ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಥೆಂಥಾ ವಿದ್ಯಾರ್ಥಿಗಳು...!

By Staff
|
Google Oneindia Kannada News


ಪ್ರಶ್ನೆ ಕೇಳಿದ ಶಿಕ್ಷಕರೇ ಗಾಬರಿಯಾಗುವಂತೆ ಉತ್ತರ ನೀಡುವ ವಿದ್ಯಾರ್ಥಿಗಳ ಬಗ್ಗೆ ನೀವು ಕೇಳಿರಬಹುದು. ಇಲ್ಲಿನ ಉತ್ತರಭೂಪ ವಿದ್ಯಾರ್ಥಿಗಳು ಇನ್ನೂ ಒಂದು ಕೈ ಮುಂದಿದ್ದಾರೆ. ಮೂರ್ಖರ ದಿನಾಚರಣೆ(ಏ.1) ಪ್ರಯುಕ್ತ ಒಂದು ನಗೆ ಬರಹ. ಜೊತೆಗೆ ವಿದ್ಯಾರ್ಥಿಗಳ ಹಣೆ ಬರಹ.

ಅಧ್ಯಾಪಕ ವೃತ್ತಿಯಲ್ಲಿರುವವರಿಗೆ ವಿದ್ಯಾರ್ಥಿಗಳ ಉತ್ತರಗಳು ಹಾಗೂ ವರ್ತನೆಗಳಿಂದ ಮನರಂಜನೆ ಉಂಟಾಗುವುದು ಸಾಮಾನ್ಯ. ನನ್ನಲ್ಲಿ ನಗೆಯುಕ್ಕಿಸಿದ ಹಲವು ಪ್ರಸಂಗಗಳಲ್ಲಿ ಕೆಲವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಇದಂಥೂ ಕೆಲವರ್ಷಗಳ ಹಿಂದೆ ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆ. ತಮಿಳುನಾಡಿನ ಹೆಸರಾಂತ ವಿಶ್ವವಿದ್ಯಾಲಯವೊಂದರಲ್ಲಿ ತತ್ವಶಾಸ್ತ್ರದಲ್ಲಿ ಎಂ. ಫಿಲ್‌. ಮಾಡಿದ್ದ ವಿದ್ಯಾರ್ಥಿಯೊಬ್ಬ ಪಿ. ಹೆಚ್‌. ಡಿ. ಗೆ ಪ್ರವೇಶ ಕೋರಿ ನಮ್ಮ ವಿಶ್ವವಿದ್ಯಾಲಯಕ್ಕೆ ಅರ್ಜಿ ಹಾಕಿದ. ಅವನನ್ನು ಸಂದರ್ಶನಕ್ಕೆ ಕರೆಯಲಾಯಿತು.

ನಮ್ಮ ಯೂನಿವರ್ಸಿಟಿಯ ಫಿಲಾಸಫಿ ಡಿಪಾರ್ಟ್‌ಮೆಂಟಿನ ಆಗಿನ ಮುಖ್ಯಸ್ಥರು ಪ್ರಸಿದ್ಧ ತತ್ವಜ್ಞಾನಿಗಳು. ಮಾನ್ಯ ಅಭ್ಯರ್ಥಿಯನ್ನು ಇಂಗ್ಲೀಷಿನಲ್ಲಿ ಪ್ರಶ್ನಿಸಿದರು :

‘‘ಯಾವ ವಿಷಯದ ಬಗ್ಗೆ ಸಂಶೋಧನೆ ನಡೆಸಬಯಸುತ್ತೀರಿ?’’

‘‘ಸಾರ್‌, ನನಗೆ ಆಂಗಿಲಂ ಸರಿಯಾಗಿ ಗೊತ್ತಿಲ್ಲ. ತಮಿಳಿನಲ್ಲಿ ಉತ್ತರಿಸಲೇ?’’ ಅಭ್ಯರ್ಥಿ ವಿನಂತಿಸಿಕೊಂಡ.

‘‘ಸರಿಯಪ್ಪ, ತಮಿಳಿನಲ್ಲೇ ಉತ್ತರಿಸು. ಯಾವ ತೊಂದರೆಯೂ ಇಲ್ಲ.’’ ಪ್ರಾಧ್ಯಾಪಕರು ಆಶ್ವಾಶನೆ ನೀಡಿದರು.

