ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀರ-ಬಲಿ ಪಾಡ್ಯಮಿ ಪುರಾಣ!

By Staff
|
Google Oneindia Kannada News


ಬಲಿ ಚಕ್ರವರ್ತಿಯನ್ನು ತುಳಿದ ವಾಮನನ ಕತೆ ನಿಮಗೆಲ್ಲರಿಗೂ ಗೊತ್ತು. ವಾಮನನಿಗೆ ಬೀರಬಲ್ಲ ಮತ್ತು ಶುಕ್ರಚಾರ್ಯರು ಏಳು ಕೆರೆ ನೀರು ಕುಡಿಸಿ, ಬಲಿ ಚಕ್ರವರ್ತಿಯ ಪ್ರಾಣ ಉಳಿಸಿದ ‘ಬೀರ-ಬಲಿ’ ಎಂಬ ಹಾಸ್ಯ ಪುರಾಣ ನಿಮ್ಮ ಗಮನಕ್ಕೆ...

ಅಯ್ಯಾ ನಾವೆಲ್ಲ ‘ಚಾ ಕೂಡಿಸುವ’(tea totaller) ಗುಂಪಿನವರು. ಬೀರು, ಜಿನ್ನು ಮುಂತಾದವುಗಳೆಲ್ಲ ನಮಗೆ ವರ್ಜ್ಯ ಎಂದು ದೂರ ಸರಿಯದಿರಿ. ಇಲ್ಲಿ ‘ಬೀರು’ ಎಂಬುದು ಪ್ರತ್ಯೇಕ ಪದವಲ್ಲ. ‘ಬೀರಬಲ್‌’ ಎಂಬ ಚತುರನ ಹೆಸರಿನ ಪೂರ್ವ ಭಾಗ, ‘ಬಲಿ ಪಾಡ್ಯ’ದ ದಿನ ನಡೆದ ಕತೆಯಾದ್ದರಿಂದ ಎರಡೂ ಸೇರಿಕೊಂಡು ಈ ರೂಪ ಪಡೆದುಕೊಂಡಿವೆ.

ದೈತ್ಯ ಕುಲಗುರು ಶುಕ್ರಾಚಾರ್ಯರಿಗೆ ಎರಡೂ ಕಣ್ಣುಗಳಿದ್ದ ಕಾಲ. ಅವರಿಗೆ ಮಹಾ ವಿಷ್ಣು ವಾಮನ ರೂಪದಲ್ಲಿ ಬಂದು ಬಲಿಚಕ್ರವರ್ತಿಯನ್ನು ಗತಿಕಾಣಿಸುವ ಹುನ್ನಾರದಲ್ಲಿರುವ ಮಾಹಿತಿ ಗೂಢಚಾರರ ಮೂಲಕ ತಿಳಿದು ಬಂದಿತ್ತು.

‘ರಾಜಾ, ನಿನ್ನ ದಾನಶೂರತ್ವದ ಲಾಭ ಪಡೆದುಕೊಂಡು ನಿನ್ನನ್ನು ಪಾತಾಳಕ್ಕೆ ಅಟ್ಟುವ ಯೋಜನೆ ರೂಪುಗೊಳ್ಳುತ್ತಿದೆ. ನಿನ್ನ ರಕ್ಷಣೆಗಾಗಿ ಉಪಾಯ...’

‘ಛೆ! ಅದಕ್ಕಾಗಿ ನಾನು ಇಡೀ ಜನ್ಮ ಕಷ್ಟಪಟ್ಟು,ಇಷ್ಟೊಂದು ನಿಷ್ಠೆಯಿಂದ ಗಳಿಸಿಕೊಂಡಿರುವ ದಾನ ಶೂರ ನೆಂಬ ಬಿರುದನ್ನು ಬಿಟ್ಟುಕೊಡಬೇಕೇ? ಸಾಧ್ಯವೇ ಇಲ್ಲ’.

