• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಾಮಳೆಯ ಭೀತಿಯಲ್ಲಿ ಮುಂಬಯಿ ಜನತೆ!

By Staff
|

ಕಳೆದ 2-3ದಿನಗಳಿಂದ ಮುಂಬೈನಲ್ಲಿ ಮಳೆ ಸುರಿಯುತ್ತಿದೆ. ಶುಕ್ರವಾರ ಲಭ್ಯವಿರುವ ವರದಿಗಳ ಪ್ರಕಾರ, ಮಹಾರಾಷ್ಟ್ರದಲ್ಲಿ ಮಳೆ ಆರ್ಭಟಕ್ಕೆ 19ಮಂದಿ ಮೃತಪಟ್ಟಿದ್ದಾರೆ. ಮಳೆಯೆಂದರೆ ಮುಂಬೈ ಜನರು ಹೆದರುತ್ತಾರೆ. ಕಳೆದ ವರ್ಷದ ಮಹಾಮಳೆ ನೆನಪಿಸಿಕೊಂಡು ಬೆಚ್ಚಿಬೀಳುತ್ತಾರೆ. ಈಗ ಮುಂಬೈನಲ್ಲಿ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ಒಂದು ಪ್ರತ್ಯಕ್ಷ ವರದಿ.

ಮುಂಬಯಿಯಲ್ಲಿ ಮತ್ತೊಮ್ಮೆ ನಿಸರ್ಗ ಮತ್ತು ಮಾನವನ ಮಧ್ಯೆ ಸೆಣಸಾಟ ಪ್ರಾರಂಭವಾಗಿದೆ. ಗೆಲುವು ಯಾರಿಗೆ ಕಾದು ನೋಡಬೇಕು.

ಕಳೆದ ವಾರ ಕೇರಳ ಮತ್ತು ಮಂಗಳೂರುಗಳಲ್ಲಿ ಬಿರುಸಿನ ಮಳೆ ಎಂದು ಸುದ್ದಿಯಾಗಿತ್ತು. ಅದರ ಆಧಾರದ ಮೇಲೆ ಇನ್ನು ಹದಿನೈದು ದಿನಗಳಲ್ಲಿ ಮುಂಬಯಿಯಲ್ಲಿ ಮಳೆ ಬರಬಹುದೆಂದು ಹವಾಮಾನ ಇಲಾಖೆಯವರು ಘೋಷಿಸಿದ್ದರು. ಕಳೆದ ವರ್ಷದ ಜುಲೈ 26ರ ಮಳೆಯ ಮಾರಣ ಹೋಮದ ನಂತರ ಕೇಂದ್ರ ಸರ್ಕಾರದ ಸಹಾಯದಿಂದ ಮುಖ್ಯ ರಸ್ತೆಗಳನ್ನು ಕಾಂಕ್ರೀಟ್‌ ಮಾಡುವ ಕೆಲಸ ಇನ್ನೂ ನಡೆದೇ ಇದೆ. ಅಂದಿನಿಂದ ರಸ್ತೆಗಳಲ್ಲಿ ವಾಹನಗಳ ಸಂಚಾರ ಕಿರಿಕಿರಿಯಾಗಿದೆ. ಮುಂದಿನ ಒಳ್ಳೆಯ ದಿನಗಳ ಎದುರು ನೋಡುವಿಕೆಯಲ್ಲಿ ಜನಗಳು ಎಲ್ಲ ಕಷ್ಟಗಳನ್ನೂ ಮರೆತು ಸರಕಾರದ ಈ ರಸ್ತೆ ನಿರ್ಮಾಣದ ಕಾರ್ಯದಲ್ಲಿ ಹೊಂದಿಕೊಂಡು ನಡೆಯುತ್ತಿದ್ದಾರೆ.

