ಕಾರಮ್ಯಾಲ ಕಲ್ಲ ಹೇರಿದ್ರ ಕನ್ನಡ ಉಳೀತದೇನ್ರಿ...?
- ಹೂಲಿ ಶೇಖರ್ , ಬೆಂಗಳೂರು
ಹೇಳಿದ ಸಮಯಕ್ಕೆ ಬಂದೇ ಬಿಟ್ಟಳು ಕನಕಾಂಗಿ. ಸಿಟಿಬಸ್‌ನಲ್ಲಿ ಸೀಟು ಸಿಗದೆ ಬಂದಾಗಲೊಮ್ಮೆ ಅವಳ ಮುಖದ ಬಣ್ಣೇ ಬದಲಾಗಿರುತ್ತದೆ. ಈಗಲೂ ಹಾಗೆಯೇ. ನನ್ನನ್ನೊಮ್ಮೆ ನೋಡಿ ಮೊದಲು ಹುಬ್ಬಿನ ಮೇಲೆ ಕೈಯಾಡಿಸಿಕೊಂಡಳು.
‘ಈ ಬಸ್ಸಂದ್ರಹಿಂಗ ಇರ್ತಾವ ನೋಡ್ರಿ’ ಎಂದು ಧೂಳೆಬ್ಬಿಸಿ ಹೋದ ಬಸ್ಸಿನತ್ತ ನೋಡಿ ಹೇಳಿದಳು. ಹಾಗೆ ನೋಡಿದವಳು ತಕ್ಷಣ ರೆಪ್ಪೆ ಮುಚ್ಚಲೇ ಇಲ್ಲ .
‘ಇದೇನು ಸ್ಸರ್ರ.. ಹಿಂಗ್ ಗಡ್ಡಾಬಿಟ್ಟೀರಿ ? ’
‘ಹೌದು... ಈಗೀಗ ಕನ್ನಡಾ ಹೋರಾಟ ಸುರೂ ಆಗ್ಲಿಕ್ಕೆ ಹತ್ಯಾವ ನೋಡ್ರಿ.. ಗಡ್ಡಾ ಇಲ್ಲದಿದ್ರ ಹ್ಯಾಂಗ?’
‘ಇದೇನ ಸ್ಸರ್ರ ಹಿಂಗ್ ಕೇಳ್ಲಿಕ್ಕೆ ಹತ್ತೀರಿ? ಕನ್ನಡಕ್ಕ ಗಡ್ಡಕ್ಕ, ಹೋರಾಟಕ್ಕ ಗಡ್ಡಕ್ಕ... ಏನ್ ಸಂಬಂಧ ಅದ ? ಏನರ ಹೇಳಬ್ಯಾಡ್ರಿ ನೀವು....!’
ಕನಕಾಂಗಿ ನನ್ನ ಬಗ್ಗೆ ಹಾಗೆ ಹೇಳಿದಾಗ ಗಡ್ಡ ಕೆರೆದುಕೊಂಡೆ. ಆಗಲೇ ಒಂಭತ್ತೂವರೆಯಾಗಿತ್ತು. ಇಷ್ಟರಲ್ಲಿ ಸಿನಿಮಾ ಮಂದಿ ವಿಧಾನಸೌಧದ ಮುಂದೆ ಜಮಾಯಿಸಿರುತ್ತಾರೆ. ಪ್ರತಿಭಟನೆ ಸುರು ಆಗಿರುತ್ತದೆ. ಬೇಗ ಹೊರಡಬೇಕು.
‘ಸ್ಸರ್ರ... ಸಿನಿಮಾ ಮಂದಿ ಕನ್ನಡ ಉಳಿಸಲಿಕ್ಕೆ ಅಂತ ಪ್ರತಿಭಟನಾ ಶುರು ಮಾಡಿದ್ದು ಬರೋಬರಿ ಅದ ನೋಡ್ರಿ. ಈಗೀಗ ಬೆಂಗಳೂರೊಳಗ ನಮ್ ಕನ್ನಡ ಕೆಟ್ಟು ಕೆರಾ ಹಿಡ್ದದ...’
