ವಲಸಿಗರು ಮತ್ತು ನಾವು

ಎಂದು ಭಾರತದ ವಿಭಜನೆ ಆಯಿತೋ, ಅಂದು ಭಾಷಾ ಮತ್ತು ಕೋಮುಭಾವನೆಗಳ ಬೆಳವಣಿಗೆಗೆ ಕುಮ್ಮಕ್ಕು ಸಿಕ್ಕಿತು.

ಮಹಾತ್ಮಾ ಗಾಂಧಿಯವರು ಈ ಬಗ್ಗೆ ಮರುಗಿದರು. ಅವರ ಸೌಹಾರ್ದ ಭಾವನೆಗಳಿಗೆ ಹೊಸ ರಾಜಕೀಯವು ಮನ್ನಣೆ ನೀಡಲಿಲ್ಲ. ಮುಂದೆ ಯುದ್ಧಗಳೇ ನಡೆದುವು. ನಾವು ಈಗ ಚರಿತ್ರೆಯನ್ನು ತಿದ್ದಲು ಸಾಧ್ಯವಿಲ್ಲ.

ಅದೇರೀತಿ, ಭಾಷಾವಾರು ಪ್ರಾಂತ್ಯಗಳ ರಚನೆಯ ನಂತರ, ಸ್ಥಳೀಯ ಭಾಷೆಗಳಿಗೆ ಪ್ರಾಮುಖ್ಯತೆಯನ್ನು ಕೊಟ್ಟು, ಅವುಗಳ ಜತೆಗೆ ಹಿಂದಿ ಭಾಷೆಯನ್ನು ರಾಷ್ಟ್ರಭಾಷೆಯಾಗಿ ಬಳಸಿ, ಇಂಗ್ಲಿಷ್‌ ಭಾಷೆಯನ್ನು ಅಂತರ್ದೇಶೀಯ ಸಂಪರ್ಕ ಭಾಷೆಯನ್ನಾಗಿ ಬಳಸಬೇಕು ಎಂಬ ತ್ರಿಭಾಷಾ ಸೂತ್ರವನ್ನು ನಮ್ಮ ಕೇಂದ್ರ ಸರಕಾರ ಸೂಚಿಸಿತು. ಆದರೂ, ಭಾಷಾ ವೈಷಮ್ಯವು ನಮ್ಮ ದೇಶದಲ್ಲಿ ಅಲ್ಲಲ್ಲಿ ಹುಟ್ಟಿಕೊಂಡಿತು.

ಭಾರತ ದೇಶದಲ್ಲಿ ಯಾರು ಯಾವ ರಾಜ್ಯದಲ್ಲಿ ಬೇಕಾದರೂ ನೆಲಸಬಹುದು. ಕೇಂದ್ರಾಡಳಿತ ಪ್ರದೇಶ ಮತ್ತು ಕಾಶ್ಮೀರ ರಾಜ್ಯಗಳಲ್ಲಿ ನೆಲೆಸಲು ಅಲ್ಲಿಯ ಸೂಕ್ಷ್ಮ ರಾಜಕೀಯ ವಿದ್ಯಮಾನಗಳಿಂದಾಗಿ ಕೆಲವು ನಿರ್ಬಂಧಗಳನ್ನು ನಮ್ಮ ಸರಕಾರ ಹಾಕಿರಬಹುದು. ಮೇಲಿನ ನಿರ್ಬಂಧಿತ ಪ್ರದೇಶಗಳ ಹೊರತಾಗಿ ಭಾರತೀಯ ಪ್ರಜೆಯು ಯಾವರಾಜ್ಯಕ್ಕೆ ಬೇಕಾದರೂ ಹೋಗಿ ನೆಲಸಬಹುದು.

