• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಳಗಾವಿ ನಮ್ಮದು... ನಮ್ಮದು... ನಮ್ಮದು...

By Staff
|

ಇತಿಹಾಸದ ಪುಟಗಳನ್ನೊಮ್ಮೆ ತಿರುಗಿಸಿದಾಗ ಚಾಲುಕ್ಯ, ರಾಷ್ಟ್ರಕೂಟ, ಕದಂಬ, ವಿಜಯನಗರದ ಅರಸರಿಂದಲೂ, ಮೈಸೂರಿನ ಹೈದರಾಲಿ, ಟಿಪ್ಪು ಸುಲ್ತಾನರಿಂದಲೂ ಆಳಲ್ಪಟ್ಟ ಅಚ್ಚ ಕನ್ನಡ ನಾಡು -ನಮ್ಮ ಬೆಳಗಾವಿ ಎಂಬುದು ಸ್ಪಷ್ಟವಾಗುತ್ತದೆ.

ಟಿಪ್ಪುವಿನ ನಂತರ ಪೇಶ್ವೆಗಳ ಆಳ್ವಿಕೆಗೆ ಒಳಗಾದ ಬೆಳಗಾವಿಯಲ್ಲಿ ಗಡಿ ವಿವಾದ ಶತಮಾನದಷ್ಟು ಪುರಾತನವಾದದ್ದು. ಇಂತಹ ವಿವಾದಗಳ ಇತಿಹಾಸದ ಹಿನ್ನೆಲೆ ತಿಳಿದು ನೋಡಿದರೆ, ಮಹಾರಾಷ್ಟ್ರ ಏಕೀಕರಣ ಸಮಿತಿಯ ವಶದಲ್ಲಿರುವ ಬೆಳಗಾವಿ ನಗರ ಪಾಲಿಕೆ ಬೆಳಗಾವಿ ಮಹಾರಾಷ್ಟಕ್ಕೆ ಸೇರ್ಪಡೆ ಆಗಬೇಕೆಂದು ಕೈಗೊಂಡ ನಿರ್ಣಯ, ಅದು ಕನ್ನಡಿಗರಲ್ಲಿ ಮೂಡಿಸಿಹ ಆಕ್ರೋಶದ ತೀವ್ರತೆ ಅರಿವಾಗುತ್ತದೆ.

Belgaum mapಸ್ವಾತಂತ್ರ್ಯಪೂರ್ವದ ದಿನಗಳಲ್ಲಿ, ಅಂದಿನ ಕಾಂಗ್ರೆಸ್‌, ರಾಜ್ಯಗಳ ಭಾಷಾವಾರು ಪುನರ್ರಚನೆಗೆ ತಾನು ಬದ್ಧವಾಗಿರುವುದಾಗಿ ಘೋಷಿಸಿತ್ತು. ಸ್ವಾತಂತ್ರ್ಯಾ ನಂತರ ಹಾಗೆಯೇ ಒಂದು ಸಮಿತಿಯನ್ನು ರಚಿಸಿ ಅದರ ವರದಿಯ ಆಧಾರದ ಮೇಲೆ 1956ರಲ್ಲಿ ರಾಜ್ಯಗಳ ಭಾಷಾವಾರು ಪುನರ್ರಚನೆ ಮಾಡಿತು.

ಆಗ ನಮ್ಮ ಕರ್ನಾಟಕವು ಏಕೀಕರಣವಾಯಿತು. ಮುಂಬೈ, ಮದರಾಸು, ಹೈದರಾಬಾದ್‌ ಸಂಸ್ಥಾನಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಂದಾಯಿತು. ಆದರೂ ಅದರಲ್ಲಿಯೂ ಅನೇಕ ಕೊರತೆಗಳಿದ್ದವು.

ನೀಲಗಿರಿ(ಇಂದಿನ ಊಟಿ), ಕಾಸರಗೋಡು, ಅಕ್ಕಲಕೋಟೆ, ಮಡಕಶಿರಾ, ತಾಳವಾಡಿ, ಸೊಲ್ಲಾಪುರ. . . ಹೀಗೆ ಕರ್ನಾಟಕಕ್ಕೆ ಸೇರ್ಪಡೆಯಾಗಬೇಕಾದ ಕನ್ನಡ ಭಾಷಿಕ ಪ್ರದೇಶಗಳನೇಕವು ಪರ ರಾಜ್ಯಗಳ ಪಾಲಾದವು.

