• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಸ್ಟರ್‌ ಹಿರಣ್ಣಯ್ಯನವರಿಗೊಂದು ಓಲೆ

By Staff
|

ಜೀವನವೇ ಒಂದು ನಾಟಕ ಅನ್ನುತ್ತಾರೆ. ಆದರೆ, ನಾಟಕವನ್ನೇ ಜೀವನವನ್ನಾಗಿಸಿಕೊಂಡಿರುವ ನರಸಿಂಹ ಮೂರ್ತಿ ಅಲಿಯಾಸ್‌ ಮಾಸ್ಟರ್‌ ಹಿರಣ್ಣಯ್ಯ ಅವರಿಗೆ ಸಪ್ರೇಮ ವಂದನೆಗಳು. ಪ್ರೀತಿಯ ನೆನಪುಗಳು.

ಅದಾಗಿ, ನಾವು ಕ್ಷೇಮ. ನೀವೂ ಆರೋಗ್ಯವಾಗಿರುತ್ತೀರಿ ಎಂಬ ನಂಬಿಕೆ, ನೀವು ಎಂದೆಂದೂ ಸಂತೋಷದಿಂದ, ನೆಮ್ಮದಿಯಿಂದ ಇರಬೇಕು ಎಂಬ ಹಾರೈಕೆ ನಮ್ಮದು. ಅಂದಹಾಗೆ ಸ್ವಾಮೀ, ನಾಡಿದ್ದು ನಡೆಯಲಿರುವ ಹುಟ್ಟುಹಬ್ಬದ ಸಂಭ್ರಮಕ್ಕೆ ನೀವು ಈಗಾಗಲೇ ಮೇಕಪ್‌ ಮಾಡ್ಕೊಂಡೇ ಸಿದ್ಧವಾಗಿ ಬಿಟ್ಟಿದೀರಾ ಎಂಬ ತುಂಟ ಪ್ರಶ್ನೆಯಾಂದಿಗೇ ನಿಮಗೆ ಈ ಪತ್ರ.....

An Open letter to Master Hirannaiahಹಿರಣ್ಣಯ್ಯನವರೇ, ಇಡೀ ನಾಡು ನಿಮ್ಮನ್ನು ‘ನಟ ರತ್ನಾಕರ ಮಾಸ್ಟರ್‌ ಹಿರಣ್ಣಯ್ಯ’ ಎಂದು ಗುರುತಿಸುತ್ತೆ. ಸಿಡಿಗುಂಡಿನ ಮಾತುಗಾರ ಅಂತ ಹೊಗಳುತ್ತೆ. ಹಿರಣ್ಣಯ್ಯ= ಶ್ರೀ ಸಾಮಾನ್ಯನ ಪ್ರತಿನಿಧಿ. ಹಿರಣ್ಣಯ್ಯ= ರೆಬಲ್‌ ಹೀರೋ ಎಂದು ಕೊಂಡಾಡುತ್ತೆ. ನಿಮ್ಮ ಚಿನಕುರುಳಿ ಮಾತುಗಳಿಗೆ ಕಿಲ ಕಿಲ ಕಿಲ ನಗುತ್ತೆ. ಅದೇ ಖುಷಿಯಲ್ಲಿ ‘ಪಂಡಿತರ ಮುಂದೆ, ಪಾಮರರ ಮುಂದೆ, ಅಪರಾಧಿಗಳ ಮುಂದೆ ಮತ್ತು ಘಟಾನುಘಟಿ ರಾಜಕಾರಣಿಗಳ ಮುಂದೆ ಯಾವ ಎಗ್ಗಿಲ್ಲದೆ ನಾಟಕ ಆಡಿದವರು ಮಾಸ್ಟರ್‌ ಹಿರಣ್ಣಯ್ಯ. ಅವರ ಮಾತುಗಳಲ್ಲಿ ಸತ್ಯವಿರುತ್ತೆ. ಈ ಎಲ್ಲ ಕಾರಣದಿಂದಲೂ ಮಾಸ್ಟರ್‌ ಹಿರಣ್ಣಯ್ಯ ಅವರ ನಾಟಕ ಪ್ರತಿ ಬಾರಿಯೂ ಗೆದ್ದೇ ಗೆಲ್ಲುತ್ತೆ’ ಎಂದೆಲ್ಲ ನಿಮ್ಮ ಚರಿತೆಯನ್ನೇ ಹೇಳಿಬಿಡುತ್ತೆ ! ಇಂಥ ಸಂದರ್ಭದಲ್ಲೆಲ್ಲ ನಾಟಕದ ಹೊರತಾಗಿ ಹಿರಣ್ಣಯ್ಯನವರಿಗೆ ಐಡೆಂಟಿಟಿಯೇ ಇಲ್ವಾ ಎಂಬ ಪ್ರಶ್ನೆ ಕಾಡುವುದುಂಟು. ಆಗ ರಂಗಪ್ರಿಯರು ತಕ್ಷಣವೇ-

