• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ಪ್ರಜ್ಞೆ ಮತ್ತು ಋಣ ಪ್ರಜ್ಞೆ

By Staff
|
 • ಸೋಮಶೇಖರ. ಟಿ., ಬೆಂಗಳೂರು

somashekart@yahoo.com

What ails your mother tongue? A diagnosis and prognosisಕನ್ನಡ ಭಾಷೆ ಎಲ್ಲಿ ನಶಿಸಿ ಹೋಗುವುದೋ ಎಂದು ಚಿಂತಿಸುತ್ತಿರುವ ಕೆಲ ಕನ್ನಡಿಗರಿಗೆ ಭರವಸೆಯ ಆಶಾಭಾವನೆ ತುಂಬಿ, ಎಚ್ಚೆತ್ತುಕೊಳ್ಳುವಂತೆ ಮಾಡಲು ಒಂದು ಸಣ್ಣ ಪ್ರಯತ್ನ! ನಾನು ಹಣ ಸಂಪಾದನೆಗಾಗಿ ಬರೆಯುವ ವೃತ್ತಿಪರ ಲೇಖಕನಲ್ಲ. ನನಗೆ ತೋಚಿದ್ದನ್ನು ಪ್ರಾಮಾಣಿಕವಾಗಿ ಇಲ್ಲಿ ತಿಳಿಸಿದ್ದೇನೆ. ಇದರಿಂದ ನನಗೆ ಯಾವ ವೈಯುಕ್ತಿಕ ಲಾಭವೂ ಇಲ್ಲ. ನಾನು ಬುದ್ಧಿಜೀವಿಯಲ್ಲ. ಆದರೆ ಎಲ್ಲ ಕನ್ನಡಿಗರಿಗಿಂತಲೂ ಅತಿ ಹೆಚ್ಚು, ಅದಕ್ಕಿಂತ ಮುಖ್ಯವಾಗಿ ಸರಿಯಾದ ರೀತಿಯ ಭಾಷಾಭಿಮಾನ ನನಗಿದೆ ಎಂದು ನಾನು ಎದೆ ತಟ್ಟಿಕೊಂಡು ಹೇಳಬಲ್ಲೆ!

ಈ ಮಾತುಗಳ ಕೇಳಿ ನಿಮಗೆ ಕಸಿವಿಸಿಯಾಗಿದ್ದರೆ ದಯವಿಟ್ಟು ಕ್ಷಮಿಸಿ! ನಿಮ್ಮಲ್ಲೂ ಇಂತಹದೇ ಛಲ ಉದ್ಭವಿಸಲಿ ಎಂಬುದೇ ನನ್ನ ಮುಗ್ಧ ಬಯಕೆ! ಧೃತಿಗೆಟ್ಟು ಬೀದಿಗಿಳಿದು ರಂಪ ಮಾಡುವ ಬದಲಾಗಿ, ತಾಳ್ಮೆಯಿಂದ ಕೂತು ಸಮಸ್ಯೆಗಳ ಪರಿಶೀಲನೆ ನಡೆಸುವ ಅಗತ್ಯವಿದೆ.

ಕನ್ನಡಕ್ಕೆ ಇಂದು ಇಂತಹ ಪರಿಸ್ಥಿತಿ ಏಕೆ ತಲೆದೋರಿದೆ ಎಂಬುದನ್ನು ಗಮನಿಸೋಣ...