‘‘ನಾನು ಆದಿ ಶಂಕರ ಮತ್ತು ಡೇವಿಡ್‌ ಹ್ಯೂಮ್‌ರ ಬಗ್ಗೆ ಒಂದು ತುಲನಾತ್ಮಕ ಅಧ್ಯಯನ ಮಾಡಬೇಕೆಂದಿದ್ದೇನೆ.’’

‘‘ಒಳ್ಳೆಯದು. ನಿನ್ನ ಅಧ್ಯಯನಕ್ಕೆ ಆದಿ ಶಂಕರ ಮತ್ತು ಡೇವಿಡ್‌ ಹ್ಯೂಮ್‌ ಅವರನ್ನೇ ಏಕೆ ಆರಿಸಿಕೊಂಡೆ?’’

‘‘ಯಾಕೆಂದರೆ ಅವರಿಬ್ಬರೂ ಬ್ರಿಟಿಷರು. ಅದಕ್ಕೆ.’’ ಅಭ್ಯರ್ಥಿ ಉತ್ತರಿಸಿದ!

ಪ್ರೊಫೆಸರರು ಬೆಚ್ಚಿದರು. ಸಾವರಿಸಿಕೊಂಡು ಪ್ರಶ್ನಿಸಿದರು.

‘‘ಆದಿ ಶಂಕರರೂ ಬ್ರಿಟಿಷರಾ?’’

‘‘ಹೌದು ಸಾರ್‌.’’

‘‘ಹಾಗಿದ್ದರೆ ಅವರು ನಮ್ಮ ಭಾರತದಲ್ಲೇಕೆ ಅಷ್ಟೋಂದು ಪ್ರಸಿದ್ಧರಾಗಿದ್ದಾರೆ?’’

ಅಭ್ಯರ್ಥಿ ಸ್ವಲ್ಪ ಹೊತ್ತು ಯೋಚಿಸಿದ. ಎಲ್ಲರೂ ತಾಳ್ಮೆಯಿಂದ ಕಾದರು.

‘‘ಅವರು ಈಸ್ಟ್‌ ಇಂಡಿಯಾ ಕಂಪನಿಯ ಜತೆ ನಮ್ಮ ದೇಶಕ್ಕೆ ಬಂದರು ಸಾರ್‌. ಬಂದವರು ಇಲ್ಲೇ ಉಳಿದುಬಿಟ್ಟರು.’’ ಅವನ ಬಾಯಿಂದ ಮುತ್ತುಗಳು ಉದುರಿದವು.

ಈಗ ಸ್ವಲ್ಪ ಹೊತ್ತು ಯೋಚಿಸುವ ಸರದಿ ಪ್ರೊಫೆಸರದು. ಕಣ್ಣು ಮುಚ್ಚಿ ತೆರೆದರು. ಕಷ್ಟಪಟ್ಟು ನಗೆ ತಡೆಯುತ್ತಿದ್ದ ಸಹೋದ್ಯೋಗಿಗಳತ್ತ ಒಮ್ಮೆ ನೋಡಿ ಮಾನ್ಯ ಅಭ್ಯರ್ಥಿಗೆ ಹೇಳಿದರು.

‘‘ಆದಿ ಶಂಕರರ ಬಗ್ಗೆ ನಮ್ಮ ಯೂನಿವರ್ಸಿಟಿಯ ಲೈಬ್ರರಿಯಲ್ಲಿ ಹೆಚ್ಚು ಪುಸ್ತಕಗಳಿಲ್ಲ. ಅವರು ಬ್ರಿಟಿಷರಾದುದರಿಂದ ಇಂಗ್ಲೆಂಡಿನ ಯೂನಿವರ್ಸಿಟಿಗಳಲ್ಲಿ ಅವರ ಬಗ್ಗೆ ಯಥೇಚ್ಛ ಮಾಹಿತಿ ಸಿಗುತ್ತದೆ. ನೀನು ಅಲ್ಲಿಗೇ ಹೋಗಿ ಪಿ. ಹೆಚ್‌. ಡಿ. ಮಾಡು. ಗುಡ್‌ ಲಕ್‌.’’

ಅವನು ಇಂಗ್ಲೆಂಡಿಗೆ ಹೋದನೋ ಇಲ್ಲವೋ ಗೊತ್ತಾಗಲಿಲ್ಲ. ನಮ್ಮ ಯೂನಿವರ್ಸಿಟಿಯಲ್ಲಂತೂ ಮತ್ತೆ ಕಾಣಿಸಿಕೊಳ್ಳಲಿಲ್ಲ.

