ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೇಟೆಂಟ್‌ ಕಾನೂನುಗಳು ನಮಗೆ ಬೇಕೇ?

By Staff
|
Google Oneindia Kannada News

Krishnaraj P.M., Bangaloreಕೃಷ್ಣರಾಜ್‌ ಪಿ. ಎಂ.
[email protected]
Importance and impact of Patent ಮನುಷ್ಯ ತನ್ನ ಬೆಳವಣಿಗೆಯ ಹಾದಿಯಲ್ಲಿ ಬಹಳ ಮುಂದುವರೆದಿದ್ದಾನೆ. ಹಲವಾರು ಜನ ತಮ್ಮ ಜೀವನವೆಲ್ಲಾ ಶ್ರಮಿಸಿ ಮನುಕುಲದ ಏಳಿಗೆಗೆ ಕಾರಣರಾಗಿದ್ದಾರೆ. ಹಿಂದೆಲ್ಲಾ ಇಂತಹ ಮಹನೀಯರಿಗೆ ಹೆಸರಿನ ಅಥವಾ ದುಡ್ಡಿನ ಮೇಲೆ ಆಸೆ ಇರಲ್ಲಿಲ್ಲ. ಹಲವಾರು ಜನ ಅನಾಮಧೇಯರಾಗಿಯೇ ಉಳಿದರು. ಆದರೆ ಇಂದಿನ ಪರಿಸ್ಥಿತಿ ಬದಲಾಗಿದೆ. ಈಗ ಪ್ರತಿಯಾಬ್ಬರಿಗೂ ಕೀರ್ತಿಶನಿಯನ್ನು ತಮ್ಮ ಹೆಗಲಿಗೇರಿಸಿಕೊಳ್ಳುವ ಹುಚ್ಚು. ಮಾಡಿರುವುದು ಚಿಕ್ಕ ಕೆಲಸವಾದರೂ ದೊಡ್ಡ ಹೆಸರಿನ ಹಂಬಲ. ಅದಕ್ಕೆ ಬೇಕಾದ ಕಾನೂನುಗಳು ಸಹ ನಮ್ಮಲ್ಲಿವೆ. ಈ ಪಟ್ಟಿಯಲ್ಲಿ ಕಾಪೀರೈಟ್‌ ಮತ್ತು ಪೇಟೆಂಟ್‌ ಮುಖ್ಯವಾದುವುಗಳು. ಆದರೆ ಬಹುತೇಕ ಕಾನೂನುಗಳ ಹಾಗೆ ಇವೂ ಕೂಡ ಸರಿಯಾಗಿ ಬಳಕೆಯಾಗುತ್ತಿಲ್ಲ. ಅದರಲ್ಲೂ ಪೇಟೆಂಟ್‌ನ ಉಪಯೋಗಕ್ಕಿಂತ ಉಪದ್ರವವೇ ಹೆಚ್ಚಾಗಿದೆ.

‘ಪೇಟೆಂಟ್‌’ ಎಂಬುದು ಹೊಸ ಆವಿಷ್ಕಾರಗಳಿಗೆ ಕಾನೂನಿನ ಮೂಲಕ ಸಿಗುವ ಮಾನ್ಯತೆ. ಪೇಟೆಂಟ್‌ನ್ನು 3 ಬಗೆಯ ಆವಿಷ್ಕಾರಗಳಿಗೆ ನೀಡಲಾಗುತ್ತದೆ. ಅವುಗಳೆಂದರೆ- ಹೊಸ ಸಸ್ಯ ಪ್ರಕಾರಗಳ ಸಂಶೋಧನೆ, ಹೊಸ ವಿನ್ಯಾಸಗಳ ತಯಾರಿಕೆ ಮತ್ತು ಹೊಸ ಉಪಯುಕ್ತ ವಸ್ತುಗಳ ಉತ್ಪಾದನೆ. ಕೊನೆಯಲ್ಲಿ ತಿಳಿಸಿದ ವಿಭಾಗದಲ್ಲಿ ಹೊಸ ಯಂತ್ರಗಳು, ಹೊಸ ಮಿಶ್ರಣಗಳು, ಹೊಸ ಸಂಸ್ಕರಣಾ ವಿಧಾನಗಳು ಮತ್ತು ಹೊಸ ಸಾಧನಗಳು ಪೇಟೆಂಟ್‌ಗೆ ಅರ್ಹವಾಗಿರುತ್ತವೆ.

