• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ನಾನಿದ್ದೀನಿ ಎಚ್ಚರಿಕೆ’ : ಟಿ.ಎಸ್‌.ನಾಗಾಭರಣ

By Staff
|
 • ಶಾಲಿನಿ ಹೂಲಿ

shalini.s@greynium.com

An interview with noted director T.S.Nagabharanaಎಪ್ಪತ್ತೆೈದು ವರ್ಷಗಳ ಅಪೂರ್ವ ಇತಿಹಾಸ ಹೊಂದಿದ ಕನ್ನಡ ಚಿತ್ರರಂಗವು ಇಂದು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಗುಣಾತ್ಮಕ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. ನಿರ್ಮಾಣ, ನಟನೆ ಹಾಗೂ ನಿರ್ದೇಶನ ಕ್ಷೇತ್ರದಲ್ಲಿ ಅತ್ಯಂತ ಶ್ರದ್ಧೆಯಿಂದ ದುಡಿದ ಅನೇಕ ಮಹನೀಯರು ಈ ಕ್ಷೇತ್ರಕ್ಕೆ ಒಂದು ಮಹತ್ವಪೂರ್ಣ ಗೌರವವನ್ನು ತಂದುಕೊಟ್ಟಿದ್ದಾರೆ. ಈ ನಡುವೆ ಸೃಜನಾತ್ಮಕ ಪ್ರಯೋಗಗಳನ್ನು ನಿರಂತರವಾಗಿ ನೀಡುತ್ತಾ ಬಂದಿರುವ ನಿರ್ದೇಶಕರ ಸಾಲಿನಲ್ಲಿ ಎದ್ದು ಕಾಣುವ ಹೆಸರು ಟಿ.ಎಸ್‌.ನಾಗಾಭರಣ ಅವರದು.

ಪ್ರಯೋಗಶೀಲತೆಗೆ ನಾಗಾಭರಣ ಸದಾ ಮಿಡಿಯುತ್ತಿರುತ್ತಾರೆ. ಕಲಾತ್ಮಕ ಚಿತ್ರಗಳಿಂದ ಹಿಡಿದು ಮನರಂಜನಾತ್ಮಕ ಚಿತ್ರಗಳವರೆಗೆ ನಾಗಾಭರಣ ಏರಿದ ಎತ್ತರ ಗಮನೀಯ. ಹಿರಿತೆರೆಯಲ್ಲಿ ಮಾತ್ರವಲ್ಲದೇ ಕಿರುತೆರೆ ಹಾಗೂ ರಂಗಭೂಮಿಯಲ್ಲೂ ನಾಗಾಭರಣ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ವಿಜ್ಞಾನ ಮತ್ತು ಕಾನೂನು ಪದವೀಧರರಾದ ನಾಗಾಭರಣ ಶಾಲಾ-ಕಾಲೇಜುಗಳಲ್ಲಿದ್ದಾಗಲೇ ರಂಗಭೂಮಿಯ ನೆಂಟಸ್ತಿಕೆ ಬೆಳೆಸಿ ಕೊಂಡಿದ್ದರು. ಅನಂತರವೂ ಅವರು ಬೆನಕ, ರಂಗಸಂಪದ ಮುಂತಾದ ತಂಡಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

An interview with noted director T.S.Nagabharanaರಂಗತಜ್ಞರಾದ ಬಿ.ವಿ.ಕಾರಂತ ಹಾಗೂ ಗಿರೀಶ ಕಾರ್ನಾಡ್‌ರೊಂದಿಗೆ ಅನೇಕ ಪ್ರಮುಖ ನಾಟಕಗಳನ್ನು ನಾಗಾಭರಣ ನಿರ್ದೇಶಿಸಿದ್ದಾರೆ. ಅವರು ನಟಿಸಿ ನಿರ್ದೇಶಿಸಿದ ಸಂಗ್ಯಾಬಾಳ್ಯ, ಕತ್ತಲೆಬೆಳಕು, ಜೋಕುಮಾರಸ್ವಾಮಿ ನಾಟಕಗಳು ರಂಗಾಸಕ್ತರ ಮನದಲ್ಲಿ ಸಂಚಲನವನ್ನುಂಟು ಮಾಡಿವೆ.

