• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಸ್ತೂರಿ ಶಂಕರ್‌ಗೊಂದು ಅಭಿಮಾನದ ಓಲೆ

By Staff
|

An open letter to Kasturi Shankarಅದೊಂದು ಸುಂದರ ಮುಸ್ಸಂಜೆ. ಅಲ್ಲಿ ತಂಪಾದ ಗಾಳಿಯಿತ್ತು. ಕಂಪಿನ ‘ಹವಾ’ ಇತ್ತು. ಆ ಸಂದರ್ಭದಲ್ಲೇ ‘ಅವರು’ ಹೇಳಿದರು : ಈಗಿನ ಬಿಡುವಿಲ್ಲದ ಶೆಡ್ಯೂಲ್‌ಗಳ ನಡುವೆ ನಮಗಿರುವ ಏಕೈಕ ಖುಷಿಯೆಂದರೆ- ಹಳೆಯ ಕಾಲಕ್ಕೆ ಮರಳುವುದು! ಅದು ಒಳ್ಳೆಯ ಮನರಂಜನೆ ಕೂಡಾ. ಹಳೆಯ ಗೆಳೆಯರು, ಹಳೆಯ ಫೋಟೋ ಮತ್ತು ಹಳೆಯ ಹಾಡುಗಳು ಜತೆಗಿದ್ದರೆ- ಎಲ್ಲೆಂದರಲ್ಲಿ, ಯಾವಾಗಂದರೆ ಆವಾಗ ನಾವು ಹತ್ತೋ, ಇಪ್ಪತ್ತೋ, ಮೂವತ್ತೋ ವರ್ಷ ಹಿಂದಕ್ಕೆ ಹೋಗಿ ಬಿಡಬಹುದು. ಕಾಲದ ಹೊಳೆಯಲ್ಲಿ ಹೀಗೆ ಹಿಂದೆ ಹಿಂದೆ ಸಾಗಿ ಹೋಗಲು ಹಾಯಿದೋಣಿಯಾಂದು ಇದ್ದರೆ ಚೆಂದ. ಆ ಹಾಯಿದೋಣಿ ‘ಹಾಡುಗಳದ್ದೇ ಆಗಿದ್ದರೆ’ ಇನ್ನೂ ಚೆಂದ !

‘ಅವರ’ ಮಾತಿನ್ನೂ ಮುಗಿದಿರಲಿಲ್ಲ. ಅದು ಕಾಕತಾಳೀಯಮೋ ಅಥವಾ ಆಕಸ್ಮಿಕವೋ ಗೊತ್ತಿಲ್ಲ. ಆ ಸಂಜೆಯಲ್ಲಿ ಎಲ್ಲರೂ ಹಳೆಯ ಹಾಡಿನ ಸೆರಗು ಹಿಡಿದು ಮಾತಿಗೆ ತೊಡಗಿದ್ದಾಗಲೇ ಹಾಡೊಂದು ಅಲೆಯಮನೆಯಾಗಿ ತೇಲಿಬಂತು :

ರಂಗೇನ ಹಳ್ಳಿಯಾಗೆ ಬಂಗಾರ ಕಪ್ಪ ತೊಟ್ಟು/ರಂಗಾದ ರಂಗೇಗೌಡ ಮೆರೆದಿದ್ದ/ರಂಗೇನ ಹಳ್ಳಿಯಾಗೆ ಸಿಂಗಾರಿ ಸೀತೆಯಂಗೆ/ ರಂಗಾದ ರಂಗಿ ಮೈ ಅರಳಿತ್ತು...

ಆ ಹಾಡಿನ ಮೋದ, ಅದರ ಮಾಧುರ್ಯ, ಹಾಡಿದಾಕೆಯ ಕಂಠದ ಇಂಪು, ಆ ಹಾಡಿಗಿದ್ದ ಕಂಪು ಕ್ಷಣ ಕಾಲ ಎಲ್ಲರನ್ನೂ ಬೆರಗಾಗಿಸಿತು. ಅನನ್ಯ ಖುಷಿ ನೀಡಿತು. ಆ ಖುಷಿಯಲ್ಲೇ ಅವರೆಲ್ಲ ಉದ್ಗರಿಸಿದರು- ಈಗ ಕೇಳಿ ಬಂತಲ್ಲ- ರಂಗೇನ ಹಳ್ಳಿಯಾಗೆ ಹಾಡು- ಅದನ್ನು ಹಾಡಿದವರು ಕಸ್ತೂರಿ ಶಂಕರ್‌. ಅವರು ಬೆಂಗ್ಳೂರಲ್ಲೇ, ನ್ಯಾಷನಲ್‌ ಕಾಲೇಜ್‌ ಹತ್ರಾನೇ ಇದಾರೆ....

