ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬಯಿನಲ್ಲಿ ಮಳೆ ನಿಂತಿದೆ... ಆದರೆ ಮರದ ಹನಿ ನಿಂತಿಲ್ಲ...!

By Staff
|
Google Oneindia Kannada News
Talaku Srinivasಜುಲೈ 26ರ ಕರಾಳ ದಿನದ ನಂತರದ ದಿನಗಳು ನಿಜಕ್ಕೂ ತಲ್ಲಣಗೊಳಿಸಿದೆ. ಸಾಮಾನ್ಯವಾಗಿ ಮುಂಬಯಿನಲ್ಲಿ ಏನೇ ಕೆಟ್ಟದ್ದಾಗಲೀ ಅಥವಾ ಒಳ್ಳೆಯದೇ ಆಗಲೀ(ಈ ಹಿಂದೆ ನಡೆದ ಬಾಂಬ್‌ ಸ್ಫೋಟ ಇತ್ಯಾದಿ), ಇಲ್ಲಿಯ ಜನರು ಬಹಳ ಬೇಗ ಅವುಗಳನ್ನು ಮರೆಯುವರು. ಅದಕ್ಕೆ ಮುಖ್ಯವಾದ ಕಾರಣವೆಂದರೆ, ಇಲ್ಲಿಯ ತರಾತುರಿಯ ಜೀವನ ಮತ್ತು ವಿಶ್ರಮಿಸಿಕೊಳ್ಳಲು ಸಿಗದಿರುವ ಸಮಯ.

ಆದರೆ ಈ ಬಾರಿ ಹೀಗಾಗಲಿಲ್ಲ. 24ಘಂಟೆಗಳ ಕಾಲ ಜನರನ್ನು ಎಲ್ಲೆಂದರಲ್ಲಿ ಸೆರೆಹಿಡಿದಿಟ್ಟಿದ್ದ ನಿಸರ್ಗ(ವರುಣ), ಅಷ್ಟು ಸುಲಭವಾಗಿ ಜನಗಳಿಗೆ ಮುಕ್ತಿ ಕೊಡಲಿಲ್ಲ. ತಗ್ಗು ಪ್ರದೇಶಗಳಾದ ಕಲಿನಾ, ಸಾಕಿನಾಕ, ಅಂಧೇರಿ ಪಶ್ಚಿಮ (ಇಲ್ಲಿ ರೈಲ್ವೇ ಹಳಿಗಳ ಅಕ್ಕ ಪಕ್ಕ ಸಮುದ್ರದ ಕಡೆಗೆ ಮತ್ತು ಅದರ ವಿರುದ್ಧ ದಿಕ್ಕಿಗೆ ಇರುವ ಪ್ರದೇಶಗಳನ್ನು ಪೂರ್ವ ಪಶ್ಚಿಮ ಅಂತ ವಿಂಗಡಿಸುತ್ತಾರೆ), ದಾದರ ಪೂರ್ವ, ಜೋಗೇಶ್ವರಿ, ಮರೋಲ, ಮಾತುಂಗ ಪೂರ್ವ, ಕಿಂಗ್ಸ್‌ ಸರ್ಕಲ್‌, ಲಾಲ್‌ ಬಾಗ್‌, ಪೊವೈ, ಕಾಂದಿವಲಿ, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌, ಕುರ್ಲಾ, ಕಲಾನಗರ, ಚುನಾಭಟ್ಟಿ, ವಡಾಲ, ಬೋರಿವಿಲಿ ಇತ್ಯಾದಿಗಳಲ್ಲಿ ನೀರು ತುಂಬಿತ್ತು. ನೀರಿನ ಮಟ್ಟ ಕೆಳಗಿಳಿಯುವವರೆಗೂ ಮನೆಗಳಲ್ಲಿ ಮೇಲ್ಭಾಗದಲ್ಲಿ ಇದ್ದವರು ಅಲ್ಲಲ್ಲೇ ಇದ್ದರು. ಊಟ ನಿದ್ರೆಗಳೆಲ್ಲವೂ ಮಾಯವಾಗಿತ್ತು. ನಿಧಾನವಾಗಿ 2-3ದಿನಗಳ ತರುವಾಯ ಜನಜೀವನ ಮಾಮೂಲಿನ ಸ್ಥಿತಿಗೆ ಬರಹತ್ತಿತ್ತು.

