• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನಸ್ಸು ಕ್ರಿಯಾಶೀಲಗೊಳ್ಳಲು ಹವ್ಯಾಸಗಳ ಜಗತ್ತಿನಲ್ಲಿ ವಿಹರಿಸಬನ್ನಿ

By Staff
|

ಒಬ್ಬ ವ್ಯಕ್ತಿಯ ಸ್ವಭಾವ, ಸಾಧನೆಗಳನ್ನು ಅವರು ಮಾಡುವ ಕೆಲಸದಿಂದ ಅಳೆಯಲಾಗದು. ಅವರ ಹವ್ಯಾಸ, ಬಿಡುವಿನ ವೇಳೆಯ ಉಪಯೋಗ, ಸದುಪಯೋಗ ಅಥವಾ ದುರುಪಯೋಗ ಇವುಗಳಿಂದ ಅರ್ಥೈಸಬಹುದು. ಒಳ್ಳೆ ಹವ್ಯಾಸಗಳನ್ನು ಬೆಳೆಸಿಕೊಳ್ಳುವ ಹಂಬಲವಿದ್ದರೆ ಲೇಖನ ಓದಿ! ಬೋರ್‌ ಎಂಬ ಪದವನ್ನು ಮರೆತುಬಿಡಿ!

 • ಶ್ರೀದೀಪ್‌
 • ಹವ್ಯಾಸ ಎಂದರೆ ನಮ್ಮ ವಿರಾಮದ ಸಮಯದಲ್ಲಿ ನಮಗೆ ಇಷ್ಟವಾದ ಕೆಲಸ ಮಾಡುವುದು. ಹೊಟ್ಟೆ ಬಟ್ಟೆಗಾಗಿ ದುಡಿಯುವುದು ಇದ್ದದ್ದೆ, ನಮಗೆ ಕೆಲಸ ಇಷ್ಟವಿರಲಿ ಇಲ್ಲದಿರಲಿ ಮಾಡಲೇಬೇಕು. ಆದರೆ ಹವ್ಯಾಸ ಹಾಗಲ್ಲ, ಅದು ನಮಗೆ ಪ್ರಿಯವಾದದ್ದು, ಯಾರ ಒತ್ತಾಯ ಇಲ್ಲ, ಯಾರನ್ನೂ ಮೆಚ್ಚಿಸುವ ಅಗತ್ಯವಿಲ್ಲ.

  ಹವ್ಯಾಸಗಳಲ್ಲಿ ಎಷ್ಟೊಂದು ವಿಧ, ಸಂಗ್ರಹಣೆ (ಅಂಚೆ ಚೀಟಿ, ಕಲಾಕೃತಿಗಳು, ಹಳೆ ಸಾಮಾನುಗಳು ಇತ್ಯಾದಿ), ಕಲೆ (ಸಂಗೀತ, ನೃತ್ಯ, ಚಿತ್ರಕಲೆ ಇತ್ಯಾದಿ), ಪ್ರಕೃತಿ ವೀಕ್ಷಣೆ, ಪ್ರವಾಸ, ದೈಹಿಕ ಚಟುವಟಿಕೆ (ಈಜು, ಕ್ರೀಡೆ, ನಡಿಗೆ, ಓಟ ಇತ್ಯಾದಿ), ಸೃಜನಶೀಲ ಚಟುವಟಿಕೆ (ಬರವಣಿಗೆ, ಕಥೆ, ಕವನ, ಲೇಖನ ಇತ್ಯಾದಿ).

