ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂ-ಗ್ಲಿಷ್‌- ಕಾಲಿ-ಟ್ಟ ಕಡೆಗೆಲ್ಲ ಕನ್ನಡದಂತಹ ಸ್ಥಿತಿಯೇ...

By Staff
|
Google Oneindia Kannada News

ಕನ್ನಡ ಶಾಲೆಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆಯಾಗಿ ಯಾವ ತರಗತಿಯಿಂದ ಕಲಿಸಬೇಕೆಂಬ ಚರ್ಚೆಯು ಅರ್ಥಪೂರ್ಣವಾಗಿ ನಡೆಯುತ್ತಿದೆ ಎನ್ನಲಾಗದು. ಶೈಕ್ಷಣಿಕ ವಿಚಾರಧಾರೆ ಅರಿಯದೇ ಮಾತನಾಡುವವರ ಸಂಖ್ಯೆ ಹೆಚ್ಚಾಗಿದ್ದು, ಇದರ ಗಾಂಭೀರ್ಯಕ್ಕೆ ತಕ್ಕುದಾದ ವಿಚಾರಗಳು ಅಷ್ಟಾಗಿ ವ್ಯಕ್ತವಾಗುತ್ತಿಲ್ಲ. ಶಿಕ್ಷಣ ಯಾವ ರೂಪದಲ್ಲಿರಬೇಕು, ಯಾವ ಮಾಧ್ಯಮದ ಮೂಲಕ ಅದನ್ನು ನೀಡಬೇಕೆಂಬುದು ಜನಾಭಿಪ್ರಾಯದಿಂದ ತೀರ್ಮಾನವಾಗಬೇಕಿರುವ ವಿಚಾರವಲ್ಲ. ಅದು ಕೇವಲ ಶಿಕ್ಷಣ ತಜ್ಞರು ತೀರ್ಮಾನಿಸಬೇಕಿರುವ ಸಂಗತಿ. ಅದನ್ನು ಬೆಂಬಲಿಬೇಕಾದ ಕರ್ತವ್ಯ ಸಮಾಜದ್ದಾದರೆ, ಅನುಷ್ಠಾನಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗುತ್ತದೆ.

ಭಾರತದ ಪ್ರಾಚೀನ ಶೈಕ್ಷಣಿಕ ಸಂದರ್ಭ ಕೇವಲ ಸ್ಥಿತಿವಂತರ ನಿಯಂತ್ರಣದಲ್ಲಿದ್ದುದು ಅನೇಕ ದಾಖಲೆಗಳ ಮೂಲಕ ಗೊತ್ತಾಗುತ್ತದೆ. ಶಾಲೆಗಳನ್ನು ಸಾಮಾನ್ಯರತ್ತ ಕೊಂಡೊಯ್ದ ಕೀರ್ತಿಯನ್ನು ಆಧುನಿಕ ಶೈಕ್ಷಣಿಕ ವ್ಯವಸ್ಥೆಗೆ ನೀಡಬೇಕು. ಆಧುನಿಕ ಶಿಕ್ಷಣ ಪರಿಪೂರ್ಣತೆ ಹೊಂದಿಲ್ಲ ಎಂದು ವಾದಿಸಿದರೂ ಅದರಲ್ಲಿರುವ ಉತ್ತಮ ಗುಣಗಳನ್ನು ಒಪ್ಪಬೇಕಿರುವುದು ನಮ್ಮ ಕರ್ತವ್ಯ. ಆನಂತರ ಅದನ್ನು ಸರ್ವಾಂಗ ಸುಂದರಗೊಳಿಸುವುದು ನಮ್ಮೆಲ್ಲರ ಹೊಣೆ. ಇಂಗ್ಲಿಷರು ಮತ್ತು ಕ್ರೆೃಸ್ತ ಮಿಶನರಿಗಳ ಸೇವೆ ಈ ನಿಟ್ಟಿನಲ್ಲಿ ಶ್ಲಾಘನೀಯ. ಮೊದಲು ಕನ್ನಡ ಶಾಲೆಗಳನ್ನು ಆರಂಭಿಸಿದ್ದೇ ಇಂಗ್ಲಿಷರು. ಹಡ್ಸನ್‌ ಎಂಬುವವರು ಒಂದೇ ಸಲಕ್ಕೆ ಸುಮಾರು 70ಕ್ಕೂ ಅಧಿಕ ಕನ್ನಡ ಶಾಲೆಗಳನ್ನು ಆರಂಭಿಸಿದರು. ಅವರೇ ಮೊದಲ ಕನ್ನಡ ಶಾಲೆಯ ಸ್ಥಾಪಕ. ಬ್ರಿಟಿಷರು ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಲು ಒಪ್ಪಿದ್ದರೇ ವಿನಃ ಅದನ್ನು ಶೈಕ್ಷಣಿಕ ಮಾಧ್ಯಮವಾಗಿ ಹೇರಲು ಎಲ್ಲೂ ಪ್ರಯತ್ನಿಸಲಿಲ್ಲ. ಆಡಳಿತದಲ್ಲೂ ಅವರು ಸ್ಥಳೀಯ ಭಾಷೆಗಳನ್ನೇ ಬಳಸಿದರು. ಶಾಲಾ ಶಿಕ್ಷಣ ಆರಂಭವಾಗುತ್ತಲೇ ಇಂಗ್ಲಿಷ್‌ ಭಾಷೆ ಹೇರುವ ಹುನ್ನಾರವನ್ನಂತೂ ಮಾಡಲೇ ಇಲ್ಲ.