‘ಹೌದೌದು... ಮುಂಜಾನಿ ಕಿಡ್ಕಿಯಾಳಗೆ ಮುಖ ಇಟ್ಟರ ಸಾಕು.. ಸವಳಿಗಾಯ್, ಮೂನಂಗೀ, ಬದ್ದೀಗಾಯ್, ಹಾಲೂಗಡಾ ್ಡ, ಟಾಮಾಟೇ, ಮಾರುವವರ ಕನ್ನಡದಿಂದಲೇ ದಿನಾ ಆರಂಭ ಆಗ್ತದ ಹೌದಲ್ರಿ...? ’
‘ಇದರ ಮೂಲ ಹಾಲು ತಂದು ಕೊಡೋ ತಂಗವೇಲು, ಕನ್ನಡ ಪೇಪರ್ ತಂದು ಕೊಡೂ ಆದಿಕೇಶುವುಲು, ಕಿರಾಣಿ ಸಾಮಾನು ತಂದುಕೊಡು ನಂಬೂದ್ರಿ, ಇವರೆಲ್ಲರ ಕನ್ನಡ... ಕನ್ನಡ ಅಲ್ರೀ... ಕನಕಾಂಗಿ, ಅದು ಕಿಚ್ ಕಿಚ್ ಸದ್ದು. ಅರ್ಥಾತ್ ತಲೀ ಮ್ಯಾಲ ಹಾರಾಡೋ ರಣಹದ್ದುಗಳ ಘೋರ ಸಂಗೀತ’.
‘ಹಾಂ.. ನೀವು ಕಿಚ ಕಿಚ ಅಂದಕೂಡ್ಲೆ ಕನ್ನಡ ಸಿನಿಮಾ ನೆನಪಾತು ನೋಡ್ರಿ. ಈಗೀಗ ನಮ್ಮ ಕನ್ನಡ ಸಿನಿಮಾಗಳ ಹೆಸರು ಹ್ಯಾಂಗ ಇಡ್ಲಿಕ್ಕೆ ಸುರೂ ಮಾಡ್ಯಾರ ಅಂದ್ರ.... ಕನ್ನಡ ಭಾಷ್ಯಾ ಹೊಸ ಹೊಸ ಶಬ್ದಾನ ಹೊತ್ತು ತಾರ್ಲಿಕ್ಕ ಹತ್ಯಾರ... ’
ಕನಕಾಂಗಿ ಸಂಭ್ರಮದಿಂದ ಹೇಳಿದಾಗ ನನಗೆ ಸಿಟ್ಟು ತಡೆಯೋದಕ್ಕಾಗಲಿಲ್ಲ. ‘ಯಾವ ಹೆಸರ್ರಿ ಅವು? ಕಿಚ ಕಿಚ ಅನ್ನುದೂ ಒಂದು ಸಿನಿಮಾ ಹೆಸರೇನ್ರಿ? ಈಗಿನ ಸಿನಿಮಾ ಹೆಸರ ಕೇಳಿದರ ಪರಪರ ಮೈಪರಚ್ಕೋ ಬೇಕನಿಸ್ತದ.. ’
‘ಅದ್ಯಾಕರೀ ಸ್ಸರ್ರ...ಕಿಚ ಕಿಚ ಅನ್ನೂದು ಅಚ್ಚ ಕನ್ನಡದ ಹೆಸರು. ಲಾಕಪ್ ಡೆತ್, ಗೋಲೀಬಾರ್, ಲವ್ವೂ, ಮರ್ಡರ್ರೂ ಅಂತ ಈ ಮಂದಿ ಕನ್ನಡಾ ಸಿನಿಮಾ ಹೆಸರು ಇಡ್ತಾರ... ಅದಕ್ಕಿಂತ ಈ ಕಿಚ ಕಿಚ ಛಲೋ ಅಲ್ಲೇನ್ರಿ.....? ಎಂದು ನನಗೇ ಎದುರೇಟು ಹಾಕಿದಳು. ನನಗೆ ಅದೂ ಖರೇ ಅನಿಸಿತು. ಅರೇ! ಹೌದಲ್ಲ ಕನ್ನಡ ಸಿನಿಮಾಕ್ಕೆ ಇದೇ ಹೆಸರು ಇಡೂ ಮಂದಿನೇ ಇವತ್ತು ವಿಧಾನಸೌಧದ ಗೇಟಿಗೆ ಕೈ ಹಚ್ಕೊಂಡು ನಿಂತಾರಲ್ಲ ಎಂದು ಥಟ್ಟನೆ ಹೊಳೆಯಿತು.