  ಆದರೆ ಇತ್ತೀಚಿಗೆ ನಾವು ನೋಡುತ್ತಿರುವುದು ತುಂಬಾ ಬೇಸರವಾಗುತ್ತದೆ. ಯುವಜನರಿಗೆ, ಶಾಲೆ ಕಾಲೇಜ್‌ ವಿದ್ಯಾರ್ಥಿಗಳಿಗೆ ಇಂಥಾ ಎಷ್ಟೋ ಕ್ರಿಯೆಗಳ ಪರಿಚಯವೇ ಇಲ್ಲ. ಬಿಡುವಿನ ವೇಳೆ, ರಜೆ, ಏನೇ ಇರಲಿ, ಅವರ ಆಸಕ್ತಿ ಕೆಲವೇ ಕೆಲ ವಿಷಯಗಳಲ್ಲಿ ಕಾಣಬಹುದು- ಟಿ.ವಿ., ಕಂಪ್ಯೂಟರ್‌ ಮತ್ತು ಮೊಬೈಲ್‌. ಎಷ್ಟೊ ಜನರಿಗೆ ಟಿ.ವಿ. ಎಂದರೆ ಎಮ್‌.ಟಿ.ವಿ, ವಿ ಚಾನೆಲ್‌, ಸಿನೆಮಾ ಹಾಡುಗಳು, ವರ್ಷವಿಡಿ ನಡೆಯುವ ಫಿಲ್ಮ್‌ ಅವಾರ್ಡ್‌ ಸಮಾರಂಭಗಳು, ಇಂಥವುಗಳು ಮಾತ್ರ. ಇದ್ಯಾವುದೂ ನೋಡುವುದು ತಪ್ಪಲ್ಲ, ಆದರೆ ಮನೋರಂಜನೆ ಹೆಸರಲ್ಲಿ ಸಿನೆಮಾ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಮಾತ್ರ ನೋಡಬೇಕೇನು? ಸಿನೆಮೇತರ ಚಾನೆಲ್‌ಗಳ ಕಾರ್ಯಕ್ರಮಗಳೂ ಎಷ್ಟೊ ಬಾರಿ ಮನೋರಂಜಕ ಹಾಗೂ ಬೋಧಪ್ರದಾಯಕವಾಗಿರುತ್ತವೆ. ಆದರೆ ಅನೇಕರಿಗೆ ಈ ವಾಹಿನಿಗಳಲ್ಲಿ ಆಸಕ್ತಿಯೇ ಇಲ್ಲ.

  ಕಂಪ್ಯೂಟರಲ್ಲಿ ಕಲಿಯುವಂಥದ್ದು ಸಾಗರದಷ್ಟಿದೆ. ಹೆಚ್ಚಿನವರಿಗೆ ಹರಟೆ (ಚಾಟಿಂಗ್‌), ಗೇಮ್ಸ್‌ ಮಾತ್ರ ಗೊತ್ತು. ಅಂತರಜಾಲ ತುಂಬಾ ಅಗಾಧವಾಗಿದೆ. ಹೊಸ ವಿಷಯ ತಿಳಿಸುವ ಅಷ್ಟೇ ಮನರಂಜಿಸುವ ಲಕ್ಷ ತಾಣಗಳಿವೆ. ನಮ್ಮ ಪ್ರತಿಭೆ ಹೊರಹಾಕುವ, ಖುಷಿ ಕೊಡುವ ಫೋಟೋಶಾಪ್‌, ಕೋರೆಲ್‌ ಡ್ರಾ, ಮುಂತಾದ ತಂತ್ರಾಂಶ ಕಲಿತು ಅನೇಕ ಪ್ರಯೋಗ ಮಾಡಬಹುದು. ಆದರೆ ಎಷ್ಟು ಜನ, ಇಂಥಾ ತಂತ್ರಾಂಶ ಇದ್ದರೂ ಉಪಯೋಗಿಸುತ್ತಾರೆ? ಕಂಪ್ಯೂಟರ್‌ ಅಂದರೆ ಬರೀ ಹರಟೆ, ಆಟ (ಗೇಮ್ಸ್‌) ಮಾತ್ರ ಅವರಿಗೆ.