ಯಾವುದೇ ಒಂದು ಸಮಾಜ ಮೊದಲು ಕುವ್ಯವಸ್ಥೆಯಲ್ಲಿದ್ದು, ಆಮೇಲೆ ಅವ್ಯವಸ್ಥೆಯತ್ತ ಸಾಗುತ್ತದೆ. ಕೊನೆಗೆ ಸುವ್ಯವಸ್ಥೆ ತಲುಪುತ್ತದೆ ಎಂದು ಸಮಾಜವಾದಿಗಳು ಗುರುತಿಸಿದ್ದಾರೆ. ಈ ನಿಟ್ಟಿನಲ್ಲಿ ಭಾರತದ ಪ್ರಾಚೀನ ಶೈಕ್ಷಣಿಕ ವ್ಯವಸ್ಥೆ ಕುವ್ಯವಸ್ಥೆಯಿಂದ ಕೂಡಿದ್ದು, ಪ್ರಸ್ತುತ ಸನ್ನಿವೇಶ ಅವ್ಯವಸ್ಥೆಯದ್ದು ಎನ್ನಬೇಕಾಗುತ್ತದೆ. ಇದನ್ನು ಸುವ್ಯವಸ್ಥೆಯತ್ತ ಕೊಂಡೊಯ್ಯಲು ನಾವು ಮಾಡಲೇಬೇಕಿರುವ ಕ್ರಮಗಳೇನು ಎಂದು ಚಿಂತಿಸಿ ಮುನ್ನಡೆಯಬೇಕಿದೆ.