ನಮ್ಮ ರಾಜ್ಯವು ನವೆಂಬರ್‌ 1, 1956ರಲ್ಲಿ ಮೈಸೂರು ರಾಜ್ಯವಾಗಿ ಏಕೀಕರಣವಾಗಿದ್ದು, 1973ರಲ್ಲಿ ಕರ್ನಾಟಕವೆಂದಾಯ್ತು. ಇಂದಿಗೂ, ಅಂದರೆ 50 ವರ್ಷಗಳ ನಂತರವು ನಾಡಿನ ಹಿರಿಯರು ಕನಸು ಕಂಡ ಕರ್ನಾಟಕ ರಚನೆಯಾಗಲೇ ಇಲ್ಲ. ಕರ್ನಾಟಕದಲ್ಲೇ ಕನ್ನಡಕ್ಕಾಗಿ ಹೋರಾಟ ಮಾಡಬೇಕಾದ ದುಸ್ಥಿತಿ ನಮ್ಮದು. ಈಗ ವಿಷಾದವೆನಿಸುವುದು - ಹೆಸರಾಯಿತು ಕರ್ಣಾಟಕ : ಉಸಿರಾಗಲಿಲ್ಲ ಕನ್ನಡ ಎಂಬುದಕ್ಕೆ.

Kittor Chennammaಭಾಷಾವಾರು ಪುನರ್ರಚನೆಯ ನಂತರ, ಮಹಾರಾಷ್ಟ್ರವು ಕರ್ನಾಟದ ವಶಕ್ಕೆ ಬಂದಿದ್ದ ಬೀದರ್‌, ಗುಲ್ಬರ್ಗ, ಬೆಳಗಾವಿ, ಕಾರವಾರಗಳ ಅನೇಕ ಭಾಗಗಳ ಮೇಲೆ ತನ್ನ ಹಕ್ಕನ್ನು ಸಾಧಿಸಲು ಯತ್ನಿಸುತ್ತಾ ಕೇಂದ್ರ ಸರ್ಕಾರದ ಮೇಲೆ ಗಡಿ ಪುನರ್‌ಪರಿಶೀಲನೆಗೆ ತೀವ್ರ ಒತ್ತಡ ತಂದಿತು. ಕರ್ನಾಟಕವೂ ಕೂಡ ತನಗೆ ಬರಬೇಕಾದ ಭಾಗಗಳ ಬಗ್ಗೆ ಧ್ವನಿ ಎತ್ತಿತು.

ಮಹಾರಾಷ್ಟ್ರದ ಮುಖಂಡರಾದ ಬಾಪಟ್‌ರವರು ಉಪವಾಸ ಸತ್ಯಾಗ್ರಹಕ್ಕಿಳಿದಾಗ ಮಣಿದ ಕೇಂದ್ರ ಸರ್ಕಾರ 25.10.1966ರಲ್ಲಿ ಮೆಹರ್‌ ಚಂದ್‌ ಮಹಾಜನ್‌ ಆಯೋಗವನ್ನು ರಚಿಸಿತು. ಮೊದಲೇ ಕುತಂತ್ರದಿಂದ ಕಾಸರಗೋಡನ್ನು ನುಂಗಿದ್ದ ಕೇರಳ ಸರ್ಕಾರ, ಈ ಆಯೋಗದ ವರದಿ ತನಗೆ ಸಮ್ಮತವಲ್ಲವೆಂಬ ನಿಲುವು ತಾಳಿತು. ಕರ್ನಾಟಕ ಅರೆ ಮನಸ್ಸಿನಿಂದ ಒಪ್ಪಿತು. ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿಗಳಾಗಿದ್ದ ವಿ.ಪಿ.ನಾಯಕ್‌ - ಆಯೋಗದ ವರದಿ ಹೇಗಿದ್ದರೂ ನಾವು ಅದಕ್ಕೆ ಬದ್ಧರು - ಎಂಬುದಾಗಿ 14.09.1967ರಲ್ಲಿ ಸಾರ್ವಜನಿಕವಾಗಿ ಹೇಳಿದ್ದರು.

ಮಹಾಜನ್‌ ವರದಿ ಹೊರ ಬಂದದ್ದೇ ತಡ ಮಹಾರಾಷ್ಟ್ರದ ನಿಲುವು ಬದಲಾಗಿ ಹೋಯ್ತು. ಮೊದಲು ಆಯೋಗದ ವರದಿ ಹೇಗಿದ್ದರೂ ಸಮ್ಮತವೆಂದಿದ್ದ ಮಹಾರಾಷ್ಟ್ರ , ವರದಿ ಬಂದ ನಂತರ ತನ್ನ ನಿಲುವು ಬದಲಿಸಿತು.

ಮಹಾಜನ್‌ ವರದಿಯಲ್ಲೇನಿದೆ ?

ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ತಮ್ಮ ಪಾಲಿಗೆ ಬರಬೇಕಾದ ಪರರಾಜ್ಯಗಳ ವಶದಲ್ಲಿರುವ ಹಲವು ಭಾಗಗಳ ಬಗ್ಗೆ ಹಕ್ಕು ಮಂಡನೆ ಮಾಡಿದ್ದವು. ಇದನ್ನು ಕೂಲಂಕಶವಾಗಿ ಅಭ್ಯಸಿಸಿದ ಆಯೋಗ ತನ್ನ ಶಿಫಾರಸ್ಸುಗಳ ವರದಿಯನ್ನು ಸಲ್ಲಿಸಿತು. ಆ ವರದಿಯ ಮುಖ್ಯಾಂಶಗಳು ಇವು.