ಬೆಳಿಗ್ಗೆ ತಳ್ಳೂಗಾಡಿಯಲ್ಲಿ ತರಕಾರಿಗೆ ರರಕಾರಿ ಎಂದು ಹೆಸರು ಬದಲಾಯಿಸಿ ಬಾಗಿಲ ಮುಂದೆ ಬರುವ ಅವನಿಗೂ, ಈಗ ಸಿನಿಮಾಗಳಿಗೆ ಬ್ಯಾರೇ ಭಾಷೆ ಹೆಸರು ಇಟ್ಟು, ಬ್ಯಾನರ್‌ನೊಂದಿಗೆ ಬರುವ ಈ ಜನರು ಬಗ್ಗೆಯೂ ಯೋಚಿಸುವ ಹಾಗಾಯಿತು. ಅಂದರೆ ಕನ್ನಡ ಕೆಡಿಸಿದವರು ಅವರೋ? ಇವರೋ? ಎಂದು ಕನಕಾಂಗಿಯ ಮುಂದೆ ಒಂದು ಪ್ರಶ್ನೆ ಇಟ್ಟೆ. ಆಕೆ ಯೋಚಿಸಿ ಹೇಳಿದಳು.
‘ಸ್ಸರ್ರ... ಇಬ್ಬರದೂ ಹೊಟ್ಟೇ ಪಾಡು ನೋಡ್ರಿ, ನೀವಂದಂಗ ಒಬ್ಬರು ತಳ್ಳೂ ಗಾಡೀ ಇಟಕೊಂಡು ಕನ್ನಡಾನ ಮಾರತಾರ. ವ್ಯತ್ಯಾಸ ಅಂದ್ರ ಅವ್ರು ಹೊರಗಿಂದ ಬಂದ ಅನ್ಯಭಾಷಿಗರು. ಇವ್ರೂ ಹುಟ್ಟ ಕನ್ನಡಿಗರು. ಹೌದಲ್ರೀ... ಸ್ಸರ್ರ...?’
ಕನಕಾಂಗಿಯ ಆ ನೇರವಾದ ವಿಚಾರದಿಂದ ತಕ್ಷಣ ನನಗೆ ಇನ್ನೊಂದು ವಿಚಾರ ಹೊಳೆಯಿತು.
