• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮನ್ವಯ ಶಿಲ್ಪಿ ಗುರು ಸಾರ್ವಭೌಮ

By Staff
|
  • ಮೃತ್ಯುಂಜಯ ಕಪ್ಪಗಲ್‌, ರಾಯಚೂರು.

Raghavendra Swamys 333rd Aradhana Mahothsava in Mantralayamಸಾಧಕ ಜಗತ್ತಿನ ಬಾಧಕಗಳನ್ನು ಸಹಿಸಿ ಸಹ್ಯವಾಗಿಸಬೇಕು. ಸಾರ್ಥಕ ಬದುಕಿಗೆ ಸಾರಥಿಯಾಗಬೇಕು. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಜನಪರ ಕಾಳಜಿಗೆ ಮಿಡಿಯಬೇಕು, ದುಡಿಯಬೇಕು ಎಂಬುದರ ಪ್ರತಿಮೆ ತುಂಗಭದ್ರೆ ನದಿ ತೀರದ ಮಂತ್ರಾಲಯದ ನೆಲೆಯಾಧಿಪತಿ ಶ್ರೀರಾಘವೇಂದ್ರ ತೀರ್ಥರು. ಪರಮಾತ್ಮನ ಸನ್ನಿಧಾನಕ್ಕೆ ಬರಲು ಭಕ್ತಿ ಅಭಿವ್ಯಕ್ತಿಯಾಗಿ ಮುಕ್ತಿ ದಾರಿ ಕಂಡುಕೊಳ್ಳುವ ತಾಣ ರಾಯರ ಬೃಂದಾವನ. ಅದು ಭಕ್ತರ ಮಾಧ್ಯಮವಾಗಿ ವೇದಿಕೆಯಾಗಿ ನಿಂತಿದೆ.

ಭಾರತೀಯ ಪರಂಪರೆ ಅನೇಕ ಸಾಧು ಸಂತರನ್ನು ಕಂಡಿದೆ. ವೈದಿಕ ಧರ್ಮದ ಯತಿವರ್ಯರಲ್ಲಿ 16ನೇ ಶತಮಾನದ ವೀಣಾ ವೆಂಕಣ್ಣ ಭಟ್ಟ (ರಾಘವೇಂದ್ರ ತೀರ್ಥರ ಪೂರ್ವಾಶ್ರಮದ ಹೆಸರು)ರಿಗೆ ವಿಶಿಷ್ಟ ಸ್ಥಾನ. ಜಾತಿ-ಮತ ಭೇದ, ಮಠ-ಪಂಥ ಭೇದ ಮೀರಿ ನಿಂತ ಪರಿಮಳಾಚಾರ್ಯ. ಧರ್ಮ ಪ್ರವರ್ತಕ, ಮಧ್ವ ತತ್ವ ಪ್ರಚಾರಕ ಮಾತ್ರವಲ್ಲ. ಜನಸಾಮಾನ್ಯರ ದೃಷ್ಟಿಯಲ್ಲಿ ದೀನ ಬಂಧು-ದಯಾ ಸಿಂಧು.

ಕಲಿಯುಗದ ಕಾಮಧೇನು-ಕಲ್ಪವೃಕ್ಷ ಎಂದೇ ಕರೆಯಲಾಗುತ್ತಿರುವ ರಾಯರು ಸಶರೀರ ಬೃಂದಾವನ ಪ್ರವೇಶಿಸಿ 333 ವರ್ಷಗಳಾದವು. ಈ ನಿಮಿತ್ತ ಮಂತ್ರಾಲಯದ ಶ್ರೀಮಠದಲ್ಲಿ ಆಗಸ್ಟ್‌ 28 ರಿಂದ ಸೆಪ್ಟಂಬರ್‌ 3 ರವರೆಗೆ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಯರನ್ನು ನೆನಪಿಸಿಕೊಳ್ಳುವ ಈ ಸಂದರ್ಭದಲ್ಲಿ ಒಂದು ಅವಲೋಕನ.