  ಈಗ ಮೊಬೈಲ್‌ ಅಂತೂ ನಮ್ಮ ಜನರನ್ನು ಹೇಗೆ ಹಿಡಿದಿಟ್ಟುಕೊಂಡಿದೆ ನೋಡಿ. ನಾನು ಅನೇಕರನ್ನು ಗಮನಿಸಿದ್ದೇನೆ. ಯಾವಾಗ ನೋಡಿದರೂ, ಅವರ ಬೆರಳು ಮೊಬೈಲ್‌ ಮೇಲೆ, ಗುಂಡಿ ಒತ್ತುತ್ತ, ಎಸ್‌.ಎಮ್‌.ಎಸ್‌ ಕಳಿಸುವ, ಓದುವ ಭರಾಟೆಯಲ್ಲಿ. ಅವರ ಜೊತೆ ಸರಿಯಾಗಿ ಒಂದು ನಿಮಿಷ ಮಾತಾಡುವುದೂ ಕಷ್ಟ. ಒಂದು ವಾಕ್ಯ ಹೇಳುವಷ್ಟರಲ್ಲಿ, ಚಿವ್‌ ಎಂದು ಕೂಗುತ್ತದೆ. ಶುರುವಾಯ್ತು, ಮುಂದಿನ ಕೆಲ ನಿಮಿಷ ಹೊಸ ಎಸ್‌.ಎಮ್‌.ಎಸ್‌ ಕಳಿಸುವ ಕಾರ್ಯ. ಕೆಳಗಿಟ್ಟು ಇನ್ನೊಂದು ಮಾತಾಡಬೇಕು, ಮತ್ತೆ ಚಿವ್‌ ಚಿವ್‌. ಹೋಗಲಿ ಇವರು ಕಳಿಸುವ, ಓದುವ ವಿಷಯಗಳಾದರೂ ಅಂಥಾ ಮಹತ್ವದ್ದೆ, ಅದೂ ಇಲ್ಲ. ಈಗಾಗಲೇ ಸಾವಿರಾರು ಬಾರಿ ಮೊಬೈಲ್‌ಗಳಲ್ಲಿ, ಈ-ಮೇಲ್‌ಗಳಲ್ಲಿ ಹರಡಿರುವ ಅವೇ ಹಳಸಲು ಜೋಕ್‌ಗಳು. ಆದರೂ ಅನೇಕರಿಗೆ ಎಸ್‌.ಎಮ್‌.ಎಸ್‌. ಕಳಿಸುವುದೇ ಒಂದು ದೊಡ್ಡ ಹವ್ಯಾಸ. ಅದು ಅವರಿಗೆ ಬೇರೆ ಯಾವ ಕಡೆ ಗಮನ ಕೊಡುವುದಕ್ಕೂ ಬಿಡುವುದೇ ಇಲ್ಲ, ಹಾಗೆ ದಾಸರನ್ನಾಗಿಸಿಬಿಟ್ಟಿದೆ.

  ಇಲ್ಲಿ ಈ ಆಧುನಿಕ ತಂತ್ರಜ್ಞಾನ ಖಳನಾಯಕನಲ್ಲ. ನಮ್ಮ ಅನುಕೂಲಕ್ಕಾಗಿ ಸೃಷ್ಟಿಸಲ್ಪಟ್ಟವು. ಟಿ.ವಿ. ಕಂಪೂಟರ್‌, ಮೊಬೈಲ್‌ ಇವುಗಳನ್ನು ದೂರುವುದು ಸರಿಯಲ್ಲ. ಅವುಗಳ ಸದ್ಬಳಕೆ, ದುರ್ಬಳಕೆ, ಅತಿ ಬಳಕೆ ಎಲ್ಲ ನಮ್ಮ ಕೈಯ್ಯಲ್ಲೆ ಇದೆ.

