ಮುಂಬಯಿನಲ್ಲಿ ಕಲಿಯಲೇ ಬೇಕಿರುವ ಇನ್ನೊಂದು ಪಾಠ ಅಂದ್ರೆ..
ಮುಂಬಯಿ ಒಂದು ದ್ವೀಪ. ಎಲ್ಲ ಕಡೆಯೂ ನೀರು ಸುತ್ತುವರಿದು ಭೂಮಿಯ ಭಾಗ ಬಹಳ ಕಡಿಮೆ. ಹಾಗಾಗಿ ವಸತಿಗಾಗಿ ಸಿಗುವ ಜಾಗ ಬಹಳ ಕಡಿಮೆ. ಅಲ್ಲದೇ ಇದು ದೇಶದ ವಾಣಿಜ್ಯ ರಾಜಧಾನಿಯಾಗಿ ಇಲ್ಲಿ ವ್ಯಾಪಾರ ಮತ್ತು ವ್ಯವಹಾರಕ್ಕಾಗಿ ಬರುವ ಜನಗಳು ಬಹಳ. ದಿನಂಪ್ರತಿ ಒಂದು ಕೋಟಿಗೂ ಮಿಕ್ಕ ಜನಗಳ ಸಂದಣಿ ಇದ್ದೇ ಇರುತ್ತದೆ. ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಿಬರಲು ಲೋಕಲ್ ಟ್ರೈನ್‌ಗಳನ್ನೇ ನಂಬುಲಾಗುತ್ತದೆ. ಇದು ಮುಂಬೈನಲ್ಲಿ ಬಹಳ ಅವಶ್ಯವಾದ ಸಾರಿಗೆಯಾಗಿದೆ. ಒಂದು ಸಾವಿರ ಜನಗಳನ್ನು ಹೊತ್ತೊಯ್ಯಲು ಅವಕಾಶವಿರುವ ಒಂದು ಗಾಡಿಯು 5000 ದಿಂದ 6000 ಜನಗಳವರೆಗೂ ಹೊತ್ತೊಯ್ಯಬೇಕಾಗುವುದು. ಅದರಲ್ಲಿ ಅಷ್ಟು ಸಾಮರ್ಥ್ಯವಿದೆ. ಅದೂ ಬೆಳಗ್ಗೆ 3.45 ಕ್ಕೆ ಪ್ರಾರಂಭವಾಗುವ ಸೇವೆ ರಾತ್ರಿ 2 ಘಂಟೆಗಳವರೆಗೂ ನಿರಂತರ ಸಾಗುತ್ತಲೇ ಇರುವುದು. ಜನದಟ್ಟಣೆಯ ಸಮಯವಾದ ಬೆಳಗ್ಗೆ 6ರಿಂದ ರಾತ್ರಿ 11 ರವರೆಗೆ ಮೂರು ನಿಮಿಷಗಳ ಅಂತರದಲ್ಲಿ ಒಂದೊಂದು ಗಾಡಿಗಳು ಒಂದರ ಹಿಂದೊಂದರಂತೆ ಅಡ್ಡಾಡುತ್ತಲೇ ಇರುತ್ತದೆ.