***

ಕೋಗಿಲೆಯ ಕಂಠದೊಡತಿ ಕಸ್ತೂರಿ ಶಂಕರ್‌ ಅವರೆ, ನಿಮಗೆ ಕಾರ್ಯಕಾರಣ ಮತ್ತು ವಿನಾಕಾರಣ ಪತ್ರ ಬರೆಯಲು ಇಷ್ಟು ನೆಪ ಸಾಕೇ ಸಾಕು ಅನ್ನಿಸಿತು. ಹೀಗೆ, ಪತ್ರ ಬರೆವ ಮೋದದಲ್ಲಿದ್ದಾಗಲೇ- ಹಾಡುಗಾರರು ಸುತ್ತಮುತ್ತೆಲ್ಲ ಸುಳಿದು ಹೋದರು. ಎಲ್ಲರದ್ದೂ ಒಂದೇ ಮಾತು :

‘ಕಸ್ತೂರಿ ಶಂಕರ್‌ ಹಿಂದೆ ಮಾತ್ರವಲ್ಲ, ಈಗ ಕೂಡ ಸಿರಿಕಂಠದ ಒಡತಿ. ಆಕೆ ಅತೃಪ್ತಿ. ಸುಶೀಲಾ ಥರಾ ಅಲ್ಲ. ಇತ್ತ ಎಸ್‌.ಜಾನಕಿ ಥರಾನೂ ಅಲ್ಲ. ವಾಣಿ ಜಯರಾಂಗೆ ಆಕೆ ಹೋಲಿಕೇನೇ ಆಗಲ್ಲ. ಆದ್ರೆ- ಈ ಮೂರೂ ಗಾಯಕಿಯರ ಸಿರಿಕಂಠ ಒಂದಾದರೆ ಕೇಳುತ್ತಲ್ಲ ಮೋಹನ್‌ ರಾಗ- ಅದು ಕಸ್ತೂರಿ ಶಂಕರ್‌ ಅವರಿಗಿತ್ತು. ಈಗಲೂ ಇದೆ! ಇಂಥ ಹಿನ್ನೆಲೆಯ ಕಸ್ತೂರಿ ಶಂಕರ್‌ ಕೇವಲ ಸಿನಿಮಾದ ಹಾಡಿಗೇ ಬ್ರ್ಯಾಂಡ್‌ ಆಗಲಿಲ್ಲ. ಸುಗಮ ಸಂಗೀತದ ಬಗ್ಗೆ ವಿಶೇಷ ಒಲವು ಬೆಳೆಸಿಕೊಂಡ್ರು. ಭಾವಗೀತೆ, ಭಕ್ತಿಗೀತೆಗಳಿಗೆ ದನಿಯಾದರು. ದೇವರ ಪದ ಹಾಡ್ತಾ ಹಾಡ್ತಾ ಮೈಮೆರೆತರು. ದೇವರು ಅವರ ಹಾಡಿಂದ ಖುಷಿಯಾದ ! ಅವರಿಗೆ ಒಳ್ಳೆಯದನ್ನೇ ಮಾಡಿದ...

ಮೇಡಂ, ಚಿಟಿಕೆ ಅಭಿಮಾನ, ಚಟಾಕು ಪ್ರೀತಿ, ಅರೆ ಪಾವು ಆತ್ಮೀಯತೆ, ಹಿಡಿತುಂಬ ಅಕ್ಕರೆ ಎಲ್ಲವನ್ನೂ ಇಷ್ಟಿಷ್ಟೇ ಒಳಗೊಂಡ ಈ ಮಾತುಗಳನ್ನೆಲ್ಲ ನೀವೂ ಒಪ್ತೀರಿ ತಾನೆ?