ನಮ್ಮ ವಿದ್ಯಾರ್ಥಿಗಳ ‘ಜ್ಞಾನ’ದ ಒಂದು ಸ್ಯಾಂಪಲ್‌ ಇದು!

***

ಗೆಳೆಯ ಅಶೋಕ ಶೆಟ್ಟರ ಅವರು ಧಾರವಾಡದ ಜ್ಯೂನಿಯರ್‌ ಕಾಲೇಜೊಂದರಲ್ಲಿ ತಾತ್ಕಾಲಿಕವಾಗಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಸಮಯ. ಅವರು ಬೋಧಿಸುತ್ತಿದ್ದ ವಿಷಯ ಇತಿಹಾಸ. ದ್ವಿತೀಯ ಪಿ. ಯು. ಸಿ. ತರಗತಿಗೆ ಕ್ಲಾಸ್‌ ಟೆಸ್ಟ್‌ ಇಟ್ಟರು. ‘‘ಬುದ್ಧನಿಗೆ ಜ್ಞಾನೋದಯವಾದ ಬಗೆಯನ್ನು ವಿವರಿಸಿ’’ ಎಂಬ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬ ಹೀಗೆ ಉತ್ತರಿಸಿದ್ದ :

‘‘ಬುದ್ಧನು ಸಿದ್ಧಾರ್ಥನು. ಅವನೊಬ್ಬ ರಾಜಕುಮಾರನು. ಒಂದುದಿನ ಅವನಿಗೆ ಅರಮನೆಯಲ್ಲಿರಲು ಬೇಸರವಾಯಿತು. ಅರಮನೆಯಿಂದ ಹೊರಗೆ ಹೊರಟನು. ಹಾಗೇ ತಿರುಗಾಡುತ್ತಾ ಮಾದಾರ ಚೆನ್ನಯ್ಯನ ಮನೆಗೆ ಬಂದನು. ಬಂದು ‘ನನಗೆ ತುಂಬಾ ಬಾಯಾರಿಕೆಯಾಗಿದೆ. ಕುಡಿಯಲು ನೀರು ಕೊಡು’ ಅಂದನು. ಅದಕ್ಕೆ ಮಾದಾರ ಚೆನ್ನಯ್ಯನು ‘ನೀವು ಮೇಲುಜಾತಿಯವರು. ನಾವು ಶೆಡ್ಯೂಲ್ಡ್‌ ಕ್ಯಾಸ್ಟಿನವರು. ನಿಮಗೆ ನೀರು ಕೊಟ್ಟರೆ ನಮಗೆ ಪಾಪವು ಬರುತ್ತದೆ’ ಅಂದನು. ಆಗ ಬುದ್ಧನು ‘ಇಲ್ಲ, ಇಲ್ಲ, ಮಾನವರೆಲ್ಲರೂ ಒಂದೇ. ನನಗೆ ನೀರು ಕೊಟ್ಟರೆ ನಿನಗೆ ಪಾಪವು ಬರುವುದಿಲ್ಲ’ ಅಂದನು. ಆಗ ಮಾದಾರ ಚೆನ್ನಯ್ಯನು ಬುದ್ಧನಿಗೆ ನೀರನ್ನು ಕೊಟ್ಟನು. ಆ ನೀರನ್ನು ಕುಡಿದ ಕೂಡಲೆ ಬುದ್ಧನಿಗೆ ಜ್ಞಾನೋದಯವಾಯಿತು.’’

ಪ್ರಥಮ ಪಿ. ಯು. ಸಿ. ತರಗತಿಯ ಟೆಸ್ಟ್‌ನಲ್ಲಿ ‘‘ಇತಿಹಾಸವೆಂದರೇನು?’’ ಎಂಬ ಪ್ರಶ್ನೆಗೆ ವಿದ್ಯಾರ್ಥಿನಿಯೊಬ್ಬಳ ಉತ್ತರ ಹೀಗಿತ್ತು :

‘‘ಇತಿಹಾಸವೆಂದರೆ ಕೇವಲ ಒಬ್ಬ ರಾಜನ, ರಾಣಿಯ ಅಥವಾ ಒಂದು ಯುದ್ಧದ ಕಥೆಯಲ್ಲ... ಇತಿಹಾಸವೆಂದರೆ ಸಕಲ ಮಾನವ ಜನನಾಂಗದ ಪ್ರಗತಿಯ ಕಥೆ.’’!!!

