• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್‌ ಚಿತ್ರಗಳನ್ನು ನೋಡಿ ನಾವು ಕಲಿತದ್ದು ಇಷ್ಟೇ ಏನು?

|
ರಾಜ್‌ರನ್ನು ಗೀತಗಾಯನ ಕಾರ್ಯಕ್ರಮದ ಮೂಲಕ ಈ-ಕವಿ ಬಳಗ ಇತ್ತೀಚೆಗೆ ಅರ್ಥಪೂರ್ಣವಾಗಿ ಎಲ್ಲರಿಗೂ ನೆನಪಿಸಿತು. ಬಳಗದ ಪ್ರಯತ್ನಕ್ಕೆ ಕೈ ತಟ್ಟೋಣ. ಆದರೆ ಈ ಬೆನ್ನಲ್ಲಿ ಡಾ.ರಾಜ್‌ ಉಸಿರಿನಂತೆ ಬದುಕಿಡೀ ಪ್ರೀತಿಸಿದ ಕನ್ನಡದ ಸದ್ಯದ ಸ್ಥಿತಿ ಭಯ ಹುಟ್ಟಿಸುತ್ತಿದೆ. ನಾಡಿಗೆ ಬೆಂಕಿ ಬಿದ್ದಿದೆ. ಆದರೆ ನಾಡಿನ ಉಳಿವಿಗಾಗಿ ನಾವು ಕೈ ಎತ್ತುವುದಿರಲಿ, ಕಿರುಬೆರಳನ್ನು ಸಹಾ ಕದಲಿಸುತ್ತಿಲ್ಲ. ಕನ್ನಡಿಗರ ಮೌನ ನೋಡಿದರೆ, ರಾಜ್‌ ಚಿತ್ರಗಳನ್ನು ನೋಡಿ ಕನ್ನಡಿಗರು ಕಲಿತದ್ದೇನು ಎಂಬ ಪ್ರಶ್ನೆ ಮೂಡುತ್ತದೆ!

ಐಟಿ ಕ್ಷೇತ್ರದ ಮುಂಚೂಣಿಯಲ್ಲಿರುವ ಒಬ್ಬ ನಾಯಕರು ಕರ್ನಾಟಕದ ಆತ್ಮದಂತಿರುವ ಬೆಂಗಳೂರು ನಗರಿಯನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿಸಬೇಕು ಎಂದು ಹೇಳಿಕೆ ಕೊಡುತ್ತಾರೆ.

ಯಾರೂ ವಿರೋಧಿಸುವುದಿಲ್ಲ. ವಸ್ತುಸ್ಥಿತಿ ಏನೆಂದರೆ ಇಂಥ ಹೇಳಿಕೆಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ನಮ್ಮ ನಾಯಕರಿಗೆ ತೋಚುವುದೇ ಇಲ್ಲ. ಕೇಳಿಸಿಕೊಂಡು ಸುಮ್ಮನಾಗಿಬಿಡುತ್ತಾರೆ. ನಾಯಕರಿಗೇ ತೋಚದಿದ್ದ ಮೇಲೆ ಜನಸಾಮಾನ್ಯರಾದರೂ ಏನು ಮಾಡಿಯಾರು? ಅವರೂ ಸುಮ್ಮನಾಗಿಬಿಡುತ್ತಾರೆ.

ಮತ್ತೊಂದು ರಾಜ್ಯದ ಮುಖ್ಯಮಂತ್ರಿ ಮರಾಠಿಗರು ಹೇರಳವಾಗಿರುವ ಪ್ರಾಂತ್ಯಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು ಹುಯಿಲೆಬ್ಬಿಸುತ್ತಾರೆ. ಈಗಲೂ ಹೇಳಿಕೆ ನೀಡದಿದ್ದರೆ ನಮ್ಮ ಜನರೇ ಕೆರಳಿ ನಿಂತಾರು ಎಂದುಕೊಂಡಿರುವ ಕೆಲ ಸಾಹಿತಿಗಳು 'ಹೋರಾಟ ಮಾಡಬೇಕು" ಎಂದು 'ಪಂಚ್‌" ಇಲ್ಲದ ಹೇಳಿಕೆ ನೀಡಿ ಸುಮ್ಮನಾಗಿಬಿಡುತ್ತಾರೆ. ಮತ್ತೊಬ್ಬ ಸಾಹಿತಿ 'ಅವರು ಹಿಂಗನ್ಲಿಕತ್ಯಾರ ಮುಂದೇನಾಗತದೋ ನೋಡಬೇಕು" ಎಂದು ಯಾವುದೇ ಖಚಿತ ನಿರ್ಧಾರವಿಲ್ಲದ ಹೇಳಿಕೆ ನೀಡಿ ಸುಮ್ಮನಾಗಿಬಿಡುತ್ತಾರೆ.