‘... ಬಿಳಿಯ ಪಾಯಿಜಾಮ, ಮೇಲೊಂದು ಶುಭ್ರವಾದ ಜುಬ್ಬ, ಹೆಗಲ ಮೇಲೊಂದು ಸಣ್ಣ ಟವಲ್ಲು, ಸದಾ ಮಿನುಗುವ ಮಂದಹಾಸ, ಕಂಚಿನಕಂಠ, ಎಲ್ಲರನ್ನೂ ತನ್ನತ್ತ ಸೆಳೆಯುವ ಅದ್ಭುತ ವಾಕ್ಚಾತುರ್ಯ = ಮಾಸ್ಟರ್‌ ಹಿರಣ್ಣಯ್ಯ ಅನ್ನುತ್ತಾರೆ. ಅಷ್ಟು ಹೇಳಿದವರು, ಮರುಕ್ಷಣವೇ- ಮಾಸ್ಟರ್‌ ಹಿರಣ್ಣಯ್ಯಅಂದರೆ- ‘ದೇವದಾಸಿ’ಯ ನಾಜೂಕಯ್ಯ, ‘ಸದಾರಮೆ’ಯ ಕಳ್ಳ! ಹಿರಣ್ಣಯ್ಯ ಅಂದರೆ ಲಂಚಾವತಾರದ ‘ದತ್ತು’; ‘ಮಕ್ಮಲ್‌ ಟೋಪಿ’ಯ ‘ನಾಣಿ ’; ಭ್ರಷ್ಟಾಚಾರದ ‘ದಫೇದಾರ್‌’; ನಡುಬೀದಿಯ ‘ನಾರಾಯಣ’ ಎಂದೆಲ್ಲ ಹೇಳಿಬಿಡುತ್ತಾರೆ. ಅಲ್ಲಿಗೆ -ಒನ್ಸ್‌ ಎಗೇಯ್ನ್‌- ನಾಟಕದ ವೇದಿಕೆಗೇ ಬಂದ ಹಾಗಾಗಿ ಬಿಡುತ್ತೆ. ಹೇಳಿ ಸಾರ್‌, ನಾಟಕ ಬಿಟ್ಟು- ಬೇರೊಂದು ಥರದ ಐಡೆಂಟಿಟಿ ನಿಮ್ಗೆ ನಿಜಕ್ಕೂ ಇಲ್ವಾ?

