• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂಗಾರೆಂಬ ರಾಜಕುಮಾರನ ಸುತ್ತಮುತ್ತ ...

By Staff
|

ಮಲೆನಾಡಿನ ಮಳೆಗಾಲದ ಕುರಿತಾದ ಈ ಋತುವಿನ ಅತ್ಯುತ್ತಮ ಲೇಖನಗಳನ್ನು ಓದುತ್ತಿದ್ದಂತೆ ವಿಚಿತ್ರವಾದ ಸಂಕಟ ನನ್ನನ್ನು ಆವರಿಸುತ್ತಿದೆ. ಸರಸ್ವತಿ ರಾಘವೇಂದ್ರ ಅವರು ತಮ್ಮ ಲೇಖನವೊಂದರಲ್ಲಿ ಮುಂಗಾರಿನ ಕುರಿತಾಗಿ ಹೇಳುತ್ತ ಇದು ‘ಜೀವಜಾಲಕ್ಕೇ ಚೈತನ್ಯ ಚಿಮ್ಮಿಸುತ್ತಾ ಹೊಂಗನಸ ನೇಯ್ದುಕೊಡುವ ಕನಸುಗಳ ರಾಜಕುಮಾರ’ ಎಂದಿದ್ದಾರೆ. ನಿಜಕ್ಕೂ ಜೀವಸೆಲೆಯನ್ನು ಉಕ್ಕಿಸುವ ಈ ಮುಂಗಾರು ನಮ್ಮ ಮಲೆನಾಡಿನಲ್ಲಿ ಇಂದು ಅಳಿದೂ- ಸುರಿದೂ ಬರುತ್ತಿದೆ. ಈ ರಾಜಕುಮಾರ ಇಂದು ಅನಿಶ್ಚಿತವಾಗಿದ್ದಾನೆ.... ಸೊರಗಿದ್ದಾನೆ....ತನ್ನ ಮೋಹಕತೆಯನ್ನು ಕಳೆದುಕೊಂಡಿದ್ದಾನೆ.

ಮಳೆರಾಯನ ಸ್ಪರ್ಶದಿಂದ ಸ್ಫೂರ್ತಿಪಡೆಯುತ್ತಿದ್ದ ಸಮಸ್ತ ಜೀವಸಂಕುಲ ಇಂದು ನಿಸ್ತೇಜವಾಗಿವೆ. ಬಹಳಷ್ಟು ನಾಮಾವಶೇಷಗೊಂಡಿವೆ. ಮಲೆನಾಡಿನ ಸಂಸ್ಕೃತಿಯೇ ಮಳೆಗಾಲದ್ದು. ಈಗ ಅದಕ್ಕೆ ಹೊರತಾದ ಸಂಸ್ಕೃತಿಗೆ ಆಸ್ಪದ ದೊರಕಿದೆ! ಇಂದು ಆರಿದ್ರ ಮಳೆಯಲ್ಲೂ ಕಾಂಕ್ರೀಟನ್ನು ಹಾಕಬಹುದು. ಪುನರ್ವಸು ಮಳೆಹೊತ್ತಿಗೆ ಗದ್ದೆಗೆ ಪಂಪಿನಲ್ಲಿ ನೀರನ್ನು ಹಾಯಿಸುತ್ತಾ ‘ಅಗೇಡಿ’ ಮಾಡಬೇಕು. ತೋಟಕ್ಕೆ ಒಂದೇಸಾರಿ ಕೊಳೆರೋಗದ ಔಷಧ ಸಾಕು. ಛತ್ರಿಗಳನ್ನೇ ಕೊಳ್ಳದೇ ಶಾಲೆಗೆ ಹೋಗಬಹುದು....ಯಾಕಾದರೂ ನಮ್ಮ ತಾಲೂಕನ್ನು ಬರಪೀಡಿತ ಪ್ರದೇಶ ಅಂತ ಕರೆದುಕೊಂಡರೋ! ನಮ್ಮ ಮಲೆನಾಡು ನಿಜವಾಗಿ ಬರಡಾಗುತ್ತಿದೆ. ತನ್ನೆಲ್ಲಾ ಮುಗ್ಧತೆ, ಕನಸುಗಳನ್ನು ಕಳೆದುಕೊಂಡು ಕೊರಡಾಗುತ್ತಿದ್ದೆಯಲ್ಲ !!

