ಪಾಂಡಿಚೇರಿಯಲ್ಲಿ ಕನ್ನಡ ಸಮ್ಮೇಳನ

  • ವರದಿ : ಅರುಂಧತಿ ಪ್ರೇಮಶೇಖರ
ಪಾಂಡಿಚೇರಿ : ಒಂಬತ್ತನೇ ಅಖಿಲ ಭಾರತ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನ ಪಾಂಡಿಚೆರಿಯಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

‘ದೆಹಲಿ ಕನ್ನಡಿಗ’ ಪತ್ರಿಕೆಯ ಆಶ್ರಯದಲ್ಲಿ ನಡೆದ ಈ ಸಮ್ಮೇಳನದಲ್ಲಿ ಕನ್ನಡಕ್ಕೆ ಸಂಬಂಧಿಸಿದಂತೆ ವಿಚಾರ ಸಂಕಿರಣಗಳು, ಮಹಿಳಾ ಉತ್ಸವ, ಕವಿಗೋಷ್ಟಿ, ಸಂಗೀತ, ನೃತ್ಯ, ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು, ಪುಸ್ತಕ, ಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಸಮ್ಮೇಳನವನ್ನು ಉದ್ಘಾಟಿಸಿದ ಪಾಂಡಿಚೆರಿಯ ಮುಖ್ಯಮಂತ್ರಿ ಎನ್‌. ರಂಗಸ್ವಾಮಿ ಮಾತನಾಡುತ್ತ, ಭಾಷೆ- ಸಂಸ್ಕೃತಿ ಬಾಂಧವ್ಯದೊಂದಿಗೆ ರಾಷ್ಟ್ರೀಯ ಏಕತೆಯನ್ನು ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು.

Dr. Kamala Hampanaಮುಖ್ಯಮಂತ್ರಿಯವರು ಪ್ರಾದೇಶಿಕ ಭಾಷೆಗಳ ಕೃತಿಗಳನ್ನು ಮತ್ತೊಂದು ಭಾಷೆಗೆ ಅನುವಾದಿಸುವುದರಿಂದ ಸಾಹಿತ್ಯ ವಿಸ್ತಾರ ಸಾಧ್ಯವೆಂದರಲ್ಲದೇ ಪ್ರಾದೇಶಿಕ ಸಂಸ್ಕೃತಿಯ ಬೆಳವಣಿಗೆಯೇ ನಿಜವಾದ ಭಾರತೀಯ ಸಂಸ್ಕೃತಿಯ ಬೆಳವಣಿಗೆಯೆಂದರು.

‘ದೆಹಲಿ ಕನ್ನಡಿಗ’ ಸಮ್ಮೇಳನ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿ, ಪತ್ರಿಕೋದ್ಯಮ ಸಂಸ್ಕೃತಿ ಬೆಳವಣಿಗೆಯಲ್ಲಿ ಮುಖ್ಯಪಾತ್ರ ವಹಿಸಿದೆ ಎಂದರು.

ರಾಷ್ಟ್ರದಲ್ಲಿ ಕನ್ನಡ ಕಲರವ : ಸಮ್ಮೇಳನದ ಸಂಚಾಲಕ ಬಾ. ಸಾಮಗ ಅವರು ಕನ್ನಡ ಸಂಸ್ಕೃತಿ ವೈಭವದ ಪುನರುತ್ಥಾನವೇ ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ. ಈವರೆಗೆ ಕನ್ಯಾಕುಮಾರಿ, ಪಣಜಿ, ಕಲ್ಕತ್ತಾ, ಬರೋಡ, ಭೋಪಾಲ್‌, ಹೈದರಾಬಾದ್‌, ಚೆನ್ನೈ, ಕಾಠ್ಮಂಡುಗಳಲ್ಲಿ ಸಮ್ಮೇಳನ ನಡೆಸಲಾಯಿತು ಎಂದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಕುಲಪತಿ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಮಾಜಿ ಅಧ್ಯಕ್ಷರಾದ ಡಾ. ಎಸ್‌. ರಾಮೇಗೌಡ ಅವರು ಮಾತನಾಡುತ್ತ, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಕನ್ನಡಿಗರು ಪ್ರಗತಿಗೊಳಿಸಬೇಕೆಂದು ಕರೆ ನೀಡಿದರು.

ಕೇಂದ್ರ ಸರಕಾರ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವುದರೊಂದಿಗೆ ಕನ್ನಡ ಪೀಠವನ್ನು ಅಮೆರಿಕಾ ಹಾಗೂ ಯೂರೋಪಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಬೇಕೆಂದೂ, ತಂತ್ರಜ್ಞಾನ ಮಾಹಿತಿ ಜನಸಾಮಾನ್ಯರಿಗೆ ತಲುಪಲು ಕಂಪ್ಯೂಟರ್‌ ಸಂಸ್ಕೃತಿಯನ್ನು ಕನ್ನಡೀಕರಣಗೊಳಿಸಬೇಕೆಂದು ಸಲಹೆ ನೀಡಿದರು.