ಚರ್ಚ ಗೇಟ್ ನಿಂದ ಬೊರಿವಿಲಿ ಮತ್ತು ಛತ್ರಪತಿ ಶಿವಾಜಿ ಟರ್ಮಿನಸ ನಿಂದ ಕಲ್ಯಾಣದವರೆವಿಗೆ ನಾಲ್ಕು ಹಳಿಗಳಿವೆ. ಎರಡೆರಡು ಫಾಸ್ಟ್ ಮತ್ತು ಸ್ಲೋ ಗಾಡಿಗಳಿಗೆ. ಅವುಗಳಲ್ಲಿ ಒಂದು ಹೋಗಲು ಮತ್ತೊಂದು ಬರಲು. ಹಾಗಾಗಿ ಗಾಡಿಗಳು ಒಂದಕ್ಕೊಂದು ಮಧ್ಯೆ ಬರುವ ಸಾಧ್ಯತೆ ಕಡಿಮೆ. ಫಾಸ್ಟ್ ನಿಂದ ಸ್ಲೋ ಟ್ರ್ಯಾಕ್ ಗೆ ಬದಲಿಸುವಾಗ ಮಾತ್ರ ಹಾಗೆ ಬರುವ ಸಾಧ್ಯತೆ ಇದೆ. ಮತ್ತೆ ಇಲ್ಲಿಯ ಸಿಗ್ನಲ್ ಪದ್ಧತಿಯಲ್ಲಿ ಹೆಚ್ಚಿನದಾಗಿ ಮಾನವ ಮಧ್ಯಸ್ಥಿಕೆ ಕಡಿಮೆ. ಎಲ್ಲವೂ ಆಟೋಮ್ಯಾಟಿಕ್. ಹೆಚ್ಚಿನ ಲೋಕಲ್ ಟ್ರೈನ್‌ಗಳಲ್ಲಿ 9 ಕೋಚ್‌ಗಳಿವೆ. ಇಲ್ಲಿಯ ಜನಸಂದಣಿ ಪ್ರತಿ ದಿನವೂ ಹೆಚ್ಚುತ್ತಿದ್ದು ಈ ಗಾಡಿಗಳು ಜನಗಳನ್ನು ಹೊತ್ತೊಯ್ಯಲು ಬಹಳ ಕಡಿಮೆ ಎನಿಸಿವೆ. ಹಾಗಾಗಿ ಕೆಲವು ಗಾಡಿಗಳಿಗೆ 9 ರಿಂದ 12 ಕೋಚ್‌ಗಳನ್ನು ಸೇರಿಸಿದ್ದಾರೆ. ಈ ಗಾಡಿಗಳನ್ನು ಮೂರು ಮೂರು ಕೋಚ್‌ಗಳ ಯೂನಿಟ್ ಆಗಿ ವಿಂಗಡಿಸಿದ್ದಾರೆ. ಎ, ಬಿ, ಸಿ ಎಂದು.
‘ಎ’ ನಲ್ಲಿ ಅರ್ಧ ಭಾಗ ಮೊದಲ ದರ್ಜೆ ಮತ್ತರ್ಧ ಎರಡನೇ ದರ್ಜೆ.‘ ಬಿ’ ಕೋಚ್‌ನ ಮೇಲ್ಭಾಗದಲ್ಲಿ ಪೆಂಟೋಗ್ರಾಫ್.‘ಸಿ’ ನಲ್ಲಿ ಮೋಟಾರ. ಹೀಗೆ 9 ಕೋಚ್ ಗಾಡಿಗಳಲ್ಲಿ ಮೂರು ಮೋಟಾರ ಮತ್ತು 12 ಕೋಚ್‌ಗಳಲ್ಲಿ 4 ಮೋಟಾರಗಳು. ಪೆಂಟೋಗ್ರಾಫ ಅಂದ್ರೆ ಆರು ಮೂಲೆಯ ಕಬ್ಬಿಣದ ಕಡ್ಡಿ ಮೇಲ್ಗಡೆ ಹಾಯುವ ವಿದ್ಯುತ್ ತಂತಿಗೆ ತಗುಲಿಕೊಂಡಿರುತ್ತದೆ. ಇಲ್ಲಿ ಇದಕ್ಕಾಗಿಯೇ ವಿಶೇಷವಾಗಿ ವಿದ್ಯುತ್ ಸರಬರಾಜಿನ ವ್ಯವಸ್ಥೆ ಮಾಡಿದ್ದಾರೆ. ವಿದ್ಯುತ್ ಕಡಿತ ಆಗುವ ಸಾಧ್ಯತೆಗಳು ಬಹಳ ಕಡಿಮೆ.