ನಡೆದಿದ್ದದ್ದೇನೆಂದರೆ ಆ ಹುಡುಗಿ ‘’ಜನಾಂಗದ’’ ಎಂದು ಬರೆಯುವಾಗ ಒಂದು ‘‘ನ’’ ವನ್ನು ಹೆಚ್ಚಾಗಿ ಬರೆದುಬಿಟ್ಟಿದ್ದಳು!

ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ನಾವು ಒಟ್ಟಾಗಿ ಓದುತ್ತಿದ್ದಾಗ ಅಶೋಕ ಶೆಟ್ಟರ ಇದನ್ನು ನಮಗೆ ಹೇಳಿದರು. ಕೇಳಿದ ನಾನೂ, ಸುಬ್ರಹ್ಮಣ್ಯ ಅವರೂ ಉರುಳುರುಳಾಡಿಕೊಂಡು ನಕ್ಕಿದ್ದೆವು.

***

ಹಲವರ್ಷಗಳ ಹಿಂದೆ ರಾಷ್ಟ್ರೀಕೃತ ಬ್ಯಾಂಕೊಂದು ಪಾಂಡಿಚೆರಿಯ ವಿವಿಧ ಶಾಲೆಗಳ ಪ್ಲಸ್‌ ಟೂ ವಿದ್ಯಾರ್ಥಿಗಳಿಗೆ ಕ್ವಿಜ್‌ ಕಾರ್ಯಕ್ರಮವೊಂದನ್ನು ಏರ್ಪಡಿಸಿತ್ತು. ನಾನು ಕ್ವಿಜ್‌ ಮಾಸ್ಟರ್‌. ಸಿ. ಟಿ. ಬಿ. ಟಿ. (Comprehensive test ban treaty) ಬಹುವಾಗಿ ಚರ್ಚಿತವಾಗುತ್ತಿದ್ದ ಕಾಲ ಅದು. ಸರಿ, ಒಬ್ಬ ಸ್ಪರ್ಧಿಯನ್ನು ‘‘ಸಿ. ಟಿ. ಬಿ. ಟಿ. ಎಂದರೇನು?’’ ಎಂದು ಕೇಳಿದೆ. ಬಂದ ಉತ್ತರ ಹೀಗಿತ್ತು.

‘‘ಕಂಟ್ರೋಲ್ಡ್‌ ಟೌನ್‌ ಬಸ್‌ ಟ್ರ್ಯಾನ್ಸ್‌ಪೋರ್ಟೇಷನ್‌’’

ಅವನ ಕಲ್ಪನಾ ಶಕ್ತಿಯನ್ನು ಕಂಡು ದಂಗಾಗಿ ಹೋದೆ.

ಇದು ಇಷ್ಟಕ್ಕೇ ನಿಲ್ಲಲಿಲ್ಲ.

‘‘ನಮ್ಮ ದೇಶದ ಭೂಸೇನೆಯ ದಂಡನಾಯಕರಾರು?’’ ಎಂಬ ಪ್ರಶ್ನೆಗೆ ಬಂದ ಉತ್ತರ ‘‘ಮಹಾತ್ಮಾ ಗಾಂಧಿ!’’

ನಾನು ಮೂರ್ಛೆ ಹೋಗುವುದೊಂದೇ ಬಾಕಿ!

