ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲೂ ಕನ್ನಡ ಡಿಂಡಿಮ!

By Staff
|
Google Oneindia Kannada News

ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಕನ್ನಡವೇ ಸತ್ಯ’ ಕಾರ್ಯಕ್ರಮದ ಮೂಲಕ ಇತಿಹಾಸ ಸೃಷ್ಟಿಸಿದ ದಿ ಗ್ಲೋಬಲ್‌ ಕನ್ಸಲ್ಟೆಂಟ್ಸ್‌ ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನಲ್ಲಿ ಮತ್ತೊಂದು ಇತಿಹಾಸವನ್ನು ಸೃಷ್ಟಿಸಿದೆ.

ಖ್ಯಾತ ಗಾಯಕ ಸಿ. ಅಶ್ವತ್ಥ್‌ ಅವರ ‘ಕನ್ನಡವೇ ಸತ್ಯ’ ಕಾವ್ಯಗಾಯನ ಕಾರ್ಯಕ್ರಮವನ್ನು ಈ ಬಾರಿ ಅ.1ರಂದು ಮೈಸೂರಿನ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಆಯೋಜಿಸಿತ್ತು. ಕನ್ನಡಾಭಿಮಾನಿಗಳು ಕಾರ್ಯಕ್ರಮದಲ್ಲಿ ಕಿಕ್ಕಿರಿದು ಪಾಲ್ಗೊಂಡು, ಸಂಭ್ರಮವನ್ನು ಹಂಚಿಕೊಂಡರು.

ಕಾರ್ಯಕ್ರಮದ ಪ್ರಚಾರಕ್ಕಾಗಿಯೇ ಮೈಸೂರು ನಗರದಲ್ಲಿ ಸುಮಾರು 200 ಬಿತ್ತಿ ಪತ್ರಗಳನ್ನು ಹಾಕಲಾಗಿತ್ತು. ಕೇಳುಗರ ಅನುಕೂಲಕ್ಕಾಗಿ 4 ವಿಶಾಲ ಪರದೆಗಳನ್ನು (ಪ್ಲಾಸ್ಮಾ ಬೋರ್ಡ್‌, ಅಧುನಿಕ ತಂತ್ರಜ್ಞಾನದ) ಅಳವಡಿಲಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸುಮಾರು 8000 ಉಚಿತ ಪಾಸ್‌ಗಳನ್ನು ವಿವಿಧ ಭಾಗಗಳಲ್ಲಿ ವ್ಯವಸ್ಥಿತವಾಗಿ ವಿತರಿಸಲಾಗಿತ್ತು.

C.S. Ashwath - The person behind Kannadave Satya
Pallavi M.D.
Singers

C.D. release
The backbone of Kannada
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 30 ಮಂದಿ ವಾದ್ಯ ಕಲಾವಿದರ ತಂಡ ಸಂಗೀತ ಸುಧೆ ಹರಿಸಿತು. ಚಲನಚಿತ್ರರಂಗದ ಪ್ರಖ್ಯಾತ ಕಲಾನಿರ್ದೇಶಕ ಅರುಣ್‌ಸಾಗರ್‌ ಭವ್ಯವಾದ ವೇದಿಕೆ ನಿರ್ಮಿಸಿ, ಮೈಸೂರಿನ ಜನಕ್ಕೆ ಹೊಸದೊಂದು ಲೋಕವನ್ನೆ ಸೃಷ್ಟಿಸಿದ್ದರು. ಈ ನೆಲದ ಮೊದಲ ಚಾನಲ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಕಸ್ತೂರಿಕನ್ನಡ ವಾಹಿನಿ ಇಡೀ ಕಾರ್ಯಕ್ರಮವನ್ನು ಚಿತ್ರೀಕರಿಸಿದೆ. ವಾಹಿನಿಯ ಉದ್ಘಾಟನಾ ದಿನದಂದು ಈ ಕಾರ್ಯಕ್ರಮ ಪ್ರಸಾರವಾಗಲಿದೆ.

ಬೆಚ್ಚಗಿದ್ದ ಮೈಸೂರಿಗೆ ತಂಪನ್ನೆರೆದು ಕನ್ನಡವೇ ಸತ್ಯ ಕಾರ್ಯಕ್ರಮ ನೋಡಲು ಆ ವರುಣನೂ ಸಹ ಬಂದಿಳಿದ. ಆದರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರೇಕ್ಷಕರು, ತಾವು ಕುಳಿತಿದ್ದ ಆಸನಗಳನ್ನೇ ಕೊಡೆಯನ್ನಾಗಿ ಹಿಡಿದದ್ದನ್ನು ನೋಡಿ ವರುಣ ಮೋಡಗಳಲ್ಲಿ ಮರೆಯಾದ.