ಮಹಾರಾಷ್ಟ್ರದ ತಿರಸ್ಕೃತವಾದ ಬೇಡಿಕೆಗಳು : ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲ ಪ್ರದೇಶಗಳು ತನಗೆ ಬರಬೇಕೆಂದು ಮಹಾರಾಷ್ಟ್ರ ಮಂಡಿಸಿದ್ದ ಹಕ್ಕನ್ನು ತಿರಸ್ಕರಿಸಿತು. ಹುಕ್ಕೇರಿ ತಾಲೂಕಿನ 18 ಗ್ರಾಮ, ಅಥಣಿ ತಾಲೂಕಿನ 10 ಗ್ರಾಮಗಳ ಮೇಲಿನ ಹಕ್ಕನ್ನು ತಿರಸ್ಕರಿಸಿತು.

ಬೀದರ್‌ ಜಿಲ್ಲೆಯ 146 ಗ್ರಾಮಗಳ ಬಗ್ಗೆ ಮಂಡಿಸಿದ್ದ ಮಹಾರಾಷ್ಟ್ರದ ಹಕ್ಕನ್ನು ತಿರಸ್ಕರಿಸಿತು. ಗುಲ್ಬರ್ಗ ಜಿಲ್ಲೆಯ ಆಳಂದ ತಾಲೂಕಿನ 8 ಗ್ರಾಮಗಳ ಬಗೆಗಿನ ಹಕ್ಕನ್ನೂ ತಿರಸ್ಕರಿಸಿತು.

ಮಹಾರಾಷ್ಟ್ರದ ಸ್ವೀಕೃತವಾದ ಬೇಡಿಗೆಗಳು : ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ 206 ಗ್ರಾಮಗಳಲ್ಲಿ ಪಶ್ಚಿಮದ 152 ಗ್ರಾಮಗಳು,

ಬೆಳಗಾವಿ ತಾಲೂಕಿನ 84 ಗ್ರಾಮಗಳಲ್ಲಿ ಬೆಳಗಾವಿ ನಗರವನ್ನು ಹೊರತು ಪಡಿಸಿ ಪಶ್ಚಿಮದ ಅರ್ಧದಷ್ಟು ಹಳ್ಳಿಗಳು, ಚಿಕ್ಕೋಡಿ ತಾಲೂಕಿನ 41 ಗ್ರಾಮಗಳಲ್ಲಿ ನಿಪ್ಪಾಣಿ ಸಹಿತ 32 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಲು ಮಹಾಜನ್‌ ವರದಿ ಒಪ್ಪಿಗೆ ನೀಡಿತು.

ಕರ್ನಾಟಕದ ವಶದಲ್ಲಿರುವ 814 ಗ್ರಾಮಗಳು ತನಗೆ ಸೇರಬೇಕೆಂದು ಮಹಾರಾಷ್ಟ್ರ ಬೇಡಿಕೆ ಮಂಡಿಸಿತ್ತು. ಆದರೆ ಆಯೋಗ 264 ಗ್ರಾಮಗಳು(ವಿಸ್ತೀರ್ಣ-656.3 ಚದರ ಮೈಲಿ, ಜನಸಂಖ್ಯೆ -2.31 ಲಕ್ಷ) ಮಹಾರಾಷ್ಟ್ರಕ್ಕೆ ಸೇರಬೇಕೆಂದು ಶಿಫಾರಸ್ಸು ಮಾಡಿತು.

ಕರ್ನಾಟಕದ ತಿರಸ್ಕೃತವಾದ ಬೇಡಿಕೆಗಳು : ಸೊಲ್ಲಾಪುರ ಜಿಲ್ಲೆಯ ಮಂಗಳವೇಡಿ ಮತ್ತು ಶಿರೋಳ ತಾಲೂಕಿನ 13 ಗ್ರಾಮಗಳ ವರ್ಗಾವಣೆಗೆ ಆಯೋಗದಿಂದ ನಿರಾಕರಣೆ.

ಕರ್ನಾಟಕದ ಅಂಗೀಕೃತವಾದ ಬೇಡಿಗೆಗಳು : ಇಡೀ ಅಕ್ಕಲಕೋಟೆ ತಾಲೂಕು, ದಕ್ಷಿಣ ಸೊಲ್ಲಾಪುರ ತಾಲೂಕಿನ 65 ಗ್ರಾಮಗಳು, ಸಾಂಗ್ಲಿಯ ಜತ್‌ ತಾಲೂಕಿನ 44 ಗ್ರಾಮಗಳು, ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ್‌ ತಾಲೂಕಿನ 15 ಗ್ರಾಮಗಳು, ಕೇರಳದಲ್ಲಿರುವ ಕಾಸರಗೋಡು ತಾಲೂಕಿನ 712 ಗ್ರಾಮಗಳನ್ನು ಕರ್ನಾಟಕಕ್ಕೆ ವರ್ಗಾಯಿಸಬೇಕೆಂಬ ಶಿಫಾರಸ್ಸು ವರದಿಯಲ್ಲಿದೆ.