ಮತ್ತೊಂದೆಡೆ ರೇಡಿಯಾ ಎಫ್‌ಎಮ್‌, ರೇಡಿಯಾ ಮಿರ್ಚಿ, ರೇಡಿಯೋ ಒನ್‌ ಚಾನಲ್‌ಗಳನ್ನು ಕನ್ನಡೇತರರ ಕಿವಿಗೆ ಒತ್ತಿ ಹಿಡಿದಿದ್ದಾರೆ, ಕನ್ನಡಿಗರ ಕಿವಿಗೆ ಸುಗಂಧ ಪರಿಮಳದ ಹೂವಿಡಲಾಗಿದೆ.

ಫೋರಮ್‌ನಲ್ಲಿ ಕನ್ನಡವಿಲ್ಲ, ಫ್ಯಾಮಿಲಿ ಮಾರ್ಟ್‌ನಲ್ಲಿ ಕನ್ನಡ ಮಾತಾಡಬಾರದು, ಬ್ಯಾಂಕ್‌ಗಳಲ್ಲಿ ಕನ್ನಡದಲ್ಲಿ ಮಾತಾಡಿದರೆ ಸೇವೆ ಇಲ್ಲ. ಇದು ಸದ್ಯದ ಕನ್ನಡದ, ಕರ್ನಾಟಕದ, ಕನ್ನಡಿಗರ ಪರಿಸ್ಥಿತಿ. ಇಂಥ ಪರಿಸ್ಥಿತಿ ಹಿಂದೆಂದೂ ಬಂದಿರಲಿಲ್ಲ. ಹೀಗೆ ಬಿಟ್ಟರೆ ಅಸಲಿಗೆ ಧ್ವನಿ ಎತ್ತಬೇಕೆಂದರೆ ಬೆಂಗಳೂರಿನಲ್ಲಿ ಕನ್ನಡಿಗರೇ ಇರುವುದಿಲ್ಲ.

ಈ ವಿಪರೀತ ಪರಿಸ್ಥಿತಿ ಕನ್ನಡಿಗರಿಗೆ ಗೊತ್ತಿಲ್ಲವೆಂದಲ್ಲ. ಗೊತ್ತಿದ್ದರೂ ಮುಂದೆ ಏನು ಮಾಡಬೇಕೆಂದು ಗೊತ್ತಿಲ್ಲ. ಕನ್ನಡಿಗರನ್ನೆಲ್ಲ ಒಗ್ಗೂಡಿಸಿ ಅಸಲಿಯತ್ತಿನ ಪರಿಚಯ ಮಾಡಿಸಬೇಕೆಂದರೆ ಕನ್ನಡಿಗರನ್ನು ಒಗ್ಗೂಡಿಸುವ ಯಾವ ಕಸರತ್ತೂ ನಡೆಯುತ್ತಿಲ್ಲ. ಅಸಲಿಗೆ ಎಲ್ಲ ಕನ್ನಡಿಗರ ಕೈಹಿಡಿದು ಮುನ್ನಡೆಸುವ ನಾಯಕತ್ವವೇ ಇಲ್ಲ.

