ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಕ್ಕಾಗಿ ಕೈಎತ್ತಿದ ಗಣಕ ಪರಿಷತ್ತು

By Staff
|
Google Oneindia Kannada News
  • ಮಂಜುನಾಥ ಭಟ್‌
ಒಮ್ಮೆ ಹೂದೊಟದಲಿ, ಒಮ್ಮೆ ಕೆಳೆ ಕೂಟದಲಿ,
ಒಮ್ಮೆ ಸಂಗೀತದಲಿ, ಇನ್ನೊಮ್ಮೆ ಶಾಸ್ತ್ರದಲಿ,
ಮತ್ತೊಮ್ಮೆ ಮೌನದಲಿ ಬ್ರಹ್ಮಾನುಭವಿಯಾಗು ಮಂಕುತಿಮ್ಮ

- ಡಿವಿಜಿಯವರ ಕಗ್ಗದ ಸಾಲುಗಳು ನೆನಪಾದದ್ದು ಫೆ.26ರ ಕನ್ನಡ ಗಣಕ ಪರಿಷತ್ತಿನ ಕಾರ್ಯಕ್ರಮದಲ್ಲಿ . ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗಣಕ ಪರಿಷತ್ತು ಹೊಸದಾಗಿ ಅಭಿವೃದ್ಧಿ ಪಡಿಸಿರುವ ‘ಕನ್ನಡ ಗ್ರಂಥ ಸಂಪದ’ ಎನ್ನುವ ಅಂತರಜಾಲ ತಾಣ ಆರಂಭಗೊಂಡಿತು. ಅದು ಗಣಕ ಪರಿಷತ್ತಿನ ಸಾಧನೆಯ ಹಾದಿಯ ಮತ್ತೊಂದು ಮೈಲುಗಲ್ಲು .

www.kannadagranthasampada.org. ಕನ್ನಡದಲ್ಲಿ ಈವರೆಗೆ ಪ್ರಕಟವಾದ ಗ್ರಂಥಗಳ ವಿವರಗಳನ್ನು ತಕ್ಷಣ ತಿಳಿಸುವ ಗ್ರಂಥಸೂಚಿ ಇದಾಗಿದೆ. ಈ ಸೂಚಿಯ ತಯಾರಿ ಒಬ್ಬಿಬ್ಬರಿಂದ ಸಾಧ್ಯವಾದುದಲ್ಲ ; ಶ್ರೀನಿವಾಸ ಹಾವನೂರು, ನರಸಿಂಹಮೂರ್ತಿಗಳಂತವರ ಅವಿಶ್ರಾಂತ ದುಡಿಮೆಯಿದೆ. ಕಿರಿಯರಾದ ಸುಬ್ರಹ್ಮಣ್ಯ, ಅಭಿಷೇಕ್‌ರಂಥಹ ಯುವಕರ ಶಕ್ತಿಯಿದೆ. ಹೀಗೇ ಹಲವರ ಶ್ರಮದ ಫಲವೇ ಕನ್ನಡ ಗ್ರಂಥ ಸಂಪದ ಎಂದು ನೂತನ ವೆಬ್‌ಸೈಟ್‌ ಕುರಿತು ಮಾತನಾಡಿದ ಪಂಡಿತಾರಾಧ್ಯ ಹೇಳಿದರು.

ಪಂಡಿತಾರಾಧ್ಯ ಅವರು ಹೇಳಿದ್ದರಲ್ಲಿ ಅತಿಶಯೋಕ್ತಿಯೇನೂ ಇಲ್ಲ . ಒಂದು ಕನ್ನಡ ಪುಸ್ತಕ ಸಿಗುವುದಿರಲಿ, ಆ ಪುಸ್ತಕದ ಬಗೆಗಿನ ಮಾಹಿತಿ ಕೂಡ ದೊರೆಯುವುದು ತುಂಬಾ ತ್ರಾಸದಾಯಕವಾದ ದಿನಗಳಿನವು. ಮೈಸೂರು ವಿಶ್ವ ವಿದ್ಯಾಲಯದ ಗ್ರಂಥಲೋಕ, ಹಂಪಿ ವಿದ್ಯಾಲದ ಪುಸ್ತಕ ಮಾಹಿತಿ, ಕನ್ನಡ ಪುಸ್ತಕ ಪ್ರಾಧಿಕಾರದ ಗ್ರಂಥ ಸೂಚಿ ಈ ನಿಟ್ಟಿನಲ್ಲಿ ಸ್ವಲ್ಪ ಕೆಲಸ ಮಾಡುತ್ತಿವೆಯಾದರೂ, ಸಮಗ್ರ ಎನ್ನುವ ನಿಟ್ಟಿನಲ್ಲಿ ದೊಡ್ಡದೊಂದು ಕೆಲಸ ನಡೆದಿರುವುದು ಈಗಲೇ, ಗಣಕ ಪರಿಷತ್ತಿಗೆ ಅಭಿನಂದನೆಗಳು.

