• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ ಕರ್ನಾಟದ ಬಗೆಗೆ ಮಲತಾಯಿ ಧೋರಣೆ!

By Staff
|

ಇಂದು ಕನ್ನಡ ಪತ್ರಿಕೋದ್ಯಮ ಕ್ಷೇತ್ರ ಬೃಹತ್ತಾಗಿ ಬೆಳೆದಿದೆ. ಬಹಳಷ್ಟು ಕನ್ನಡ ಪತ್ರಿಕೆಗಳ, ನಿಯತಕಾಲಿಕೆಗಳ ಪ್ರಸಾರ ಸಂಖ್ಯೆಯೂ ಹೆಚ್ಚಿದೆ. ಜೊತೆಗೆ ಟ್ಯಾಬ್ಲಾಯ್ಡ ಪತ್ರಿಕೆಗಳೂ ಹೆಚ್ಚಿವೆ. ಕನ್ನಡ ಪತ್ರಿಕೋದ್ಯಮದಲ್ಲಿ ಕನ್ನಡ ಪತ್ರಕರ್ತರ ಪಾತ್ರ ಬಹಳ ಮುಖ್ಯವಾಗಿದೆ.

ಉದಯೋನ್ಮುಖ ಲೇಖಕರು, ಪತ್ರಕರ್ತರು ಕನ್ನಡ ಪತ್ರಿಕೆಗಳಲ್ಲಿ ಪರಿಣಾಮಕಾರಿಯಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡಪರ ವಸ್ತುನಿಷ್ಠ ವರದಿಗಳೂ, ಬರಹಗಳೂ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ. ಇದು ಬಹಳ ಸಂತಸದ ವಿಷಯ.ಆದರೆ ಇದೇ ಕನ್ನಡಪರವಾದ ನಿಲುವನ್ನು, ವರದಿಗಳನ್ನು ರಾಷ್ಟ್ರಮಟ್ಟದ ಮುದ್ರಣ ಮಾದ್ಯಮ ಮತ್ತು ಖಾಸಗಿ ಸುದ್ಧಿವಾಹಿನಿಗಳಲ್ಲಿ ನಾವು ಕಾಣುವುದಿಲ್ಲ.

ಈ ರಾಷ್ಟ್ರಮಟ್ಟದ ಆಂಗ್ಲ ಮಾಧ್ಯಮಗಳಲ್ಲಿರುವ ಪರಭಾಷಾ ಪತ್ರಕರ್ತರು, ಲೇಖಕರು ಕನ್ನಡ ವಿರೋಧಿ ಧೋರಣೆಯನ್ನೇ ತಮ್ಮ ವರದಿಗಳಲ್ಲಿ, ಅಂಕಣ ಬರಹಗಳಲ್ಲಿ ಯಾವಾಗಲೂ ಪ್ರದರ್ಶಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

ಉದಾಹರಣೆಗೆ ಕರ್ನಾಟಕದ ಸಮಸ್ಯೆಗಳಾದ ಕಾವೇರಿ ವಿವಾದ, ಕೃಷ್ಣಾ ನದಿವಿವಾದ, ಬೆಳಗಾವಿ ಗಡಿವಿವಾದಗಳ ಬಗ್ಗೆ ಮಾಧ್ಯಮಗಳಲ್ಲಿ ಕನ್ನಡ ವಿರೋಧಿ ವರದಿಗಳನ್ನೇ ಹೆಚ್ಚಾಗಿ ಬರೆದಿದ್ದಾರೆ, ತೋರಿಸಿದ್ದಾರೆ. ಇದರಿಂದ ಪರರಾಜ್ಯದವರಿಗೆ, ಕರ್ನಾಟಕವು ತನ್ನ ನೆರೆರಾಜ್ಯದವರೊಂದಿಗೆ ಸಹಕರಿಸುವುದಿಲ್ಲವೆಂದೂ, ವಿನಾಕಾರಣ ವಿವಾದಗಳನ್ನು ಸೃಷ್ಟಿಸುತ್ತಿದೆಯೆಂದು ತಪ್ಪು ಭಾವನೆ ಮೂಡಿಸಿದೆ.

