ನಾಗರಪಂಚಮಿ... ನಾಡಿಗೆ ಹಿರಿಹಬ್ಬ...
ನಾಗರಪಂಚಮಿ ಎಂದ ತಕ್ಷಣವೇ ನೆನಪಿಗೆ ಬರುವುದು ಉತ್ತರ ಕರ್ನಾಟಕದ ಸಂಸ್ಕೃತಿ. ನಾಗರಪಂಚಮಿ ನಾಡಿಗೆ ದೊಡ್ಡದು ಎನ್ನುವುದು ಅಲ್ಲಿನ ಜನರ ಆಚರಣೆಗಳಿಂದಲೇ ತಿಳಿಯುತ್ತದೆ. ಎಲ್ಲ ಹಬ್ಬಗಳ ವೈಶಿಷ್ಟ್ಯಒಂದು ಪಾಲಾದರೆ, ನಾಗರಪಂಚಮಿಯದೇ ಒಂದು ಪಾಲು.
ಆ ಹಬ್ಬಕ್ಕೆ ತವರು ಮನೆಯವರು ಬಂದು ಹೆಣ್ಣುಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ತವರಲ್ಲಿ ಹಬ್ಬದ ಸಡಗರ ಸವಿಯಬೇಕು ಎಂದು ಪ್ರತಿಯಾಬ್ಬ ಹೆಣ್ಣೂ ಹಂಬಲಿಸುತ್ತಾಳೆ. ತವರು ಮನೆಯವರು ಕರೆಯಲು ಬರುವುದನ್ನೇ ಎದುರುನೋಡುತ್ತಾ, 'ಪಂಚಮಿ ಹಬ್ಬ ಬಂತು ಸನಿಯಾಕ ಅಣ್ಣ ಬರಲಿಲ್ಲ ಇನ್ನೂ ಕರಿಲಾಕ" ಎಂದು ಹಲುಬುತ್ತಾಳೆ. ಅದು ಹಬ್ಬದ ಮಹತ್ವ ಸೂಸುವ ಒಂದು ಪರಿಯಷ್ಟೆ.
ಪಂಚಮಿ ಹಬ್ಬದಲ್ಲಿ ಎರಡು ದಿನಗಳ ಕಾಲ ನಾಗರಾಜನಿಗೆ ಹಾಲು ಎರೆಯುತ್ತಾರೆ. ಮೊದಲದಿನ ಬೆಲ್ಲದ ಹಾಲು, ಎರಡನೇ ದಿನ ಬಿಳಿ ಹಾಲು. ಆ ದಿನ ಹೋಳಿಗೆ, ಕರಿಗಡುಬು ಅಥವಾ ಯಾವುದೇ ಕರಿದ ಪದಾರ್ಥವನ್ನು ನಾಗರಾಜನಿಗೆ ನೈವೇದ್ಯವಾಗಿ ನೀಡುವುದಿಲ್ಲ. ಅಕ್ಕಿಯಿಂದ ಮಾಡಿದ ಅನ್ನವನ್ನೂ ನೈವೇದ್ಯೆಗೆ ಬಳಸುವುದಿಲ್ಲ. ಬೆಳಗ್ಗೆ ಎದ್ದು ಊರಲ್ಲಿರುವ ಸಾರ್ವಜನಿಕ ನಾಗರಾಜನಿಗೆ ಹಾಲೆರೆದು ಬರಲಾಗುತ್ತದೆ. ಆಮೇಲೆ ಮನೆಯಲ್ಲಿ ಎಲ್ಲರೂ ಸೇರಿ ಹಾಲು ಎರೆಯುತ್ತಾರೆ. ಹಾಲೆರೆಯುವಾಗ, ಅವ್ವನ ಪಾಲು, ಅಪ್ಪನ ಪಾಲು, ಅಕ್ಕ, ಅಣ್ಣ, ತಮ್ಮ, ತಂಗಿ, ಅಜ್ಜಿ, ತಾತ, ಸೊಸೆ, ಅಳಿಯ, ಸೊಸೆ, ಭಾವ, ಮೈದುನ, ನಾದಿನಿ, ಬಂಧು-ಮಿತ್ರರ ಪಾಲು, ಎಲ್ಲರ ಪಾಲು ಎಂದು ಹೇಳುತ್ತಾರೆ.