ಇತ್ತೀಚೆಗೆ ಜನದಟ್ಟಣೆ ಜಾಸ್ತಿಯಾಗಿ ರೈಲ್ವೆ ಸಾರಿಗೆಯಲ್ಲಿ ಸುಧಾರಣೆ ತರಲು ಜಪಾನಿನ ತಂತ್ರಜ್ಞರನ್ನು ಕರೆಸಿದ್ದರು. ಇಲ್ಲಿಯ ಸಿಗ್ನಲಿಂಗ್ ವ್ಯವಸ್ಥೆಯನ್ನು ಪರೀಕ್ಷಿಸಿದ ಆ ತಂತ್ರಜ್ಞರು- ನಮಗೆ ಹೆಚ್ಚಿಗೇನೂ ಹೊಳೆಯುತ್ತಿಲ್ಲ, ಇದಕ್ಕಿಂತ ಇನ್ನೇನೂ ಹೆಚ್ಚು ಸುಧಾರಣೆ ಮಾಡಲಾಗುವುದಿಲ್ಲ, ಇನ್ನೂ ನಾವೇ ಇದರಿಂದ ಕಲಿಯಬೇಕಿದೆ ಎಂದರಂತೆ. ಈ ಸಿಗ್ನಲಿಂಗ್ ವ್ಯವಸ್ಥೆಯನ್ನು ತಂದವರು ಬ್ರಿಟಿಷರು. ನೋಡಿ ಇಷ್ಟು ವರ್ಷಗಳಾದರೂ ಎಂದೂ ಕೆಡದೇ ನಿರಂತರವಾಗಿ ಕೆಲಸ ಮಾಡುತ್ತಿದೆ.
ಇನ್ನು ಲೋಕಲ್ ಸ್ಟೇಷನ್‌ಗಳ ಅಂತರ 1 ಕಿಲೋಮೀಟರ ನಿಂದ ಹಿಡಿದು 4-5 ಕಿಲೋಮೀಟರ ಗಳವರೆಗಿವೆ. ಪ್ರತಿ ಸ್ಟೇಷನ್‌ಗಳಲ್ಲೂ ಗಾಡಿ 15 ರಿಂದ 20 ಸೆಕೆಂಡಗಳಷ್ಟು ಕಾಲ ನಿಲ್ಲುವುದು. ಅಷ್ಟರೊಳಗೆ ಇಳಿಯುವವರು ಇಳಿದು ಹತ್ತುವವರು ಹತ್ತಬೇಕು. ಹತ್ತುವವರು ಬಾಗಿಲಿನ ಕೊನೆಗಳಲ್ಲೂ ಇಳಿಯುವವರು ಮಧ್ಯ ಭಾಗದಲ್ಲೂ ಇಳಿಯುವರು. ಮುದುಕರು, ಮಕ್ಕಳು, ಹುಡುಗರು, ಇತ್ಯಾದಿಗಳೆಲ್ಲರೂ ಈ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ. ಇಂತಹ ಸ್ಥಿತಿಯನ್ನು ನಮ್ಮೂರುಗಳಲ್ಲಿ ಕಾಣಬಹುದೇ?ನಿಲ್ದಾಣ ಬಂದ ಮೇಲೆ ಜಾಗ ಬಿಟ್ಟು ಮೇಲೇಳುವವರು ಇಷ್ಟು ಅಲ್ಪಾವಧಿಯಲ್ಲಿ ಇಳಿಯುವರೇ?
ಈ ಹಳಿಗಳ ಮೂಲಕ ಮುಂಬಯಿಯನ್ನು ಸೇರಿಸಿರುವುದು ನೋಡಿದರೆ ಮಾನವನ ದೇಹದಲ್ಲಿರುವ ನರ ನಾಡಿಗಳ ನೆನಪಾಗುವುದು. ಹಾಗೆಯೇ ರೈಲ್ವೇ ಸೇವೆ ನಿಂತು ಹೋದರೆ, ಇಡೀ ನಗರದ ಜನಜೀವನವು ನಿಂತು ಹೋಗುವುದು. ಹಾಗಾಗಿ ಇದನ್ನು ನಗರದ ನಾಡಿ ಎಂದು ಕರೆಯುವರು.