ಜಗತ್ತಿನಲ್ಲಿ ಲಕ್ಷಾಂತರ ಭಾಷೆಗಳಿವೆ. ಅವೆಲ್ಲವೂ ಶೈಕ್ಷಣಿಕ ಮಾಧ್ಯಮದ ಭಾಷೆಗಳಾಗಿಲ್ಲ. ಕೆಲವು ಮಾತ್ರ ಆ ಸ್ಥಾನ ಪಡೆದಿವೆ. ಒಂದು ಭಾಷೆ ಶೈಕ್ಷಣಿಕ ಮಾಧ್ಯಮವಾಗಿ ಚಲಾವಣೆಯಲ್ಲಿದೆ ಎಂದರೆ ಅದು ಸಶಕ್ತವಾಗಿ ಬೆಳೆದಿದೆ ಎಂದರ್ಥ. ಅಂದರೆ ಆ ಭಾಷೆ ಎಲ್ಲ ಜ್ಞಾನ ಶಾಖೆಗಳಿಗೂ ಹರಡಿಕೊಳ್ಳುವ ಸಾಮರ್ಥ್ಯ ಪಡೆದಿದೆ ಎಂದರ್ಥ. ಕಾಲಮಾನದ ಅಗತ್ಯಕ್ಕೆ ಅನುಗುಣವಾಗಿ ಭಾಷೆಯಲ್ಲಿ ಎಲ್ಲ ಬಗೆಯ ಮಾಹಿತಿಯನ್ನೂ ಕಲೆಹಾಕಬೇಕಾಗುತ್ತದೆ. ಆಗ ಇತರ ಭಾಷೆಗಳ ನೆರವೂ ನಮ್ಮ ಭಾಷೆಗೆ ಬೇಕಾಗುತ್ತದೆ. ನಮ್ಮ ಭಾಷೆಯ ನೆರವೂ ಇತರ ಭಾಷೆಗಳಿಗೆ ಬೇಕಾಗುವಂತೆ ನಮ್ಮ ಭಾಷೆಯನ್ನು ಬೆಳೆಸಬೇಕಾಗುತ್ತದೆ. ಇದೆಲ್ಲ ಯಶಸ್ವಿಯಾಗಿ ಸಾಧ್ಯವಾಗುವುದು ಸಹಜಲಭ್ಯ ಪರಿಸರ ಭಾಷೆಯ ಮೂಲಕ ವಿಷಯಗಳನ್ನು ತಿಳಿದುಕೊಳ್ಳುವುದರಿಂದ. ಅಂದರೆ ಭಾರತದ ಎಲ್ಲ ರಾಜ್ಯಗಳಲ್ಲೂ ಆಯಾ ಪ್ರಾದೇಶಿಕ ಭಾಷೆಯೇ ಶಿಕ್ಷಣ ಮಾಧ್ಯಮವಾಗಬೇಕಿರುವುದು ಪರಿಣಾಮಕಾರಿ ಮತ್ತು ಅನಿವಾರ್ಯ ಕ್ರಮ. ಕರ್ನಾಟಕದಲ್ಲಿ ಕೇವಲ ಕನ್ನಡ ಮಾಧ್ಯಮದಲ್ಲೇ ಬೋಧಿಸುವುದು, ಅದು ಎಲ್ಲ ಶೈಕ್ಷಣಿಕ ಹಂತದಲ್ಲೂ ಕಡ್ಡಾಯವಾಗಬೇಕು.