ಮಹಾರಾಷ್ಟ್ರದ 516 ಗ್ರಾಮಗಳು ತನಗೆ ಸೇರಬೇಕೆಂದು ಕರ್ನಾಟಕ ಹಕ್ಕು ಮಂಡಿಸಿತ್ತು. ಆದರೆ ಆಯೋಗ ಆಯೋಗ 247ಗ್ರಾಮಗಳು(ವಿಸ್ತೀರ್ಣ -1368 ಚದರ ಮೈಲಿ, ಜನಸಂಖ್ಯೆ -3.50ಲಕ್ಷ) ಕರ್ನಾಟಕಕ್ಕೆ ಸೇರಬೇಕೆಂದು ಶಿಫಾರಸ್ಸು ಮಾಡಿತು. ಅಲ್ಲದೇ ಕಾಸರಗೋಡಿನ 712 ಗ್ರಾಮಗಳು ಕರ್ನಾಟಕಕ್ಕೆ ಸೇರಬೇಕೆಂದು ಸ್ಪಷ್ಟಪಡಿಸಿತು. ಆದರೆ ಆಯೋಗದ ವರದಿ ಅನುಷ್ಠಾನಕ್ಕೆ ಬರಲೇ ಇಲ್ಲ.

ಈ ನಡುವೆ ಮಹಾರಾಷ್ಟ್ರ ಏಕೀಕರಣ ಸಮಿತಿ ಉದಯಿಸಿದೆ. ಇದು ಮರಾಠ ಚಳವಳಿಕಾರರಿಂದ ಕೂಡಿದ ಮಹಾರಾಷ್ಟ್ರದ ಪರವಾದ ರಾಜಕೀಯ ಪಕ್ಷ , ಬೆಳಗಾವಿಯ ಬಗೆಗಿನ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ವ್ಯವಸ್ಥಿತವಾಗಿ ಕಾರ್ಯೋನ್ಮುಖವಾಗಿದೆ. ಈ ಪಕ್ಷದ ಪ್ರಮುಖ ಧ್ಯೇಯವೆಂದರೆ ಕರ್ನಾಟಕದ ಕಾರವಾರ, ಬೆಳಗಾವಿ, ಬೀದರ್‌, ಗುಲ್ಬರ್ಗಗಳ ಅನೇಕ ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುವುದು. ಈ ಪಕ್ಷವು ಗೋವಾ ರಾಜ್ಯದಲ್ಲೂ ಇದ್ದು, ಗೋವಾವನ್ನೂ ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಲು ಉದ್ಯುಕ್ತವಾಗಿದೆ. ಆ ಮೂಲಕ ವಿಶಾಲ ಮಹಾರಾಷ್ಟ್ರ ರಚನೆಯ ಕನಸು ಇದರದು.

ಇಂತಹ ಆಲೋಚನೆಗೆ ಮೂಲ ಕಾರಣ ಇತಿಹಾಸದಲ್ಲಿ ಈ ಪ್ರದೇಶಗಳು ಮರಾಠಿಗರಿಂದ ಆಳಲ್ಪಟ್ಟಿವೆ ಎನ್ನುವುದು. ಇದೇ ಮಾನದಂಡ ಅನುಸರಿಸಿದರೆ, ಇಂದಿನ ಮಹಾರಾಷ್ಟ್ರದ ಅರ್ಧಭಾಗ ಕರ್ನಾಟಕದ ಪಾಲಾಗಬೇಕು. ಇದಕ್ಕೆ ಮಹಾರಾಷ್ಟ್ರದಲ್ಲಿ ದೊರೆತಿರುವ ಅನೇಕ ಕನ್ನಡ ಶಿಲಾಶಾಸನಗಳೇ ಸಾಕ್ಷಿ. ಅಜಂತ ಎಲ್ಲೋರದ ವಿಖ್ಯಾತ ದೇಗುಲಗಳ ನಿರ್ಮಾಣವಾದದ್ದೆ ನಮ್ಮ ರಾಷ್ಟ್ರಕೂಟ ದೊರೆಗಳಿಂದ.