ಇನ್ನೂ ಈ ಲೋಕಲ್ ಟ್ರೈನ್ ಜನಗಳಿಗೆ ಜೀವನಾಧಾರ ಎಂಬುದೂ ಸತ್ಯದ ಮಾತು. ಒಬ್ಬ ಭಿಕ್ಷುಕ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಹೋಗುವುದರೊಳಗೆ, ರೂ. 300 ಸಂಪಾದಿಸಿರುತ್ತಾನೆ.‘ಮುಂಬಾ ಆಯಿ’ ಯಾರಿಗೇ ಆಗಲಿ ಜೀವನಕ್ಕೆ ಮಾತ್ರ ಮೋಸ ಮಾಡುವುದಿಲ್ಲ. ಅದಕ್ಕಾಗಿಯೇ ಇತರ ಸ್ಥಳಗಳಿಂದ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಸಮಯದಲ್ಲಿ ಸ್ಥಳೀಯ ಪತ್ರಿಕೆಯಾಂದರಲ್ಲಿ ಪ್ರಕಟವಾದ ಒಂದು ಸ್ವಾರಸ್ಯವಾದ ವರದಿಯನ್ನು ಪ್ರಸ್ತುತಪಡಿಸಲಿಚ್ಛಿಸುವೆ.
ಖಾರ ಬಡಾವಣೆಯ ಒಂದು ಮುಖ್ಯ ರಸ್ತೆಯ ಟಾಫಿಕ್ ಸಿಗ್ನಲ್‌ನಲ್ಲಿ ಒಬ್ಬ ಭಿಕ್ಷುಕ ಪ್ರತಿ ನಿತ್ಯ ಕಾಣಬರುವ. ಅಲ್ಲಿಯೇ ರಸ್ತೆಯ ಬದಿಯಲ್ಲಿ ಒಂದು ಗುಡಿಸಲು ಮಾಡಿಕೊಂಡು ವಾಸಮಾಡುತ್ತಿರುವ. ಅವನಿಗಿಬ್ಬರು ಮಕ್ಕಳು. ಅವರನ್ನೂ ಮತ್ತು ಅವನ ಹೆಂಡತಿಯನ್ನೂ ಈ ವೃತ್ತಿಗೆ ತೊಡಗಿಸಿದ್ದಾನೆ. ಈ ಪತ್ರಿಕೆಯವರು ಲೋಕಾರೂಢಿಯಾಗಿ ಅವನ ಸಂದರ್ಶನ ತೆಗೆದುಕೊಂಡಾಗ ತಿಳಿದುಬಂದ ವಿಷಯ- ಅವನಿಗೆ ದೂರದ ವಿರಾರ ನಲ್ಲಿ ಎರಡು ಫ್ಲಾಟಗಳು ಇದ್ದು ಅವುಗಳನ್ನು ಬಾಡಿಗೆಗೆ ಕೊಟ್ಟಿದ್ದಾನೆ. ತಿಂಗಳಿಗೆ 2000 ರೂಪಾಯಿ ಬಾಡಿಗೆ ಬರುತ್ತದೆ. ಸೊಲ್ಲಾಪುರದಲ್ಲಿ ಒಂದು ಸೈಟ್ ಖರೀದಿ ಮಾಡಿದ್ದಾನೆ. ಇಲ್ಲಿ ಭಿಕ್ಷೆಯಿಂದ ಅವನ ಸಂಸಾರದ ತಿಂಗಳ ವರಮಾನ ರೂ. 6000 ದಿಂದ 8000. ಹೀಗಾಗಿ ಮಕ್ಕಳಿಗೆ ಶಾಲೆಗೆ ಕಳುಹಿಸಲಿಲ್ಲ, ಇದೇ ವೃತ್ತಿಗೆ ತೊಡಗಿಸಿದ್ದಾನೆ. ಅವನು ಹೇಳಿದ ಪ್ರಕಾರ ಇಂತಹ ಉಚ್ಚ ದರ್ಜೆಯ ಭಿಕ್ಷುಕರು ಮುಂಬಯಿಯಲ್ಲಿ ಇನ್ನೂ ಇದ್ದಾರೆ. ನೋಡಿ ಎಷ್ಟು ಸುಲಭದಲ್ಲಿ ಜೀವನದ ಹಾದಿ ರೂಪಿಸಿಕೊಂಡಿದ್ದಾರೆ.
