• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಪ್ರಥಮ ಹಿಂದಿ ಯಕ್ಷಗಾನ ವೈಭವ!

By Staff
|
  • ಬಾಲಕೃಷ್ಣ ನಾಯ್ಕ್‌ು.ಡಿ

balakrishnanaik@yahoo.com

ನವದೆಹಲಿ : ಯಕ್ಷಗಾನವು ಕರಾವಳಿ ಜಿಲ್ಲೆಗಳ ಪರಿಧಿಯನ್ನು ಮೀರಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಹರಡಬೇಕು. ಜತೆಗೆ ಜಗತ್ತಿನ ವಿವಿಧ ಭಾಗಗಳಲ್ಲಿ, ಭಾಷೆಗಳಲ್ಲಿ ಪ್ರಯೋಗಗಳನ್ನು ನಡೆಸಬೇಕು ಎಂದು ಖ್ಯಾತ ಯಕ್ಷಗಾನ ವಿದ್ವಾಂಸ, ಕಲಾವಿದ ಡಾ. ಎಂ. ಪ್ರಭಾಕರ ಜೋಷಿ ಅವರು ಹೇಳಿದರು.

ಅವರು ದೆಹಲಿ ಕರ್ನಾಟಕ ಸಂಘವು ಮಂಗಳೂರಿನ ಯಕ್ಷಮಂಜೂಷದ ಜತೆಗೆ ದೆಹಲಿ ಕರ್ನಾಟಕ ಸಂಘದಲ್ಲಿ ಅಕ್ಟೋಬರ್‌ ಎಂಟರಂದು ನಡೆದ ರಾಷ್ಟ್ರೀಯ ತೆಂಕಣ ಯಕ್ಷೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಭಾಷಣಮಾಡುತ್ತಿದ್ದರು.

‘ತೆಂಕುತಿಟ್ಟಿನ ಯಕ್ಷಗಾನವನ್ನು ಪ್ರಪ್ರಥಮ ಬಾರಿಗೆ ಹಿಂದಿಯಲ್ಲಿ ಪ್ರಸ್ತುತ ಪಡಿಸುವುದು ಯಕ್ಷಗಾನದ ಇತಿಹಾಸದಲ್ಲಿ ಒಂದು ಮುನ್ನಡೆಯ ಮಹತ್ತರ ಹೆಜ್ಜೆ. ಇದರಲ್ಲಿ ಭಾಗಿಯಾಗಲು ನಾನು ಅದೃಷ್ಟವಂತ’ ಎಂದು ಡಾ. ಜೋಷಿ ಅವರು ತಿಳಿಸಿದರು.

ಈಗ ನಡೆಯುತ್ತಿರುವ ಪ್ರಯತ್ನ ಪ್ರಥಮ ಹೆಜ್ಜೆ. ಹೋಗಲಿರುವ ದಾರಿ ಬಹಳ ದೀರ್ಘವಿದೆ. ಇನ್ನೂ ಉತ್ತಮ ತಂಡಗಳು ಬಂದು ಯಕ್ಷಗಾನವನ್ನು ಹಿಂದಿಯಲ್ಲಿ ಪ್ರದರ್ಶಿಸಬೇಕು ಎಂದು ಅವರು ಹೇಳಿದರು. ಕಲೆಗೆ ಈಗ ಉತ್ತಮ ಪ್ರೋತ್ಸಾಹ ಹಾಗೂ ಬೆಂಬಲ ಇದೆ. ಯಕ್ಷಗಾನವು ಎಲ್ಲಾ ದಿಕ್ಕುಗಳತ್ತ ಪಸರಿಸುತ್ತಿದೆ. ಯಕ್ಷಗಾನದಲ್ಲಿ ಸುಧಾರಣೆ ಅಗತ್ಯ. ವೇಷಭೂಷಣ, ಸಂಗೀತಗಳಲ್ಲಿ ಬದಲಾವಣೆ ತರಬೇಕು. ಕೆಲವು ವಿಚಾರಗಳಲ್ಲಿ ಮುಂದೆ ನೋಡಬೇಕು ಇನ್ನು ಕೆಲವು ವಿಚಾರಗಳಲ್ಲಿ ಹಿಂದೆ ನೋಡಿ ಕಲಿಯಬೇಕು ಎಂದು ಅವರು ಯಕ್ಷಗಾನದಲ್ಲಿ ಸಂಯಮದ ಸುಧಾರಣೆಗೆ ಕರೆ ನೀಡಿದರು.

