ಕರ್ನಾಟಕದ ಸುವರ್ಣ ಪುಟಗಳು!
ಹೋರಾಟದ ಹೆಜ್ಜೆಗಳು :
ಇಂತಹ ವೈಭವದ ಇತಿಹಾಸವಿದ್ದ ಕನ್ನಡಿಗನ ಅಂತ್ಯದ ಆರಂಭವಾದದ್ದು ತಾಳಿಕೋಟೆಯ ಯುದ್ಧದಿಂದ. ನವಾಬರ ಸೇನೆಯೆದುರು ಕುತಂತ್ರಕ್ಕೆ ರಾಮರಾಯನ ಸೈನ್ಯ ಬಲಿಯಾದ ಘಳಿಗೆ ಇಡೀ ಕನ್ನಡ ಕುಲದ ಸರ್ವನಾಶಕ್ಕೆ ಮುನ್ನುಡಿ ಬರೆಯಿತು. ಹಂಪೆಯ ವೈಭವ ಮಣ್ಣಾಗುವುದರ ಜೊತೆಯಲ್ಲೇ ಕನ್ನಡಿಗನ ಸ್ವಾಭಿಮಾನವೂ ಮುಕ್ಕಾಗಿ ಹೋಯಿತು. ಅಂದು ಪರಕೀಯರ ಆಳ್ವಿಕೆಗೆ ತುತ್ತಾದ ನಾಡು ನಾನಾ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಯಿತು.
ಆಂಗ್ಲರ ಆಳ್ವಿಕೆಗೆ ಭಾರತ ಒಳಗಾದ ನಂತರವೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಮೈಸೂರು, ಮುಂಬೈ, ಮದರಾಸು ಸೇರಿದಂತೆ 22 ಸಂಸ್ಥಾನಗಳಡಿಯಲ್ಲಿ ಕನ್ನಡನಾಡು ಚದರಿಹೋಗಿತ್ತು. ಸ್ವತಂತ್ರಪೂರ್ವದಿಂದಲೇ ಕನ್ನಡಿಗರೆಲ್ಲ ಒಂದೇ ಆಳ್ವಿಕೆಯ ತಮ್ಮದೇ ನಾಡನ್ನು ಹೊಂದುವ ಚಿಂತನೆ ಪ್ರಾರಂಭವಾಯಿತು.
ಡೆಪ್ಯೂಟಿ ಚನ್ನಬಸಪ್ಪನಂತಹ ಹಿರಿಯರು, ಆಲೂರು ವೆಂಕಟರಾಯರಂತಹ ದಾರ್ಶನಿಕರೂ, ಉಜ್ವಲ ರಾಷ್ಟ್ರಪ್ರೇಮಿಗಳು, ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪನವರಂತಹ ಕೆಲ ಮುತ್ಸದ್ದಿಗಳೂ, ಅ.ನ.ಕೃಷ್ಣ ರಾಯರಂತಹ ಹೋರಾಟಗಾರರೂ ಈ ಬಗ್ಗೆ ಕಾರ್ಯೋನ್ಮುಖರಾದರು. ಧಾರವಾಡದಲ್ಲಿ ವಿದ್ಯಾವರ್ಧಕ ಸಂಘ ಅಸ್ತಿತ್ವಕ್ಕೆ ಬಂದಿತು.
ಏಕೀಕರಣಕ್ಕೆ ತೀವ್ರವಾದ ವಿರೋಧ ಮೈಸೂರು ಪ್ರಾಂತ್ಯದಲ್ಲಿ ಕೆಲವು ಕಡೆ ಕೇಳಿ ಬಂತು. ಕನ್ನಡ ನಾಡಿನ ಏಕೀಕರಣ ಹೋರಾಟ ಆರಂಭವಾಯಿತು. ಸಹಸ್ರಾರು ಹೋರಾಟಗಾರರ ತ್ಯಾಗ ಬಲಿದಾನಗಳು ಹುಸಿಹೋಗಲಿಲ್ಲ. ಏಕೀಕರಣ ಹೋರಾಟದಲ್ಲಿ ಬಳ್ಳಾರಿಯ ರಂಜಾನ್ ಸಾಬ್ ಹುತಾತ್ಮರಾದರು.