***

ಆ ವರ್ಷ ಎಂ. ಫಿಲ್‌. ತರಗತಿಯಲ್ಲಿ ಇಬ್ಬರೇ ವಿದ್ಯಾರ್ಥಿಗಳು. ಒಬ್ಬ ವಿದ್ಯಾರ್ಥಿ. ಒಬ್ಬಳು ವಿದ್ಯಾರ್ಥಿನಿ. ಆಕೆ ವಯಸ್ಸಿನಲ್ಲಿ ನನಗಿಂತಲೂ ದೊಡ್ಡವಳು! ‘‘ನ್ಯಾಟೋ’’ ಬಗ್ಗೆ ಪಾಠ ಮಾಡುತ್ತಿದ್ದೆ. ಸೋವಿಯೆತ್‌ ಯೂನಿಯನ್‌ಗೆ ವಿರುದ್ಧವಾಗಿ ಪಶ್ಚಿಮ ಯೂರೋಪಿಯನ್‌ ರಾಷ್ಟ್ರಗಳೊಂದಿಗೆ ಸೇರಿಕೊಂಡು ಅಮೆರಿಕಾ ಕಟ್ಟಿದ ಈ ಮಿಲಿಟರಿ ಕೂಟದ ಬಗ್ಗೆ ವಿವರವಾಗಿ ಹೇಳಿದೆ. ಕೊನೆಯಲ್ಲಿ ಮಾಮೂಲಿನಂತೆ ಎಂದೆ. ಹುಡುಗ ಒಂದೆರಡು ಪ್ರಶ್ನೆ ಕೇಳಿದ. ವಿವರಿಸಿದೆ. ಸಮಾಧಾನದಿಂದ ತಲೆಯಾಡಿಸಿದ. ಆ ವಿದ್ಯಾರ್ಥಿನಿ ಕೈಯೆತ್ತಿದಳು. ಹಿಂದೆಯೇ ಪ್ರಶ್ನೆ ಬಂತು. ‘‘ಸೋವಿಯೆತ್‌ ಯೂನಿಯನ್‌ ನ್ಯಾಟೋದ ಸದಸ್ಯನಾಗಿತ್ತೆ?’’

ನಾನು ಸುಸ್ತಾಗಿಹೋದೆ. ನಾನು ಎರಡು ಗಂಟೆಯಿಂದಾ ಕೊರೆದದ್ದು ಯಾತಕ್ಕೂ ಪ್ರಯೋಜನವಾಗಿರಲಿಲ್ಲ. ‘‘ಹಾಗಲ್ಲ... ಹಾಗಲ್ಲ... ’’ಎಂದು ಏನೋ ಹೇಳಲು ಪ್ರಯತ್ನಿಸಿದೆ. ಅಷ್ಟರಲ್ಲಿ ಆ ಹುಡುಗ ಅವಳತ್ತ ತಿರುಗಿ ತಮಿಳಿನಲ್ಲಿ ಏನೇನೋ ಬಯ್ಯತೊಡಗಿದ. ನನಗೆ ಆಗ ತಮಿಳು ಬರುತ್ತಿರಲಿಲ್ಲ. ಹೀಗಾಗಿ ಅವನೇನು ಬೈದ ಎಂದು ಅರ್ಥವಾಗಲಿಲ್ಲ. ಆದರೆ ಆ ‘ಘನವಿದ್ಯಾರ್ಥಿನಿ’ ಮಾತ್ರ ತಲೆ ತಗ್ಗಿಸಿ ಕೂತುಬಿಟ್ಟಳು. ಅವನು ನನ್ನತ್ತ ತಿರುಗಿ ‘‘ನೀವು ಹೋಗಿ ಸಾರ್‌’’ ಅಂದ! ಅದಕ್ಕೇ ಕಾಯುತ್ತಿದ್ದವನಂತೆ ನಾನು ಕ್ಲಾಸ್‌ರೂಮಿನಿಂದ ಹೊರಗೆ ಓಡಿಬಿಟ್ಟೆ. ಹೀಗಾಗಿ ಅವಳ ಪ್ರಶ್ನೆಗೆ ಉತ್ತರಿಸುವ ಅಪಾಯದಿಂದ ಪಾರಾದೆ.

***

ಸಹೋದ್ಯೋಗಿಯೊಬ್ಬರ ಕೈಕೆಳಗೆ ವಿದ್ಯಾರ್ಥಿಯೊಬ್ಬ ಎಂ. ಫಿಲ್‌. ಮಾಡುತ್ತಿದ್ದ. ಅವನ ಇಂಗ್ಲಿಷ್‌ ಜ್ಞಾನ ಅಷ್ಟಕ್ಕಷ್ಟೇ. ಅವನ ಸಂಶೋಧನೆ ಭಾರತದ ಅಣುತಂತ್ರಜ್ಞಾನದ ಬಗ್ಗೆ. ಹತ್ತಿರದ ಕಲ್ಪಾಕ್ಕಂನಲ್ಲಿರುವ ಅಟಾಮಿಕ್‌ ರೀಸರ್ಚ್‌ ಸ್ಟೇಷನ್‌ಗೆ ಹೋಗಿ ವಿಷಯ ಸಂಗ್ರಹಣೆ ಮಾಡಿಕೊಂಡು ಬರಲು ಗೈಡ್‌ ಎರಡು ಮೂರು ಸಲ ಹೇಳಿದರು. ಅವನು ಹೋಗಲಿಲ್ಲ. ಸಾಕಷ್ಟು ಸಮಯ ಕಳೆದೇಹೋಯಿತು. ಒಂದು ದಿನ ಅವನು ಬಂದಾಗ ಅವನ ಗೈಡ್‌ ರಜೆಯಲ್ಲಿದ್ದರು.

