• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾಷಾ ನೀತಿ : ಒಂದು ಚಿಂತನೆ

By Staff
|
  • ಆನಂದ್‌ ಜಿ., ಬನವಾಸಿ ಬಳಗ, ಬೆಂಗಳೂರು.

anandgj@yahoo.com

ನಮ್ಮ ಸಂವಿಧಾನ ಮತ್ತು ಇತರ ಸರ್ಕಾರಿ ದಾಖಲೆಗಳು, ರಾಷ್ಟ್ರ ಭಾಷೆ, ಅಧಿಕೃತ ಭಾಷೆ ಎಂಬುದರ ಬಗ್ಗೆ, ಇವುಗಳು ಸಂವಿಧಾನ ಮಾನ್ಯತೆ ನೀಡಿರುವ ಸೂಚಿತ ಪಟ್ಟಿಯಲ್ಲಿರುವ ಇತರ ಪ್ರಾದೇಶಿಕ ಭಾಷೆಗಳಿಗಿಂತ ಹೇಗೆ ಭಿನ್ನ ಎಂಬುದರ ಬಗ್ಗೆ ಉದ್ದೇಶಪೂರ್ವಕವಾಗಿ ಅಸ್ಪಷ್ಟ ನಿಲುವು ತೋರಿದಂತೆ ಗೋಚರಿಸುತ್ತದೆ.

ಸಂವಿಧಾನದ ಪ್ರಕಾರ, ಪ್ರತಿಯೊಂದು ರಾಜ್ಯಕ್ಕೂ ತನ್ನ ಆಡಳಿತ ಭಾಷೆಯಾಗಿ ಮತ್ತು ಶಿಕ್ಷಣ ಮಾಧ್ಯಮವಾಗಿ ಸೂಚಿತ ಪಟ್ಟಿಯಲ್ಲಿನ ಯಾವುದೇ ಭಾಷೆಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವಿದೆ. ಪ್ರತಿಯೊಬ್ಬ ಭಾರತೀಯ ಪ್ರಜೆಗೂ ತನ್ನ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವ ಹಕ್ಕಿದೆ ಎಂದು ನಮ್ಮ ಸಂವಿಧಾನ ಉಲ್ಲೇಖಿಸಿದ್ದರೂ, ಈ ಆಶಯಗಳನ್ನು ಹೇಗೆ ಸಾಧಿಸಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

Anand G.1947ಕ್ಕಿಂತ ಮೊದಲು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌, ರಾಜ್ಯಗಳನ್ನು ಭಾಷಾ ಆಧಾರದ ಮೇಲೆ ಪುನರ್‌ ರಚಿಸಲು ತಾನು ಬದ್ಧವಾಗಿದೆ ಎಂದು ಘೋಷಿಸಿತ್ತು. ಸ್ವಾತಂತ್ರ್ಯದ ನಂತರ ತಜ್ಞರ ಸಮಿತಿಯನ್ನು ರಚಿಸಿ ಈ ಬಗ್ಗೆ ವರದಿಯೊಂದನ್ನು ಪಡೆಯಲಾಯಿತು.

ಸುದೀರ್ಘವಾದ ಅಧ್ಯಯನದ ನಂತರ ಈ ಸಮಿತಿ 1953ರಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಆ ವರದಿಯಲ್ಲಿ ಭಾಷೆಯೊಂದೇ ರಾಜ್ಯ ವಿಂಗಡನೆಗೆ ಮೂಲವೆಂದು ಹೇಳದಿದ್ದರೂ, ಭಾಷೆಯೇ ಪ್ರಮುಖವಾದ ಆಧಾರವೆಂದು ತಿಳಿಸಿತ್ತು. ಜೊತೆಗೆ ಭೌಗೊಳಿಕ ಮತ್ತು ಆರ್ಥಿಕ ಆಯಾಮಗಳನ್ನೂ ಪರಿಗಣಿಸುವಂತೆ ಸೂಚಿಸಿತ್ತು. 1955ರಲ್ಲಿ ಈ ವರದಿಯನ್ನು ಮಂಡಿಸಲಾಯ್ತು.

1956ರಲ್ಲಿ ಭಾಷಾವಾರು ರಾಜ್ಯಗಳಾಗಿ, ರಾಜ್ಯಗಳ ಪುನರ್ರಚನೆಯಾಯ್ತುು. 1956ರಲ್ಲಿ ಊರ್ಜಿತವಾದ, 60ರ ದಶಕದಲ್ಲಿ ಸಾಕಷ್ಟುಬಾರಿ ಪರಿಷ್ಕರಣೆಗೊಳಗಾದ ಈ ಕಾಯಿದೆಯು ಇದುವರೆಗೂ ಭಾಷಾ ಸಂಬಂಧಿ ಸಮಸ್ಯೆ, ಗೊಂದಲಗಳನ್ನು ಪರಿಹರಿಸಲು ಯಶಸ್ವಿಯಾಗಿಲ್ಲ.