 • ಕನ್ನಡ ಸಾಮ್ರಾಜ್ಯ ಬಹುತೇಕ ಭಾರತದ ಉದ್ದಗಲಕ್ಕೂ ಇತಿಹಾಸದಲ್ಲಿ ವಿಸ್ತರಿಸಿದ್ದದ್ದು ನಮಗೆಲ್ಲಾ ತಿಳಿದೇ ಇದೆ. ಸಂಸ್ಕೃತ, ತಮಿಳುಗಳ ನಂತರ ನಮ್ಮದೇ ಅತ್ಯಂತ ಪ್ರಾಚೀನ ಭಾಷೆ! ಹೀಗಾಗಿ, ನಮ್ಮ ಭಾಷೆಯ ಸಹಪ್ರಭಾವದಿಂದ, ತೆಲುಗು ಹಾಗೂ ಮರಾಠಿ ಭಾಷೆಗಳು ಉದ್ಭವಿಸಿದವು.
 • ಈಗ ತೆಲುಗು ಹಾಗೂ ಮರಾಠಿ ಭಾಷೆಗಳು ಜನಸಂಖ್ಯೆ ಆಧಾರದ ಮೇಲೆ ದೇಶದಲ್ಲಿಯೇ ಬೃಹತ್‌ ಹೆಮ್ಮರಗಳಾಗಿ ಬೆಳೆದು ನಿಂತಿವೆ. ಆ ಕೊರತೆ ರಾಜ್ಯಕ್ಕಿದೆ.
 • ರಾಜಧಾನಿ ನಗರ ಬೆಂಗಳೂರು, ಕರ್ನಾಟಕದ ಹೃದಯ ಭಾಗದಲ್ಲಿಲ್ಲ. ಬೆಂಗಳೂರು ತಮಿಳುನಾಡಿಗೆ ಅಂಟಿಕೊಂಡಿದೆ! ಇದರಿಂದಾಗಿ ಸಹಜವಾಗಿ ತಮಿಳಿನ ಪ್ರಭಾವ ಈ ನಗರಕ್ಕೆ ಹಿಂದಿನಿಂದಲೂ ಬಂದಿದೆ! ಆಂಧ್ರ ಸಾಕಷ್ಟು ದೂರವಿರದೇ ಇರುವುದರಿಂದ ಅಲ್ಲಿಂದಲೂ ಸಹ ಜನರು ವಲಸೆ ಬಂದರು. ಹೀಗಾಗಿ, ಈ ನಗರದಲ್ಲಿ ಸಾಕಷ್ಟು ತಮಿಳರು ಹಾಗೂ ತೆಲುಗಿಗರು ತಳವೂರಿದ್ದಾರೆ!
 • ಇಲ್ಲಿನ ವಾತಾವರಣ ಹಾಗೂ ಪ್ರಶಾಂತತೆ, ಅನೇಕ ಉತ್ತರ ಭಾರತೀಯರನ್ನೂ ಕೈ ಬೀಸಿ ಕರೆದಿದೆ. ಸರಕಾರದ ಕೇಂದ್ರ ಸ್ಥಾನ ಇಲ್ಲಿದೆ. ಹೀಗಾಗಿ ಬೆಂಗಳೂರು ಮೇಲಿನ ಆಕ್ರಮಣದ ಪ್ರಭಾವ ರಾಜ್ಯದ ಇತರೆಡೆಗೂ ಹಬ್ಬಿತು!
 • ಕರ್ನಾಟಕಕ್ಕೆ ನಾಲ್ಕೂ ಕಡೆಯಿಂದಲೂ ಬೇರೆ ಬೇರೆ ಭಾಷೆಗಳ ರಾಜ್ಯಗಳು ಅಂಟಿಕೊಂಡಿವೆ. ಬೆಳಗಾವಿಯಲ್ಲಿ ಮರಾಠಿ, ಬಳ್ಳಾರಿ-ಕೋಲಾರದಲ್ಲಿ ತೆಲುಗು, ದಕ್ಷಿಣ ಕನ್ನಡದಲ್ಲಿ ಮಲಯಾಳಿ, ಬೆಂಗಳೂರು-ಮೈಸೂರಿನಲ್ಲಿ ತಮಿಳಿನ ಪ್ರಾಬಲ್ಯತೆ ಹೆಚ್ಚಾಗಿದೆ.
 • ನಮ್ಮ ದೇಶದೆಲ್ಲೆಡೆ ಮುಸಲ್ಮಾನರು ಹಂಚಿ ಹೋಗಿದ್ದಾರೆ. ಈ ಜನರು ತಾವೆಲ್ಲೇ ಇದ್ದರೂ ಆ ಭಾಗದ ಭಾಷೆಯನ್ನು ಕಲಿತು ವ್ಯವಹರಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಅವರ ಮೂಲ ಭಾಷೆ ಅರಬ್ಬಿ ಆಗಿದ್ದರೂ, ಉರ್ದು ಬಳಸುತ್ತಿದ್ದಾರೆ. ಭಾರತದಲ್ಲಿ ಇತರೇ ಭಾರತೀಯ ಭಾಷೆಗಳ ಪ್ರಭಾವದಿಂದಾಗಿ ಉರ್ದು ಭಾಷೆಯ ಉಗಮವಾಯಿತೇ ಹೊರತು ಅದು ಎಲ್ಲಿಂದಲೋ ಬಂದ ಭಾಷೆಯೇನಲ್ಲ. ಆದರೆ ದಕ್ಷಿಣ ಭಾರತದಲ್ಲಿ, ಅದರಲ್ಲೂ ಮುಖ್ಯವಾಗಿತಮಿಳುನಾಡು ಹಾಗೂ ಕೇರಳಗಳಲ್ಲಿ ಈ ಜನರು ತಮಿಳು ಹಾಗೂ ಮಲಯಾಳಿ ಭಾಷೆಗಳನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ.