ಎಲ್ಲಿ ಸುಭದ್ರ ಜೀವನದ ಭರವಸೆ ದೊರೆಯುವುದೋ, ಅಲ್ಲಿಗೆ ಜನರು ಧಾವಿಸಿ ವಲಸೆ ಹೋಗಿ ನೆಲಸುತ್ತಾರೆ. ಇದು ಹಿಂದಿನಿಂದಲೂ ನಡೆದು ಬಂದ ಪರಿಪಾಠ. ಸುಭಿಕ್ಷದ ವಾತಾವರಣ ಇರುವ ನಮ್ಮ ಕರ್ನಾಟಕ ರಾಜ್ಯಕ್ಕೆ ಎಲ್ಲಾ ಕಡೆಗಳಿಂದಲೂ ಬಹು ಭಾಷೆಗಳನ್ನು ಆಡುವ ಜನರು ವಲಸಿಗರಾಗಿ ಬಂದರು. ಈಗಲೂ ಬರುತ್ತಿದ್ದಾರೆ. ವಲಸಿಗ ಜನರು ತಮ್ಮೊಳಗೆ ತಮ್ಮ ಮಾತೃಭಾಷೆಯನ್ನೇ ಆಡಿಕೊಳ್ಳಲಿ ಮತ್ತು ತಮ್ಮಗಳ ಸಾಂಸ್ಕೃತಿಕ ವೈಶಿಷ್ಟ್ಯ ಉಳಿಸಿಕೊಳ್ಳಲಿ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಇಲ್ಲಿ ನೆಲಸುವ ಇತರ ಭಾಷಿಗರು ನಮ್ಮ ರಾಜ್ಯದ ಮುಖ್ಯ ಜೀವನವಾಹಿನಿಯನ್ನು ಸೇರಿಕೊಳ್ಳಲೇಬೇಕು. ಅವರು ನಮ್ಮ ಕರ್ನಾಟಕ ರಾಜ್ಯದ ನಡೆ, ನುಡಿ, ರೀತಿ ಮತ್ತು ರಿವಾಜುಗಳನ್ನು ಕಲಿತು ನಮ್ಮೊಂದಿಗೆ ಸಾಮರಸ್ಯದಿಂದ ಬಾಳಬೇಕು. ಇದು ನಮ್ಮ ಆಸೆ.

ನಮ್ಮ ನಾಡಿನಲ್ಲಿ ಕನ್ನಡದ ಭಾಷೆಯನ್ನು ಬಲ್ಲ ಜನರಿಗೆ ಅಗ್ರ ಮಣೆ ಸಿಗಲಿ. ಇತರ ಭಾಷಿಕರನ್ನು ನಾವು ದ್ವೇಷಿಸುವುದಿಲ್ಲ.

ಆದರೆ, ಅವರು ನಮ್ಮ ಭಾಷೆಯನ್ನು ಆಡುವ ಜನರ ಹಕ್ಕಿನ ಅವಕಾಶಗಳನ್ನು ಕಸಿಯದೇ ಇರಲಿ! ಕನ್ನಡನಾಡಿಗೆ ಬಂದು ತಳ ಊರಿದ ಮೇಲೆ, ನಮ್ಮ ಭಾಷೆಯನ್ನು ಕಲಿತು ಅವರು ‘ನೆಲಸಿಗ ಕನ್ನಡಿಗರು ’ ಅನ್ನಿಸಿಕೊಂಡರೆ ಅವರಿಗೆ ನಮ್ಮ ಸ್ವಾಗತ! ‘ಪರಭಾಷಿಕರು ನಮ್ಮ ಭಾಷೆ ಮತ್ತು ಜೀವನ ಶೈಲಿ ಕಲಿತು ನಮ್ಮ ನಾಡಿನಲ್ಲಿ ಬಾಳಲಿ!’ ಎಂದು ನಾವು ಹಾರೈಸೋಣ.

