ಎಮ್ಮ ಮನೆಯಂಗಳದಿ ಅರಳಿ ನಲುಗುವ ಚಿಟ್ಟೆಯ ಬದುಕು

S. Madhusoodhana Pejathayaಸಾರ್‌! ರಾಮಪ್ರಿಯನ್‌ ಸಾಹೇಬರೇ ನಮಸ್ಕಾರಗಳು.

ನಮ್ಮ ತೋಟದ ಮನೆಯಲ್ಲಿ ನಾವು ದಿನಾ ಬೆಳಗಿನ ಆರು ಗಂಟೆಗೆ ಮನೆಯ ಬಾಗಿಲು ತೆರೆದಾಗ, ಮೊಟ್ಟೆ ಇಟ್ಟು ಇಟ್ಟು ಸುಸ್ತಾದ ನಾಲ್ಕಾರು ಬಣ್ಣದ ಚಿಟ್ಟೆಗಳನ್ನು ಕಾಣುತ್ತೇನೆ. ಅವು ಹೆಬ್ಬಾಗಿಲ ಲೈಟಿನಿಂದ ಆಕರ್ಷಿತವಾಗಿ ಲೈಟಿನ ಸುತ್ತ ಹಾರಾಡಿ ಬಂಗಲೆಯ ( ಕಾಫಿ ಬೆಳೆಗಾರನ ಮನೆ ಹೇಗಿದ್ದರೂ, ಅದಕ್ಕೆ ‘ಬಂಗಲೆ ’ ಎಂಬ ಹೆಸರು ನಮ್ಮ ಮಲೆನಾಡಿನಲ್ಲಿ ! ) ಹೆಬ್ಬಾಗಿಲುಗಳ ಮೇಲೆ ಕುಳಿತಿರುತ್ತವೆ.

ಅವು ಸಾಧಾರಣ ರೂಪಾಯಿ ಪಾವಲಿಯ ಅಗಲದಿಂದ ಹಿಡಿದು ನನ್ನ ಎರಡೂ ಹಸ್ತಗಳನ್ನು ಜೋಡಿಸಿದಷ್ಟು ದೊಡ್ಡದಾಗಿ ಇರುತ್ತವೆ.

ಅಂದರೆ, ಒಂದರಿಂದ ಸುಮಾರು ಒಂಬತ್ತು ಇಂಚು ಅಗಲ ಇರುತ್ತವೆ.

ಅವುಗಳ ಆಕಾರ ಭಿನ್ನ - ಮತ್ತು ಬಣ್ಣಗಳ ವೈವಿಧ್ಯ ನಿತ್ಯ ನೂತನ! - ದೈನಂದಿನ ಸೂರ್ಯೋದಯದಂತೆ!

ಬೆಳಗಿನ ಇಬ್ಬನಿಯು ಗಾಳಿಯಲ್ಲಿ ಬಂದು ಅವುಗಳ ತಂಪಾದ ರೆಕ್ಕೆಗಳ ಮೇಲೆ ಸಾಂದ್ರೀಕರಿಸಿರುವುದರಿಂದ ಸೂರ್ಯನ ಶಾಖ ತಾಗುವ ತನಕ ಅವಕ್ಕೆ ಹಾರಲು ತುಂಬಾ ಕಷ್ಟ ಎನಿಸಿರುತ್ತದೆ.

ಅಷ್ಟರಲ್ಲಿ ಎಲ್ಲಿಂದಲೋ ಒಂದು ಮಡಿವಾಳ ಹಕ್ಕಿ ಪ್ರತ್ಯಕ್ಷ ಆಗುತ್ತದೆ. ನಾನು ಬಾಗಿಲು ಸರಿಸಿ ಒಳಗೆ ಹೋದರೆ ಈ ಚಿಟ್ಟೆಗಳೆಲ್ಲಾ, ಆ ಬಾಲ ಕುಣಿಸುವ ಸುಂದರ ಹಕ್ಕಿಗೆ ಬೆಳಗಿನ ಫಳಾಹಾರಕ್ಕೆ ಈಡಾಗುತ್ತವೆ! ಈ ನಿತ್ಯ ಸತ್ಯ ನನಗೆ ಗೊತ್ತು. ಆ ಹೊತ್ತಿಗೆ ಅವುಗಳನ್ನು ನೋಡಿ ನನಗೆ ಅಯ್ಯೋ! ಎನಿಸುತ್ತದೆ.

ನಾನು ಒಂದು ಹಳೆಯ ಪತ್ರಿಕೆ ತಂದು ಅಲ್ಲಿರುವ ಚಿಟ್ಟೆಗಳನ್ನೆಲ್ಲಾ ಬಹು ಜಾಗ್ರತೆಯಾಗಿ ಹಿಡಿದು ಆ ಪತ್ರಿಕೆಯಮೇಲೆ ಕೂರಿಸುತ್ತೇನೆ.