ಹೌದಲ್ವ? ನೀವು ಮೈಸೂರಿನವರು. ಸಂಪ್ರದಾಯಸ್ಥ ಮನೆತನದವರು. ಗಾಂಧೀಜಿಯವರ ಅಪ್ಪಟಾಪ್ಪಟ ಅಭಿಮಾನಿಯಾಗಿದ್ದ ನಿಮ್ಮ ತಂದೆ- ಕಸ್ತೂರಿ ಬಾ ನೆನಪಿಗಾಗಿ ನಿಮ್ಗೆ ಕಸ್ತೂರಿ ಅಂತ ಹೆಸರಿಟ್ಟರು. ಆಗೆಲ್ಲ ನಿಮ್ಮ ತಂದೆಯವರೇ ಬರೆದ ದೇಶಭಕ್ತಿಗೀತೆಗಳನ್ನು ; ರೇಡಿಯೋದಲ್ಲಿ ಕೇಳಿ ಬರ್ತಿದ್ದ ಚಿತ್ರಗೀತೆಗಳನ್ನು ಯಥಾಪ್ರಕಾರ ಹಾಡ್ತಿದ್ರಿ ನೀವು. ಅಂಥ ನೀವು ಅದೊಮ್ಮೆ ಮದುವೆ ಮನೆಯಲ್ಲಿ ತನ್ಮಯವಾಗಿ ಹಾಡೋದನ್ನ ಕೇಳಿದ ಕಣಗಾಲ್‌ ಪ್ರಭಾಕರ ಶಾಸ್ತ್ರಿಗಳು ‘ಬೆಟ್ಟದ ಗೌರಿ’ ಸಿನಿಮಾದಲ್ಲಿ ಹಾಡೋಕೆ ಅವಕಾಶ ಕೊಟ್ರು. ಅದೇ ವೇಳೆಗೆ ನಿಮ್ಮ ಮಧುರ ಕಂಠಕ್ಕೆ (ನಂಬಿ ಮೇಡಂ, ಕಂಠದ ಮಾಧುರ್ಯಕ್ಕೆ ಮಾತ್ರ!) ಮರುಳಾದ ಶಂಕರ್‌ ಅವರು ಮೆಚ್ಚಿ ಮದುವೆಯಾದ್ರು. ವಿಪರ್ಯಾಸ ನೋಡಿ, ನೀವು ಖುಷಿಯಿಂದ ಬದುಕಿನ ಹಾಡು ಹಾಡಿದಾಗ, ನಿಮ್ಮ ಮೊದಲ ಸಿನಿಮಾದ ಹಾಡು ಕೇಳಲೇ ಇಲ್ಲ ! ಆ ಸಿನಿಮಾ ಬಿಡುಗಡೆ ಆಗಲೇ ಇಲ್ಲ. ‘ಮುಗೀತ್‌, ಮುಗೀತ್‌. ಕಸ್ತೂರಿ ಶಂಕರ್‌ ಅವರ ಸಿನಿಮಾ ಬದುಕು ಇಷ್ಟಕ್ಕೇ ಮುಗೀತ್‌’ ಎಂದು ಇದೇ ಗಾಂಧಿನಗರದ ಜನ ಕುಹಕದ ಮಾತಾಡುತ್ತಿದ್ದಾಗಲೇ-

ನಿಮ್ಮೆದುರು ‘ಭಾಗ್ಯ ಜ್ಯೋತಿ’ ಇತ್ತು. ಅದು ನಿಮ್ಮ ಬದುಕಿನ ಬೆಳಕೇನೋ ಎಂಬ ಕಲ್ಪನೆಯಲ್ಲಿ ‘ಗುಡಿ ಸೇರದ ಮುಡಿ ಏರದ ಕಡೆಗಾಣಿಸೊ ಹೂವಲ್ಲ...’ ಅಂತ ಹಾಡಿ, ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಮನೆ ಮಾತಾಗಿ ಬಿಟ್ರಿಲ್ಲ- ಅದನ್ನ ಮೆಚ್ಚದೇ ಇರೋದಾದ್ರೂ ಹ್ಯಾಗೆ ಮೇಡಂ?