‘‘ಕಲ್ಪಾಕ್ಕಂಗೆ ಹೋಗಿದ್ದೆಯಾ?’’ ಕೇಳಿದೆ.

‘‘ಇಲ್ಲ’’ ಅಂದ ಭೂಪ!

‘‘ಇನ್ನೂ ಯಾಕೆ ಹೋಗಿಲ್ಲ? ಇನ್ನೊಂದೆರಡು ವಾರದಲ್ಲಿ ನಿನ್ನ ಡಿಸರ್ಟೇಷನ್‌ ತಯಾರಾಗಬೇಕು. ಇನ್ನೂ ವಿಷಯಸಂಗ್ರಹಣೆ ಮಾಡದೇ ಏನು ಮಾಡುತ್ತಿದ್ದೀಯ?’’ ಅಂದೆ. ತಲೆ ತಗ್ಗಿಸಿ ನಿಂತುಕೊಂಡ. ಕಲ್ಪಾಕ್ಕಂಗೆ ಹೋಗದಿರಲು ಏನೋ ಬಲವಾದ ಕಾರಣ ಇರಬೇಕೆನಿಸಿತು. ಕೇಳಿದೆ.

‘‘ದುಡ್ಡಿಲ್ಲಾ ಸಾರ್‌’’ ಅಂದ.

ನನಗೆ ನಿಜಕ್ಕೂ ತುಂಬ ಬೇಸರವಾಯಿತು. ಅವನಿಗೆ ಸಹಾಯ ಮಾಡಲು ಮನ ತವಕಿಸಿತು.

‘‘ಅರವತ್ತು ಕಿ. ಮೀ. ದೂರದ ಊರಿಗೆ ಹೋಗಲು ಅದೆಷ್ಟಾಗುತ್ತದೆ? ನಾನೇ ದುಡ್ಡು ಕೊಡುತ್ತೇನೆ. ಈವತ್ತೇ ಹೊರಡು’’ ಅಂದೆ.

ಅವನು ರಭಸವಾಗಿ ತಲೆ ಅಲುಗಿಸುತ್ತಾ ‘‘ಬೇಡ ಬೇಡ. ನಾನು ಮನೆಯಲ್ಲಿರೋ ಪಾತ್ರೆಗಳನ್ನ ಮಾರಿ ಹಣ ಮಾಡಿಕೊಳ್ಳುತ್ತೇನೆ. ಪಾತ್ರೆಗಳನ್ನು ಮಾರಿದರೆ ಕಲ್ಪಾಕ್ಕಂಗೆ ಹೋಗಿಬರಲು ಬೇಕಾದಷ್ಟು ಹಣ ಸಿಗುತ್ತದೆ’’ ಅಂದ!

ನಾನು ಬೆಚ್ಚಿದೆ. ಮನೆಯಲ್ಲಿರುವ ಪಾತ್ರೆಗಳನ್ನು ಮಾರುತ್ತೇನೆ ಅನ್ನುತ್ತಿದ್ದಾನಲ್ಲ! ತುಂಬಾ ಬಡವರಿರಬೇಕು ಎನಿಸಿ ಮನಸ್ಸಿಗೆ ನೋವಾಯಿತು.

‘‘ಬೇಡಪ್ಪಾ. ಮನೆಯ ಪಾತ್ರೆಗಳನ್ನು ಯಾಕೆ ಮಾರುತ್ತಿಯ? ಹಾಗೆ ಮಾಡಬೇಡ. ನಾನು ಹಣ ಕೊಡುತ್ತೇನೆ’’ ಎನ್ನುತ್ತಾ ಭುಜ ಸವರಿದೆ.

ಅವನು ಮತ್ತೂ ರಭಸವಾಗಿ ತಲೆಯ ಜತೆ ಕೈಗಳನ್ನೂ ಆಡಿಸುತ್ತಾ ‘‘ಬೇಡ ಬೇಡ. ನಿಮ್ಮ ಹಣ ಬೇಡ. ನಾನು ಪಾತ್ರೆಗಳನ್ನೇ ಮಾರುತ್ತೇನೆ’’ ಎಂದು ಹೇಳುತ್ತಾ ಅಲ್ಲಿ ನಿಲ್ಲದೇ ಹೊರಟುಹೋದ.