ಭಕ್ತಿ ಪರಂಪರೆ : ಮಂತ್ರಾಲಯದ ರಾಯರು ಮತ್ತು ಶ್ರೀಮಠ, ಧರ್ಮ-ಅಧರ್ಮ, ಸ್ವರ್ಗ-ನರಕ, ಪಾಪ-ಪುಣ್ಯಗಳೆಂಬ ಅರಿವಿಗೆ ಹೊರತಾದುದು ಎನ್ನುವುದಕ್ಕೆ ಇಲ್ಲೊಂದು ನಿದರ್ಶನ.

ರಾಘವೇಂದ್ರ ತೀರ್ಥರು 1671 ಶ್ರಾವಣ ಮಾಸ ಕೃಷ್ಣ ಪಕ್ಷದ ಬಿದಿಗೆಯಂದು ಯೋಗೀಂದ್ರ ತೀರ್ಥರಿಗೆ ಉತ್ತರಾಧಿಕಾರಿಯಾಗಿ ಹಸ್ತಾಂತರಿಸಿ ಬೃಂದಾವನಸ್ಥರಾದರು. ಈ ವೇಳೆಗೆ ಮಂತ್ರಾಲಯದಲ್ಲಿಲ್ಲದ ರಾಯರ ಸಮಕಾಲೀನರೂ ಆದ ಶಿಷ್ಯ ಬಿಚ್ಚಾಲಿ ಅಪ್ಪಣ್ಣಾಚಾರ್ಯ ವಿಷಯ ತಿಳಿದು ದಿಗ್ಮೂಢರಾದರು. ಗುರು ವಿರಹದಲ್ಲೇ ‘ಶ್ರೀ ಪೂರ್ಣ ಬೋಧ...’ ಎಂಬ ಸ್ತೋತ್ರ ಪಠಿಸುತ್ತ ತುಂಗಾಭದ್ರಾ ನದಿಯ ಪ್ರವಾಹ ದಾಟಿದರು. ದುಃಖದಿಂದ ಕಂಠ ಬಿಗಿದುಕೊಂಡಾಗ ಸ್ತೋತ್ರದ ಕೊನೆ ಶ್ಲೋಕವನ್ನು ‘ಸಾಕ್ಷಿ ಹಯಾಸ್ಯೋತ್ರಯಿ...’ ಎಂದು ತಮ್ಮ ಬೃಂದಾವನದಿಂದಲೇ ಹೊರಟ ವಾಕ್ಯದಿಂದ ಗುರುರಾಜರು ಪೂರ್ಣಗೊಳಿಸಿ ಈ ಸ್ತೋತ್ರಕ್ಕೆ ಮುದ್ರಿಕೆಯನ್ನು ಕೊಟ್ಟು ಮಂತ್ರತ್ವವನ್ನು ದಯ ಪಾಲಿಸಿದ್ದಾರೆ. ಈಗಲೂ ಈ ಸ್ತುತಿಯನ್ನು ಪಾರಾಯಣ ಮಾಡುತ್ತಾ ರಾಯರ ಭಜಿಸುವವರಿಗೆ ಸಕಲ ಮನೋಭಿಲಾಷೆಗಳು ಪೂರ್ತಿಯಾಗುತ್ತವೆಂಬ ನಂಬಿಕೆಯಿದೆ.

ಸುಧಾರಣಾವಾದಿ: ಸಂಪ್ರದಾಯ ಹಾಗೂ ಸುಧಾರಣೆ ವಾದಿಗಳ ನಡುವೆ ಸದಾ ಸಂಘರ್ಷ. ಸಂಪ್ರದಾಯದ ಚೌಕಟ್ಟುಗಳನ್ನು ಮುರಿದ ರಾಘವೇಂದ್ರ ಯತಿಗಳು ಪಂಡಿತ ಪಾಮರರ ನಡುವೆಯಿರುವ ಕಂದಕಗಳ ಮುಚ್ಚಲು ಪ್ರಯತ್ನಿಸಿದರು. ಪವಾಡವೆನ್ನಲಾಗುತ್ತಿರುವ ಆದೋನಿ ನವಾಬನ ಎದುರಿನಲ್ಲಿ ಅನಕ್ಷರಸ್ಥ ವೆಂಕಣ್ಣನಿಂದ ಓದಿಸಿದ ಘಟನೆ ಈ ಮಾತಿಗೆ ಪುರಾವೆ ಒದಗಿಸುತ್ತದೆ.