ಜೋಕಾಲಿ ಆಡೋಣ ಬನ್ನಿರೋ...
ಅಂದು ಎಲ್ಲರ ಮನೆಯಲ್ಲೂ ಬಗೆಬಗೆಯ ಉಸುಳಿಗಳು, ಜೋಳದ ಅರಳು, ನಾನಾ ತರಹದ ಉಂಡೆ(ಲಾಡು)ಗಳು, ಪಂಚ ಪಕ್ವಾನ್ನ ಎಲ್ಲರ ಹಸಿವನ್ನು ತಣಿಸುತ್ತವೆ. ಊಟವಾದ ನಂತರ ಎಲೆಅಡಿಕೆ(ತಾಂಬೂಲ)ಜಗಿದು, ಜೋಕಾಲಿ(ಉಯ್ಯಾಲೆ)ಯಾಟ ಆಡುತ್ತಾರೆ. ಪ್ರತಿಯಾಬ್ಬರ ಮನೆಯಲ್ಲಿಯೂ ಒಂದೊಂದು ಜೋಕಾಲಿ. ಹೊರಗಡೆಯೂ ಸಾರ್ವಜನಿಕ ಜೋಕಾಲಿಗಳು. ಒಬ್ಬೊಬ್ಬರಾಡುವ ಜೋಕಾಲಿ, ಇಬ್ಬರಾಡುವ ಜೋಕಾಲಿ ಮತ್ತು ಗುಂಪುಗುಂಪಾಗಿ ಆಡುವ ಜೋಕಾಲಿ ಹೀಗೆ ಜೋಕಾಲಿಯಲ್ಲೂ ನಾನಾವಿಧ.
ಇಷ್ಟಾದ ಮೇಲೆ ಹಬ್ಬ ಮುಗಿಯಿತು ಎನ್ನುವಂತಿಲ್ಲ. ಇದು ಮತ್ತೊಂದು ರೂಪದಲ್ಲಿ ತಿಂಗಳುಗಟ್ಟಲೆ ಜಾರಿಯಲ್ಲಿರುತ್ತದೆ. ತಮ್ಮ ಆಪ್ತ ಬಂಧು-ಮಿತ್ರರ ಮನೆಗಳಿಗೆ ಕೊಬ್ರಿಕುಬಸ ಒಯ್ಯುವುದು ಎಂಬ ಪದ್ಧತಿ ಇದೆ. ಬಗೆಬಗೆಯ ಲಾಡು, ಅರಳು, ಕೊಬ್ರಿಯ ಬಟ್ಟಲುಗಳು, ಹೊಸ ಬಟ್ಟೆ ಮುಂತಾದ ಉಡುಗೊರೆಗಳನ್ನು ಕೊಟ್ಟು ಬರುವುದು ವಿಶೇಷ ವಾಡಿಕೆ. ಸುತ್ತಮುತ್ತಲಿನ, ದೂರದ ಊರುಗಳಿಗೆ ಹೋಗಿ ಕೊಟ್ಟುಬರುವುದು ಅನನ್ಯ ಸಂಪ್ರದಾಯ. ಇದ್ದೂರಲ್ಲೂ ಒಬ್ಬರಿಗೊಬ್ಬರು ಕೊಬ್ರಿಕುಬಸ ಕೊಡುವ ಸಂಪ್ರದಾಯ ಸಂಭ್ರಮದಿಂದ ನಡೆಯುತ್ತದೆ.