ಲೋಕಲ್ ಟ್ರೈನ ನಲ್ಲಿದ್ದವನು ಇಳಿದು ಎಲ್ಲಿಗೋ ಹೋಗಿಬಿಟ್ಟೆ, ಮತ್ತೆ ಬರ್ತಿದ್ದೀನಿ. ಈ ಟ್ರೈನ್‌ಗಳಲ್ಲಿ ಮೊದಲ ದರ್ಜೆ ಮತ್ತು ಎರಡನೆ ದರ್ಜೆ ಎಂದು ಎರಡು ವಿಧವಿದೆ. ಅದಲ್ಲದೇ ಒಂದು ಭೋಗಿಯ ಸ್ವಲ್ಪ ಭಾಗವನ್ನು ಅಂಗವಿಕಲರಿಗಾಗಿ ಪ್ರತ್ಯೇಕವಾಗಿಟ್ಟಿದ್ದಾರೆ. ಮೊದಲ ದರ್ಜೆಯಲ್ಲಿ ಸೋಫಾದಂತಿರುವ ಸೀಟು. ಅದರಲ್ಲಿ ಮೂರು ಜನ ಕುಳಿತುಕೊಳ್ಳುವರು. ಎರಡನೆ ದರ್ಜೆಯಲ್ಲಿ ಮೂರು ಜನಗಳಿಗೆಂದು ಇರುವ ಮರದ ಸೀಟಿನಲ್ಲಿ ನಾಲ್ಕು ಜನಗಳು ಕಡ್ಡಾಯವಾಗಿ ಕುಳಿತುಕೊಳ್ಳುವರು. ಇನ್ನು ಅವರುಗಳದ್ದೇ ಗುಂಪಿದ್ದರೆ ಒಬ್ಬರ ತೊಡೆಯ ಮೇಲೆ ಇನ್ನೊಬ್ಬರು ಕುಳಿತುಕೊಳ್ಳುವರು. ಇನ್ನು ಗಾಡಿ ಬರುತ್ತಿದ್ದಂತೆಯೇ ಸೀಟು ಹಿಡಿಯಲಿಕ್ಕಾಗಿ ಹಾರುವುದನ್ನು ನೋಡಲು ಬಲು ಮಜ. ಅದರಲ್ಲೂ ಮುದುಕರು ಹುಡುಗರಲ್ಲೂ ಸ್ಪರ್ಧೆ. ಇದರ ಮಧ್ಯೆ ಜಗಳಗಳು ಸರ್ವೇ ಸಾಮಾನ್ಯ. ಬೆಳಗಿನ ಮತ್ತು ಸಂಜೆಯ ಸಮಯದಲ್ಲಿ ಸೀಟು ಹಿಡಿಯಲಿಕ್ಕಾಗಿ ಒಂದೆರಡು ಸ್ಟೇಷನ ಹಿಂದಕ್ಕೆ ಹೋಗಿ ಬರುವರು. ಇನ್ನು ಸೀಟು ಸಿಕ್ಕ ತಕ್ಷಣ ಮಾಡುವ ಮೊದಲ ಕೆಲಸವೆಂದರೆ ಕಣ್ಣು ಮುಚ್ಚಿಕೊಳ್ಳುವುದು. ನಿದ್ದೆಯೇನೂ ಮಾಡುವುದಿಲ್ಲ ಆದರೆ ನಿದ್ದೆಯ ನಾಟಕ ಮಾಡುವರು. ಇಂತಹವರಲ್ಲಿ ಮಧ್ಯ ವಯಸ್ಕರೇ ಹೆಚ್ಚು.