 • ನಮ್ಮ ಕನ್ನಡ ನಾಡಿನಲ್ಲಿ ಮುಸಲ್ಮಾನರು ಕನ್ನಡವನ್ನು ಸ್ವೀಕರಿಸದೇ(ಕೆಲವೇ ಕೆಲವರನ್ನು ಹೊರತುಪಡಿಸಿ), ಉರ್ದು ಭಾಷೆಯಲ್ಲೇ ವ್ಯವಹರಿಸುತ್ತಿರುವುದು ನಮ್ಮ ದುರಾದೃಷ್ಟ ! ಗಮನಾರ್ಹ ಜನಸಂಖ್ಯೆಯುಳ್ಳ ಈ ಜನರನ್ನು ನಾವೂ ಸಹ ನಿರ್ಲಕ್ಷಿಸಿರುವುದು ನಮ್ಮ ದೌರ್ಭಾಗ್ಯವೇ ಸರಿ.
 • ನಮ್ಮ ದೇಶದೆಲ್ಲೆಡೆ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ ಜನರಿದ್ದಾರೆ. ಇವರುಗಳೆಲ್ಲಾ ತಾವು ಮಾತನಾಡುವ ಭಾಷೆಗಳನ್ನು ಹಾಗೇ ಉಳಿಸಿಕೊಂಡಿದ್ದಾರೆ. ಆದರೆ ನಮ್ಮಲ್ಲಿರುವ ಬಹುತೇಕ ಕ್ರೈಸ್ತ ಶಾಲೆಗಳಲ್ಲಿ, ಮನೆಗಳಲ್ಲಿ ಆಂಗ್ಲವೋ, ತಮಿಳೋ ಅಥವಾ ಮಲಯಾಳಿಯ ಬಳಕೆಯನ್ನು ನಾವು ಹೇರಳವಾಗಿ ಕಾಣಬಹುದು.
 • ಇಂಗ್ಲೀಷ್‌ ಹಾಗೂ ಇತರ ಭಾಷೆಯನ್ನು ಸರ್ವಶ್ರೇಷ್ಠ ಎಂದು ತಿಳಿದುಕೊಂಡಿರುವ ನಾವು, ಯಾರಾದರೂ ಕನ್ನಡವನ್ನು ಅಲ್ಪದೋಷದಿಂದ ಮಾತಾಡಿದರೂ ಸಹ ದೂಷಿಸುತ್ತೇವೆ. ಈ ವಿಷಯದಲ್ಲಿ ಮಾತ್ರಮಲಗಿರುವ ಭಾಷಾ ಪಂಡಿತರು ಅದು ಹೇಗೋ ಎಚ್ಚೆತ್ತುಕೊಳ್ಳುತ್ತಾರೆ! ಕನ್ನಡ ವರ್ಣಮಾಲೆಯಿಂದ ಋ ಕಾರ ತೆಗೆಯುವುದು, ಕನ್ನಡ ನಾಡಗೀತೆಯಲ್ಲಿ ಕತ್ತರಿ ಪ್ರಯೋಗ ಮಾಡುವುದು, ಇಂತಹ ವಿಷಯಗಳಲ್ಲಿ ನಮ್ಮ ಕನ್ನಡ-ಬುದ್ಧಿಜೀವಿಗಳು ನಿಸ್ಸೀಮರು ತಲ್ಲೀನರಾಗಿದ್ದಾರೆ.
 • ನಮ್ಮ ಉತ್ತರ ಕರ್ನಾಟಕ, ಮಂಗಳೂರು ಶೈಲಿ ಕನ್ನಡವನ್ನೂ ಸಹ ನಾವು ಗೇಲಿ ಮಾಡಿ ಅವರನ್ನು ಅನ್ಯಭಾಷಿಕರಂತೆ ಕಾಣುತ್ತೇವೆ! ಕರ್ನಾಟಕ-ಕನ್ನಡವೆಂದರೇನೆಂದೇ ನಮಗೆ ತಿಳಿದಿಲ್ಲ!
 • ಹಿಂದಿ ಭಾಷೆ ರಾಷ್ಟ್ರೀಯ ಭಾಷೆಯೇನೋ ಸರಿ. ಹಾಗೆಂದು ನಾವು ನಮ್ಮ ಭಾಷೆಯನ್ನು ಮರೆತು, ಆ ಭಾಷೆಯನ್ನು ಬಿಗಿದಪ್ಪಿಕೊಳ್ಳಬೇಕೆಂದು ಹೇಳುವುದು ಮೂರ್ಖತನವಲ್ಲವೇ? ನಮ್ಮೆಲ್ಲಾ ಭಾರತೀಯ ಭಾಷೆಗಳಿಗೂ ರಾಷ್ಟೀಯ ಭಾಷೆಯಾಗುವ ಅರ್ಹತೆ ಇದೆ.
 • ಕನ್ನಡ, ಹಿಂದಿಗಿಂತಲೂ ಅತ್ಯಂತ ಪ್ರಾಚೀನ ಹಾಗೂ ಸಾವಿರ ಪಟ್ಟು ಉತ್ಕೃಷ್ಟ ಭಾಷೆ. ಹೀಗಿದ್ದೂ ಹಿಂದಿಗೆ ದಕ್ಷಿಣ ರಾಜ್ಯಗಳಲ್ಲಿ ಎಲ್ಲೂ ಕಾಣಸಿಗದಂತ ಸಹಕಾರ-ಉಪಚಾರವನ್ನು ನಾವು ಕೊಡುತ್ತಿದ್ದೇವೆ.