ನಿನ್ನೆ(ಮೇ.30)ಯ ದಿನ ಬೆಳಗ್ಗೆ ಸಣ್ಣದಾಗಿ ಮಳೆ ಬಂತು. ಇಲ್ಲಿಯವರೆವಿಗೆ ಇದ್ದ ಉರಿ ಸೆಕೆಯಿಂದ ಜನಗಳಿಗೆ ಸ್ವಲ್ಪ ಸಮಾಧಾನ ಸಿಕ್ಕಿತ್ತು. ಆಗ ಮತ್ತೆ ಇನ್ನೊಂದು ವಾರದಲ್ಲಿ ಮಳೆ ಬರಬಹುದೆಂದು ಸುದ್ದಿಯಾಯಿತು. ಇನ್ನೊಂದು ವಾರದಲ್ಲಿ ಮಳೆ ಬಂದು ಸೆಕೆ ಕಡಿಮೆಯಾಗಬಹುದೆಂದು ಎಲ್ಲರೂ ಸಂತಸಪಡುತ್ತಿದ್ದೆವು.

ಈ ವರ್ಷ ಕಳೆದ ವರ್ಷದಂತೆ ಹೆಚ್ಚಿನ ಮಳೆ ಬಾರದೆಂದೂ, ಹೆಚ್ಚಿನ ಅನಾಹುತಕ್ಕೆ ಅವಕಾಶವಿಲ್ಲವೆಂದು ಹವಾಮಾನ ಇಲಾಖೆಯವರು ತಿಳಿಸಿದ್ದರು. ಅದೂ ಅಲ್ಲದೇ ಸಮುದ್ರದಲ್ಲಿ ಉಬ್ಬರವಿರುವ 12 ದಿನಗಳನ್ನು ಸೂಚಿಸಿ ಅಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗಬಹುದೆಂದೂ, ಜನಗಳು ಮುನ್ನೆಚ್ಚರಿಕೆ ವಹಿಸಬೇಕೆಂದೂ ತಿಳಿಸಿದ್ದರು. ಇದೆಲ್ಲಕ್ಕೂ ನಾವು ಸಿದ್ಧವಾಗುತ್ತಿದ್ದೆವು. ಇದೇ ಸಮಯದಲ್ಲಿ, ನಿನ್ನೆ ರಾತ್ರಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಯಿತು. ಅದರ ಆಧಾರದ ಮೇಲೆ ಮುಂದಿನ 48 ಘಂಟೆಗಳಲ್ಲಿ ಜೋರು ಮಳೆಯಾಗಬಹುದೆಂದೂ, ಈ ವರುಷದ ಮಳೆಗಾಲ 10 ದಿನಗಳಿಗೆ ಮುಂಚಿತವಾಗಿ ಶುರುವಾಗುವುದೆಂದೂ ಸುದ್ದಿಯಾಗಿತ್ತು.

ಇಂದು(ಮೇ.31) ಬೆಳಗ್ಗೆಯೂ ಸಹ ಸ್ವಲ್ಪ ಹನಿ ಮಳೆಯಾಯಿತು. ಇವತ್ತು ಹೆಚ್ಚಿನ ಮಳೆ ಬರಲಾರದೆಂದು ಎಲ್ಲರೂ ಉದಾಸೀನರಾಗೇ ಇದ್ದರು. ಮಧ್ಯಾಹ್ನ 4 ಘಂಟೆಗೆ ಜೋರಾಗಿ ಮಳೆ ಬಂದಿತು. ಆಗ ನಮ್ಮ ಬ್ಯಾಂಕಿನ ಹೆಚ್ಚಿನ ಕರ್ಮಚಾರಿಗಳು ಬೇಗನೇ ಮನೆಗೆ ಹೊರಟರು. ಅಧಿಕಾರಿ ವರ್ಗದ ನಾವುಗಳು ಮಾತ್ರ ಕುಳಿತೇ ಇದ್ದೆವು. ಸಂಜೆಯ 6 ಘಂಟೆಗೆ ಹೊರಟು ಬಂದರೆ ಬಸ್ಸುಗಳು ಕಡಿಮೆ ಇದ್ದಂತಿತ್ತು. ಬಂದು ನಿಂತಿದ್ದ ಒಂದು ಡಬಲ್‌ ಡೆಕ್ಕರ್‌ ಬಸ್ಸು ತುಂಬಿ ತುಳುಕುತ್ತಿತ್ತು. ಹೆಚ್ಚಿನ ಸಮಯ ಕಾಯ್ದು ಪ್ರಯೋಜನವಿಲ್ಲವೆಂದು ಜನಸಂದಣಿ ಇರುವ ಆ ಬಸ್ಸಿನಲ್ಲೇ ಚರ್ಚ್‌ಗೇಟಿಗೆ ಹೊರಟೆ.