ಆಂಧ್ರಪ್ರದೇಶದ ಪೊಟ್ಟುಲು ಶ್ರೀರಾಮುಲು ಅವರ ಅಮರಾಣಾಂತ ಉಪವಾಸ, ಮರಣ ಮತ್ತು ಅದು ಉಂಟುಮಾಡಿದ ವಿಪ್ಲವದಿಂದ, ಕೇಂದ್ರಸರ್ಕಾರ ಭಾಷಾವಾರು ಪ್ರಾಂತ್ಯ ರಚನೆಯ ಅನಿವಾರ್ಯತೆಗೆ ಒಳಗಾಯಿತು. ಆಗ 22 ಭಾಗಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ನಾಡು 1956ರಲ್ಲಿ ಏಕೀಕರಣವಾಗಿ ವಿಶಾಲ ಮೈಸೂರು ರಾಜ್ಯವಾಗಿ ಅಸ್ತಿತ್ವಕ್ಕೆ ಬಂದಿತು. ಮುಂದೆ 1973ರಲ್ಲಿ ಇದು ಕರ್ನಾಟಕ ರಾಜ್ಯವೆಂದು ಮರುನಾಮಕರಣ ಹೊಂದಿತು.
ಸಾಧನೆ-ಸವಾಲುಗಳು :
ಶತಮಾನದ ದೀರ್ಘ ಹೋರಾಟವೊಂದು ಸಫಲಗೊಂಡು ಇದೀಗ 50 ವರ್ಷಗಳಾದವು. ಈ 50 ವರ್ಷಗಳಲ್ಲಿ ಕನ್ನಡ ನಾಡು ನಾನಾ ಮಜಲುಗಳನ್ನು ಹಾದು ಬಂದಿದೆ. ದೇಶದಲ್ಲಿ ಬೀಸಿದ ಕೈಗಾರಿಕಾ ಕ್ರಾಂತಿಯ ಅಲೆಯಲ್ಲಿ ಯಶಸ್ವಿಯಾಗಿ ದಡ ಸೇರಿರುವ ಕರ್ನಾಟಕ ಇಂದು ಜಾಗತೀಕರಣದ ಸವಾಲುಗಳಿಗೆ ತೆರೆದು ಕೊಳ್ಳುತ್ತಾ ಜಗತ್ತಿನ ಗಮನ ಸೆಳೆಯುತ್ತಿದೆ.
ಮಾಹಿತಿ ತಂತ್ರಜ್ಞಾನದ, ಜೈವಿಕ ತಂತ್ರಜ್ಞಾನದ, ರಕ್ಷಣಾ ಉತ್ಪನ್ನಗಳ, ವೈಮಾನಿಕ ಉತ್ಪನ್ನಗಳ ಕ್ಷೇತ್ರಗಳಲ್ಲಿ ಉನ್ನತ ಸಾಧನೆಯ ಯಶಸ್ಸಿನ ಹಾದಿಯಲ್ಲಿ ಸಾಗಿದೆ.
ಸುವರ್ಣ ಸಂಭ್ರಮದ ಈ ಸಮಯದಲ್ಲಿ ಇಂತಹ ಯಶಸ್ಸಿನ ಜೊತೆಯಲ್ಲೇ ಭಾಷೆ, ಸಂಸ್ಕೃತಿಗಳಿಗೆ ಎದುರಾಗಿರುವ ಹೊಸ ಹೊಸ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಬೇಕಾದ ಅನಿವಾರ್ಯತೆಗೆ ಕನ್ನಡಿಗ ಒಳಗಾಗಿದ್ದಾನೆ. ಇಂದು ನಾವು ಜಾಗತೀಕರಣದ ಸದುಪಯೋಗ ಪಡೆಯುತ್ತಲೇ, ಅನಿಯಂತ್ರಿತ ವಲಸೆಯ ಹೊಡೆತಕ್ಕೆ ಎದೆಕೊಟ್ಟು ನಿಂತು ಕನ್ನಡತನವನ್ನು ಉಳಿಸಿಕೊಳ್ಳಬೇಕಾಗಿದೆ. ಕನ್ನಡ ನಾಡಿನ ಗತವೈಭವದ ಪುನರ್‌ಸಾಕಾರಕ್ಕೆ ಪಣತೊಡಬೇಕಾಗಿದೆ.
ರಾಷ್ಟ್ರೀಯತೆ ಮತ್ತು ಉದ್ಯೋಗಾವಕಾಶಗಳ ನೆಪದಲ್ಲಿ ಕನ್ನಡದಿಂದ ದೂರವಾಗದೆ ಪ್ರಪಂಚದ ಜ್ಞಾನ ವಿಜ್ಞಾನ ತಂತ್ರಜ್ಞಾನಗಳನ್ನು ಕನ್ನಡಕ್ಕೆ ತಂದು ಮುಂದಿನ ಪೀಳಿಗೆಗೆ ಸುಭದ್ರ ಕರ್ನಾಟಕವನ್ನು ಹಸ್ತಾಂತರಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ.











Click it and Unblock the Notifications