• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊತ್ತಿತೋ ಹೊತ್ತಿತೋ ಕನ್ನಡದ ದೀಪ : ಆಸೆ-ಆಶಯ

By Staff
|

ಅಂಡಯ್ಯನಂತೆ ಅಸಲಿ ಕನ್ನಡದಲ್ಲಿಯೇ ಬರೆವ ಛಲವೇನು ಕನ್ನಡಿಗರಿಗೆ ಬೇಕಿಲ್ಲ. ಕನ್ನಡವನ್ನು ಮರೆಯದಿದ್ದರೆ ಸಾಕು. ಆ ನಮ್ಮ ಜಾಗೃತಿಯೇ ಬೆಳಕು ನೀಡುವುದು. ವಿಶ್ವಕನ್ನಡ ಸಮ್ಮೇಳನದ ಹಿನ್ನೆಲೆಯಲ್ಲಿ ನಾಡು-ನುಡಿ ಬಗೆಗೊಂದು ಚಿಂತನೆ.

  • ಹ.ಚ.ನ

natesh.hc@greynium.com

ಇದನ್ನು ಜಾತ್ರೆಯೆನ್ನೋಣವೋ? ಹೊಟ್ಟೆ ತುಂಬಿದವರ ಪಾರ್ಟಿ ಎನ್ನೋಣವೋ? ಜುಟ್ಟಿಗೆ ಮಲ್ಲಿಗೆ ಹೂವು ಮೂಡಿಸುವ ಪ್ರಯತ್ನ ಎನ್ನೋಣವೋ? ಕನ್ನಡ ಪ್ರೀತಿ ಎನ್ನೋಣವೋ? ಮಣ್ಣಿನ ಸೆಳೆತ ಎನ್ನೋಣವೋ! ಎಲ್ಲವೂ ಅವರರವರ ಪ್ರೀತಿಗೆ, ಅವರವರ ಭಕುತಿಗೆ ಬಿಟ್ಟ ವಿಚಾರ.

ಆದರೆ, ಒಂದಂತೂ ನಿಜ! ವಿಶ್ವ ಕನ್ನಡಿಗರು ಒಂದು ವೇದಿಕೆಯಲ್ಲಿ ಸೇರುತ್ತಿದ್ದಾರೆ! ಮೂರು ದಿನಗಳ ಕಾಲ ಕನ್ನಡಕ್ಕೆ ಜೈಕಾರ ಹಾಕಲಿದ್ದಾರೆ.. ಕನ್ನಡದಲ್ಲಿಯೇ ನಗಲಿದ್ದಾರೆ... ಕನ್ನಡದಲ್ಲಿಯೇ ತಮ್ಮ ನೋವು-ನಲಿವುಗಳನ್ನು ಹಂಚಿಕೊಳ್ಳಲಿದ್ದಾರೆ(ಅದು ನಮ್ಮ ನಂಬಿಕೆ! ಕನ್ನಡ ನುಡಿಹಬ್ಬದಲ್ಲೂ ಆಂಗ್ಲವೇ ಮೆರೆದರೆ ಏನೂ ಮಾಡಲಾಗದು). ಈ ನೆಪದಲ್ಲಾದರೂ ಮೂಲ ಬೇರುಗಳ ನೆನಪಾದರೆ ಸಂತೋಷ. ಸದ್ಯಕ್ಕೆ ಅಷ್ಟನ್ನು ನಿರೀಕ್ಷಿಸಬಹುದು.