ಕರಾಳ ದಿನದ ನಂತರದ ದಿನ, ಇಂತಹ ಒಂದು ಸಂದರ್ಭದಲ್ಲಿ ಕುರ್ಲಾ ಪ್ರದೇಶದ ನೆಹರು ನಗರದ ಒಂದು ದಿನಸಿ ಅಂಗಡಿಯಲ್ಲಿ ನೀರನ್ನು ಆಚೆಗೆ ಹಾಕಲು ಮೋಟರನ್ನು ಉಪಯೋಗಿಸಿದ್ದರು. ಅಂದಿನ ದಿನ ಬೆಳಗಿನಿಂದ ಮಳೆ ಇರಲಿಲ್ಲ. ಸುತ್ತಮುತ್ತಲಿನಲ್ಲಿದ್ದವರಿಗೆಲ್ಲ ಏನಾಯಿತೆಂದು ತಿಳಿದೇ ಆಶ್ಚರ್ಯ ಪಡುತ್ತಿದ್ದರು. ಆಗ ಯಾರೋ ಹಬ್ಬಿಸಿದ ಸುದ್ದಿ - ‘ತ್ಸುನಾಮಿ ಬಂದಿದೆ’. ಅದೊಂದು ಸಣ್ಣ ಗಲ್ಲಿ. ತ್ಸುನಾಮಿಯ ಬಗ್ಗೆ ಕಳೆದ ವರ್ಷವಷ್ಟೇ ಕೇಳಿದ್ದ ಜನಗಳು ದಿಕ್ಕಾಪಾಲಾಗಿ ಓಡಹತ್ತಿದರು. ಎಳೆಯ ಮಕ್ಕಳು ಕಾಲಿಗೆ ಸಿಕ್ಕರೂ ಲೆಕ್ಕಿಸದೆ ಆ ಪ್ರದೇಶದಿಂದ ದೂರಕ್ಕೆ ಹೋಗಬೇಕೆನ್ನುವುದೇ ಎಲ್ಲರ ಧ್ಯೇಯ. ಇಂತಹ ಸನ್ನಿವೇಶದಲ್ಲಿ ಎಷ್ಟೋ ಮಂದಿ ಕಾಲ್ತುಳಿತಕ್ಕೆ ಸಿಕ್ಕು ಮೃತರಾದರು. ಅಧಿಕೃತ ವರದಿ ಪ್ರಕಾರ ಅವರುಗಳ ಸಂಖ್ಯೆ - 18. ಇನ್ನೂ ಎಷ್ಟು ಜನಗಳು ಸತ್ತರೋ ತಿಳಿಯಲಿಲ್ಲ.

ನಂತರದ ದಿನಗಳಲ್ಲಿ ನೀರು ತುಂಬಿದ್ದ ಪ್ರದೇಶಗಳಲ್ಲಿ ನೀರು ಕಡಿಮೆಯಾದಾಗ ತಿಳಿದದ್ದು, ಎಷ್ಟೋ ಜನಗಳ ಆಸ್ತಿ ಪಾಸ್ತಿಗಳು ನಾಶವಾಗಿದ್ದವು. 69 ವರ್ಷದ ನಿವೃತ್ತ ಶಾಲಾ ಶಿಕ್ಷಕರಾದ ಏಕನಾಥ ಪಾಟೀಲರು ತಮ್ಮ ಮನೆಯಲ್ಲಿ ಒಂದು ಚಿಕ್ಕ ಗ್ರಂಥಾಲಯವನ್ನೇ ಮಾಡಿದ್ದರು. ಜೀವನ ಪರ್ಯಂತ ಗಳಿಸಿ ಅವರಲ್ಲಿದ್ದ 1500 ಎಲ್ಲೂ ಸಿಗದಂತಹ ವಿಶೇಷ ಪುಸ್ತಕಗಳು ನೀರಿಗೆ ಬಲಿಯಾಗಿ ಕೊಳೆತು ಕುಸುರಿ ಕಾಳಿನಂತಾಗಿದ್ದವು. ಆಸ್ತಿಯಂತಿದ್ದ ಜೀವನದ ಗೆಳೆಯ ಪುಸ್ತಕಗಳನ್ನು ಕಳೆದುಕೊಂಡ ಆ ಹಣ್ಣಾದ ಜೀವಿ ಎಷ್ಟು ನೊಂದಿರಬಹುದು. ಇಂತಹ ನೊಂದ ಜೀವಿಗಳು ಸಹಸ್ರಾರು. ಯಾರನ್ನು ಏನು ಅನ್ನಲು ಸಾಧ್ಯ. ತನ್ನ ಮುಂದೆ ಮಾನವ ಒಂದು ಅಚೇತ ಹುಳೂ ಎಂಬುದನ್ನು ವಿಧಿ ನಿರೂಪಿಸಿದೆ.

