• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತ್ಯಾಗ ಪರೀಕ್ಷೆಗೆ ತನ್ನನ್ನು ಒಡ್ಡಿಕೊಂಡ ಸೋನಿಯಾ ಎಂಬ ಸೀತೆ

By Staff
|
  • ಕೆ.ಜಿ.ಶ್ರೀಧರ್‌

ayama@sancharnet.in

ನಮ್ಮ ದೇಶದ ಅಭೂತಪೂರ್ವ ಜನತಂತ್ರದಲ್ಲಿ ಏರ್ಪಡುವ ವಿವೇಚನಾಯುತ ನಿರ್ಧಾರಗಳು ಅತ್ಯಂತ ವಿಸ್ಮಯಕಾರಿಯಾದ ಘಟನೆಯಾಗಿದೆ. ಜನರು ಪುನಃ ಸೆಕ್ಯೂಲರ್‌ ಪಕ್ಷಗಳನ್ನು ಆಯ್ಕೆ ಮಾಡಿದ್ದಾರೆ. ಇದರ ಜೊತೆಜೊತೆಯಲ್ಲಿಯೇ ಕಾಂಗ್ರೆಸ್‌ ಪುನಃ ನಮ್ಮ ದೇಶದ ಜನರ ಹೃದಯದಲ್ಲಿ ನೆಲೆಯೂರಲು ಮಹತ್ವದ್ದಾದ ಘಟನೆ ನಡೆದುಬಿಟ್ಟಿದೆ. ನಮ್ಮ ದೇಶದ ಮಹಾ ಚುನಾವಣೆಯಲ್ಲಿ ಜನರಿಂದ ನೇರವಾಗಿ ಆಯ್ಕೆಗೊಂಡ ಸುಮಾರು ಮುನ್ನೂರಕ್ಕೂ ಹೆಚ್ಚು ಸಂಸದರು ಸಂಪೂರ್ಣ ಭರವಸೆಯಲ್ಲಿ ಶ್ರೀಮತಿ ಸೋನಿಯಾ ಗಾಂಧಿಯವರನ್ನು ಪ್ರಧಾನಿಯನ್ನಾಗಿಸಲು ತಮ್ಮ ಬೆಂಬಲವನ್ನು ನೀಡಿದ್ದಾಗ್ಯೂ ಈಕೆ ಆ ಸ್ಥಾನಕ್ಕೆ ಒಲ್ಲೆ ಎಂದಿದ್ದಾರೆ.

ಇದನ್ನು ನಾವು ನೂರೆಂಟು ಕಾರಣಗಳನ್ನು ನೀಡಿ ನಗಣ್ಯ ಎಂಬಂತೆ ಮಾತಾಡಬಹುದು. ಆದರೆ ನಮ್ಮ ದೇಶದ ಜನರ ಹೃದಯವನ್ನು ಗೆದ್ದ ಮಹಾಸಂಗತಿ ಇದು ಎಂಬುದು ಸರ್ವವಿದಿತ. ನಮ್ಮ ದೇಶದ ಮಹಾ ಪರಿಚಯ ಈಕೆಗೆ ಇರದಿದ್ದರೂ ನಮ್ಮ ಸಂಸ್ಕೃತಿಯ ಅಂತರಗಂಗೆ ಈಕೆಯಲ್ಲಿ ಹರಿಯುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ನಿಜಕ್ಕೂ ಅಧಿಕಾರವನ್ನು ತ್ಯಾಗ ಮಾಡಿ ಮಹಾಪುರುಷರಾಗುವುದು ನಮ್ಮ ಪರಂಪರೆಯಲ್ಲಿ ನಡೆದಿದೆ. ಈ ಸಾಲಿಗೆ ಇಂದು ಸೋನಿಯಾ ಸೇರಿದ್ದಾರೆ. ‘ಅಂತರಾತ್ಮ’ ಹೇಳಿದಂತೆ ಅವರು ನಡೆದು ಧೀರೆಯಾಗಿದ್ದಾರೆ. ಆದರೂ ನಮ್ಮಲ್ಲಿ ಮೊಸರಿನಲ್ಲೂ ಕಲ್ಲನ್ನು ಹುಡುಕುವವರಿದ್ದೇವಲ್ಲವೇ. ಅದ್ದರಿಂದ ಈ ಘಟನೆಯ ಮಹತ್ವವನ್ನು ನಮ್ಮಲ್ಲಿ ಅನೇಕರು ಕಾಣುವುದೇ ಇಲ್ಲ.