ಎಲ್ರಿಗೂ ಗೊತ್ತಿದೆ- ಸಿನಿಮಾಕ್ಕಾಗಿ ನೀವು ಹಾಡಿದ್ದು ತೀರಾ ಕಡಿಮೆ. ಆದ್ರೆ ಹಾಡಿದ್ದೆಲ್ಲ ಸೂಪರ್‌ಹಿಟ್‌ ಹಾಡುಗಳೇ! ಅದರಲ್ಲೂ ‘ಬಿಳೀ ಹೆಂಡ್ತಿ’- ‘ಯಾವ ತಾಯಿಯು ಹಡೆದ ಮಗನಾದರೇನು?/ಕನ್ನಡಾಂಬೆಯ ಮಡಿಲ ಹೂವಾದೆ ನೀನು’ ಅಂತ ಹಾಡಿದಾಗ : ಓ ದ್ಯಾವ್ರೆ, ನಿನ್ನ ಅಂದ ಚೆಂದನೇನೋ ಒಂದೂ ನಾ ಕಾಣೆ/ ನಿನ್ನ ನೆನೆದು ಹಿಗ್ಗಿ ಹಿಗ್ಗಿ/ಕುಣಿದೆ ನನ್ನಾಣೆ’ ಅಂತ ಕಥಾ ಸಂಗಮಕ್ಕೆ ದನಿಯಾದಾಗ ನಿಮ್ಮಲ್ಲಿ ಮೂಡಿದ ಭಾವ ಯಾವ್ದು ಮೇಡಂ ?

ಮುಂದೊಮ್ಮೆ ಡಾ.ರಾಜ್‌ ಜತೇಲಿ ನಿಂತು ‘ಸೂರ್ಯನ ಕಾಂತಿಗೆ ಸೂರ್ಯನೆ ಸಾಟಿ/ಹೋಲಿಸಲಾರಿಲ್ಲ, ನಿನ್ನೀ ಅಂದಕ್ಕೆ ನೀನೆ ಸಾಟಿ/ಬೇರೆ ಯಾರಿಲ್ಲ, ನಿನ್ನ ಹೋಲುವ ರಾರಿಲ್ಲ..’ ಅಂದಿರಲ್ಲ ; ನಿನ್ನ ಮಾತಿನಲಿ ಕಣ್ಣ ಮಿಂಚಿನಲ್ಲಿ /ಆಸೆ ಹೂವಾಗಿದೇ...’ ಎಂದೂ ಹಾಡಿದಿರಲ್ಲ- ಆಗ ನಿಮ್ಗೆ ಹರಯದ ದಿನಗಳು ನೆನಪಾಗಲಿಲ್ವ? ಮದುವೆಯಾದ ಹೊಸತರಲ್ಲಿ ನೀವು ಗಂಡನ ಮನೆಗೆ ಹೋದದ್ದು ; ಅಲ್ಲಿ ಅವರು ಕೈ ಹಿಡಿದಿದ್ದು : (ಆಗಲೇ ತಾನೆ ನಿಮ್ಮನ್ನ ಚಂದ್ರನಿಗೆ ಹೋಲಿಸಿದ್ದು ?); ಆಸೆಯಿಂದ ನೋಡಿದ್ದು ; ಪ್ರೀತಿಯಿಂದ ಮಾತಾಡಿದ್ದು ; ಸಂಕೋಚದಿಂದಲೇ ಮುತ್ತುಕೊಟ್ಟದ್ದು - ನಿಮಗೆ ಎಲ್ಲ ಎಲ್ಲವೂ ನೆನಪಾಗಿ, ಮೈಯೆಲ್ಲ ಸಂಕೋಚದ ಮುದ್ದೆಯಾಗಿ ನೀವು ಕಂಪಿಸಲಿಲ್ವಾ? ಮುಂದೆ- ನಿಮ್ಮ ಹಾಡು ಕೇಳಿದವರೆಲ್ಲ - ‘ಈಕೆ ಕನ್ನಡದ ಲತಾ ಮಂಗೇಶ್ಕರ್‌ ಅಂದಾಗ : ಕಸ್ತೂರಿ ಶಂಕರ್‌ ಅವರ ಗಾಯನದಲ್ಲಿ ಶಾಸ್ತ್ರೀಯ ಸಂಗೀತಗಾರರ ಕುಶಲತೆ ಮತ್ತು ಸುಗಮ ಸಂಗೀತದವರ ಲವಲವಿಕೆ ಎರಡೂ ಇರ್ತದೆ’ ಅಂದರಲ್ಲ- ಅದನ್ನ ಕೇಳಿ ಕಣ್ತುಂಬಿ ಬರಲಿಲ್ವ? ಹೇಳಿ ಮೇಡಂ...