‘ಸರ್ವನಾಶ ಎದುರಾದಾಗ ಅರ್ಧದಷ್ಟನ್ನಾದರೂ ಉಳಿಸಿಕೊಳ್ಳುವ ಪ್ರಯತ್ನ ಮಾಡುವವ ಪಂಡಿತ. ನೀನು ಅಂಥವನಲ್ಲ ಎಂದು ನನಗೆ ಗೊತ್ತು. ಅದಕ್ಕೆಂದೇ ಬೀರಬಲ್‌ ಎಂಬ ಚತುರಮತಿಯ ಸೇವೆಯನ್ನು ಎರವಲು ಪಡೆದುಕೊಂಡಿದ್ದೇನೆ. ನೀನು ನಿನ್ನ ತತ್ವಕ್ಕೇ ಅಂಟಿಕೊಂಡಿರು. ನಿನ್ನ ಪ್ರಕಾರ ನೀನು ದಾನ ಮಾಡು. ಆದರೆ ಆ ಬಳಿಕ, ಕೊಟ್ಟ ದಾನವನ್ನು ಪಡೆದುಕೊಳ್ಳುವದಕ್ಕೆ ನಮ್ಮ ಹೊಸ ಕ್ರಮಗಳ ಪ್ರಕಾರ ನಡೆದುಕೊಳ್ಳಬೇಕೆಂದು ಹೇಳಿ ನಮ್ಮ ಕಡೆಗೆ ಕಳಿಸಿಬಿಡು. ಮಿಕ್ಕದ್ದನ್ನು ನಾವು ನೋಡಿಕೊಳ್ಳುತ್ತೇವೆ.’

ಬಲಿ ಚಕ್ರವರ್ತಿ ಒಪ್ಪಿಕೊಂಡ.

ತನ್ನ ಯೋಜನೆಯ ಪ್ರಕಾರ ವಾಮನನ ಆಕಾರದಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಬಂದ ವಿಷ್ಣು. ದಾನ ಪಡೆಯುವವರ ಸಾಲಿನಲ್ಲಿ ನಿಂತ. ತನ್ನ ಸರದಿ ಬಂದಾಗ ‘ನನಗೆ ಮೂರು ಅಡಿ ನೆಲ ಕೊಡಮಾಡಬೇಕು’ ಎಂದು ಬಲಿಚಕ್ರವರ್ತಿಯನ್ನು ಕೇಳಿಕೊಂಡ.

‘ನಾನು ದಾನ ಬೇಡಿದವರಿಗೆ ಎಂದೂ ಇಲ್ಲ ಎಂದವನಲ್ಲ. ಕೊಟ್ಟಿದ್ದೇನೆ. ಸರಿ. ಮುಂದಿನ ಕ್ರಮಕ್ಕಾಗಿ ಅವರಲ್ಲಿ ಹೋಗು’ ಎಂದು ಶುಕ್ರಾಚಾರ್ಯ ಮತ್ತು ಬೀರಬಲ್‌ ಕುಳಿತುಕೊಂಡ ಕಡೆಗೆ ತೋರಿಸಿದ ಬಲಿ.

‘ಏನಯ್ಯಾ ಪುಟಾಣಿ ಮರಿ, ಮಹಾರಾಜರಿಂದ ದಾನವನ್ನು ಪಡೆದುಕೊಂಡೆಯಾ?’ ಎಂದರು ಶುಕ್ರಾಚಾರ್ಯರು.

ಶುಕ್ರಾಚಾರ್ಯ ಬಲಿಯ ಪಕ್ಕದಲ್ಲಿಯೇ ನಿಂತುಕೊಂಡು ಕಿವಿಕಚ್ಚುವದನ್ನು ನಿರೀಕ್ಷಿಸಿದ್ದ ವಿಷ್ಣುವಿಗೆ ಇದು ಸ್ವಲ್ಪ ಆಶ್ಚರ್ಯ ಎನಿಸಿತು.

‘ಹೌದು ಮೂರು ಅಡಿ ನೆಲವನ್ನು ಕೇಳಿದೆ.’

‘ಸರಿ. ನೀನು ವಿದ್ಯಾರ್ಥಿ ಅಲ್ಲವೇ? ಓದು ಬರಹ ಬಲ್ಲವನು. ನಿನ್ನ ಬೇಡಿಕೆಯನ್ನು ಬರಹರೂಪದಲ್ಲಿ ಕೊಡು’.

ವಾಮನ ಬರೆದು ಕೊಟ್ಟ. ಅದಕ್ಕೆ ತಮ್ಮ ಹಸ್ತಾಕ್ಷರ ಹಾಕಿ ಬೀರಬಲ್ಲನ ಕಡೆಗೆ ಸರಿಸಿದರು ಆಚಾರ್ಯರು.

‘ಆಚಾರ್ಯರೇ, ಈ ಬೇಡಿಕೆ ನೆಲದ ಬಗೆಗೆ ಇದೆ. ನೆಲ ಎಂದರೆ ಕ್ಷೇತ್ರ. ಅದನ್ನು ನಾವು ಚದರು ಅಡಿಗಳಲ್ಲಿ ಅಳೆಯುತ್ತೇವೆ. ಈ ಬಾಲಕ ಬರಿ ಮೂರು ಅಡಿ ಎಂದು ಬರೆದಿದ್ದಾನೆ. ಅದು ಉದ್ದಳತೆಯ ಯೂನಿಟ್‌ ಆಯಿತು’ ಎಂದು ಆಕ್ಷೇಪಣೆ ಎತ್ತಿ ಮತ್ತೆ ಆಚಾರ್ಯರಕಡೆಗೆ ಸರಿಸಿದ ಬೀರಬಲ್‌.