ಮಂತ್ರಾಲಯ ಬದುಕಿನ ಕಷ್ಟ-ನಷ್ಟ ಸಹಿಸುವ ಅಂತಃಶಕ್ತಿಯಾಗಿ, ಬಾಳಿನ ನಂಬಿಕೆ ಜೀವನ ಶ್ರದ್ಧೆಗೆ ಆತ್ಮಸ್ಥೈರ್ಯಕ್ಕೆ ಸ್ಪಷ್ಟ ಸ್ವರೂಪ ನೀಡುತ್ತದೆ. ಸಂಪ್ರದಾಯ, ಧಾರ್ಮಿಕ ಆಚರಣೆ ಜತೆಗೆ ಆತ್ಮೋದ್ಧಾರಕ ನೆಲೆವೀಡು. ಭಕ್ತಿಗೆ ಸ್ಥಳಶುದ್ಧಿ, ಪರಿಸರ ಶುದ್ಧಿ ಮುಖ್ಯ. ಇವೆರಡು ಆತ್ಮ ಶುದ್ಧಿಗೆ ಪೂರಕ. ಹಾಡು-ಭಜನೆ, ಪಾರಾಯಣಗಳೆಲ್ಲಾ ಭಕ್ತಿ ಮಾಧ್ಯಮಗಳಷ್ಟೇ, ಅದೇ ಭಕ್ತಿಯಲ್ಲ. ಭಕ್ತರು ಮತ್ತು ಪರಮಾತ್ಮನ ನಡುವಿನ ಸಂಬಂಧದ ಕೊಂಡಿಯಾಗಿ ರಾಯರು ಗುರುವಿನ ಸ್ಥಾನದಲ್ಲಿದ್ದಾರೆ.

ದಾಸರಿಗೆ ನೆಲೆ : ತುಂಗಭದ್ರಾ ನದಿಯುದ್ದಕ್ಕೂ ಹರಿದು ಬಂದ ಹರಿದಾಸ ಸಾಹಿತ್ಯ ಜನಪರ ಕಾಳಜಿಯ ದ್ಯೋತಕ. ಮಂತ್ರಾಲಯಕ್ಕೆ ಮೂಲ ನೆಲೆ ಒದಗಿಸಿದ್ದು, ವಿಜಯದಾಸರು, ಗುರು ಜಗನ್ನಾಥದಾಸರಿಂದ ಹಿಡಿದು 50-60 ದಾಸರು ರಚಿಸಿದ 400ಕ್ಕೂ ಅಧಿಕ ಹಾಡುಗಳು ರಾಯರನ್ನು ಕುರಿತಾಗಿವೆ. ವ್ಯಾಸರಾಯರು ಪುರಂದರದಾಸರಿಗೆ ದೀಕ್ಷೆ ನೀಡಿದರೆ, ರಾಯರಿಂದ ವಿಜಯದಾಸರಿಗೆ ಪ್ರೇರಣೆ ದೊರೆತ ಉಲ್ಲೇಖ ಸಮನ್ವಯತೆಗೆ ಸಾಕ್ಷಿಯಾಗಿದೆ. ಗುರು ಜಗನ್ನಾಥದಾಸರು ರಾಯರ ಅಂತರಂಗ ಭಕ್ತರೆಂದೇ ಗುರುತಿಸಿಕೊಂಡಿದ್ದಾರೆ.