ನಾನು ದಂಗಾಗಿ ನಿಂತೆ.

ಮಾರನೆಯ ದಿನ ಸಹೋದ್ಯೋಗಿ ಬಂದಾಗ ಅವರಿಗೆ ವಿಷಯ ಹೇಳಿದೆ. ‘‘ಪಾಪ ತುಂಬಾ ಬಡತನವಿರಬೇಕು. ಬಸ್‌ಛಾರ್ಜಿಗಾಗಿ ಮನೆಯ ಪಾತ್ರೆಗಳನ್ನೇ ಮಾರಬೇಕಾದ ಪರಿಸ್ಥಿತಿ ಅವನದು. ಅಯ್ಯೋ ಪಾಪ’’ ಅಂದೆ. ನನ್ನ ಮಾತು ಕೇಳಿದ ಅವರು ನಗತೊಡಗಿದರು. ವಿಷಯವೇನೆಂದು ಕೇಳಿದಾಗ ಅವರು ಹೇಳಿದ್ದು ಇದು :

ಆ ಹುಡುಗನ ತಂದೆ ಹಳ್ಳಿಯಲ್ಲಿ ಪ್ರಸಿದ್ಧ ನಾಟೀ ವೈದ್ಯರು. ಅವರಿಂದ ಚಿಕಿತ್ಸೆ ಪಡೆದ ಹಳ್ಳಿಯ ಜನ ಹಣದ ಬದಲು ತಟ್ಟೆ, ಲೋಟ, ಚೊಂಬು, ಪಾತ್ರೆಗಳನ್ನು ಫೀಸ್‌ ಆಗಿ ಕೊಡುತ್ತಿದ್ದರು! ಹೀಗಾಗಿ ಅವರ ಮನೆಯಲ್ಲಿ ಪಾತ್ರೆಗಳ ರಾಶಿಯೇ ಇತ್ತು. ಹಣ ಬೇಕಾದಾಗಲೆಲ್ಲಾ ಒಂದಷ್ಟು ಪಾತ್ರೆಗಳನ್ನು ಮಾರಿಬಿಡುತ್ತಿದ್ದರು!

ವಿಷಯ ತಿಳಿದು ನಾನೂ ನಕ್ಕೆ.

***

ಕೆಲವರ್ಷಗಳ ಹಿಂದೆ ನಮ್ಮ ಎಂ.ಎ. ತರಗತಿಯಲ್ಲಿ ಭಾರತೀಯ ವಿದ್ಯಾರ್ಥಿಗಳಿಗಿಂತಲೂ ಆಫ್ರಿಕನ್‌ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿದ್ದರು. ಅವರಲ್ಲಿ ಹೆಚ್ಚಿನವರು ಯೂನಿವರ್ಸಿಟಿ ಹಾಸ್ಟೆಲ್‌ನಲ್ಲಿರದೇ ಸಿಟಿಯಲ್ಲಿ ಬಾಡಿಗೆ ಮನೆಗಳನ್ನು ತೆಗೆದುಕೊಂಡು ವಾಸಿಸುತ್ತಿದ್ದರು. ಕೆಲವರದಂತೂ ಲಂಗು ಲಗಾಮಿಲ್ಲದ ಸ್ವಚ್ಚಂದ ಬದುಕು.

ಎತ್ತರ, ಗಾತ್ರದಲ್ಲಿ ಭಾರಿಯಾಗಿದ್ದು ರಾಮಾಯಣ, ಮಹಾಭಾರತದ ರಾಕ್ಷಸಿಯರಂತಿದ್ದ ಹುಡುಗಿಯೊಬ್ಬಳಿಗೆ ಒಬ್ಬ ಬಾಯ್‌ುಫ್ರೆಂಡ್‌. ಅವನೂ ಆಫ್ರಿಕನ್ನನೇ. (ನಮ್ಮವರ ಕೈಲಿ ಏಗಲಾಗುವುದಿಲ್ಲ ಬಿಡಿ). ಅವನು ಮದ್ರಾಸಿನಲ್ಲಿ ವಿದ್ಯಾರ್ಥಿ. ಶನಿವಾರ, ಭಾನುವಾರಗಳಂದು ಪಾಂಡಿಚೆರಿಗೆ ಬಂದು ಅವಳ ಜತೆ ಕಳೆದು ಹೋಗುತ್ತಿದ್ದ.

ಇದು ಸ್ವಲ್ಪ ಕಾಲ ನಡೆಯಿತು. ಇವಳಿಗೆ ಸೋಮವಾರದಿಂದ ಶುಕ್ರವಾರದವರೆಗೆ ಒಂಟಿಯಾಗಿ ಕಳೆಯುವುದು ಕಷ್ಟವಾಗಿರಬೇಕು. ಪಾಂಡಿಚೆರಿಯಲ್ಲೇ ಕೈಗೆ ಸಿಕ್ಕಿದ ಇನ್ನೊಬ್ಬ ಆಫ್ರಿಕನ್ನನ ಗೆಳೆತನ ಮಾಡಿದಳು. ವಾರದದಿನಗಳಲ್ಲಿ ಇವನ ಪಾಳಿಯಾದರೆ ವಾರಾಂತ್ಯದಲ್ಲಿ ಮದ್ರಾಸಿನವನ ಪಾಳಿ.

ಇದೂ ಸ್ವಲ್ಪ ಕಾಲ ಸುಗಮವಾಗಿಯೇ ನಡೆಯಿತು.

ಆದರೆ ಒಂದುಸಲ ಮದ್ರಾಸಿನವನು ಇದ್ದಕ್ಕಿದ್ದಂತೇ ಬುಧವಾರವೇ ಬಂದುಬಿಟ್ಟ! ಪ್ರೇಯಸಿಯ ಮನೆಯಲ್ಲಿ ಬೇರೊಬ್ಬ ಇರುವುದನ್ನು ಕಂಡು ಉರಿದುಹೋದ. ಹೆದರಿದ ಲೋಕಲ್‌ ಬಾಯ್‌ುಫ್ರೆಂಡ್‌ ಓಡಿಹೋದ. ಇವನು ಅವಳನ್ನು ಹಿಡಿದುಕೊಂಡು ಚೆನ್ನಾಗಿ ಬಡಿದ. ಅವಳ ಬೆಡ್‌ರೂಮಿಗೆ ನುಗ್ಗಿ ಒಂದೆರಡು ನಿಮಿಷವಿದ್ದು ಹೊರಟುಹೋದ.

ಅವಳು ಅದೆಷ್ಟೋ ಹೊತ್ತಿನವರೆಗೆ ಡ್ರಾಯಿಂಗ್‌ ರೂಮಿನಲ್ಲಿ ನರಳುತ್ತಾ ಬಿದ್ದಿದ್ದಳು. ಸುಮಾರು ಹೊತ್ತಿನ ಮೇಲೆ ಮೆತ್ತನೆಯ ಹಾಸಿಗೆಯಲ್ಲಿ ಮಲಗಿದರೆ ಏಟು ತಿಂದ ಮೈಗೆ ಒಳ್ಳೆಯದು ಅನಿಸಿತು. ಪ್ರಯಾಸದಿಂದ ಬೆಡ್‌ರೂಮಿಗೆ ಹೋಗಿ ನೋಡುತ್ತಾಳೆ...!

ಅಲ್ಲಿ...

ಅವಳ ಮೇಲೆ ರೋಷಗೊಂಡ ಆ ಪ್ರೇಮಿ ಅವಳ ಹಾಸಿಗೆಯ ಮೇಲೇ ಎರಡಕ್ಕೆ ಮಾಡಿ ಹೊಲಸೆಬ್ಬಿಸಿ ಹೊರಟುಹೋಗಿದ್ದಾನೆ!

ತಮಗೆ ಯಾರ ಮೇಲಾದರೂ ಅತೀ ಕೋಪ, ಬೇಸರ ಮೂಡಿದಾಗ ಅವರ ಮನೆಯ ಮುಂದೆ, ಸಾಧ್ಯವಾದರೆ ಮನೆಯೊಳಗೇ ಎರಡಕ್ಕೆ ಮಾಡಿಬಿಡುವುದು ಆಫ್ರಿಕನ್ನರ ಅಭ್ಯಾಸವಂತೆ! ತಮ್ಮ ಕೋಪವನ್ನು ವ್ಯಕ್ತಪಡಿಸುವ ಒಂದು ವಿಧಾನ ಅದು ಎಂದು ತಿಳಿದಾಗ ನಾವೆಲ್ಲಾ ನಕ್ಕಿದ್ದೇ ನಕ್ಕಿದ್ದು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X