ಮುಂಬೈನಿಂದ ಹೊರ ಬರುತ್ತಿರುವ ಇನ್ನೊಂದು ಕನ್ನಡದ ಕಂದ, ‘ ಸಂಗಾತಿ’ ಎಂಬ ಮಾಸಪತ್ರಿಕೆಯ ಕಛೇರಿ ಇಂತಹ ಜಲಾವರಿತ ಪ್ರದೇಶವಾದ ಸಾಕಿನಾಕದಲ್ಲಿ ಇದ್ದು, ಇ ಸಮಯದಲ್ಲಿ ಬಹಳ ನಷ್ಟ ಅನುಭವಿಸುತ್ತಿದೆ. ಆದರೂ ಧೃತಿಗೆಡದ ಇದರ ರೂವಾರಿ ಶ್ರೀ ನಾರಾಯಣ ಪ್ರಸಾದರು ಹಗಲಿರುಳೂ ಶ್ರಮಿಸುತ್ತಿದ್ದಾರೆ. ಮತ್ತೆ ಇವರ ಮಾಸಪತ್ರಿಕೆ ಹೊರಬರುತ್ತಿರುವುದು ಸಂತೋಷದ ವಿಷಯ. ಈ ಸಂದರ್ಭದಲ್ಲಿ ಎಲ್ಲ ಕನ್ನಡಿಗರೂ ಅವರ ಹಿಂದೆ ಇದ್ದೀವಿ ಎಂದು ಹೇಳಲಿಚ್ಛಿಸುವೆ.

ಅಂದಿನ ದಿನದ ಜಲ ಪ್ರಳಯದಿಂದ ರೈಲ್ವೇ ಹಳಿಗಳ ಮೇಲೆ ನೀರು ನಿಂತಿದ್ದು ಎಷ್ಟೋ ಲೋಕಲ್‌ ಟ್ರೈನಗಳಿಗೆ ಹಾನಿಗಳಾಗಿತ್ತು. ಅವುಗಳ ದುರಸ್ತಿ ಆಗುವವರೆಗೆ ಉಳಿದ ಗಾಡಿಗಳನ್ನು ಉಪಯೋಗಕ್ಕೆ ತರಲಾಯಿತು. ಇದರಿಂದಾಗಿ ರೈಲ್ವೇ ಸೇವೆಯಲ್ಲಿ ಕಡಿತವನ್ನುಂಟು ಮಾಡಿದ್ದರು. ಆಗಿನ ಅಂದಾಜಿನಂತೆ ಆಗಸ್ಟ್‌ 15ರ ನಂತರ ಎಲ್ಲ ಸೇವೆಗಳನ್ನೂ ಸಾಮಾನ್ಯ ಮಾಡಲಾಗುವುದು ಎಂದು ಘೋಷಿಸಿದ್ದರು. ಮೊದಲೇ ಇಲ್ಲಿಯ ಜನಸಂಖ್ಯೆಗೂ ಲಭ್ಯವಿರುವ ಸಾರಿಗೆ ಸೇವೆಗೂ ತಾಳೆ ಆಗದೇ ಲೆಕ್ಕ ತಪ್ಪುತ್ತಿದೆ. ಹೊಟ್ಟೆಪಾಡಿಗಾಗಿ ಈ ದ್ವೀಪದ ವಾಣಿಜ್ಯ ಕ್ಷೇತ್ರಕ್ಕೆ ಓಡಾಡುವ ಜನಸಂಖ್ಯೆ ವಿಪರೀತವಾಗಿ 9 ಕೋಚುಗಳ ಟ್ರೈನುಗಳನ್ನು ಸರಿ ಸುಮಾರಾಗಿ 12 ಕೋಚುಗಳನ್ನಾಗಿ ಮಾರ್ಪಡಿಸಿದ್ದರು. ಈಗ ಅಳಿದು ಉಳಿದ ಟ್ರೈನುಗಳಲ್ಲೇ 9 ಕೋಚುಗಳನ್ನು ಮಾಡಿ ಹೇಗೋ ಸಾವರಿಸಲು ಪ್ರಯತ್ನಿಸುತ್ತದ್ದಾಗ, ಆ ಘೋಷಿತ ದಿನದಲ್ಲಿ ಸೇವೆಗಳನ್ನು ಸಾಮಾನ್ಯ ಸ್ಥಿತಿಗೆ ತರಲಾಗದೇ ಅಲ್ಲಿ ಇಲ್ಲಿ ಜನಗಳ ಗಲಾಟೆ ಪ್ರಾರಂಭವಾಗಿದೆ. ರೈಲ್‌ ರೋಕೋ, ಸರ್ಕಾರದ ಆಸ್ತಿಗೆ ಹಾನಿ ಇತ್ಯಾದಿಗಳಿಂದ ಇನ್ನೂ ಹೆಚ್ಚಿನ ಹಾನಿಯಾಗುತ್ತಿದೆ. ಇದೇ ಸಮಯಕ್ಕೆಂದೇ ಕೆಲವು ಜನಗಳು ಕಾಯುತ್ತಿದ್ದರು ಅನ್ನಿಸುತ್ತದೆ. ಏಕೆಂದರೆ ಇದರ ಗೊಡವೆಗೆ ಎಂದೂ ಹೋಗದೆ ತಲೆ ತಗ್ಗಿಸಿ ತಮ್ಮ ತಮ್ಮ ಮನೆ, ಕಛೇರಿ, ಕೆಲಸಗಳಲ್ಲೇ ಮುಳುಗಿರುವ ಜನ ಮತ್ತೆ ಇಂತಹ ಕೆಲಸ ಮಾಡಿ ತಮ್ಮ ಬಾಳನ್ನೇ ಹಾಳು ಮಾಡಿಕೊಳ್ಳಲಿಚ್ಛಿಸುವುದಿಲ್ಲ.

