ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರು ಕಟ್ಟಿದ ‘ಮೂಡಲ ಮನೆ’ !

By Staff
|
Google Oneindia Kannada News


ಆರಂಭದಿಂದಲೂ ನೋಡುಗರ ಮೆಚ್ಚುಗೆ ಹಾಗೂ ಕುತೂಹಲದ ಪಾತ್ರವಾಗಿ ಉಳಿದಿರುವುದು ವಾಡೆಯ ಹಿರಿತಲೆ, ಅಜ್ಜಿ ರಾಧಕ್ಕ. ಆಕೆ ಬಾಲ ವಿಧವೆ. ಜೀವನಾನುಭವ ಅರಗಿಸಿಕೊಂಡು ತನ್ನದೇ ಆದ ಏಕಾಗ್ರತೆ ಹಾಗೂ ಸೇವಾ ಮನೋಭಾವ ಹೊಂದಿರುವವಳು. ಜೀವನದ ಏರಿಳಿತಗಳನ್ನು ಕಂಡವಳು. ವಾಡೆಯ ಯಜಮಾನ ಪಾಂಡುರಂಗನಿಗೆ ಸಂಕಷ್ಟ ಬಂದಾಗಲೆಲ್ಲ ದಾರಿ ತೋರಿಸುವವಳೇ ಇವಳು. ಶಾಸ್ತ್ರ ಪಾರಂಗತನಾದ ಪಾಂಡುರಂಗನ ಬುದ್ಧಿ ಜೀವನಾನುಭವದಿಂದ ಹರಳುಗಟ್ಟಿದ ರಾಧಕ್ಕನ ವಿವೇಕದ ಮುಂದೆ ಅನೇಕ ಬಾರಿ ತಲೆಬಾಗುವುದುಂಟು.

ವಿಧವೆಯಾಗಿ ಬದುಕಿನ ಪ್ರಭೆಯನ್ನೇ ಕಳೆದುಕೊಂಡಿದ್ದರೂ ಭವಿಷ್ಯದಲ್ಲಿ ಯಾರೂ ತನ್ನಂತಾಗಬಾರದು ಎಂದು ಹಾರೈಸುವಾಕೆ ರಾಧಕ್ಕ. ಆಕೆಯದು ಪ್ರಗತಿಪರ ಮನೋಭಾವ. ನುಡಿಯಷ್ಟೇ ಅಲ್ಲ , ನಡೆಯಲ್ಲಿಯೂ ರಾಧಕ್ಕ ಪಾಡುರಂಗನ ಹಿಂದೆ ಹಾಕಿದ ಹೆಣ್ಣುಮಗಳು. ವಾಡೆಯಲ್ಲಿನ ಮನಸ್ಸುಗಳೊಳಗಿನ ಕಂದಾಚಾರಗಳನ್ನು ಮುಕ್ತಗೊಳಿಸುತ್ತಾ ಹೋಗುವ ರಾಧಕ್ಕನ ಹಿರಿತನ ಅಚ್ಚರಿ ಹುಟ್ಟಿಸುವಂತದ್ದು, ಗೌರವ ಮೂಡಿಸುವಂತದ್ದು.

ರಾಧಕ್ಕ ಹಳೆ ತಲೆಮಾರಿನ ವಿಧವೆಯಾದರೆ ಗಾಯತ್ರಿ ಈ ಕಾಲದ ಹೊಸ ಬಗೆಯ ಸಮಸ್ಯೆಗಳಿಗೆ ತನ್ನನ್ನು ಒಡ್ಡಿಕೊಂಡ ವಿಧವೆ. ಒಂದು ಸಂಪ್ರದಾಯ ಬದ್ಧ ಮನೆಯಲ್ಲಿ ಹುಟ್ಟಿ ಸಂಪ್ರದಾಯಸ್ಥ ಮನೆಗೇ ಸೊಸೆಯಗುವ ಹೆಣ್ಣುಮಗಳು ಹೊಸ ಕಾಲದ ರೀತಿ ನೀತಿಗಳಿಗೆ ತನ್ನನ್ನು ಒಡ್ಡಿಕೊಳ್ಳುವುದು ಸವಾಲೇ ಸರಿ. ಗಂಡನ ಸಾವಿನ ನಂತರ ಮೆಟ್ಟಿದ ಮನೆಯ ಸಕಲ ಜವಾಬ್ದಾರಿಗಳನ್ನು ಹೊತ್ತು ನಡೆಯುವ ಗಾಯತ್ರಿ ಈ ಶತಮಾನದ ಮಾದರಿ ಹೆಣ್ಣು . ಆಕೆಯದು ಆಸೆಗಳ ವಯಸ್ಸು . ಒಂದೆಡೆ ಅತ್ತೆ ಮಾವ ಹಾಗೂ ಪುಟ್ಟ ಮಗಳ ಜಗತ್ತು , ಇನ್ನೊಂದೆಡೆ ದೇಹ ನಿರಾಕರಿಸಲಾಗದ ಕಾಮನೆಗಳ ವಾಸ್ತವದ ಜಗತ್ತು ; ಇವುಗಳ ನಡುವೆ ತೊಳಲಾಡುವ ಗಾಯತ್ರಿಯ ಪಾತ್ರ ನೋಡುಗರ ಅನುಕಂಪಕ್ಕೆ ಪಾತ್ರವಾಗುತ್ತದೆ. ಹದಿಹರೆಯದ ವಿಧವೆ ಹೆಣ್ಣು ತನ್ನ ಅತ್ತೆ-ಮಾವರಿಗೆ ನೆರಳಾಗಿ ಮಗನ ಸ್ಥಾನ ತುಂಬುವುದು ಸರಳ ಸಂಗತಿಯಲ್ಲ.