ಮಕ್ಕಳ ಚಿತ್ರಗಳ ಬಗ್ಗೆ ಎಲ್ಲರೂ ಮೂಗು ಮುರಿಯುತ್ತಿದ್ದರೆ, ಮಕ್ಕಳ ನಾಟಕ-ಸಿನಿಮಾ ಎಂದು ಭರಣ ತಲೆಯಲ್ಲಿ ತುಂಬಿಕೊಂಡಿದ್ದಾರೆ. ಬೆನಕ ಮಕ್ಕಳ ತಂಡದ ಸಂಸ್ಥಾಪಕರಾಗಿರುವ ಅವರು, ಸೀಫೆಜ್‌( ಇಂಟರ್‌ ನ್ಯಾಷನಲ್‌ ಸೆಂಟರ್‌ ಆಫ್‌ಫಿಲ್ಮ್‌ ಫಾರ್‌ಚಿಲ್ಡ್ರನ್‌ ಅಂಡ್‌ಯುಂಗ್‌ ಪೀಪಲ್ಸ್‌)ನ ಸದಸ್ಯರಾಗಿದ್ದಾರೆ.

ಅಭಿನಯ ನಿರ್ದೇಶನ ಇಷ್ಟು ಮಾತ್ರವಲ್ಲದೇ ನಾಗಾಭರಣರಿಗೆ ಸಂಗೀತ, ಅದರಲ್ಲೂ ಶಾಸ್ತ್ರೀಯ ಸಂಗೀತ ಗೊತ್ತು ಅನ್ನೋ ಸಂಗತಿ ಬಹುಮಂದಿಗೆ ಗೊತ್ತಿಲ್ಲ. ಶೇಷಾದ್ರಿ ಗವಾಯಿಗಳಲ್ಲಿ ಹಿಂದೂಸ್ತಾನಿ ಸಂಗೀತವನ್ನು ಅವರು ಅಭ್ಯಾಸ ಮಾಡಿದ್ದಾರೆ.

Nagini Bharanaರಂಗಭೂಮಿಯಿಂದ ಚಿತ್ರರಂಗದತ್ತ ವಾಲಿದ ನಾಗಾಭರಣ, 1978ರಲ್ಲಿ ಮೊದಲು ನಿರ್ದೇಶಿಸಿದ ಚಿತ್ರ-ಗ್ರಹಣ. ಪ್ರಥಮ ಚಿತ್ರವೇ ರಾಷ್ಟ್ರಪ್ರಶಸ್ತಿಯ ರುಚಿ ತೋರಿಸಿತು. ಜೊತೆಗೆ ಪ್ರತಿಭೆಗೆ ಸಾಕ್ಷಿಯಾಯಿತು. ಅನಂತರ ಆಸ್ಫೋಟ, ಮೈಸೂರು ಮಲ್ಲಿಗೆ, ಜನುಮದ ಜೋಡಿ, ನಾಗಮಂಡಲ ಸೇರಿದಂತೆ ನಿರ್ದೇಶಿಸಿದ 25 ಚಿತ್ರಗಳಲ್ಲಿ 11 ಚಿತ್ರಗಳಿಗೆ ರಾಷ್ಟ್ರ ಮತ್ತು ರಾಜ್ಯಪ್ರಶಸ್ತಿಗಳು ನಾಗಾಭರಣ ಅವರಿಗೆ ಸಂದಿವೆ.

ಭರಣರವರ ಯಶಸ್ಸಿನ ಹಿಂದಿನ ಕೈ ಅವರ ಪತ್ನಿ ನಾಗಿಣಿಭರಣ ಅವರದು. ಅಲ್ಲದೇ ಮಕ್ಕಳಾದ ಶೃತಾ, ಪನ್ನಗರ ಅಪ್ಪನಿಗೆ ಸಹಕಾರ ನೀಡುತ್ತಿದ್ದಾರಂತೆ. ‘ದಟ್ಸ್‌ ಕನ್ನಡ’ ದೊಡನೆ ಮುಕ್ತವಾಗಿ ಮಾತನಾಡಿರುವ ನಾಗಾಭರಣ, ಕನ್ನಡ ಚಿತ್ರರಂಗದ ಸ್ಥಿತಿಗತಿ ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೂ ನಮ್ಮ ಮಾತುಕತೆಗೆ ನೀವು ಸೇರಿಕೊಳ್ಳಿ...