ಆಧುನಿಕ ಪ್ರೇಕ್ಷಕರಿಗನುಗುಣವಾಗಿ ಯಕ್ಷಗಾನದ ಪ್ರದರ್ಶನ ಸಮಯವನ್ನು ಕಿರಿದುಗೊಳಿಸಬೇಕು. ಕಲಾವಿದರಿಗೆ ಅವಕಾಶಗಳು ಲಭಿಸುತ್ತಿವೆ. ಜತೆಗೆ ಯಕ್ಷಗಾನ ರಂಗದಲ್ಲಿ ಹೊಸ ಸಂಯೋಜಕರ ಅವಶ್ಯಕತೆ ಇದೆ ಎಂದೂ ಜೋಷಿ ಅವರು ಹೇಳಿದರು.

ರಾಷ್ಟ್ರೀಯ ತೆಂಕಣ ಯಕ್ಷೋತ್ಸವದ ಉದ್ಘಾಟನೆಯನ್ನು ನ್ಯಾಷನಲ್‌ ಮ್ಯೂಸಿಯಂ ಸಂಸ್ಥೆಯ ಮುಖ್ಯಸ್ಥ, ಇಂದಿರಾಗಾಂಧಿ ನ್ಯಾಷನಲ್‌ ಸೆಂಟರ್‌ ಆಫ್‌ ಆರ್ಟ್ಸ್‌ನ ಮೆಂಬರ್‌ ಸೆಕ್ರೆಟರಿ, ವಿದ್ವಾಂಸ ಕಲ್ಯಾಣ್‌ ಕುಮಾರ್‌ ಚಕ್ರವರ್ತಿ ಅವರು ನೆರವೇರಿಸಿದರು.

ಅವರು ಈ ಸಂದರ್ಭದಲ್ಲಿ ಮಾತಾಡುತ್ತಾ ಯಕ್ಷಗಾನವನ್ನು ಭಾರತದ ಇತರ ಕಲೆಗಳ ಜತೆಗೆ ಹೋಲಿಸಿ ಅಧ್ಯಯನ ಮಾಡುವ ಪ್ರೌಢಿಮೆಯನ್ನು ಸಂಶೋಧಕರು ರೂಡಿಸಿಕೊಳ್ಳಬೇಕೆಂದರು. ಕನ್ನಡದ ಭಕ್ತಿ ಸಾಹಿತ್ಯಗಳಾದ ವಚನ ಹಾಗೂ ದಾಸ ಸಾಹಿತ್ಯದ ಜತೆಗೆ ಯಕ್ಷಗಾನವನ್ನು ಅಧ್ಯಯನ ಮಾಡಬೇಕೆಂದೂ ಅವರು ಹೇಳಿದರು.

ಯಕ್ಷಗಾನ ಜನರ ಹತ್ತಿರವಿರುವ ಕಲೆ, ಅದನ್ನು ಹೆಚ್ಚು ಶಾಸ್ತ್ರೀಯಗೊಳಿಸಿ, ಹೆಚ್ಚು ನಿಯಮಗಳನ್ನು ಅಳವಡಿಸಿ ಜನರಿಂದ ದೂರಮಾಡಬಾರದೆಂದು ಯಕ್ಷಗಾನದ ಪ್ರಯೋಗಶೀಲರಿಗೆ ಕಿವಿಮಾತು ಕೂಡ ಹೇಳಿದರು.

ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಸ್ವಾಗತ ಭಾಷಣಮಾಡುತ್ತ , ಯಕ್ಷಗಾನ ಜಗತ್ತಿನ ಅತ್ಯಂತ ಜೀವಂತ ಕಲೆ ಎಂದು ಹೇಳಿದರು. ಮೂವತ್ತಕ್ಕೂ ಮಿಕ್ಕಿ ವೃತ್ತಿ ತಂಡಗಳು ಇನ್ನೂರರಷ್ಟು ಹವ್ಯಾಸಿ ತಂಡಗಳು ಯಕ್ಷಗಾನವನ್ನು ಆಡುತ್ತವೆ. ವೃತ್ತಿ ತಂಡಗಳು ನವಂಬರ್‌ ನಿಂದ ಮೇ ತಿಂಗಳವರೆಗೆ ಸುಮಾರು 180 ರಿಂದ 200 ರಾತ್ರಿಪೂರ್ತಿ ಪ್ರದರ್ಶನಗಳನ್ನು ನೀಡುತ್ತವೆ ಎಂದರು.

ಸಾವಿರಕ್ಕೂ ಮಿಕ್ಕಿ ವೃತ್ತಿ ಕಲಾವಿದರು, ಅದಕ್ಕಿಂತ ದೊಡ್ಡ ಪ್ರಮಾಣದ ಹವ್ಯಾಸಿ ಕಲಾವಿದರು, ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಮಳೆಗಾಲದ ಪ್ರದರ್ಶನಗಳು ಇವೆಲ್ಲವನ್ನೂ ಸೇರಿಸಿದರೆ ವರ್ಷಕ್ಕೆ ಹನ್ನೆರಡು ಸಾವಿರಕ್ಕಿಂತಲೂ ಅಧಿಕ ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿವೆ. ಇಂತಹ ಜೀವಂತ ಕಲೆ ಜಗತ್ತಿನಲ್ಲಿ ಬೇರೊಂದಿಲ್ಲ ಎಂದು ಡಾ. ಬಿಳಿಮಲೆ ಅವರು ತಿಳಿಸಿದರು.

ದೆಹಲಿ ಕರ್ನಾಟಕ ಸಂಘದ ಆಶ್ರಯದಲ್ಲಿ ವೃತ್ತಿ ಮೇಳದ ಹಿರಿಯ ಭಾಗವತ ಹಾಗೂ ಚೆಂಡೆವಾದಕರನ್ನೊಳಗೊಂಡ ಯಕ್ಷಗಾನತಂಡವನ್ನು ಮಂಗಳೂರಿನಿಂದ ತರಿಸಿ ಯಕ್ಷಗಾನವನ್ನು ಹಿಂದಿಯಲ್ಲಿ ಪ್ರಸ್ತುತಪಡಿಸಲು ಸಂಘದ ಪ್ರಧಾನ ಕಾರ್ಯದರ್ಶಿ ಸರವು ಕೃಷ್ಣ ಭಟ್‌ ಅವರು ಬಹಳ ಪರಿಶ್ರಮದಿಂದ ಏಕವ್ಯಕ್ತಿಯಾಗಿ ಪ್ರಯತ್ನ ಪಟ್ಟಿದ್ದಾರೆ ಎಂದು ಡಾ. ಬಿಳಿಮಲೆ ಅವರು ತಿಳಿಸಿದರು.

ಯಕ್ಷಮಂಜೂಷದ ನಿರ್ದೇಶಕಿ ಶ್ರೀಮತಿ ವಿದ್ಯಾ ಕೋಳ್ಯೂರು ಅವರು ಗಂಡುಕಲೆಯಾದ ಯಕ್ಷಗಾನದಲ್ಲಿ ಸ್ತ್ರೀಯೊಬ್ಬಳು ಗಂಡಸರಿಗೆ ಕಡಿಮೆಯಿಲ್ಲದಂತೆ ಕಲೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಬಿಳಿಮಲೆ ಅವರು ಹೇಳಿದರು. ವಿದ್ಯಾ ಅವರು ನಿರ್ದೇಶಕಿಯಾಗಿ, ಸಂಘಟಕಿಯಾಗಿ, ಸಂಶೋಧಕರಾಗಿ ಹಾಗು ಹೊಸ ಪ್ರಯೋಗಗಳ ಹರಿಕಾರಳಾಗಿ ಯಕ್ಷಗಾನರಂಗದಲ್ಲಿ ಕೆಲಸ ಮಾಡುವ ಇಂದಿನ ಜನಾಂಗದ ಕೆಲವೇ ವ್ಯಕ್ತಿಗಳಲ್ಲೊಬ್ಬರು ಎಂದರು.