ಬಸ್ಸು ಮಂತ್ರಾಲಯದ ಹತ್ತಿರಕ್ಕೆ ಬರುತ್ತಿದ್ದಂತೆ ಎಲ್ಲಿಲ್ಲದ ಮಳೆ ಶುರುವಾಯಿತು. ಕುಳಿತಿದ್ದ ಎಲ್ಲರೂ ಧಬ್‌ ಧಬ್‌ ಎಂದು ಕಿಟಕಿಗಳನ್ನು ಮುಚ್ಚುತ್ತಿದ್ದರು. ಆಕಾಶದಲ್ಲೆಲ್ಲಾ ಕಪ್ಪನೆಯ ಛಾಯೆ. ನಾರಿಮನ್‌ ಪಾಯಿಂಟಿನ ಸಮುದ್ರ ದಡದಲ್ಲಿ ಸಮುದ್ರದ ಭೋರ್ಗರೆತ. ಮುಗಿಲೆಲ್ಲಾ ಕಪ್ಪಾಗುತ್ತಿರಲು ಫಕ್ಕನೆ ಹೊಳೆಯುತ್ತಿದ್ದ ಮಿಂಚುಗಳು, ಕಿವಿಗಡಚಿಕ್ಕುವ ಗುಡುಗು ಸಿಡಿಲುಗಳ ಆರ್ಭಟ. ಇದ್ದಕ್ಕಿದ್ದಂತೆಯೇ ಟ್ರಾಫಿಕ್‌ ಸಿಗ್ನಲ್‌ ಕೆಲಸ ಮಾಡದೆಯೇ ಕೈ ಕೊಟ್ಟಿತ್ತು. ವಾಹನಗಳೆಲ್ಲವೂ ಅಸ್ತವ್ಯಸ್ತವಾಗಿ ನಿಂತುಬಿಟ್ಟವು. ದಿಢೀರನೆ ಪ್ರತ್ಯಕ್ಷರಾದ ಪೊಲೀಸರು ಸ್ಥಿತಿಯನ್ನು ತಹಬಂದಿಗೆ ತಂದರು. ಬಸ್ಸು ಚರ್ಚ್‌ಗೇಟ್‌ ನಿಲ್ದಾಣದ ಹತ್ತಿರಕ್ಕೆ ಬರುವ ವೇಳೆಗೆ ಮಳೆ ಹುಚ್ಚು ಹಿಡಿದವರಂತೆ ಒಂದೇ ಸಮನೆ ಸುರಿಯುತ್ತಿತ್ತು. ಇಪ್ಪತ್ತು ಹೆಜ್ಜೆಗಳ ದೂರ ಇರುವ ಚರ್ಚ್‌ಗೇಟ್‌ ಸ್ಟೇಷನ್‌ ತಲುಪುವುದರೊಳಗೆ ನಾನು ಮಳೆಯಲ್ಲಿ ಪೂರ್ತಿಯಾಗಿ ನೆನೆದಿದ್ದೆ.