 • ಕೆಲ ದೇಶಾಭಿಮಾನಿಗಳು, ನಾವೆಲ್ಲ ಭಾರತೀಯರು, ನಮಗೆ ಭಾಷಾ-ಭೇದ ಬೇಡ. ಭಾಷೆಗಳ ಬಗ್ಗೆ ಮೊಂಡುತನ ಬೇಡ, ದೇಶ ಮೊದಲು, ಇತ್ಯಾದಿ ವಾದಿಸುತ್ತಾರೆ. ಕನ್ನಡಿಗರ ಔದಾರ್ಯದ ದುರುಪಯೋಗ ಸಾಮಾನ್ಯವಾಗಿದೆ. ನಮ್ಮ ನಾಡಿನಲ್ಲೇ ನಾವು ಪರಕೀಯರಾಗಿದ್ದೇವೆ. ದೇಶಾಭಿಮಾನವೆಂದರೆ ಒಂದು ಭಾಷೆಯನ್ನು ಕೊಲ್ಲುವುದೇ? ದೇಶಾಭಿಮಾನ್‌ ಎಂಬ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ ನಮ್ಮ ಬಾಯಿ ಮುಚ್ಚಲಾಗುತ್ತಿದೆ. ಕನ್ನಡ-ಕನ್ನಡಿಗರಿರದ ಭಾರತ ನಮಗೆ ಬೇಕೆ?
 • ಆಂಗ್ಲ ಭಾಷೆಯನ್ನು ನಮ್ಮ ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ಹೇರಿ, ಅವರ ಬುದ್ದಿಮಟ್ಟದೊಂದಿಗೆ ಆಟವಾಡುತ್ತಿದ್ದಾರೆ.
 • ಭಾರತದ ಪ್ರತಿ ರಾಜ್ಯಗಳಲ್ಲಿಯೂ ನಾವು ಒಂದು ಅಥವಾ ಹೆಚ್ಚು ಪ್ರಾದೇಶಿಕ ರಾಜಕೀಯ ಪಕ್ಷಗಳನ್ನು ಕಾಣಬಹುದು. ಪ್ರಾದೇಶಿಕ ಪಕ್ಷಗಳ ರಾಜಕೀಯ ಮುಖಂಡರು ಪ್ರಾಮಾಣಿಕರಲ್ಲದೇ ಇದ್ದರೂ, ಪಕ್ಷದಿಂದ ನಾಡುನುಡಿಗಳಿಗಂತೂ ಅನುಕೂಲವಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಸಮರ್ಥ ಪ್ರಾದೇಶಿಕ ಪಕ್ಷದ ಕೊರತೆ ಕಂಡು ಬಂದಿದೆ. ಹೀಗಾಗಿ ಕಾವೇರಿ, ಕೃಷ್ಣ, ಬೆಳಗಾವಿ, ಕನ್ನಡ ಚಿತ್ರರಂಗದ ಬಿಕ್ಕಟ್ಟು ಮತ್ತಿತರ ವಿಚಾರಗಳಲ್ಲಿ ನಾಡಿಗೆ ಅನ್ಯಾಯವಾಗಿದೆ. ನೆರೆಯ ರಾಜ್ಯಗಳು ನಮಗೆ ಚಳ್ಳೆ ಹಣ್ಣನ್ನು ತಿನ್ನಿಸುತ್ತಲೇ ಬಂದಿವೆ.
 • ಸಿನಿಮಾ ಮಾಧ್ಯಮ ಅತ್ಯಂತ ಪ್ರಭಾವಶಾಲಿಯಾದ ಮಾಧ್ಯಮ! ಆದರೆ ನಮ್ಮ ಚಿತ್ರರಂಗದಲ್ಲಿ ರೀಮೇಕ್‌, ಆಮದು ಕಲಾವಿದರು, ಆಮದು ತಂತ್ರಜ್ಞರು, ಕಾರ್ಮಿಕರು ಲಗ್ಗೆ ಹಾಕಿದ್ದಾರೆ. ಮತ್ತೊಂದು ಪ್ರಬಲ ಮಾಧ್ಯಮವಾದ ಟಿ.ವಿ.ಚಾನಲ್‌ ವಿಚಾರಗಳಲ್ಲೂ ನಮ್ಮದು ಕೆಟ್ಟ ಅದೃಷ್ಟ. ನಮ್ಮ ಉದ್ಯಮಿಗಳಿಗೆ ಕನ್ನಡದ ಚಾನಲ್‌ ಮಾಡುವ ಆಸಕ್ತಿ ಇಲ್ಲ. ಹೀಗಾಗಿ ನೆರೆ ರಾಜ್ಯದವರು ಮನಬಂದಂತೆ ತಯಾರಿಸಿದ, ಕನ್ನಡದ ಹೆಸರಿನ ಕಾರ್ಯಕ್ರಮಗಳ ನಾವು ನೋಡಬೇಕು.