‘ಪಾಪ ಅವನ ತರಗತಿಯಲ್ಲಿ ಇನ್ನೂ ಕ್ಷೇತ್ರಫಲ ಲೆಕ್ಕ ಮಾಡುವ ಪಾಠ ಆಗಿಲ್ಲವೇನೋ. ಇರಲಿ ಬಿಡಿ, ನಾವೇ ಸರಿಪಡಿಸೋಣ. ಮಗೂ ನಿನ್ನ ಅಹವಾಲಿನಲ್ಲಿ ದೋಷವನ್ನು ಸರಿಪಡಿಸಬೇಕು. ಅದನ್ನು ಮೂರು ಚದರ ಅಡಿ ಎಂದು ಮಾಡಬೇಕೋ ಅಥವಾ ಮೂರು ಅಡಿಯ ಚದರ ಎಂದು ಮಾಡಬೇಕೋ ಹೇಳು’ ಎಂದರು ಶುಕ್ರಾಚಾರ್ಯರು.

ವಾಮನನಿಗೇ ಏನು ಹೇಳಬೇಕೋ ತೋಚಲಿಲ್ಲ. ಎಗರಿ ಬಿದ್ದ ಬೇಲ್ಸ್‌ಗಳನ್ನು ನೋಡುವ ಬ್ಯಾಟ್ಸ್‌ಮನ್‌ನಂತೆ ಪಿಳಿ ಪಿಳಿ ಕಣ್ಣು ಬಿಟ್ಟ! ಆಕಾಶದೆತ್ತರಕ್ಕೆ ಬೆಳೆದು ನಿಲ್ಲಬೇಕೆಂದಿದ್ದ ಅವನ ಯೋಜನೆ ಒಂದು ಕ್ಷುಲ್ಲಕ ತಪ್ಪಿನಿಂದಾಗಿ ಮಣ್ಣು ಮುಕ್ಕಿತ್ತು. ‘ಮೂರಡಿ ಚದರದ ನೆಲ ಯಾವನಾದರೂ ಸಮಾಧಿ ಮಾಡುವವನಿಗೆ ಉಪಯೋಗಬಂದೀತು. ಅಂಥವನನ್ನು ಕರೆದು ಕೊಡಿ’ ಎಂದು ಮನಸ್ಸಿನಲ್ಲಿಯೇ ಸಿಡಿಮಿಡಿಗೊಳ್ಳುತ್ತ, ಹೊರಗೆ ಕೋಪವನ್ನು ತೋರಿಸಿಕೊಳ್ಳಲಾರದೆ ಅಲ್ಲಿಂದ ಕಾಲ್ಕಿತ್ತ ವಾಮನ.

ಶುಕ್ರಾಚಾರ್ಯರಿಗೆ ಹಿಗ್ಗೋ ಹಿಗ್ಗು ತಮ್ಮ ಯೋಜನೆ ಫಲಪ್ರದವಾದದ್ದಕ್ಕೆ. ಬಲಿಯ ಕಡೆಗೆ ಮುಖ ತಿರುಗಿಸಿ ಕಣ್ಣು ಹೊಡೆದರು. ಅದೇ ವೇಳೆಗೆ ನಮ್ಮ ಪ್ರೆಸ್ಸ್‌ ರಿಪೋರ್ಟರ್‌ ತನ್ನ ಕ್ಯಾಮೆರಾ ಕ್ಲಿಕ್ಕಿಸಿದ್ದ. ಅವನೊಬ್ಬ ಅತಿಯಾದ ಆತ್ಮ ವಿಶ್ವಾಸದ ಪ್ರಾಣಿ. ತಾನು ತೆಗೆದ ಫೋಟೋ ನೋಡಿಕೊಂಡು ‘ಶುಕ್ರಾಚಾರ್ಯರಿಗೆ ಒಂದೇ ಕಣ್ಣು’ ಎಂದು ತಪ್ಪು ಮಾಹಿತಿಯನ್ನು ಪ್ರಚಾರ ಮಾಡಿಬಿಟ್ಟ.

ನೀತಿ : ಮುಗಿಲೆತ್ತರಕ್ಕೆ ಬೆಳೆಯುವ ಮಹತ್ವಾಕಾಂಕ್ಷೆ ಇದ್ದವರು ಕಿರಿಯ ಸಂಗತಿಯನ್ನು ಕೂಡ ಕ್ಷುಲ್ಲಕವೆಂದು ಕಡೆಗಣಿಸಬಾರದು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X