ಕೆಲವು ವರ್ಷಗಳ ಹಿಂದೆ ಫೆವಿಕಾಲ ಗೋಂದಿನ ಮತ್ತು ಪೈಲ್ಸ ಕ್ಲಿನಿಕ ಗಳ ಅಡ್ವರ್ಟೈಸ್ ಮೆಂಟ್‌ಗಳನ್ನು ತೋರಿಸಿ ಪುಂಡ ಹುಡುಗರ ಬಗ್ಗೆ ಆಡಿಕೊಳ್ಳುವುದೂ ವಾಡಿಕೆಯಾಗಿತ್ತು. ಇಷ್ಟಾದರೂ ಅವರೇನು ಕಣ್ಣು ತೆರೆಯುತ್ತಿರಲಿಲ್ಲ. ಕಣ್ಣು ತೆರೆದರೆ ನಿಂತಿರುವ ಮುದುಕರು, ಮಕ್ಕಳು, ಗರ್ಭಿಣಿ ಹೆಂಗಸರು ಮುಂತಾದವರನ್ನು ನೋಡಬೇಕಾದೀತು, ಎದ್ದು ಸೀಟು ಕೊಡಬೇಕಾದೀತು. ಇನ್ನೂ ಕೆಲವರು ಪತ್ರಿಕೆಗಳನ್ನು ಓದುವರು, ಪದಬಂಧ ಬಿಡಿಸುವರು - ಪದಬಂಧಕ್ಕಾಗಿಯೇ ಕೆಲವು ಪತ್ರಿಕೆಗಳು ಇವೆ. ಕೆಲವರು ಗುಂಪು ಗುಂಪಾಗಿದ್ದರೆ ಇಸ್ಪೀಟು, ಭಜನೆ, ಸಿನೆಮಾ ಹಾಡುಗಳು ಇದರಲ್ಲಿ ಮಗ್ನರಾಗುವರು. ಕೆಲವು ಸಮಯದಲ್ಲಂತೂ ಪೂಜೆ, ಮಂಗಳಾರತಿ ಮಾಡಿ ಪ್ರಸಾದವನ್ನೂ ವಿತರಿಸುತ್ತಿದ್ದರು. ಈಗೀಗ ಭಜನೆ, ಇಸ್ಪೀಟುಗಳನ್ನು ನಿರ್ಬಂಧಿಸಿದ್ದಾರೆ. ಮಹಿಳೆಯರ ಕಂಪಾರ್ಟ ಮೆಂಟ್‌ಗಳಲ್ಲಂತು ಕೈ ಹೊಲಿಗೆ, ಕಸೂತಿ, ಹೂ ಕಟ್ಟುವುದು, ಮನೆಗೆ ಹೋಗಿ ಅಡುಗೆ ಮಾಡಲು ಅನುಕೂಲವಾಗಲೆಂದು ತರಕಾರಿ ಕತ್ತರಿಸಿ ಇಟ್ಟುಕೊಳ್ಳುವುದನ್ನೂ ಕಾಣಬಹುದು. ಹೆಚ್ಚಿನ ಜನ ಸಮಯವನ್ನು ವ್ಯರ್ಥಮಾಡುವುದಿಲ್ಲ. ಸಂಜೆಯ ವೇಳೆ ಮನೆಗೆ ಮರಳುವಾಗ ಸುಸ್ತಾದ ಜನಗಳು ನಿಂತೇ ನಿದ್ದೆ ಮಾಡುವುದನ್ನೂ ಅಭ್ಯಾಸ ಮಾಡಿಕೊಂಡಿದ್ದಾರೆ. ನಾನಂತೂ ಇಂತಹ ದೃಶ್ಯವನ್ನು ಬೇರೆ ಯಾವುದೇ ಊರಿನಲ್ಲೂ ನೋಡಿರಲಿಲ್ಲ.
ಈ ಸೀಟುಗಳು ಎದುರು ಬದುರಾಗಿದ್ದು, ಮಧ್ಯೆ ಭಾಗದಲ್ಲಿ ಮೂರು ಜನಗಳು ನಿಂತುಕೊಳ್ಳುವರು. ಜನಸಂದಣಿ ಜಾಸ್ತಿಯಾಗಿದ್ದರೆ ನಾಲ್ಕು ಜನಗಳು ಕುಳಿತುಕೊಳ್ಳುವರು. ಇದಷ್ಟಲ್ಲದೇ ಸಿನೆಮಾಗಳಲ್ಲಿ ತೋರಿಸುವಂತೆ ಛಾವಣಿಯ ಮೇಲ್ಭಾಗದಲ್ಲೂ ಕುಳಿತುಕೊಳ್ಳುವರು. ಅವರ ಮೇಲೆ ವಿದ್ಯುತ್ ತಂತಿ ಹಾಯುತ್ತಿರುವುದು. ಅದೂ ಹೈ ವೋಲ್ಟೇಜ್ ವಿದ್ಯುತ - ಸ್ವಲ್ಪ ಆಯಾ ತಪ್ಪಿ ತಗುಲಿದರೂ ವ್ಯಕ್ತಿ ಅಲ್ಲಿಯೇ ಸಾಯುವನು. ಇಂತಹ ಸಾವುಗಳು ಸರ್ವೇ ಸಾಮಾನ್ಯ. ಆದರೂ ಜನಗಳು ಈ ಚಟವನ್ನು ಬಿಡುವುದೇ ಇಲ್ಲ. ಟಿಕೆಟ್ ಅಥವಾ ಪಾಸ್ ಹೊಂದಿರುವ ಪ್ರಯಾಣಿಕರು ಎಷ್ಟು ಇರುವರೋ, ಅಷ್ಟೇ ಪಾಸ್ ರಹಿತ ಪ್ರಯಾಣಿಕರು ಇರುತ್ತಾರೆ. ಒಂದು ಸುದ್ದಿ ಎಂದರೆ- ಇವರುಗಳದ್ದೇ ಒಂದು ಅಸೋಸಿಯೇಷನ್ ಇದೆಯಂತೆ. ಇವರು ಒಮ್ಮೆ ಸಿಕ್ಕಿಹಾಕಿಕೊಂಡು ದಂಡ ತೆತ್ತರೆ ಅದನ್ನು ಅಸೋಸಿಯೇಷನ್ ಮರುಪಾವತಿಸುವುದು. ಆದರೆ ಆ ವ್ಯಕ್ತಿ ತಿಂಗಳಿಗೆ ಎರಡು ಬಾರಿಗಿಂತ ಜಾಸ್ತಿ ಸಿಕ್ಕಿಹಾಕಿಕೊಳ್ಳಬಾರದು. ಅದಷ್ಟೇ ಅಲ್ಲ ಪ್ರತಿ ತಿಂಗಳೂ ಆ ಅಸೋಸಿಯೇಷನ್‌ಗೆ ಚಂದಾ ಕಟ್ಟುತ್ತಿರಬೇಕು. ನೋಡಿದಿರಾ ಹೇಗಿದೆ ಪ್ಯಾರೆಲ್ಲ ಎಕಾನಮಿ.
ಟೈನಿನಲ್ಲಿ ಭಿಕ್ಷೆ ಬೇಡಲೆಂದೇ ಚಿಕ್ಕ ಚಿಕ್ಕ ಮಕ್ಕಳನ್ನು ಬಿಟ್ಟು ದೂರದಲ್ಲಿ ನಿಂತು ಅವರುಗಳ ಚಲನವಲನ ಗಮನಿಸುತ್ತಿರುವ ಗೂಂಡಾಗಳು ಇರುವರು. ಇದರಲ್ಲಿ ಹೆಚ್ಚಿನ ಮಕ್ಕಳನ್ನು ಕದ್ದು ತಂದಿರುವರು. ಕೆಲವು ಸಮಯದಲ್ಲಿ ಅವರು ಅಂಗವಿಕಲತೆ ನಾಟಕ ಮಾಡಿರುವ ಸನ್ನಿವೇಶಗಳೂ ಇವೆ. ಹಾಗೇ ಹಾಡುಗಳು ಮತ್ತು ಭಜನೆ ಮಾಡಿ ಭಿಕ್ಷೆ ಎತ್ತುವ ಅಂಗವಿಕಲರೂ ಇರುವರು. ಕೆಲವರಂತೂ ಸುಶ್ರಾವ್ಯವಾಗಿ ಹಾಡುವರು.
ಇದರ ಮಧ್ಯೆ ಹೆಚ್ಚಿನ ಜನಸಂದಣಿಯಿರುವಾಗ ಜೇಬು ಕತ್ತರಿಸುವುದು ಸರ್ವೇ ಸಾಮಾನ್ಯ. ಅವರದ್ದೇ ದೊಡ್ಡ ಗುಂಪಿದ್ದು, ಅಕ್ಕ ಪಕ್ಕದವರಿಗೆ ಚಾಕು ತೋರಿಸಿ ದೋಚುವ ಸನ್ನಿವೇಶಗಳಿಗೇನೂ ಕೊರತೆಯಿಲ್ಲ. ಜನಸಂದಣಿಯ ಸಮಯದಲ್ಲಿ ತಮ್ಮ ಬೆವರನ್ನು ಇನ್ನೊಬ್ಬರ ಬಟ್ಟೆಗಳಿಗೆ ಒರೆಸುವುದೂ, ಜಗಳಗಳೂ ಇತರರಿಗೆ ಮೋಜಿನ ಸನ್ನಿವೇಶ. ಕೆಲವೊಂದು ಬಾರಿ ಪರಕಾಯ ಪ್ರವೇಶದ ಅನುಭವವೂ ಆದವರಿದ್ದಾರೆ.