ಬಹುದಿನಗಳಿಂದ ಮೈಮರವೆಯಿಂದ

ಕೂಡಿರುವವ ಕೊಳೆಯ ಕೊಚ್ಚೇವು

ಎಲ್ಲೆಲ್ಲಿ ಕನ್ನಡದ ಕಂಪು ಸೂಸ -

ಲಲ್ಲಲ್ಲಿ ಕರಣ ಚಾಚೇವು

ನಡು ನಾಡೆ ಇರಲಿ, ಗಡಿನಾಡೆ ಇರಲಿ

ಕನ್ನಡದ ಕಳೆಯ ಕೆಚ್ಚೇವು

ಮರತೇವು ಮರವ, ತೆರೆದೇವು ಮನವ, ಎರೆದೇವು ಒಲವ ಹಿಡಿನೆನಪ

ನರನರವನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ

ಎಂಬ ಡಿ.ಎಸ್‌.ಕರ್ಕಿ ಅವರ ಗೀತೆಯನ್ನು(ಈ ಗೀತೆ, ಅಥವಾ ಇಂಥದ್ದೇ ಗೀತೆ)ಸಮ್ಮೇಳನದಲ್ಲಿ ಹಾಡಲಾಗುತ್ತದೆ. ಹಾಡಿಗೆ ಎಲ್ಲರ ಮನಗಳು ಕುಣಿಯುತ್ತವೆ. ಮುಂದೆ ಇದೇ ಭಾವ ‘ಕನ್ನಡದ ನೆಲದ ಪುಲ್ಲೆನಗೆ ಪಾವನ ತುಳಸಿ’ ಎನ್ನುವಲ್ಲಿಗೆ ಬಂದು ನಿಲ್ಲುವುದಿಲ್ಲ. ಎಂ.ಗೋವಿಂದ ಪೈ ಬಯಸುವಂತೆ ‘ ತನು ಕನ್ನಡ, ಮನ ಕನ್ನಡ, ಧನ ಕನ್ನಡವೆಮ್ಮೆವು’ ಎಂಬಲ್ಲಿಗೆ ತಲುಪುವುದಿಲ್ಲ. ಯಾಕ್ಹೀಗೆ? ಗೊತ್ತಿಲ್ಲ.

ಕನ್ನಡ, ಕನ್ನಡನಾಡು, ಕನ್ನಡಿಗ -ಈ ವಿಚಾರಕ್ಕೆ ಬಂದಾಗ, ಅನಿವಾಸಿ ಕನ್ನಡಿಗರೇ ಮೇಲು ಎನಿಸುತ್ತದೆ. ತವರಿನ ಬೇರು ಕತ್ತರಿಸಿಕೊಂಡಿದ್ದರೂ, ಕೆಲವರು ಕರುಳಿನ ಬೇರನ್ನು ಕತ್ತರಿಸಿಕೊಂಡಿರುವುದಿಲ್ಲ.. (ಕೆಲವರಿಗೆ ಬೇರುಗಳೇ ಇಲ್ಲ ಬಿಡಿ.. ) ಆದರೆ ತವರಿನ ಕನ್ನಡಿಗರಿಗೆ ಬೇರಿದ್ದರೂ, ಭಾವವಿಲ್ಲ.. ಕನ್ನಡ ಪ್ರೇಮ ಮೂಡಲು, ಎಲ್ಲರನ್ನೂ ಕೆಲ ಕಾಲ- ವಿದೇಶಗಳಿಗೆ ಕಳುಹಿಸಿದರೆ ಸೂಕ್ತ ಎಂದು ಅ.ರಾ.ಮಿತ್ರ ಒಂದು ಕಡೆ ಗೇಲಿ ಮಾಡಿದ್ದಾರೆ. ಇದು ಒಂದರ್ಥದಲ್ಲಿ ಸತ್ಯ ಅನ್ನಿಸುತ್ತದೆ.

ರಾಜ್ಯದ ಪರಿಸ್ಥಿತಿ, ರಾಜಧಾನಿಯ ಪರಿಸ್ಥಿತಿ ನಿಜಕ್ಕೂ ಗಂಭೀರ. ಇಲ್ಲಿ ಕನ್ನಡ ಬಲ್ಲವರಿಗಿಂತಲೂ, ಕನ್ನಡ ಒಲ್ಲೆ ಎನ್ನುವವರೇ ಸುಖವಾಗಿದ್ದಾರೆ! ಅವಕಾಶಗಳು ಅವರನ್ನೇ ಅರಸಿಕೊಂಡು ಬರುತ್ತಿವೆ. ಕನ್ನಡ ಅಡುಗೆ ಮನೆಯ ಭಾಷೆಯಾಗಿಯೂ ಉಳಿದಿಲ್ಲ.

