• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುಡಿಯಲ್ಲಿ ಮಡಿ! ಮನದಲ್ಲಿ ಮಡ್ಡಿ !!

By Staff
|
  • ಭವಾನಿ ಬಿಜಲಿ, ಬೆಂಗಳೂರು

bijali_bhavani@yahoo.com

Bhavani Bijali, Bangaoreಹೀಗೇ ಒಂದು ಶನಿವಾರ ನಮ್ಮ ಯಜಮಾನರು ದೇವಸ್ಥಾನಕ್ಕೆ ಹೋಗಿ ಬರೋಣವೆಂದರು. ಆ ದೇವಸ್ಥಾನಕ್ಕೆ ಅವರು ಆಗಾಗ ಹೋಗುತ್ತಲೇ ಇರುತ್ತಾರೆ. ಆದರೆ ನನಗೇಕೋ ಅಲ್ಲಿ ಭಕ್ತಿಯೇ ಬರುವುದಿಲ್ಲ. ಆ ದೇವಸ್ಥಾನದ ವಾತಾವರಣ ನನಗೇಕೋ ಆ ಭಾವನೆ ತರಿಸಿದೆ. ಆದರೆ ನಮ್ಮ ಯಜಮಾನರು ‘ನಾವು ದೇವರ ಗುಡಿಗೆ ಹೋಗುವುದು ದೇವರನ್ನು ನೋಡಲು, ಅಲ್ಲಿಯ ವಾತಾವರಣ ನೋಡಲು ಅಲ್ಲ’ ಅಂತ ನನ್ನ ಗೊಣಗಾಟಕ್ಕೆ ಪೂರ್ಣವಿರಾಮ ಹಾಕಿದರು.

ದೇವಸ್ಥಾನದ ಹೊರಗೆ ಹೂವು, ತುಳಸಿ, ಕರ್ಪೂರ, ಊದಿನಕಡ್ಡಿ, ಕಪ್ಪು ಬಟ್ಟೆಯಲ್ಲಿ ಕಟ್ಟಿಟ್ಟ ಎಳ್ಳು-ಎಣ್ಣೆ , ಹೀಗೆ ಇವೆಲ್ಲವನ್ನೂ ಮಾರಾಟಕ್ಕೆ ಇಟ್ಟಿರುತ್ತಾರೆ. ಏಕೆಂದರೆ ಅದು ಶನಿದೇವರ ದೇವಸ್ಥಾನ. ದೇವಸ್ಥಾನದ ಒಳಕ್ಕೆ ಹೋಗುವ ಮುಂಚೆ ಕಾಲು ತೊಳೆದುಕೊಂಡು ಹೋಗುವ ವ್ಯವಸ್ಥೆ ಇದೆ. ಎರಡು ನಲ್ಲಿಗಳು ಸತತವಾಗಿ ನೀರನ್ನು ಧಾರಾಕಾರವಾಗಿ ಸುರಿಸುತ್ತಲೇ ಇರುತ್ತವೆ. ಜನರು ಸಾಲಾಗಿ ಬಂದು ಆ ನಲ್ಲಿಯ ಕೆಳಗೆ ಕಾಲು ತೊಳೆದುಕೊಂಡು ಒಳಗಡೆ ಹೋಗುತ್ತಾರೆ. ಶನಿವಾರದ ದಿನ ಜನಸಂದಣಿ ಹೆಚ್ಚಾಗಿರುವುದರಿಂದ ನಲ್ಲಿಗಳನ್ನು ನಿಲ್ಲಿಸುವ ಮಾತೇ ಇರುವುದಿಲ್ಲ. ಬೇರೆ ದಿನದ ವಿಷಯ ನನಗೆ ಗೊತ್ತಿಲ್ಲ.