ನನಗೆ ಗೊತ್ತಿರುವ ಒಂದು ಉದಾಹರಣೆಯನ್ನು ಇಲ್ಲಿ ಕೊಡಲು ಬಯಸುತ್ತೇನೆ. ಒಂದು ಪಂಜಾಬಿ ಕುಟುಂಬ ಕಳೆದ ಮೂವತ್ತೈದು ವರ್ಷಗಳಿಂದ ಕರ್ನಾಟಕದಲ್ಲಿ ವಾಸವಾಗಿದ್ದಾರೆ. ಬೆಂಗಳೂರಿನ ಪೀಣ್ಯದಲ್ಲಿ ಅವರು ನೆಲೆಸಿದ್ದಾರೆ. ಅವರ ಮನೆ ಮಾತು ಇಂದಿಗೂ ಪಂಜಾಬಿ. ಪೀಣ್ಯದ ಕೈಗಾರಿಕಾ ಬಡಾವಣೆಯಲ್ಲಿ ಅವರೊಂದು ಕಾರ್ಯಾಗಾರವನ್ನು ನಡೆಸುತ್ತಾ ಇದ್ದಾರೆ. ಅವರ ಮಕ್ಕಳು ಶಾಲೆಯಲ್ಲಿ ಕನ್ನಡ ಓದು ಬರಹ ಕಲಿತಿದ್ದಾರೆ.

ಅವರ ಕಾರ್ಯಾಗಾರದಲ್ಲಿ ಕೆಲಸ ಮಾಡುವ ಮೂವತ್ತು ಮಂದಿಯಲ್ಲಿ ಇಪ್ಪತ್ತ ನಾಲ್ಕು ಜನರು ಕನ್ನಡಿಗರು. ಉಳಿದ ಆರು ಜನರಲ್ಲಿ ಇಬ್ಬರು ತಮಿಳರು. ಒಬ್ಬರು ಕೇರಳದವರು. ಒಬ್ಬರು ಮಹಾರಾಷ್ಟ್ರದವರು ಮತ್ತು ಇಬ್ಬರು ಪಂಜಾಬಿಗಳು. ಅವರ ಕಾರ್ಯಾಗಾರದಲ್ಲಿ ಬಹುಸಂಖ್ಯೆಯಲ್ಲಿ ಕನ್ನಡಿಗರು ಕೆಲಸ ಮಾಡುತ್ತಾರೆ ಎನ್ನುವುದು ಸಂತೋಷದ ಸಂಗತಿ. ಅವರ ಕಾರ್ಯಾಗಾರದ ಒಳಗಿನ ವ್ಯವಹಾರದ ಭಾಷೆ ಕನ್ನಡವೇ ಆಗಿದೆ.

ಅಲ್ಲಿನ ಎಲ್ಲ ಸದಸ್ಯರೂ ಕನ್ನಡ ಮಾತನಾಡುತ್ತಾರೆ ಮತ್ತು ಹೆಚ್ಚಿನ ಪರಭಾಷೀಯ ಕೆಲಸಗಾರರು ಕನ್ನಡ ಓದಿ ಬರೆಯಲು ಕಲಿತಿದ್ದಾರೆ. ಇಂತಹ ವಲಸಿಗರನ್ನು ನಾವು ಪರಭಾಷಿಗಳು ಎಂದು ದ್ವೇಷಿಸಲು ಸಾಧ್ಯವೆ? ನಮ್ಮ ನಾಡಿಗೆ ಬಂದು ನೆಲಸಿದ ಮತ್ತು ನೆಲಸುವ ವಲಸಿಗರು ಮೇಲ್ಕಾಣಿಸಿದ ಪಂಜಾಬಿ ಕುಟುಂಬದ ಮೇಲ್ಪಂಕ್ತಿಯನ್ನು ಅನುಸರಿಸಲಿ!

ಅವರಿಗೆ ನಮ್ಮ ಸ್ವಾಗತ!