ಎಲ್ಲಾ ಹೊಸ ಆವಿಷ್ಕಾರಗಳು ಪೇಟೆಂಟ್‌ಗೆ ಅರ್ಹವಾಗುವುದಿಲ್ಲ. ಕೆಲವು ಮೂಲಭೂತ ವಿಜ್ಞಾನ ಮತ್ತು ಗಣಿತದ ಸಿದ್ಧಾಂತಗಳು, ಪ್ರಾಕೃತಿಕ ಸತ್ಯಗಳು, ಮನುಷ್ಯನ ಚಿಂತನೆಗಳು ಮತ್ತು ಅತ್ಯಂತ ಸಹಜ ವಿಚಾರಗಳನ್ನು ಪೇಟೆಂಟ್‌ ಮಾಡಿಕೊಳ್ಳಲಾಗುವುದಿಲ್ಲ.

ಉದಾ: + , - , * , / ಮುಂತಾದ ಕ್ರಿಯೆಗಳು, ಮಳೆ, ಗಾಳಿ, ನೀರು ಮುಂತಾದ ಪ್ರಾಕೃತಿಕ ವಿಚಾರಗಳು, ಮನುಷ್ಯ ಕಂಡ ಕನಸು ಇತ್ಯಾದಿ. ಯಾವುದೇ ಹೊಸ ಆವಿಷ್ಕಾರ ಪೇಟೆಂಟ್‌ಗೆ ಅರ್ಹವಾಗಬೇಕಾದರೆ ಈ ಕೆಳಕಂಡ 3 ಪರೀಕ್ಷೆಗಳಿಗೆ ಒಳಪಡಬೇಕಾಗುತ್ತದೆ. ಅವುಗಳೆಂದರೆ-

ಆ ಹೊಸ ಆವಿಷ್ಕಾರ ಮೇಲ್ಕಂಡ ವಿಭಾಗಗಳಲ್ಲಿ ಒಂದಕ್ಕೆ ಸೇರಿರಬೇಕು, ಅದು ಹೊಸ ಉಪಯುಕ್ತ ಆವಿಷ್ಕಾರವಾಗಿರಬೇಕು ಮತ್ತು ಅದು ತೀರ ಸಹಜವಾದ ಪ್ರಕ್ರಿಯೆಯಾಗಿರಬಾರದು. ಹೀಗೆ ಪರೀಕ್ಷೆಗಳು ಮುಗಿದ ಬಳಿಕ ಆ ಆವಿಷ್ಕಾರಕ್ಕೆ ‘ಪೇಟೆಂಟ್‌’ ನೀಡಲಾಗುತ್ತದೆ. ಈ ‘ಪೇಟೆಂಟ್‌’ ಹೊಂದಿರುವ ವ್ಯಕ್ತಿ ನಂತರದ 20 ವರ್ಷಗಳ ತನಕ ಆ ಆವಿಷ್ಕಾರದ ಸಂಪೂರ್ಣ ಯಜಮಾನ. ಆ 20 ವರ್ಷ ಅದು ಅವನ ಆಸ್ತಿ , ಅದನ್ನು ಯಾವ ರೀತಿಯಲ್ಲಿ ಬೇಕಾದರೂ ಬಳಸಿಕೊಳ್ಳುವ ಅಧಿಕಾರ ಕಾನೂನು ಅವನಿಗೆ ನೀಡಿದೆ.

ಮೂಲತಃ ‘ಪೇಟೆಂಟ್‌’ನ ಉದ್ದೇಶವೆಂದರೆ ಹೊಸ ಸಂಶೋಧನೆಗಳಿಗೆ ಪ್ರೋತ್ಸಾಹ. ಒಬ್ಬ ವ್ಯಕ್ತಿಗೆ ತನ್ನ ಸಂಶೋಧನೆಯ ಮೇಲೆ ಸಂಪೂರ್ಣ ಅಧಿಕಾರ ಸಿಗುತ್ತದೆ ಎಂದು ಖಾತ್ರಿಯಾದರೆ ಅವನು ಅದನ್ನು ಜಗತ್ತಿಗೆ ತಿಳಿಸುತ್ತಾನೆ. ಇದರಿಂದ ಜಗತ್ತಿಗೂ ಅನುಕೂಲವಾಗುತ್ತದೆ, ಸಂಶೋಧನೆ ಮಾಡಿದವನಿಗೂ ಅದರ ಪ್ರತಿಫಲ ದೊರೆತಂತಾಗುತ್ತದೆ. ಆದರೆ ಈಗ ‘ಪೇಟೆಂಟ್‌’ನ ದುರ್ಬಳಕೆಯಾಗುತ್ತಿರುವುದೇ ಹೆಚ್ಚು. ‘ಪೇಟೆಂಟ್‌’ ನ ಮೂಲ ಉದ್ದೇಶ ಎಲ್ಲೋ ಕಣ್ಮರೆಯಾಗುತ್ತಿದೆ.