ಸರ್‌, ಇವತ್ತಿಗೂ ಸಹ ಕನ್ನಡದ ನಿಮ್ಮನ್ನ ಗುರುತಿಸೋದು ‘ಲಂಚಾವತಾರ’ದ ‘ದತ್ತು’ ಅಂತಾನೇ. ನೀವು ನಾಟಕ ಮಾಡಿದಾಗಲೆಲ್ಲ ರಾಜಕಾರಣಿಗಳನ್ನು ಕರೆದು, ಅವರನ್ನು ಮೊದಲ ಸಾಲಿನಲ್ಲೇ ಕೂರಿಸಿ, ಒಮ್ಮೊಮ್ಮೆ ಅವರಿಗೆ ಸನ್ಮಾನವನ್ನೂ ಮಾಡಿ, ಕಡೆಗೆ ರಂಗದ ಮೇಲೆ ನಿಂತು ಅವರ ಜನ್ಮ ಜಾಲಾಡ್ತಾ ಇದ್ರಲ್ಲ- ಆಗೆಲ್ಲ ಜನ ಖುಷಿ ಪಡ್ತಿದ್ರು. ನಿಮ್ಮ ಫಡಫಡಾ ಬೈಗುಳ ಕೇಳಿ- ಆಹಾಹಾ, ಎಷ್ಟು ಚೆನ್ನಾಗಿ ಬೈತಾನಯ್ಯಾ ನನ್ಮಗಾ..... ಅಂತ ಕುಣೀತಿದ್ರು. ಅದೇ ಸಂದರ್ಭದಲ್ಲಿ ನಿಮ್ಮಿಂದ ಯಕ್ಕಾ ಮಕ್ಕಾ ಉಗಿಸಿಕೊಂಡವರು - ಅಬ್ಬಬ್ಬಬ್ಬಬ್ಬಾ , ಏನ್‌ ಮಾತುಗಾರ ಈ ಹಿರಣ್ಣಯ್ಯ ? ಸಖತ್ತಾಗಿ ಉಗೀತಾನೆ ! ಬಲೇ ಸೊಗಸಾಗಿ ಮಾತಾಡ್ತಾನೆ ಎಂದು ಹೊಗಳಿ, ಮತ್ತೆ ಮತ್ತೆ ನಾಟಕಕ್ಕೆ ಬರ್ತಾ ಇದ್ರು ! ಇವತ್ತು ಇದನ್ನೆಲ್ಲ ನೆನಪು ಮಾಡಿಕೊಂಡಾಗ- ಎಲ್ಲವೂ ವಿಚಿತ್ರಮತ್ತು ವಿಪರ್ಯಾಸ ಅನ್ನೋ ಭಾವ ನಿಮ್ಮನ್ನ ಕಾಡಲ್ವಾ? ಹೇಳಿ ಸಾರ್‌...

ಸರ್‌, ಒಂದು ಅನಿವಾರ್ಯ ಪರಿಸ್ಥಿತಿಯಲ್ಲಿ, ಆಕಸ್ಮಿಕವಾಗಿ ರಂಗಕ್ಕೆ ಬಂದವರು ನೀವು. ಅಂಥ ನಿಮ್ಮಿಂದ ರಂಗಭೂಮಿ ಮಹತ್ವದ ಸಾಧನೆಯನ್ನು ದೇವ್ರಾಣೆಗೂ ನಿರೀಕ್ಷಿಸಿರಲಿಲ್ಲ. ಅಷ್ಟೇ ಏಕೆ ? ಮುಂದೊಂದು ದಿನ ರಂಗಭೂಮಿಯ ಮಿನುಗುತಾರೆಯಾಗಿ ನಿಲ್ತೀನಿ ಅನ್ನೋ ನಂಬಿಕೆ ನಿಮಗೂ ಇರಲಿಲ್ಲವೇನೋ? ಹಾಗಿರೋವಾಗ ಹೃದ್ಯ, ಆಪ್ತ, ಅಂತರಂಗವನ್ನು ಕಲಕಿ ಬಿಡುವ ಮಾತುಗಳಿಂದಲೇ ಸಮಾಜದ ಕೊಳೆ ತೊಳೆಯುವ ಕೆಲಸ ಮಾಡಿದ್ದಿರಲ್ಲ- ಈ ಬಗ್ಗೆ ನಿಮಗೆ ಸಮಾಧಾನ ಇದೆಯಾ? ಛೆ,ಛೆ, ನಾನು ಎಷ್ಟು ಪ್ರಯತ್ನಪಟ್ರೂ ಸಣ್ಣದೊಂದು ಬದಲಾವಣೆಯೂ ಆಗಲಿಲ್ವಲ್ಲ ಅನ್ನೋ ಯಾತನೆ ಕಾಡ್ತಾ ಇದೆಯಾ?

