ದೆಹಲಿ ಕನ್ನಡಿಗರ ಸಾಂಸ್ಕೃತಿಕ ಹಬ್ಬದ ಹಿನ್ನೋಟ
- ಬಾಲಕೃಷ್ಣ ನಾಯ್ಕ್ ಡಿ.
[email protected]
ಕರ್ನಾಟಕ ಹೆಮ್ಮೆಯ ಕಲೆಯಾದ ಯಕ್ಷಗಾನಕ್ಕೆ ಜಗತ್ತಿನಾದ್ಯಂತ ಪ್ರಚಾರ ಮತ್ತು ಪ್ರಶಂಸೆಯನ್ನು ತಂದು ಕೊಡುವುದರಲ್ಲಿ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಹದಿನೈದು ದಿನಗಳ ಸಾಂಸ್ಕೃತಿಕ ಹಬ್ಬ ಒಂದು ವೇದಿಕೆಯಾಯಿತು. ಹೊಸದಾಗಿ ಹಾಗೂ ಭವ್ಯವಾಗಿ ನಿರ್ಮಿಸಿರುವ ದೆಹಲಿ ಕರ್ನಾಟಕ ಸಂಘದ ಸುಂದರ ಸಾಂಸ್ಕೃತಿಕ ಸಮುಚ್ಚಯದ ಉದ್ಘಾಟನೆಯನ್ನು ಕರ್ನಾಟಕದ ಉಪ ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಅವರು ಯಕ್ಷಗಾನದ ಚೆಂಡೆ ಬಾರಿಸುವುದರ ಮೂಲಕ ನಡೆಸಿದರು. ಜೊತೆಗೆ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ತೆಂಕು ತಿಟ್ಟು ಯಕ್ಷಗಾನದ ಬಾಲಗೋಪಾಲ ವೇಷಧಾರಿಗಳು ಹೊಸ ರಂಗಮಂಚದಲ್ಲಿ ಮೊತ್ತ ಮೊದಲ ಗೆಜ್ಜೆಯ ಹೆಜ್ಜೆಗಳಿಂದ ಕುಣಿದು ಸ್ವಾಗತ ನೃತ್ಯ ಮಾಡಿದರು.
ಪ್ರದರ್ಶನದಲ್ಲಿ ಎಲ್ಲದಕ್ಕೂ ಹೆಚ್ಚು ಗರಿಗಟ್ಟಿದ್ದು ಪುತ್ತೂರಿನ ಕರ್ನಾಟಕ ಯಕ್ಷಭಾರತಿ ತಂಡ ಪ್ರದರ್ಶಿಸಿದ ಯಕ್ಷಗಾನ ’ಕೃಷ್ಣಾರ್ಜುನ ಕಾಳಗ’ದಲ್ಲಿ ಕೇಂದ್ರ ಸರಕಾರದ ಅಂಕಿ ಅಂಶಗಳ ಮತ್ತು ಕಾರ್ಯಕ್ರಮ ಅನುಷ್ಟಾನ ಖಾತೆಯ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರು ಭೀಷ್ಮನಾಗಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಕರ್ಣನಾಗಿ ಮಾಡಿದ ಪಾತ್ರಗಳು. ಅರು ದಶಕಗಳಿಗಿಂತಲೂ ಹೆಚ್ಚು ವಯಸ್ಕರಾಗಿರುವ ಇಬ್ಬರು ಹಿರಿಯ ರಾಜಕಾರಣಿಗಳು ರಾಷ್ಟ್ರ ರಾಜಧಾನಿಯಲ್ಲಿ ಮುಖಕ್ಕೆ ಬಣ್ಣ ಹಚ್ಚಿ, ಕಾಲಿಗೆ ಗೆಜ್ಜೆ ಕಟ್ಟಿ, ತಲೆಗೆ ಕಿರೀಟ ಕಟ್ಟಿ ಹಿಮ್ಮೇಳದ ಚೆಂಡೆ, ಮದ್ದಳೆಗಳಿಗೆ ಸರಿಹೊಂದುವಂತೆ ಸಾಂಪ್ರದಾಯಿಕ ಯಕ್ಷಗಾನದ ಹೆಜ್ಜೆಗಳನ್ನು ಹಾಕಿ ಕುಣಿದುದು ಮಾತ್ರ ನೂತನ ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ ದೆಹಲಿಯ ಕನ್ನಡಿಗರ ಕಣ್ಣಿಗೆ ಹಬ್ಬದ ಔತಣದಂತಿತ್ತು.
ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್‌ನಲ್ಲಿ ನಿರ್ದೇಶಕರಾಗಿದ್ದು, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿರುವ ಸಾಹಿತಿ, ಜಾನಪದ ವಿದ್ವಾಂಸ ಡಾ. ಪುರುಷೋತ್ತಮ ಬಿಳಿಮಲೆ ಅವರು ವಿದುರನಾಗಿ ಮತ್ತು ಸಂಘದ ಕಾರ್ಯದರ್ಶಿ ಸರವು ಕೃಷ್ಣ ಭಟ್ ಅವರು ಕೌರವನಾಗಿ ಇದೇ ಯಕ್ಷಗಾನ ಪ್ರಸಂಗದಲ್ಲಿ ಎಲ್ಲರ ಕುತೂಹಲಕ್ಕೆ ಕಾರಣರಾಗಿ ಬಹಳ ಅತ್ಯುತ್ತಮ ಪ್ರದರ್ಶನ ನೀಡಿದರು. ದೆಹಲಿಯಲ್ಲಿದ್ದು ರಾಜಕಾರಣವಿಲ್ಲವೆಂದರೆ ಹೇಗೆ? ಎಲ್ಲರ ಸಂಭಾಷಣೆಗಳು ಪ್ರಸ್ತುತ ರಾಜಕಾರಣದ ವಿಶ್ಲೇಷಣೆಯ ಮೇಲೆ ವಿಶೇಷವಾಗಿ ಕೇಂದ್ರಿಕೃತವಾಗಿತ್ತು.
ತೆಂಕುತಿಟ್ಟಿನ ಯಕ್ಷಗಾನ ಪ್ರಸಂಗಗಳಲ್ಲಿ ವಿಶೇಷವಾಗಿ ಸ್ತ್ರೀ ಪಾತ್ರಗಳನ್ನು ಮಾಡುತ್ತಾ ಕರಾವಳಿ ಜಿಲ್ಲೆಯ ಜನಮೆಚ್ಚಿನ ಯಕ್ಷಗಾನ ಕಲಾವಿದ ಕೋಳ್ಯೂರು ರಾಮಚಂದ್ರ ರಾವ್ ಅವರ ಪುತ್ರಿ ವಿದ್ಯಾ ಕೋಳ್ಯೂರು ಅವರ ಕೃಷ್ಣ ವೇಷ ದೆಹಲಿಯ ಕನ್ನಡಿಗರನ್ನು ರೋಮಾಂಚನಗೊಳಿಸಿ ಕಣ್ಣು ಬಾಯಿ ತೆರೆದು ನೋಡುವಂತೆ ಮಾಡಿತು. ಪುರುಷರಿಗೇ ಸೀಮಿತವಾಗಿದ್ದ ಯಕ್ಷಗಾನದ ಪಾತ್ರವನ್ನು ಮಹಿಳೆಯಾಬ್ಬಳು ಪುರುಷರಿಗಿಂತಲೂ ಚೆನ್ನಾಗಿ ಪ್ರದರ್ಶಿಸಿದ್ದು ಯಕ್ಷಗಾನಕ್ಕೆ ಹೊಸ ಆಯಾಮವನ್ನೇ ನೀಡಿತು.
ಪುತ್ತೂರಿನ ಕರ್ನಾಟಕ ಯಕ್ಷಭಾರತಿ ತಂಡ ಪ್ರದರ್ಶಿಸಿದ ಇನ್ನೊಂದು ಪ್ರಸಂಗ ವೀರ ಅಭಿಮನ್ಯು ಮತ್ತೊಮ್ಮೆ ಯಕ್ಷಗಾನದ ಪ್ರೇಕ್ಷಕರನ್ನು ರಂಜಿಸಿತು. ಇದರಲ್ಲಿ ಪುರುಷೋತ್ತಮ ಬಿಳಿಮಲೆ ಅವರು ಅರ್ಜುನನಾಗಿ ಮತ್ತು ಕೃಷ್ಣ ಭಟ್ ಅವರು ಕರ್ಣನಾಗಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.