Rajkumarಅಂಥ ನಾಯಕತ್ವದ ಪ್ರಶ್ನೆ ಬಂದಾಗ ಮೊಟ್ಟ ಮೊದಲಿಗೆ ಮತ್ತು ಕೊನೆಯದಾಗಿ ಹೆಸರು ಕೇಳಿ ಬರುವುದು ಒನ್‌ ಆ್ಯಂಡ್‌ ಓನ್ಲಿ ರಾಜ್‌. ಪ್ರತಿ ಬಾರಿ ಒಗ್ಗಟ್ಟಿನ, ಹೋರಾಟದ ಪ್ರಶ್ನೆ ಬಂದಾಗ ಚರ್ಚಿತವಾಗುವುದು ಗೋಕಾಕ್‌ ಚಳವಳಿ, ರಾಜ್‌ರ ನಾಯಕತ್ವ, ಷಂಡ ನಾಯಕರು, ಸಾಹಿತಿಗಳು ಮುಗ್ಗರಿಸಿದ ಕಥಾನಕ, ರಾಜ್‌ ಸತ್ತ ಮೇಲೂ!

ಇಂಥ ಸಮಯದಲ್ಲಿ ರಾಜ್‌ಕುಮಾರ್‌ರಲ್ಲಿನ ನಯ, ವಿನಯ, ತನ್ಮಯತೆ, ಕನ್ನಡದ ಬಗೆಗಿನ ಕಾಳಜಿ, ಹೋರಾಟ, ಜೀವನ ಪ್ರೀತಿ ಇಂದಿಗೂ ಪ್ರಸ್ತುತ. ರಾಜ್‌ ಅಭಿನಯಿಸಿದ ಪ್ರತಿ ಪಾತ್ರ, ಎತ್ತಿ ಹಿಡಿದ ಮೌಲ್ಯಗಳು ಬೆಂಗಳೂರಿನಂಥ ನಗರಿಯಲ್ಲಿ ಕನ್ನಡವನ್ನು ಇಂದಿಗೂ ಜೀವಂತವಾಗಿಟ್ಟಿವೆ. ಇಂಥ ಜೀವಂತಿಕೆಯನ್ನು ಮತ್ತೆ ಮೆರೆದಿದ್ದು 'ಎಲ್ಲ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ (E-KAVI)", ರಾಜ್‌ ಸವಿನೆನಪಿಗಾಗಿ ಆಗಸ್ಟ್‌ 6ರಂದು ಹಮ್ಮಿಕೊಂಡಿದ್ದ 'ನಾದಮಯ ಈ ಲೋಕವೆಲ್ಲಾ" ರಸಸಂಜೆ ಕಾರ್ಯಕ್ರಮದಲ್ಲಿ.

ಅದೇ ನೆವದಲ್ಲಿ ರಾಜ್‌ ಎಂದರೆ ನರಸಿಂಹರಾಜು, ಬಾಲಕೃಷ್ಣ ಮಾತ್ರವಲ್ಲ ನೆನಪಿಗೆ ಬರುವ ಮತ್ತೊಬ್ಬ ಧೀಮಂತ, ಆದ್ರೆ ನಾಟ್‌ ಸೋ ಶ್ರೀಮಂತ ಕಲಾವಿದ ಕೆ.ಎಸ್‌. ಅಶ್ವತ್ಥ ಅವರನ್ನು ಸನ್ಮಾನಿಸಿತು. ಉದಾರ ಕನ್ನಡಪ್ರೇಮಿಗಳಿಂದ ಹಣ ಸಂಗ್ರಹಿಸಿ ಸಂಕಷ್ಟದಲ್ಲಿರುವ ಹಿರಿಯ ನಟ ಕೆ.ಎಸ್‌. ಅಶ್ವತ್ಥರಿಗೆ 50 ಸಾವಿರ ರುಪಾಯಿ ಸಹಾಯಧನ ನೀಡಿದ್ದು ಬಳಗದ ಕಾಳಜಿಗೆ ಸಾಕ್ಷಿ.

