ಬಕ್ರೀದ್: ತ್ಯಾಗ, ಬಲಿದಾನಗಳ ಪ್ರತಿಬಿಂಬ
- ಎಂ.ಮಹ್ಮದ್ ಭಾಷಗೂಳ್ಯಂ
ವಿಶ್ವಭ್ರಾತೃತ್ವದ ಕಲ್ಪನೆ ಮೂಡಿಸುವುದು ಬಕ್ರೀದ್ ಹಬ್ಬದ ಮೂಲ ಉದ್ದೇಶ. ಬಡವರು, ಶ್ರೀಮಂತರು, ಮೇಲು-ಕೀಳು ಅಂತರ ಅಳಿಸುವುದು ಈ ಹಬ್ಬದ ವೈಶಿಷ್ಟ್ಯ. ಅರಬ್ಬಿ ಭಾಷೆಯಲ್ಲಿ ಈ ಹಬ್ಬವನ್ನು ಈದುಲ್-ಅಜ್‌ಹಾ ಎಂದು ಕರೆಯುತ್ತಾರೆ. ಈದುಲ್ ಅಂದರೆ ಹಬ್ಬ. ಅಜ್‌ಹಾ ಅಂದರೆ ಕುರ್ಬಾನಿ(ದಾನ ಮಾಡುವುದು) ಎಂದಾಗುತ್ತದೆ.
ಅರಬರ ಮೂಲಪುರುಷ ಹಾಗೂ ಇಸ್ಲಾಂ ಪ್ರವಾದಿ ಇಬ್ರಾಹಿಂ ಅಲೈ ಹಿಸ್ಸಲಾಮ್(ಸ)ಅವರ ತ್ಯಾಗ, ಭಕ್ತಿ, ಬಲಿ ಹಾಗೂ ನಿಷ್ಠೆಯ ಸವಿನೆನಪಿಗಾಗಿ ವಿಶ್ವದಾದ್ಯಂತ ಮುಸಲ್ಮಾನರು ಹಬ್ಬ ಆಚರಿಸುತ್ತಾರೆ. ಪ್ರತಿಯಾಬ್ಬ ಇಸ್ಲಾಂ ಧರ್ಮಾನುಯಾಯಿ, ಅಲ್ಲಾಹುನನ್ನು ಸ್ಮರಿಸಬೇಕು. ಶಾಂತಿ, ಸೌಹಾರ್ದ ಸಹಬಾಳ್ವೆಯನ್ನು ಮೂಲ ಮಂತ್ರವನ್ನಾಗಿಸಿಕೊಳ್ಳಬೇಕು. ತಾವು ಸಂಪಾದಿಸಿದ ಸಂಪತ್ತಿನಲ್ಲಿ ಸಾಧ್ಯವಾದಷ್ಟು ಸಂಪತ್ತನ್ನು ಅಭಾಗ್ಯರಿಗೆ, ಅನಾಥರಿಗೆ, ನಿರ್ಗತಿಕರಿಗೆ ಹಂಚಬೇಕು. ಸಹಪಾಠಿಗಳ ಜೊತೆ ದಯೆ, ಪ್ರೀತಿಯಿಂದ ವರ್ತಿಸಬೇಕು. ಗುರುಹಿರಿಯರಿಗೆ ವಿಧೇಯರಾಗಿ, ಸಹಾಯ ಸಹಕಾರ ನೀಡಬೇಕು. ತಮ್ಮ ಜೀವಿತ ಅವಧಿಯಲ್ಲಿ ಒಮ್ಮೆ ಹಜ್‌ಯಾತ್ರೆ ಮಾಡುವ ಮೂಲಕ ಮುಕ್ತಿ ಪಡೆಯುವುದು ಈ ಹಬ್ಬದ ವೈವಿಧ್ಯ.