ಇತ್ತೀಚೆಗೆ ಉತ್ತರಕರ್ನಾಟಕದಲ್ಲಿ ಆದ ಪ್ರವಾಹ ವಿಕೋಪದಲ್ಲಿ ಅಲ್ಲಿನ ಸಂತ್ರಸ್ತರ ಬವಣೆಗಳನ್ನು ಯಾವೊಂದು ರಾಷ್ಟ್ರೀಯ ಸುದ್ದಿಮಾಧ್ಯಮಗಳೂ ಪ್ರಸಾರ ಮಾಡಲಿಲ್ಲ. ಆದರೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡಿನ ಪ್ರವಾಹದ ವರದಿಗಳನ್ನು ಎಲ್ಲಾ ರಾಷ್ಟ್ರಮಟ್ಟದ ಮಾಧ್ಯಮಗಳಲ್ಲಿ, ಅಂಗ್ಲ ಭಾಷೆಯ ಪ್ರಸಿದ್ಧ ನಿಯತಕಾಲಿಕೆಗಳಲ್ಲೂ ಪ್ರಮುಖ ಸುದ್ದಿಯಾಗಿ ವರದಿಯಾಯಿತು. ಈ ರೀತಿ ಕರ್ನಾಟಕದಲ್ಲಿ ಸಂಭವಿಸುವ ಯಾವುದೇ ಅಪಘಾತದ ಸುದ್ಧಿಯಿರಲಿ, ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮವಿರಲಿ ಈ ರಾಷ್ಟ್ರೀಯ ಮಾಧ್ಯಮಗಳು ತಲೆಕೆಡಿಸಿಕೊಳ್ಳುವುದಿಲ್ಲ. ಅದೇ ನಮ್ಮ ನೆರೆರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕೇರಳಗಳಲ್ಲಿ ನಡೆಯುವ ಸಣ್ಣ ಸಣ್ಣ ಘಟನೆಗಳಿಗೆ ಇವು ಪ್ರಾಮುಖ್ಯತೆ ನೀಡುತ್ತವೆ. ಅಲ್ಲಿನ ರಾಷ್ಟ್ರೀಯ ಪತ್ರಿಕೆಗಳು, ಸುದ್ದಿ ಮಾಧ್ಯಮಗಳಲ್ಲಿ ಆ ರಾಜ್ಯದ ಪತ್ರಕರ್ತರು, ವರದಿಗಾರರು ಇರುವುದೇ ಇದಕ್ಕೆ ಕಾರಣ.

ಎಲ್ಲಾ ರಾಷ್ಟ್ರೀಯ ಟೀವಿ ಮಾಧ್ಯಮಗಳು, ಪತ್ರಿಕೆಗಳೂ ಕನ್ನಡ, ಕನ್ನಡಿಗ, ಕರ್ನಾಟಕಕ್ಕೆ ಮಲತಾಯಿಧೋರಣೆ ಅನುಸರಿಸುತ್ತಿವೆ. ಉದಾಹರಣೆಗೆ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧವಾಗಿರುವ ಆಂಗ್ಲ ಸುದ್ದಿವಾಹಿನಿಯೊಂದರ ಬೆಂಗಳೂರು ಶಾಖೆಯಲ್ಲಿ ಕನ್ನಡಿಗ ವರದಿಗಾರರು ಇಲ್ಲ. ಕನ್ನಡ ಭಾಷೆ, ಸಂಸ್ಕೃತಿಯ ಅರಿವಿಲ್ಲದ ಪರರಾಜ್ಯದವರು ಇಲ್ಲಿ ವರದಿಗಾರರಾಗಿದ್ದಾರೆ. ಅದೇ ರೀತಿ ಬೆಂಗಳೂರಿನಲ್ಲಿ ಪ್ರಸಿದ್ಧವಾಗಿರುವ ರಾಷ್ಟ್ರಮಟ್ಟದ ಆಂಗ್ಲ ಪತ್ರಿಕೆಗಳಲ್ಲಿ ಕನ್ನಡಿಗ ಪತ್ರಕರ್ತರು ಇಲ್ಲವೆನ್ನುವುದನ್ನು ಆ ಪತ್ರಿಕೆಗಳ ಕನ್ನಡ ವಿರೋಧಿ ಧೋರಣೆಯೇ ತಿಳಿಸುತ್ತದೆ. ಆದ್ದರಿಂದ ಈ ಪತ್ರಿಕೆಗಳಲ್ಲಿ ಪ್ರಕಟವಾಗುವ ಅಂಕಣಗಳಲ್ಲಿ, ವರದಿಗಳಲ್ಲಿ ಕನ್ನಡದ ಸಂಸ್ಕೃತಿಯ ಬಗೆಯಾಗಲಿ, ಸಾಹಿತಿಗಳ ಬಗೆಯಾಗಲಿ ಏನೂ ಬರೆಯುವುದಿಲ್ಲ. ಪರರಾಜ್ಯದವರ ಸಂಸ್ಕೃತಿಗೆ, ಹಬ್ಬಗಳಿಗೆ, ಸಿನಿಮಾ ಸುದ್ಧಿಗಳಿಗೆ ಇವರು ಮನ್ನಣೆ ನೀಡುತ್ತಾರೆ.