ಪಂಡಿತಾರಾಧ್ಯರ ಹೇಳಿದಂತೆ ಮುದ್ರಣ ಮಾಧ್ಯಮಕ್ಕೆ ಪ್ರಸಾರದ ಮಿತಿ ಇದೆ. ಆದರೆ ವೆಬ್‌ಸೈಟ್‌ನ ಆಯಾಮಗಳು ಹಾಗೂ ಆಳ ಅಗಲಗಳ ವ್ಯಾಪ್ತಿ ತುಂಬಾ ದೊಡ್ಡದು. ಈ ಹಿನ್ನೆಲೆಯಲ್ಲಿ ಗ್ರಂಥಸಂಪದ ಅಂತರಜಾಲ ತಾಣಕ್ಕೆ ವಿಶಿಷ್ಠ ಮಹತ್ವವಿದೆ.

ಕನ್ನಡ ಗ್ರಂಥ ಸಂಪದದ ಉದ್ದೇಶ:

ಎಲ್ಲ ಕನ್ನಡ ಪುಸ್ತಕದ ಕುರಿತು ಒಂದೊಂದು ಪುಟದಷ್ಟು ಮಾಹಿತಿ ನೀಡುವುದು ಗ್ರಂಥ ಸಂಪದದ ಪ್ರಮುಖ ಉದ್ದೇಶ. ಪುಸ್ತಕದಲ್ಲಿ ಏನಿದೆ? ಲೇಖಕ, ಪ್ರಕಾಶಕರು ಯಾರು? ಎಂದು ತಿಳಿಸುವುದು. ಪೊಲೀಸ್‌ ಇಲಾಖೆಯಲ್ಲಿ ಎಫ್‌ಐಆರ್‌ ಇದ್ದಂತೆ, ಪುಸ್ತಕದ ಮೊದಲ ಮಾಹಿತಿ ನೀಡುತ್ತದೆ. ಇದು ಈ ಅಂತರಜಾಲ ತಾಣದ ಮೊದಲ ಹೆಜ್ಜೆ.

ಪುಸ್ತಕದ ಆಯ್ಕೆ, ಅಧ್ಯಯನ, ಸಂಶೋಧನೆಗೆ ಅನುವು ಮಾಡಿಕೊಡುವುದು ಗ್ರಂಥ ಸಂಪದದಲ್ಲಿ ಸಾಧ್ಯವಾಗಿದೆ. ಸದ್ಯಕ್ಕೆ 1300 ಪುಸ್ತಕಗಳ ಮಾಹಿತಿ ಇದೆ. ಆದರೆ ಮಾಹಿತಿ ಸೇರ್ಪಡೆ ನಿರಂತರವಾಗಿ ಬೆಳೆಯುತ್ತಾ ಹೋಗುತ್ತದೆ. ಮುಂದೆ ಕನ್ನಡದಲ್ಲಿ ಪ್ರಕಟವಾಗುವ ಪ್ರತಿಯಾಂದೂ ಪುಸ್ತಕದ ಪ್ರತಿಯನ್ನು ‘ಅಕ್ಷಯ ಮಾಹಿತಿ ಸಂಚಯ’ ಎಂಬ ವಿಭಾಗದಲ್ಲಿ ಅಳವಡಿಸಲಾಗುತ್ತದೆ. ಇದಕ್ಕೆ ಎಲ್ಲ ಕನ್ನಡ ಲೇಖಕರ, ಓದುಗರ ಸಹಕಾರ ಬೇಕು ಎಂದು ಪಂಡಿತಾರಾಧ್ಯ ಹೇಳಿದರು.

ಕನ್ನಡ ಗ್ರಂಥ ಸಂಪದ ಅಂತರಜಾಲ ತಾಣವನ್ನು, ವ್ಯವಸ್ಥೆ ಮಾಡಿದ ಪರದೆಯ ಮೇಲೆ ತೆರೆಯುವುದರ ಮೂಲಕ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿದರು.