  ಎಲ್ಲ ಅನುಕೂಲಗಳಿದ್ದರೂ ನಮ್ಮ ಯುವಜನರಿಗೆ ಯಾವಾಗಲೂ ‘‘ಬೋರ್‌, ಬೋರ್‌’’. ಹಿಂದೆ ವಾರಕ್ಕೊಮ್ಮೆ ದೂರದರ್ಶನದಲ್ಲಿ ಚಲನಚಿತ್ರ, ಚಿತ್ರಮಂಜರಿ, ಚಿತ್ರಹಾರ್‌ ಇರುತ್ತಿತ್ತು. ಅಂಥಾ ದಿನಗಳೆಂದರೆ ನಮಗೆಲ್ಲ ಏನೋ ಸಂತೋಷ, ಇವತ್ತು ಟಿ.ವಿ ಯಲ್ಲಿ ಸಿನೆಮಾ ಇದೆ, ಇವತ್ತು 7.30ಕ್ಕೆ ಚಿತ್ರಮಂಜರಿ ಇದೆ ಎಂದು ನೆನೆಸಿಕೊಳ್ಳುವುದೇ ಖುಷಿ ಕೊಡುತ್ತಿತ್ತು. ಈಗ ಯಾವಾಗ ನೋಡಿದರೂ ಚಲನಚಿತ್ರ, ಹಾಡುಗಳು, ಧಾರಾವಾಹಿಗಳು, ನೂರಾರು ವಾಹಿನಿಗಳಲ್ಲಿ, ಬೇಕಾದ ಭಾಷೆಯಲ್ಲಿ. ಬೇಕಾದ ಚಿತ್ರ ನೋಡಬೇಕೆಂದರೆ ಸಿ.ಡಿ ಯಾವಾಗಾದರೂ ಸಿಗುತ್ತದೆ. ಆದರೂ ನಮ್ಮ ಯುವಜನರಿಗೆ ಏನೊ ಅತೃಪ್ತಿ, ಬೇಸರ, ‘‘ಬೋರ್‌’’.

  ಪತ್ರಿಕೆಗಳಲ್ಲಿ ನೋಡಿ, ತುಂಬಾ ಜನ ಯುವಕರು ತಮ್ಮ ಹವ್ಯಾಸ ಏನು ಕೊಟ್ಟಿರುತ್ತಾರೆಂದು. ಟಿ.ವಿ. ನೋಡುವುದು, ಸಂಗೀತ ಕೇಳುವುದು, ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು, ಹೀಗೆ ಮೂರು ನಾಲ್ಕು ವಿಷಯಗಳ ಸುತ್ತ ತಿರುಗುತ್ತವೆ ಅವರ ಚಟುವಟಿಕೆಗಳು. ಹವ್ಯಾಸ ಎನ್ನುವುದು ಬಿಡುವಿನ ವೇಳೆಯ ಸದುಪಯೋಗ. ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಯಾವಾಗ ಹವ್ಯಾಸವಾಯಿತು? ಇವರಿಗೆ ಬಿಡುವಾದಾಗಲೆಲ್ಲ ಹೊಸ ಹೊಸ ಸ್ನೇಹಿತರು ಸಿಗುತ್ತಾರೆಯೆ? ಸಂಗೀತ ಕೇಳುವುದು ಖಂಡಿತ ಒಳ್ಳೆಯ ಅಭ್ಯಾಸ, ಆದರೆ ಅದು ನಮ್ಮ ಶ್ರಮವನ್ನೇನೂ ಬೇಡುವುದಿಲ್ಲ. ಸಂಗೀತ ಕೇಳುತ್ತ ಬೇರೆ ಕೆಲಸ ಕೂಡ ಮಾಡಬಹುದು, ನಾನು ದಿನಾ ಆಫೀಸಿನಲ್ಲಿ ರೇಡಿಯೊ ಕೇಳುತ್ತ ಕೆಲಸ ಮಾಡುತ್ತೇನೆ, ಆದ್ದರಿಂದ ಅದು ಒಂದು ಪ್ರತ್ಯೇಕ ಹವ್ಯಾಸ ಎನ್ನಿಸಿಕೊಳ್ಳುವುದಿಲ್ಲ. ಪುಸ್ತಕ ಓದುವುದು ಹಾಗಲ್ಲ, ಜ್ಞಾನ ಅಥವಾ ಮನರಂಜನೆ ಸಿಗುವುದಲ್ಲದೆ, ಕಲ್ಪನಾ ಶಕ್ತಿಯನ್ನು ಹೆಚ್ಚಿಸುತ್ತದೆ, ಅದು ಒಂದು ಬಹಳ ಒಳ್ಳೆಯ ಹವ್ಯಾಸ.