ಪ್ರವಾದಿ ಇಬ್ರಾಹೀಮ್ ಯಾರು?: ಇಸ್ಲಾಂ ಧರ್ಮದ ಪುನರುತ್ಥಾನ ಮತ್ತು ವಿಶ್ವದ ಅಂಧಕಾರವನ್ನು ಅಳಿಸುವುದಕ್ಕಾಗಿ ಅಲ್ಲಾಹನು, ಪ್ರವಾದಿ ಇಬ್ರಾಹಿಮ್ ಅಲೈ ಹಿಸ್ಸಲಾಮ್ ಅವರನ್ನು ಭೂಲೋಕಕ್ಕೆ ಕಳುಹಿಸಿದನು. ಅವರು ಬರುವ ಮುನ್ನ ಇದ್ದ ಕ್ಷುದ್ರ ದೇವರ ಆರಾಧಕರಿಗೆ ಇದು ಸಹಿಸದಾಯಿತು. ಅಲ್ಲಾಹ ಹೊರತಾಗಿ ಅನ್ಯದೇವರಿಲ್ಲ ಎಂಬ ಇಬ್ರಾಹಿಮ್ ಅವರ ಉಪದೇಶ ಧರ್ಮಾಂಧರಿಗೆ ಕೋಪ ಬರಿಸಿತು. ಎಲ್ಲರೂ ಸೇರಿ ಇಬ್ರಾಹಿಮ್ ಅವರಿಗೆ ನಾನಾ ಕಿರುಕುಳ ನೀಡಿದರು. ಕಡೆಗೆ ಅವರನ್ನು ನಿಗಿನಿಗಿ ಬೆಂಕಿಗೆ ತಳ್ಳಿದರು. ಅಲ್ಲಾಹನ ಪ್ರಿಯ ಪ್ರವಾದಿ ಇಬ್ರಾಹಿಮ್ ಪವಾಡರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗುತ್ತಾರೆ.
ಇದರಿಂದ ಎಲ್ಲರಿಗೂ ಜ್ಞಾನೋದಯವಾಗುತ್ತದೆ. ಅವರ ಲೀಲೆಗೆ ಪ್ರತಿಯಾಬ್ಬರೂ ಮಾರುಹೋಗುತ್ತಾರೆ. ಕ್ರಮೇಣ ಸೈತಾನ(ಕ್ರೌರ್ಯ)ನ ಪ್ರಭಾವದಿಂದ ಹೊರಬರುತ್ತಾರೆ. ಪ್ರವಾದಿ ಉಪದೇಶದ ಅನುಯಾಯಿಗಳಾಗುತ್ತಾರೆ. ನಂತರ ಇಸ್ಲಾಂ ವಿಶ್ವವ್ಯಾಪಿಯಾಗಿದ್ದು ಇತಿಹಾಸ.
ಪವಿತ್ರ ಕಾಬಾ ಸನ್ನಿಧಿ: ಮುಸ್ಲಿಂ ಬಾಂಧವರು ಪ್ರತಿದಿನ ಅಲ್ಲಾಹನನ್ನು ಸ್ಮರಿಸಬೇಕು. ಆ ಮೂಲಕ ಅವನ ಸನ್ನಿಧಿ ಪ್ರತಿಯಾಬ್ಬರಿಗೂ ಪ್ರಾಪ್ತವಾಗಬೇಕು ಎಂಬ ಉದ್ದೇಶದಿಂದ ಪ್ರವಾದಿ ಇಬ್ರಾಹಿಮ್ ಅವರು ಅನೇಕ ವಿಧಾನ ಮತ್ತು ಇಸ್ಲಾಂ ತತ್ವಗಳನ್ನು ಬೋಧಿಸುತ್ತಾರೆ. ಹಜರೆ ಅಸ್ಪತ್ ಎಂಬ ಶ್ರೇಷ್ಠ ಕಲ್ಲನ್ನು ಜನ್ನತ್(ಸ್ವರ್ಗ)ನಿಂದ ತರಿಸುತ್ತಾರೆ. ಪ್ರಸ್ತುತ ಮುಕಾಮ್ ಎ-ಇಬ್ರಾಹಿಮ್ ಎಂದು ಹೇಳಲಾಗುವ ಕಲ್ಲಿನ ಮೇಲೆ ನಿಂತು (ಪ್ರವಾದಿ ಪಾದುಕೆ ಗುರುತು ಈಗಲೂ ಇದೆ)ಪವಿತ್ರ ಮಕ್ಕಾ ನಗರದಲ್ಲಿ ಕಾಬಾ(ದೇವರ ಸನ್ನಿಧಿ)ನಿರ್ಮಿಸಿದರಂತೆ.