ಎಲ್ಲರಿಗೂ ಗೊತ್ತಿರೋ ಹಾಗೆ- ನಾಟಕ ಅಂದ್ರೆ ಅದಕ್ಕೊಂದು ಚೌಕಟ್ಟಿರುತ್ತೆ, ನಾಟಕಕ್ಕೆ ಒಂದು ‘ಸ್ಕಿೃಪ್ಟ್‌’ ಇರುತ್ತೆ. ಆದ್ರೆ ನಿಮ್ಮ ನಾಟಕದ ಸ್ಕಿೃಪ್ಟು, ಡೈಲಾಗ್‌ ದಿನಕ್ಕೊಂದು ಥರದಲ್ಲಿ ಬದಲಾಗ್ತಾ ಇತ್ತಲ್ಲ? ಹಾಗೆ ದಿನಕ್ಕೊಂದು, ಕ್ಷಣಕ್ಕೊಂದು ಬದಲಾವಣೆ ಆದಾಗಲೆಲ್ಲ ನಿಮಗೆ ಕನ್‌ಫ್ಯೂಸ್‌ ಆಗ್ತಾ ಇರಲಿಲ್ವ? ಡೈಲಾಗ್‌ ಮರೆತು ಹೋಗ್ತಿರಿಲಿಲ್ವ ? ಬರಾಬರ್‌ ಮೂರು ಗಂಟೆಗಳ ಕಾಲ ವೇದಿಕೆಯ ಮೇಲೆ ಮಾತಾಡ್ತಾ ವ ಇರ್ತಿದ್ರಲ್ಲ- ಆ ಕ್ಷಣದಲ್ಲೇ-‘ಛೇ, ಎಂಥ ಬುದ್ಧಿವಂತ ನಾನು! ಇಂಥ ನಾನು ಪಿ.ಯು.ಸಿ ಗೇ ಓದು ನಿಲ್ಸಿದ್ದು ಯಾಕೆ’ ಅನ್ನೋ ಪ್ರಶ್ನೆ ಮತ್ತೆ ಮತ್ತೆ ಕಾಡಲಿಲ್ವ?