ಈ ಸನ್ನಿವೇಶಗಳ ಬೆನ್ನ ಹಿಂದೆಯೇ ಸಾಂಕ್ರಾಮಿಕ ರೋಗದ ಭೀತಿ ಶುರುವಾಯಿತು. ಅಧಿಕೃತ ಮಾಹಿತಿಯ ಪ್ರಕಾರ ಮುಂಬೈನಲ್ಲೇ 421 ಜನಗಳು ಸಾವನ್ನಪ್ಪಿದರು. ಎಮ್ಮೆಗಳು, ನಾಯಿಗಳು, ಕುರಿಗಳು ಸತ್ತು ಬಿದ್ದಿದ್ದು ಪಕ್ಕದಲ್ಲೇ ಅನಾಥಶವಗಳೂ ಇದ್ದು ಮನುಷ್ಯ ಮತ್ತು ಪ್ರಾಣಿಗಳು ಎಲ್ಲರೂ ಒಂದೇ ಎನ್ನುವುದನ್ನೂ ಮನದಟ್ಟು ಮಾಡಿಕೊಡುವಂತಿತ್ತು. ಮೊದಲಿಗೆ ಸಂತ್ರಸ್ತರಲ್ಲಿ ಜ್ವರ ಕಾಣಿಸಿಕೊಂಡಿತು. ಇದರ ಜೊತೆಗೆ ಕಂಡು ಬಂದ ಇನ್ನೊಂದು ಮಾರಕ ರೋಗ ‘ಲೆಪ್ಟೋಸ್ಪೊರೋಸಿಸ್‌’.

ಯಾವುದೀ ರೋಗ? ಈ ರೋಗ ಬ್ಯಾಕ್ಟೀರಿಯಾಗಳಿಂದ ಹರಡುವಂಥದ್ದು. ಸಾಮಾನ್ಯವಾಗಿ ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುವುದು, ಈಗ ಮಾನವನಿಗೂ ಹಬ್ಬಿದೆ. ಈ ರೋಗ ಅಂತ್ರಾಕ್ಸ್‌, ರೇಬೀಸ್‌, ಪಾದ-ಬಾಯಿ ರೋಗ (ಫುಟ್‌-ಮೌತ್‌) ಮತ್ತು ಹುಚ್ಚು ಹಸುಗಳ (ಮ್ಯಾಡ್‌ ಕೌ) ರೋಗಗಳ ಸಾಲಿಗೆ ಸೇರಿದ್ದು.