ನಾನು ಒಂದು ಕ್ಷಣ ಸುಮ್ಮನೆ ಯೋಚನೆ ಮಾಡಿದೆ. ಒಂದು ವೇಳೆ ಗುಲ್ಬರ್ಗಾದ ಜನ ಯಾರದರೂ ಈ ನಲ್ಲಿಯನ್ನು ನೋಡಿದರೆ, ತಕ್ಷಣವೇ ಹತ್ತು ಕೊಡಗಳನ್ನು ತಂದು ನಲ್ಲಿಯ ಕೆಳಗೆ ಸಾಲಾಗಿ ಇಡುತ್ತಿದ್ದರೇನೋ ಅಂತ! ಬೆಂಗಳೂರಿನ ಜನ ಹೋದ ಜನ್ಮದಲ್ಲಿ ಯಾವ ಕೋಟಿ ಪುಣ್ಯದ ಕಾರ್ಯವನ್ನು ಮಾಡಿದ್ದರೋ ಏನೋ, ಕುಡಿಯುವ ನೀರಿನ ಒಂದೊಂದು ಹನಿಗೂ ಪರಿತಪಿಸುತ್ತಿರುವ ಉತ್ತರ ಕರ್ನಾಟಕದ ಜನ ಒಂದು ಕಡೆಯಾದರೆ, ಕುಡಿಯುವ ನೀರಿರಲಿ, ಚೆಲ್ಲಿ ವ್ಯರ್ಥ ಮಾಡಲು ಕೂಡಾ ಈ ಬೆಂಗಳೂರಿನ ಜನ ನೀರನ್ನು ಪಡೆದಿದ್ದಾರೆ.

ದೇವಸ್ಥಾನದ ಒಳಗೆ ಹೋಗಿ ದೇವರ ದರ್ಶನ ಮಾಡುತ್ತಿರುವಾಗ ಅರ್ಚಕರು ದೇವರಿಗೆ ಮುಡಿಸಿದ ಹೂವು ಅಥವಾ ತುಳಸಿಯ ಗೊಂಚಲನ್ನು ಪ್ರಸಾದವಾಗಿ ಕೊಡುತ್ತಾರೆ. ಜನರು ಭಯ ಭಕ್ತಿಯಿಂದ ಸ್ವೀಕರಿಸುತ್ತಾರೆ. ತುಂಬಾ ಜನಸಂದಣಿಯಿದ್ದರೂ, ಪೀಕಲಾಟವಿದ್ದರೂ ಜನರು ನುಗ್ಗಿ ನುಗ್ಗಿ ಈ ಪ್ರಸಾದವನ್ನು ಸ್ವೀಕರಿಸುತ್ತಾರೆ. ಕೆಲವರಿಗೆ ಸ್ವೀಕರಿಸುವವರೆಗೆ ಮಾತ್ರ ಪ್ರಸಾದಕ್ಕೆ ಮಹತ್ವ, ತುಳಸಿಗೆ ಮೌಲ್ಯ. ಅದಾದ ನಂತರ ಅದು ಕಸ ಮಾತ್ರ. ಪ್ರದಕ್ಷಿಣೆ ಹಾಕುವಾಗ ಅಲ್ಲಲ್ಲಿ ಗರ್ಭಗುಡಿಯ ಹಿಂದೆ ಕಿಟಕಿಯಲ್ಲಿ, ಮೂಲೆಯಲ್ಲಿ ಹೂವನ್ನೂ, ತುಳಸಿಯನ್ನೂ ಎಸೆದು ಕೈ ಝಾಡಿಸಿಕೊಂಡುಬಿಡುವುದು. ಈ ಪ್ರಸಾದ ಕೈಗೆ ಅಷ್ಟು ಭಾರವಾಗಿದ್ದರೆ ಅದನ್ನೇಕೆ ಅರ್ಚಕರಿಂದ ಪಡೆಯಬೇಕು? ಸುಮ್ಮನೆ ಹಾಗೇ ಹೋದರೆ ಶನಿದೇವ ಶಾಪ ಕೊಡುತ್ತಾನೆಯೇ? ಒಂದು ವೇಳೆ ಪ್ರಸಾದವೆನ್ನುವುದು ತಿನ್ನುವ ಪದಾರ್ಥವಾಗಿದ್ದರೆ ಅದು ಗುಡಿಯ ಹೊರಗೆ ಬರುವಷ್ಟರಲ್ಲಿಯೇ ಖಾಲಿಯಾಗಿ ಬಿಡುತ್ತದೆ. ಸತ್ಯನಾರಾಯಣನ ಪ್ರಸಾದ, ಕೋಸಂಬರಿ, ಗುಗ್ಗುರಿ, ರಾಮನ ಪ್ರಸಾದ, ತೀರ್ಥ, ಪಂಚಾಮೃತ ಇವನ್ನು ಯಾರಾದರೂ ಕಿಟಕಿಯಲ್ಲಿ, ಮೂಲೆಯಲ್ಲಿ, ಕಾಲಲ್ಲಿ, ಚೆಲ್ಲಿ ಬರುವುದನ್ನು ನೀವು ನೋಡಿದ್ದೀರಾ?

