ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗದಗಿನ ಕಲಾಚೇತನ ಸಾಂ.ಅಕಾಡೆಮಿಗೆ ಹತ್ತರ ಸಂಭ್ರಮ

By Staff
|
Google Oneindia Kannada News


ಕಲಾಚೇತನ ಸಾಂಸ್ಕೃತಿಕ ಅಕಾಡೆಮಿ ನ.11 ಹಾಗೂ 12ರಂದು ದಶಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಈ ನೆಪದಲ್ಲಿ ಒಂದು ಹಿನ್ನೋಟ..

ಅನೇಕ ಆದರ್ಶಗಳನ್ನು ಇಟ್ಟುಕೊಂಡೇ 1996, ಏಪ್ರಿಲ್‌ 05ರಂದು ಅಸ್ತಿತ್ವಕ್ಕೆ ಬಂದ ಗದಗಿನ ಕಲಾ ಚೇತನ ಸಾಂಸ್ಕೃತಿಕ ಸಂಘಟನೆ ಇಂದು, ರಾಜ್ಯದ ಸಾಂಸ್ಕೃತಿಕ ಲೋಕದ ಪ್ರಮುಖ ಸಂಘಟನೆಯಾಗಿ ಹೊರಹೊಮ್ಮಿದೆ.

ಕಾದಂಬರಿಕಾರ ಭೈರಪ್ಪನವರು ಹೇಳಿರುವಂತೆ-‘ಗದಗನಂಥ ಮಧ್ಯಮ ವರ್ಗದ ನಗರದಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ರಾಷ್ಟ್ರಮಟ್ಟದ ಕಲಾವಿದರನ್ನು ಆಹ್ವಾನಿಸುವುದು ಸಾಮಾನ್ಯ ಕಾರ್ಯವೇನಲ್ಲ. ಕಲಾಚೇತನ ಸಾಂಸ್ಕೃತಿಕ ಅಕಾಡೆಮಿ ಈ ದೃಷ್ಟಿಯಿಂದ ನಿಜಕ್ಕೂ ಪ್ರಶಂಸಾರ್ಹ’.

ಗದಗ, ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದು. ಆದರೆ ಈ ವಾಣಿಜ್ಯ ನಗರಿಯಲ್ಲಿ ಸಾಂಸ್ಕೃತಿಕ ಸಂಘಟನೆಯಾಂದನ್ನು ಹುಟ್ಟು ಹಾಕುವುದು ಸುಲಭದ ಕಾರ್ಯವಾಗಿರಲಿಲ್ಲ. ಅದಕ್ಕಿಂತ ಮುಂಚೆಯೂ ಗದಗ-ಬೆಟಗೇರಿ ಅವಳಿ ನಗರಗಳಲ್ಲಿ ಅನೇಕ ಸಂಘಟನೆಗಳು ಜನ್ಮ ತಾಳಿದ್ದವಾದರೂ ಆರ್ಥಿಕ ಹಾಗೂ ಇತರ ಸಮಸ್ಯೆಗಳಿಂದ ನಿಷ್ಕಿೃಯಗೊಂಡಿದ್ದವು. ಇಂಥ ಪರಿಸರದಲ್ಲಿಯೂ ಅಸ್ತಿತ್ವಕ್ಕೆ ಬಂದ ಕಲಾಚೇತನ, ಹೆಸರಾಂತ ಜಾನಪದ ವಿದ್ವಾಂಸ ದಿ. ಕು.ಶಿ.ಹರಿದಾಸ ಭಟ್ಟರ ನೈತಿಕ ಬೆಂಬಲವೂ ದೊರೆಯಿತು.

ಅಂದ ಹಾಗೆ ಈ ಅಕಾಡೆಮಿಯ ಸ್ಥಾಪಕ ಅಧ್ಯಕ್ಷ ಕಾ.ವೆಂ.ಶ್ರೀ. ಅವರು, ಕು.ಶಿ. ಹರಿದಾಸಭಟ್ಟರ ಮಕ್ಕಳ ಒಡೆತನದ ‘ಗದಗ ರೆಸ್ಟೋರೆಂಟ್‌’ ನಲ್ಲಿ ಮ್ಯಾನೇಜರ್‌! ‘ಅಕಾಡೆಮಿಯ ಬೆಳವಣಿಗೆಗೆ ಕು.ಶಿ. ಅವರ ಮಾರ್ಗದರ್ಶನ ತುಂಬಾ ಸಹಕಾರಿಯಾಯಿತು‘ ಎಂದು ಸ್ಮರಿಸುತ್ತಾರೆ ಕಾ.ವೆಂ.ಶ್ರೀ.