ಲೋಕಲ್‌ ಟ್ರೈನ್‌ಗಳು ಮಾತ್ರ ನಿಯಮಿತ ಕಾಲಕ್ಕೆ ಓಡುತ್ತಿದ್ದವು. ಮಾಮೂಲಿನಂತೆ 6.14ರ ಬೊರಿವಿಲಿ ಟ್ರೈನ್‌ ಹತ್ತಿದೆ. ಇಂದು ಹೆಚ್ಚಿನ ಜನಸಂದಣಿ ಇರಲಿಲ್ಲವಾಗಿ ಮತ್ತು ಕಿಟಕಿಯ ಪಕ್ಕ ಕುಳಿತುಕೊಳ್ಳಲು ಹೆಚ್ಚಿನ ಜನಗಳು ತಯಾರಿರಲಿಲ್ಲವಾಗಿ ನನಗೆ ಆ ಸ್ಥಾನ ಸಿಕ್ಕಿತ್ತು. ಹೊರಗೆ ಅಷ್ಟು ಮಳೆ ಇದ್ದಾಗ್ಯೂ ಟ್ರೈನ್‌ ಒಳಗೆ ವಿಪರೀತ ಸೆಕೆ ಇತ್ತು. ಮುಂಬಯಿಯಲ್ಲಿ ಇದು ಸಾಮಾನ್ಯ ಸಂಗತಿ. ನಾನು ಗಾಡಿಯಲ್ಲಿ ಕುಳಿತುಕೊಳ್ಳುವ ಮೊದಲೇ ಕಿಟಕಿಯನ್ನು ಮುಚ್ಚಿದ್ದರು. ಎಲ್ಲರಿಗೂ ಗಾಳಿ ಬರಲೆಂದು ನಾನು ಕಿಟಕಿ ತೆರೆಯುತ್ತಿದ್ದಂತೆಯೇ ಭರ್ರನೆ ಮಳೆಯ ನೀರು ಒಳ ನುಗ್ಗಿ ನನ್ನ ಪ್ಯಾಂಟು ಮತ್ತು ಷರಟುಗಳು ತೊಯ್ದುಹೋದವು.

ಗಾಜಿನ ಕಿಟಕಿ ತೆಗೆದು - ಷಟರ್‌ ಹಾಕಿದೆ. ಅಲ್ಲಿ ನೋಡಿದರೆ ಷಟರ್‌ ಕಿತ್ತು ಹೋಗಿದೆ. ಅಕ್ಕ ಪಕ್ಕಗಳಲ್ಲಿಯೂ ಅದೇ ತರಹದ ಪರಿಸ್ಥಿತಿ. ಅಲ್ಲಿ ಗಾಜಿನ ಕಿಟಕಿಗಳಲ್ಲಿ ಗಾಜು ಕೂಡಾ ಇರಲಿಲ್ಲ. ಟ್ರೈನ್‌ ಹೊರಟಾಗ ಬಾಗಿಲ ಬಳಿ ನಿಂತಿರುವವರು ಬಾಗಿಲನ್ನು ಹಾಕಲು ಪ್ರಯತ್ನಿಸಿದಾಗ ಅದನ್ನು ಹಾಕಲಾಗಲಿಲ್ಲ. ಬಾಗಿಲು ಅಲುಗಾಡುತ್ತಲೇ ಇರಲಿಲ್ಲ. ಬಾಗಿಲಲ್ಲಿ ನಿಂತಿದ್ದವರೆಲ್ಲರೂ ಮಳೆಯಲ್ಲಿ ನೆನೆದು ತೊಪ್ಪೆಯಾಗಿದ್ದರು.

ಮುಂದಿನ 2-3 ಸ್ಟೇಷನ್ನುಗಳಲ್ಲಿ ಹೆಚ್ಚಿನ ಜನಗಳು ತುಂಬಿದ್ದರು. ಬಾಗಿಲಲ್ಲಿ ನಿಂತಿದ್ದವರಿಗೆ ಮಳೆಯ ನೀರು ತಲೆಯ ಮೇಲೆ ಒಂದೇ ಸಮನೆ ಸುರಿಯುತ್ತಲೇ ಇದ್ದಿತ್ತು. ಈ ನೋಟ, ದೂರದಿಂದ ನೋಡಿದವರಿಗೆ ಶಿವಲಿಂಗಕ್ಕೆ ಅಭಿಷೇಕ ಮಾಡಿದಂತೆ ಕಾಣಿಸುತ್ತಿತ್ತು. ಟ್ರೈನ್‌ ಸ್ವಲ್ಪ ನಿಧಾನವಾಗಿಯೇ ಚಲಿಸುತ್ತಿತ್ತು. ಮುಂದೆ ಏನು ತೊಂದರೆಯಾಗಿದೆ ಎಂಬುದು ಮಾತ್ರ ಯಾರಿಗೂ ತಿಳಿಯದಾಗಿತ್ತು. ಲೋಯರ್‌ ಪರೇಲ್‌ ಮತ್ತು ಎಲ್ಫಿನ್‌ಸ್ಟನ್‌ ರೋಡ್‌ ಸ್ಟೇಷನ್ನುಗಳಲ್ಲಿ ರೈಲ್ವೇ ಹಳಿಯ ಮೇಲೆ ಸ್ವಲ್ಪ ನೀರು ನಿಂತಿತ್ತು.