ಆದರೆ ಭಾಷಾವಾರು ಪ್ರಾಂತ್ಯ ರಚನೆಯಾದದ್ದು ಆಯಾ ಪ್ರಾಂತ್ಯಗಳಲ್ಲಿ ಅಂದು ( 1953-1955 ) ಸಮೀಕ್ಷೆ ನಡೆದಾಗ ಇದ್ದ ಭಾಷಾವಾರು ಜನಸಂಖ್ಯೆಯ ಆಧಾರದ ಮೇಲೆ. ಇದನ್ನು ಒಪ್ಪಿಕೊಂಡರೂ, ಅಂಕಿ ಅಂಶಗಳನ್ನೇ ಅಲ್ಲಗಳೆದು, ಹಠ ಹಿಡಿದು ಹೋರಾಟಕ್ಕೆ ಇಳಿದಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯ ಧೋರಣೆ ಖಂಡನೀಯ. ಇದು ಇಷ್ಟಕ್ಕೇ ನಿಲ್ಲದೆ ಬೆಳಗಾವಿಯಲ್ಲಿನ ಸ್ಥಳೀಯ ಆಡಳಿತದ ಚುಕ್ಕಾಣಿ ಹಿಡಿಯುವ ಯತ್ನದಲ್ಲೂ ತೊಡಗಿತು. ಅಂದಿನಿಂದಲೂ ಮರಾಠಿ ಭಾಷಿಕರ ಮಾತೃಭಾಷಾ ಒಲವನ್ನು ವೋಟ್‌ ಬ್ಯಾಂಕ್‌ ಮಾಡಿಕೊಂಡು ಪಟ್ಟ ಏರುವ, ಎಮ್‌.ಇ.ಎಸ್‌ನ ತಂತ್ರಗಾರಿಕೆ ಪ್ರಾರಂಭವಾಯಿತು.

ಇನ್ನೊಂದು ಕಡೆ ದೂರಾಲೋಚನೆಯಿಲ್ಲದ ಕನ್ನಡ ಮುಖಂಡರು ಕನ್ನಡಿಗರ ಮತಗಳನ್ನು ಒಗ್ಗೂಡಿಸುವ ಯತ್ನದಲ್ಲಿ ಯಶಸ್ವೀ ಪ್ರಯತ್ನಗಳನ್ನು ಮಾಡಲೇ ಇಲ್ಲ. ಬೆಳಗಾವಿಯ ಕನ್ನಡ ಜನತೆ ರಾಷ್ಟ್ರೀಯ ಪಕ್ಷಗಳ ಹೆಸರಲ್ಲಿ ಒಡೆದುಹೋದವು. ಕರ್ನಾಟಕ ರಾಜ್ಯವನ್ನಾಳಿದ ಸರ್ಕಾರಗಳು, ಗಡಿ ಭಾಗದ ಜನತೆಯ ಬಗ್ಗೆ, ಗಡಿ ಪ್ರದೇಶದ ಅಭಿವೃದ್ಧಿಯ ಬಗ್ಗೆ ಮಾತ್ರವಲ್ಲದೇ ಗಡಿಭಾಗದಲ್ಲಿನ ಅಪಾಯಕಾರಿಯಾದ ಕನ್ನಡ ವಿರೋಧಿ ವಾತಾವರಣ ಬೆಳವಣಿಗೆಯ ಬಗ್ಗೆಯೂ ಕುರುಡಾಗಿ ವರ್ತಿಸಿದವು.

ಎಮ್‌.ಇ.ಎಸ್‌ ಇಂತಹ ಸನ್ನಿವೇಶದಲ್ಲಿ ವಲಸೆಯೆಂಬ ದಾಳವನ್ನು ಯಶಸ್ವಿಯಾಗಿ ಬಳಸಿತು. ಮರಾಠಿ ಭಾಷಿಕರ ವಲಸೆಗೆ ಅತೀವವಾದ ಉತ್ತೇಜನ ನೀಡಿತು. 1961ರ ಜನಗಣತಿಯಂತೆ ಒಟ್ಟು ವಲಸಿಗರಲ್ಲಿ ಮಹಾರಾಷ್ಟ್ರಿಗರ ಪಾಲು ಶೇ.16.27 ರಷ್ಟು (1,13,136 ಜನ) ಇದು 1971ರ ಗಣತಿಯ ರೀತ್ಯಾ 2,40,450ಕ್ಕೆ ಏರಿದರೆ ಇದರಲ್ಲಿ ಬೆಳಗಾವಿ ಒಂದಕ್ಕೇ 1,05,235 ಜನ ವಲಸೆ ಬಂದರು.

1981ರ ಗಣತಿಯ ರೀತ್ಯಾ ಬೆಳಗಾವಿ ಜಿಲ್ಲೆಯ ಒಟ್ಟು ಜನಸಂಖ್ಯೆ 29,80,440. ಅದರಲ್ಲಿ ಮರಾಠಿ ಭಾಷಿಕರ ಸಂಖ್ಯೆ 6,27,363. ಅಂದರೆ ಸುಮಾರು ಶೇಕಡಾ 21.05 ರಷ್ಟು. 1991ರ ಜನಗಣತಿಯಂತೆ ಬೆಳಗಾವಿಯ ಜನಸಂಖ್ಯೆ 35,20,406. ಅದರಲ್ಲಿ ಸುಮಾರು ಶೇ.25ರಷ್ಟು ಮರಾಠಿ ಭಾಷಿಗರು ಇರಬಹುದೆಂಬುದು ಒಂದು ಅಂದಾಜು.