‘ಶಿಲ್ಪಕಲೆ-ಕಾವ್ಯ-ಚಿತ್ರಕಲೆ, ವರ್ಣ-ಕಾವ್ಯ-ಗಾನದಂಥ ಪ್ರಯೋಗಶೀಲ ‘ಫ್ಯೂಜನ್‌’ಕಾರ್ಯಕ್ರಮಗಳು ಬೆಂಗಳೂರಿನಂಥ ನಗರಗಳಿಗೆ ಮಾತ್ರ ಸೀಮಿತವಾಗಿವೆ ಎಂಬ ಆರೋಪ ಇಂದು ಎಲ್ಲೆಡೆ ಕೇಳಿಬರುತ್ತಿದೆ. ಆದರೆ ಕಲಾಚೇತನ ಇಂಥ ಹೊಸತನದ ಕಾರ್ಯಕ್ರಮಗಳಿಗೆ ತನ್ನನ್ನು ತಾನು ತೊಡಗಿಸಿಕೊಂಡು ಕಲಾಸಕ್ತರನ್ನು ತಣಿಸುತ್ತ ಮುನ್ನಡೆಯುತ್ತಿದೆ. ಸದರಿ ಅಕಾಡೆಮಿ ಆಯೋಜಿಸಿದ್ದ ಪಂ. ಗಣಪತಿ ಭಟ್‌ ಹಾಸಣಗಿ ಅವರ ಗಾಯನ ಹಾಗೂ ಬಿ.ಕೆ.ಎಸ್‌. ವರ್ಮಾ ಅವರ ಚಿತ್ರ ಬಿಡಿಸುವಿಕೆಯ ‘ಜುಗಲ್‌ ಬಂದಿ’ಯನ್ನಂತೂ ಆ ಭಾಗದ ಜನತೆ ಮರೆಯಲು ಸಾಧ್ಯವೇ ಇಲ್ಲ.

ಕಲಾಪಿನಿ ಕೊಂಕಾಳಿಮಠ (ಕುಮಾರ ಗಂಧರ್ವರ ಪುತ್ರಿ), ಭೂಪಾಲ್‌ನ ಶೃತಿ ರಾವತ್‌, ಎಂ.ವೆಂಕಟೇಶಕುಮಾರ್‌, ಪ್ರವೀಣ್‌ ಗೋಡ್ಖಿಂಡಿ, ರವೀಂದ್ರ ಯಾವಗಲ್‌, ಶಂಕರ್‌ ಶಾನಭಾಗ ಮುಂತಾದ ಸಂಗೀತಗಾರರೆಲ್ಲ ಕಲಾಚೇತನದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಸಂಗೀತ ಪ್ರಿಯರನ್ನು ರಂಜಿಸಿದ್ದಾರೆ.

ಡಾ. ಎಸ್‌.ಎಲ್‌. ಭೈರಪ್ಪ, ಡಾ. ಗುರುಲಿಂಗ ಕಾಪಸೆ, ಡಾ. ಪಾಟೀಲ ಪುಟ್ಟಪ್ಪ, ಡಾ. ಎನ್‌.ಎಸ್‌. ತಾರಾನಾಥ, ವೀರಪ್ಪ ಮೊಯ್ಲಿ, ಡಾ. ವಿವೇಕ ರೈ, ಡಾ. ದೊಡ್ಡರಂಗೇಗೌಡ, ಡಾ. ಸುಮತಿಂದ್ರ ನಾಡಿಗ, ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಸಂತೋಷಕುಮಾರ ಗುಲ್ವಾಡಿ, ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ. ಅರವಿಂದ ಮಾಲಗತ್ತಿ ಮುಂತಾದವರು ಅಕಾಡೆಮಿಯ ಸಾಹಿತ್ಯಿಕ ಮೌಲ್ಯವನ್ನು ಹೆಚ್ಚಿಸಿದ್ದಾರೆ.

‘ಗರುಡಾಮೃತ‘ ಸಂಗೀತ-ನಾಟಕವನ್ನು ರಚಿಸಿದ ದಿವಾಕರ ಹೆಗಡೆ, ನೃತ್ಯಗಾರ್ತಿ ವಿಜಯಲಕ್ಷ್ಮಿ ಹೆಗಡೆ, ಸಂಗೀತ ಕಲಾವಿದರಾದ ಜಂಗಮಶೆಟ್ಟಿ ಸಹೋದರಿಯರು, ಸುಮಾ ಹಂದಿಗೋಳ, ಹುಸೇನಸಾಬ್‌, ವರ್ಣಚಿತ್ರ ಕಲಾವಿದರಾದ ಆರ್‌.ವಿ. ಹೆಗಡೆ, ಎಂ. ಕಮಲ್‌ ಅಹ್ಮದ್‌ ಮುಂತಾದ ಯುವ ಪ್ರತಿಭೆಗಳಿಗೂ ಇಲ್ಲಿ ವೇದಿಕೆ ದೊರೆತಿದೆ.

ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೆ.ಗೋವಿಂದ ಭಟ್‌, ಬನ್ನಂಜೆ ಸಂಜೀವ ಸುವರ್ಣ ಅವರ ಯಕ್ಷಗಾನ ತಂಡಗಳೂ ಬಯಲ ನಾಡಿನ ಜನತೆಗೆ ಯಕ್ಷಗಾನದ ರಸದೂಟವನ್ನು ಉಣಬಡಿಸಿರುವುದು ಈ ಅಕಾಡೆಮಿಯ ಮೂಲಕವೇ! ಹೆಗ್ಗೋಡಿನ ನೀನಾಸಂ ತಿರುಗಾಟದ ನಾಟಕಗಳು, ತುವ್ಮರಿಯ ಕಿನ್ನರಮೇಳ, ಹುಬ್ಬಳ್ಳಿಯ ಯವನಿಕಾ ತಂಡಗಳ ನಾಟಕಗಳೂ ಇಲ್ಲಿ ಪ್ರದರ್ಶನಗೊಂಡಿವೆ. ಅಗಲಿದ ಹಿರಿಯ ಚೇತನಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮಗಳು, ಪ್ರಚಲಿತ ವಿಷಯಗಳ ಕುರಿತು ವಿಚಾರ ಸಂಕಿರಣಗಳನ್ನು ನಡೆಸಿದ ಶ್ರೇಯಸ್ಸು ಈ ಅಕಾಡೆಮಿಯದಾಗಿದೆ.

ಹೀಗೆ ಹಲವಾರು ಕಾರ್ಯಗಳಿಂದ ಕನ್ನಡ ಸಾರಸ್ವತ ಲೋಕದ ಗಮನ ಸೆಳೆದಿರುವ ಕಲಾಚೇತನ ಸಾಂಸ್ಕೃತಿಕ ಅಕಾಡೆಮಿ, ಹಿರಿಯ ಪತ್ರಕರ್ತ ಸಂತೋಷಕುಮಾರ ಗುಲ್ವಾಡಿಯವರ ‘ಅಂತರಂಗ-ಬಹಿರಂಗ’ ಸೇರಿದಂತೆ ಮೂರು ಪುಸ್ತಕಗಳನ್ನೂ ಪ್ರಕಟಿಸಿದೆ!

ಪ್ರತಿ ಕಾರ್ಯಕ್ರಮಕ್ಕೂ ವಿಶೇಷ ರೀತಿಯ ಕಲಾತ್ಮಕ ಆಮಂತ್ರಣ ಪತ್ರಿಕೆ ಹಾಗೂ ವೇದಿಕೆಯ ವಿನ್ಯಾಸದಿಂದಲೂ ಈ ಅಕಾಡೆಮಿ ತನ್ನ ಕೀರ್ತಿಯನ್ನು ಹೆಚ್ಚಿಸಿಕೊಂಡಿದೆ. ಅಕಾಡೆಮಿಯ ಉಪಾಧ್ಯಕ್ಷ ವಿಶ್ವನಾಥ ನಾಲ್ವಾಡದ ಅವರು ಇಂಥ ಕಲಾತ್ಮಕ ಚಿಂತನೆಗಳ ‘ಮಾಸ್ಟರ್‌ ಬ್ರೈನ್‌’ ಆಗಿದ್ದಾರೆ.

ಅಕಾಡೆಮಿ ಇದುವರೆಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಪ್ರೊ. ಜಿ.ವೆಂಕಟಸುಬ್ಬಯ್ಯ, ಡಾ. ಪಾಟೀಲ ಪುಟ್ಟಪ್ಪ, ಡಾ. ಚೆನ್ನವೀರ ಕಣವಿ, ಕು.ಶಿ. ಹರಿದಾಸ ಭಟ್ಟ ಕೆ. ಗೋವಿಂದ ಭಟ್ಟ ಚಿಟ್ಟಾಣಿ ರಾಮಚಂದ್ರ ಹೆಗಡೆ, ಗಿರಿ ದಾವಣಗೆರೆ, ಸುನೀಲ ಜೋಶಿ, ರಾಜೀವ ಕಿದಿಯೂರ, ಎಂ.ಎ. ಚೆಟ್ಟಿ, ಎಂ. ವೆಂಕಟೇಶಕುಮಾರ, ಹೊ.ನ. ರಾಘವೇಂದ್ರರಾವ್‌, ರಾಮಣ್ಣ ಬ್ಯಾಟಿ, ಬಿ.ಕೆ.ಎಸ್‌. ವರ್ಮ, ಪಂ. ಗಣಪತಿ ಭಟ್‌ ಹಾಸಣಗಿ, ಪ್ರವೀಣ ಗೋಡಖಿಂಡಿ, ರವೀಂದ್ರ ಯಾವಗಲ್‌, ವಿದುಷಿ ಜ್ಯೋತಿ ಹೆಗಡೆ ಮತ್ತಿತರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X