ರೆವೆರೆಂಡ್‌ ಕಿಟ್ಟೆಲರು ಜರ್ಮನಿಯಿಂದ ಬಂದು ಕನ್ನಡಿಗರಾದರು. ತಳಕು ವೆಂಕಣ್ಣಯ್ಯನವರು, ಕೈಲಾಸಂ ಅವರು, ರಾಜರತ್ನಂ ಅವರು, ಮಾಸ್ತಿ ವೆಂಕಟೇಶ ಐಯ್ಯಂಗಾರ್‌ ಮೊದಲಾದ ಮಹನೀಯರ ಮನೆಮಾತು ಕನ್ನಡ ಆಗಿರಲಿಕ್ಕಿಲ್ಲ. ಆದರೆ, ಅವರೆಲ್ಲರೂ ಕನ್ನಡಕ್ಕೆ ಮಾಡಿದ ಸೇವೆ ಹಾಗೂ ಕನ್ನಡಕ್ಕೆ ನೀಡಿದ ಕೊಡುಗೆ ಅಪಾರ!

ಮೇಲೆ ನಾನು ನಮೂದಿಸಿದ ಪಂಜಾಬಿ ಕುಟುಂಬಕ್ಕೆ ತದ್ವಿರುದ್ಧ ನಡವಳಿಕೆಯ ಇನ್ನೊಂದು ಕುಟುಂಬವನ್ನು ನಾನು ಬಲ್ಲೆ. ಅದು ಒಂದು ಸಿಂಧೀ ಕುಟುಂಬ. ಅವರು ಬೆಂಗಳೂರಿಗೆ ಬಂದು ನೆಲಸಿ ನಲ್ವತ್ತೈದು ವರ್ಷಗಳೇ ಕಳೆದಿವೆ. ಆದರೂ, ಅವರ ಮನೆಯಲ್ಲಿ ಯಾರಿಗೂ ಕನ್ನಡ ಬರುವುದಿಲ್ಲ! ‘ನಿಮಗೆ ಪ್ರಾದೇಶಿಕ ಭಾಷೆ ಬರುವುದಿಲ್ಲವೇ?’ ಎಂದು ಪ್ರಶ್ನಿಸಿದರೆ, ‘ಬರುತ್ತೆ! ನಮಗೆ ಲೋಕಲ್‌ ಲ್ಯಾಂಗ್ವೇಜ್‌ ತಮಿಳು ಮಾತಾಡಲು ಬರುತ್ತೆ!’ ಎನ್ನುತ್ತಾರೆ!

ಇಂಗ್ಲಿಷ್‌, ಹಿಂದಿ ಮತ್ತು ತಮಿಳು ಬಳಸಿ ಅವರು ತಮ್ಮ ಜೀವನವನ್ನು ನಿರರ್ಗಳವಾಗಿ ಬೆಂಗಳೂರಿನಲ್ಲಿ ಕಳೆಯುತ್ತಾ ಇದ್ದಾರೆ.

ಅವರಿಗೆ ಇದುವರೆಗೆ ಕನ್ನಡ ಕಲಿಯುವ ಅಗತ್ಯವೇ ಕಂಡಿಲ್ಲ ಎನ್ನುವುದೊಂದು ವಿಪರ್ಯಾಸ. ಈ ಪರಿಸ್ಥಿ ಉಂಟಾಗಲು ಅಚ್ಚ ಕನ್ನಡಿಗರಾದ ನಾವೇ ಕಾರಣರು ಅಲ್ಲವೇ? ಈ ಅಪವಾದಕ್ಕೆ ನಾನು ಕೂಡಾ ಹೊರತಲ್ಲ. ಅವರುಗಳೊಡನೆ ನಾನು ಇಂದಿಗೂ ಇಂಗ್ಲಿಷ್‌ ಅಥವಾ ಹಿಂದಿ ಭಾಷೆಗಳನ್ನು ಬಳಸುತ್ತಾ ಮಾತನಾಡುತ್ತೇನೆ. ನನ್ನಂತೆ ಇತರರೂ ಅವರೊಡನೆ ಹಿಂದಿ, ಇಂಗ್ಲಿಷ್‌ ಅಥವಾ ತಮಿಳು ಭಾಷೆಗಳಲ್ಲಿ ವ್ಯವಹರಿಸಿ ಅವರನ್ನು ಸಂತೋಷವಾಗಿಯೇ ಇಟ್ಟಿದ್ದಾರೆ.