 • ಕನ್ನಡ ಚಿತ್ರರಂಗ ಸೊರಗಲು ಕಾರಣವೇನು ?

ಕನ್ನಡ ಚಿತ್ರರಂಗ ಪ್ರಸ್ತುತ ಸೊರಗುತ್ತಿದೆ. ನಮ್ಮ ಚಿತ್ರರಂಗದ ವ್ಯಾಪ್ತಿ ಮತ್ತು ಮಾರುಕಟ್ಟೆಯ ಕುರಿತಾದ ಅಜ್ಞಾನವೇ ಇದಕ್ಕೆ ಕಾರಣ. ಅಲ್ಲದೇ ಕಡಿಮೆ ಬಜೆಟ್‌ ಚಿತ್ರಗಳು ಕನ್ನಡ ಚಿತ್ರರಂಗದ ಗುಣಮಟ್ಟವನ್ನು ಕುಗ್ಗಿಸಿದೆ. ಚಿತ್ರರಂಗಕ್ಕೆ ಬರುವ ಹೊಸ ನಿರ್ದೇಶಕ, ನಿರ್ಮಾಪಕರಿಗೆ ಮಾರುಕಟ್ಟೆಯ ಬಗ್ಗೆ ಪಕ್ವವಾದ ಜ್ಞಾನವಿರುವುದಿಲ್ಲ. ತಾವು ನಿರ್ಮಿಸಿದ ಹೊಸ ಚಿತ್ರವನ್ನು ಯಾರಿಗೆ ಕೊಡಬೇಕು, ಎಲ್ಲಿ ಮುಟ್ಟಿಸಬೇಕು ಎನ್ನುವ ಅರಿವಿರುವುದಿಲ್ಲ.

ಮೊದಲು ಕನ್ನಡಚಿತ್ರ ಬಿಡುಗಡೆಯಾದಾಗ ಚಿತ್ರವನ್ನು ಪ್ರತಿಜಿಲ್ಲೆ ಹಾಗೂ ತಾಲೂಕಿನ ಮೂಲೆಮೂಲೆಗೆ ಮುಟ್ಟಿಸುವ ಕೆಲಸವನ್ನು ಚಿತ್ರವಿತರಕ ಮಾಡುತ್ತಿದ್ದ. ಆದರೆ ಇಂದಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಸಿದ್ಧಗೊಂಡ ಹೊಸ ಚಿತ್ರವನ್ನು ನಿರ್ಮಾಪಕ ನೇರವಾಗಿ ಮಾರುಕಟ್ಟೆಗೆ ತಲುಪಿಸುತ್ತಾನೆ. ಈ ರೀತಿ ಮಾಡುವುದರಿಂದ ತನಗೆ ಪರಿಚಯವಿರುವ ನಾಲ್ಕೈದು ಚಿತ್ರಮಂದಿರಕ್ಕೆ ಮಾತ್ರ ಆತ ಮುಟ್ಟಿಸಬಹುದೇ ವಿನಃ ರಾಜ್ಯದ ಎಲ್ಲಾ ಮೂಲೆಗಳಿಗೆ ತಲುಪಿಸಲು ಸಾಧ್ಯವಿಲ್ಲ. ಚಿತ್ರಮಂದಿರಗಳ ಮೇಲೆ ಒತ್ತಡ ಹಾಕುವ ವಾತಾವರಣ ಸಹಾ ನಿರ್ಮಾಣಗೊಂಡಿದೆ.

 • ಕನ್ನಡ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಅರಿವಿದ್ದರೂ ಕೂಡಾ, ಈ ಕ್ಷೇತ್ರದಲ್ಲಿರುವವರು ಪ್ರತಿಸ್ಪಂದಿಸುತ್ತಿಲ್ಲ ಏಕೆ?