ಇಂದೇನಾದರೂ ಭಾಷಾವಾರು ಜನಗಣತಿ ನಡೆಸಿದರೆ ಬೆಳಗಾವಿ ಮಹಾರಾಷ್ಟ್ರದ ಪಾಲೇ ಆದೀತೆಂಬ ಭಯ ಮೂಡುವಷ್ಟು ಜನ ಮರಾಠಿ ಭಾಷಿಗರು ಇಲ್ಲಿಗೆ ವಲಸೆ ಬಂದು ನೆಲೆಸಿದ್ದಾರೆ.

ಈ ವಾತಾವರಣದ ಬೆಳಗಾವಿಯಲ್ಲಿ ಎಮ್‌.ಇ.ಎಸ್‌ ನಾಲ್ಕು ಬಾರಿ ನಗರ ಪಾಲಿಕೆಯ ಅಧಿಕಾರದ ಗದ್ದುಗೆ ಏರಿದೆ. ಕೆಲ ವರ್ಷಗಳ ಹಿಂದೆ 4-5 ವಿಧಾನ ಸಭಾ ಕ್ಷೇತ್ರಗಳನ್ನೂ ಗೆದ್ದಿದೆ. ಇದು ಸಾಧ್ಯವಾಗಲು ಎಮ್‌.ಇ.ಎಸ್‌ ಅನುಸರಿಸುವ ತಂತ್ರಗಳೂ ಕಾರಣ. ಒಮ್ಮೆ ಪಕ್ಷೇತರ ಅಭ್ಯರ್ಥಿಗಳ ಸಾಲನ್ನೇ ಚುನಾವಣೆಯಲ್ಲಿ ನಿಲ್ಲಿಸಿತ್ತು( 406 ಸ್ಪರ್ಧಿಗಳು).

ಇನ್ನೊಮ್ಮೆ ಮರಾಠಿ ಮತ ಹಂಚಿ ಹೋಗದಂತೆ ಶಿವಸೇನೆಯಾಂದಿಗೆ ಕೈ ಜೋಡಿಸಿತು. ನಮ್ಮ ಕನ್ನಡಿಗರೋ ರಾಷ್ಟ್ರೀಯ ಪಕ್ಷಗಳ ನಡುವೆ ಹಂಚಿಹೋಗಿದ್ದಾಗ ಅಧಿಕಾರ ಎಮ್‌.ಇ.ಎಸ್‌ ನ ವಶವಾಗದೇ ಏನು? ಇದಷ್ಟೇ ಅಲ್ಲದೆ ಅನಧಿಕೃತವಾಗಿ ಮರಾಠಿಯನ್ನು ಇಲ್ಲಿನ ಆಡಳಿತ ಭಾಷೆಯನ್ನಾಗಿಸುವ ಹುನ್ನಾರಗಳೂ ನಡೆದವು.

ಅನೇಕ ಗಡಿಭಾಗದ ಹಳ್ಳಿಗಳನ್ನು ಮಹಾರಾಷ್ಟ್ರದ ಹಳ್ಳಿಗಳೆಂದು ನಾಮಫಲಕ ಹಾಕುವ ಮೂಲಕ, ಅತಿಕ್ರಮಿಸಿಹ ನಿದರ್ಶನಗಳೂ ನಮ್ಮ ಕಣ್ಣ ಮುಂದಿವೆ. ಬೆಳಗಾವಿ ನಗರ ಪಾಲಿಕೆಯಲ್ಲಿನ ಅನೇಕ ಸರ್ಕಾರಿ ಅರ್ಜಿ ನಮೂನೆಗಳು ಮರಾಠಿ ಮತ್ತು ಕನ್ನಡ ಭಾಷೆಗಳೆರಡರಲ್ಲೂ ಮುದ್ರಿತವಾಗಿವೆ. ಈ ಮೂಲಕ ಮರಾಠಿಯನ್ನು ಅಧಿಕೃತ ಆಡಳಿತ ಭಾಷೆಯನ್ನಾಗಿಸುವ ಯತ್ನವೂ ಸಾಗಿದೆ. ಇವೆಲ್ಲವನ್ನೂ ನಮ್ಮ ಸರ್ಕಾರ ಕಂಡೂ ಕಾಣದಂತೆ ಇವೆ. ತನ್ನ ಅಧಿಕಾರ ಬಲದಿಂದ ತಮ್ಮತಾಳಕ್ಕೆ ಕುಣಿಯುವಚಿತಹ ಮರಾಠಿ ಭಾಷಿಕರನ್ನೇ ಅಧಿಕಾರದ ಆಯಕಟ್ಟಿನ ಜಾಗದಲ್ಲಿ ಪ್ರತಿಷ್ಠಾಪಿಸಿದೆ.