***

Rays of Hopeಈ ರಾಜಕುವರ ಕೇವಲ ಕೋಮಲನಲ್ಲ. ರುದ್ರಭಯಂಕರನೂ ಹೌದು. ಈತ ಸುಂಟರಗಾಳಿಯನ್ನು ಬಳಸಿಕೊಂಡು ಬೃಹತ್‌ ವೃಕ್ಷಗಳನ್ನು ಅಲ್ಲಾಡಿಸುತ್ತಾ ನೀರನ್ನು ಭೂಮಿಯಾಳಗೆ ಇಳಿಯುವಂತೆ ಮಾಡುತ್ತಾನೆ. ಹೊಳೆ ಕೊಳ್ಳಗಳನ್ನು ಉಕ್ಕಿಸಿಕೊಂಡು ಕಾಡಿನ ಸತ್ವಗಳನ್ನು ಸಮುದ್ರಕ್ಕೆ ಸಾಗಿಸುವ ವೇಗವನ್ನು ಪಡೆಯುತ್ತಾನೆ. ಈ ಸತ್ವಕ್ಕಾಗಿ ಸಾಗರದ ಜಲಚರಗಳು ಕಾಯುತ್ತಿರುತ್ತವೆ. ಜಿಬಿರು ಮಳೆಯಿಂದ ಈ ಕೆಲಸ ಸಾಧ್ಯವಿಲ್ಲ. ಇದಕ್ಕೆ ರೌದ್ರಾವತಾರವೇಬೇಕು. ಆದರೆ ಮನುಷ್ಯ ಇನ್ನೂ ಭಯಂಕರ. ಮಾತ್ರವಲ್ಲ ದುರುಳ. ತನಗೋಸ್ಕರ ಬೃಹತ್‌ ಅಣೆಕಟ್ಟುಗಳನ್ನು ಕಟ್ಟಿಕೊಂಡು ಈ ಸತ್ವ ಸಾಗರದ ಜಲಚರಗಳಿಗೆ ತಲುಪದಂತೆ ಮಾಡುತ್ತಾನೆ. ಈಗ ಈ ಸಮಸ್ಯೆ ಇಲ್ಲ ಬಿಡಿ. ಏಕೆಂದರೆ ಸತ್ವಪೂರ್ಣವಾದ ಅರಣ್ಯವೇ ಇಲ್ಲವಲ್ಲ !