ಪೇಟೆಂಟ್‌ನಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದ ಅಂಶವೊಂದಿದೆ. ನಿಮ್ಮ ಸಂಶೋಧನೆಗೆ ಪೇಟೆಂಟ್‌ ಸಿಗಬೇಕಾದರೆ ನೀವು ಪೇಟೆಂಟ್‌ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದ ಮೊದಲಿಗರಾಗಿರಬೇಕು. ನಿಮ್ಮದೇ ಸಂಶೋಧನೆಯನ್ನು ನಿಮಗಿಂತ ಮೊದಲೇ ಯಾರಾದರೂ ಅರ್ಜಿ ಸಲ್ಲಿಸಿ ಪೇಟೆಂಟ್‌ ಪಡೆದುಕೊಂಡಿದ್ದರೆ ನೀವು ಏನೂ ಮಾಡುವ ಹಾಗಿಲ್ಲ. ಅಂದರೆ ಪೇಟೆಂಟ್‌ ವ್ಯವಸ್ಥೆಯಲ್ಲಿ ಮೊದಲು ಬಂದವರಿಗೇ ಆದ್ಯತೆ. ಇಲ್ಲಿ ಪೇಟೆಂಟ್‌ ಪಡೆದುಕೊಳ್ಳಲು ಸಮಯವೇ ಮಾನದಂಡ, ನೀವು ಮಾಡಿದ ಕೆಲಸವಲ್ಲ.

ಈ ವಿಷಯ ತೀರಾ ಸಣ್ಣದೆಂದು ತಿಳಿಯಬೇಡಿ. ಪೇಟೆಂಟ್‌ ಪಡೆದುಕೊಳ್ಳುವ ಪ್ರಕ್ರಿಯೆಯನ್ನು ತಿಳಿದುಕೊಂಡಾಗ ಈ ವಿಷಯದ ಗಂಭೀರತೆಯ ಅರಿವಾಗುತ್ತದೆ. ಪೇಟೆಂಟ್‌ ಪಡೆಯಲು ಮೊದಲಿಗೆ ಪೇಟೆಂಟ್‌ ಕಾರ್ಯಾಲಯಕ್ಕೆ ಅರ್ಜಿ ಹಾಕಬೇಕು. ಇದರ ಜೊತೆಯಲ್ಲಿ ಸ್ವಲ್ಪ ದುಬಾರಿಯೆನಿಸುವ ಶುಲ್ಕವನ್ನು ಕಟ್ಟಬೇಕು. ಈ ಅರ್ಜಿ ಸಾಮಾನ್ಯದ್ದೇನಲ್ಲ. ಇದರಲ್ಲಿ ಸಂಶೋಧನೆಯ ಎಲ್ಲಾ ವಿವರಣೆಯೂ ಇರಬೇಕು. ಇದನ್ನು ಬರೆಯಲೆಂದೇ ವಿಶೇಷ ವಕೀಲರ ಸಹಾಯವನ್ನು ಪಡೆಯಬೇಕಾಗಬಹುದು. ಇವರ ಫೀಜೂ ಬಹಳ ದುಬಾರಿಯಾಗಿರುತ್ತದೆ. ಅವರು ಬರೆಯುವ ಅರ್ಜಿ ಎಷ್ಟು ಸಂಕೀರ್ಣವಾಗಿರುತ್ತದೆ ಎಂದರೆ ನಿಮ್ಮ ಸಂಶೋಧನೆ ನಿಮಗೇ ಅರ್ಥವಾಗದೇ ಇರುವ ಸಾಧ್ಯತೆಗಳೇ ಹೆಚ್ಚು. ಈ ಮಧ್ಯೆ ನಿಮ್ಮ ಸಂಶೋಧನೆಗೆ ನೀವು ಬೇರೆ ಯಾವುದೇ ಸಂಶೋಧನೆಯ ನೆರವು ಪಡೆದಿದ್ದರೆ ಮತ್ತು ಆ ಸಂಶೋಧನೆ ಪೇಟೆಂಟ್‌ಯುಕ್ತವಾಗಿದ್ದರೆ, ನೀವು