ನಮಗೀಗ ಬೇಕಾಗಿರುವುದು ಭಾಷಾಭಿಮಾನದ ನಿಜವಾದ ಆಚರಣೆ! ನಮಗೆ ಬೇಕಾಗಿರುವುದು ದೊಡ್ಡ-ದೊಡ್ಡ ರಾಜ್ಯೋತ್ಸವದ ಆಚರಣೆಗಳಲ್ಲ! ಬೀದಿಗಿಳಿದು ಮೆರವಣಿಗೆ ಮಾಡುವುದಲ್ಲ! ಪರದೆಯ ಮೇಲೆ ಕನ್ನಡ-ಕಾವೇರಿ ಎಂದು ಹಾಡುಗಳನ್ನಾಡಿ ಹಿಂದೆ ಇಂಗ್ಲೀಷ್‌ ನುಡಿಮುತ್ತುಗಳನ್ನು ಉದುರಿಸುವ ವಿಚಿತ್ರ ವ್ಯಕ್ತಿತ್ವದ ಸಿನಿಮಾ ನಾಯಕರು ನಮಗೆ ಬೇಕಾಗಿಲ್ಲ!

ಕನ್ನಡ ಕಾಯಲು ಹೀಗೆ ಮಾಡಿ :

ಅಪರಿಚಿತರನ್ನು ಕನ್ನಡದಲ್ಲೇ ಮಾತನಾಡಿಸಿ. ಕಡೇ ಪಕ್ಷ ಕನ್ನಡದಲ್ಲಿ ಶುರುಮಾಡಿ. ಇದರಿಂದ ನಿಮ್ಮ ಘನತೆ ಸ್ವಲ್ಪ ಮಟ್ಟಿಗೆ ಕುಂದಿದರೂ ಚಿಂತೆಯಿಲ್ಲ! ಇತರ ಭಾಷಿಕರಾದ ತಮಿಳು, ಫ್ರೆಂಚ್‌, ರಷ್ಯನ್‌ ಜನರೂ ಇದೇ ಕೆಲಸ ಮಾಡುತ್ತಾರೆ. ಮಾತನಾಡುವ ಭಾಷೆಯಿಂದ ಬುದ್ಧಿಮಟ್ಟವನ್ನು ಅಳೆಯಬೇಡಿ!