ನಮ್ಮ ಸ್ನೇಹಪರ ನೀತಿ ಇಂದಿಗೆ ‘ನಮ್ಮ ಅಸ್ತಿತ್ವವನ್ನೇ ಅಳಿಸುವತ್ತ ಸಾಗುತ್ತಿರುವುದು’ ನಿಜವಾಗಿಯೂ ದುಃಖದ ಸಂಗತಿ.

ಇದೇ ಕುಟುಂಬಕ್ಕೆ ಅವರ ನಿತ್ಯ ಜೀವನಕ್ಕೆ ತಮಿಳು ಕಲಿಯುವುದು ಅನಿವಾರ್ಯ ಆಯಿತಂತೆ! ‘ಅದೇರೀತಿ ಕನ್ನಡವನ್ನು ಕಲಿಯುವುದೂ ‘ ಅನಿವಾರ್ಯ ’ ಆಗಿದ್ದರೆ, ಅವರು ಖಂಡಿತವಾಗಿ ಕನ್ನಡ ಕಲಿಯುತ್ತಿದ್ದರು! ’ ಎಂದು ನನಗೆ ಅನಿಸುತ್ತಿದೆ. ಅವರನ್ನು ದೂರಿ ಫಲವಿಲ್ಲ. ನಮ್ಮ ಸ್ನೇಹಪರತೆ ಮತ್ತು ಪರಭಾಷಾ ಸಹಿಷ್ಣುತೆಗಳು ನಮಗೆ ಆರಿವಿಲ್ಲದಂತೆ, ನಮ್ಮ ನಾಡಿನಲ್ಲೇ, ಇಂತಹ ವಿಪರ್ಯಾಸಗಳಿಗೆ ಎಡೆ ಮಾಡಿಕೊಟ್ಟಿವೆ.

ಆಂಗ್ಲರು ನಮ್ಮ ದೇಶಬಿಟ್ಟು ತೊಲಗಿ ಈಗ ಅರುವತ್ತು ವರುಷಗಳೇ ಕಳೆದುವು. ಆಂಗ್ಲ ಭಾಷೆಯ ವ್ಯಾಮೋಹ ನಮ್ಮನ್ನು ಇನ್ನೂ ಬಿಟ್ಟಿಲ್ಲ! ನಮ್ಮ ಮಕ್ಕಳು ಇಂದು ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಆಂಗ್ಲ ಮಾಧ್ಯಮ ವಿದ್ಯಾಭ್ಯಾಸ ಅವರ ಮುಂದಿನ ಶಿಕ್ಷಣಕ್ಕೆ ಪೂರಕ ಎಂಬ ಭಾವನೆ ನಮ್ಮಲ್ಲಿ ನೆಲಸಿದೆ.

ಚಿಕ್ಕಂದಿನಲ್ಲಿ ‘ಅಪ್ಪಾ, ಅಮ್ಮಾ!’ ಎಂದು ಇಂಪಾಗಿ ಕನ್ನಡ ಭಾಷೆಯಲ್ಲಿ ನಮ್ಮನ್ನು ಕರೆಯುತ್ತಾ ಇದ್ದ ಮಕ್ಕಳು, ಆಂಗ್ಲ ಮಾಧ್ಯಮ ಶಾಲೆಗೆ ಸೇರಿದೊಡನೆ, ನಮ್ಮನ್ನು ‘ಮಮ್ಮಿ, ಡ್ಯಾಡಿ!’ ಎಂದು ಕರೆಯಲು ತೊಡಗುತ್ತಾರೆ. ಆಗ, ನಮಗೆ ಸ್ವರ್ಗಕ್ಕೆ ಮೂರೇ ಗೇಣು! ‘ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಆಗಲಿ!’ ಎಂದು ಹೆಚ್ಚಿನ ತಂದೆತಾಯಂದಿರು ಮಕ್ಕಳೊಡನೆ ಮನೆಯಲ್ಲೂ ಇಂಗ್ಲಿಷ್‌ ಮಾತನಾಡುವ ರೂಢಿ ಮಾಡಿಕೊಂಡಿದ್ದಾರೆ. ಈ ರೀತಿ ಇಂಗ್ಲಿಷ್‌ ಮಾತನಾಡುವುದು ಒಂದು ಸಾಮಾಜಿಕ ಪ್ರತಿಷ್ಟೆಯ ವಿಷಯವೂ ಹೌದು! ಈ ತರಹದ ‘ಸೋಗಲಾಡಿತನವನ್ನು’ ಇಂದು ನೀವು ನನ್ನ ಮನೆಯಲ್ಲೂ ಕಾಣಬಹುದು!