***

ಪುನಃ ಮನಸ್ಸು ಈ ರಾಜಕುಮಾರನಿಗಾಗಿ ಹಾತೊರೆಯುತ್ತದೆ. ಕಪ್ಪೆಗಳು ವಟಗುಟ್ಟುವುದು ಅರಣ್ಯರೋದನದಂತೆ ಕೇಳುತ್ತಿದೆ. ಅಡಿಕೆಗೆ ಕೊಳೆಬಂದರೂ ಪರವಾಗಿಲ್ಲ , ಮಳೆ ಸುರಿಯಲಿ ಎಂದು ತವಕಿಸುತ್ತಿದೆ. ಯಾವುದೋ ಹಕ್ಕಿಯಿಂದ ತಾನು ತಿಂದಿದ್ದ ಹಣ್ಣಿನ ಬೀಜ ಹೊರಬಿದ್ದು ಈಗ ತಾನೆ ಚಿಗುರಿ ಎರಡು ಸುಳಿಎಲೆ ಮೂಡಿತ್ತು.... ಇದನ್ನು ಕಾಪಾಡಬೇಕಾಗಿದ್ದ ರಾಜಕುಮಾರ ನಾಪತ್ತೆಯಾಗಿದ್ದಾನೆ! ಈ ಮುಂಗಾರಿನ ಪ್ರಾರಂಭದಲ್ಲಿ ಮೂಡಿದ್ದ ಭರವಸೆ ಕ್ರಮೇಣ ತಣ್ಣಗಾಗುತ್ತಿದೆ. ಚಿಗುರುತ್ತಿದ್ದ ಝರಿ ಕಣ್ಮರೆಯಾಗಿದೆ. ರಾತ್ರಿಯ ಹೊತ್ತು ಆಕಾಶ ನೋಡಿದರೆ ಬೆಳದಿಂಗಳ ಹಿನ್ನೆಲೆಯಲ್ಲಿ ಮೋಡಗಳು ಚದುರಿ ಚಲಿಸುತ್ತಿವೆ. ರಾಜಕುವರನ ಪ್ರಿಯತಮೆಯರು ತಮ್ಮ ಪ್ರಿಯತಮನಿಗಾಗಿ ದಶದಿಕ್ಕುಗಳಲ್ಲೂ ಹುಡುಕುತ್ತಿದ್ದಂತೆ ಭಾಸವಾಗುತ್ತಿದೆ. ಚಂದಮಾಮನ ಕೋಮಲ ಬೆಳಕು ಭಯವನ್ನು ಮೂಡಿಸುತ್ತಿದೆ. ಇಡೀ ಪರಿಸರದಲ್ಲಿ ಅಲ್ಲೋ ಇಲ್ಲೋ ಕೇಳುವ ಕಪ್ಪೆಗಳ ಹೊರತಾಗಿ ಸಂಪೂರ್ಣ ನಿಶಬ್ದ ಆಕ್ರಂದನ. ನಿಜವಾಗಿ ಮೌನಕ್ಕೂ- ನಿಶಬ್ದಕ್ಕೂ ಇರುವ ವ್ಯತ್ಯಾಸ ಗೊತ್ತಾಗುತ್ತಿದೆ. ಈ ಹೊತ್ತಿನಲ್ಲಿ ನನ್ನ ಬಾಲ್ಯದ ಮಳೆಗಾಲದ ನೆನಪು ಗತಿಸಿದ ಇತಿಹಾಸದಂತೆ, ದಂತಕತೆಯಂತೆ, ಬದುಕಿನ ಪುಟಗಳಲ್ಲಿ ಕಳೆದುಹೋದ ಮೊದಲ ಪ್ರೇಮದಂತೆ ಕಾಣುತ್ತಿದೆ.

***

ಯಾಕೆ ಹೀಗಾಗುತ್ತದೆ? ಈ ರಾಜಕುವರನ ಯೌವನ ಮುಗಿಯಿತೆ? ಅಥವ ಮನುಷ್ಯನಂಥ ಜೀವಿಯನ್ನು ಸೃಷ್ಟಿಸಿಕೊಂಡ ಪ್ರಕೃತಿ ತನ್ನ ಮರುಹುಟ್ಟಿಗಾಗಿ ಸಾವನ್ನು ತಂದುಕೊಳ್ಳಲು ಹೀಗೆಲ್ಲಾ ಮಾಡಿಸುತ್ತಿದೆಯೇ? ಇದೇ ಇರಬಹುದು. ಇದು ರಾಜಕುಮಾರನ ವೃದ್ಧಾಪ್ಯವೂ ಇರಬಹುದು? ಒಂದು ತಲೆಮಾರನ್ನು ಅನುಭವಿಸಿದ ನಮಗೆ ಈ ಹೊಸಘಟ್ಟವನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ನಮ್ಮ ಮಕ್ಕಳಿಗೆ ಇದೇನೂ ಆತಂಕ ಮೂಡಿಸುತ್ತಿಲ್ಲವಲ್ಲ. ಈ ಘಟ್ಟ ನಮಗೆ ಅಪರಿಚಿತ, ವಿಭಿನ್ನ, ಅನಪೇಕ್ಷಿತ.