ರಾಷ್ಟ್ರೀಯ ತೆಂಕಣ ಯಕ್ಷೋತ್ಸವದ ಸಂಘಟಕ ಹಾಗೂ ಸಂಯೋಜಕ, ದೆಹಲಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಸರವು ಕೃಷ್ಣ ಭಟ್‌ ಅವರು ಮಾತನಾಡಿ ನೃತ್ಯ, ಅಭಿನಯ, ಸಂಭಾಷಣೆ, ಸಂಗೀತ, ಪಕ್ಕವಾದ್ಯ, ಚಿತ್ರ, ವೇಷಭೂಷಣ ಹೀಗೆ ಎಲ್ಲಾ ಕಲಾ ಪ್ರಕಾರಗಳನ್ನು ಒಳಗೊಂಡ ಕರ್ನಾಟಕದ ಶ್ರೀಮಂತ ಕಲೆ ಯಕ್ಷಗಾನ ಎಂದರು. ಇಂತಹ ಕಲೆಯ ಬೆಳವಣಿಗೆಯಾಗಬೇಕಾದರೆ ಈ ಕಲೆ ಕರ್ನಾಟಕದ ಹೊರಗಿನ ರಾಜ್ಯಗಳಲ್ಲಿ ಬೇರೂರುವುದು ಅಗತ್ಯ. ಅದಕ್ಕಾಗಿ ಇದೀಗ ಒಂದು ಮೊದಲ ಪ್ರಯತ್ನ ನಡೆಯುತ್ತಿದೆ ಎಂದರು.

ಮಂಗಳೂರಿನ ವಿದ್ಯಾ ಕೋಳ್ಯೂರು ಅವರ ನೇತೃತ್ವದಲ್ಲಿ ಯಕ್ಷಮಂಜೂಷ ರಾಷ್ಟ್ರೀಯ ತೆಂಕಣ ಯಕ್ಷೋತ್ಸವದಲ್ಲಿ ಹಿಂದಿ ಯಕ್ಷಗಾನ ಪ್ರಸ್ತುತ ಪಡಿಸುತ್ತಿದೆ. ಭಾಗವತಿಕೆಯೂ ಹಿಂದಿಯಲ್ಲಿಯೇ, ಅರ್ಥವೂ ಹಿಂದಿಯಲ್ಲಿಯೇ. ಕನ್ನಡೇತರರಿಗೆ ಯಕ್ಷಗಾನದ ಸವಿಯನ್ನುಣಿಸಲು ದೆಹಲಿಯ ವಿವಿಧ ಕಡೆಗಳಲ್ಲಿ ಹತ್ತಕ್ಕೂ ಹೆಚ್ಚಿನ ಯಕ್ಷಗಾನ ಪ್ರದರ್ಶನಗಳು ನಡೆಯಲಿವೆ. ಮಾತ್ರವಲ್ಲ, ಈ ತಂಡ ಫರಿದಾಬಾದ್‌, ರೋಹ್ತಕ್‌, ಭೋಪಾಲ್‌, ಬರೋಡಾ, ಮುಂಬಯಿ, ಗೋವಾದಲ್ಲಿ ಪ್ರದರ್ಶನ ನೀಡಿ ಕರ್ನಾಟಕಕ್ಕೆ ಮರಳಲಿದೆ, ಎಂದು ಕೃಷ್ಣ ಭಟ್‌ ಅವರು ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರದ ಅಂಕಿಅಂಶಗಳ ಮತ್ತು ಯೋಜನಾ ಅನುಷ್ಟಾನದ ರಾಜ್ಯ ಸಚಿವ ಆಸ್ಕರ್‌ ಫರ್ನಾಂಡಿಸ್‌ ಅವರು ತಮ್ಮ ಧರ್ಮಪತ್ನಿಯವರೊಂದಿಗೆ ಆಗಮಿಸಿ ತಂಡದ ಸದಸ್ಯರನ್ನು ಮತ್ತು ಕಾರ್ಯಕ್ರಮದ ಸಂಯೋಜಕರನ್ನು ಹುರಿದುಂಬಿಸಿದರು.