ಸೋನಿಯಾ ನಮ್ಮ ದೇಶದ ಸೊಸೆ. ಇಬ್ಬರು ಭಾರತೀಯ ಮಕ್ಕಳ ತಾಯಿ. ತನ್ನ ಯುವ ಪತಿಯನ್ನು ಆತ ದೇಶದ ಸೇವೆಯಲ್ಲಿದ್ದಾಗಲೇ ಕಳೆದುಕೊಂಡ ವಿಧವೆ. ಒಂದು ಅನಿವಾರ್ಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ಸಿನ ನಾಯಕತ್ವ ಹೊಂದಿ ಅದನ್ನು ಮುನ್ನಡೆಸಿದಾಕೆ. ಸಂಸತ್ತಿನಲ್ಲಿ ವಿರೋಧಪಕ್ಷದ ನಾಯಕಿಯಾಗಿ ನಂತರದ ಮಹಾ ಚುನಾವಣೆಯಲ್ಲಿ ಜನರಿಂದ ಮನ್ನಣೆಪಡೆದು ಇನ್ನೇನು ಪ್ರಧಾನಿ ಆಗಬೇಕಾಗಿತ್ತು ಅಷ್ಟೇ.

ಈ ಸಂದರ್ಭದಲ್ಲಿ ನೋಡಿ ನಮ್ಮ ಸುಷ್ಮಾ ಸ್ವರಾಜ್‌, ಉಮಾ ಭಾರತಿ, ಗೋವಿಂದಾಚಾರ್ಯರಂತಹ ‘ದೇಶಪ್ರೇಮಿ’ಗಳು ಹೇಗೆ ಆಡಿದರು! ನಾವು ಒಬ್ಬ ಸೊಸೆಯನ್ನು ನೋಡುವ ರೀತಿಯೇ ಇದು?

ನಾನು ಸೋನಿಯಾ ವಿದೇಶೀ ಮೂಲವನ್ನು ಹೆಕ್ಕಿ ಕಿಡಿಕಾರುವವರನ್ನು ನೋಡಿದ್ದೇನೆ. ಇಂಥವರು ಅಮೇರಿಕಾಗೆ ಹೋಗಲು ಅಥವಾ ತಮ್ಮ ಮಗನನ್ನೋ, ಸೊಸೆಯನ್ನೋ ಕಳಿಸಲು ತುದಿಗಾಲ ಮೇಲೆ ನಿಂತಿರುತ್ತಾರೆ. ಅವರಿಗೆ ಭಾರತದಲ್ಲಿಯೇ ನೆಲೆಸಿ, ಇಲ್ಲಿನ ಕಷ್ಟ ಸುಖಗಳಲ್ಲಿ ಭಾಗಿಯಾಗಿ, ನಮ್ಮ ದೇಶದ ಸಮಗ್ರ ಕಲ್ಯಾಣದಲ್ಲಿ ಭಾಗಿಯಾಗುವ ಆಸೆಗೆ ಬದಲು ಅಮೇರಿಕಾದಲ್ಲಿ ನೆಲೆಸುವ ಬಯಕೆಯೇ ಹೆಚ್ಚು. ಸೋನಿಯಾರನ್ನು ವಿರೋಧಿಸುವರಲ್ಲಿ ಅಮೇರಿಕಾದಲ್ಲಿ ನೆಲೆನಿಂತ ಭಾರತೀಯರೇ ಮೊದಲಿಗರಾಗಿರುವುದೂ ವಿಪರ್ಯಾಸದ ಸಂಗತಿ. ಆದ್ದರಿಂದಲೇ ಸಾಹಿತಿ ಅನಂತಮೂರ್ತಿ ಹೇಳುವಂತೆ ‘ನಮ್ಮ ಜನ ಇಲ್ಲಿಯೇ ಹುಟ್ಟಿದ್ದರೂ ಅಮೇರಿಕಾದವರಂತೆ ಆಡುತ್ತಾರೆ. ಆದರೆ ಸೋನಿಯಾ ಇಟಲಿಯವರಾದರೂ ಇಲ್ಲಿನ ಅಲಹಾಬಾದಿನಲ್ಲಿ ಹುಟ್ಟಿದವರಂತೆ ಕ್ರಿಯಾಶೀಲರಾಗಿ ಕಾಣುತ್ತಾರೆ’.