ಮತ್ತಷ್ಟೂ ಕೆಲಸ ಮಾಡಬೇಕಾಗುತ್ತದೆ. ಮೊದಲಿಗೆ ಆ ಪೇಟೆಂಟ್‌ ಹೊಂದಿರುವವರನ್ನು ಹುಡುಕಿ ಅವರ ಅನುಮತಿಯನ್ನು ಪಡೆಯಬೇಕಾಗುತ್ತದೆ. ಅನುಮತಿ ನೀಡಲು ಅವರು ಹಣ ಕೇಳಬಹುದು. ಸಾಮಾನ್ಯವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಏನಾದರೂ ಹೊಸ ಸಂಶೋಧನೆ ಮಾಡಬೇಕೆಂದರೆ ಅದು ಹಿಂದೆ ಅನೇಕರು ಮಾಡಿದ ಕೆಲಸದ ಮೇಲೆಯೇ ಅವಲಂಬಿತವಾಗಿರುತ್ತದೆ. ಹೀಗಿರುವಾಗ ಆ ಎಲ್ಲಾ ಸಂಶೋಧಕರ ಅನುಮತಿ ಪಡೆಯುವುದೂ ಮತ್ತು ಅವರು ಕೇಳಿದಷ್ಟು ಹಣ ಕೊಡುವುದರಲ್ಲೇ ಬಹಳ ಸಮಯ ಕಳೆದುಹೋಗುತ್ತದೆ. ಹೀಗೆ ಪೇಟೆಂಟ್‌ನ ಅರ್ಜಿ ತಯಾರಿಸಲಿಕ್ಕೇ ಬಹಳ ಸಮಯ ಬೇಕಾಗುತ್ತದೆ. ಈ ಅರ್ಜಿ ಸಲ್ಲಿಸಿದ ಸುಮಾರು 24-36 ತಿಂಗಳುಗಳ ನಂತರ ನಿಮಗೆ ಪೇಟೆಂಟ್‌ ಸಿಗುತ್ತದೆ. ಆದ್ದರಿಂದ ಪೇಟೆಂಟ್‌ನಲ್ಲಿ ಸಮಯಕ್ಕೆ ಬಹಳ ಮಹತ್ವವಿದೆ.

ಪೇಟೆಂಟ್‌ನ ಮತ್ತೊಂದು ತೊಂದರೆಯೆಂದರೆ ಪೇಟೆಂಟ್‌ ಸಿಗಲು ನೀವು ಹೊಸ ಸಂಶೋಧನೆಯನ್ನೇನೂ ಮಾಡಬೇಕಾಗಿಲ್ಲ. ನಿಮಗೆ ಏನಾದರೂ ಹೊಸ ಯಂತ್ರದ ಯೋಚನೆ ಬಂದು, ಅದರ ಕಾಲ್ಪನಿಕ ಚಿತ್ರ ಬರೆದು ಕಳಿಸಿದರೂ ಸಾಕು, ನಿಮಗೆ ಅದರ ಪೇಟೆಂಟ್‌ ಲಭ್ಯವಾಗುತ್ತದೆ. ಇನ್ಯಾರಾದರೂ ಕಷ್ಟಪಟ್ಟು ಮುಂದಿನ ದಿನದಲ್ಲಿ ಅದೇ ಯಂತ್ರವನ್ನು ಕಟ್ಟಿದರೂ ಅವನ ಪ್ರಯತ್ನಕ್ಕೆ ಫಲ ಸಿಗದು. ಅದರ ಪೇಟೆಂಟ್‌ ನಿಮ್ಮ ಬಳಿ ಇರುತ್ತದೆ. ಪೇಟೆಂಟ್‌ ಇತಿಹಾಸದಲ್ಲಿ ಈ ರೀತಿ ಹಲವಾರು ಬಾರಿ ನಡೆದಿದೆ. ಅಂದರೆ ಪೇಟೆಂಟ್‌ ವ್ಯವಸ್ಥೆಯಲ್ಲಿ ಕೆಲವೊಮ್ಮೆ ಕೆಲಸಕ್ಕಿಂತ ಕಲ್ಪನೆಗೇ ಹೆಚ್ಚು ಆದ್ಯತೆ ಸಿಗುತ್ತದೆ.