ನಾವು ಸರಿಯಾಗಿ ಕನ್ನಡಿ ನೋಡಿಕೊಂಡಾಗ ಮಾತ್ರ ನಮ್ಮ ಮುಖದಲ್ಲಿನ ಕಪ್ಪು ಮಚ್ಚೆಗಳು ಎದ್ದು ಕಾಣುತ್ತವೆ.

ಈ ಅಂಗೈ ಹುಣ್ಣನ್ನು ನೋಡಲು ಕನ್ನಡಿ ಬೇಕೆ? ನಮ್ಮ ಈ ಸೋಗಲಾಡಿತನದಿಂದಾಗಿ, ನಮ್ಮ ಮಕ್ಕಳು ತಮ್ಮೊಳಗೆ ಮತ್ತು ಇತರರೊಂದಿಗೆ ಇಂಗ್ಲಿಷ್‌ ಭಾಷೆ ಅಥವಾ ಹಿಂದಿ ಭಾಷೆಗಳಲ್ಲಿ ವ್ಯವಹರಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಅವರು ಇಂಗ್ಲಿಷ್‌ ಮತ್ತು ಹಿಂದೀ ಭಾಷೆಗಳ ಪತ್ರಿಕೆಗಳನ್ನು ಮಾತ್ರ ಓದಲು ಬಯಸುತ್ತಾರೆ. ಅದೇ ಭಾಷೆಗಳ ಸಿನೆಮಾ ಮತ್ತು ಟೀವಿ ಚಾನೆಲ್‌ಗಳನ್ನು ನೋಡಲು ಇಷ್ಟ ಪಡುತ್ತಾರೆ. ಇದು ಅವರ ತಪ್ಪೇ? ಅಥವಾ ಅವರನ್ನು ಹೆತ್ತ ಹುಟ್ಟು ಕನ್ನಡಿಗರಾದ ನಮ್ಮ ತಪ್ಪೇ? ಮೊದಲು ಈ ಸೋಗಲಾಡಿತನವನ್ನು ಬಿಡಲು ಪ್ರಯತ್ನ ಮಾಡೋಣ!

ಕನ್ನಡದ ಮಾತು ಮತ್ತು ಕನ್ನಡದ ಪ್ರೀತಿ ಮೊದಲು ನಮ್ಮ ಮನೆಗಳಲ್ಲೇ ಶುರುವಾಗಲಿ! ನಮ್ಮನು ನೋಡಿ ಇತರರು ಕಲಿಯಲಿ! ವಲಸೆಬಂದ ಇತರ ಭಾಷಿಗರಿಗೆ ಕನ್ನಡ ಕಲಿಯುವ ಅನಿವಾರ್ಯತೆ ಕಂಡುಬಂದರೆ, ಅವರು ನಮ್ಮ ಭಾಷೆಯನ್ನು ಕಲಿತೇ ಕಲಿಯುತ್ತಾರೆ. ಇಂದಿನ ಬೆಂಗಳೂರು ನಗರ ಹಲವು ಭಾಷೆಗಳ ಬೀಡು. ಆದರೂ, ಇಲ್ಲಿಯ ಜೀವನದಲ್ಲಿ ಸಾಮರಸ್ಯವಿದೆ. ಜನ ಜೀವನದಲ್ಲಿ ಶಾಂತಿ ಇದೆ. ಆದ್ದರಿಂದಲೇ. ಇತರರು ಇಲ್ಲಿಗೆ ಬಂದು ನೆಲೆಸಲು ಇಷ್ಟ ಪಡುತ್ತಾರೆ.