ಪ್ರಶಸ್ತಿಗಳು : ಸಮ್ಮೇಳನದಲ್ಲಿ ಚಿಂತಕ ಡಾ. ಎಂ. ಚಿದಾನಂದ ಮೂರ್ತಿ ಅವರಿಗೆ ಕನ್ನಡ ವಿದ್ಯಾರಣ್ಯ ಪ್ರಶಸ್ತಿ, ಲೇಖಕಿ ಡಾ. ಕಮಲಾ ಹಂಪನಾ ಅವರಿಗೆ ಬಿ. ಎಂ. ಶ್ರೀ ಸಾಹಿತ್ಯ ಪ್ರಶಸ್ತಿ, ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶಾಮನೂರು ಶಿವಶಂಕರಪ್ಪ ಅವರಿಗೆ ಶ್ರೇಷ್ಠ ಸಾಮಾಜಿಕ ಕಾರ್ಯಕರ್ತ ಪ್ರಶಸ್ತಿ ನೀಡಲಾಯಿತು.

ಸನ್ಮಾನ : ಗಣನೀಯ ಸೇವೆ ಸಲ್ಲಿಸಿದ ಪ್ರೊ. ರೇಣುಕಾ ಅಪ್ಪಾದೊರೈ, ಡಾ. ಹೆಚ್‌. ಕಲ್ಪನಾ, ಡಾ. ಶೋಭಾ ಭಟ್‌, ಮಂಗಳಾ ಚಿಂತಾಮಣಿ, ಪರಿಮಳ ಜಕಲಿ, ಸ್ವರ್ಣ ಜ್ಯೋತಿ, ರಾಗಿಣಿ ಶ್ರೀನಿವಾಸ್‌, ಶಕುಂತಲಾ ಉಮೇಶ್‌ ಮತ್ತು ಡಾ. ಹೆಚ್‌. ಎಸ್‌. ಪಿ. ರಾವ್‌, ಡಾ. ಹೆಚ್‌. ರಂಗನಾಥ್‌, ಡಾ. ಎಸ್‌. ಎಸ್‌. ಕುಲಕರ್ಣಿ, ಡಾ. ಬಿ. ಆರ್‌. ರಮೇಶ್‌, ಪ್ರೇಮಶೇಖರ, ಆರ್‌. ಸುಂದರರಾಜ್‌, ಕೆ. ಶಿವರಾಮ ಆಳ್ವಾ, ಡಾ. ಎಸ್‌. ಬಿ. ರೊಟ್ಟಿ, ರೇವಣ್ಣ, ಬಿ. ಆರ್‌. ಬಾಬು, ಡಾ. ಎಸ್‌. ಎಲ್‌. ಹೋಟಿ, ಡಿ. ಪಿ. ಚಿಂತಾಮಣಿ ಇವರುಗಳನ್ನು ಸನ್ಮಾನಿಸಲಾಯಿತು.

ಪುಸ್ತಕ ಬಿಡುಗಡೆ : ಸಮ್ಮೇಳನದಲ್ಲಿ ಕಾದಂಬರಿಕಾರ ಪ್ರೇಮಶೇಖರ ಅವರ ಕಥಾಸಂಕಲನ ‘ಯಾನ’ ಪುಸ್ತಕವನ್ನು ಡಾ.ಕಮಲಾ ಹಂಪನಾ ಬಿಡುಗಡೆ ಮಾಡಿದರು.

ಸಮ್ಮೇಳನದ ವಿವಿಧ ಕಾರ್ಯಕ್ರಮಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಹಂಪ ನಾಗರಾಜಯ್ಯ, ಗಾಯಕ ಶಿವಮೊಗ್ಗ ಸುಬ್ಬಣ್ಣ, ತಿರುಚನಾಪಳ್ಳಿ ಆಕಾಶವಾಣಿ ನಿಲಯ ನಿರ್ದೇಶಕ ಡಾ. ಕೆ. ವಾಗೀಶ್‌, ದೆಹಲಿಯ ಜವಾಹರ್‌ಲಾಲ್‌ ನೆಹರೂ ವಿ. ವಿ. ಯ ಮಾಜಿ ಮುಖ್ಯ ಗ್ರಂಥಪಾಲಕ ಬಿ. ಎನ್‌. ರಾವ್‌, ಕಾದಂಬರಿಕಾರ ಪ್ರೇಮಶೇಖರ, ಲೇಖಕಿ ಡಾ. ಹೆಚ್‌. ಎಸ್‌. ಸುಜಾತ, ಸಾಹಿತಿ ಡಾ. ಜಿ. ಡಿ. ಜೋಶಿ, ಉಡುಪಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯು. ಚಂದ್ರಶೇಖರ ಹೊಳ್ಳ ಅವರುಗಳು ಉದ್ಘಾಟಿಸಿದರು.

ದೇಶದೆಲ್ಲೆಡೆಯಿಂದ ಸಾಹಿತಿಗಳು, ಕಲಾವಿದರು, ಪ್ರಾಧ್ಯಾಪಕರು, ಕನ್ನಡ ಸಂಘಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಒಂದು ಸಾವಿರ ಪ್ರತಿನಿಧಿಗಳು ಭಾಗವಹಿಸಿದ್ದರು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+