ಇದೇ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಸಂಘದ ಆಶ್ರಯದಲ್ಲಿ ತೆಂಕುತಿಟ್ಟಿನ ಖ್ಯಾತ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಹಾಗೂ ಚೆಂಡೆವಾದಕ ಪದ್ಯಾಣ ಶಂಕರನಾರಾಯಣ ಭಟ್‌ ಅವರನ್ನು ಸನ್ಮಾನಿಸಲಾಯಿತು. ಶಾಲು ಹೊದಿಸಿ, ಫಲ ಪುಷ್ಪ ಹಾಗೂ ದೆಹಲಿ ಕರ್ನಾಟಕ ಸಂಘದ ಸ್ಮರಣಿಕೆಯನ್ನಿತ್ತು ಸಂಘದ ಅಧ್ಯಕ್ಷ ಬಿಳಿಮಲೆ ಅವರು ಯಕ್ಷಗಾನದ ಹಿರಿಯ ಪ್ರತಿಭೆಗಳನ್ನು ಸನ್ಮಾನಿಸಿದರು.

ಕಾರ್ಯಕ್ರಮವನ್ನು ಬಾಲಚಂದ್ರ ವಿ. ಅಡ್ಕೋಳಿ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ದೆಹಲಿ ಕರ್ನಾಟಕ ಸಂಘದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರು ವಂದಿಸಿದರು. ಆರಂಭದಲ್ಲಿ ಉತ್ತರ ಕರ್ನಾಟಕದ ಕಲಾವಿದರಿಂದ ಸುಂದರಿ ವಾದ್ಯಸಂಗೀತದಲ್ಲಿ ಪ್ರಾರ್ಥನೆಯನ್ನು ಮಾಡಲಾಯಿತು.

ಕಾರ್ಯಕ್ರಮದ ನಂತರ ರಾಮಾಯಣದ ಪ್ರಸಿದ್ಧ ಪ್ರಸಂಗ ಪಂಚವಟಿಯನ್ನು ಹಿಂದಿಯಲ್ಲಿ ಯಕ್ಷಮಂಜೂಷ ತಂಡವು ಬಹಳ ಯಶಸ್ವಿಯಾಗಿ ನಡೆಸಿತು. ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಅವರ ಸಿರಿಕಂಠದ ಹಾಡುಗಾರಿಕೆ ಮತ್ತು ಪದ್ಯಾಣ ಶಂಕರನಾರಾಯಣ ಭಟ್‌ ಅವರ ಚೆಂಡೆವಾದನ ದೆಹಲಿ ಕರ್ನಾಟಕ ಸಂಘದ ನೂತನ ಸಭಾಂಗಣದ ಒಳಗೆ ಮಾತ್ರವಲ್ಲದೆ ಹೊರಗೂ ಅನುರಣನೆಗೊಂಡಿತು.

ಜಗದಾಭಿರಾಮ ಪಡುಬಿದ್ರಿ ಅವರ ಶೂರ್ಪನಖಿ ಮತ್ತು ವಿದ್ಯಾ ಕೋಳ್ಯೂರು ಅವರ ಮಾಯವಿ ಶೂರ್ಪನಖಿ ಎಲ್ಲರ ಮನರಂಜಿಸಿತು. ದೀಪಕ್‌ ರಾವ್‌ ಪೇಜಾವರ, ಸುಜಯ ಪದ್ಯಾಣ, ಉದಯ ನಾವುಡ, ಕಾರ್ತಿಕ್‌ ಕೋರ್ಡೆಲ್‌, ಅಕ್ಷರ ದಾಮ್ಲೆ, ಎನ್‌ ರವಿಶಂಕರ ಭಟ್‌ ಮತ್ತಿತರರು ತಮ್ಮ ಹಿಂದಿ ಯಕ್ಷಗಾನ ಪ್ರದರ್ಶನವನ್ನು ದೆಹಲಿಯ ಕನ್ನಡಿಗರಿಗೆ ಮತ್ತು ಕನ್ನಡಿಗರೇತರರಿಗೆ ತುಂಬು ಆತ್ಮವಿಶ್ವಾಸದಿಂದ ಪ್ರದರ್ಶಿಸಿ ಇತಿಹಾಸ ನಿರ್ಮಿಸಿದರು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more