***

ಇನ್ನು ನಾವು ವಸ್ತುನಿಷ್ಠವಾಗಿ ಯೋಚಿಸಬೇಕೆಂದರೆ ವೈಜ್ಞಾನಿಕವಾಗಿ ಇದನ್ನು ನೋಡುವುದು. ಅಂಕಿ ಅಂಶಗಳಿಂದ ಘಟನಾವಳಿಗಳನ್ನು ಅರ್ಥೈಸಿಕೊಳ್ಳುವುದು. ಹಾದಿಯನ್ನು ತಿದ್ದಿಕೊಳ್ಳುವುದು. ಸರ್ಕಾರದ ಮೂಲಕವಾಗಿ ಯೋಜನೆಗಳನ್ನು ಹಾಕಿಕೊಳ್ಳುವುದು! ಈ ಹೊತ್ತಿನಲ್ಲಿ ನಮಗೆ ಮಳೆಗಾಲವೆಂದರೆ ಅದು ರಾಜಕುವರನ ಆಗಮನವಲ್ಲ. ಇಂತಿಷ್ಟು ಇಂಚು ಮಳೆ; ಅಣೆಕಟ್ಟುಗಳ ನೀರಿನ ಮಟ್ಟ ; ಅಂತರರಾಜ್ಯ ನೀರಿನ ಸಮಸ್ಯೆಯಿಂದ ಪಾರಾಗುವ ಅವಕಾಶವಷ್ಟೆ ! ಜಾಗತಿಕ ಪರಿಸರ ರಕ್ಷಣೆಯ ಒಡಂಬಡಿಕೆಯ ಅಡಿಯಲ್ಲಿ ಈ ವಿಚಾರ ಚರ್ಚಿತವಾಗುತ್ತವೆ! ಈ ಮುಂಗಾರಿಗೆ ಬೇಕಾದ ಅರಣ್ಯಪ್ರಮಾಣಗಳನ್ನು ಶೇಕಡಾವಾರಿನಲ್ಲಿ ಹೇಳಲಾಗುತ್ತದೆ. ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ ನಮ್ಮ ದೇಶದ ಶೇಕಡಾ 30ರಷ್ಟು ಭೂ ವಿಸ್ತೀರ್ಣದಲ್ಲಿ ಅರಣ್ಯವಿರಬೇಕು. ಅದು ಇಲ್ಲದಿದ್ದರೆ ವಿಶ್ವಬ್ಯಾಂಕಿನ ಸಹಾಯದಲ್ಲಿ ಅರಣ್ಯೀಕರಣವನ್ನು ಕೈಗೊಳ್ಳಬೇಕು. ದೇಶದ ಯೋಜನೆಗಳಿಗಾಗಿ ಕಣ್ಣಿಗೆ ಬೀಳದೇ ಉಳಿದುಕೊಂಡ ಅರಣ್ಯವನ್ನು ನ್ಯಾಷನಲ್‌ ಪಾರ್ಕ ಮಾಡುವುದು ಕೂಡ ಇಂಥದ್ದೇ ಒಂದು ಕ್ರಮ.