ಸಂವಿಧಾನದಲ್ಲಿ 1965ರವರೆಗೆ ಹಿಂದಿ ಮತ್ತು ಮತ್ತು ಇಂಗ್ಲಿಷ್‌ಗಳೆರಡನ್ನೂ ಕೇಂದ್ರ ಸರ್ಕಾರದೊಂದಿಗಿನ ಅಧಿಕೃತ ಸಂಪರ್ಕ ಭಾಷೆಗಳೆಂದು ಉಲ್ಲೇಖಿಸಲಾಗಿದೆ. ಇದರ ಆಧಾರದ ಮೇಲೆ, ‘ಅಧಿಕೃತ ಭಾಷಾ ಕಾಯ್ದೆ -1963’ ರೂಪಿತವಾಯ್ತು.

ಇದರ ಅನ್ವಯ, 1965ರ ನಂತರ ಹಿಂದಿಯನ್ನು ಭಾರತದ ಅಧಿಕೃತ ಸಂಪರ್ಕ ಭಾಷೆಯನ್ನಾಗಿ ಘೋಷಿಸಲಾಯ್ತು. ಜೊತೆಯಲ್ಲೆ ಇಂಗ್ಲಿಷನ್ನು ಕೂಡ ಸಹಯೋಗಿ/ಹೆಚ್ಚುವರಿ ಅಧಿಕೃತ ಸಂಪರ್ಕ ಭಾಷೆ ಎಂದು ಘೋಷಿಸಲಾಯಿತು.

ಹತ್ತು ವರ್ಷಗಳ ನಂತರ ಒಂದು ಸಂಸದೀಯ ಸಮಿತಿ, ಹಿಂದಿಯೇತರ ರಾಜ್ಯಗಳ ಜನತೆ, ಹಿಂದಿ ಕಲಿಕೆಯಲ್ಲಿ ಸಾಧಿಸಿರುವ ಪ್ರಗತಿಯನ್ನು ಅಭ್ಯಸಿಸಿ, ಇಂಗ್ಲಿಷನ್ನು ಮುಂದುವರಿಸಬೇಕೇ? ಅಥವಾ ಬೇಡವೇ? ಎಂಬ ಬಗ್ಗೆ ವರದಿ ಸಲ್ಲಿಸಲು ಸೂಚಿಸಿತು.

1964ರಲ್ಲಿ ಅಂದಿನ ಕಾಂಗ್ರೆಸ್‌ ಸರ್ಕಾರದ ಕೇಂದ್ರ ಗೃಹ ಸಚಿವಾಲಯ, ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಕೇಂದ್ರ ಮಂತ್ರಿಗಳಲ್ಲಿ - ಹಿಂದಿಯನ್ನು ಅನುಷ್ಠಾನಕ್ಕೆ ತರುವ ದಿಸೆಯಲ್ಲಿ ಆಯಾ ರಾಜ್ಯಗಳಲ್ಲಿ ಆಗಿರುವ ಪ್ರಗತಿ, ಜೊತೆಗೆ ಮುಂದಿನ ಹತ್ತು ವರ್ಷಗಳಲ್ಲಿ ಹಿಂದಿ ಅನುಷ್ಠಾನಗೊಳಿಸಲು ರೂಪಿಸಿರುವ ಕಾರ್ಯಯೋಜನೆಗಳ ಬಗ್ಗೆ ವಿವರಿಸಲು ವಿನಂತಿಸಿಕೊಂಡಿತು.

ಈ ಎಲ್ಲ ಬೆಳವಣಿಗೆಗಳು ಹಿಂದಿಯೇತರ ರಾಜ್ಯಗಳ ಜನತೆಯಲ್ಲಿ, ತಮ್ಮ ಮೇಲೆ ನಡೆದಿರುವ ಭಾಷಾ ಆಕ್ರಮಣದ ಅರಿವಿನ ಕಿಡಿ ಹೊತ್ತಿಸಿತು. ಈ ಕಾಯ್ದೆಯ ಮೂಲಕ ಹಿಂದಿಯೇತರ ಜನಗಳ ಮೇಲೆ ಬಲವಂತವಾಗಿ ಹಿಂದಿ ಹೇರಿಕೆ ಮಾಡಿದಂತೆ ಆಗುವುದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವೇ ನಡೆಯಲಿಲ್ಲ.

ಈ ಬೆಳವಣಿಗೆಗಳು ಹಿಂದಿಯೇತರ ರಾಜ್ಯಗಳಲ್ಲಿ ಬಲವಾದ ಹಿಂದಿ ವಿರೋಧಿ ಅಲೆಗೆ ಕಾರಣವಾಯಿತು. ತಮಿಳುನಾಡಿನಲ್ಲಂತೂ ಇದು 1966ರ ಅಂತ್ಯ ಭಾಗ ಮತ್ತು 1965ರ ಆದಿ ಭಾಗದಲ್ಲಿ ತೀವ್ರವಾದ ಜನಾಂದೋಲನ, ದ್ರಾವಿಡ ಚಳವಳಿ ಮತ್ತು ಕ್ಷೋಭೆಗೆ ಕಾರಣವಾಯಿತು. ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರ್ಕಾರ ಈ ಪ್ರತಿರೋಧದ ಬಿಸಿಗೆ ಕರಗಿ ತನ್ನ ನಿಲುವನ್ನು ಬದಲಾಯಿಸಬೇಕಾಯಿತು. ಅದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರುಗಳು ಮತ್ತು ಕಾಂಗ್ರೆಸ್‌ ಪದಾಧಿಕಾರಿಗಳ ಸಭೆಯನ್ನು ಕರೆಯಿತು.