ಮುಂದೆ ಟ್ರೈನ್‌ ದಾದರ್‌ ಸ್ಟೇಷನ್ನಿಗೆ ಬರುವ ವೇಳೆಗಾಗಲೇ ನಿಗದಿತ ಸಮಯಕ್ಕಿಂತ ಹತ್ತು ನಿಮಿಷಗಳು ತಡವಾಗಿದ್ದಿತು. ಅಲ್ಲದೇ ಜನಸಂದಣಿ ಕೂಡಾ ಬಹಳ ಹೆಚ್ಚಾಗಿತ್ತು. ಪ್ಲಾಟ್‌ಫಾರ್‌ಂ ಮೇಲೆ ನಿಲ್ಲಲು ಜಾಗ ಇಲ್ಲದಷ್ಟು ಜನಗಳು ತುಂಬಿದ್ದರು. ದುರದೂರುಗಳಿಗೆ ಹೋಗುವ ಟ್ರೈನ್‌ಗಳು 15-20 ತಡವಾಗಿ ಓಡುತ್ತಿದೆಯೆಂದು ಮೈಕಾಸುರರು ಹೇಳುತ್ತಿದ್ದರು. ನನ್ನ ಸ್ನೇಹಿತರೊಬ್ಬರು ತಮ್ಮ ಬ್ಲಾಗಿನಲ್ಲಿ ಡೆಡ್ಲಿ ದಾದರ್‌ ಎಂದು ಹೆಸರಿಸಿದ್ದ ದಾದರ್‌ ಈಗ ನನ್ನ ಕಣ್ಣಿಗೆ ಅನ್ವರ್ಥವಾಗಿ ಕಾಣಿಸುತ್ತಿತ್ತು.

ಟ್ರೈನ್‌ ಹಾಗೂ ಹೀಗೂ ನಿಧಾನವಾಗಿ ಅಂಧೇರಿ ಸ್ಟೇಷನ್‌ ತಲುಪುವ ವೇಳೆಗಾಗಲೇ 20 ನಿಮಿಷಗಳು ತಡವಾಗಿತ್ತು. ಸ್ವಲ್ಪ ಮುಂದಕ್ಕೆ ಬರಲು ಟ್ರೈನ್‌ ನಿಂತೇ ಬಿಟ್ಟಿತು. 10 ನಿಮಿಷಗಳಾದರೂ ಅಲ್ಲಾಡುತ್ತಲೇ ಇಲ್ಲ. ಹೊರಗೆ ಮಳೆ, ಒಳಗೆ ಸೆಕೆಯ ಬೆವರು, ಉಸಿರಾಡಲು ಸ್ವಚ್ಛ ಗಾಳಿಯೂ ಸರಿಯಾಗಿ ದೊರೆಯುತ್ತಿಲ್ಲ. ಪಕ್ಕದಲ್ಲಿ ಸ್ಲೋ ಟ್ರಾಕಿನಲ್ಲೂ ಟ್ರೈನ್‌ ನಿಂತಿತ್ತು. ಮಧ್ಯೆ ಒಮ್ಮೆ ದೀಪಗಳು ಆರಿ, ಫ್ಯಾನ್‌ ನಿಂತಿತು. ಇದ್ದಕ್ಕಿದ್ದಂತೆಯೇ ‘ಕಿಸೆಗಳ್ಳ’ ಎಂದು ಯಾರೋ ಕೂಗಿದರು.