ನಿಜಕ್ಕೂ ನಮ್ಮ ದೇಶದ ಪರಂಪರೆಯ ಮೂಲಸೆಲೆಯಾದ ‘ಅಧಿಕಾರ ತ್ಯಾಗ’ ಗುಣವನ್ನು ತೋರಿಸಿಕೊಳ್ಳುವುದರೊಂದಿಗೆ ಸೋನಿಯಾ ನಿಜವಾದ ಭಾರತೀಯರಾಗಿದ್ದಾರೆ. ಇವರೆದುರು ಈ ಕುಪಿತ ಹಿಂದೂವಾದಿಗಳು ಎಷ್ಟೇ ಕಿರುಚಾಡಿದರೂ ಇದು ಕಿಂಚಿತ್ತೂ ಭಾರತೀಯತೆಯ ಗುಣಧರ್ಮವನ್ನು ಪಡೆಯಲು ಸಾಧ್ಯವೇ ಇಲ್ಲ. ಕೇವಲ ಹಪಹಪಿಕೆಯಂತೆ ಮಾತ್ರ ತೋರುತ್ತಿದೆ. ಸೋನಿಯಾ ನೀಡಿರುವ ಈ ಪ್ರತ್ಯುತ್ತರದಲ್ಲಿ ಇಂಥವರನ್ನೂ ಪರಿವರ್ತಿಸುವ ಶಕ್ತಿಯಿರುವುದು ಮುಂದೆ ನಮ್ಮ ದೇಶದ ರಾಜಕಾರಣದ ದಿಕ್ಕನ್ನು ನಿರ್ಣಾಯಕವಾಗಿ ನಿರ್ದೇಶಿಸಲಿದೆ.

‘ನಮ್ಮ ದೇಶದಲ್ಲಿ ಕಾಂಗ್ರೆಸ್ಸು ಪುನಃ ಜನರ ಮನದಲ್ಲಿ ನೆಲೆಸಬೇಕೆಂದರೆ ಅದು ತ್ಯಾಗದ ಗುಣದಿಂದ’ ಎಂದು ನಾನು ಹಿಂದೆಯೇ ಬರೆದಿದ್ದೆ. ಇದು ಉಳ್ಳವರ ತ್ಯಾಗ ಹಾಗೂ ಬಡಜನರ ಜಾಗೃತಿಯಲ್ಲಿ ಎಂದು ಯೋಚಿಸುತ್ತಿದ್ದಂತೆ ಸೋನಿಯಾ ಇದಕ್ಕೆ ಮೇಲ್ಪಂಕ್ತಿ ಹಾಕಿ ತೋರಿದ್ದಾರೆ. ಮತ್ತು ಅಧಿಕಾರವನ್ನು ಹೊಂದುವುದು ಮಾತ್ರವೇ ಕಾಂಗ್ರೆಸ್ಸಿನ ಸಂಕಲ್ಪವಲ್ಲ ಎಂಬುದನ್ನು ಹೇಳಿದ್ದಾರೆ. ಈ ಸಂಗತಿಗಳು ನಮ್ಮ ಗ್ರಾಸ್ರೂಟ್‌ ಕಾರ್ಯಕರ್ತರನ್ನೂ ತಲುಪಬೇಕು. ಜನರ ಸೇವೆಯ ನಿಜವಾದ ಬಯಕೆಯನ್ನು ಇದು ತೋರಿಸಿಕೊಳ್ಳಬೇಕು. ಈ ನಿರ್ಧಾರ ಸೋನಿಯಾರಲ್ಲಿನ ಅಂತರಾತ್ಮದಿಂದ ಮೂಡಿದ್ದರೂ ಇದರ ಹಿಂದೆ ಗಾಂಧೀಜಿಯಂಥವರ ಪ್ರೇರಣೆ ಇದೆ. ಇದುವೇ ನಿಜವಾದ ಕಾಂಗ್ರೆಸ್‌ನ ದಾರಿ. ಭಾರತೀಯತೆಯ ದಾರಿ. ಭಾರತೀಯನ ಹೃದಯವನ್ನು ತಲುಪುವ ದಾರಿ.