ಒಂದೆಡೆ ಗಾಯತ್ರಿಯಂಥ ಸುಂದರ-ಸಣ್ಣ ವಯಸ್ಸಿನ ವಿಧವೆ, ಇನ್ನೊಂದೆಡೆ ಮಾಗಿದ ವಯಸ್ಸು-ಮನಸ್ಸಿನ ರಾಧಕ್ಕ. ಇವರ ನಡುವೆ ಮೂಡಲಮನೆಯ ಸಾಕುಮಗ ಶೇಷನ ಕೈಹಿಡಿಯುವಾಕೆಯೂ ಇನ್ನೊಬ್ಬ ವಿಧವೆಯೇ. ಆಕೆಯ ಹೆಸರು ಶಾಂತಾ. ಕುತೂಹಲದ ಸಂಗತಿಯೆಂದರೆ ಇಲ್ಲಿನ ವಿಧವೆಯರು ಕುಟುಂಬ ಪ್ರೇಮಿಗಳಾಗಿರುವುದು. ತಮ್ಮ ಆಸೆಗಳು ಕುಟುಂಬದ ಗೌರವಕ್ಕೆ ಧಕ್ಕೆ ಉಂಟು ಮಾಡುವ ಸಂದರ್ಭದಲ್ಲಿ ಈ ಹೆಣ್ಣುಮಕ್ಕಳು ತ್ಯಾಗಕ್ಕೆ ಮುಂದಾಗುತ್ತಾರೆ. ತವರು ಮನೆಗೆ ಕಂಬವಾದ ರಾಧಕ್ಕ ಆ ಮನೆಯ ಹಿತ ಚಿಂತನೆಯಲ್ಲಿ ದಿನ ಕಳೆಯುತ್ತಾಳೆ. ಗಾಯತ್ರಿ ಮೆಟ್ಟಿದ ಮನೆಯ ದೀಪವಾಗಿ ನಿಲ್ಲುತ್ತಾಳೆ. ಹೀಗಾಗಿ ವಿಧವೆಯರ ಕಥೆಯು ಮನೆಯ ಸಂಬಂಧಗಳ ಕಥೆಯಾಗಿ, ಮಾನವೀಯತೆಯ ಕಥೆಯಾಗಿ ಬದಲಾಗುತ್ತದೆ.