ಕಾರ್ಯಕ್ರಮ ಶುರುವಾದದ್ದು ಸಿರಿಕಂಠದ ಶ್ರೀನಿವಾಸ ಪ್ರಭುರವರ ನಿರೂಪಣೆಯಿಂದ. ನಿರೂಪಣೆಗೆ ಅಪರ್ಣ ಧ್ವನಿಗೂಡಿಸಿದ್ದರು. ಕಾರ್ಯಕ್ರಮದ ಆಯೋಜಕರಾದ ದಿ ಗ್ಲೋಬಲ್‌ ಕನ್ಸಲೆಂಟ್ಸ್‌ ಸಂಸ್ಥೆಯ ರಂಗಣ್ಣ, ಮಂಜಣ್ಣ, ಪ್ರಭಾಕರ್‌ರಾವ್‌ ಅವರುಗಳು ಅತಿಥಿಗಳನ್ನು ವೇದಿಕೆಗೆ ಕರೆತಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ರಾಂತ ಉಪಕುಲಪತಿಗಳು ಮತ್ತು ಸಾಹಿತಿಗಳಾದ ದೇ.ಜವರೇಗೌಡ ಅವರು ನೆರವೇರಿಸಿದರು. ಕೇಂದ್ರದ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್‌, ಗೀತಾಮಹದೇವ ಪ್ರಸಾದ್‌, ರಾಜಶೇಖರ ಕೋಟಿ, ಐಜಿಪಿ ಕೆಂಪಯ್ಯ ಹಾಗೂ ಇನ್ನಿತರರು ವೇದಿಕೆಯನ್ನು ಅಲಂಕರಿಸಿದ್ದರು.

ದೇಶದ ಹಿರಿಯ ಗಾಯಕ ಡಾ. ಬಾಲಮುರಳಿ ಕೃಷ್ಣರವರ ಅನಿರೀಕ್ಷಿತ ಆಗಮನದಿಂದ ನೆರೆದಿದ್ದ ಪ್ರೇಕ್ಷಕರು ಹರ್ಷಗೊಂಡರು.

ಸಂಗೀತ ಕುಲಕರ್ಣಿ, ದಿವ್ಯಾ ರಾಘವನ್‌, ಎಂ.ಡಿ ಪಲ್ಲವಿ, ಸುಪ್ರಿಯಾ ಆಚಾರ್ಯ ಮತ್ತಿತರು ಸೇರಿ ಕುವೆಂಪು ರಚಿತ ‘ಜೈ ಭಾರತ ಜನನಿಯ ತನುಜಾತೆ’ ನಾಡಗೀತೆಯನ್ನು ಹಾಡುವ ಮೂಲಕ ಕಾವ್ಯಗಾಯನಕ್ಕೆ ಚಾಲನೆ ಕೊಟ್ಟರು. ನಂತರ ಸಿ. ಅಶ್ವತ್ಥ್‌ರವರ ಸಿರಿ ಕಂಠವನ್ನು ಆಲಿಸಿದ ಮೈಸೂರಿನ ಜನ ಮಂತ್ರಮುಗ್ಧರಾದರು. ಅಂದಿನ ಕಾರ್ಯಕ್ರಮದಲ್ಲಿ ಎಂ.ಡಿ. ಪಲ್ಲವಿ ಮತ್ತು ಸುಪ್ರಿಯಾ ಆಚಾರ್‌ ತಂಡ ಹಾಡಿದ ನಿಸಾರ್‌ ಅಹಮದ್‌ರವರ ‘ಜೋಗದ ಸಿರಿ ಬೆಳಕಿನಲಿ’, ದ.ರಾ ಬೇಂದ್ರೆ ಅವರ ‘ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ’, ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟರ ‘ಈ ಭಾನು ಈ ಚುಕ್ಕಿ...’ ಗೀತೆಗಳಿಗೆ ಜನರ ಜೋರು ಚಪ್ಪಾಳೆಗಳ ಮೂಲಕ ಸ್ವಾಗತಿಸಿದರು.

ಸುಪ್ರಿಯಾ ಆಚಾರ್ಯ ಹಾಡಿದ ‘ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು.........’ ಗೀತೆಯಿಂದ ಎಲ್ಲರ ಮನ ಕರಗಿ ಹೋದಂತಾಯಿತು. ನಂತರ ಸಂಗೀತ ಕುಲಕರ್ಣಿಯವರು ಹಾಡಿದ ಚನ್ನವೀರ ಕಣವಿ ರಚನೆಯ ‘ಮುಂಜಾವಿನಲಿ ತುಂತುರಿನ ಸೋನೆ ಮಳೆ’ ಎಲ್ಲರ ಬಾಯಲ್ಲೂ ಗುನುಗುಟ್ಟುತ್ತಿತ್ತು. ಇನ್ನು ಗಾಯಕರ ಸರದಿಯೆಂಬಂತೆ ಜನ್ನಿ ಮತ್ತು ತಂಡ ಹಾಡಿದ ದ.ರಾ. ಬೆಂದ್ರೆ ಅವರ ‘ಕುರುಡು ಕಾಂಚಾಣ ಕುಣಿಯುತಲಿತ್ತು’ ಯುವ ಜನರ ಶಿಳ್ಳೆ ಹಾಗೂ ಪ್ರಶಂಸೆಗೆ ಕಾರಣವಾಯಿತು.