ಪ್ರತಿ ಬಾರಿ ಅಧಿಕಾರಕ್ಕೆ ಬಂದಾಗಲೂ ಮಹಾರಾಷ್ಟ್ರಕ್ಕೆ ಬೆಳಗಾವಿಗೆ ಸೇರಬೇಕೆಂಬ ಠರಾವು ಹೊರಡಿಸುವುದು ಇವರ ಅಭ್ಯಾಸ. ಇಷ್ಟು ವರ್ಷ ಇವರನ್ನು ಇಷ್ಟು ಉಗ್ರವಾಗಿ ಪ್ರತಿಭಟಿಸಿದವರು ಇರಲಿಲ್ಲ. ಈಗ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮೇಯರ್‌ ಮೋರೆ ಮುಖಕ್ಕೆ ಮಸಿ ಬಳಿಯುವ ಮೂಲಕ ಪ್ರತಿಭಟಿಸಿದ್ದಾರೆ. ಇದನ್ನು ನಿರೀಕ್ಷಿಸಿರದಿದ್ದ ಎಮ್‌.ಇ.ಎಸ್‌ ಅಪಮಾನದಿಂದ ಕುದ್ದು ಹೋಯಿತು. ಹಾಗಾಗಿ ತಮಗೆ ರಕ್ತಗತವಾಗಿರುವ ಪುಂಡಾಟಿಕೆಯ ಪ್ರದರ್ಶನ ಮಾಡಲು ಮರುದಿನವೇ ಬಂದ್‌ ಘೋಷಿಸಲಾಯಿತು.

ಬೆಳಗಾವಿ ಬಂದ್‌ ನಡೆಸಿದ ಎಮ್‌.ಇ.ಎಸ್‌, ಕನ್ನಡ ಬಾವುಟಗಳನ್ನು ಸುಡುವ ಮಟ್ಟಕ್ಕೆ ಹೋಯಿತು. ಎಮ್‌.ಇ.ಎಸ್‌ನ ಕೆಲ ಮುಖಂಡರು ಈ ಸಂದರ್ಭದಲ್ಲಿ ಸಶಸ್ತ್ರ ಹೋರಾಟಕ್ಕೂ ಸಿದ್ಧ ಎಂದಿದ್ದಾರೆ. ಇದುವರೆಗೂ ಶಾಂತಿಯಿಂದ ಹೋರಾಡುತ್ತಿದ್ದೆವು, ಇನ್ನು ಘರ್ಷಣೆಗೆ ಇಳಿಯುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ.

ಬೆಳಗಾವಿಯ ಇತಿಹಾಸ, ಅಲ್ಲಿನ ಮರಾಠಿಗರ ಪುಂಡಾಟ ಬಲ್ಲವರಿಗೆ ಈ ಹೇಳಿಕೆಗಳ ನಿಜಾಯಿತಿ ಚೆನ್ನಾಗಿ ಗೊತ್ತಿದೆ. 1973ರಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಿಗರು ಮೆರವಣಿಗೆಯೊಂದನ್ನು ಏರ್ಪಡಿಸಿದ್ದಾಗ ಅದರ ಮೇಲೆ ಆಸಿಡ್‌ ಮತ್ತು ಸೋಡಾ ಬಾಟಲ್‌ಗಳನ್ನು ಎಸೆದು ಗಲಭೆಗೆ ಕಾರಣವಾದ ಜನ ಅವರು.

1986ರ ಗಲಭೆಗಳಲ್ಲಿ ಹಿಂಸೆಗೆ ಇಳಿದು ಹಲವರ ಸಾವಿಗೆ ಕಾರಣವಾದದ್ದು ಇದೇ ಮರಾಠಿಗರು. ರಕ್ಕಸಕೊಪ್ಪ ಅಣೆಕಟ್ಟೆಯ ನೀರಿಗೆ ವಿಷ ಬೆರೆಸುವ ಹುನ್ನಾರ ಅಂದಿನ ದಕ್ಷ ಎಸ್‌.ಪಿ. ಕೆ.ನಾರಾಯಣ್‌ರವರಿಂದ ವಿಫಲವಾದದ್ದು ಎಲ್ಲರೂ ಬಲ್ಲ ವಿಷಯವೇ. ಪುಂಡಾಟಕ್ಕೆ, ಉದ್ಧಟತನಕ್ಕೆ ಮತ್ತೊಂದು ಹೆಸರೇ ಮಹಾರಾಷ್ಟ್ರ ಏಕೀಕರಣ ಸಮಿತಿ. ಇತ್ತೀಚಿನ ದಿನಗಳಲ್ಲಿ ಒಳಜಗಳಗಳಿಂದ ಬಲಹೀನವಾಗಿದ್ದ ಎಮ್‌.ಇ.ಎಸ್‌ - ಈಗ ಘಟಿಸಿರುವ ಘಟನೆಗಳಿಂದ ರಾಜಕೀಯ ಲಾಭ ಪಡೆಯಲು ಹುನ್ನಾರ ನಡೆಸಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.