‘ಕನಕಾಂಗಿ.... ಇವತ್ತೇನ ವಿಧಾನಸೌಧದ ಗೇಟು ಅಳ್ಳಾಡಿಸ್ಲಿಕ್ಕೆ ಹತ್ತಾರ ಈ ಚಿತ್ರ ಮಂದಿ.. ಇವರ ಗುರಿಯೇನೋ ಅಗದೀ ಛಲೋ ಅದ. ಆದ್ರ ಏನಪ್ಪಾ ಅಂದ್ರ.. ಕನ್ನಡಾಭಿಮಾನ ಅನ್ನೋದು ಹೋರಾಟಕ ಬಳಕೆ ಆಗ್ತದಷ್ಟೇ, ಅಮ್ಯಾಲ ಅದು ಹರದ ನೋಟು ಆಗ್ತದ. ಹೆಂಗಂದೀ...? ಮೂಲ ನೋಡಿದರ ಕನ್ನಡಾ ಸಿನಿಮಾ. ಒಳಗ ನೋಡಿದರ ತೆಲುಗು ನಿರ್ದೇಶಕ, ಮಲಯಾಳಂ ನಾಯಕಿ, ತಮಿಳು ಸಂಗೀತ ನಿರ್ದೇಶಕ.... ಹಿಂಗ ತಂತ್ರಜ್ಞರೆಲ್ಲಾ ಅನ್ಯಭಾಷಿಗರು. ಅಷ್ಟಕ್ಕ ನಿಂತಿಲ್ರಿ...! ಕತೀ ಬರ್ಯಾಂವ ಕೂಡ ಹೊರಗಿನಂವ. ಇವರೆಲ್ಲಾ ಕೂಡಿ ಮಾಡಿದ ಸಿನಿಮಾಕ ಕನ್ನಡದ ವಾಸನಿ ಎಲ್ಲಿ ಇರ್ತದ ? ಹೋರಾಟ ಗೆದ್ದರೂ ಈ ಒಳಗಿನ ಮಂದಿಗೇ ಲಾಭ, ಸೋತರೂ ಆದ ಮಂದೀಗೆ ಲಾಭ. ನನ್ನ ಮಾತು ಸುಳ್ಳೇನ್ರಿ ಮತ ್ತ?’
ನನ್ನ ಮಾತು ಕನಕಾಂಗಿಗೆ ಅತಿ ಅನಿಸಿರಬೇಕು.‘ ಸ್ಸರ್ರ...ಆ ಮಾತು ಮಾತಾಡೋಣು ಲಗು ಬರ್ರಿ. ಅಲ್ಲಿ ಸಿನಿಮಾ ಮಂದಿ ದಿಗಿಲು ಹುಟ್ಟಿಸೋ ಹಂಗ ಜಮಾಯಿಸ್ಯಾರ...’
ಕೂಡಲೇ ಪ್ರತಿಭಟನಾ ಸ್ಥಳದತ್ತಾ ಹೊರಟೆವು. ಅಲಲಲ... ಏನ್ ಜನಾ ... ಏನ್ ಜನಾ ಅಂತೀನಿ. ವಿಧಾನ ಸೌಧದ ಹಿಂದಿನ ಮಾರಿ ಕರೀತಲೀ ಮನಿಶಾರಿಂದ ತುಂಬಿಹೋಗಿತ್ತು. ಅಬಬಬ ಏನ್ ಪೊಲೀಸ್ರು ಅಂತೀರಿ.... ಬಾವುಟ ಹಿಡಿದ ಮಂದಿ .... ಕೋಲು ಹಿಡಿದ ಮಂದಿ, ಮೈಗೆ ಹಳದಿ- ಕೆಂಪು ಪಟ್ಟಿ ಅರವೀ ಸುತ್ಕೊಂಡ ಮಂದಿ .....ಛೇ ಛೇ ಛೇ .....ರೈತ ಮಂದೀನೂ ಅದಾರಲ್ರೀ....?