ಹೇಳಿದೆನಲ್ಲ ? ಹಳೆಯ ಹಾಡು ಅಂದಾಕ್ಷಣ ನೀವು ನೆನಪಾಗಿಬಿಡ್ತೀರಿ. ನಿಮ್ಮ ಸಿರಿಕಂಠ ಜತೆಯಾದಾಗ ನೀವು ಹಿಂದೇನೇ ಉಳಿದುಬಿಡ್ತೀರಿ. ನಿಮ್ಮ ಅಮ್ಮನ ಪ್ರೀತಿಯನ್ನ ಮೀರಿ- ನಿಮ್ಮ ಇಂಪು ದನಿ ಎಲ್ಲರಿಗೂ ಆಪ್ತವಾಗುತ್ತೆ. ತುಂಬ ಇಷ್ಟವಾಗುತ್ತೆ. ಅದು ಒಮ್ಮೆ ‘ದೀಪಿಕಾ’ದ ಮಾಧುರ್ಯವಾಗಿ; ಇನ್ನೊಮ್ಮೆ ‘ನಾಕುತಂತಿ’ಯ ರಾಗವಾಗಿ ಕೇಳಿಸುತ್ತೆ. ‘ಕಾವ್ಯ ಕಸ್ತೂರಿ’ಯಾಗಿ ಕಣ್ತುಂಬುತ್ತೆ. ಹೀಗೆ ಹಾಡಿನ ಹಿಂದೆ ಹಿಂದೆಯೇ ನಡೆದು ಹೋದರೆ- ಐದು ಸಾವಿರ ಹಾಡುಗಳ ದೊಡ್ಡ ಅಂಗಳವೇ ನಮ್ಮೆದುರು ನಿಲ್ಲುತ್ತೆ. ಗೆಳತಿಯಂತೆ ಒಪ್ಪಿಸಿಕೊಳ್ಳುತ್ತೆ. ಗೆಳೆಯನಂತೆ ಕೈ ಹಿಡಿಯುತ್ತೆ. ಅಮ್ಮನಾಗಿ ಮೈದಡವುತ್ತೆ . ಯಾವುದೋ ಸಂದರ್ಭ, ಇನ್ಯಾವುದೋ ಸನ್ನಿವೇಶದಲ್ಲಿ ನೀವು ಹಾಡಿದ ಹಾಡೊಂದು ಹೀಗೆ ಹೆಜ್ಜೆ ಹೆಜ್ಜೆಗೂ ಕಾಡುತ್ತೆ ನೋಡಿ- ಆ ಕ್ಷಣವೇ ನಿಮ್ಗೆ ಕೈ ಮುಗೀಬೇಕು ಅನಿಸುತ್ತೆ- ಪ್ರೀತಿಯಿಂದ, ಪ್ರೀತಿಯಿಂದ ಮತ್ತು ಪ್ರೀತಿಯಿಂದ !