ಖಾಸಗಿ ಆಸ್ಪತ್ರೆಗಳಲ್ಲಿ, ಟೆಲಿಫೋನ್‌ ಅಪರೇಟರ್‌ಗಳ ಬಳಿ, ದೊಡ್ದ ಶೋರೂಂಗಳಲ್ಲಿ, ಇತರ ಕಡೆಗಳಲ್ಲಿ ಕನ್ನಡದಲ್ಲೇ ವ್ಯವಹರಿಸಲು ಪ್ರಯತ್ನಿಸಿ. ಆಗಲಾದರೂ ಆ ಜನರು (ಅವರಲ್ಲಿ ಅನೇಕರು ಉದ್ಯೋಗ ಅರಸುತ್ತ ಪರವೂರಿನಿಂದ ಇಲ್ಲಿಗೆ ಬಂದವರು) ಕನ್ನಡ ಕಲಿಯಲು ಯತ್ನಿಸುತ್ತಾರೆ. ಕನ್ನಡದಲ್ಲಿ ಮಾತಾಡಲು ಕೀಳಿರಿಮೆ ಬೇಡ. ರಾಷ್ಟ್ರಕವಿ ಕುವೆಂಪು ಇಂಗ್ಲೀಷ್‌ ಭಾಷೆಯಲ್ಲಿ ಪ್ರಚಂಡರಾಗಿದ್ದರು. ಆದರೆ ಅವರಿಗೆ ಪ್ರತಿಷ್ಠೆ-ಖ್ಯಾತಿದೊರೆತದ್ದು ಕನ್ನಡ ಭಾಷೆಯಿಂದ ಎಂಬುದನ್ನು ಮರೆಯಬೇಡಿ!

ಕನ್ನಡಪರ ಪ್ರತಿಭಟನೆ ಮತ್ತು ಹೋರಾಟಗಳಲ್ಲಿ ಬಲವಾಗಬೇಕು. ಸಮಸ್ಯೆಗಳನ್ನು ಬಗೆಹರಿಸಲು ನಾವು ಸೂಕ್ತ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳ ಸಂಗ್ರಹಕ್ಕೆ ಒತ್ತು ನೀಡಬೇಕು. ಅದನ್ನು ಬಿಟ್ಟು ಹಾದಿ-ರಂಪಕ್ಕೆ ಇಳಿಯುವುದು ಸೂಕ್ತವಲ್ಲ. ಮತ್ತೊಂದು ವಿಚಿತ್ರವೆಂದರೆ, ನಮ್ಮ ಕಾವೇರಿ ನೀರಿನ ಪರವಾಗಿ ವಾದಿಸಲು ನಮ್ಮ ಸರ್ಕಾರ ಪರವೂರಿನ ವಕೀಲರನ್ನು ನೇಮಿಸುತ್ತದೆ!

ಕಲಾವಿದರಿಂದ ಹಿಡಿದು ಕ್ಲಾಪ್‌ಬಾಯ್‌ಗಳವರೆಗೂ ಬೇರೆ ರಾಜ್ಯಗಳಿಂದ ಜನರನ್ನು ಕರೆತರುವ ಚಿತ್ರೋದ್ಯಮಿಗಳು, ಪರಭಾಷಾ ಚಿತ್ರಗಳ ಮೇಲೆ ಸಮರ ಸಾರಿದ್ದಾರೆ. ಸದಭಿರುಚಿಯ ಚಿತ್ರಗಳ ನೀಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.

ರಾಜ್ಯಕ್ಕೆ ವಲಸಿಗರು ಬರುತ್ತಿದ್ದಾರೆ ಎಂದು ಕೊರಗುವುದು ಬಿಡಿ. ನಿಯಂತ್ರಣ ನಮ್ಮಲ್ಲಿಯೇ ಇದೆ. ಇಲ್ಲಿನ ವಾಣಿಜೋದ್ಯಮಿಗಳನ್ನು, ಮಾಹಿತಿ-ಜೈವಿಕ ತಂತ್ರಜ್ಞಾನವನ್ನು ಬೆಂಗಳೂರಿನಿಂದ ಹೊರಕ್ಕೆ ಹಾಕಬೇಕು. ಪಾಮರರು, ವಿದ್ವಾನರು, ಕವಿ ಮಹಾಶಯರು, ಶಾಸ್ತ್ರೀಯ ಸಂಗೀತಗಾರರು, ಪುರೋಹಿತರು ಮತ್ತಿತರರು ಮುಖ್ಯವಾಹಿನಿಯಲ್ಲಿ ಬೆರೆಯುತ್ತಿಲ್ಲ. ಇವರು ಹೀಗಿರುವಾಗಲೇ, ಇವರ ಮಕ್ಕಳು-ಮೊಮ್ಮಕ್ಕಳು ಡಾಕ್ಟರ್‌-ಇಂಜಿನಿಯರ್‌ಗಳಾಗಿ ಪರದೇಶಕ್ಕೆ ಹಾರಿರುತ್ತಾರೆ! ಭಾಷೆ-ಸಂಸ್ಕೃತಿಗಳ ಬಗ್ಗೆ ನಿಜವಾದ ಜವಾಬ್ದಾರಿ ತೆಗೆದುಕೊಳ್ಳುವವರಾರು?