ಮನೆಯಲ್ಲಿ ಎಲ್ಲರಿಗೂ ಸ್ವಚ್ಛತೆ, ಮಡಿ-ಮೈಲಿಗೆ, ಎಂಜಲು-ಮುಸುರೆ ಇತ್ಯಾದಿಗಳ ಬಗ್ಗೆ ಕಾಳಜಿಯಿರುತ್ತದೆ(ಎಲ್ಲರಿಗೂ ಇರುವುದಿಲ್ಲ, ಅದು ಬೇರೆ ವಿಷಯ ಬಿಡಿ!). ಆದರೆ ದೇವಸ್ಥಾನದಲ್ಲಿ ಎಷ್ಟು ಜನರಿಗೆ ಸ್ವಚ್ಛತೆಯ ಪರಿವೆ ಇರುತ್ತದೆ ಹೇಳಿ? ಇಂದು ನಾನು ದೇವಸ್ಥಾನದಲ್ಲಿ ಹಾಸ್ಯಮಯ ದೃಶ್ಯವೊಂದನ್ನು ಕಂಡೆ. ಒಂದು ಹೆಂಗಸು ಪಾಪ ಕರ್ಚೀಫ್‌ ತಂದಿರಲಿಲ್ಲ. ಪಂಚಾಮೃತವನ್ನು ಕುಡಿದು(ನೆಕ್ಕಿ) ಆಕೆಯ ಕೈ ಅಂಟಂಟಾಗಿತ್ತು. ಕರ್ಚೀಫ್‌ ಬೇರೆ ತಂದಿರಲಿಲ್ಲ. ಸೆರಗಿಗೆ ಒರೆಸಲು ಮನಸ್ಸಾಗಲಿಲ್ಲವೆಂದು ಕಾಣುತ್ತದೆ, ಅದಕ್ಕೆ ಆಕೆ ಪ್ರದಕ್ಷಿಣೆ ಹಾಕುವಾಗ ನಿಧಾನವಾಗಿ(ಹಿಂಜರಿಕೆಯೇನೂ ಇಲ್ಲದೆ) ದೇವಸ್ಥಾನದ ಗೋಡೆಗೆ ಒರೆಸಿದಳು. ಇನ್ನೊಬ್ಬ ಪುಣ್ಯಾತ್ಮೆ ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಹಾಕುವಾಗ ಹಾಗೆಯೇ ಮರಕ್ಕೆ ಕೈ ಒರೆಸಿದಳು. ಮರವನ್ನು ಮುಟ್ಟಿ ನಮಸ್ಕಾರ ಮಾಡಿದಂತೆಯೂ ಆಯಿತು, ಕೈಗೆ ಅಂಟಿದ್ದನ್ನು ಒರೆಸಿದ ಹಾಗೆಯೂ ಆಯಿತು. ಏಕೆ, ಮಡಿ-ಮೈಲಿಗೆ ದೇವರಿಗೆ ಬೇಕಾಗಿಲ್ಲವೇ?

ಸರಿ, ಇನ್ನು ಶನಿದೇವರಿಗೆ ಎಳ್ಳಿನ ದೀಪ ಹಚ್ಚುವ ಕಾರ್ಯಕ್ರಮ. ಒಂದು ದೊಡ್ಡ ಹೋಮಕುಂಡದಂಥ ಸ್ಥಳದಲ್ಲಿ ಅಗ್ನಿಯಿರುತ್ತದೆ. ಅದಕ್ಕೆ ಪ್ರದಕ್ಷಿಣೆ ಹಾಕುತ್ತಾ ಅದರಲ್ಲಿ ಒಂದೊಂದೇ ಎಳ್ಳಿನ ದೀಪವನ್ನು ಹಾಕಬೇಕು. ಒಂದು ಕಪ್ಪು ಬಟ್ಟೆಯಲ್ಲಿ ಎಳ್ಳನ್ನು ಹಾಕಿ, ಅದನ್ನು ಎಣ್ಣೆಯಲ್ಲಿ ಅದ್ದಿ, ಅಂಥ ಗಂಟುಗಳನ್ನು ಕಾಗದದ ಪೊಟ್ಟಣಗಳಲ್ಲಿ ಕಟ್ಟಿ ಮಾರಾಟ ಮಾಡುತ್ತಿರುತ್ತಾರೆ. ಇಂಥ ಪೊಟ್ಟಣಗಳನ್ನು ಕೊಂಡಂಥ ಭಕ್ತಾದಿಗಳು(ಅವರಲ್ಲಿ ಎಷ್ಟು ಜನರಿಗೆ ಅದರ ಮಹತ್ವ ಗೊತ್ತಿರುತ್ತದೆಯೋ, ಆ ಶನಿದೇವರಿಗೇ ಗೊತ್ತು!) ಅಗ್ನಿಯ ಕುಂಡದಲ್ಲಿ ತಮ್ಮ ಎಳ್ಳಿನ ದೀಪವನ್ನೂ ಉರಿಸುತ್ತಾರೆ.

ಅಗ್ನಿಯ ಕುಂಡದ ಪಕ್ಕಕ್ಕೆ, ಕಾಗದವನ್ನು ಎಸೆಯಲು ಕಸದ ತೊಟ್ಟಿಯನ್ನಿಟ್ಟಿದ್ದಾರೆ. ಆದರೆ ಕಸದ ತೊಟ್ಟಿಯನ್ನು ಬಿಟ್ಟು ಎಲ್ಲಾ ಕಡೆ ಕಾಗದದ ರಾಶಿ. ಜನರಿಗೆ ಸ್ವಲ್ಪವಾದರೂ ವಿವೇಚನೆ ಬೇಡವೇ? ದೇವಸ್ಥಾನದ ಈ ಭಾಗವನ್ನು ಕಸದ ತೊಟ್ಟಿಯನ್ನಾಗಿಸಿದ್ದಾರೆ. ಇಂಥ ವಾತಾವರಣದಲ್ಲಿ ತನ್ನನ್ನು ತಂದು ಕೂರಿಸಿದ್ದಾರಲ್ಲಾ ಎಂದು ಶನಿದೇವನಿಗೆ ಕೋಪ ಬರುವುದಿಲ್ಲವೇ? ದೇವಸ್ಥಾನದಿಂದ ಹೊರಬಂದ ಮೇಲೆ ನಾನು ನಮ್ಮ ಯಜಮಾನರಿಗೆ ಈ ಮಾತುಗಳನ್ನು ಹೇಳಿದೆ. ಆಗ ಅವರೂ ಅದಕ್ಕೆ ಒಪ್ಪಿದರು. ಸದ್ಯ, ದೇವಸ್ಥಾನದ ಪರಿಸ್ಥಿತಿ ಸುಧಾರಿಸುತ್ತದೆಯೋ ಇಲ್ಲವೋ, ಶನಿದೇವ ಪ್ರಸನ್ನನಾಗುತ್ತಾನೋ ಇಲ್ಲವೋ, ಆದರೆ ನಮ್ಮ ದೇವರು(ನಮ್ಮೆಜಮಾನರು)ನನ್ನ ಮಾತಿಗೆ ‘ಹೂಂ’ಗುಟ್ಟಿದರಲ್ಲ ನನಗದಷ್ಟೇ ಸಾಕೆಂದು ನಾನು ಸುಮ್ಮನಾದೆ.

(ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ದೇವಸ್ಥಾನದಲ್ಲಿನ ನೈರ್ಮಲ್ಯ ಹದಗೆಡಿಸುವುದು ಸಲ್ಲದು. ಹೀಗೆಂದು ಸಂಪ್ರದಾಯಗಳನ್ನು ಹಳದಿ ಕಣ್ಣಿನಿಂದ ನೋಡುವ ಪರಿಪಾಠವೂ ಆರೋಗ್ಯಕರವಲ್ಲ. ದೇವಸ್ಥಾನಗಳಲ್ಲಿ ಸ್ವಚ್ಚತೆ ಕಾಪಾಡಬೇಕೆಂಬುದು ಎಲ್ಲರೂ ಒಪ್ಪುವ ಮಾತು. ಪ್ರಜ್ಞೆಯುಳ್ಳ ಪ್ರತಿಯಾಬ್ಬ ಭಕ್ತನೂ ಈ ನಿಟ್ಟಿನಲ್ಲಿ ವಿಚಾರ ಮಾಡಬೇಕಾಗಿರುವುದು ಅಗತ್ಯ. ಆದರೆ, ಯಾವುದು ಅರ್ಥಗರ್ಭಿತ ಸಂಪ್ರದಾಯ, ಯಾವುದು ಅರ್ಥಹೀನ ಸಂಪ್ರದಾಯ ಎಂಬ ವಿಚಾರ ವಿಶ್ಲೇಷಣೆಗೆ ಯೋಗ್ಯ. ಸಂಪ್ರದಾಯಗಳ ಬಗ್ಗೆ ಬೆಳಕು ಚೆಲ್ಲುವವರಿಗೆ ಸ್ವಾಗತ. - ಸಂ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more