ಮೂಡಲಮನೆಯ ಇನ್ನೊಂದು ಆಕರ್ಷಕ ಪಾತ್ರ ಶಕ್ಕೂ, ಶಕುಂತಲಾ. ಅವಿಭಕ್ತ ಕುಟುಂಬದಲ್ಲಿ ಸೊಸೆಯ ಜವಾಬ್ದಾರಿಗಳು ಹೇಗಿರಬೇಕು ಎಂಬುದನ್ನು ತೋರಿಸುವ ಮನೆಯ ಹಿರಿಯ ಸೊಸೆಯ ಪಾತ್ರವಿದು. ಆತ್ಮೀಯ ನಡವಳಿಕೆಯಿಂದ ಮನೆಯವರ ಪ್ರೀತಿ ಗೆಲ್ಲುವ ಶಕ್ಕೂ, ತನ್ನ ಕುಟುಂಬವನ್ನು ಹೇಗೆ ಪೋಷಿಸಬೇಕು ಎಂಬುದನ್ನು ತೋರಿಸಿಕೊಡುತ್ತಾಳೆ . ಮೂಡಲಮನೆಯ ಶಕ್ಕೂ ಎಲ್ಲ ಕುಟುಂಬಗಳೂ ಬಯಸುವ ಸೊಸೆ. ಕುಟುಂಬಗಳು ಒಡೆಯುತ್ತಾ , ಹಿರೀಕರು ಅನಾಥಾಶ್ರಮಗಳ ಪಾಲಾಗುತ್ತಿರುವ ಹೊತ್ತಿನಲ್ಲಿ ಶಕ್ಕೂ ಪಾತ್ರದ ವಾತ್ಸಲ್ಯ ತಂಪೆನ್ನಿಸುತ್ತದೆ. ಈ ವಾತ್ಸಲ್ಯಮಯಿಯ ಭರಾಟೆ ಎಷ್ಟಿದೆಯೆಂದರೆ- ಸಮಸ್ಯೆ ಎಲ್ಲಿಯೇ ಉದ್ಭವಿಸಿದರೂ ತಕ್ಷಣ ಪ್ರತ್ಯಕ್ಷಳಾಗುವ ‘ಶಕ್ಕೂ ವೈನಿ’ ವಾಡೆಯ ಗಂಡು ಮಕ್ಕಳನ್ನು ಬದಿಗೊತ್ತುವುದೂ ಉಂಟು. ಮಗ-ಗಂಡನ ಸುಖಕ್ಕಿಂಥ ವಾಡೆಯ ಮರ್ಯಾದೆಯೇ ಮಿಗಿಲು ಎಂದು ಭಾವಿಸುವ ಹೆಣ್ಣುಮಗಳಾಕೆ.

ದೇಶಮುಖರ ಪತ್ನಿ ಸುಶೀಲ್‌ಬಾಯಿಯದು ಮುಗ್ಧ ಮನಸ್ಸು. ಆಕೆಯದು ಸಂಪ್ರದಾಯ ಗುಣಗಳಿಂದ ಕೂಡಿದ ಪಾತ್ರ, ಗೌರವ ಭಾವ ಉಕ್ಕಿಸುವ ವ್ಯಕ್ತಿತ್ವ. ಮಕ್ಕಳಿಗೆ ವಾತ್ಸಲ್ಯ ಪೂರ್ಣ ತಾಯಿ, ಸೊಸೆಯಂದಿರಿಗೆ ಪ್ರೇಮಮಯಿ ಅತ್ತೆಯೀಕೆ. ಸಂಕಟ ಬಂದಾಗ ಮಾತ್ರ ಆಕೆಯ ಕಣ್ಣಲ್ಲಿ ಗಂಗಾಕಾವೇರಿಯ ಪೈಪೋಟಿ. ಸಮಾಧಾನ ಹೇಳಲು ಶಕ್ಕೂ ವೈನಿಯೇ ಬರಬೇಕು.

ವಾಡೆಯ ಎರಡನೇ ಸೊಸೆ ಶಾರದಾಳದು ಇನ್ನೊಂದು ರಾಮಾಯಣ. ಒಂದು ಕುಟುಂಬದಲ್ಲಿ ಇರಬಹುದಾದ ಅಸೂಯೆ ಹೊಗೆಯಾಡುವ ಪರಿಯನ್ನು , ಪಾತ್ರವೊಂದು ಪರಿಸ್ಥಿತಿಯ ಒತ್ತಡಗಳಲ್ಲಿ ಬದಲಾಗುವ ವೈಚಿತ್ರ್ಯವನ್ನು ಶಾರದಾಳ ಪಾತ್ರ ಧ್ವನಿಸುತ್ತದೆ. ತಾನು-ತನ್ನ ಗಂಡ ಎನ್ನುವ ಕಪ್ಪೆಯ ಪ್ರಪಂಚದಲ್ಲಿ ಮುಳುಗಿದಂಥ ಪಾತ್ರ ಶಾರದಾಳದು. ವಾಡೆಯಲ್ಲಿ ಸಂಚಲನೆ ಉಂಟು ಮಾಡುವ ಶಾರದಾ ಮನೆಮುರುಕ ಹೆಣ್ಣುಮಕ್ಕಳ ಪ್ರತಿನಿಧಿಯಂತಿದ್ದಾಳೆ.