ನಿನ್ನೆ ನಡೆದ ಒಂದು ಘಟನೆ ನನ್ನ ಮನದಲ್ಲಿ ಇನ್ನೂ ಹಸಿರಾಗಿ ಇದೆ. ನಿನ್ನೆ ನಾವು ಫೋರಮ್‌ ಎಂಬ ಬಹು ಚಿತ್ರ ಮಂದಿರಗಳ ಮಳಿಗೆಗೆ ಚಿತ್ರ ನೋಡಲು ಹೋಗಿದ್ದೆವು. ಯಾವುದೋ ಒಂದು ಚಿತ್ರ ಮಂದಿರದಲ್ಲಿ ಚಿತ್ರನೋಡುತ್ತಾ ಇದ್ದ ದಂಪತಿಗಳ ಎರಡು ವರ್ಷದ ಮಗುವಿಗೆ ಹಠಾತ್ತಾಗಿ ಅಪಸ್ಮಾರ ( ಫಿಟ್ಸ್‌ ) ಬಂದಿತು. ಆರೋಗ್ಯವಂತವಾಗಿದ್ದ ಆ ಪುಟ್ಟ ಮಗುವಿಗೆ ಹಿಂದೆಂದೂ ಹೀಗೆ ಆಗಿರಲಿಲ್ಲವಂತೆ! ಹೆತ್ತವರ ಗೋಳು ನೋಡಲು ತೀರದು! ಮಗುವಿನ ತಾಯಿ ಗೋಳೋ ಎಂದು ಜೋರಾಗೇ ಅಳುತ್ತಿದ್ದಳು!

ಕನ್ನಡ ಮಾತು ಮಾತ್ರ ಆಡುತ್ತಿದ್ದ ಆ ಮಗುವಿನ ತಂದೆತಾಯಂದಿರು ಮಗುವನ್ನು ಚಿತ್ರ ಮಂದಿರದ ಹೊರಗೆ ಕರೆದುಕೊಂಡು ಬಂದು ಶೈತ್ಯೋಪಚಾರ ನೀಡಲು ತೊಡಗಿದರು. ಅಷ್ಟರಲ್ಲಿ ಕನ್ನಡ ಭಾಷೆಯೇ ಬರದ ಒಬ್ಬ ಡಾಕ್ಟರ್‌ ಮಹಿಳೆ, ತಾನು ಚಿತ್ರ ನೋಡುವುದನ್ನು ಬಿಟ್ಟು, ಮಗುವಿಗೆ ತುರ್ತು ಪ್ರಥಮ ಚಿಕಿತ್ಸೆ ನೀಡಿದರು. ಫೋರಮ್‌ ಮಳಿಗೆಗೆ ಶಾಪಿಂಗ್‌ ಮಾಡಲು ಅಥವಾ ಸಿನೆಮಾ ನೋಡಲು ಬಂದಿದ್ದ ಹತ್ತಾರು ಭಾಷೆಗಳನ್ನು ಆಡುವ ಗ್ರಾಹಕರು ಮತ್ತು ಅಲ್ಲಿನ ವಿವಿಧ ಮಳಿಗೆಗಳ ಬಹು ಭಾಷೀ ಜನರು ಮಗುವಿನ ಸುತ್ತ ನೆರೆದು ತಮ್ಮಿಂದ ಏನು ಸಹಾಯ ಬೇಕು? ಎಂದು ಕೇಳಿದರು.