ನಾನು ಇದರ ಬಗ್ಗೆ ಬರೆದ ಒಂದು ಕವನ ಹೀಗಿದೆ.
(ಇದು ನಾನು ದಿನವೂ ಬೆಳಗ್ಗೆ ಹಿಡಿಯುವ 7.22ರ ಚರ್ಚಗೇಟ್‌ಗೆ ಹೋಗುವ ಲೋಕಲ್ ಟ್ರೆೃನ್- ನನ್ನ ಅನುಭವ)
ನೋಡಿರಣ್ಣ ಇದು ನನ್ನ ಲೋಕಲ್‌ನ ಪ್ರಯಾಣ
ಮುಗಿದ ಕೂಡಲೇ ಎಲ್ಲರೂ ನಿಟ್ಟುಸಿರು ಬಿಡೋಣ
ಒಂದು ಸಾವಿರ ಮಂದಿಯ ಹೊತ್ತೊಯ್ಯುವ ಗಾಡಿ
ಮೂವತ್ತು ಸಾವಿರ ಮಂದೆಗಳ ತುಂಬಿರುವ ಗಾಡಿ
ಒಂದಿಂಚೂ ಜಾಗವಿಲ್ಲದ ತುಂಬಿದ ಗಾಡಿ
ಅದರ ಅನುಭವ ನಿಮಗೇನು ಗೊತ್ತು ಬಿಡಿ
ಕಾಲು ನವೆಯಾದಾಗ ಕೆರೆಯುವವರು ಇನ್ಯಾರದೋ ಕಾಲು
‘ಆದ್ರೂ ಹೇಳುವರು ಯಾಕೋ ನವೆ ಹೋಗ್ತಾನೇ ಇಲ್ಲ’
ಮುಂಜಾವಿನ ಆ ಸಮಯದಲ್ಲೂ ಹರಿವುದು ಬೆವರು ಧಾರಾಕಾರ
ಇನ್ನೊಬ್ಬನ ವಸ್ತ್ರ ಅದನ ಒರೆಸಿದಾಗ ಹಾಹಾಕಾರ
ಅದೋ ಬಂತು ನೋಡು ನನ್ನ ಗಾಡಿ ನವ ಮಾಸ ತುಂಬಿದ ಗರ್ಭಿಣಿಯಂತೆ
ಒಳಗೆ ಹೋಗಲು ಆಗದೆ ಅಲ್ಲೇ ನಿಂತೆ ಬರಸಿಡಿದ ಮರಿಗಿಣಿಯಂತೆ
ಅದೇ ಹುಡುಗ ಹುಡುಗಿಯರು ಚೆಲ್ಲು ಚೆಲ್ಲಾಗಿ ನಗುತ ಬರಲು ಮುಂದೆ
ಅವರ್ನು ನೋಡಲೆಂದೇ ಇಹರು ನನ್ನಂಥ ಮುದಿಯರ ಹಿಂಡೇ
ನಿಯತಕಾಲದಂತೆ ಡ್ಯೂಟಿಗೆ ಬರುವನು ಆ ಭಿಕ್ಷುಕ
ಅವನ ಹಿಂದೆಯೇ ಆ ಜಂಗುಳಿಯಲ್ಲೂ ಬೀದಿ ಮಾರಾಟಗಾರ (ಹಾಕರ)
ಹೊಸಬರಿಗೆ ಇಲ್ಲಿಯಾಗುವುದು ಪರದಾಟ
ನಮಗೆಲ್ಲಾ ಇದು ದಿನನಿತ್ಯದ ವಿಹಾರದೂಟ
ಪೂರಕ ಓದಿಗೆ-
ಮುಂಬೈನಲ್ಲಿ ಸಾವಿನ ಮಳೆಯ ಪಕ್ಕ ನಿಂತು...
ಇದು ಮುಂಬಯಿ ಡೈರಿ!












Click it and Unblock the Notifications