‘ರಾಜಕೀಯ ಅನ್ನೋದು ಕೊಳಚೆ ಸಮುದ್ರ. ರಾಜಕಾರಣಿಗಳು ಹುಟ್ಟಾ ಕೊಳಕರು’ ಅಂತ ಹೇಳ್ತಿದ್ರಿ ನೀವು. ಆಗೆಲ್ಲ ಯಾರಾದ್ರೂ ಹೊಡೆದು ಬಿಟ್ರೆ ಅಂತ ಭಯ ಆಗ್ತಿರಲಿಲ್ವ? ‘ಲಂಚಾವತಾರ ’ದ ಬಗ್ಗೆ ದಿನಕ್ಕೊಂದು ಥರದ ನಾಟಕ ಆಡಿದ ನಿಮಗೇ, ಒಂದಲ್ಲ ಒಂದು ಸಂದರ್ಭದಲ್ಲಿ ‘ಲಂಚ’ ಕೊಡಬೇಕಾದ ಸಂದರ್ಭ ಎದುರಾಗಲಿಲ್ವ? ‘ಸದಾರಮೆ’ ಯಲ್ಲಿ ಕಳ್ಳನ ವೇಷ ಹಾಕ್ಕೊಂಡು ಮನೆಗೆ ಹೋಗಿ- ಹೆಂಡತಿಯ ಮುಂದೆ ಹಾಡಿ ಕುಣೀಬೇಕು ಅನ್ನಿಸಲಿಲ್ವ? ವೇದಿಕೆಯ ಮೇಲೆ ರಾಜಕಾರಣಿಗಳ ಮೇಲೆ ಯದ್ವಾತದ್ವಾ ಮಾತಿನ ‘ಗುಂಡು’ ಹಾರಿಸುತ್ತಿದ್ದ ನೀವೇ ಮುಂದೆ ಅವರೊಂದಿಗೆ ಕುಳಿತು ‘ಗುಂಡು’ ಹಾಕುವಾಗ ‘ಒಂಥರಾ ಆಗಲಿಲ್ವ’ ? ‘ಕಪಿಮುಷ್ಠಿ ’ ನಾಟಕ ಬ್ಯಾನ್‌ ಮಾಡಲು ಮುಂದಾಗಿದ್ದ ಇಂದಿರಾಗಾಂಧಿಯವರನ್ನೇ ಮೆಚ್ಚಿಕೊಂಡು- ಮಗಳಿಗೆ ‘ ಪ್ರಿಯದರ್ಶಿಸಿ’ ಅಂತ ಹೆಸರಿಟ್ರಲ್ಲ- ಅದು ವಿಪರ್ಯಾಸ ಅಲ್ವ? ನಿಮ್ಮ ಹಲವು ನಾಟಕದ ಒಂದೊಂದೇ ಪಾತ್ರಗಳು ಏಕಕಾಲಕ್ಕೆ ಕಣ್ಮುಂದೆ ಬಂದು- ನಾನು ನರಸಿಂಹಮೂರ್ತಿಯಲ್ಲ , ಮಾಸ್ಚರ್‌ ಹಿರಣ್ಣಯ್ಯನೂ ಅಲ್ಲ. ನಾನು ದತ್ತು. ನಾನು ನಾರಾಯಣ, ನಾನು ಆದಿಮೂರ್ತಿ, ನಾನು ಕಳ್ಳ, ನಾನು ನಾಣಿ ಎಂದೆಲ್ಲ ಅನಿಸಿಬಿಡಲ್ವ? ಚಿತ್ರರಂಗ ಕಡೆಗೂ ನಿಮಗೆ ಒಲಿಯಲಿಲ್ವಲ್ಲಾ, ಅದನ್ನ ನೆನೆದು ಬೇಜಾರಾಗಲ್ವ? ಹೇಳಿ ಸಾರ್‌....

ಸರ್‌, ವಿಶ್ವ ಇರುವಷ್ಟೂ ದಿನ ರಂಗಭೂಮಿ ಇರುತ್ತದೆ. ರಂಗಭೂಮಿ ಇರುವಷ್ಟೂ ದಿನ ನೀವು ನಮ್ಮೊಂದಿಗಿರುತ್ತೀರಿ- ಎಚ್ಚರದ ದನಿಯಾಗಿ! ಸಾಕಲ್ಲವೇ? ನೀವೀಗ 70 ರ ಹೊಸ್ತಿಲಲ್ಲಿ ನಿಂತಿದ್ದೀರಲ್ಲ- ದೊಡ್ಡ ಖುಷಿಯಿಂದ ಹೇಳ್ತಿದೀನಿ. ಹ್ಯಾಪಿ ಬರ್ತ್‌ಡೇ ಟು ಯೂ. ಎಪ್ಪತ್ತು ನೂರಾಗಲಿ. ಮುಂದೆ, ನೂರು ವರ್ಷದ ಸಂಭ್ರಮ ನಿಮ್ಮದಾಗಲಿ. ನಿಮ್ಮ ಪಾಲಿನ ದೇವತೆ, ಭಾಗ್ಯಲಕ್ಷ್ಮಿಎರಡೂ ಆದ ನಿಮ್ಮಾಕೆ ಆಗಲೂ ನಿಮ್ಮ ಜತೆಗಿರಲಿ. ಮತ್ತೆ ಆಗ ನಾಲ್ಕು ಮಾತು ಬರೆವ ಸರದಿ ನನ್ನದಾಗಲಿ.

- ಎ.ಆರ್‌. ಮಣಿಕಾಂತ್‌

(ಸ್ನೇಹಸೇತು: ವಿಜಯಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more