ಯಾವುದೇ ಡಂಗುರವಿಲ್ಲದಿದ್ದರೂ ಮಂದಗಾಮಿನಿಯಾಗಿ ಕನ್ನಡದ ಕಾರ್ಯವನ್ನು ಮಾಡುತ್ತಿದೆ ಈಕವಿ ಬಳಗ. ಈ ಈಕವಿ ಬಳಗದಲ್ಲಿರುವವರೆಲ್ಲ ಐಟಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಫ್ಟವೇರ್‌ ತಂತ್ರಜ್ಞರು. ಆದರೆ ಮಾತನಾಡುವುದು ಅಪ್ಪಟ ಕನ್ನಡ. ಪ್ರಶಸ್ತಿ ವಿಜೇತ ಚಿತ್ರಗಳನ್ನು ಕನ್ನಡಿಗರಿಗೆ ಪರಿಚಯಿಸಿ ಅನೇಕ ಸಂವಾದಗಳನ್ನು ಬಳಗ ಏರ್ಪಡಿಸಿದೆ. ನಗರ ಜೀವನದಿಂದ ದೂರವಿರುವ ಶಾಲೆಗಳ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣದ ಅರಿವನ್ನು ನೀಡುತ್ತ ಹಳ್ಳಿ ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚಿದೆ. ಕನ್ನಡದ ಬಗ್ಗೆ ಅಸಡ್ಡೆ ತಳೆದಿರುವ ರೇಡಿಯೋ ಚಾನಲ್‌ನ ಕಿವಿ ಕೂಡ ಹಿಂಡಿಬಂದಿದೆ. ಕನ್ನಡದ ಏಳ್ಗೆಗಾಗಿ ಈಕವಿ ಬಳಗ ಇಟ್ಟದ್ದು ಪುಟ್ಟ ಹೆಜ್ಜೆಯಾದರೂ, ಗುರಿ ದಿಟ್ಟ.

ಈ ಬಾರಿ ಹಮ್ಮಿಕೊಂಡದ್ದು ರಾಜ್‌ಕುಮಾರ್‌ ಜೊತೆಗೆ ಸುಮಾರು 83 ಚಿತ್ರಗಳಲ್ಲಿ ಅಭಿನಯಿಸಿರುವ ಹಿರಿಯ ಚೇತನ ಕೆ.ಎಸ್‌. ಅಶ್ವತ್ಥರಿಗೆ ಸನ್ಮಾನ. ರಾಜ್‌ಕುಮಾರ ಸವಿನೆನಪಿಗಾಗಿ ನಡೆದ ನಾದಮಯ ಈ ಲೋಕವೆಲ್ಲ ರಸಸಂಜೆ ಮತ್ತು ರವಿ ಬೆಳಗೆರೆ ಆಕರ್ಷಣೆ ಇಲ್ಲದಿದ್ದರೆ ಇಷ್ಟೊಂದು ಜನ ಜಮಾಯಿಸುತ್ತಿದ್ದುದು ಅನುಮಾನ. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕುತ್ತಿತ್ತು. ರಾಜ್‌ ಚಿತ್ರದ ತುಣುಕು ಕಿರುಪರದೆಯ ಮೂಡಿ ಬಂದಾಗ ಕಿವಿಗಡಚಿಕ್ಕುವ ಚಪ್ಪಾಳೆ, ಪ್ರೇಕ್ಷಕರ ಉನ್ಮಾದ.

ವೇದಿಕೆಯ ಮೇಲೆ ಆಸೀನರಾಗಿದ್ದ 'ಡಾ. ರಾಜ್‌ ಅವರ ಮುದ್ದಿನ ಪುತ್ರರಾದ" ರಾಘವೇಂದ್ರ ರಾಜಕುಮಾರ, ರಾಜ್‌ ನಟನೆಯ 10ಕ್ಕೂ ಹೆಚ್ಚು ಚಿತ್ರ ನಿರ್ಮಿಸಿದ ಕೆ.ಸಿ.ಎನ್‌. ಗೌಡ, ರಾಜ್‌ರನ್ನು 35 ವರ್ಷಗಳಿಂದ ಬಲ್ಲ ನಾಟಕ ಅಕಾಡೆಮಿ ಅಧ್ಯಕ್ಷ ಶ್ರೀನಿವಾಸ್‌ ಜಿ. ಕಪ್ಪಣ್ಣ, ರಾಜ್‌ ಚಿತ್ರಗಳನ್ನು ಚಿಕ್ಕಂದಿನಲ್ಲಿ ಕಳ್ಳತನದಿಂದ ನೋಡುತ್ತಿದ್ದ ಸಾಹಿತಿ ಡಾ. ನಲ್ಲೂರು ಪ್ರಸಾದ, ಈಕವಿಯ ಗೌರವಾಧ್ಯಕ್ಷರಾಗಿರುವ ಕವಿ ಡಾ. ಚಂದ್ರಶೇಖರ ಕಂಬಾರ ಮುಂತಾದವರಿಂದ ರಾಜ್‌ ಜೀವನದ, ನಟನೆಯ ಭರ್ತಿ ಗುಣಗಾನ.