ಐತಿಹಾಸಿಕವಾಗಿ ಇಂಗ್ಲಿಷ್‌ ಭಾಷೆ ಕನ್ನಡಕ್ಕಿಂತಲೂ ಅತ್ಯಂತ ಕಿರಿಯದು. ಅದು ಅನೇಕ ಭಾಷೆಗಳ ಸಾರವನ್ನು ಹೀರಿಕೊಂಡಿದ್ದರಿಂದಲೇ ಇಂದು ಸಮೃದ್ಧಿ ಸಾಧಿಸಿದೆ. ವಸಾಹತುಶಾಹಿ ಕಾರಣಗಳಿಂದಾಗಿ ಜಗತ್ತಿನೆಲ್ಲೆಡೆ ಹರಡಿರುವುದು ಗಮನಾರ್ಹ ಸಂಗತಿ. ಇಂಗ್ಲಿಷ್‌ ಯಾವ್ಯಾವ ದೇಶಗಳಿಗೆ ಕಾಲಿಟ್ಟಿದೆಯೋ ಅಲ್ಲಿನ ಸ್ಥಳೀಯ ಭಾಷೆಗಳಿಗೆ ನಿರ್ನಾಮವಾಗುವ ಆತಂಕ ಎದುರಾಗಿದೆ. ಅದರರ್ಥ ಅಲ್ಲಿಯ ಜನರು ಇಂಗ್ಲಿಷನ್ನು ಕೊಡವಿಕೊಂಡು ಮೇಲೆದ್ದಿಲ್ಲ. ಬದಲಿಗೆ ಮೈಮೇಲೆಳೆದುಕೊಂಡು ಸಮೃದ್ಧ ಜೀವನಕ್ಕೇ ಕುತ್ತು ತಂದುಕೊಂಡಿದ್ದಾರೆ. ಭಾರತ ಮತ್ತು ಆಂಗ್ಲೇತರ ದೇಶಗಳಿಗೆ, ಇಂಗ್ಲಿಷ್‌ ಕಲಿಕೆ ಐಚ್ಛಿಕವಾಗಬೇಕು. ಅದು ಶಿಕ್ಷಣದ ಮಾಧ್ಯಮ ಅಥವಾ ಕಡ್ಡಾಯ ಭಾಷೆಯಾಗುವುದು ಅವೈಜ್ಞಾನಿಕ. ಮನೆಗೆ ಕಿಟಕಿಗಳಂತೆ ಎಲ್ಲ ಭಾಷೆಗಳಿರಲಿ. ನಮ್ಮ ಭಾಷೆ ತಲೆಬಾಗಿಲಿನಂತಿರಲಿ. ಇಂಗ್ಲಿಷ್‌ ಬಿರುಗಾಳಿ-ಬೆಂಕಿಯಾಗದಿರಲಿ, ತಂಗಾಳಿ-ಬೆಳಕಿನಂತಾಗಲಿ. ಶಿಕ್ಷಣದ ಒಂದು ಹಂತದಿಂದ ಮಗು ತನಗೆ ಇಷ್ಟವಾದ ಯಾವುದಾದರೂ ಒಂದು ಭಾಷೆಯನ್ನು ಆಯ್ಕೆ ಮಾಡಿಕೊಂಡು ಕಲಿಯಲು ಶಾಲೆಯಲ್ಲಿ ಅವಕಾಶ ಇರಬೇಕಷ್ಟೆ. ಆಗ ಇಂಗ್ಲಿಷೋ ಅಥವಾ ಬೇರೆ ಯಾವ ಭಾಷೆಯೋ ಮಗುವಿನ ಆಯ್ಕೆಯಾಗುತ್ತದೆ. ಈ ನಿಟ್ಟಿನಲ್ಲಿ ಮೊದಲು ಕರ್ನಾಟಕ ರಾಜ್ಯದ ಶಿಕ್ಷಣ ತಜ್ಞರು, ಬುದ್ಧಿಜೀವಿಗಳು ಮತ್ತು ನಾಗರಿಕರು ಕರ್ನಾಟಕಾದ್ಯಂತ ಕೇವಲ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ದೊರೆಯುವಂತೆ ಮಾಡಲು ಮುಂದಾಗಬೇಕು. ವೈದ್ಯಕೀಯ, ತಾಂತ್ರಿಕ ಸೇರಿದಂತೆ ಎಲ್ಲ ಶಿಕ್ಷಣವೂ ಕೇವಲ ಕನ್ನಡದಲ್ಲಿ ಲಭ್ಯವಾಗುವಂತೆ ಮಾಡಬೇಕು. ಇದು ಭಾರತದ ಎಲ್ಲ ರಾಜ್ಯಗಳಿಗೂ ಅನುಕರಣೀಯವಷ್ಟೇ ಅಲ್ಲ, ಜಗತ್ತಿನಲ್ಲಿ ಆತಂಕ ಎದುರಿಸುತ್ತಿರುವ ಎಲ್ಲ ಭಾಷೆಗಳಿಗೂ ಪ್ರೇರಕವಾಗುತ್ತದೆ. ಇದರಿಂದ ಸಹಜವಾಗಿ ಜಾಗತಿಕ ಬುದ್ಧಿಮತ್ತೆ ಹೆಚ್ಚುತ್ತದೆ. ಜಾಗತಿಕವಾಗುವುದೆಂದರೆ ವೈಯಕ್ತಿಕ ವಿಕಾಸದ ಪಾರಮ್ಯ ಎಂಬುದು ವಾಸ್ತವಕ್ಕೆ ಬರುತ್ತದೆ. ವ್ಯಕ್ತಿ ವಿಕಾಸದೊಡನೆಯೇ ಸಾಮಾಜಿಕ-ಆರ್ಥಿಕ ವಿಕಾಸ ಸಾಗುತ್ತದೆ.