  ಪ್ರಕೃತಿ ವೀಕ್ಷಣೆ, ನಡಿಗೆ, ಈಜು, ಕಾಡು ಮೇಡು ಅಲೆಯುವುದು ದೈಹಿಕವಾಗಿ ಹಾಗೂ ಮಾನಸಿಕವಾಗಿ ಉಲ್ಲಾಸದಾಯಕ. ಪ್ರಕೃತಿ ಸೌಂದರ್ಯ ಆಸ್ವಾದಿಸುವುದು, ಪ್ರಾಣಿ ಪಕ್ಷಿಗಳ ಬಗ್ಗೆ ತಿಳಿದುಕೊಳ್ಳುವುದು ಎಂಥಾ ಆನಂದದ ಅನುಭವ. ಈಗೀಗ ಹಳ್ಳಿಯ ಕಡೆಯೇ ಇವು ಕಡಿಮೆಯಾಗುತ್ತಿದೆ. ಇನ್ನು ನಗರದ ಜನರಿಗೆ, ಅಪಾರ್ಟ್‌ಮೆಂಟ್‌ಗಳಲ್ಲೆ ಹುಟ್ಟಿ ಬೆಳೆದ ಮಕ್ಕಳಿಗೆ ಅಂಥಾ ಒಂದು ಪ್ರಪಂಚ ಇದೆ ಎನ್ನುವ ಕಲ್ಪನೆಯೇ ಇಲ್ಲ, ಕಾಡು ಮೇಡು ಅಲೆಯುವುದು ಅಂದರೆ ಹೇಗೆ ತಿಳಿಯಬೇಕು.

  ಚಿಕ್ಕ ಮಕ್ಕಳಿಗಾದರೂ ರಜೆಯಲ್ಲಿ ಬೇಸಿಗೆ ಶಿಬಿರ ಇದೆ, ಸ್ವಲ್ಪ ದೊಡ್ಡವರಿಗೆ ಏನೂ ಇಲ್ಲ. ಅವರ ಪ್ರಪಂಚ ಏನಿದ್ದರೂ ಟಿ.ವಿ., ಚಾಟಿಂಗ್‌ ಹಾಗೂ ಎಸ್‌.ಎಮ್‌.ಎಸ್‌. ಗಳೆ. ಅನೇಕ ಕಲಾಕೃತಿಗಳು ಇಂಥಾ ಹವ್ಯಾಸಗಳಿಂದ ಸೃಷ್ಟಿಯಾಗಿವೆ. ಸಂಗ್ರಹಣೆಯಿಂದಲೇ ಸಾಲಾರ್‌ ಜಂಗ್‌ ಸಂಗ್ರಹಾಲಯ ಹುಟ್ಟಿತು. ಬಿಡುವಿನ ವೇಳೆಯ ಪ್ರಯೋಗಗಳಿಂದ ಅನೇಕ ವೈಜ್ಞಾನಿಕ ಸಂಶೋಧನೆಗಳಾಯಿತು. ಯಾಕೆ ಈಗೀಗ ಎಲ್ಲ ಕಡಿಮೆಯಾಗುತ್ತಿದೆ? ಆಧುನಿಕ ಸಲಕರಣೆಗಳು ನಮ್ಮ ಜೀವವನ್ನು ಸುಲಭಗೊಳಿಸಿವೆ, ಆದರೆ ನಮ್ಮ ಕ್ರಿಯಾಶೀಲತೆಯನ್ನು ಕಿತ್ತುಕೊಂಡಿವೆ. ಮಾಹಿತಿ, ಮನೋರಂಜನೆ, ಎಲ್ಲವೂ ಕುಳಿತಲ್ಲಿಯೇ ಸಿಗುತ್ತಿರುವುದರಿಂದ ನಾವು ದೈಹಿಕವಾಗಿ, ಮಾನಸಿಕವಾಗಿ ಸೋಮಾರಿಗಳಾಗಿದ್ದೇವೆ. ಹೀಗೆ ಮುಂದುವರೆದರೆ ಹೇಗೆ? ನೀವೇನಂತೀರಿ?

  ಮುಖಪುಟ / ಸಾಹಿತ್ಯ-ಸಂಸ್ಕೃತಿ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more