ಕನ್ನಡ ಗಣಕ ಪರಿಷತ್ತು ಮಾಹಿತಿ ತಂತ್ರಜ್ಞಾನವನ್ನು ಕನ್ನಡಪರವಾಗಿ ಪರಿವರ್ತಿಸುವ ಕೆಲಸ ಮಾಡಿದೆ. ಈ ಕೆಲಸವನ್ನು ನಾವು ಅಭಿನಂದಿಸಬೇಕು. ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದ ಸಂದರ್ಭದ ಪ್ರೇರಣೆಗನುಗುಣವಾಗಿ ನುಡಿ-ಲಿಪಿ ತಂತ್ರಾಂಶವನ್ನು ತಂದೆವು. ಇಂದು ಅದು ಬಹಳ ಪ್ರಯೋಜನಕಾರಿಯಾಗಿದೆ.

ಕನ್ನಡ ಭಾಷೆಯ ಅಳಿವು-ಉಳಿವು ನಮ್ಮ ಕೈಯಲ್ಲಿದೆ. ಕನ್ನಡ ಕಟ್ಟುವ ಕೆಲಸವಿದೆಯಲ್ಲ, ಇದು ಬಹುಮುಖಿ ಕೆಲಸ; ಏಕಮುಖಿಯಲ್ಲ. ಒಂದು ಕಾಲದಲ್ಲಿ ಕೆಂಪೇಗೌಡ ರಸ್ತೆಯ ಚಿತ್ರ ಮಂದಿರಗಳಲ್ಲಿ ಕನ್ನಡ ಸಿನಿಮಾಗಳನ್ನು ಪ್ರದರ್ಶಿಸಬೇಕೆಂದು ನಡೆದ ಹೋರಾಟ, ಕೋಟೆ ಮೈದಾನದ ಸಂಗೀತ ಕಾರ್ಯಕ್ರಮಗಳಲ್ಲಿ ಕನ್ನಡ ಹಾಡುಗಳನ್ನು ಹೇಳಬೇಕೆಂದು ಒತ್ತಾಯಿಸಿದ್ದು, ಇವೆಲ್ಲ ಅಂದಿಗೆ ಅದು ಕನ್ನಡ ಪರ ದೊಡ್ಡ ಕೆಲಸವೆ ಎಂದು ಬರಗೂರು ಹೇಳಿದರು.

ಕನ್ನಡ ಭಾಷೆಯಲ್ಲಿ ಸಹಿ ಮಾಡಬೇಕು, ನಾಮಫಲಕ ಕನ್ನಡದಲ್ಲಿರಬೇಕು ಎಂಬ ವಿಚಾರಗಳೆಲ್ಲ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ಮಟ್ಟದಲ್ಲಿ, ಪ್ರಮಾಣದಲ್ಲಿ, ವಿಧಾನದಲ್ಲಿ ಕನ್ನಡ ಪರ ಹೋರಾಟಗಳೇ. ಆದರೆ ಈಗ, ಕೆಂಪೇಗೌಡ ರಸ್ತೆಯಲ್ಲಿ ಒಳ್ಳೆಯ ಕನ್ನಡ ಸಿನಿಮಾ ಹಾಕಬೇಕು ಎಂದು ಹೋರಾಡಬೇಕಿದೆ. ಹಿಂದಿನ ಯಾವ ಕೆಲಸಗಳೂ ನಿರರ್ಥಕವಲ್ಲ. ಸಣ್ಣ ಕೆಲಸಕ್ಕೂ ಅದರದೇ ಆದ ಮಹತ್ವವಿರುತ್ತದೆ. ಸಣ್ಣ ಸಾಂಕೇತಿಕ ಕೆಲಸವನ್ನೂ ಸಾಮೂಹಿಕವಾಗಿ ಹೇಳುವ ಪ್ರಸಂಗ ಬಹಳವಿರುತ್ತದೆ ಎಂದು ಬರಗೂರು ಅಭಿಪ್ರಾಯಪಟ್ಟರು.