ಭಾರತದ ಇನ್ನೊಂದು ಶೈಕ್ಷಣಿಕ ಗೊಂದಲ ಹಾಗೇ ಮುಂದುವರಿದಿದೆ. ಸ್ವಭಾಷೆ-ಸ್ವರಾಜ್ಯ ಎಂಬ ಕಲ್ಪನೆಯನ್ನು ಸಾಕಾರಗೊಳಿಸಲು ಯಾರೂ ತಯಾರಿದ್ದಂತಿಲ್ಲ. ಬದಲಿಗೆ ಇಂಗ್ಲಿಷನ್ನು ದಾಸ್ಯದ ಸಂಕೇತವಾಗೇ ಉಳಿಸಿಕೊಳ್ಳುವ ಅವಿವೇಕಿತನ. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ , ಕೇವಲ ಕೇಂದ್ರ ಸರ್ಕಾರಿ ನೌಕರರ ಮಕ್ಕಳು ಓದಲು ಅವಕಾಶ ನೀಡಬೇಕು. ಕೇಂದ್ರ ಸರ್ಕಾರಿ ನೌಕರರು ಬಯಸಿದರೆ, ರಾಜ್ಯ ಸರ್ಕಾರಿ ಪಠ್ಯಕ್ರಮದಲ್ಲಿ ಅವರ ಮಕ್ಕಳನ್ನು ಓದಿಸಲು ಅವಕಾಶವಿರಬೇಕು. ಕೇಂದ್ರೀಯ ವಿದ್ಯಾಲಯ ಸೇರಿದಂತೆ ಸಿಬಿಎಸ್‌ಸಿ-ಐಸಿಎಸ್‌ಸಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮದಲ್ಲೇ ಬೋಧಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಶಿಕ್ಷಣ ಮಾಧ್ಯಮ, ದೇಶದಲ್ಲಿ ಬಹುಸಂಖ್ಯಾತರಾಡುವ ಹಿಂದಿಯಾಗಲಿ(ಹಾಗೆಂದ ಮಾತ್ರಕ್ಕೆ ಹಿಂದಿ ರಾಷ್ಟ್ರ ಭಾಷೆ ಎಂದುಕೊಳ್ಳಬೇಕಿಲ್ಲ ; ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಶಾಲಾ ಕಾಲೇಜು ಶಿಕ್ಷಣಕ್ಕೆ ಮಾತ್ರ ಇದು ಸೀಮಿತ). ಭಾರತೀಯ ಸೈನ್ಯದ ವ್ಯವಹಾರ, ಬ್ಯಾಂಕಿಂಗ್‌ ವ್ಯವಹಾರದಲ್ಲಿ ಇಂಗ್ಲಿಷ್‌ಗೇ ಮಣೆ ಹಾಕಲಾಗಿದೆ. ಇದು ಮೊದಲು ತೊಲಗಬೇಕು. ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ದೇಶದಲ್ಲಿ ಬಹುಸಂಖ್ಯಾತರಾಡುವ ಹಿಂದಿಯನ್ನು ಮುಖ್ಯ ಭಾಷೆ ಮಾಡಿಕೊಳ್ಳಲಿ. ಸೈನ್ಯದ ವ್ಯವಹಾರವೆಲ್ಲ ಹಿಂದಿಯಲ್ಲಿ ನಡೆಯಲಿ. ಸ್ಥಳೀಯ ನೆಲೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿ. ಕೇಂದ್ರ ಸರ್ಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು(ಸೇನಾ ಭರ್ತಿ, ರೈಲ್ವೆ ನೇಮಕಾತಿ ಸೇರಿದಂತೆ) ಕನ್ನಡದವರು ಕನ್ನಡದಲ್ಲೇ ಬರೆಯಲು ಅವಕಾಶವಿರಬೇಕು.

ಎಲ್ಲಕ್ಕೂ ಮೊದಲು ಭಾರತೀಯ ಸಂವಿಧಾನವನ್ನು, ಭಾರತದ ಅಧಿಕೃತ ಭಾಷೆಗಳಲ್ಲಿ ರಚಿಸಬೇಕಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಕನ್ನಡದಲ್ಲೇ ವಾದ ಮಂಡಿಸುವಂತಾಗಬೇಕು. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಎಲ್ಲ ಇಲಾಖೆಗಳ ವ್ಯವಹಾರ ಹಿಂದಿಯಲ್ಲಿ ನಡೆಯಲಿ. ಎಂದಿನಂತೆ ಸ್ಥಳೀಯ ನೆಲೆಗಳಿಗೆ ಆದ್ಯತೆ ಇರಬೇಕು.