ಇಂಗ್ಲೀಷ್‌ ಇಲ್ಲದೇ ಎಲ್ಲಿ ತಮ್ಮ ಮಕ್ಕಳು ಉದ್ಯೋಗವಕಾಶದಿಂದ ವಂಚಿತರಾಗಿ ಭವಿಷ್ಯವನ್ನು ಹಾಳುಗೆಡವಿ ಕೊಳ್ಳುತ್ತಾರೋ ಎಂಬ ಭಯ ನಮ್ಮ ಪೋಷಕರಿಗೆ ಕಾಡುತ್ತಿರಬಹುದು. ಮಾತೃಭಾಷಾ ಶಿಕ್ಷಣದ ಅನುಕೂಲದ ಅರಿವು ಅವರಿಗೆ ಆಗದಿರುವುದು ದುರಾದೃಷ್ಟಕರ. ಎಷ್ಟೋ ಕಾನ್ವೆಂಟ್‌ ಮಕ್ಕಳು ಇಂಗ್ಲೀಷ್‌ ಪಾಠಗಳನ್ನು ಚೆನ್ನಾಗಿ ಉರು ಹೊಡೆದು, ಅವನ್ನು ಆಕರ್ಷಣೀಯ ಶೈಲಿಯಲ್ಲಿ ಹೇಳಿ ಒಪ್ಪಿಸುತ್ತಾರೆಯೇ ಹೊರತು, ಅದರಲ್ಲಿನ ಅರ್ಥ ಅವರಿಗೆ ತಿಳಿದೇ ಇರುವುದಿಲ್ಲ. ಶಿಕ್ಷಣಕ್ಕೆ ಮಾತೃ ಭಾಷೆಯೇ ಪರಿಣಾಮಕಾರಿ.

ನನ್ನ ಸ್ವಂತ ಅನುಭವ ನಿಮಗೆ ಗೊತ್ತಿರಲಿ. ನಾನೂ ಸಹ ಇಂಗ್ಲೀಷ್‌ ಮಾಧ್ಯಮದಲ್ಲಿ ಕಲಿತು, ಇಂಜಿನಿಯರಿಂಗ್‌ ಓದಿ, ವೃತ್ತಿಯಲ್ಲಿ ಸಂತೃಪ್ತಿ ಹೊಂದದೇ ಪಶ್ಚಾತ್ತಾಪ ಪಡುತ್ತಿದ್ದೇನೆ. ಕನ್ನಡದ ಬಗ್ಗೆ ಅಪಾರವಾದ ಪ್ರೀತಿಯಿದ್ದರೂ, ಇತರರಂತೆ ವೈಯಕ್ತಿಕ ಜೀವನದ ಬಗ್ಗೆ ಯೋಚಿಸಿ, ಕನ್ನಡವನ್ನು ನಿರ್ಲಕ್ಷಿಸಿದೆನೇನೋ ಎಂಬ ತಪ್ಪಿತಸ್ಥ ಭಾವನೆ ನನ್ನನ್ನು ಕಾಡುತ್ತಿದೆ! ಎಲ್ಲೂ ಸಲ್ಲದ ಎಡಬಿಡಂಗಿಗಳನ್ನಾಗಿ ಮಾಡುವ ಈ ಇಂಗ್ಲೀಷ್‌ ವ್ಯಾಮೋಹ ನಮಗೇಕೆ ಬೇಕು?

ಸಮಾಜದ ಕೆಲವು ಉನ್ನತ ಹಾಗೂ ಶ್ರೀಮಂತ ವ್ಯಕ್ತಿಗಳು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿ, ಇತರರಿಗೆ ಮಾದರಿಗಳಾಗಬೇಕು, ಇಲ್ಲ ಸರಕಾರವೇ ಸಾರ್ವಜನಿಕ ಆದೇಶ ಹೊರಡಿಸಿ ಮಾತೃಭಾಷಾ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು. ಹೀಗಾದಾಗ ಮಾತ್ರ ನಮ್ಮ ಮುಂದಿನ ತಲೆಮಾರಿಗೆ ಕನ್ನಡ ಉಳಿದೀತು!