ಕಾವ್ಯ ಗಾಯನದ ಸರದಾರ ಸಿ.ಅಶ್ವತ್ಥ್‌ ಅವರು ಶಿಶುನಾಳ ಶರೀಫರ ‘ಸೋರುತಿಹುದು ಮನೆಯ ಮಾಳಿಗೆ’ ಎಲ್ಲರ ಮನಸೆಳೆಯಿತು. ಹೀಗೆಯೇ ಬಸವಣ್ಣ, ಪುರಂದರದಾಸರು, ಕುವೆಂಪು, ಬೇಂದ್ರೆ, ಪು.ತಿ.ನ, ಜಿ.ಎಸ್‌.ಎಸ್‌, ಹೆಚ್‌.ಎಸ್‌.ವೆಂಕಟೇಶ್‌ಮೂರ್ತಿ, ಬಿ.ಆರ್‌.ಲಕ್ಷ್ಮಣರಾವ್‌ ಹಾಗೂ ಎಂ.ಎನ್‌. ವ್ಯಾಸರಾವ್‌ ಮತ್ತಿತರರ ಗೀತೆಗಳು ಮೈಸೂರಿನ ಜನಕ್ಕೆ ಹೊಸದೊಂದು ಲೋಕವನ್ನೇ ತೋರಿಸಿದವು.

ಕಾರ್ಯಕ್ರಮದ ಜನಸಂದಣಿಯಲ್ಲಿ ಕವಿ ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟ ಹಾಗೂ ಎಚ್‌.ಎಸ್‌ ವೆಂಕಟೇಶ ಮೂರ್ತಿ ಅವರು, ವೇದಿಕೆ ಬಳಿ ಬರಲಾರದೇ ಗ್ಯಾಲರಿಯಲ್ಲೇ ಕುಳಿತಿದ್ದರು. ದಿ ಗ್ಲೋಬಲ್‌ ಕನ್ಸಲ್ಟೆಂಟ್ಸ್‌ ಸಂಸ್ಥೆಯ ಅಧ್ಯಕ್ಷರಾದ ಪ್ರಭಾಕರ್‌ರಾವ್‌ ಅವರು ವೇದಿಕೆಗೆ ಕರೆತಂದರು.

ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಆಗಮಿಸಿದ್ದ ದೇಶದ ಹಿರಿಯ ಗಾಯಕ ಡಾ।। ಬಾಲಮುರಳಿ ಕೃಷ್ಣರವರಿಗೆ ಹಾಗು ಶ್ರೀ ಅಶ್ವತ್ಥ್‌ರವರು ಸಾಂಪ್ರದಾಯಿಕ ಮೈಸೂರು ಪೇಟವನ್ನು ತೊಡಿಸಿ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ನೆನಪಿನ ಸಂಚಿಕೆಯನ್ನು ಮಾಜಿ ಕೇಂದ್ರ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಅವರು ಬಿಡುಗಡೆ ಮಾಡಿದರು. ನೆನಪಿನ ಸಂಚಿಕೆಯ ಸಂಪಾದಕರಾದ ನಾಗಣ್ಣ ಹಾಗೂ ಪ್ರೊ. ಕೃಷ್ಣೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸೈಕಲ್‌ ಬ್ರಾಂಡ್‌ ಅಗರಬತ್ತಿಯ ಆರು ಅಡಿಯ ಗಂಧದ ಕಡ್ಡಿಗಳು ವೇದಿಕೆಯ ಮುಂದೆ ಸಂಗೀತ ಸವಿಗೆ ಸುಗಂಧದ ಅಲೆಯನ್ನು ಸೇರಿಸಿದ್ದವು. ಇಷ್ಟೇ ಅಲ್ಲದೇ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಇತಿಹಾಸ ಸೃಷ್ಟಿಸಿದ ‘ಕನ್ನಡವೇ ಸತ್ಯ’ ಕಾರ್ಯಕ್ರಮದ ವಿ.ಸಿ.ಡಿಯನ್ನೂ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಗಾಯನ ತಂಡ ಹಾಗೂ ವಾದ್ಯತಂಡಗಳನ್ನು ಸಂಸ್ಥೆಯ ರಂಗಣ್ಣನವರು ಅಭಿನಂದಿಸಿದರು.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X