ಭಾರತದಲ್ಲಿ ಪೇಟೆಂಟ್‌ ಕಾನೂನು 1970ರಲ್ಲಿ ಜಾರಿಗೆ ಬಂದಿತು. ತದನಂತರ 1999 ಮತ್ತು 2002ರಲ್ಲಿ ಅದಕ್ಕೆ ತಿದ್ದುಪಡಿ ತರಲಾಯಿತು. ಈ ಕಾನೂನಿನ ಪ್ರಕಾರ ಭಾರತದಲ್ಲಿ ಹೊಸ ವಸ್ತುಗಳಿಗೆ ಪೇಟೆಂಟ್‌ ನೀಡಲಾಗುತ್ತಿರಲಿಲ್ಲ. ಆ ವಸ್ತುವನ್ನು ತಯಾರಿಸುವ ಪ್ರಕ್ರಿಯೆಗೆ ಮಾತ್ರ ಪೇಟೆಂಟ್‌ ನೀಡಲಾಗುತ್ತಿತ್ತು. ಅಂದರೆ ನೀವು ಹೊಸ ಪೆನ್ನನ್ನು ಸಂಶೋಧನೆ ಮಾಡಿದರೆ ಅದರ ಪೇಟೆಂಟ್‌ ನಿಮಗೆ ಸಿಗದು. ಬದಲಿಗೆ ಅದಕ್ಕೆ ‘ಬರವಣಿಗೆಯಲ್ಲಿ ಉಪಯೋಗಿಸಬಹುದಾದ ವಸ್ತುವನ್ನು ಉತ್ಪಾದಿಸುವ ಹೊಸ ಪ್ರಕ್ರಿಯೆ’ ಎಂದು ನಾಮಕರಣ ಮಾಡಿದರೆ ನಿಮಗೆ ಅದರ ಪೇಟೆಂಟ್‌ ಸಿಗುತ್ತಿತ್ತು. ಈ ವಿಚಾರ ಹಾಸ್ಯಾಸ್ಪದವೆನ್ನಿಸಬಹುದು. ಆದರೆ ಇದರ ಹಿಂದೆ ಗಂಭೀರ ವಿಷಯವೊಂದಿದೆ. ವಸ್ತುಗಳಿಗೆ ಪೇಟೆಂಟ್‌ ನೀಡುವ ಕಾನೂನೇನಾದರೂ ಇದ್ದರೆ ಮೊದಲು ಪೆನ್ನು ಮಾಡಿದವನು ಅದರ ಪೇಟೆಂಟ್‌ ಪಡೆದುಕೊಳ್ಳುತ್ತಾನೆ. ನಂತರ ಅವನೊಬ್ಬನೇ ಪೆನ್ನು ತಯಾರಿಸಿ ಅದನ್ನು ಮಾರಾಟಮಾಡಬಲ್ಲ. ಬೇರೆಯವರಿಗೆ ಪೆನ್ನು ತಯಾರಿಸಲು ಆಸ್ಪದವೇ ಇರುವುದಿಲ್ಲ. ಆಗ ಪೆನ್ನಿನ ಪೇಟೆಂಟ್‌ ಪಡೆದ ವ್ಯಕ್ತಿ ತನಗೆ ಬೇಕಾದ ಬೆಲೆಗೆ ಆ ಪೆನ್ನನ್ನು ಮಾರಬಹುದು. ಆದರೆ ಪೆನ್ನನ್ನು ತಯಾರಿಸುವ ಪ್ರಕ್ರಿಯೆಯನ್ನು ಮಾತ್ರ ಪೇಟೆಂಟ್‌ ಮಾಡುವುದರಿಂದ ಬೇರೆಯವರು ಪೆನ್ನನ್ನು ಆ ರೀತಿಯಲ್ಲಿ ತಯಾರಿಸಲು ಮಾತ್ರ ಅವಕಾಶವಿರುವುದಿಲ್ಲ. ಬೇರೆ ವಿಧಾನದಲ್ಲಿ ಪೆನ್ನನ್ನು ತಯಾರಿಸಲು ಅವಕಾಶವಿರುತ್ತದೆ. ಇದರಿಂದ ಒಂದು ವಸ್ತುವಿನ ಮೇಲೆ ಒಬ್ಬನ ಸರ್ವಾಧಿಕಾರ ತಪ್ಪುತ್ತದೆ. ಇದು ಪೇಟೆಂಟ್‌ನ ಮೂಲ ಉದ್ದೇಶಕ್ಕೂ ಪೂರಕವಾಗಿತ್ತು.

