಲ್ಲಿ ಶೋಕಸಂಗೀತ ಮೊಳಗಲಿದೆ. ಈ ಕಾರ್ಯಕ್ರಮದ ಮಧ್ಯೆ ನಾಲ್ಕು ಸಂದರ್ಭಗಳಲ್ಲಿ ಮೌನ ಸಲ್ಲಿಸಲಾಗುವುದು. ಎರಡೂ ಕಟ್ಟಡಗಳಿಗೆ ವಿಮಾನ ಅಪಹರಿಸಿದಾಗ ಹಾಗೂ ಎರಡೂ ಕಟ್ಟಡಗಳು ನೆಲಕ್ಕುರುಳಿದ ಸಮಯದಲ್ಲಿ ಎಲ್ಲ ಕಾರ್ಯಕ್ರಮ ಸ್ತಬ್ಧವಾಗುವುದು. ಬೆಳಗ್ಗೆ 8.46ಕ್ಕೆ ಮೊದಲ ದಿನ.

ನಿಧನರಾದ ಹೆಸರುಗಳನ್ನು ಓದುತ್ತಿದ್ದಂತೆ ಕುಟುಂಬದ ಸದಸ್ಯರು ಗ್ರೌಂಡ್‌ ಜೀರೋಗೆ ಬಂದು ಹೂವನ್ನಿಟ್ಟು ಶ್ರದ್ಧಾಂಜಲಿ ಅರ್ಪಿಸಲು ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 8ಕ್ಕೆ ಆರಂಭವಾಗುವ ಕಾರ್ಯಕ್ರಮ ಮಧ್ಯಾಹ್ನ 3ಕ್ಕೆ ಮುಗಿಯಲಿದೆ. ಆದರೆ ಸಾಯಂಕಾಲದ ತನಕ ಗ್ರೌಂಡ್‌ ಜೀರೋದಲ್ಲಿ ಕಳೆಯಲು ಕುಟುಂಬದ ಸದಸ್ಯರಿಗೆ ಅನುವು ಮಾಡಿಕೊಡಲಾಗಿದೆ. ರಾತ್ರಿಯಾಗುತ್ತಿದ್ದಂತೆ ‘ಟ್ರಿಬ್ಯೂಟ್ಸ್‌ ಇನ್‌ ಲೈಟ್‌ ಇಡೀ ರಾತ್ರಿ ಉರಿಯಲಿದೆ.

ಈ ಸಲ 9/11 ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಮಯ ಹಾಗೂ ಜಾಗ ಆಧರಿಸಿ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗುವುದೆಂದು ಪ್ರಕಟಿಸಲಾಗಿದೆ.

ಅವಳಿ ಕಟ್ಟಡ ಕುಸಿದು ಐದು ವರ್ಷಗಳಾದರೂ, ಆ ಜಾಗವನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂಬ ಬಗ್ಗೆ ದೇಶದಾದ್ಯಂತ ಚರ್ಚೆಗಳಾಗುತ್ತಿವೆ. ಸುಮಾರು 16 ಎಕರೆ ಜಾಗವನ್ನು ಹೇಗೆ ಉಪಯೋಗಿಸಬೇಕೆಂಬ ಬಗ್ಗೆ ‘‘ಪ್ರಾಜೆಕ್ಟ್‌ ರೀಬಿಲ್ಟ್‌’’ ಎಂಬ ಯೋಜನೆಯನ್ನು ರೂಪಿಸಲಾಗಿದ್ದು ಅದನ್ನು ಈಗಾಗಲೇ ಸಾರ್ವಜನಿಕರ ಅಭಿಪ್ರಾಯ ಹಾಗೂ ಒತ್ತಡಕ್ಕೆ ಮಣಿದು ಅನೇಕ ಸಲ ಬದಲಿಸಲಾಗಿದೆ.

9/11ರ ದುರಂತದಲ್ಲಿ ಮಡಿದವರ ಸ್ಮರಣಾರ್ಥ ಫ್ರೀಡಮ್‌ ಟವರ್‌ (ಸ್ವಾತಂತ್ರ್ಯ ಗೋಪುರ) ನಿರ್ಮಾಣಕಾರ್ಯ ಆರಂಭವಾಗಿದೆ. 2004ರಲ್ಲಿ ಇದಕ್ಕೆ ಶಂಕುಸ್ಥಾಪನೆ ನೆರವೇರಿದ್ದು, 2009ರ ಹೊತ್ತಿಗೆ ಇದು ಪೂರ್ಣಗೊಳ್ಳಲಿದೆ. 1776 ಅಡಿ ಎತ್ತರದ ಈ ಗೋಪುರ ಮೊದಲಿನ ವಿಶ್ವವ್ಯಾಪಾರ ಕೇಂದ್ರದ ಕಟ್ಟಡದಂತೆ ಹೋಲಲಿದೆ. ಗೋಪುರದ ಬುಡದಲ್ಲಿ ಮೃತಪಟ್ಟವರ ಹೆಸರುಗಳನ್ನು ಗ್ರಾನೈಟ್‌ ಶಿಲೆಯಲ್ಲಿ ಕೆತ್ತಲಾಗುವುದು.

ಗ್ರೌಂಡ್‌ಜೀರೋವನ್ನು ಹೇಗೆ ಬಳಸಿಕೊಳ್ಳಬೇಕೆಂಬ ಚರ್ಚೆಯ ನಡುವೆಯೇ ಈಗ ಸಿದ್ಧಪಡಿಸಲಾಗಿರುವ ‘ಪ್ರಾಜೆಕ್ಟ್‌ ರೀಬಿಲ್ಟ್‌’ನಲ್ಲಿ ಸ್ಮಾರಕಗಳ ಜೊತೆಗೆ ಆಫೀಸು ಕಟ್ಟಡ, ಅಂಗಡಿಗಳ ನಿರ್ಮಾಣ ಸಹ ಸೇರಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more