ಹಜ್‌ಯಾತ್ರೆಗೆ ಹೋಗುವ ಯಾತ್ರಾರ್ಥಿಗಳು ಈಗಲೂ ಕಾಬಾದ ಸುತ್ತಲೂ ತವಾಫ್(ಪ್ರದಕ್ಷಿಣೆ)ಮಾಡಿ ಬರುತ್ತಾರೆ. ಮುಕಾಮ್-ಎ ಇಬ್ರಾಹಿಮ್ ಹಾಗೂ ಹಜರೆ ಅಸ್ಪತ್ ಕಲ್ಲುಗಳ ವಿಶೇಷವೆಂದರೆ ಇವು ಜನ್ನತ್(ಸ್ವರ್ಗ)ದಲ್ಲಿ ಅಲ್ಲಾಹ್ ಬಳಿ ಮುಸ್ಲಿಂ ಬಾಂಧವರು ಹಜ್ ಮಾಡಿದ್ದಾರೋ ಇಲ್ಲವೋ ಎಂಬುದನ್ನು ಸಾಕ್ಷಿ ನುಡಿಯುತ್ತವೆಯಂತೆ.
ಮಾನವ ಬಲಿ: ಪ್ರವಾದಿಯವರನ್ನು ಅಲ್ಲಾಹ ನೂರಾರು ಪರೀಕ್ಷೆಗೆ ಒಡ್ಡುತ್ತಾನೆ. ಒಂದಿರುಳು ಕನಸಿನಲ್ಲಿ ‘ನಿನ್ನ ಮಗ ಇಸ್ಮಾಯಿಲ್‌ನನ್ನು ನನಗೆ ಬಲಿ ಕೊಡಬೇಕು ಎಂದು ಅಲ್ಲಾಹ ಆಜ್ಞಾಪಿಸುತ್ತಾನೆ.
ಇಬ್ರಾಹಿಮ್ ಕೂಡಲೇ ಕಾರ್ಯಪ್ರವೃತ್ತನಾಗುತ್ತಾನೆ. ಅಲ್ಲಾಹನ ಆಜ್ಞೆಯನ್ನು ಪತ್ನಿ ಹಾಜಿರಾಗೆ ತಿಳಿಸಿ ಆಕೆಯ ಅನುಮತಿ ಮೇರೆಗೆ ಮಗನನ್ನು ಕೋಹ್ ಪರ್ವತದ ಬಳಿಗೆ ಕರೆದೊಯ್ಯುತ್ತಾನೆ. ಇಸ್ಮಾಯಿಲ್‌ನನ್ನು ಬಲಿಕೊಡಲು ಸನ್ನದ್ದರಾದ ಕೂಡಲೇ ಅಶರೀರವಾಣಿ ಮೊಳಗುತ್ತದೆ. ಪವಾಡ ಸದೃಶವೆಂಬಂತೆ ಇಸ್ಮಾಯಿಲ್ ಬದುಕುಳಿಯುತ್ತಾನೆ. ಮಗನ ಬದಲಾಗಿ ದುಂಬ ಎನ್ನುವ ಕುರಿ ಹತವಾಗಿ ಬಿದ್ದಿರುತ್ತದೆ.
ಹೀಗೆ ಮಾನವ ಬಲಿ ಆಚರಣೆ ಪದ್ಧತಿ ತಪ್ಪಿಸಿದ ಕೀರ್ತಿ ಪ್ರವಾದಿ ಇಬ್ರಾಹಿಮ್ ಅವರಿಗೆ ಸಲ್ಲುತ್ತದೆ. ಬದಲಾಗಿ ಕುರಿ, ಮೇಕೆ, ಒಂಟೆ ಬಲಿನೀಡುವ ಆಚರಣೆ ಬಂದದ್ದು ಈ ಕಾರಣದಿಂದ. ಪ್ರತಿಯಾಬ್ಬ ಮುಸ್ಲಿಂ ಬಾಂಧವರು ಪ್ರವಾದಿಯವರ ತ್ಯಾಗ, ಔದಾರ್ಯ, ಸ್ವಾಮಿ ನಿಷ್ಠೆಯ ಸವಿ ನೆನಪಿಗೆ ಬಕ್ರೀದ್ ಅನ್ನು ಆಚರಿಸಿಕೊಂಡು ಬರುತ್ತಾರೆ.