ಆದರೆ ಭಾರತ ಸರಕಾರ ಡಿಸೆಂಬರ್‌ 27, 2004 ರಂದು ಪೇಟೆಂಟ್‌ ಕಾನೂನಿಗೆ ಮತ್ತೊಂದು ತಿದ್ದುಪಡಿ ತಂದಿತು. ಗಮನಿಸಬೇಕಾದ ಅಂಶವೆಂದರೆ ಇಂತಹ ಮಹತ್ವದ ಕಾನೂನಿನ ತಿದ್ದುಪಡಿಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯೇ ನಡೆದಿಲ್ಲ. ಸಂಸತ್ತಿನ ಹೊರಗೆ ಅಧಿಸೂಚನೆಯ ಮೂಲಕ ತಿದ್ದುಪಡಿ ತರಲಾಯಿತು. ಈ ಹೊಸ ಕಾನೂನಿನ ಪ್ರಕಾರ ಇನ್ನು ಭಾರತದಲ್ಲಿ ಎಲ್ಲಾ ಬಗೆಯ ಹೊಸ ವಸ್ತುಗಳ ಸಂಶೋಧನೆಯೂ ಪೇಟೆಂಟ್‌ಗೆ ಅರ್ಹವಾಗಿರುತ್ತವೆ. ಈ ತಿದ್ದುಪಡಿಯನ್ನು ‘ಗ್ಯಾಟ್ಸ್‌ ಒಪ್ಪಂದ’ದ ಅನ್ವಯ ಮಾಡಲಾಗಿದೆ. ಹಿಂದೆಲ್ಲಾ ಒಂದು ದೇಶದ ಪೇಟೆಂಟ್‌ಗೆ ಇನ್ನೊಂದು ದೇಶದಲ್ಲಿ ಮಾನ್ಯತೆ ಇರಲಿಲ್ಲ. ಆದರೆ ಈಗ ಗ್ಯಾಟ್ಸ್‌ ಒಪ್ಪಂದದ ಪ್ರಕಾರ ಪೇಟೆಂಟ್‌ಗಳಿಗೆ ವಿಶ್ವಮಾನ್ಯತೆ ನೀಡಬೇಕಾಗಿದೆ. ಈ ಎರಡೂ ಬದಲಾವಣೆಗಳು ನಮ್ಮ ದೇಶಕ್ಕೆ ಕಂಟಕಪ್ರಾಯವಾಗುವುದರಲ್ಲಿ ಸಂದೇಹವಿಲ್ಲ. ವಸ್ತುಗಳ ಮೇಲೆ ಪೇಟೆಂಟ್‌ ಇದ್ದರೆ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಈ ಹಿಂದೆಯೇ ಬರೆಯಲಾಗಿದೆ. ಪೇಟೆಂಟ್‌ಗಳಿಗೆ ವಿಶ್ವಮಾನ್ಯತೆ ನೀಡುವುದರಿಂದ ಹಣ ಬಲ ಹಚ್ಚಾಗಿರುವ ದೇಶಗಳು ಬೇಕಾದಷ್ಟು ಹಣ ಚೆಲ್ಲಿ ಎಲ್ಲಾ ಪೇಟೆಂಟ್‌ಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತವೆ. ಇದರಿಂದಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇವಲ ದೊಡ್ಡ ದೇಶಗಳ ಪಾಲಿಗೆ ಲಭ್ಯವಾಗುತ್ತದೆ. ಭಾರತಕ್ಕೆ ಅದು ಬೇಕಾದಲ್ಲಿ ಅವರು ಕೇಳಿದಷ್ಟು ಹಣ ನೀಡಿ ಅದನ್ನು ಪಡೆಯಬೇಕಾಗುತ್ತದೆ. ನಮ್ಮಲ್ಲಿ ಹಣವಿರದ ಕಾರಣ ಅವರೇ ಮತ್ತೆ ನಮಗೆ ಸಾಲ ಕೊಟ್ಟು, ಮತ್ತೊಂದು ಒಪ್ಪಂದಕ್ಕೆ ನಮ್ಮನ್ನು ಒಳಪಡಿಸಿ ಕಟ್ಟಿಹಾಕುತ್ತಾರೆ. ಒಟ್ಟಾರೆಯಾಗಿ ನಾವು ಸ್ವತಂತ್ರ ಮತ್ತು ಸದೃಢ ದೇಶವಾಗಿ ಬೆಳೆಯಲು ಅವಕಾಶವೇ ಇರುವುದಿಲ್ಲ.