ಕಾರಣ ಒಂದೇ ರೀತಿಯಲ್ಲಿ ಇಲ್ಲ. ಚಿತ್ರರಂಗದ ಸಮಸ್ಯೆಬಗೆಹರಿಸಲು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿದೆ. ಹೆಸರಿಗಷ್ಟೆ ಮಂಡಳಿಯಿದ್ದು, ಸಮಸ್ಯೆ ಎದುರಾದಾಗ ಅಲ್ಲಿನ ಸದಸ್ಯರು ಸ್ಪಂದಿಸುವುದಿಲ್ಲ. ಸಮಸ್ಯೆಗಳು ಸಾಗರದಷ್ಟು ಇದ್ದಾಗ, ಕೇವಲ ಒಬ್ಬಿಬ್ಬರು ಏನು ಮಾಡಲು ಸಾಧ್ಯ? ಸಾಮೂಹಿಕ ಸಹಕಾರ ಅತ್ಯಗತ್ಯ. ದುರಂತವೆಂದರೇ ಅದಿಲ್ಲಿ ಕಣ್ಮರೆಯಾಗಿದೆ.

 • ಹಿಂದಿಯಲ್ಲಿ ಬಂದ ‘ಸ್ವದೇಶ್‌’, ನಿಮ್ಮ ‘ಚಿಗುರಿದ ಕನಸು’ ಚಿತ್ರದ ರಿಮೇಕ್‌ ಎಂಬ ಸುದ್ದಿಯಿದೆ. ನಿಜವಾಗಿದ್ರೆ ನೀವು ಸುಮ್ಮನಿದ್ದದ್ದು ಏಕೆ?

ಹೌದು. ಸ್ವದೇಶ್‌ಚಿತ್ರ ಚಿಗುರಿದ ಕನಸು ಚಿತ್ರದ ರಿಮೇಕ್‌ ಎನ್ನುವಲ್ಲಿ ಅನುಮಾನವಿಲ್ಲ. ಅದರ ನಿರ್ದೇಶಕರ ಜೊತೆ ಈ ಕುರಿತು ಮಾತಾಡಿದೆ. ಅವರು, ನನ್ನ ಚಿತ್ರದ ಕಥೆಗಾರ ಕತೆ ಹೇಳಿದಾಗ ನನಗೆ ಇಷ್ಟವಾಯಿತು. ಚಿತ್ರ ತೆಗೆದೆ. ಈ ಬಗ್ಗೆ ಲೇಖಕರನ್ನು ಕೇಳಿ ಎಂದು ಜಾರಿಕೊಂಡರು. ಸ್ವದೇಶ್‌ ಚಿತ್ರದ ಕಥೆಗಾರ, ‘ಇದು ನನ್ನ ಸ್ವಂತದ ಕತೆ’ ಎಂದರು.

ನಾನು ಈ ವಿಚಾರದಲ್ಲಿ ಅಸಹಾಯಕನಾದೆ. ಈ ಪ್ರಶ್ನೆ ಕೇವಲ ಒಬ್ಬ ನಿರ್ದೇಶಕನಿಂದ ಬಂದರೆ ಸಾಲದು, ಅದಕ್ಕೆ ಚಿತ್ರರಂಗದ ಬೆಂಬಲ ಅತ್ಯಗತ್ಯ. ಆ ಸಹಕಾರ ದಕ್ಕದ ಕಾರಣ ನಾನು ಸುಮ್ಮನಾದೆ...

 • ಕನ್ನಡ ಚಿತ್ರರಂಗದಲ್ಲಿ ರಿಮೇಕ್‌ ಹಾವಳಿ ಹೆಚ್ಚಾಗುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?

ಕನ್ನಡದಲ್ಲಿ ರಿಮೇಕ್‌ ಕಳ್ಳರಿಗೇನೂ ಕಮ್ಮಿ ಇಲ್ಲ. ಕನ್ನಡ ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು ತುಂಬಾ ಬುದ್ಧಿವಂತರು...ಏಕೆ ಗೊತ್ತಾ ? ರಿಮೇಕ್‌ ಮಾಡುವಾಗ ಕೇವಲ ಒಂದೇ ಚಿತ್ರದಿಂದ ಕದಿಯುವುದಿಲ್ಲ. ಒಂದೊಂದು ಚಿತ್ರದಲ್ಲಿ ಒಂದೊಂದು ದೃಶ್ಯಗಳನ್ನು ಎತ್ತಿಕೊಂಡು ರಿಮೇಕ್‌ ಮಾಡ್ತಾರೆ. ಚಿತ್ರ ರಿಮೇಕ್‌ ಎನ್ನುವುದಕ್ಕೆ ಸಾಕ್ಷಿ ಇಲ್ಲದಂತೆ ಚಾಣಾಕ್ಷತೆಯಿಂದ ಚಿತ್ರ ತೆಗೆದು ಬಿಡುತ್ತಾರೆ. ಇತ್ತೀಚಿನ ನಾಯಕರುಗಳು ಕೂಡಾ ರಿಮೇಕ್‌ ಚಿತ್ರಕ್ಕೆ ಜೈಜೈ ಅನ್ತಾಯಿದ್ದಾರೆ.