ಬೆಂಕಿ ಬಿದ್ದಿದೆ ಮನೆಗೆ ಓ ಬೇಗನೆ ಬನ್ನಿ!

ಎಲ್ಲರೂ ಎದ್ದೆದ್ದು ಓಡಿ ಬನ್ನಿ

ಎಂದು ಕವಿ ಕಯ್ಯಾರ ಕಿಞ್ಞಣ್ಣ ರೈ ನೀಡಿದ ಕರೆ, ನಮಗೆ ಕೇಳಿಸುತ್ತಿಲ್ಲ. ಕಾರಣ, ಕನ್ನಡಿಗರು ಕನ್ನಡದ ವಿಷಯಕ್ಕೆ ಕಿವಿ ಕಳೆದುಕೊಂಡು, ಕಣ್ಣು ಕಳೆದುಕೊಂಡು, ಹೃದಯ ಕಳೆದುಕೊಂಡು ತುಂಬಾ ದಿನಗಳೇ ಆಗಿವೆ. ಕನ್ನಡ ಸರ್ಕಾರಗಳು ಎಂದಿಗೂ ಬಂದಿಲ್ಲ.. ಬರುವ ಲಕ್ಷಣಗಳಿಲ್ಲ.. ಹೀಗಾಗಿ ಕನ್ನಡದ ಬಗ್ಗೆ ಭರವಸೆಗಳು ಕರಗುತ್ತಿವೆ.

ಪು.ತಿ.ನ ಹೇಳುವಂತೆ -

ಕನ್ನಡ ಜನರಲ್ಲದೆ ಕನ್ನಡವನು

ಉಳಿಸುವವರಾರೈ ಬೆಳೆಸುವರಾರೈ

ಬಳಸುವರೂ ತಾವಾರಿಹರೈ

-ಈ ಪ್ರಶ್ನೆಗೆ ಉತ್ತರಿಸಲು ಯಾರಿಗೂ ಮನಸ್ಸಿಲ್ಲ. ಪ್ರಶ್ನೆಯನ್ನು ಆಲಿಸಲು ಸಹಾ ಆಸಕ್ತಿ ಇಲ್ಲ. ಕಾರಣ ಕನ್ನಡ ಇಂದು ಹೊಟ್ಟೆ ತುಂಬಿಸುತ್ತಿಲ್ಲ(ನೋವಿನ ಮಾತು!). ಕನ್ನಡ ಜಾಣರಿಗೆ ಮಾನ್ಯತೆ ಇಲ್ಲ.

ಇಂತಹ ಹೊತ್ತಿನಲ್ಲಿ ಸುವರ್ಣ ಕರ್ನಾಟಕದ ಸಂಭ್ರಮಕ್ಕೆ ಮುನ್ನುಡಿಯಾಗಿ, ಬಾಲ್ಟಿಮೋರ್‌ನಲ್ಲಿ ವಿಶ್ವಕನ್ನಡ ಸಮ್ಮೇಳನ ನಡೆಯುತ್ತಿದೆ. ಈ ನೆಪದಲ್ಲಾದರೂ ಅಮೆರಿಕಾ ನೋಡುವ ಹಂಬಲ ಕೆಲವರಿಗೆ. ಕೆಲವರು ಸರ್ಕಾರದ ಮರ್ಜಿಯಿಂದ, ಇನ್ನೂ ಕೆಲವರು ಪಾಕೇಟ್‌ ಬಲದಿಂದ ಅಮೆರಿಕಾ ತಲುಪಿದ್ದಾರೆ.

ಕಟ್ಟುವೆವು ನಾವು ಹೊಸ ನಾಡೊಂದನು, ರಸದ

ಬೀಡೊಂದನು

ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,

ಹರಿಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ,

ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ

ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ

ಕಟ್ಟುವೆವು ನಾವು ಹೊಸ ನಾಡೊಂದನು, ರಸದ

ಬೀಡೊಂದನು..