ಭಾಷೆ ಉಳಿಸೋದು ಅಂದ್ರೆ ಅಕ್ಷರ ಉಳಿಸೋದಲ್ಲ. ಭಾಷಾ ಬಳಕೆ ನಿಲ್ಲಬಾರದು. ಜನಗಳ ಭಾಷೆ ಜೀವಂತ ಭಾಷೆ; ಕನ್ನಡ ಜನಭಾಷೆ. ನಮ್ಮೆದುರಿನ ಸವಾಲು ಕನ್ನಡಕ್ಕೊಂದು ಸ್ಥಾನ. ಇದು ಸಮಸ್ಯೆಯೇ ಅಲ್ಲ. ಆದರೆ ಇದನ್ನು ಹಾಗೆಯೇ ಬಿಟ್ಟರೆ ಸಮಸ್ಯೆಯಾಗುತ್ತದೆ. ಇಂದು ಕಂಪ್ಯೂಟರ್‌ ಅಂದರೆ ಇಂಗ್ಲೀಷ್‌ ಅಂತ ಅಂದ್ಕೊಂದು ಬಿಟ್ಟಿದ್ದಾರೆ. ಅದೊಂದು ಸ್ವತಂತ್ರ ಜ್ಞಾನವಷ್ಟೆ. ಈ ಇಂಗ್ಲೀಷ್‌ ನಮಗೆ ಅಗತ್ಯವಿದ್ದಷ್ಟೇ ಸಾಕು. ಚೈನಾ, ಜಪಾನ್‌,ಜರ್ಮನ್‌ಗಳಲ್ಲೂ ಇಂಗ್ಲೀಷ್‌ ಇದೆ. ಅದೂ ಒಂದು ಅಧ್ಯಯನ ವಿಷಯವಷ್ಟೆ. ಅದೇ ಮಾಧ್ಯಮದಲ್ಲಿ ಪಾಠ ನಡೆಯುವುದಿಲ್ಲ. ಅಂತೆಯೇ ಇಂದು ಮಾಹಿತಿ ತಂತ್ರಜ್ಞಾನ ಕನ್ನಡಕ್ಕೆ ಸ್ಥಾನ ಕೊಡದಿದ್ದರೆ, ನಾವದನ್ನು ಪಡೆಯಬೇಕು. ‘ಮಾಹಿತಿ ತಂತ್ರಜ್ಞಾನದ ಮಾಯಾಬಜಾರಿನಲ್ಲಿ ಕನ್ನಡ ಕಳೆಯಬಾರದು’ ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.

ಮಾಹಿತಿ ತಂತ್ರಜ್ಞಾನಕ್ಕೆ ಕನ್ನಡ ಅಳವಡಿಸಲು ಬೇಕಾದ ಪರಿಣತಿ ನಾವು ಪಡೆಯಬೇಕು. ಪರಿಣತಿಗೆ ಪೂರಕ ಸರ್ಕಾರದ ನೀತಿ-ನಿಲುವು ಬೇಕು. ಮಾಹಿತಿ ತಂತ್ರಜ್ಞಾನವನ್ನು ಕೈಗಾರಿಕೆಯಾಗಿ, ಉದ್ಯಮವನ್ನಾಗಿ ನೋಡಲಾಗುತ್ತಿದೆ. ಇದು ಕರ್ನಾಟಕಕ್ಕೆ ಜಾಗತಿಕ ಹೆಸರನ್ನು ತಂದಿರಬಹುದು. ನಿಜ, ಆದರೆ ಅದು ಕೇವಲ ಉದ್ಯಮ, ವ್ಯಾಪಾರ. ಈ ವ್ಯವಹಾರ ಸಾಂಸ್ಕೃತಿಕ ರೂಪವನ್ನು ಪಡೆದಾಗ ಅದಕ್ಕೊಂದು ಅರ್ಥ ಬರುವುದು. ಮಾಹಿತಿ ತಂತ್ರಜ್ಞಾನದಿಂದಾಗಿ ಕರ್ನಾಟಕ ಪ್ರಪಂಚದ ಭೂಪಟದಲ್ಲಿ ಮಿರುಗುತ್ತಿದೆ. ಬೆಂಗಳೂರು ಪ್ರಜ್ವಲಿಸುತ್ತಿದೆ. ಆದರೆ ಸ್ಥಳೀಯವಾಗುತ್ತಿಲ್ಲ. ದೊಡ್ಡ ದೊಡ್ಡ ಕಂಪ್ಯೂಟರ್‌ ಸಂಸ್ಥೆಗಳು ಕನ್ನಡಕ್ಕಾಗಿ ಏನಾದರೂ ಮಾಡಿವೆಯಾ? ತಮ್ಮ ಲಾಭದ ಒಂದು ಚೂರನ್ನೂ ಕನ್ನಡಕ್ಕಾಗಿ ಮಾಡದಿರುವುದು ನಿಜಕ್ಕೂ ವಿಪರ್ಯಾಸ. ಆದರೆ ಕನ್ನಡ ಗಣಕ ಪರಿಷತ್ತು ಆ ಕೆಲಸದಲ್ಲಿ ತೊಡಗಿದೆ ಎಂದು ಬರಗೂರು ವಿಶ್ಲೇಷಿಸಿದರು.

