• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ನನ್ನ ಹೋರಾಟ ಎಂದೂ ಸಾಯದು’ : ಚಂಪಾ

By Staff
|
  • ಶಾಲಿನಿ ಹೂಲಿ

shalini.s@greynium.com

ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೀಗ ತೊಂಭತ್ತರ ಸಂಭ್ರಮ. ಮೈಸೂರು ಅರಸು ಶ್ರೀಕೃಷ್ಣರಾಜೇಂದ್ರ ಒಡೆಯರ್‌ ಸಾಹಿತ್ಯ ಪ್ರೀತಿಯ ಕಾರಣದಿಂದ ಜನ್ಮ ತಳೆದ ಪರಿಷತ್‌ ಇಂದು ನಾಡಿನಾದ್ಯಂತ ತನ್ನ ಕವಲುಗಳನ್ನು ಚಾಚಿಕೊಂಡಿದೆ. ರಾಜ್ಯದ 175 ತಾಲ್ಲೂಕಿನಲ್ಲಿ ಅದರ ಘಟಕಗಳಿದ್ದು ರಾಜ್ಯದ ಹೊರಗೂ ಅದು ಕಾರ್ಯವ್ಯಾಪ್ತಿಯನ್ನು ಪಡೆದಿದೆ. ಈ ಬಾರಿ ಪರಿಷತ್ತಿಗೆ ಅಧ್ಯಕ್ಷರಾಗಿ ಚುನಾಯಿತರಾಗಿ ಬಂದವರು ಧಾರವಾಡದ ಪ್ರೊ.ಚಂದ್ರಶೇಖರ್‌ ಪಾಟೀಲ್‌.

ಕಾವ್ಯ ಮಿತ್ರರಿಗೆ, ಸಾಹಿತಿಗಳಿಗೆ,ಭಾಷಾ ಹೋರಾಟಗಾರರಿಗೆ ಚಂಪಾ ಎಂದೇ ಖ್ಯಾತರಾದವರು. ತನ್ನ ದೃಢ ನಿಲುವು ಮೊನಚು ಮಾತುಗಳಿಗೆ ಹೆಸರಾದ ಚಂಪಾ ವ್ಯಂಗ್ಯದಲ್ಲಿಯೇ ಅರ್ಥ ಕಂಡವರು. ಗೋಕಾಕ ಚಳುವಳಿ ಸಂಚಾಲಕರಾಗಿ ಅನೇಕ ಜನಪರ ಹೋರಾಟದಲ್ಲಿ ಮುಂಚೂಣಿಯಲ್ಲಿದರು. ಕನ್ನಡ ಅಭಿವೃದ್ಧಿ ಪ್ರಾ-ಕಾರ ಅಧ್ಯಕ್ಷರೂ ಆಗಿದ್ದವರು. ಕನ್ನಡ ಭಾಷೆಗೆ ಕುತ್ತೂ ಬಂದಾಗಲೆಲ್ಲ ತಮ್ಮ ಸರಳ-ಧಾರವಾಡೀ ಭಾಷೆಯಲ್ಲಿ ಗುಡುಗುತ್ತಲೇ ಜನರಿಗೆ ಪಾಠ ಕಲಿಸಿದ ಸರಳ ವ್ಯಕ್ತಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ ಪ್ರಾಧ್ಯಪಕರಾಗಿ ನಿವೃತ್ತ ರಾಗಿದ್ದಾರೆ. ‘ಸಂಕ್ರಮಣ’ ಎಂಬ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿ ನಾಡಿನ ಅನೇಕ ಹೊಸ ಪ್ರತಿಭೆಗಳಿಗೆ ದಾರಿದೀಪವಾಗಿದ್ದಾರೆ.ಕಸಾಪದ ಅಧ್ಯಕ್ಷರಾದ ಇವರನ್ನು ಕಚೇರಿಯಲ್ಲಿ ಭೇಟಿ ಮಾಡಿದಾಗ ಅವರ ಯೋಜನೆಗಳ ಬಗ್ಗೆ ಇನ್ನಷ್ಟು ವಿವರ ತಿಳಿದೇವು.

  • ಮೊದಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿದ್ದ ನೀವು, ಈಗ ಕಸಾಪದ ಅಧ್ಯಕ್ಷರು. ಈ ಎರಡು ಅಧ್ಯಕ್ಷಗಿರಿಗಳ ನಡುವೆ ನೀವು ಕಂಡದ್ದೇನು?

ಮೊದಲನೆಯದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಗಿರಿಯನ್ನು ನೀಡಿದ್ದು ಸರ್ಕಾರ. ಅದು ಸರ್ಕಾರದ ನೇಮಕಾತಿ. ಅಲ್ಲಿ ನಾವು ಹೇಗೆ ಕೆಲಸಮಾಡಬೇಕು ಎಂದು ಸರ್ಕಾರವೇ ಸೂಚಿಸುತ್ತದೆ. ಆ ಮಿತಿಯಲ್ಲೇ ನಾವು ಕೆಲಸ ಮಾಡಬೇಕು. ಆದರೆ ಪರಿಷತ್ತಿನಲ್ಲಿ ಅಂತಹ ಪರಿಸ್ಥಿತಿ ಇಲ್ಲ. ನಾಡು ಕಟ್ಟುವಲ್ಲಿ ಪರಿಷತ್ತಿನ ಪಾತ್ರ ಹಿರಿದು.

  • ಹೋರಾಟ, ಬರಹ, ಭಾಷಣಗಳ ಮಧ್ಯೆ ಜೀವಂತಿಕೆಯನ್ನು ಉಳಿಸಿಕೊಂಡಿದ್ದ ನೀವು, ಪರಿಷತ್ತಿನ ಅಧ್ಯಕ್ಷರಾಗಿ ನಿಮ್ಮ ವ್ಯಕ್ತಿತ್ವವನ್ನು ಹೇಗೆ ಉಳಿಸಿಕೊಂಡಿದ್ದೀರಾ?

ನಾನಿನ್ನೂ ಹೋರಾಟದ ಹಾದಿಯಲ್ಲಿಯೇ ಸಾಗುತ್ತಿರುವೆ. ಯಾವುದೇ ಅಧ್ಯಕ್ಷಗಿರಿ ನನ್ನ ಹೋರಾಟವನ್ನು ಮತ್ತು ಧೋರಣೆಯನ್ನು ಹಿಮ್ಮೆಟಿಸಲು ಸಾಧ್ಯವಿಲ್ಲ. ಮೊನ್ನೆ ‘ಬೆಂಗಳೂರು ಹಬ್ಬ’ ಎಂಬ ಹೆಸರಲ್ಲಿ ನಾಡಿನ ಸಂಸ್ಕೃತಿಗೆ ವ್ಯತಿರಿಕ್ತವಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕನ್ನಡಿಗರಾದವರು ವಿರೋಧಿಸಲೇ ಬೇಕಾದಂಥ ಚಟುವಟಿಕೆಯದು. ಅಲ್ಲಿ ನಾನು ನನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದೇನೆ. ಕನ್ನಡಕ್ಕೆ, ಕನ್ನಡತನಕ್ಕೆ ಧಕ್ಕೆಯಾದ್ರೆ ನಾನು ಸುಮ್ಮನಿರುವುದಿಲ್ಲ...

  • ‘ಪುಸ್ತಕ ಸಂತೆ’ ಯ ಉದ್ದೇಶ ಓದುಗರನ್ನು ಸೃಷ್ಟಿಸುವುದೇ? ಅಥವಾ...

ಪುಸ್ತಕ ಸಂತೆ ಯೋಜನೆ ಬರೀ ಓದುಗರನ್ನು ಸೃಷ್ಟಿ ಮಾಡುವುದಕ್ಕಷ್ಟೇ ಸೀಮಿತವಾಗಿಲ್ಲ. ರಾಜ್ಯದಲ್ಲಿರುವ ಪುಸ್ತಕ ಪ್ರಕಾಶಕರ ಸಂಖ್ಯೆ ದೊಡ್ಡದು. ಗ್ರಂಥಾಲಯಗಳನ್ನೇ ನಂಬಿ ಪುಸ್ತಕ ಪ್ರಕಟಿಸಲು ಸಾಧ್ಯವಿಲ್ಲ. ಓದುಗ-ಪ್ರಕಾಶಕರ ನಡುವೆ ನೇರ ಸೇತುವೆ ಬೇಕಾಗಿದೆ. ಅವರಿಬ್ಬರಿಗೂ ಸರಳ ಮತ್ತು ಲಾಭದಾಯಕ ಸಂಬಂಧ ಕಲ್ಪಿಸುವುದು ಪರಿಷತ್ತಿನ ಉದ್ದೇಶ. ಪರಿಷತ್‌ ಈ ಸಂತೆಗೆ ಉಚಿತ ಸ್ಥಳ ನೀಡಿದೆ. ಈ ಯೋಜನೆಗೆ ಫಲಕಾರಿಯಾದ್ರೆ, ಮುಂದಿನ ದಿನಗಳಲ್ಲಿ ತಾಲೂಕು ಕೇಂದ್ರಗಳಿಗೂ ಪುಸ್ತಕ ಸಂತೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ.