ಪೇಟೆಂಟ್‌ ಕಾನೂನಿಂದ ಜನ ಸಾಮಾನ್ಯರಿಗೇನೂ ಉಪಯೋಗವಾಗುತ್ತಿಲ್ಲ. ಮೂಲತಃ ಪೇಟೆಂಟ್‌ ಪ್ರಪಂಚದ ದೊಡ್ಡ ಉದ್ದಿಮೆಗಳ ಕೈಗೊಂಬೆಯಾಗಿದೆ. ಪೇಟೆಂಟ್‌ ಪಡೆಯಲು ಸಾಕಷ್ಟು ಹಣದ ಅಗತ್ಯವಿರುವುದರಿಂದ ಸಾಮಾನ್ಯ ಸಂಶೋಧಕನಿಗೆ ಮತ್ತು ಚಿಕ್ಕ ಕಂಪೆನಿಗಳಿಗೆ ಅದು ಗಗನಕುಸುಮವಾಗಿಯೇ ಉಳಿದಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹಲವಾರು ದೊಡ್ಡ ಕಂಪೆನಿಗಳು ಅತೀ ಚಿಕ್ಕ ವಿಷಯಗಳನ್ನೂ ಪೇಟೆಂಟ್‌ ಮಾಡಿಕೊಂಡಿದೆ. ಇದರಿಂದ ವಿಜ್ಞಾನದ ಸಂಶೋಧನೆಯಲ್ಲಿ ಸ್ವತಂತ್ರ ಸಂಶೋಧಕನಿಗೆ ಅಸ್ತಿತ್ವವೇ ಇಲ್ಲದಂತಾಗಿದೆ. ತಮ್ಮ ಬಳಿ ಇರುವ ಪೇಟೆಂಟ್‌ನ ಸಹಾಯದಿಂದ ಈ ಕಂಪೆನಿಗಳು ಸಣ್ಣ ಸಂಶೋಧಕರಿಗೆ ಕಿರುಕುಳ ನೀಡುತ್ತಿವೆ. ಅವನು ಕಷ್ಟಪಟ್ಟು ಮಾಡಿದ ಸಂಶೋಧನೆಯನ್ನು ಅವು ತೀರಾ ಕಡಿಮೆ ಬೆಲೆಗೆ ಕೊಂಡುಕೊಳ್ಳುತ್ತವೆ. ಅವನ ಸಂಶೋಧನೆಯ ಪೇಟೆಂಟ್‌ ಕಂಪೆನಿಗಳ ಬಳಿ ಇರುವ ಕಾರಣ ಅವರ ಷರತ್ತಿಗೆ ಒಪ್ಪದೇ ಅವನಿಗೆ ಬೇರೆ ಯಾವುದೇ ಮಾರ್ಗವಿರುವುದಿಲ್ಲ. ಕಂಪ್ಯೂಟರ್‌ ಸಾಫ್ಟ್‌ವೇರ್‌ ಕ್ಷೇತ್ರವಂತೂ ಸಂಪೂರ್ಣ ಪೇಟೆಂಟ್‌ಮಯವಾಗಿ ಹೋಗಿದೆ. ವಿಶ್ವದ 3-4 ಬೃಹತ್‌ ಸಾಫ್ಟ್‌ವೇರ್‌ ಕಂಪೆನಿಗಳು ಸಾಫ್ಟ್‌ವೇರ್‌ ಕುರಿತಾದ ಎಲ್ಲಾ ವಿಷಯಗಳ ಬಗ್ಗೆ ಪೇಟೆಂಟ್‌ ಪಡೆದುಕೊಂಡಿವೆ. ಅವು ಈ ಪೇಟೆಂಟ್‌ಗಳ ಮೂಲಕ ಸಣ್ಣ ಸಂಶೋಧಕರಿಗೆ ಮತ್ತು ಉಚಿತ ಸಾಫ್ಟ್‌ವೇರ್‌ ನೀಡುವ ಜನರಿಗೆ ಕೊಡುವ ಕಿರುಕುಳಗಳ ಬಗ್ಗೆ ಅನೇಕ ವೆಬ್‌ಸೈಟ್‌ಗಳು ವಿವರವಾಗಿ ದಾಖಲಿಸಿವೆ. ಈ ಪೇಟೆಂಟ್‌ ಪಡೆಯಲು ಕಂಪೆನಿಗಳು ಹೇರಳವಾಗಿ ದುಡ್ಡು ಖರ್ಚು ಮಾಡುವುದರಿಂದ ಆ ಕಂಪೆನಿಗಳ ಸಾಫ್ಟ್‌ವೇರ್‌ಗಳೂ ದುಬಾರಿಯಾಗಿರುತ್ತದೆ. ಉಚಿತ ಸಾಫ್ಟ್‌ವೇರ್‌ ಕೊಡಬೇಕೆಂದು ಶ್ರಮಿಸುತ್ತಿರುವ ಜನರಿಗೆ ಪೇಟೆಂಟ್‌ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಒಟ್ಟಿನಲ್ಲಿ ಈ ಪೇಟೆಂಟ್‌ ಕಾನೂನಿಂದ ನಮ್ಮ ದೇಶಕ್ಕೆ ಅನಾನುಕೂಲಗಳೇ ಹೆಚ್ಚು. ಕೇವಲ ವ್ಯಾಪಾರಶಾಹೀ ಕಂಪೆನಿಗಳಿಗೆ ಮತ್ತು ವಿಶ್ವವನ್ನೇ ಆಳಬೇಕೆಂಬ ಕೆಟ್ಟ ಆಸೆ ಹೊಂದಿರುವ ದೇಶಗಳಿಗೆ ಮಾತ್ರ ಈ ಕಾನೂನಿಂದ ಲಾಭವಿದೆ. ದೇಶದ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದ ಜನರು ‘ಗ್ಯಾಟ್ಸ್‌ ಒಪ್ಪಂದ’ಕ್ಕೆ ಸಹಿ ಮಾಡಿದರು. ಆ ಮೂಲಕ ದೇಶವನ್ನು ಧನದಾಹೀ ಕಂಪೆನಿಗಳಿಗೆ ಮಾರಿದ್ದಾರೆ. ಈ ಗ್ಯಾಟ್ಸ್‌ ಒಪ್ಪಂದದ ರಾಕ್ಷಸೀ ಸ್ವರೂಪ ಈಗ ಬಯಲಾಗಿದೆ. ಇಂತಹ ಕಾನೂನು ಖಂಡಿತವಾಗಿಯೂ ನಮಗೆ ಬೇಡ. ಹಿಂದೆ ಕವಿಗಳೊಬ್ಬರು ‘ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ....’ ಎಂದು ಹಾಡಿದ್ದರು. ಈ ಮನೋಭಾವ ಇಂದಿನ ಸಂಶೋಧಕರಲ್ಲಿ ಬರಬೇಕಾಗಿದೆ. ಹೆಸರು ಮತ್ತು ಹಣದ ದಾಹದ ಹುಚ್ಚನ್ನು ಹೆಚ್ಚು ಮಾಡುವಂತಹ ಈ ಪೇಟೆಂಟ್‌ ಕಾನೂನಿಂದ ಭಾರತಕ್ಕೆ ಬಿಡುಗಡೆ ಅಗತ್ಯವಾಗಿ ಸಿಗಬೇಕಾಗಿದೆ. ಆದರೆ, ದೊರೆಗಳೇ ದೀನರಾಗಿ ನಿಂತಿರುವ ಹೊತ್ತು ಪ್ರಜೆಗಳನ್ನು ಕಾಯುವವರು ಯಾರು?

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X