***

ಮನಮೋಹನ ಸಿಂಗ್‌ ನಮ್ಮ ಪ್ರದಾನಿ. ಸರಳವಾಗಿ ಬದುಕುವ, ಮಹತ್ವಾಕಾಂಕ್ಷಿ ಅಲ್ಲದ ಆದರೆ ಚಿಂತನಶೀಲರಾದ ಸಾತ್ವಿಕ ಇವರೆಂದು ಕಾಣುತ್ತದೆ. ಅನೇಕ ತರಹದ ಪಕ್ಷಗಳನ್ನು ಒಟ್ಟಾಗಿ ನಡೆಸಬೇಕಾದ ಮಹತ್ವದ ಜವಾಬ್ದಾರಿ, ದೇಶದ ಆರ್ಥಿಕತೆಗೆ ಮಾನವೀಯತೆಯ ಲೇಪನವನ್ನು ಮಾಡಬೇಕಾದ, ಪ್ರತ್ಯೇಕತಾವಾದಿಗಳನ್ನು ಪ್ರೀತಿಯಲ್ಲಿ ಒಳಗೊಳ್ಳಬೇಕಾದ ಸನ್ನಿವೇಶ ಅವರಿಗಿದೆ. ಆರ್ಭಟವೇ ಇಲ್ಲದ ತಣ್ಣನೆಯ ಆದರೆ ತೀಕ್ಷ್ಣ ಮನಸ್ಸಿನ ಈ ವ್ಯಕ್ತಿ ಇಂಥ ಹಡಗನ್ನು ಹೇಗೆ ನಿಭಾಯಿಸುತ್ತಾರೆಂದು ನೋಡಬೇಕು. ಮಹಾತಾಯಿಯಂತೆ ಸೋನಿಯಾ ದೇಶದ ಜನರನ್ನು ಒಟ್ಟಾಗಿಟ್ಟುಕೊಳ್ಳುವ ಹೊಣೆ ಹೊತ್ತಾಗ ಇವರ ಕೆಲಸ ಸುಲಭವಾಗುತ್ತದೆ. ನಮ್ಮ ಜನರಲ್ಲಿ ಹೊಣೆಗಾರಿಕೆ ಮೂಡುವಂತೆ ಜನತೆಯನ್ನು ಸಂಘಟಿಸಬೇಕು. ರಾಜಕಾರಣಕ್ಕೆ ದಿಕ್ಕು ದಿಸೆಯನ್ನು ಮೂಡಿಸಬೇಕು. ಆಡಳಿತ ಒಂದು ಮೋಜಿನ ಅಥವ ಆಳುವ ಆರ್ಭಟವಲ್ಲ ಎಂಬಂತೆ ಅದಕ್ಕೆ ನೈತಿಕತೆಯನ್ನು ತುಂಬಬೇಕು.