ಸದ್ಯದ ಪರಿಸ್ಥಿತಿಯಲ್ಲಿ ನಮ್ಮೆಲ್ಲ ಸ್ಥಳೀಯ ಭಾಷೆಗಳನ್ನು ಎಲ್ಲ ಜ್ಞಾನ ಶಿಸ್ತುಗಳಿಗೆ ಸಿದ್ಧಗೊಳಿಸಬೇಕಿದೆ. ಅಂದರೆ ಇಂಗ್ಲಿಷ್‌ನಲ್ಲಿರುವ ಗ್ರಂಥ ಭಂಡಾರವನ್ನು ಕನ್ನಡದ ಜಾಯಮಾನಕ್ಕೆ ತಕ್ಕಂತೆ ಭಾಷಾಂತರಿಸಿಕೊಳ್ಳಬೇಕಿದೆ. ನಮ್ಮ ಭಾಷೆಗಳಲ್ಲೇ ವಿಜ್ಞಾನ-ತಂತ್ರಜ್ಞಾನಗಳೂ ಸೇರಿಂತೆ ಎಲ್ಲ ಸಂಶೋಧನೆಗಳು ನಡೆಯಬೇಕಿದೆ. ಅದಕ್ಕೆ ಸಮಾನಾಂತರವಾಗಿ ಎಲ್ಲ ಹಂತಗಳಲ್ಲೂ ಕನ್ನಡ ಮಾಧ್ಯಮವನ್ನು ಜಾರಿಗೊಳಿಸಬೇಕು. ಮಾತ್ರವಲ್ಲ ಜಗತ್ತಿನ ಇತರ ಭಾಷೆಗಳಲ್ಲಿರುವ ಜ್ಞಾನ ಭಂಡಾರವನ್ನೂ ನಮ್ಮ ಭಾಷೆಯ ಕಣಜಕ್ಕೆ ತರಬೇಕಿದೆ. ಅದಕ್ಕಾಗಿ ಜಗತ್ತಿನಲ್ಲಿ ಬೆಳೆದಿರುವ ಎಲ್ಲ ಭಾಷೆಗಳನ್ನೂ ನಾವು ಐಚ್ಛಿಕವಾಗಿ ಕಲಿತರೆ ತಪ್ಪೇನಿಲ್ಲ. ಆಗ ಮಾತ್ರ ನಮ್ಮ ಇಡೀ ಬದುಕು-ಪರಂಪರೆಗಳು ಜಾಗತಿಕವಾಗುತ್ತವೆ.

ದೇಶೀಯ ಭಾಷೆಗಳ ಶಿಕ್ಷಣ ಮಾಧ್ಯಮವು ಬಾಲೋದ್ಯಾನದಿಂದ ಹಿಡಿದು ಎಲ್ಲ ಹಂತಗಳವರೆಗೂ ಹರಡಿಕೊಳ್ಳುವಂತೆ ಮಾಡಬೇಕಿದೆ. ಆಗಷ್ಟೇ ನಾವೆಲ್ಲರೂ ಸಮೃದ್ಧ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕಟ್ಟಿಕೊಡಲು ಸಾಧ್ಯವಾದೀತು. ಇಲ್ಲವಾದರೆ ಮುಂದಿನ ಜನಾಂಗವನ್ನು ಅಶಕ್ತ ಮತ್ತು ಅನಾಥರನ್ನಾಗಿ ಮಾಡಿದ ಪಾಪಕ್ಕೆ ಗುರಿಯಾಗುತ್ತೇವೆ. ಎಲ್ಲ ವಿಧದಲ್ಲೂ ನಮ್ಮ ಭಾಷೆಯನ್ನು ಉಳಿಸಿಕೊಳ್ಳಬೇಕು. ಆಗಷ್ಟೇ ಬಹುರಾಷ್ಟ್ರೀಯ ಕಂಪನಿಗಳ ಕಪಿಮುಷ್ಠಿಯಿಂದ ಹೊರಬರುತ್ತೇವೆ. ಮಾತ್ರವಲ್ಲ, ಅವುಗಳು ನಮ್ಮ ಸಂಸ್ಕೃತಿಯನ್ನು ಪಾಲಿಸಲು ಮುಂದಾಗುತ್ತವೆ. ಸ್ವಭಾಷೆ-ಸ್ವರಾಜ್ಯದ ನಿಜವಾದ ಅರ್ಥ ಹೊರಹೊಮ್ಮಿದಾಗಲೇ ಪ್ರಜಾತಂತ್ರ ಪೂರ್ಣವಾಗಿ ಸ್ಥಾಪಿತವಾಗುತ್ತದೆ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಿದೆ.