-ಸಮ್ಮೇಳನದ ನೆಪದಲ್ಲಿ ಕೈಕೈ ಜೋಡಿಸಿ ನಿಂತಿರುವ ವಿಶ್ವ ಕನ್ನಡಿಗರೇ, ನೀವಾದರೂ ಅಡಿಗರ ಈ ಪದ್ಯವನ್ನು ನೆನಪು ಮಾಡಿಕೊಳ್ಳಿ. ಪದ್ಯಕ್ಕೆ ಗಟ್ಟಿ ಪ್ರತಿಜ್ಞೆಗಳ ಮೂಲಕ ಅರ್ಥ ತನ್ನಿ. ಮಣ್ಣಿನ ಋಣ ತೀರಿಸಿಕೊಳ್ಳಿ. ಅಮ್ಮನ ಋಣಕ್ಕಿಂತಲೂ ಮಣ್ಣಿನ ಋಣ ದೊಡ್ಡದು ಎಂಬುದು ನಿಮ್ಮ ನೆನಪಲ್ಲಿರಲಿ. ಅಂಡಯ್ಯನಂತೆ ಕನ್ನಡದಲ್ಲಿಯೇ ಬರೆವ ಛಲವೇನು ಬೇಕಿಲ್ಲ. ಕನ್ನಡವನ್ನು ಮರೆಯದಿದ್ದರೆ ಸಾಕು. ಆ ನಿಮ್ಮ ಜಾಗೃತಿಯೇ ಬೆಳಕು ನೀಡುವುದು.

ಕಡೆಯದಾಗಿ ಕವಿ ಕುವೆಂಪು ಹೇಳುವಂತೆ -

ಹೇ ರಾಜಕಾರಣಿ, ಹೇ ಮಂತ್ರಿವರೇಣ್ಯ, ಹೇ ಅಧಿಕಾರಿ ಸರ್ವೋತ್ತಮ, ಹೇ ವಣಿಗ್ವರ, ಹೇ ಶ್ರಮಜೀವಿ, ಹೇ ಅಧ್ಯಾಪಕ ಮಹಾಶಯ, ಓ ನೇಗಿಲಯೋಗಿ, ನೀನು ಯಾರೆ ಆಗಿರು, ಎಲ್ಲಿಯೇ ಇರು, ಕನ್ನಡವನ್ನು ಕೈಬಿಡದಿರು.

ನಾಳೆ ಎಂದರಾಗದು; ಮುಂದೆ ಎಂದರಾಗದು; ಇಂದೆ ನೀನು ನಿರ್ಣಯಿಸಬೇಕು. ಇಂದೆ ಎತ್ತಿ ಪೊರೆಯಬೇಕು. ಬೆಂಕಿಗೆ ಬಿದ್ದವರನ್ನು ನಾಳೆ ಎತ್ತುತ್ತೇನೆಂದರೆ ಲಭಿಸುವುದೇನು? ಹೆಣವಲ್ಲವೇ!

... ಇಂದು; ನಾಳೆಯಲ್ಲ. ತಿಳಿ, ತಿಳಿ! ತಿಳಿದು ಉಳಿ, ಇಲ್ಲ ಅಳಿ!

ವಿಶ್ವ ಕನ್ನಡಿಗರಿಗೆ ಪೂರ್ಣ ವಿವರಗಳು :

ವಿಶ್ವಕನ್ನಡ ನುಡಿಹಬ್ಬದ ನೇರಪ್ರಸಾರಕ್ಕೆ ಸುಸ್ವಾಗತ

ನುಡಿ ಹಬ್ಬದ ಹಿಂದೆ ಏನೆಲ್ಲಾ ಕಷ್ಟ-ಸುಖಗಳಿವೆ ಗೊತ್ತೆ?

ತೆರೆ ಸರಿದ ಕ್ಷಣಗಳು : ಚಿತ್ರ ಚಿತ್ತಾರ - ಚುಟುಕು ವಿಚಾರ

ಹಿನ್ನೋಟ : ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನ -2004

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more