  • ನಿಮ್ಮ ಅಧಿಕಾರವಧಿಯಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ರಂಗು ತರುವ ಪ್ರಯತ್ನ ಏನಾದರೂ ಉಂಟಾ?

ಸಮ್ಮೇಳನದ ರೂಪುರೇಷೆಗಳಲ್ಲಿ ಬದಲಾವಣೆ ತರುವ ಯೋಚನೆ ಇದೆ. ಆದರೆ ಸಮಗ್ರಬದಲಾವಣೆಯ ಅಗತ್ಯವಿಲ್ಲ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತನ್ನದೇ ಆದ ಘನತೆಯಿದೆ. ಕನ್ನಡಿಗರ ನಿರೀಕ್ಷೆಗಳಿಗೆ ಸ್ಪಂದಿಸುವ ಪ್ರಯತ್ನ ನನ್ನದು.

ಈ ಬಾರಿ ಸಮ್ಮೇಳನಕ್ಕೆ ಸರ್ಕಾರ ಹಣದ ಕೊರತೆಯನ್ನು ಮಾಡಿಲ್ಲ. 50ಲಕ್ಷ ರೂಗಳನ್ನು ಬಿಡುಗಡೆ ಮಾಡಿದೆ. ಸರ್ಕಾರ ಮತ್ತು ಜನರ ಸಹಕಾರ ಒಟ್ಟಿಗೆ ಇರುವಾಗ ಸಮ್ಮೇಳನನ್ನು ಅಚ್ಚುಕಟ್ಟಾಗಿ ಮಾಡಬೇಕೆಂಬುದೇ ನನ್ನ ಹಂಬಲ. ಪರಿಷತ್ತು ಉತ್ತಮ ಕೃತಿಗಳನ್ನು ಪ್ರಕಟಿಸುವ ಯೋಜನೆ ರೂಪಿಸಿದೆ. ಪ್ರತಿಭಾವಂತರ ಪಿಎಚ್‌ಡಿ ಪ್ರಬಂಧಗಳನ್ನು ಆಯ್ಕೆ ಮಾಡಿ, ಅದರ ಸಂಕ್ಷಿಪ್ತ ರೂಪವನ್ನು ಕಡಿಮೆ ಬೆಲೆಗೆ ಓದುಗರಿಗೆ ತಲುಪಿಸುವ ಉದ್ದೇಶವನ್ನು ಪರಿಷತ್ತು ಹೊಂದಿದೆ.

  • ಕನ್ನಡ ಸಾಹಿತ್ಯ ಪರಿಷತ್‌ ಕಟ್ಟಡದ ನವೀಕರಣಕ್ಕೆ ನಿಮ್ಮ ಕಾಲದಲ್ಲಿ ಜೀವ ಸಿಗಬಹುದೇ?

ಮೊದಲು ಸಾಹಿತ್ಯ ಸಮ್ಮೇಳನ ಮುಗಿಯಲಿ. ಅದು ಮುಗಿದ ನಂತರ ಪರಿಷತ್ತಿನ ಕಟ್ಟಡದ ಕೆಲಸವನ್ನು ಕೈಗೆತ್ತಿಕೊಳ್ಳುತ್ತೇನೆ.

  • ಯುವಕರಿಗೆ, ವಿಶೇಷವಾಗಿ ಯುವ ಪತ್ರಕರ್ತರಿಗೆ ನಿಮ್ಮ ಕಿವಿ ಮಾತು?

ಹ್ಹಾ...ಹ್ಹಾ...ಕಿವಿಮಾತು ಏನು ಇಲ್ಲ, ನನ್ನದು ಎಲ್ಲಾ ಮುಕ್ತ ಮಾತು. ಸತ್ಯಾನ್ವೇಷಣೆಯ ಜೊತೆಗೆ ಸಾಹಸ ಪ್ರವೃತ್ತಿಯನ್ನು ಪತ್ರಕರ್ತರು ಮೈಗೂಡಿಸಿಕೊಳ್ಳಬೇಕು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more