ನಮ್ಮ ದೇಶದ ಶಿಕ್ಷಣ ಸಂಸ್ಥೆಗಳು ವಿದೇಶೀ ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವ ಪ್ರಥಮೋದ್ದೇಶದಿಂದ ಜನ್ಮವೆತ್ತಂತಿದೆ. ಅದರೊಟ್ಟಿಗೆ ಅವರಿಂದ ಅತಿಯಾದ ಹಣಸಂಗ್ರಹ ಮಾಡುವ ನೀಚ ಕೆಲಸಕ್ಕೂ ಇಳಿದಿವೆ. ಒಟ್ಟಿನಲ್ಲಿ ವಿದ್ಯೆಯನ್ನೇ ಮಾರಾಟಕ್ಕಿಟ್ಟಿವೆ. ಸರಕು ಸಂಸ್ಕೃತಿ ಇಡೀ ಮಾನವ ಸಂಬಂಧಗಳ ಮೂಲಸೆಲೆಯನ್ನು ನಾಶಮಾಡಹೊರಟಿದೆ. ಇದನ್ನು ತಡೆಯುವ ಗುರುತರ ಜವಾಬ್ದಾರಿ ದೇಶದ ಪ್ರತಿಯಾಬ್ಬ ನಾಗರಿಕನ ಮೇಲಿದೆ.

ಪರಿಸರದ ಭಾಷೆ, ಬದುಕನ್ನು ಸರಳೀಕರಿಸುವುದರ ಜೊತೆಗೆ ಸಮೃದ್ಧಗೊಳಿಸುತ್ತದೆ, ಸೃಜನಶೀಲರನ್ನಾಗಿಸುತ್ತದೆ. ಮಗು ಜ್ಞಾನವನ್ನು ನಿರಾಯಾಸವಾಗಿ ಸಂಪಾದಿಸಿ, ಸಮರ್ಥ ಬದುಕನ್ನು ನಡೆಸುತ್ತದೆ. ಪರಿಸರದ್ದಲ್ಲದ ಭಾಷೆಯಿಂದ ಇದು ಸಾಧ್ಯವಿಲ್ಲ. ಅದರಿಂದ ಮಗುವಿನ ಮನಸ್ಸಿನ ಮೇಲೆ ಅನಾವಶ್ಯಕ ಭಾರಹಾಕಿದಂತಾಗಿ, ಸಹಜವಾಗಿ ಅರಳಿ ನಳನಳಿಸಬೇಕಾದ ಹೂವನ್ನು ಬಲವಂತದಿಂದ ಅರಳಿಸಲು ಹೋಗಿ ಹೊಸಕಿ ಹಾಕಿದಂತಹ ಪಾಪ ಮಾಡಿದಂತಾಗುತ್ತದೆ. ಇದು ಶತಶತಮಾನಗಳಿಂದ ಜಗತ್ತಿನ ಎಲ್ಲ ಶಿಕ್ಷಣ ತಜ್ಞರೂ ಸಿದ್ಧಪಡಿಸುತ್ತ ಬಂದಿರುವ ಸತ್ಯ.