ರಾಜಕಾರಣಿ ಎಂದರೆ ಅಧಿಕಾರಕ್ಕಾಗಿ ಜೊಲ್ಲನ್ನು ಸುರಿಸುವ, ಅಟ್ಟಹಾಸಪಡುವ ಕೆಲಸವಲ್ಲದೇ ಅದು ವಿನಮ್ರತೆಯಿಂದ ಜನಸೇವೆಯನ್ನು ಮಾಡುವ ಕಾಯಕ ಎಂದು ಅಂತಿಮ ಕಾರ್ಯಕರ್ತರವರೆಗೂ ತಿಳಿಯುವಂತೆ ಅಮೂಲಾಗ್ರ ಬದಲಾವಣೆಯನ್ನು ಮಾಡಬೇಕಾದ ಪರಿಸ್ಥಿತಿ ಇಂದಿದೆ. ನಮ್ಮ ಹಿಂದಿನ ಪ್ರಧಾನಿ ವಾಜಪೇಯಿ ಅವರಲ್ಲಿ ಸಂಯಮವಿತ್ತು. ಜನರನ್ನು ಒಟ್ಟಾಗಿ ಕರೆದೊಯ್ಯುವ ಪ್ರೀತಿ ಇತ್ತು. ಆದರೆ ಅವರ ಪರಿವಾರವೇ ಅವರಿಗೆ ಕಡಿವಾಣವಾಗಿತ್ತು. ಅದನ್ನು ತೊರೆದೂ ಪ್ರಕಾಶಿಸುವ ಸಾಮರ್ಥ್ಯ ಅವರಿಗಿದ್ದರೂ ಅದೇಕೋ ಅವರು ಸುಮ್ಮನಾದರು. ಮೊನ್ನೆ ಸೋನಿಯಾ ಕುರಿತಾದ ಕಿರುಚಾಟಗಳ ಕುರಿತಾಗಿ ತಾವು ಏನೊಂದೂ ಮಾತನಾಡದೆ ಮೌನ ವಹಿಸಿದ್ದರು. ರಾಹುಲ ಗಾಂಧಿ ಕೂಡ ಗೌರವಿಸುವ ಈ ಹಿರಿಯ ಭೀಷ್ಮ ಯಾತಕ್ಕೆ ಸುಮ್ಮನಿದ್ದರು? ಈ ಮೌನದ ಹಿಂದೆ ಗಾಢವಾದ ವ್ಯಥೆ ಇರಬಹುದೇ?

ಮನಮೋಹನ ಸಿಂಗರ ಆಡಳಿತಕ್ಕೆ ವಿರೋಧಪಕ್ಷದಲ್ಲಿದ್ದೂ ಆಶೀರ್ವದಿಸುವ ದೊಡ್ಡತನ ವಾಜಪೇಯಿ ಅವರಿಗಿದೆ. ಪಕ್ಕದ ರಾಷ್ಟ್ರಗಳೊಂದಿಗೆ ಮಿತ್ರತ್ವವನ್ನು ಸಂಪಾದಿಸಿದ್ದ ಈ ಹಿರಿಯ ತನ್ನ ಮೋಡಿಯಾಂದಿಗೆ ಸಿಂಗ್‌ರಿಗೆ ಸಹಕರಿಸಬೇಕು. ಅಂದು ತನ್ನ ಪ್ರಧಾನಿ ಸ್ಥಾನದಿಂದ ಇಳಿದಾಗ ದೇಶವನ್ನು ಉದ್ದೇಶಿಸಿ ಮಾತನಾಡಿದ ವಾಜಪೇಯಿ- ‘ಅಧಿಕಾರವಿರಲಿ ಇಲ್ಲದಿರಲಿ ದೇಶದ ಕುರಿತಾಗಿ ತಾವು ಇಟ್ಟುಕೊಂಡ ಕನಸು, ಆಸೆಮಾತ್ರ ನಿರಂತರ’ ಎಂದಾಗ ನನ್ನ ಮೈ ಜುಂ ಎಂದಿತ್ತು. ಇಂಥವರೆಲ್ಲರೂ ನಮ್ಮ ಜನತಂತ್ರದ ಭರವಸೆಗೆ ಜೀವತುಂಬಿದ್ದಾರೆ. ಈ ಸಂದರ್ಭದಲ್ಲಿ ನಾವು ಸಿನಿಕರಾಗದೇ ನಮ್ಮ ದೇಶದ ಈ ವಿಸ್ಮಯಕರ ಬೆಳವಣಿಗೆಗಳಲ್ಲಿ ನಮ್ಮ ಅಳಿಲು ಪಾಲನ್ನು ಸಲ್ಲಿಸೋಣ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more