ಯಾಕೆ ಹಜ್ ಯಾತ್ರೆ?: ಹಜ್ ಅಂದರೆ ತೀರ್ಥಯಾತ್ರೆ. ಕಾಬಾ ಮತ್ತು ಪ್ರವಾದಿ ಮಹಮ್ಮದ್ ಅವರ ಸಮಾಧಿ ಸ್ಥಳವಾದ ಮದೀನಾವನ್ನು ಸಂದರ್ಶಿಸುವುದು ಹಜ್ ಮಾಡುವ ಕ್ರಿಯೆಗಳಲ್ಲಿ ಪ್ರಮುಖ. ಹಜ್ ಮಾಡುವುದರಿಂದ ಸಂಕಷ್ಟ ನಿವಾರಣೆಯಾಗುತ್ತದೆ. ಪಾಪಕಾರ್ಯ ಕಳೆದು ಹೋಗುತ್ತದೆ. ಹಜ್ ಮಾಡುತ್ತ ಹಾದಿಯಲ್ಲಿ ಸತ್ತರೂ ಅಂತಹ ಯಾತ್ರಾರ್ಥಿಗಳಿಗೆ ಜನ್ನತ್(ಸ್ವರ್ಗ)ನ ಬಾಗಿಲು ತೆರೆದೇ ಇರುತ್ತದೆ ಎಂಬುದು ಇಸ್ಲಾಂ ಧರ್ಮ ಗ್ರಂಥಗಳ ಸಾರ.
ಬಕ್ರೀದ್ ಪ್ರಸ್ತುತತೆ: ಇಡೀ ವಿಶ್ವ ಇಂದು ಅಶಾಂತಿಯ ಅಗ್ನಿಕುಂಡ. ಅಧರ್ಮ, ಉಗ್ರವಾದ ನೆಲಸಿದೆ. ಮಾನವೀಯತೆ ಕಣ್ಮರೆಯಾಗಿದೆ. ಭ್ರಷ್ಟ ರಾಜಕಾರಣದ ಅಧಿಪತ್ಯ ಸ್ಥಾಪನೆಯಾಗಿದೆ. ಮಾನವ-ಮಾನವರ ನಡುವೆ ಧರ್ಮದ ಗೋಡೆ, ವರ್ಣ ಭೇದದ ದಳ್ಳುರಿಗೆ ಧರ್ಮಾಂಧರ ನೆರವು ಬೇರೆ ಇದೆ. ಮನುಕುಲವೇ ಸ್ವಾರ್ಥ ಲಾಲಸೆಯ ಬೀಡಾಗುತ್ತಿದೆ. ಮನುಷ್ಯನಿಗೆ ಇವುಗಳಿಂದ ಮುಕ್ತಿ ಇಲ್ಲವೇ?- ಈ ಪ್ರಶ್ನೆಗೆ ಉತ್ತರ ಕಷ್ಟ. ಆದರೂ ಋಷಿ, ಸಂತರು, ಪ್ರವಾದಿಗಳು ಈಗಾಗಲೇ ಅನೇಕ ಪ್ರಯೋಗಗಳ ಮಾಡಿದ್ದಾರೆ. ಆ ಮೂಲಕ ಸಮಸ್ಯೆಗೆ ಪರಿಹಾರ ಕಂಡು ಹಿಡಿದಿದ್ದಾರೆ.
ಆ ಪೈಕಿ ಬಕ್ರೀದ್ ಸಂದೇಶವೂ ಒಂದು. ಸರ್ವಧರ್ಮ ಸಮನ್ವಯ, ಸೌಹಾರ್ದ, ಸಹಬಾಳ್ವೆ, ಶತ್ರುಗಳನ್ನು ಪ್ರೀತಿಸುವ ಔದಾರ್ಯ ಇವು ಬಕ್ರೀದ್ ಆಚರಣೆಯ ತತ್ವಗಳಾಗಿವೆ. ಇದು ಪುಸ್ತಕಕ್ಕೆ ಮಾತ್ರ ಸೀಮಿತವಾಗದೆ ಅನುಷ್ಠಾನಗೊಳ್ಳಬೇಕು. ಆಗ ಮಾತ್ರ ಬಕ್ರೀದ್ ಆಶಯಕ್ಕೆ ಅರ್ಥ!
(ಸ್ನೇಹಸೇತು- ವಿಜಯಕರ್ನಾಟಕ)











Click it and Unblock the Notifications