ಇದು ಒಂದು ಕ್ರಾಂತಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜನಪ್ರಿಯ ಅಂಕಣಕಾರ ಎಚ್ಚೆಸ್ಕೆ- ಕನ್ನಡ ಗಣಕ ಪರಿಷತ್ತು ಮಾಡಿರುವ ಈ ಕಾರ್ಯ ದೊಡ್ಡ ಸಾಧನೆ. 7 ವರ್ಷಗಳಿಂದಲೂ ಇದು ತನ್ನ ಕೈಲಾದ ಕೆಲಸ ಮಾಡುತ್ತಲೇ ಬಂದಿದೆ. ಆದರೆ ಇಂದು ಮಾಡಿರುವ ಕನ್ನಡ ಗ್ರಂಥ ಸಂಪದದ ಕಾರ್ಯ ಒಂದು ಕ್ರಾಂತಿ. ಅನೇಕ ವರ್ಷಗಳಿಂದ ನಡೆಸುತ್ತಿದ್ದ ಪ್ರಯತ್ನ ಎಲ್ಲವೂ ಒಟ್ಟಿಗೆ ಸೇರಿ ಮಹತ್ವದ ಫಲಿತಾಂಶ ಹೊರ ತಂದಿರುವುದು ಒಂದು Quantum jump ಎಂದರು.

20ನೇ ಶತಮಾನದಲ್ಲಿ ಕಂಪ್ಯೂಟರ್‌ ಶೋಧವಾದುದೇ ದೊಡ್ಡ ವಿಷಯವಾಗಿತ್ತು. ಆದರೆ ಅದು ಎಲ್ಲ ವಿಷಯ ತಿಳಿದ ಪಂಡಿತ ಎಲ್ಲವನ್ನೂ ತನ್ನೊಳಗೇ ಇಟ್ಟುಕೊಂಡಂತಾಗಿತ್ತು. ಆದರೆ ಯಾವಾಗ ಈ ಅಂತರಜಾಲ ಬಂತೋ ಅಂತರಜಾಲ ತಾಣ ಬಂತೋ ಜಗತ್ತಿನ ಮೂಲೆ ಮೂಲೆಯ ವಿಷಯ ಮುಷ್ಠಿಯಾಳಗಾಯ್ತು. ಕನ್ನಡ ಜಾಗತಿಕವಾಗಬೇಕು ಎಂದು ಹೇಳುತ್ತಾರೆ. ಹಾಗಂದ್ರೇನು? ನಮ್ಮ ಮಕ್ಕಳು ಅಮೆರಿಕಾನೋ ಜಪಾನೋ ಎಲ್ಲೋ ಇರ್ತಾರೆ. ಆದರೆ ಅಲ್ಲೂ ಮನೆಯಲ್ಲಿ ಕನ್ನಡ ಮಾತಾಡ್ತಾರೆ. ಯಾಕೆಂದರೆ ಅವರು ಬೇರೆ ದೇಶದಲ್ಲಿದ್ದರೂ ಅವರ ಬೇರು ಇಲ್ಲಿದೆ. ಬೇರನ್ನರಸಿ ಬರಲೇ ಬೇಕಲ್ಲವೇ? ಇದೇ ಕನ್ನಡ ಜಾಗತೀಕರಣ. ಥೇಮ್ಸ್‌ ನದಿ ನೀರನ್ನು ಕುಡಿಯುವಾಗಲೂ ಕಾವೇರಿ ನೀರು ಅಂದ್ಕೊಂಡು ಕುಡಿಯೋದೇ ಕನ್ನಡ ಜಾಗತೀಕರಣ ಎಂದು ಎಚ್ಚೆಸ್ಕೆ ಹೇಳಿದರು.