ನಮ್ಮ ನೆಚ್ಚಿನ ನಟ ಡಾ. ರಾಜ್‌ಕುಮಾರ್‌ ಎಲ್ಲ ಹೊಗಳಿಕೆಗೆ ಅರ್ಹರು. ಅವರ ಜೀವನವೇ ಒಂದು ತೆರೆದಿಟ್ಟ ಪುಸ್ತಕ. ಚಿತ್ರದಲ್ಲಿ, ನಿಜಜೀವನದಲ್ಲಿ ಒಂದೇ ತೆರನಾದ ನಡತೆ, ಒಂದೇ ಬಗೆಯ ಪ್ರೀತಿ, ಉತ್ತಮ ಜೀವನಕ್ಕೆ ಮಾರ್ಗದರ್ಶಿ. ರವಿ ಬೆಳಗೆರೆ ಹೇಳಿದಂತೆ ಅವರ ನಟನೆ ಕೊಡುವ ಖುಷಿ ಅಷ್ಟಿಷ್ಟಲ್ಲ. ಅದು ಒಂದು ಪುಟ್ಟ ಮಗು ನೀಡುವ ಖುಷಿಗೆ ಸಮಾನ. ನಾಡಿನ ಸಮಸ್ತ ಕನ್ನಡಿಗರು ಬೆಳೆಸಿದ ಪುಟ್ಟ ಮಗು ರಾಜ್‌. ನಲ್ಲೂರು ಪ್ರಸಾದ್‌ ಹೇಳಿದಂತೆ ಸೂರ್ಯಚಂದ್ರ ಇರುವವರೆಗೂ ರಾಜ್‌ ಕೀರ್ತಿ ಅಜರಾಮರ.

ಅದೆಲ್ಲ ಸರಿ. ಇನ್ನೂ ನೂರಾರು ವರುಷ ರಾಜ್‌ ನೆನಪಿನ ಸಮಾರಂಭ ನಡೆಯುತ್ತಲೇ ಇರುತ್ತವೆ, ಗುಣಗಾನ ನಡೆಯುತ್ತಲೇ ಇರುತ್ತದೆ. ಆದರೆ, ಗುಣಗಾನ ಮಾಡುವುದರಲ್ಲೇ ರಾಜ್‌ ಶ್ರದ್ಧಾಂಜಲಿ ಸಭೆಗಳು ಮುಗಿದರೆ ಮುಂದೆ ಸಭೆಗಳೇ ಸತ್ತುಹೋಗಿರುತ್ತವೆ. ಕನ್ನಡವನ್ನು ಎತ್ತಿಹಿಡಿಯುವಂಥ ಪರಿಸ್ಥಿತಿ ಉದ್ಭವಿಸಿದಾಗ ಪ್ರತಿ ರಾಜ್‌ ಸವಿನೆನಪಿನ ಸಭೆ ಒಂದೊಂದು ಚಳವಳಿಗೆ ವೇದಿಕೆ ಆಗಬೇಕು. ಕನ್ನಡಕ್ಕೆ, ಕರ್ನಾಟಕಕ್ಕೆ ಒದಗಿರುವ ಸಂಕಷ್ಟಗಳ ಬಗ್ಗೆ ಚರ್ಚೆಯಾಗಬೇಕು, ಜನರಿಗೆ ಆದ್ಯತೆಗಳ ಬಗ್ಗೆ ಮನನ ಮಾಡಬೇಕು, ಪ್ರತಿಯಾಬ್ಬರಲ್ಲಿ ಕನ್ನಡದ ಬಗ್ಗೆ ಕಿಚ್ಚು ಹುಟ್ಟಬೇಕು, ಕನ್ನಡ ವಿರೋಧಿಗಳ ಬಗ್ಗೆ ರೊಚ್ಚು ಉಕ್ಕಬೇಕು. ರಾಜ್‌ ಸಮಾರಂಭಗಳು ಸಾರ್ಥಕವಾಗುವುದು ಆವಾಗಲೇ.