ರಾಜಕೀಯ ಪಕ್ಷಗಳು, ಅವುಗಳ ಮುಖಂಡರು ಹಾಗೂ ಅಧಿಕಾರಿಗಳು ತಮ್ಮ ನೆಲಜಲ ಹಾಗೂ ಭಾಷೆಯ ಪ್ರಜ್ಞೆ ಹೊಂದಿರಬೇಕು.

ಪ್ರಾದೇಶಿಕ ಮನೋಭಾವ ಪಕ್ಕಕ್ಕಿಟ್ಟು, ಸಮಗ್ರ ಕರ್ನಾಟಕದ ಏಳ್ಗೆಗಾಗಿ ಶ್ರಮಿಸಬೇಕಾಗಿದೆ. ಯಾವುದೇ ವಿಭಜನೆಗಳು ನಮಗೆ ಬೇಡ. ಬೆಂಗಳೂರಿನಲ್ಲಿ ಕುಳಿತಿರುವವನಿಗೆ ಬೀದರಿನ ಉರಿಬಿಸಿಲು ತಿಳಿಯ ಬೇಕು. ಪರಸ್ಪರ ಸ್ನೇಹ, ಪ್ರೀತಿ ಕನ್ನಡಿಗರಲ್ಲಿ ಮೂಡಬೇಕಾಗಿದೆ.

ಕನ್ನಡ ಸಾರ್ವಜನಿಕವಾಗಿ ಹೆಚ್ಚು ಬಳಕೆಯಲ್ಲಿರುವುದು ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಹಾಗೂ ಪೋಲೀಸ್‌ ಸ್ಟೇಷನ್‌ಗಳಲ್ಲಿ ಮಾತ್ರ! ಆದರೆ ಉಳಿದ ಸರಕಾರಿ ಕಛೇರಿಗಳಲ್ಲಿ ಕನ್ನಡ ಮಂಗಮಾಯವಾಗಿದೆ. ಕೇಂದ್ರ ಸರಕಾರದ ಹುದ್ದೆಗಳಲ್ಲಿ ಸಿಂಹಪಾಲು ಅನ್ಯ ಭಾಷಿಕರ ಪಾಲಾಗಿವೆ. ಖಾಸಗಿ ಸಂಸ್ಥೆಗಳಲ್ಲಿ, ವಿಶೇಷವಾಗಿ ಸಾಫ್ಟ್‌ವೇರ್‌ ಕಂಪನಿಗಳಲ್ಲಿ ನಾವು ಕನ್ನಡಿಗರನ್ನು ಕಾಣುವುದೇ ಕಷ್ಟ! ಕಂಡರೂ ಅವರು ಕನ್ನಡಿಗರಾಗಿ ಉಳಿದಿರುವುದಿಲ್ಲ!

ನಮ್ಮ ಭಾಷೆ ಉಳಿದರೆ ಮಾತ್ರ ನಮ್ಮ ಬದುಕು ಅರ್ಥಪೂರ್ಣವಾಗಿ ಅರಳಲು ಸಾಧ್ಯ. ಮೊದಲು ಕನ್ನಡವನ್ನು ಪ್ರೀತಿಸೋಣ, ಆಚರಿಸೋಣ, ಆದರಿಸೋಣ, ಉಳಿಸೋಣ! ಕನ್ನಡ ಪತ್ರಿಕೆಗಳನ್ನು ಕೊಂಡು ಓದೋಣ, ಒಳ್ಳೆಯ ಕನ್ನಡ ಚಿತ್ರಗಳನ್ನು ನೋಡೋಣ, ಕನ್ನಡ ಸಾಹಿತ್ಯ-ಸಂಗೀತ-ಕಲೆಗಳಿಗೆ ಪ್ರೋತ್ಸಾಹ ನೀಡೋಣ. ಕನ್ನಡ ಬರವಣಿಗೆಯನ್ನು ಓದಲು ತಾಳ್ಮೆ ತೋರೋಣ!

ಕನ್ನಡದ ಕೊಲೆ ಎಂದಿಗೂ ಆಗದು! ನಾವೆಲ್ಲ ಒಂದಾಗದಿದ್ದರೂ, ಕನ್ನಡ ಭಾಷೆಗೆ ತನ್ನನ್ನು ತಾನೇ ರಕ್ಷಿಸಿಕೊಳ್ಳುವ ಚೈತನ್ಯವಿದೆ. ಅದು ಅಷ್ಟು ಸುಲಭವಾಗಿ ನಶಿಸಿಹೋಗಲಾರದು! -ಹೀಗೆಂದು ಕೈಕಟ್ಟಿ ಕೂರುವುದು ಸಲ್ಲದು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more