ರಾಷ್ಟ್ರಮಟ್ಟದ ಟಿ.ವಿ. ಮಾಧ್ಯಮಗಳ ಮಲತಾಯಿ ಧೋರಣೆ ಹೇಗಿದೆಯೆಂದರೆ -ಮೈಸೂರು ದಸರೆಯ ವೈಭವದ ಜಂಬೂ ಸವಾರಿಯನ್ನು ಇವರು ತಮ್ಮ ಸುದ್ದಿ ಮಾಧ್ಯಮಗಳಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಸಾರಮಾಡುವುದಿಲ್ಲ. ಆದರೆ ಮಹಾರಾಷ್ಟ್ರದ ಗಣೇಶೋತ್ಸವವನ್ನು, ಬಂಗಾಲಿಗಳ ದುರ್ಗಾಪೂಜೆಯನ್ನೂ, ತಮಿಳುನಾಡಿನಲ್ಲಿ ಆಚರಿಸುವ ಪೊಂಗಲ್‌ ಹಬ್ಬವನ್ನೂ, ಕೇರಳದ ಓಣಂ ಹಬ್ಬವನ್ನೂ, ಒರಿಸ್ಸಾದ ಪುರಿ ಜಗನ್ನಾಥ ರಥಯಾತ್ರೆಯನ್ನು ತಮ್ಮ ವಾಹಿನಿಗಳಲ್ಲಿ ವರದಿ ಮಾಡುತ್ತಾರೆ.

ಇತ್ತೀಚೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ವೈಭವವಾಗಿ, ಯಶಸ್ವಿಯಾಗಿ ನಡೆದ ‘ಕನ್ನಡವೇ ಸತ್ಯ’ ಕಾರ್ಯಕ್ರಮವನ್ನು ಈ ರಾಷ್ಟ್ರಮಟ್ಟದ ಪತ್ರಿಕೆಗಳು ಪ್ರಾಮುಖ್ಯತೆ ಕೊಡಲಿಲ್ಲ. ಅದರೆ ಸ್ವಲ್ಪ ದಿನಗಳ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಶಾರುಖ್‌ ಖಾನ್‌ ಮತ್ತು ಇತರ ಹಿಂದಿ ನಟ-ನಟಿಯರ ಸಂಗೀತ ಸಂಜೆ ಕಾರ್ಯಕ್ರಮವನ್ನು ಇದೇ ರಾಷ್ಟ್ರಮಟ್ಟದ ಪತ್ರಿಕೆಗಳು ಮುಖಪುಟದಲ್ಲಿ ವರ್ಣರಂಜಿತವಾಗಿ ವರದಿ ಮಾಡಿದವು. ಈ ಒಂದು ಘಟನೆ ಸಾಲದೇ ಈ ರಾಷ್ಟ್ರಮಟ್ಟದ ಪತ್ರಿಕೆಗಳ ಮಲತಾಯಿಧೋರಣೆಗೆ ಸಾಕ್ಷಿ?

ಇದನ್ನೆಲ್ಲಾ ವಿಚಾರ ಮಾಡಿದಾಗ ನಮಗೆ ಕಂಡು ಬರುವ ಸತ್ಯ -ಈ ರಾಷ್ಟ್ರಮಟ್ಟದ ಆಂಗ್ಲ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಕನ್ನಡಿಗ ವರದಿಗಾರರು, ಪತ್ರಕರ್ತರು ಇಲ್ಲದಿರುವುದು. ಇದ್ದರೂ ಕನ್ನಡಿಗ ಪತ್ರಕರ್ತರು, ವರದಿಗಾರರು ಬೆರಳೆಣಿಕೆಯಷ್ಟು ಮಾತ್ರ ಇರಬಹುದು.

ಕನ್ನಡಕ್ಕೆ ನ್ಯಾಯದೊರೆಯಲು ಈ ರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಹೆಚ್ಚು ಹೆಚ್ಚು ಕನ್ನಡಿಗರು ವರದಿಗಾರರಾಗಿ, ಪತ್ರಕರ್ತರಾಗಿ, ಅಂಕಣ ಬರಹಗಾರರಾಗಿ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಕನ್ನಡ, ಕನ್ನಡಿಗ, ಕರ್ನಾಟಕದ ಬಗ್ಗೆ ವಸ್ತುನಿಷ್ಠವಾದ, ಕನ್ನಡ ಪರವಾದ ವರದಿಗಳು ರಾಷ್ಟ್ರಮಟ್ಟದಲ್ಲಿ ಪ್ರಸಾರವಾಗುತ್ತವೆ. ಇದರಿಂದ ರಾಷ್ಟ್ರಮಟ್ಟದಲ್ಲಿ ಕನ್ನಡ, ಕರ್ನಾಟಕದ ಸಂಸ್ಕೃತಿಯ ಬಗ್ಗೆ ಪರರಾಜ್ಯದವರಿಗೆ ತಿಳಿದು ಕನ್ನಡಿಗರ ಕೀರ್ತಿಯೂ ಹೆಚ್ಚುತ್ತದೆ. ಜೊತೆಗೆ ಈ ರಾಷ್ಟ್ರಮಟ್ಟದ ಪತ್ರಿಕೆಗಳಿಂದ, ಮಾಧ್ಯಮದವರಿಂದ ಪರರಾಜ್ಯದವರಿಗೆ ಕನ್ನಡಿಗರ ವಿರುದ್ಧ ಮೂಡಿರುವ ತಪ್ಪು ಭಾವನೆಗಳನ್ನು ಹೋಗಲಾಡಿಸಲು ಸಹಕಾರಿಯಾಗುತ್ತದೆ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more