ಧಾರಾವಾಹಿಯಲ್ಲಿ ನ ವಿಶೇಷ ಪಾತ್ರ ಯಮುನಾಬಾಯಿ. ರಾಮಾಯಣದ ಮಂಥರೆ ಹಾಗೂ ಕೈಕೇಯಿಯನ್ನು ನೆನಪಿಸುವ ಈ ಪಾತ್ರ ತುಂಬಿದ ಸಂಸಾರದಲ್ಲಿ ಒಡಕು ದನಿ ಸೃಷ್ಟಿಸುತ್ತದೆ. ಆದರೆ ಈ ಪಾತ್ರದ ಆಳದಲ್ಲಿನ ತಾಯಿಮಮತೆಯನ್ನು ನಿರ್ಲಕ್ಷಿಸುವಂತಿಲ್ಲ . ಮಗಳು ಚೆನ್ನಾಗಿ ಇರಬೇಕೆಂದು ತುಂಬಿದ ಸಂಸಾರವನ್ನು ಒಡೆಯುವ ಈ ರೀತಿಯ ಅಮ್ಮಂದಿರು ನಮ್ಮ ನಡುವೆ ಎಷ್ಟು ಮಂದಿಯಿಲ್ಲ ?

ವಿಧವೆಯಾಗಿ ಮುತ್ತೆೈದೆತನ ಮರಳಿ ಪಡೆಯುವ ಶಾಂತಾಳನ್ನು ಮತ್ತೆ ನೆನಪಿಸಿಕೊಳ್ಳೋಣ. ಜೀವನದಲ್ಲಿ ಸುಂದರ ಕನಸುಗಳನ್ನು ಕಟ್ಟಿಕೊಂಡ ಈಕೆ ಜೀವನದ ಪ್ರತಿಕ್ಷಣ ಸಮಾಜದ ಚುಚ್ಚು ಮಾತುಗಳಿಗೆ ಗುರಿಯಾಗಿಯೇ ಉಳಿದವಳು. ಅಳುಮುಂಜಿಯಂಥ ಶೇಷನ ಹೆಂಡತಿಯಾಗಿ ಸಮಾಜದ ಬಾಯಿ ಮುಚ್ಚಿಸುವ ಸವಾಲಿನ ಪಾತ್ರವಿದು.

ತಮ್ಮನ ಹಿತ, ಅದಕ್ಕೂ ಮುಖ್ಯವಾಗಿ ಸ್ವಹಿತ ಬಯಸುವ ಪ್ರಭಾಕರನ ಅಕ್ಕ ಭಾಮ, ಗಾಯತ್ರಿಯ ಬಗ್ಗೆ ಪ್ರೀತಿಯಿದ್ದರೂ ಮಗನ ರೂಪದಲ್ಲಿ ಆಕೆಯನ್ನು ಕಲ್ಪಿಸಿಕೊಳ್ಳಲಾಗದ ಅತ್ತೆ ವಸುಧಾ, ದುರಂತ ಪಾತ್ರದ ಸುಕನ್ಯಾ ಕೂಡಾ ಮೂಡಲಮನೆಯಲ್ಲಿ ಗಮನ ಸೆಳೆಯುತ್ತಾರೆ.

ಒಟ್ಟಿನಲ್ಲಿ ‘ಮೂಡಲ ಮನೆ’ ವಿಶಿಷ್ಠ ಹೆಣ್ಣುಗಳಿಂದ ಕೂಡಿದ ಧಾರಾವಾಹಿ ಎಂಬುದರಲ್ಲಿ ಎರಡು ಮಾತಿಲ್ಲ . ಸಶಕ್ತ ಪುರುಷಪಾತ್ರಗಳು ಇಲ್ಲಿದ್ದರೂ, ಕಥೆಯ ನಿಜವಾದ ಶಕ್ತಿಯಿರುವುದು ಸ್ತ್ರೀಪಾತ್ರಗಳಲ್ಲಿಯೇ. ಹಾಗಾಗಿ, ಇದು ಮಹಿಳೆಯರು ಕಟ್ಟಿದ ಮನೆ!

ವೈಶಾಲಿ ಕಾಸರವಳ್ಳಿ ನಿರ್ಮಾಣದ ‘ಮೂಡಲ ಮನೆ’ ಧಾರಾವಾಹಿ ಕೇವಲ ಕಥೆಯಾಂದನ್ನು ನಿರೂಪಿಸುತ್ತಿಲ್ಲ ; ಅವಗಣನೆಗೆ ಒಳಗಾದ ಮೌಲ್ಯಗಳನ್ನು ಪ್ರಭಾವಶಾಲಿ ಮಾಧ್ಯಮದ ಮೂಲಕ ಪುನಃ ಮಂಡಿಸುತ್ತಿದೆ. ಇಂಥ ಪ್ರಯತ್ನಗಳು ಹೆಚ್ಚಲಿ.


ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X