ನೀರಿನ ಹಾಹಾಕಾರವಿರುವ ರಾಜ್ಯಗಳಿಗೆ ಅರಣ್ಯ ಹೋದರೂ ಸರಿ, ಅಲ್ಲಿನ ಬುಡಕಟ್ಟು ಜನ ನಿರಾಶ್ರಿತರಾದರೂ ಸರಿ, ನದಿಗೆ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿ, ಕಟಾವುಗೊಳಿಸಿದ ಅರಣ್ಯಕ್ಕೆ ಬದಲಾಗಿ ಇತರೆಡೆ ಅಕೇಶಿಯಾ ನೆಡುತೋಪನ್ನು ಇದೇ ವಿಶ್ವಬ್ಯಾಂಕಿನ ಸಾಲವನ್ನು ಪಡೆದು, ಬಡಜನರಿಗೆ ಕೂಲಿ ಕೆಲಸ ಸಿಗುವಂತೆ ನಿರ್ಮಿಸುವುದು. ಸ್ಥಳಾಂತರಗೊಂಡ ನಿರಾಶ್ರಿತರ ಪುನರ್ವಸತಿಗಾಗಿ ಮತ್ತೊಂದು ಬೃಹತ್‌ ಕಾರ್ಯಕ್ರಮ ಹಾಕಿಕೊಳ್ಳುವುದು. ಈಗ ಸರ್ಕಾರಕ್ಕೆ ಎರಡು ಮಹತ್ವದ ಕೆಲಸಗಳು. ಒಂದು - ಪರಿಸರ ರಕ್ಷಣೆ. ಮತ್ತು ಜನರಿಗೆ ನೀರನ್ನು ಒದಗಿಸುವುದು. ಇದಕ್ಕೆ ಗಂಗಾ ಕಾವೇರಿಯ ಜೋಡಣೆಯೂ ಆಗಬೇಕು! ಬಲಹೀನವಾದ ಕಾಲನ್ನು ಬಲಪಡಿಸಲು ಕೈನಲ್ಲಿನ ರಕ್ತನಾಳವನ್ನು ಜೋಡಿಸಬೇಕು! ದೇಹದ ಹೊರಭಾಗದಲ್ಲಿಯೇ ಈ ಜೋಡಣಾಕ್ರಿಯೆ ಏರ್ಪಡುವಂತೆ ಸಂಶೋಧನೆ ನಡೆಯುತ್ತಿವೆಯಂತೆ!!

***

ಮುಂಗಾರನ್ನು ‘ಐಲುದೊರೆ’ ಎಂದು ಲೇಖಕರೊಬ್ಬರು ಕರೆದಿದ್ದಾರಲ್ಲ , ಅದಕ್ಕೆ ಬದಲಾಗಿ ಈ ಹೆಸರನ್ನು ನಮ್ಮ ಆಧುನಿಕ ಮನಸ್ಸಿಗೆ ಕೊಟ್ಟುಕೊಂಡರೆ ಚೆನ್ನ. ನಮ್ಮ ಸಿನಿಮಾ ತಾರೆ ಉಪೇಂದ್ರ ತನ್ನ ಸಿನಿಮಾಕ್ಕೆ ‘ಎಚ್‌. 2 . ಓ’ ಎಂದು ಹೆಸರನ್ನಿಟ್ಟು ಪ್ರಾಮಾಣಿಕತೆಯನ್ನು ಮೆರೆದಿದ್ದಾನೆ. ಇಂದು ನಮ್ಮೆಲ್ಲರಿಗೆ ಮುಂಗಾರೆಂದರೆ, ನದಿಯೆಂದರೆ, ಸಾಗರವೆಂದರೆ ಕೇವಲ- ಎಚ್‌. 2 . ಓ !

***

ಕೊನೆಯ ಹನಿ:

ಮಲೆನಾಡಲ್ಲಿ ನಕ್ಸಲೀಯರು ಸಂಘಟಿತರಾಗುತ್ತಿರುವುದು ಈಗ ಚರ್ಚಿತ ವಿಷಯ. ಇಂಥ ಸಮಯದಲ್ಲಿ ತಾನೆ ಅವರು ಹುಟ್ಟುವುದು? ಇಲ್ಲಿನ ಪರಿಸರ ವ್ಯವಸ್ಥೆ, ಜನತಂತ್ರ ನಶಿಸುತ್ತಿದ್ದಂತೆ ಸಹಜವಾಗಿ ಇವರು ಗೋಚರಿಸುತ್ತಾರೆ. ಬಯಲಾದ ಕಾಡಿನ ಪ್ರದೇಶದಲ್ಲಿ ಉಪಟೋರಿಯಂ ಬೆಳೆಯುವುದಿಲ್ಲವೇ ಹಾಗೆ. ಇದಕ್ಕೆ ಯಾರೋ ಕಮ್ಯೂನಿಸ್ಟ್‌ ಗಿಡವೆಂಬ ಅರ್ಥಪೂರ್ಣ ಹೆಸರಿಟ್ಟಿದ್ದಾರೆ. ಈ ಗಿಡದಲ್ಲಿ ಅಗಾಧ ಪ್ರಮಾಣದಲ್ಲಿ ಹಾರ್ಮೋನ್‌ ಇದೆಯಂತೆ. ಭೂಮಿಯನ್ನು ಪುನಃ ಸತ್ವಶಾಲಿಯನ್ನಾಗಿಸಲು, ಅರಣ್ಯಸೃಷ್ಟಿಯ ಪೂರ್ವ ತಯಾರಿಗಾಗಿ ಪ್ರಕೃತಿ ಇಂಥ ಗಿಡಗಳನ್ನು ಬೆಳೆಸಿಕೊಳ್ಳುತ್ತವಂತೆ. ಈ ಗಿಡಗಳನ್ನು ಚೈತನ್ಯಶಾಲಿ ಗೊಬ್ಬರವನ್ನಾಗಿ ಬಳಸಿ ಎಂದು ಆರ್‌.ಎಸ್‌.ಎಸ್‌. ನೇತಾರರಾಗಿದ್ದ ಕೃಷಿಋಷಿ ದಿವಂಗತ ಪುರುಶೋತ್ತಮರಾಯರು ಹೇಳುತ್ತಿದ್ದರು. ಹೀಗೆ ಕಮ್ಯೂನಿಸ್ಟ್‌ ಗಿಡವೊಂದು ಆರ್‌.ಎಸ್‌.ಎಸ್‌. ನವರ ಕಾಂಪೋಶ್ಟಿಗೆ ಒದಗಿಬಂತು!

ಅದಿರಲಿ, ಭೂಮಿಯನ್ನು ಪುನಃ ಜೀವಂತಗೊಳಿಸಿಕೊಳ್ಳಲು ಸಹಜವಾಗಿ ಹುಟ್ಟುವ ಈ ಸಸ್ಯಗಳನ್ನು ನಾವು ಹಾಗೆಯೇ ಬಿಡುವುದಿಲ್ಲ. ನಮ್ಮ ಗೊಬ್ಬರಕ್ಕೆ ಇವು ಈಡಾಗಬೇಕಾಗುತ್ತದೆ. ಮತ್ತೆ ಅರಣ್ಯ ಬೆಳೆಯುವ ಅವಕಾಶವಿಲ್ಲ. ಅಂತೆಯೇ ನಾವು ಪೋಲಿಸ್‌ ಎನ್‌ ಕೌಂಟರಿನ ಮೂಲಕ ಈ ನಕ್ಸಲೀಯರನ್ನು ಹತ್ತಿಕ್ಕಲು ಪ್ರಯತ್ನಿಸುತ್ತೇವೆ. ನಿಜವಾಗಿ ಯಾವುದೇ ಸದುದ್ದೇಶದಿಂದ ಪ್ರಕೃತಿಯು ಮಾಡಿಕೊಳ್ಳುವ ಏರ್ಪಾಡುಗಳನ್ನು ದಮನಗೊಳಿಸುವುದು ಮನುಷ್ಯ ಸ್ವಭಾವ. ಹಾಗಂತ ನಕ್ಸಲೀಯರು ಮನುಷ್ಯರೂ ಆಗಿರುವುದರಿಂದ ಈ ಗುಣ ಅವರಲ್ಲೂ ಸ್ವಭಾವಗತ.