ಸಾಮಾನ್ಯವಾಗಿ ಪ್ರಾಣಿಗಳೊಂದಿಗೆ ಕೆಲಸ ಮಾಡುವವರಿಗೆ ಇದು ಬರುವುದು. ಉದಾಹರಣೆಗೆ ಡೈರಿಗಳಲ್ಲಿ ಕೆಲಸ ಮಾಡುವವರು, ಮೀನುಗಾರರು, ನೀರಿನಲ್ಲಿ ಹೆಚ್ಚಾಗಿ ಇರುವಂತಹವರು, ಇತ್ಯಾದಿಗಳಲ್ಲಿ ಕಂಡು ಬರುವುದು. ಬೀದಿ ನಾಯಿಗಳಿಂದಲೂ ಈ ರೋಗ ಸಾಮಾನ್ಯವಾಗಿ ಹರಡುವುದು.

ಜುಲೈ 26ರಂದು ಪ್ರಾಣಿಗಳು ನೀರಿನಲ್ಲಿ ಇದ್ದು ಅಲ್ಲೇ ಮಲ ಮೂತ್ರ ವಿಸರ್ಜಿಸಿ ಈ ರೋಗ ಹರಡಲು ಕಾರಣವಾದವು. ಇನ್ನು ಮಾನವರು ಅದೇ ನೀರಿನಲ್ಲಿ ಹೋಗುವಾಗ ಕಾಲಿನಲ್ಲಿ ಎಲ್ಲೇ ಆಗಲಿ ಸ್ವಲ್ಪ ಏಟಾಗಿದ್ದರೂ ಅಥವಾ ರಕ್ತ ಬಂದಿದ್ದರೂ ಈ ರೋಗಾಣುಗಳು ಅವರ ದೇಹ ಪ್ರವೇಶಿಸಿವೆ. ಕಾಲಿನಲ್ಲೇ ಅಲ್ಲದೇ ಮೂಗು, ಕಣ್ಣು ಇನ್ನಿತರೇ ರಿಕ್ತ ಪ್ರದೇಶಗಳಿಂದಲೂ ರೋಗಾಣುಗಳ ಪ್ರವೇಶವಾಗಿವೆ. ಈ ರೋಗ ಬಂದವರಿಗೆ ಮೊದಲು ಜ್ವರ ಕಾಣಿಸಿಕೊಳ್ಳುವುದು. ಈ ರೋಗಗ್ರಸ್ತರ ಮಾಂಸ ಖಂಡಗಳು ನೋವು ಕಾಣಿಸಿಕೊಳ್ಳೂವುದು, ಹಾಗೇ ಜ್ವರವೂ ಬರುವುದು. ರೋಗಗ್ರಸ್ತರ ಶರೀರದೊಳಗೆ ರಕ್ತಸ್ರಾವವಾಗಿ ವಾಂತಿ ಮಾಡಿಕೊಳ್ಳುವುದೂ ಉಂಟು.

ಇಲ್ಲಿಯವರೆವಿಗೆ ಈ ರೊಗಕ್ಕೆ ಬಲಿಯಾಗಿರುವವರ ಸಂಖ್ಯೆ 210 ಎಂದು ಅಂದಾಜು ಮಾಡಲಾಗಿದೆ. ಈ ರೋಗದಿಂದ ಗುಣಮುಖರಾಗಲು ರೋಗಿಗಳ ಶುಶ್ರೂಷೆಯಲ್ಲಿ ವೈದ್ಯರುಗಳು ಹಗಲಿರುಳೂ ಶ್ರಮಿಸುತ್ತಿದ್ದಾರೆ. ಕೆಲವಾರು ಖಾಸಗೀ ವೈದ್ಯರುಗಳು ಈ ರೋಗಕ್ಕೆ ಉಚಿತವಾಗಿ ಮದ್ದು ನೀಡುವುದಾಗಿ ಘೋಷಿಸಿದ್ದಾರೆ. ಧೃತಿಗೆಡುತ್ತಿರುವ ಮಾನವನಿಗೆ ಇಂತಹ ಸಾಂತ್ವನದ ಕೆಲಸಗಳೇ ಬೇಕಲ್ಲವೇ? ಮುಳುಗುತ್ತಿರುವ ಮಾನವನಿಗೆ ಹುಲ್ಲು ಕಡ್ಡಿ ಆಸರೆ ಸಿಕ್ಕರೂ ಸಾಕು ಬದುಕ ಬೇಕೆಂಬ ಆಸೆ ಹೆಚ್ಚಾಗುವುದು. ಆದರೆ ಸರ್ಕಾರವು ಬೇಕಿರುವಷ್ಟು ತ್ವರಿತದಲ್ಲಿ ಕೆಲಸ ಮಾಡುತ್ತಿಲ್ಲವೆಂದು ವದಂತಿ. ಇದು ನಿಜವಿರಲೇಬೇಕು, ಅದಕ್ಕಾಗೇ ಇಷ್ಟು ಜನರ ಆಹುತಿಯಾಗಿರುವುದು.