 • ಹೊಸ ಪ್ರತಿಭೆಗಳ ಅನ್ವೇಷಣೆಯ ನೆಪದಲ್ಲಿ ನಿರ್ದೇಶಕರು ಹಳೇ ಕಲಾವಿದರನ್ನು ಮರೆಯೋದು ಸರಿಯೇ?

ಖಂಡಿತಾ ಸರಿಯಲ್ಲ... ನನ್ನ ಚಿತ್ರದಲ್ಲಿ ಹಳೆಯ ಕಲಾವಿದರಿಗೆ ಅವಕಾಶ ಕೊಟ್ಟಿದ್ದೀನಿ ಮತ್ತು ಕೊಡುತ್ತಾ ಬಂದಿದ್ದೀನಿ... ಆದರೆ ಕೆಲವೊಮ್ಮೆ ನಮ್ಮ ಚಿತ್ರಕಥೆಗೆ ಬೇಕಾಗುವ ಅಭಿನಯ, ನಮ್ಮ ಹಳೆಯ ನಟರಲ್ಲಿ ಸಿಗೋದಿಲ್ಲ. ಆಗ ಹೊಸ ಪ್ರತಿಭೆಯ ಅನ್ವೇಷಣೆ ಅನಿವಾರ್ಯವಾಗುತ್ತೆ.

 • ‘ಚಿನ್ನಾರಿ ಮುತ್ತಾ ’ ಮಕ್ಕಳ ಚಿತ್ರ ಬಿಡುಗಡೆಯಾದಾಗ, ವರ್ಷಕ್ಕೆ ಒಂದಾದರೂ ಮಕ್ಕಳ ಚಿತ್ರ ನಿರ್ದೇಶಿಸುವುದಾಗಿ ಹೇಳಿದ್ರಿ...ಇದು ಕೇವಲ ಹೇಳಿಕೆಯಲ್ಲಿಯೇ ಉಳಿದಿದೆ ಏಕೆ ?

‘ಚಿನ್ನಾರಿ ಮುತ್ತಾ ’ಚಿತ್ರ ನೀವು ಅಂದುಕೊಂಡ ಹಾಗೆ ಯಶಸ್ಸೇನು ಕಾಣಲಿಲ್ಲ. ಈ ಚಿತ್ರದಿಂದ 4ಲಕ್ಷ ರೂಪಾಯಿ ನಷ್ಟ ಅನುಭವಿಸಬೇಕಾಯಿತು. ಲಾಭವನ್ನೇ ನಿರೀಕ್ಷೆ ಮಾಡುವ ನಿರ್ಮಾಪಕ ನಷ್ಟವನ್ನೇಕೆ ಬಯಸ್ತಾನೆ ಹೇಳಿ? ಹಾಗಾಗಿ ಯಾವ ನಿರ್ಮಾಪಕ ಮಕ್ಕಳ ಚಿತ್ರಕ್ಕೆ ಬಂಡವಾಳ ಹೂಡಲು ಬರಲಿಲ್ಲ. ಆದರೂ ನಾನು ಪ್ರಯತ್ನ ಬಿಡದೇ ‘ನಾವಿದ್ದೀವಿ ಎಚ್ಚರಿಕೆ’ ಎಂಬ ಮತ್ತೊಂದು ಮಕ್ಕಳ ಚಿತ್ರ ತೆಗೆದೆ... ಆದರೆ ಅದು ತೆರೆಗೆ ಬರಲೇ ಇಲ್ಲ...

 • ನಿಮ್ಮ ‘ಮಹಾಮಾಯಿ’ ಧಾರಾವಾಹಿ ವಾಸ್ತವಕ್ಕೆ ದೂರವಾಗಿದೆ. ಇಂತಹ ಧಾರಾವಾಹಿಗಳು ಬೇಕೆ?