ಮನೆಯಾಳಗೆ ತೆಗೆದುಕೊಂಡು ಹೋಗಿ ಮನೆಯಾಳಗಿನ ಚೌಕಿ( ಬಿಸಿಲಂಗಳ = ಭವಂತಿ )ಯಲ್ಲಿ ಬಿಸಿಲು ಬೀಳುವ ಜಾಗದಲ್ಲಿರಿಸಿ ನಾನು ಮುಖ ತೊಳೆದು ಹಲ್ಲು ಉಜ್ಜಲು ಬಚ್ಚಲಿಗೆ ನಡೆಯುತ್ತೇನೆ.

ಆ ಮಡಿವಾಳ ಹಕ್ಕಿ ಮನೆಯಾಳಗೆ ಬರುವ ಧೈರ್ಯ ಮಾಡುವುದಿಲ್ಲ.

ನನ್ನ ಪ್ರಾತಃರ್ವಿಧಿಗಳನ್ನು ಮುಗಿಸಿ ನಾನು ತಿರುಗಿ ಬರುವಾಗ, ಸಶಕ್ತ ಚಿಟ್ಟೆಗಳು ರೆಕ್ಕೆ ಒಣಗಿಸಿಕೊಂಡು ದೂರ ಹಾರಿ ಹೋಗಿರುತ್ತವೆ. ಸ್ವಲ್ಪ ದುರ್ಬಲವಾದುವು ಸನಿಹದಲ್ಲೆಲ್ಲೋ ಹಾರಿ ಕುಳಿತು ತಮ್ಮ ರೆಕ್ಕೆಗಳಿಗೆ ವ್ಯಾಯಾಮ ಮಾಡಿಸಿಕೊಂಡಿರುತ್ತವೆ. ಅತೀ ದುರ್ಬಲವಾಗಿ ಹಾರಲಾರದ ಚಿಟ್ಟೆಗಳು ಎಲ್ಲಿಂದಲೋ ಬಂದು ಸಾಲು ಕಟ್ಟಿದ ಇರುವೆಗಳಿಗೆ ಆಹಾರವಾಗಿ ಇರುವೆಗಳ ಗೂಡಿನತ್ತ ಎಳೆದೊಯ್ಯಲ್ಪಡುತ್ತವೆ.

ಅಷ್ಟರಲ್ಲೇ, ಚಿಟ್ಟೆಗಳ ಮತ್ತು ಇರುವೆಗಳ ‘ವಿಲನ್‌’ ಆದ ನಮ್ಮ ಬಂಗಲೆಯ ಕಸ ಗುಡಿಸುವ ಹುಡುಗ ಪರಕೆ ಸಮೇತ ಹಾಜರಾಗುತ್ತಾನೆ. ಚೌಕಿಯ ನೆಲದ ಮೇಲೆ ಉಳಿದ ಚಿಟ್ಟೆಗಳು ಮತ್ತು ಇರುವೆಗಳನ್ನು ಆತ ನಿರ್ದಾಕ್ಷಿಣ್ಯವಾಗಿ ಗುಡಿಸಿ ತಿಪ್ಪೆಗೆ ಸೇರಿಸುತ್ತಾನೆ.

ಕಸಗುಡಿಸುವ ಹುಡುಗನಿಗೆ ಈ ದೃಶ್ಯ ಮಾಮೂಲಿ! ಅವನಿಗೆ ಎನೂ ಅನ್ನಿಸುವುದಿಲ್ಲ.

ನಾನು ಒಮ್ಮೆ ಆಲೋಚಿಸುತ್ತೇನೆ ‘ನಾನೆಲ್ಲಾದರೂ ಚಿಟ್ಟೆಯ ಅಥವಾ ಇರುವೆಯ ಜನ್ಮ ಪಡೆದಿದ್ದರೆ!’ ಎಂದು!

ಕೊನೆಗೊಮ್ಮೆ ನಿಟ್ಟುಸಿರು ಬಿಟ್ಟು ನನ್ನೊಳಗೇ ಹೇಳಿಕೊಳ್ಳುತ್ತೇನೆ

‘ಪೆಜತ್ತಾಯ! ನೀನು ಈ ದಿನದ ಒಂದು ಒಳ್ಳೆ ಕೆಲಸ ಮಾಡಿದೆ...... ಮುಂದಿನದು ಆ ವಿಧಾತನ ಇಚ್ಛೆ!’ ಎಂದು.

ನಾನು ನನ್ನ ಕೆಲಸದವರ ಬೆಳಗಿನ ಹಾಜರಿ ತೆಗೆದುಕೊಳ್ಳಲು ಧಾವಿಸುತ್ತೇನೆ.

‘ಯಾರು ಸಹಾಯ ಮಾಡಲಿ, ಬಿಡಲಿ! - ಈ ಜಗತ್ತಿನಲ್ಲಿ ಬಲವಂತರು ಮಾತ್ರ ಬಾಳುತ್ತಾರೆ! ’

ಇದು ನಾನು ನೋಡಿ ಕಲಿಯುವ ನಿತ್ಯ ಸತ್ಯದ ಪಾಠ.

ಇಂತೀ

- ಎಸ್‌. ಮಧುಸೂದನ ಪೆಜತ್ತಾಯ,
ಸುಳಿಮನೆ ಕಾಫಿ ತೋಟ
ಬಾಳೆಹೊಳೆ - 577 179


ಮುಖಪುಟ / ಸಾಹಿತ್ಯ-ಸಂಸ್ಕೃತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+