ಇದೇ ಸಂದರ್ಭದಲ್ಲಿ ಹವ್ಯಾಸಿ ಕಲಾವಿದರು, ಕದ್ರಿ, ಮಂಗಳೂರು ಇವರು ದೆಹಲಿ ಕರ್ನಾಟಕ ಸಂಘಕ್ಕೆ ಒಂದು ಚೆಂಡೆ ಮತ್ತು ಒಂದು ಮದ್ದಳೆಯನ್ನು ಉದಾರವಾಗಿ ದಾನ ಮಾಡಿದರು. ಶರತ್ ಕುಮಾರ್ ಕದ್ರಿ ಮತ್ತು ಕರ್ನಾಟಕ ಯಕ್ಷಭಾರತಿಯ ಸಂಚಾಲಕ ಭಾಸ್ಕರ ರೈ ಕುಕ್ಕುವಳ್ಳಿ ಅವರು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಯಕ್ಷಗಾನವು ರಾಷ್ಟ್ರ ರಾಜಧಾನಿಯಲ್ಲಿ ಹೊಸ ಮೆರುಗನ್ನು ಪಡೆಯಲು ಈ ಎರಡು ಹಿಮ್ಮೇಳ ವಾದ್ಯಗಳು ಸಹಾಯವಾಗಲಿ ಎಂದು ಅವರು ಹಾರೈಸಿದರು.
ಚೆಂಡೆ ಮದ್ದಳೆಗಳನ್ನು ದೆಹಲಿ ಕನ್ನಡಿಗರ ಪರವಾಗಿ ಸ್ವೀಕರಿಸಿದ ಡಾ. ಬಿಳಿಮಲೆ ಅವರು ದೆಹಲಿ ಕರ್ನಾಟಕ ಸಂಘದ ಸಾಂಸ್ಕೃತಿಕ ಸಮುಚ್ಚಯದ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಏರ್ಪಡಿಸಿದ್ದ ಯಕ್ಷಗಾನ ಪ್ರದರ್ಶನವು ದೇಶದ ವಿವಿಧ ಸಂವಹನ ಮಾಧ್ಯಮಗಳಲ್ಲಿ ಪ್ರಸಾರಗೊಂಡು ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಜಗತ್ತಿನಾದ್ಯಂತ ಮನ್ನಣೆದೊರಕಿದಂತಾಗಿದೆ ಎಂದರು. ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಜಗತ್ತಿಗೆ ತೋರಿಸಿಕೊಡುವ ಪ್ರಯತ್ನದ ಅಳಿಲ ಸೇವೆಯಾಗಿ ಈ ಸಾಂಸ್ಕೃತಿಕ ಹಬ್ಬವು ರೂಪಿತಗೊಂಡಿದೆ ಎಂದರು. ದೆಹಲಿ ಕರ್ನಾಟಕ ಸಂಘದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾದ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಅವರು ಹವ್ಯಾಸಿ ಕಲಾವಿದರು, ಕದ್ರಿ, ಮಂಗಳೂರು ಇವರ ಉದಾರ ಕೊಡುಗೆಗೆ ಮೆಚ್ಚುಗೆ ಸೂಚಿಸಿ ವಂದಿಸಿದರು.
ಬಡಗು ತಿಟ್ಟಿನ ಹೆಸರಾಂತ ಯಕ್ಷಗಾನ ಕುಟುಂಬ ಕರ್ಕಿ ಹಾಸ್ಯಗಾರರ ಮೇಳದವರಿಂದ ಇದೇ ಸಂದರ್ಭದಲ್ಲಿ ಎರಡು ಪ್ರದರ್ಶನಗಳು ನಡೆದು ಯಕ್ಷಗಾನದ ಇನ್ನೊಂದು ವೈವಿಧ್ಯವನ್ನು ಎಲ್ಲರಿಗೂ ತೋರಿಸಲಾಯಿತು. ಜಾಂಬವತಿ ಕಲ್ಯಾಣ ಪ್ರಸಂಗದಲ್ಲಿ ವಯೋವೃದ್ಧ ಎಪ್ಪತ್ತರ ಯುವಕ ಕರ್ಕಿ ಕೃಷ್ಣ ಹಾಸ್ಯಗಾರರ ಸಿಂಹ ನೃತ್ಯ ಮತ್ತು ಪ್ರೇತ ನೃತ್ಯಗಳು ಎಲ್ಲರ ಮನಸೂರೆಗೊಳಿಸಿತು.











Click it and Unblock the Notifications