***

ಹೌದು.ಇವತ್ತಿಗೂ ಜನ ನಿಮ್ಮನ್ನ ನೆನಪಿಟ್ಟು ಕೊಂಡಿದಾರೆ. ಕಸ್ತೂರಿ ಶಂಕರ್ರಾ, ಆಕೆ ಆಚ್ಚ ಕನ್ನಡತಿ ಕಣ್ರೀ. ಆಕೆ ವಿಜಯ ಭಾಸ್ಕರ್‌ರಿಂದ ಚಿತ್ರರಂಗಕ್ಕೆ ಪರಿಚಯ ಆದವರು. ಈಗ ಇಲ್ಲೇ ನ್ಯಾಷನಲ್‌ ಕಾಲೇಜಿನ ಹತ್ರ‘ಅರುಣಾ ಮ್ಯೂಸಿಕಲ್ಸ್‌’ ಇಟ್ಕೊಂಡಿದಾರೆ. ಬಿಡುವಿದ್ರೆ ಆ ಅಂಗಡೀಲಿ ಕೂತು ವ್ಯಾಪಾರಾನೂ ಮಾಡ್ತಾನೆ. ಸ್ವಂತ ಆರ್ಕೆಸ್ಟ್ರಾ ಟೀಂ ಹೊಂದಿದಾರೆ. ಅವರ ಮಗ, ಮಗಳೂ ಹಾಡ್ತಾರೆ.... ಹೀಗೆಲ್ಲ ಮಂದಿ ಖುಷಿಯಿಂದ ಹೇಳ್ತಿರ್ತಾರೆ. ಆದ್ರೆ ನೀವು ತುಂಬ ಸಂದರ್ಭದಲ್ಲಿ ಯಾವ ಸಮಾರಂಭಕ್ಕೂ ಬರಲ್ಲ. ಬಂದ್ರೂ ಜಾಸ್ತಿ ಹೊತ್ತು ಇರಲ್ಲ. ಇದ್ರೂ ಗುರುತೇ ಸಿಕ್ಕಿಲ್ಲ. ಹಾಗೆ ಬರ್ತೀರಿ, ಹೀಗೆ ಹೋಗಿ ಬಿಡ್ತೀರಿ! ಇದು ಸರೀನಾ ಮೇಡಂ?

ವೃಥಾ ಹೊಗಳಿಕೆ ಅಂದ್ಕೋಬೇಡಿ- ಕೇಳಿ: ಈಗ ನಿಮ್ಮ ಮಧುರ ಗಾಯನ ಕೇಳಿದ್ರೆ ಬಹು ಮಂದಿಗೆ ‘ಅಮ್ಮ’ನ ನೆನಪಾಗುತ್ತೆ. ತಕ್ಷಣವೇ ಕಾಲ ಇಪ್ಪತ್‌-ಮೂವತ್ತು ವರ್ಷಹಿಂದೆ ಹೋಗುತ್ತೆ. ಅಮ್ಮ, ಅವಳ ಹಾಡು, ಅವಳ ಪ್ರೀತಿ, ಅವಳ ಹಾರೈಕೆ ನೆನಪಾಗುತ್ತಲ್ಲ - ಆಗ ಹಾಡು ಖುಷಿಕೊಡುತ್ತೆ. ಮಮತೆ ಕೈ ಹಿಡಿಯುತ್ತೆ !

ಕೇವಲ ಹಾಡಿನ ನೆಪದಿಂದಲೇ - ತುಂಬ ಜನ ಬಾಲ್ಯದ ದೋಣಿಯಲ್ಲಿ ತೇಲುವ ಹಾಗೆ ಮಾಡ್ತೀರಲ್ಲ- ನಿಮ್ಗೆ ವಂದನೆ. ಕೋಗಿಲೆಯೇ ನಾಚುವಂತೆ ಹಾಡ್ತೀರಲ್ಲ , ಅದಕ್ಕೆ ಅಭಿನಂದನೆ. ಮರೆತಿದ್ದೆ ; ನಿಮ್ಮ ಮಗನಿಗೆ, ಮಗಳಿಗೆ ಪ್ರೀತಿಯ ನೆನಪು ; ನಿಮ್ಮ ಹಾಡಿಗಷ್ಟೆ (ಹೌದು-ಹೌದು-ಹಾಡಿಗಷ್ಟೇ !) ಮರುಳಾದ ಶಂಕರ್‌ ಅವರಿಗೆ ನಮಸ್ಕಾರ ತಿಳಿಸಿ. ನಿಮಗೆ ತುಂಬ ತುಂಬ ಒಳ್ಳೆಯದಾಗಲಿ. ನಿಮ್ಮ ಹಾಡನ್ನ ಖುಷಿಯಿಂದ ಕೇಳುವ ‘ಭಾಗ್ಯ’ಎಲ್ಲರದೂ ಆಗಲಿ.

ನಮಸ್ಕಾರ,

- ಎ.ಆರ್‌. ಮಣಿಕಾಂತ್‌

(ಸ್ನೇಹ ಸೇತು : ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more