ಸದ್ಯದ ಪರಿಸ್ಥಿತಿಯಲ್ಲಿ ತುರ್ತಾಗಿ ಭಾರತದ ಶೈಕ್ಷಣಿಕ ವ್ಯವಸ್ಥೆ ಆಮೂಲಾಗ್ರವಾಗಿ ಬದಲಾಗಬೇಕಿದೆ. ಬಾಲೋದ್ಯಾನದಿಂದ ಹಿಡಿದು ಸ್ನಾತಕೋತ್ತರ ಮತ್ತು ಸಂಶೋಧನಾ ಶಿಕ್ಷಣ ಸೇರಿದಂತೆ ಎಲ್ಲ ಶೈಕ್ಷಣಿಕ ಮಜಲುಗಳು, ಕೇವಲ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ನಡೆಯುವಂತೆ ಮಾಡಬೇಕು. ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣಗಳಲ್ಲಿ ಮಾತ್ರ, ಇಂಗ್ಲಿಷನ್ನು ಐಚ್ಛಿಕ ಮಾಧ್ಯಮವನ್ನಾಗಿ ಮಾಡಬಹುದು. ಇದರಿಂದ ಒಂದು ರಾಜ್ಯದ ವಿದ್ಯಾರ್ಥಿ ಇನ್ನೊಂದು ರಾಜ್ಯಕ್ಕೆ ಅಥವಾ ಒಂದು ದೇಶದ ವಿದ್ಯಾರ್ಥಿ ಇನ್ನೊಂದು ದೇಶಕ್ಕೆ(ಈ ಬಗೆಯ ವಿದ್ಯಾರ್ಥಿಗಳ ಸಂಖ್ಯೆ ಅಲ್ಪ ಪ್ರಮಾಣದಲ್ಲಿರುತ್ತದೆ, ಅಲ್ಪ ಪ್ರಮಾಣದಲ್ಲಿರಬೇಕು ಕೂಡ, ಅಂದರೆ ಇಂತಹ ವಿದ್ಯಾರ್ಥಿಗಳಿಗೆ ಕಡಿಮೆ ಸಂಖ್ಯೆಯ ಸೀಟುಗಳನ್ನು ನೀಡಬೇಕು, ಅದಕ್ಕಾಗಿ ಕಾನೂನೊಂದನ್ನು ರೂಪಿಸಬೇಕು) ಓದಲು ಬಂದಾಗ ಆಯ್ಕೆಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಆದರೆ ಎರಡೂ ಮಾಧ್ಯಮಗಳ ವಿದ್ಯಾರ್ಥಿಗಳು ಒಂದೇ ತರಗತಿಯಲ್ಲಿ ಒಟ್ಟಿಗೆ ಕುಳಿತು ಪಾಠ ಕೇಳಬೇಕು. ಶಿಕ್ಷಕರು ಮೊದಲು ಪ್ರಾದೇಶಿಕ ಭಾಷೆಯಲ್ಲೇ ಪಾಠ ಮಾಡಬೇಕು. ಆನಂತರ ಔಚಿತ್ಯಾನುಸಾರ ಇಂಗ್ಲಿಷ್‌ನಲ್ಲಿ ಹೇಳಬೇಕು. ಸ್ಥಳೀಯ ವಿದ್ಯಾರ್ಥಿಗಳು ಮಾತ್ರ ಕಡ್ಡಾಯವಾಗಿ ಸ್ಥಳೀಯ ಭಾಷೆಯಲ್ಲಿಯೇ ಓದಬೇಕು.

ಇಂತಹ ಸ್ಪಷ್ಟವಾದ ನಿಲುವು ಮಾತ್ರ ನಮ್ಮನ್ನು, ನಮ್ಮತನವನ್ನು ಉಳಿಸೀತು. ಇಲ್ಲವಾದರೆ ಗಂಧವಿಲ್ಲದ ಗಾಳಿಯಂತೆ, ಪರಿಮಳವಿಲ್ಲದ ಹೂವಿನಂತೆ, ಸಹಜವಾದ ಹೂವಿನ ಬದಲಿಗೆ ಶೋಕೇಸಿನಲ್ಲಿಟ್ಟ ಪ್ಲಾಸ್ಟಿಕ್‌ ಹೂವಿನಂತೆ, ನಮ್ಮತನವಿಲ್ಲದ ನಾವು ಮಾತ್ರ ಉಳಿಯಬೇಕಾದೀತು... ಜೀವವಿಲ್ಲದ ದೇಹದಂತೆ...!!!

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X