ಕನ್ನಡಕ್ಕೆ ರೇಡಿಯೋ ಚಾನಲ್‌ಗಳಿಂದ, ನಾರ್ಥಿಗಳಿಂದ, ಹೊರರಾಜ್ಯದವರಿಂದ ಒದಗಿರುವ ಸಂಕಷ್ಟದ ಬಗ್ಗೆ ರವಿ ಬೆಳಗೆರೆ ಪ್ರಸ್ತಾಪಿಸಿದ್ದರ ಹೊರತಾಗಿ ಒಬ್ಬೇ ಒಬ್ಬ ಭಾಷಣಕಾರರಿಂದ ಕನ್ನಡದ ಬಗ್ಗೆ ಒಂದೇ ಒಂದು ಕಾಳಜಿ ತುಂಬಿದ, ಕ್ರಾಂತಿಕಾರಕ ಹೇಳಿಕೆ ಹುಟ್ಟಲಿಲ್ಲ. ಹಿಂದಿನಿಂದ ದಬ್ಬಿದರೆ ಮಾತ್ರ ಮುನ್ನುಗ್ಗುವ ಸ್ವಭಾವದವರು ನಮ್ಮ ಕನ್ನಡಿಗರು. ಚಂಪಾ ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದಾಗ ಹೇಳಿದಂತೆ ಕೈಯಾಗ ಬಾರಕೋಲ ತೊಗೊಂಡ್ರನ ಕನ್ನಡ ವಿರೋಧಿಗಳನ್ನು ಬಗ್ಗಿಸಲಿಕ್ಕೆ ಸಾಧ್ಯ. ಗೋಕಾಕ ಚಳವಳಿಯಲ್ಲೇ ಆಗಲಿ ಮತ್ತ್ಯಾವಾಗಲಾದರೂ ಆಗಲಿ ಕನ್ನಡದ ಬಾವುಟವನ್ನು ಎಂದಿಗೂ ಎತ್ತಿಹಿಡಿದ ರಾಜ್‌ ಸವಿನೆನಪುಗಳು ಇನ್ನೂ ಜೀವಂತವಾಗಿರಬೇಕಾದರೆ ನಮ್ಮ ನಾಯಕರು ಭಾಷಣ ಮಾಡುವ ಧಾಟಿಗಳೇ ಬದಲಾಗಬೇಕು.

ಮುಂದೇನಾಗ್ತದೋ ನೋಡೋಣ ಅಂತ ಕೈಕಟ್ಟಿ ಕುಳಿತರೆ ಆಗದು ಕೆಲಸವು ಮುಂದೆ, ಆಗದು ಕೆಲಸವು ಮುಂದೆ. ಇಂಥ ಕೆಲಸಕ್ಕೆ ಮುನ್ನುಗ್ಗಬೇಕಾಗಿರುವುದು ಯುವಕರೇ.

ದಯವಿಟ್ಟು ಕ್ಷಮಿಸಿ, ಲೇಖನದ ಆರಂಭದಲ್ಲಿ ನಾನು ಪ್ರಸ್ತಾಪಿಸಿದ ಹೇಳಿಕೆ ನೀಡಿದ ಆ ಮಹಾನ್‌ ವ್ಯಕ್ತಿಯ ಹೆಸರು ಇನ್ಫೋಸಿಸ್‌ನ ಚೀಫ್‌ ಮೆಂಟರ್‌ ಎನ್‌.ಆರ್‌.ನಾರಾಯಣ ಮೂರ್ತಿ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more