ನವದೆಹಲಿಯಲ್ಲಿ ಜೂನ್‌ 1965ರಲ್ಲಿ ನಡೆದ ಈ ಸಭೆಯಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಎಲ್ಲ ರಾಜ್ಯಗಳು ಒಪ್ಪುವವರೆಗೂ ಹಿಂದಿಯನ್ನು ರಾಷ್ಟ್ರದ ಏಕೈಕ ಅಧಿಕೃತ ಸಂಪರ್ಕ ಭಾಷೆಯಾಗಿ ಅಂಗೀಕರಿಸಲಾಗದು ಎಂಬ ಆಶ್ವಾಸನೆಯನ್ನು ಹಿಂದಿಯೇತರ ರಾಜ್ಯಗಳಿಗೆ ನೀಡಲಾಯಿತು.

ಯಾವ ಒಂದು ರಾಜ್ಯವು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೂ ಹಿಂದಿ ಏಕೈಕ ಅಧಿಕೃತ ಸಂಪರ್ಕ ಭಾಷೆ ಆಗಲಾರದು - ಎಂಬುದು ಆ ಸಭೆಯ ನಿಲುವಾಯಿತು. ಇದರ ಜೊತೆಯಲ್ಲಿಯೇ ಹೊರಬಿದ್ದ ಮತ್ತೊಂದು ಮಹತ್ವದ ತೀರ್ಮಾನವೆಂದರೆ, ಕೇಂದ್ರ ಸರ್ಕಾರಿ ನೌಕರಿಗೆ ನಡೆಯುವ ಪ್ರವೇಶ ಪರೀಕ್ಷೆಗಳನ್ನು, ಅಭ್ಯರ್ಥಿಗಳು ಸಂವಿಧಾನದಲ್ಲಿ ಸೂಚಿತ ಪಟ್ಟಿಯಲ್ಲಿನ ಯಾವ ಭಾಷೆಯಲ್ಲಿ ಬೇಕಾದರೂ ತೆಗೆದುಕೊಳ್ಳಬಹುದು ಎನ್ನುವುದು.

ಇದರಿಂದ ನಮಗೆ ತಿಳಿಯುವುದೇನೆಂದರೆ, ಪ್ರತಿರೋಧವಿಲ್ಲದಿದ್ದರೆ, ಹಿಂದಿ ನಮ್ಮೆಲ್ಲರನ್ನೂ ನುಂಗಿ ಹಾಕುತ್ತದೆ ಎನ್ನುವುದು. ನಮಗೆ - ಯಾರಿಗೂ ಸಮಸ್ಯೆಯುಂಟು ಮಾಡದ, ರಾಷ್ಟ್ರದ ಏಕತೆಗೆ ಮಾರಕವಾಗದ, ಗೊಂದಲಗಳಿಲ್ಲದ, ಎಲ್ಲರಿಗೂ ಅನ್ವಯವಾಗುವ ಭಾಷಾನೀತಿಯ ಅಗತ್ಯವಿದೆ ಎನ್ನುವುದು ಅರಿವಾಗುತ್ತದೆ.

ಇಂತಹ ಭಾಷಾ ನೀತಿ ಕೇವಲ ಆಡಳಿತಕ್ಕೆ ಮಾತ್ರ ಸಂಬಂಧಿಸಿರದೆ ಒಂದು ರಾಜ್ಯದ ಜನತೆಯ ಹಕ್ಕುಗಳು ಮತ್ತು ಕರ್ತವ್ಯಗಳು, ಆ ರಾಜ್ಯದ ಪರಭಾಷಿಕರ ಹಕ್ಕುಗಳು ಮತ್ತು ಕರ್ತವ್ಯಗಳು, ವಲಸೆ ನೀತಿ, ಶಿಕ್ಷಣ ನೀತಿ . . . ಇತ್ಯಾದಿಗಳನ್ನೆಲ್ಲ ಸಮಗ್ರವಾಗಿ ಒಳಗೊಂಡಿರಬೇಕಾದ ಅಗತ್ಯವಿದೆ.

(ಆಧಾರ : ಕೇಂದ್ರ ಸರ್ಕಾರದ ಡಿಪಾರ್ಟ್‌ಮೆಂಟ್‌ ಆಫ್‌ ಲಿಂಗ್ವಿಸ್ಟಿಕ್ಸ್‌ನ ಪ್ರಕಟಿತ ಲೇಖನ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X