ನಕ್ಸಲೀಯರನ್ನು ಹಾರ್ಮೋನ್ಯುಕ್ತ ಪ್ರಾಕೃತಿಕ ಸಸ್ಯವಾದ ಉಪಟೋರಿಯಂ ಎಂದು ಕರೆಯುವುದಾದರೆ ಸಮಾಜಮುಖಿ ಹಿಂದೂ ಹೆಮ್ಮೆಯ ರಾ.ಸ್ವ.ಸಂಘ ಕ್ಕೆ ಇವರು ಕಾಂಪೋಸ್ಟ್‌ ಗೊಬ್ಬರವಾಗಿ ಉಪಯುಕ್ತವಾಗಬಲ್ಲರು. ಇದೊಂದು ಗಣಿತದ ತರ್ಕ ಅಷ್ಟೆ. ಹೇಗೆಂದರೆ ಈ ಸಂಸ್ಕೃತಿಯ ಸತ್ವಯುತತೆ (ಗೊಬ್ಬರ) ಸಮಾಜದ ವಿಭಿನ್ನ ಹುಟ್ಟಿನಿಂದ ಏರ್ಪಡುತ್ತದೆ. ನಮ್ಮ ಹಿಂದೂಸ್ಥಾನದ ಸಂಸ್ಕೃತಿ ಹೇಗೆ ಸಮೃದ್ಧವಾಯಿತೆಂದು ಆಲೋಚಿಸಿದಾಗ ಅದು ಇಲ್ಲಿಗೆ ಬಂದ ಪರ್ಶಿಯನ್ನರಿಂದ, ಮೊಗಲರಿಂದ, ಐರೋಪ್ಯರಿಂದ, ಕ್ರಿಶ್ಚಿಯನ್ನರಿಂದ, ಒಳಗಿನವರೇ ಆದ ಅಸಂಖ್ಯ ಬುಡಕಟ್ಟು ಜನರಿಂದ... ಆಯಿತಲ್ಲವೇ. ಮತ್ತು ಇಲ್ಲಿ ಏರ್ಪಟ್ಟ ತಾತ್ವಿಕ ಸಂಘರ್ಷಗಳಿಂದ, ಜಿಜ್ಞಾಸೆಗಳಿಂದ ಆಯಿತಲ್ಲವೇ. ಹೀಗೆ ಇವೆಲ್ಲವೂ ಭಟ್ಟಿ ಇಳಿದು ಹರಳುಗಟ್ಟಿ ಒಂದು ಸಂಸ್ಕೃತಿ ಆಯಿತು. ಇದು ನಿರಂತರ ಪ್ರಕ್ರಿಯೆ. ಇದನ್ನೇ ಸಮಾಜದ ಸತ್ವಶಾಲಿ ಕಾಂಪೋಸ್ಟ್‌ ಗೊಬ್ಬರವೆಂದು ಕರೆಯುವುದಾದರೆ - ಹಿಂದೂ ಸಮಾಜದ ಹೆಮ್ಮೆಯ ಜನರಿಗೆ ಇಂತಹ ಜನರು ಬೇಕೇಬೇಕು ಎಂದು ಅರ್ಥವಾಗುತ್ತದೆ. ಆಗ ಸಂಸ್ಕೃತಿಯ ಒಳಗಿನ ಆಕ್ರಮಣಕಾರಿ ಸಿದ್ಧಾಂತವಾದ ನಕ್ಸಲಿಸಂ ಹೀಗೆ ಸಮಾಜವನ್ನು ತಿದ್ದುವ, ಸತ್ವಪೂರ್ಣವಾಗಿಸುವ, ಎಚ್ಚರಿಸುವ ಒಂದು ‘ಧಾತು’ವೂ ಹೌದೆಂದು ಅನ್ನಿಸಿಬಿಡುತ್ತದೆ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more