ಭಾಷೆ ಬಳಕೆಯಲ್ಲಿಲ್ಲದಿದ್ರೆ ಸತ್ತು ಹೋಗುತ್ತೆ. ಮೊದ್ಲು 5000 ಭಾಷೆ ಇತ್ತು. ಈಗ ಸರಿಯಾಗಿ 1000 ಭಾಷೆಗಳಿಲ್ಲ. ಅದರಲ್ಲೂ ಪ್ರಮುಖ ಭಾಷೆಗಳು ಕೇವಲ 500. ಫೆಸಿಪಿಕ್‌ ದ್ವೀಪದಲ್ಲಿ ಒರಾವೋ ಅನ್ನೋ ಒಂದು ಜನಾಂಗವಿತ್ತು. ಅವರದೂ ಒಂದು ಭಾಷೆಯಿತ್ತು. ದಿನೇ ದಿನೇ ಜನ ಬೇರೆ ಬೇರೆ ಕಡೆ ವಲಸೆ ಹೋಗಿ, ಹೋದ ಜಾಗದ ಸಂಸ್ಕೃತಿಯಾಂದಿಗೇ ಸೇರಿ ಕೊನೆಗೊಬ್ಬನೇ ಉಳಿದ. ಅವನ ಹೆಸರು ರೆಡ್‌ ಥಂಡರ್‌ ಗ್ಲೌ. 74 ವರ್ಷದವರೆಗೂ ಬದುಕಿದ್ದ. ಅವನ ಜೊತೆ ಅವನ ಭಾಷೆಯೂ ಸತ್ತು ಹೋಯಿತು. ಆ ಭಾಷೆಯ ಧ್ವನಿ ಮುದ್ರಣ ಇದ್ಡ್ದರೂ ಸಹ ಅದು ಪ್ರೇತ ಭಾಷೆಯಾಯ್ತು ಎಂದು ಎಚ್ಚೆಸ್ಕೆ ಹೇಳಿದರು.

ಇಂದು ಕಂಪ್ಯೂಟರ್‌ ಬಹಳ ಅನುಕೂಲಕಾರಿಯಾಗಿದೆ. ಬೆರಳ ತುದಿಯಿಂದ ಮುಟ್ಟಿದರೆ ಸಾಕು, ಜ್ಞಾನ ಬಂದೊಲಿಯುವುದು. ಆದುದರಿಂದ ನಾವು ಆದಷ್ಟು ಕಂಪೂಟರ್‌ ಕ್ಷೇತ್ರದಲ್ಲಿ ಕನ್ನಡಕ್ಕೊಂದು ಸ್ಥಾನ ತರಬೇಕು.

ಕನ್ನಡ ಪ್ರೇತ ಭಾಷೆಯಾಗಬಾರದು. ಕನ್ನಡ ಭಾಷೆಯ ವಿಸ್ತಾರ ಬಹಳವಾಗಿದೆ. ಕನ್ನಡಿಗರ ಹೃದಯವೂ ಅಷ್ಟೇ ವಿಶಾಲವಾದುದು. ಅದನ್ನೇ ಜಿ.ಪಿ.ರಾಜರತ್ನಂ ಒಂದು ಕಡೆ ಹೇಳ್ತಾರೆ:

ಜನರು ಕರ್ನಾಟಕರು ಬಲು ಘನರು
ದಾನದ ದೃಢದ ಪದ್ಮಾಸನರು
ಪರ ಹಿತಕಾಗಿ, ಜೀವವ ತೇದು
ವಾಮನರು, ವಿನಯದಿಂದೈತರಲಿ
ಮೇಣ್‌, ಖಡು ಮುನಿಸಿನಲೆ ಬರಲಿ
ಕರೆದು ಒಳಮನೆಯ, ಸರ್ವಸ್ವವನು
ಸುರಿವರು, ಕರ್ನಾಟಕರು

ರಾಜರತ್ನಂ ಸಾಲುಗಳೊಂದಿಗೆ ಎಚ್ಚೆಸ್ಕೆ ಮಾತು ಮುಗಿಸಿದರು.

ಶ್ರೀನಿವಾಸ ಮೂರ್ತಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಕಾಂತ ಶಾಸ್ತ್ರಿ ಮಾಡಿದರು. ಗಣಕ ಪರಿಷತ್ತಿನ ಚಿ.ವಿ.ಶ್ರೀನಾಥ ಶಾಸ್ತ್ರಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮುಖಪುಟ

/ ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X