ಮೂಗಿನ ಮೇಲೆ ಕೈ ಇಟ್ಟುಕೊಂಡೆವು. ಕನಕಾಂಗಿ ಆ ಜನಸಾಗರದ ಫೋಟೋ ತೆಗೆಯಬೇಕೆಂದು ಕ್ಯಾಮರಾ ಹೊರಗೆ ತೆಗೆದಳು. ಅಷ್ಟೇ ... ಅಷ್ಟರಲ್ಲಿ ಸುರು ಆಯಿತು ನೋಡ್ರಿ..... ಗದ್ದಲಾ, ಜನ ಓಡಾಡಿದ್ರೂ ಎಲ್ಲೆಲ್ಲಿಗಂತ ಗೊತ್ತಿಲ್ಲ. ‘ಹರಹರ ಕನ್ನಡಾ’ ಎಂದು ಕೂಗಾಡಿದ್ರೂ , ಚೀರಾಡಿದ್ರೂ, ಯಾಕಂತ ಗೊತ್ತಿಲ್ಲ. ಹತ್ತಿರದಲ್ಲಿ ಕಚೇರಿ ಬಾಗಿಲುಗಳು ದಡಬಡ ಎಂದು ಮುಚ್ಚಿಕೊಂಡವು. ಗ್ಲಾಸುಗಳು ಕಿಟಕಿಗಳು ಪಟಪಟ ಅಂದವು. ಕಲ್ಲುಗಳು ತೂರಾಡಿದವು.
ಆಹಾ....! ಕನ್ನಡದ ಕಲ್ಲುಗಳು, ಚಪ್ಪಲಿಗಳು ರೆಕ್ಕೆಯಿಲ್ಲದೇ ಹಾರಾಡಿದವು.
ಗಾಬರಿಯಾದ ಕನಕಾಂಗಿ ಕ್ಯಾಮೆರಾವನ್ನು ಬ್ಯಾಗಿಗಿಳಿಸಿ ‘ಏನ್ರೀಸ್ಸರ್ರ.... ಇದು?’ ಎಂದು ನನ್ನ ಅಂಗಿಯ ಚುಂಗು ಹಿಡಿದಳು. ‘ಸುಮ್ನ ಇರ್ರೀ... ಇದು ಸಿನಿಮಾ ಅಲ್ಲ. ದಾಂಧಲೇ ಅದ. ಸಿನಿಮಾದೊಳಗಿನ ಕನ್ನಡಾ ಕಲ್ಲಾಗಿ ಕಾರು, ಬೈಕು ಮ್ಯಾಲ ಬೀಳ್ಲಿಕ್ ಹತ್ಯಾವ....ಓಡ್ರಿ ಲಗೂನ..... ’ ಅಂದೆ. ಮರುಕ್ಷಣವೇ ನಾವಿಬ್ಬರೂ ಅಲ್ಲಿಂದ ಜಾಗ ಖಾಲಿ ಮಾಡಿದ್ದೆವು.
‘ಕಾರ ಮ್ಯಾಲ ಕಲ್ಲು ಹೇರಿದರ....ಕನ್ನಡ ಬೆಳೀತದ ಏನ್ರಿ ?’ ಕನಕಾಂಗಿಯ ಈ ಪ್ರಶ್ನೆಗೆ ನಾನಂತೂ ಉತ್ತರ ಹೇಳುವ ಸ್ಥಿತಿಯಲ್ಲಿರಲಿಲ್ಲ. ಯಾಕಂದ್ರ... ಇದು ಕನ್ನಡದ ಪ್ರಶ್ನೆಯೂ ಹೌದು, ಸಿನಿಮಾ ಮಂದಿಯ ವ್ಯವಹಾರದ ಪ್ರಶ್ನೆಯೂ ಹೌದು. ಏನಾದರಾಗಲಿ ಕನ್ನಡ ಸಿನಿಮಾದೊಳಗ ಕನ್ನಡದ ವಾಸನೀ ಹುಟ್ಟಿಸೋ ಕನ್ನಡ ತಂತ್ರಜ್ಞರು, ಕನ್ನಡ ಬರಹಗಾರರು ಇರಬೇಕು ಎಂಬ ಮಾತುಗಳು ಹುಟ್ಟಿಕೊಂಡದ್ದು ಈ ಸಂದರ್ಭದ ಸತ್ಯವಾಗಿತ್ತು. ಇದು ನಮಗೂ ಸೈ.... ನಿಮಗೂ ಸೈ ....ಹೌದಲ್ರೀ ?











Click it and Unblock the Notifications