‘ಮಹಾಮಾಯಿ’ ಧಾರಾವಾಹಿಯ ಮುಖ್ಯ ಉದ್ದೇಶ ಪ್ರೇಕ್ಷಕನಿಗೆ ಮನರಂಜನೆ ನೀಡುವುದು. ಪ್ರತಿ ಧಾರಾವಾಹಿಯಲ್ಲಿಯೂ ವಾಸ್ತವಿಕತೆ ಯಾಕೆ ಬಯಸ್ತೀರಾ? ಈ ಧಾರವಾಹಿಯನ್ನು ಎಷ್ಟೋ ಜನ ಇಷ್ಟಪಟ್ಟು ಮೆಚ್ಚಿದ್ದಾರೆ. ನಾನು ನಿರ್ದೇಶಿಸಿದ ಸಂಕ್ರಾಂತಿ, ಗೆಳತಿ ವಿಭಿನ್ನ ಕತೆಗಳನ್ನು ಒಳಗೊಂಡಿತ್ತು. ಅದೇ ರೀತಿಯ ಕತೆಯನ್ನೇ ಮತ್ತೆ ಮತ್ತೆ ತೆಗೆದರೇ ಪ್ರೇಕ್ಷಕನಿಗೆ ಬೇಸರವಾಗೋದಿಲ್ಲವೇ? ಅದಕ್ಕಾಗಿಯೇ ಮಹಾಮಾಯಿಯಲ್ಲಿ ಗ್ರಾಫಿಕ್‌ನೆಲ್ಲಾ ಬಳಸಿ, ಪ್ರೇಕ್ಷಕರ ಮನರಂಜಿಸಿದ್ದರೆ ತಪ್ಪೇನು? ಕನ್ನಡದ ಬೇರೆ ಯಾವ ನಿರ್ದೇಶಕರು ಮೊದಲೆಲ್ಲಾದರೂ ಗ್ರಾಫಿಕ್‌ ಬಳಕೆಯ ಧಾರಾವಾಹಿ ನೀಡಿದ್ದಾರೆಯೇ ?

 • ನಿಮ್ಮ ಮಕ್ಕಳನ್ನು ಏಕೆ ಚಿತ್ರರಂಗಕ್ಕೆ ಪರಿಚಯಿಸಲಿಲ್ಲ ?

ನನ್ನ ಮಕ್ಕಳು ನಿಮಗೆ ತಿಳಿದಂತೆ ಚಿನ್ನಾರಿ ಮುತ್ತಾ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆಮೇಲೆ ಶಿಕ್ಷಣದತ್ತ ವಾಲಿದರು. ಮಗಳು ಶ್ರುತಾ ಬಿ.ಎ ಮುಗಿಸಿ, ಈಗ ಗಂಡನ ಮನೆಯಲ್ಲಿ ಹಾಯಾಗಿದ್ದಾಳೆ. ಇನ್ನು ಮಗ ಪನ್ನಗ್‌, ಗ್ರಾಫಿಕ್‌ ಡಿಸೈನಿಂಗ್‌ ಕೋರ್ಸ್‌ ಮಾಡ್ತಾಯಿದ್ದಾನೆ. ಅವನಿಗೆ ಅತ್ಯುತ್ತಮ ಛಾಯಾಗ್ರಾಹಕ ಆಗುವ ಬಯಕೆಯಿದೆ... ಮುಂದೆ ನೋಡೋಣ??

 • ನಿಮ್ಮ ಬಿಡುವಿನ ಸಮಯವನ್ನು ಹೇಗೆ ಕಳೆಯುತ್ತೀರಿ?

ನನಗೆ ಬಿಡುವು ಸಿಗುವುದು ತುಂಬಾ ಕಡಿಮೆ. ಸಿಕ್ಕಾಗ ಮನೆಯಲ್ಲಿಯೇ ಮಿನಿ ಗ್ರಂಥಾಲಯವಿದೆ. ನನ್ನ ಮುಂದಿನ ಚಿತ್ರಕ್ಕೆ ಸಂಬಂಧಪಟ್ಟಂತಹ ಕಥೆಗಳನ್ನು ಓದುತ್ತೇನೆ...ಹೀಗೆಯೇ ಹತ್ತಾರು ಕೆಲಸ...

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more