ಚರಿತ್ರೆ: ಬ್ರಹ್ಮದೇವರ ಶಾಪದಿಂದ ಶಂಕುಕರ್ಣನು ಪ್ರಹ್ಲಾದರಾಜನಾಗಿಯೂ, ವ್ಯಾಸರಾಜರಾಗಿಯೂ, ರಾಘವೇಂದ್ರ ಗುರುಗಳಾಗಿಯೂ ಅವತಾರವೆತ್ತಿದ್ದಾರೆ ಎಂಬ ಪ್ರತೀತಿಯಿದೆ. ತಮಿಳುನಾಡು ಕುಂಭಕೋಣಂನ ತಿಮ್ಮಣ್ಣ ಭಟ್ಟ ಹಾಗೂ ವೆಂಕಟಾಂಬೆ ಮೂರನೇ ಮಗ ವೆಂಕಟನಾಥ ಮುಂದೆ ಚತುಃಶಾಸ್ತ್ರ ಪಂಡಿತ. ವೈಣಿಕ ವಿದ್ವಾನ್‌ ವೆಂಕಣ್ಣ ಭಟ್ಟ ನಂತರ ರಾಘವೇಂದ್ರ ತೀರ್ಥರಾದರು. ಸರ್ವಜ್ಞ ಪೀಠಾಧಿಪತಿ ಸುಧೀಂದ್ರ ತೀರ್ಥರು ಆಶ್ರಮ ಗುರುಗಳು.

ಸಮಕಾಲೀನರು : ಆದೋನಿ ನವಾಬ, ವಿಜಾಪುರದ ಆದಿಲ್‌ ಶಾಹಿ, ಶ್ರೀರಂಗ ಪಟ್ಟಣದ ದೊಡ್ಡ ದೇವರಾಜ ಒಡೆಯರು, ತಂಜಾವೂರಿನ ಮಂತ್ರಿ ನೀಲಕಂಠ ದೀಕ್ಷಿತ, ಬಿಚ್ಚಾಲಿ ಅಪ್ಪಣ್ಣಾಚಾರ್ಯ ರಾಯರ ಸಮಕಾಲೀನರು. ಸುಧೀಂದ್ರರು ಸಂಸ್ಕೃ ತರಾಯರನ್ನು ಸಂಸ್ಕೃತದಲ್ಲಿ ಸ್ತುತಿಸಿದ್ದು ಮೊದಲಿನದು. ವಿಜಯದಾಸರು ಕನ್ನಡದಲ್ಲಿ ಸ್ತ್ರೋತ್ರ ರಚಿಸಿದ್ದಾರೆ.