ಈನ್ನು ಈಗ ತಿಳಿದುಬಂದಿರುವುದು ಮಲೇರಿಯಾ ಕಾಯಿಲೆ ಹರಡುತ್ತಿದೆ ಎಂದು. ಈಗಲೂ ಮಲೇರಿಯಾ ಹರಡುವುದೆಂಬ ಭೀತಿ ಇದ್ದೇ ಇದೆ. ನಿಂತ ನೀರಿನಿಂದ ಸೊಳ್ಳೆಗಳ ಹಾವಳಿ ಜಾಸ್ತಿಯಾಗಿ ಮಲೇರಿಯಾ ಹರಡುತ್ತಿದೆ ಎಂದು ಸುದ್ದಿ ಬಂದಿದೆ. ಇದಲ್ಲದೇ ಸೆಪ್ಟೆಂಬರ್‌ ನಲ್ಲಿ ಇನ್ನೊಂದು ಮಾರಕ ರೋಗವಾದ ಡೆಂಗ್‌ ಕಾಣಿಸಿಕೊಳ್ಳಬಹುದೆಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.

ಮೊದಲಿಗೆ ಮಳೆ, ನಂತರ ತ್ಸುನಾಮಿಯ ಗಾಳಿ ಸುದ್ದಿ, ತದ ನಂತರ ಸಾಂಕ್ರಾಮಿಕ ರೋಗಗಳು - ಹೀಗೆ ಒಂದರ ಹಿಂದೊಂದರಂತೆ ಅನಾಹುತಗಳು ಇಡೀ ಮುಂಬೈಯನ್ನು ಧೃತಿಗೆಡಿಸುತ್ತಿದೆ.

ನೋಡಿ, ಅಂದು ಆದ ಹಾನಿಯನ್ನು ಸರಿಪಡಿಸಲೋಸುಗ ಕೌನ್‌ ಬನೇಗ ಕರೋರ್‌ ಪತಿಯ ವಿಶೇಷ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಇದರಿಂದ ಬರುವ ಹಣವನ್ನು ದಾನವಾಗಿ ಅರ್ಪಿಸುತ್ತಿದ್ದಾರೆ. ಇಂತಹ ಎಷ್ಟೋ ಕಾರ್ಯಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಸಂಘ ಸಂಸ್ಥೆಗಳು ಹಮ್ಮಿ ಕೊಂಡಿವೆ. ಒಂದು ಕಡೆ ನಿಸರ್ಗ ನಮ್ಮನ್ನು ಕೆಳಕ್ಕೆ ತಳ್ಳುತ್ತಿದ್ದರೆ ಮೇಲೆ ಉಳಿದವರು ಮೇಲಕ್ಕೆ ಎಳೆದೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ಯಾರು ಗೆಲ್ಲುವರೋ ನೋಡಬೇಕು. ಪ್ರಾಚೀನ ಕಥೆಗಳಲ್ಲಿ ಸೂಚಿಸಿರುವಂತೆ ಪತಿವ್ರತೆಯಾದ ಸಾವಿತ್ರಿಯು ಯಮಧರ್ಮನೊಡನೆ ಹೋರಾಡಿ ಸಾವನ್ನು ಗೆದ್ದು ತನ್ನ ಪತಿಯನ್ನು ಬದುಕಿಸಿಕೊಂಡಿದ್ದಳು. ಹಾಗೇ ಈಗಲೂ ಆಗಬಹುದಾ? ಅಥವಾ ಮುಂಬೈನಗರದ ಅಪರ ಕರ್ಮ ನಡೆಯುವುದಾ?


ಪೂರಕ ಓದಿಗೆ :
ಮುಂಬೈನಲ್ಲಿ ಸಾವಿನ ಮಳೆಯ ಪಕ್ಕ ನಿಂತು...


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X