ಡಾಕ್ಟರರು ಕೊಟ್ಟ ಪ್ರಥಮ ಚಿಕಿತ್ಸೆಯಿಂದಾಗಿ, ಎರಡು ನಿಮಿಷಗಳಲ್ಲೇ ಮಗು ಸುಧಾರಿಸಿ ಕೊಂಡಿತು. ಮಗು ಮತ್ತು ಅದರ ತಂದೆ ತಾಯಿಗಳನ್ನು ಅವರ ಮನೆಗೆ ಕರೆದೊಯ್ದು ಬಿಡುವುದಾಗಿ, ಕಾರುಗಳನ್ನು ಹೊಂದಿದ ಹತ್ತಾರು ಮಂದಿ ಸಹಾಯ ಹಸ್ತ ನೀಡಿದರು. ಆದರೆ, ಆ ಮಹಿಳಾ ಡಾಕ್ಟರರೇ ಮಗು ಮತ್ತು ಅದರ ಪಾಲಕರನ್ನು ಅವರ ಮನೆಗೆ ಬಿಡುತ್ತಿರುವುದಾಗಿ ಹೇಳಿ, ಮಗುವನ್ನು ಎತ್ತಿಕೊಂಡು ಕಾರು ಪಾರ್ಕ್‌ ಮಾಡುವ ಜಾಗಕ್ಕೆ ನಡೆದರು.

ನೋಡಿ! ಬೆಂಗಳೂರಿನ ಜನರು ಎಷ್ಟು ಸುಹೃದಯರು! ಕಷ್ಟದಲ್ಲಿರುವ ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ಉಳ್ಳವರು! ಈ ಸಹೃದಯತೆಯನ್ನು ಎಲ್ಲಾ ಭಾಷೆಗಳನ್ನಾಡುವ, ಎಲ್ಲಾ ಸ್ತರಗಳ ಜನರಲ್ಲೂ ನಾವು ಕಾಣುತ್ತೇವೆ.

ಇದೇ ಬೆಂಗಳೂರಿನ ವೈಶಿಷ್ಟ್ಯ.ಇಂತಹ ಸೌಹಾರ್ದಮಯ ಜೀವನವನ್ನು ಭಾಷಾ ದ್ವೇಷದ ದಳ್ಳುರಿಯಲ್ಲಿ ಬೇಯಿಸಿ ಕೊನೆಗೊಳಿಸುವ ಪ್ರಯತ್ನವನ್ನು ನಾವು ಎಂದಿಗೂ ಮಾಡಬಾರದು.

‘ಕುಂಬಾರನಿಗೆ ವರುಷ, ದೊಣ್ಣೆಗೆ ಒಂದೇ ನಿಮಿಷ ’ ಎನ್ನುವ ಗಾದೆಯನ್ನು ನಾವು ನೆನಪಿನಲ್ಲಿ ಇಟ್ಟು ಕೊಂಡು, ನಾವು ಇತರ ಭಾಷಿಗರನ್ನು ಒಲಿಸಿ, ಓಲೈಸಿ, ನಮ್ಮ ಭಾಷೆಯಾದ ಕನ್ನಡವನ್ನು ಪರಭಾಷಿಗರು ಗೌರವಿಸಿ ಕಲಿಯುವಂತೆ ಪ್ರೇರೇಪಿಸಬೇಕು. ಇದಕ್ಕಾಗಿ, ನಾವೇ ಮೊದಲು ಪರಭಾಷಾ ಮೋಹವನ್ನು ಕಡಿಮೆ ಮಾಡಿಕೊಂಡು, ನಮ್ಮ ಸ್ವಂತಿಕೆಯನ್ನು ಮತ್ತು ಸ್ವಾಭಿಮಾನವನ್ನು ಮೊದಲು ಬೆಳೆಸಿಕೊಳ್ಳಬೇಕು.

ಇದಕ್ಕೆ ಬಹಳ ಸಮಯ ಹಿಡಿಯಬಹುದು! ಆದರೆ, ಈ ತರಹದ ಬದಲಾವಣೆಯನ್ನು ಖಂಡಿತವಾಗಿ ಕನ್ನಡಿಗರು ತರಲು ಸಾಧ್ಯ. ಘೋಷಣೆಗಳನ್ನು ಕೂಗಿ, ಕಲ್ಲು ಎಸೆದರೆ ಆಗದ, ಈ ಕೆಲಸವನ್ನು ಆದಷ್ಟು ಬೇಗನೆ ನಾವು ಮಾಡಿ ತೋರಿಸಬೇಕು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+