ಬಿರುದು : ರಾಘವೇಂದ್ರ ತೀರ್ಥರು ಮಾನ್ವಿ ತಾಲೂಕಿನ ಕಲ್ಲೂರು ಮಹಾಲಕ್ಷ್ಮಿ ದರ್ಶನ ಪಡೆಯಲು ಆಗಮಿಸಿದ್ದರು. ಗ್ರಾಮದ ಆರ್ಯ ಮನೆತನದ ಲಿಂಗಣ್ಣಾರ್ಯರು ತಾವು ಬರೆದ ‘ಬಾರಮಾಸ’ ತೋರಿಸಿದರು. ಪೂರ್ತಿ ಓದಿದ ಮೇಲೆ ರಾಯರು, ನೀವು ಇನ್ನು ಮುಂದೆ ಲಿಂಗಣ್ಣಾರ್ಯರಲ್ಲ ; ಲಿಂಗಣ್ಣಾಚಾರ್ಯರೆಂದು ಬಿರುದು ನೀಡಿ ಉತ್ತೇಜಿಸುವ ಮೂಲಕ ಜಾತಿ ಭೇದದ ಬೇಲಿ ಕಿತ್ತು ಹಾಕಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಮಹಿಮೆ : ರಾಯರ ಮಹಿಮೆ ಅಪಾರವಾಗಿದ್ದು, ಜನರ ಕಷ್ಟ-ಕಾರ್ಪಣ್ಯಗಳನ್ನು ದೂರ ಮಾಡಲು ತಮ್ಮ ಶಕ್ತಿಯನ್ನು ಬಳಸಿದ್ದಾರೆಂಬ ಐತಿಹ್ಯವಿದೆ. ಔರಂಗಜೇಬನ ಮಗ ಶಾಹಜಾದಾ ಆಜಂಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ಬಹುಕಾಲದಿಂದ ಕಾಡುತ್ತಿದ್ದ ರೋಗವನ್ನು ರಾಯರು ಗುಣ ಮಾಡಿದರು. ಆದೋನಿ ನವಾಬ ಸಿದ್ಧಿ ಮಸೂದ್‌ ಖಾನ್‌ ಪರೀಕ್ಷಿಸಲೆಂದು ಹರಿವಾಣದಲ್ಲಿ ಮುಚ್ಚಿಟ್ಟು ಕೊಂಡು ತಂದಿದ್ದ ಮಾಂಸದ ಮೇಲೆ ತೀರ್ಥ ಪ್ರೋಕ್ಷಣೆ ಮಾಡಿ ಫಲ-ಪುಷ್ಪವಾಗಿ ಪರಿವರ್ತಿಸಿದರು ಎನ್ನುವುದು ಬಹು ಪ್ರಚಾರದಲ್ಲಿದೆ. ರಾಯರ ಮೂಲ ಬೃಂದಾವನದ ಮೃತ್ತಿಕೆ ಸರ್ವ ರೋಗ ನಿವಾರಕವೆಂದು ಭಕ್ತಜನರಲ್ಲಿ ಅಚಲ ವಿಶ್ವಾಸವಿದೆ.

ವೈಶಿಷ್ಟ ್ಯ: ಮಠಗಳ ನಡುವೆ ಭೇದಗಳಿಲ್ಲದಿದ್ದರೂ ರಾಯರ ಮೃತ್ತಿಕೆ ಬೃಂದಾವನವು ಪೇಜಾವರ, ಪಲಿಮಾರು, ಆರ್ಯ ಅಕ್ಷೋಭ್ಯ, ವ್ಯಾಸರಾಜ ಮಠಗಳಲ್ಲಿದೆ. ದೇಶ ವಿದೇಶಗಳಲ್ಲಿ ಶಾಖಾಮಠಗಳಿವೆ.

ತಮಿಳುನಾಡಿನಲ್ಲಿ ಹುಟ್ಟಿ ಕರ್ನಾಟಕದಲ್ಲಿ ಅಧ್ಯಯನ-ಅಧ್ಯಾಪನೆ ಮಾಡಿ, ಆಂಧ್ರದಲ್ಲಿ ಬೃಂದಾವನಸ್ಥರಾದ ಗುರು ರಾಜರು ಭಾಷಾ ಸೌಹಾರ್ದತೆ, ಸಂಸ್ಕೃ ತಿ ವೈವಿಧ್ಯತೆಯನ್ನು ಮೆರೆದಿದ್ದಾರೆ. ಭಕ್ತ ಬಂಧುವಾಗಿ ಬೇಡಿದ ಜನಕ್ಕೆ ಕಾಮಧೇನು- ಕಲ್ಪವೃಕ್ಷವಾಗಿಯೂ ಜನಮನದಲ್ಲಿ ನೆಲೆಸಿದ್ದಾರೆ. ಜಾತಿ-ಮತ ಪಂಥಗಳ ಎಲ್ಲೆ ಮೀರಿ ಹಳ್ಳಿಹಳ್ಳಿಗಳಲ್ಲೂ ಭಕ್ತ ವೃಂದವಿದೆ. ರಾಯರು ಎಲ್ಲ ಚೇತನಗಳಿಗೂ ಚೈತನ್ಯ ಶಕ್ತಿಯಾದ ಭಗವಂತನ ಪ್ರತಿರೂಪವಾಗಿ ಅನಿಶ್ಚಿತತೆಯಿಂದ ಬಳಲುವ ಮನುಜರ ರಕ್ಷಕರಾಗಿದ್ದಾರೆ.

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more