ತಕ್ಷಣ ದೀಪ ಹತ್ತಿತ್ತು. ಎಲ್ಲರೂ ಕೂಗು ಬಂದ ಕಡೆ ನೋಡಲು, ಅಲ್ಲಿದ್ದವರು ಮುಸಿ ಮುಸಿ ನಗುತ್ತಿದ್ದರು. ಯಾರೋ ಕುಚೋದ್ಯಕ್ಕೆಂದು ಮಾಡಿದ ಆಟವದು. ಮುಂದೆ ನಿಧಾನಕ್ಕೆ ಟ್ರೈನ್‌ ಗೋರೆಗಾಂವಿನ ಕಡೆಗೆ ಹೊರಟಿತು. ಗೋರೆಗಾಂವ್‌ ಅನತಿ ದೂರದಲ್ಲಿರುವಾಗ ಮತ್ತೆ ಟ್ರೈನ್‌ ನಿಂತಿತು. ಆಗಲೂ ವಿದ್ಯುತ್‌ ಕೈ ಕೊಟ್ಟಿತ್ತು. ಅಲ್ಲಿಯೂ 10 ನಿಮಿಷಗಳ ಕಾಲ ಟ್ರೈನ್‌ ನಿಂತಿದ್ದು ನಂತರ ಮುಂದೆ ಹೊರಟಿತು.

ಟ್ರೈನ್‌ ಪ್ಲಾಟ್‌ಫಾರ್‌ಂ ಬರಲು, ಮೈಕಾಸುರರು ಅನೌಂನ್ಸ್‌ ಮಾಡುತ್ತಿದ್ದರು, ‘ಗೋರೆಗಾಂವ್‌ ಮತ್ತು ಬೊರಿವಿಲಿ ಮಧ್ಯೆ ಸಿಗ್ನಲ್‌ ತೊಂದರೆ ಇರುವುದರಿಂದ ಟ್ರೈನ್‌ ಸ್ವಲ್ಪ ನಿಧಾನಕ್ಕೆ ಓಡುತ್ತಿದೆ’, ಎಂದು. ಈ ಮಧ್ಯೆ ವಿದ್ಯುತ್‌ ಕೈ ಕೊಟ್ಟಿದ್ದಕ್ಕೆ ಕಾರಣವೇನೆಂದರೆ, ಹೋದ ವರ್ಷದಂತೆ ಈ ವರ್ಷ ಮಳೆಯಾಗಬಹುದೆಂದೂ, ಅದಕ್ಕೇ ಹಳಿಗಳನ್ನು ಸಮತಟ್ಟಾಗಿಡಲು, ಹಳ್ಳ ಇರುವ ಕೆಲವು ಕಡೇಗಳಲ್ಲಿ, ಹಳಿಗಳನ್ನು ಮೇಲಕ್ಕೆ ತರುವ ಕೆಲಸ ನಡೆದಿತ್ತು. ಈ ಸ್ಥಳಗಳಲ್ಲಿ ಟ್ರೈನ್‌ ಬಂದಾಗ, ಮೇಲಿನ ಪೆಂಟೋಗ್ರಾಫ್‌ ವಿದ್ಯುತ್‌ ತಂತಿಗೆ ತಗುಲುತ್ತಿರಲಿಲ್ಲ. ಹಾಗಾಗಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು.