ನಮ್ಮ ಸರ್ಕಾರ ಮಹಾನಗರ ಪಾಲಿಕೆಯನ್ನು ವಿಸರ್ಜಿಸಲಿ ಎಂದೇ, ಆ ಮೂಲಕ ಹುತಾತ್ಮರಾಗಿ ರಾಜಕೀಯವಾಗಿ ಮತ್ತಷ್ಟು ಬಲವರ್ಧಿಸಿ ಕೊಳ್ಳಲೆಂದೇ ಎಮ್‌.ಇ.ಎಸ್‌ ಕಾಯುತ್ತಿದೆ.

ಇಂತಹ ಸಂದರ್ಭದಲ್ಲಿ ಕನ್ನಡಿಗರಾದ ನಮ್ಮ ಕರ್ತವ್ಯಗಳೇನು ?

  • ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಸಮಿತಿಯ ವಿವಾದಾತ್ಮಕ ನಿರ್ಣಯವನ್ನು ಒಕ್ಕೊರಲಿನಿಂದ ಖಂಡಿಸಬೇಕು.
  • ಭಾಷಾ ಸೌಹಾರ್ದಕ್ಕೆ ಅಡ್ಡಿ ಮಾಡುತ್ತಿರುವ, ಕನ್ನಡ ಧ್ವಜ ಸುಡುವಂತಹ, ಕನ್ನಡ ನೆಲವನ್ನು ಛಿದ್ರಗೊಳಿಸುವ ಮಾತನ್ನಾಡುವ, ತನ್ನ ನಿಲುವೇ ಸರಿಯೆಂದು ಈಗಲೂ ವಾದ ಮಾಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ನಿರ್ಬಂಧಿಸುವಂತೆ ಒತ್ತಾಯ ಮಾಡಬೇಕು.
  • ಕನ್ನಡ ಪರ ಹೋರಾಟಕ್ಕೆ ಸಹಾನುಭೂತಿ, ಬೆಂಬಲ ಮತ್ತು ಸಹಯೋಗ ನೀಡುವುದು.
  • ಬೆಳಗಾವಿಯ ಕನ್ನಡಿಗರು ಮತ್ತೊಮ್ಮೆ ಎಮ್‌.ಇ.ಎಸ್‌ ಅಧಿಕಾರಕ್ಕೆ ಏರದಂತೆ ತಡೆಯಲು ಕಾರ್ಯಯೋಜನೆಗಳನ್ನು ರೂಪಿಸಿಕೊಳ್ಳುವುದು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಪಕ್ಷಗಳ ಹಿಮ್ಮೇಳದಿಂದ ಹೊರ ಬಂದು ಕನ್ನಡಿಗ ಅಭ್ಯರ್ಥಿಗಳಿಗೆ ಬೆಂಬಲ ನೀಡುವುದು. ಏಕ ಅಭ್ಯರ್ಥಿ ಇರುವಂತೆ ಕನ್ನಡಿಗರ ಮತ ಹಂಚಿ ಹೋಗದಂತೆ ಕಾಯುವುದು.
  • ಬೆಳಗಾವಿಯಂತಹ ಗಡಿಭಾಗಕ್ಕೆ ಒಳನಾಡಿನ ಕನ್ನಡಿಗರನ್ನು ವರ್ಗಾವಣೆ ಮಾಡುವುದು. ಕನ್ನಡಪರ, ಕನ್ನಡಿಗ ಅಧಿಕಾರಿಗಳನ್ನು ನೇಮಿಸುವುದು.
  • ವಲಸೆ ನಿಯಂತ್ರಣ ನೀತಿಯನ್ನು ರೂಪಿಸಲು ಒತ್ತಾಯಿಸಬೇಕು.
  • ಮಹಾಜನ್‌ ವರದಿ ಅನುಷ್ಠಾನ ಮಾಡುವಂತೆ ಇಲ್ಲವೇ ಈಗಿರುವ ಗಡಿಗಳೇ ಸಿಂಧುವೆಂದು ಮಾನ್ಯ ಮಾಡುವಂತೆ ಕೇಂದ್ರವನ್ನು ಒತ್ತಾಯಿಸುವಂತೆ ರಾಜ್ಯ ಸರ್ಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರವನ್ನು ಒತ್ತಾಯಿಸುವುದು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more