ಎತ್ತಿನಗಾಡಿ(ಬಂಡಿ) ಹೂಡಿಕೊಂಡು ಹೊಸಬಟ್ಟೆ-ಗಾಡಿಯ ತುಂಬಾ ತಿನಿಸು, ಉಡುಗೊರೆ-ಅಪಾರ ಪ್ರೀತಿ ತುಂಬಿಕೊಂಡು ಹೋಗುವುದನ್ನು ನೋಡುವ ಸಂಭ್ರಮವನ್ನು ಬಣ್ಣಿಸಲು ಸಾಧ್ಯವಿಲ್ಲ. ಆಧುನಿಕ ಜೀವನ ಎಂದು ವೇಗದ ಬದುಕಿಗೆ ಶರಣಾದ ನವಪೀಳಿಗೆಯವರಲ್ಲಿ, ಈ ಹಬ್ಬದ ಸಂಪ್ರದಾಯ ತನ್ನ ತೀವ್ರತೆ ಕಳೆದುಕೊಂಡಿದೆಯೇನೋ ಎನಿಸುತ್ತದೆ. ಆದರೆ ಸಮಾಧಾನದ ಸಂಗತಿ ಎಂದರೆ ಈ ಹಬ್ಬ ಇನ್ನೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿರುವುದು.
ಹಿನ್ನೆಲೆ : ನಾಗರಪಂಚಮಿ ಆಚರಣೆ ದ್ವಾಪರಯುಗದಲ್ಲಿ ಆರಂಭವಾಯಿತೆಂಬ ಪ್ರತೀತಿ ಇದೆ. ಪಾಂಡವರ ಪೂರ್ವಜ ಜನಮೇಜಯ, ತನ್ನ ತಂದೆಯನ್ನು ಕೊಂದ ನಾಗಸಂತತಿ ನಾಶವಾಗಬೇಕೆಂದು ಸರ್ಪಯಾಗ ಮಾಡಿಸುತ್ತಾನೆ. ಯಾಗಕ್ಕೆ ಅನೇಕ ದುಷ್ಟ ಸರ್ಪಗಳು ಆಹುತಿಯಾಗುತ್ತವೆ. ಇದಕ್ಕೆ ಕಂಗಾಲಾದ ಸರ್ಪಗಳ ಮುಖ್ಯಸ್ಥ ವಾಸುಕಿ ಬ್ರಹ್ಮನ ಮೊರೆಹೋಗುತ್ತಾನೆ.
ಆಗ ತಾಯಿಯ ಶಾಪವಿದೆ ಎಂದು ವಾಸುಕಿಗೆ ತಿಳಿಯುತ್ತದೆ. ಜರಾತ್ಕಾರು ಮುನಿಗೆ ನಿನ್ನ ತಂಗಿಯನ್ನು ಕೊಟ್ಟು ಮದುವೆ ಮಾಡು. ಅವಳಿಂದ ಜನಿಸುವ ಆಸ್ತಿಕನು ನಿಮ್ಮ ಶಾಪ ವಿಮೋಚನೆ ಮಾಡುತ್ತಾನೆ ಎಂದು ಬ್ರಹ್ಮ ಹೇಳಿದ. ಇತ್ತ ಯಾಗ ಮುಗಿಯುವ ದಿನಗಳು ಬರುತ್ತವೆ. ಸರ್ಪಗಳು ಸಾಯುವುದು ನಡೆದೇ ಇರುತ್ತದೆ. ಜನಮೇಜಯನ ಯಾಗಶಾಲೆಗೆ ಆಸ್ತಿಕಮುನಿ ಬರುತ್ತಾನೆ, ಅವನ ಮನಃಪರಿವರ್ತನೆ ಮಾಡಿ ಯಜ್ಞ ನಿಲ್ಲಿಸುತ್ತಾನೆ. ಆಗ ಸರ್ಪಗಳ ಸಂತತಿ ಉಳಿಯುವಂತಾಗುತ್ತದೆ. ಇದೆಲ್ಲ ನಡೆದದ್ದು ಶ್ರಾವಣಮಾಸದ ಪಂಚಮಿ ದಿನದಂದು ಎನ್ನುವ ನಂಬಿಕೆ ಇದೆ. ಹಾಗಾಗಿ ಆಸ್ತಿಕನ ವರದಾನವಾದ ಶ್ರಾವಣ ಶುದ್ಧ ಪಂಚಮಿಯನ್ನು ನಾಗರಪಂಚಮಿ ಎಂದು ಆಚರಿಸಲಾಗುತ್ತದೆ.












Click it and Unblock the Notifications