ಸ್ಟೇಷನ್ನಿನಿಂದ ಆಚೆಗೆ ಬರಲು ಬಸ್ಸುಗಳು ಕಾಣಿಸುತ್ತಲೇ ಇರಲಿಲ್ಲ. ಎಲ್ಲವೂ ಅದೆಲ್ಲಿ ಹೋಗಿದ್ದವೋ. ಜನಗಳೆಲ್ಲರೂ ಆಟೋಗಳಿಗಾಗಿ ಅಲ್ಲಿಲ್ಲಿ ಓಡುತ್ತಿದ್ದರು. ಒಂದೆಡೆ ಎಡಬಿಡದೆ ಮಳೆ ಸುರಿಯುತ್ತಿತ್ತು. ಇನ್ನೊಂದೆಡೆ ಬಸ್ಸುಗಳಿಲ್ಲದೇ ಆಟೋಗಳಿಗೆ ಹುಡುಕಾಟ ಸಾಗಿತ್ತು. ಈ ಆಟೋ ಚಾಲಕರು ಮೊದಲಿಗೆ ನಾವು ಕರೆದೆಡೆಗೆ ಬರೋಲ್ಲ ಎನ್ನುತ್ತಿದ್ದರು. ಮತ್ತೆ ಗೋಗರೆಯಲು ದರ ಹೆಚ್ಚು ಕೊಡಬೇಕೆಂದು ತಾಕೀತು ಮಾಡುತ್ತಿದ್ದರು. ಮನೆ ಸೇರುವ ವೇಳೆಗೆ ನನ್ನ ಬ್ಯಾಗು, ಪ್ಯಾಂಟು, ಷರಟು ಎಲ್ಲವೂ ತೊಯ್ದು ಹೋಗಿದ್ದವು. ರಸ್ತೆಗಳಲ್ಲಿ ಮೋರಿಯೊಳಗೆ ಪ್ಲಾಸ್ಟಿಕ್‌, ಗಲೀಜುಗಳು ತುಂಬಿದ್ದು, ನೀರು ಹೋಗದಂತೆ ಆಗಿದೆ. ಅದನ್ನು ಸರಿಪಡಿಸಲು ಈ ಮಳೆಯಲ್ಲಿ ಬರಲು ಪಾಲಿಕೆಯ ಕೆಲಸಗಾರರು ಈಗ ಬರೋಲ್ಲ. ನಾಳೆ ಬೆಳಗ್ಗೆಯೇ ಬರುವುದು. ಇಂದು ರಾತ್ರಿ ಪೂರ್ತಿ ಇದೇ ತರಹ ಮಳೆ ಬಂದರೆ ನಾಳೆ ಹೋದ ವರ್ಷದಂತೆ ಆಗುವುದು ಖಂಡಿತ.

*

ಗುರುವಾರ (ಜೂ.1) ಬೆಳಗ್ಗೆ ಮಳೆ ಸ್ವಲ್ಪ ಕಡಿಮೆಯಿತ್ತು. ಆದರೂ ಜನಗಳ ಮನಸ್ಸಿನಲ್ಲಿ ಹೋದ ವರ್ಷದ ಕಹಿಯ ಭಯ ಇನ್ನೂ ಆವರಿಸಿದಂತಿದೆ. ಎಂದಿನಂತೆ ಇಂದು ರೈಲ್ವೇ ಸ್ಟೇಷನ್ನಿಗೆ ಬರಲು, ಟ್ರೈನ್‌ಗಳು 15 ರಿಂದ 20 ನಿಮಿಷ ತಡವಾಗಿ ಓಡುತ್ತಿದ್ದರೂ, ಗಾಡಿ ಪೂರ್ತಿ ಖಾಲಿಯಾಗಿ ಇತ್ತು. ಜನನಿಬಿಡ ಮುಂಬೈ ಸ್ಮಶಾನ ಮೌನವನ್ನು ಹೊದ್ದಂತಿದೆ. ಮುಂದಿನ 48 ಘಂಟೆಗಳಲ್ಲಿ ಹೆಚ್ಚಿನ ಮಳೆ ಬರುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಘೋಷಿಸಿರುವುದರಿಂದ ಏನಾಗುವುದೋ ಕಾಯ್ದು ನೋಡಬೇಕು.

ಇತಿಹಾಸದ ಪುಟಗಳಿಂದ

ಮುಂಬೈನಲ್ಲಿ ಸಾವಿನ ಮಳೆಯ ಪಕ್ಕ ನಿಂತು...

ಮುಂಬಯಿನಲ್ಲಿ ಮಳೆ ನಿಂತಿದೆ... ಆದರೆ ಮರದ ಹನಿ ನಿಂತಿಲ್ಲ...!

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more