ಶರಣರ ಬರವೆಮಗೆ ಜೀವ ಜೀವಾಳವಯ್ಯ
12ನೇ ಶತಮಾನದಲ್ಲಿ ಬಸವಣ್ಣ ಮತ್ತು 20ನೇ ಶತಮಾನದಲ್ಲಿ ಕುವೆಂಪು ಕರ್ನಾಟಕ ಕಂಡ ಕೆಚ್ಚೆದೆಯ ಸಾಮಾಜಿಕ ಸುಧಾರಣಾ ಪ್ರಜ್ಞೆಯ ದಾರ್ಶನಿಕರು. ಹಾಗೆಯೇ 2004ನೇ ಇಸವಿ ಈ ಮಾನವತಾವಾದಿಗಳ ಧ್ಯೇಯ ಸಿದ್ಧಾಂತಗಳ ಬಗೆಗೆ ಹೆಚ್ಚೆಚ್ಚು ಚರ್ಚಿಸಲ್ಪಡುತ್ತಿರುವ ಸಂಧ್ಯಾಕಾಲ. ಕುವೆಂಪುರವರ ಜನ್ಮಶತಾಬ್ಧಿಯ ಅಂಗವಾಗಿ ನಾಡಿನಾದ್ಯಂತ ಕುವೆಂಪುರವರ ಬರಹ-ಬದುಕು ವಿಮರ್ಶೆ ಮತ್ತು ಚರ್ಚೆಗೆ ಒಳಪಡುತ್ತಿದೆ. ‘ಜಯ ಭಾರತ ಜನನಿಯ ತನುಜಾತೆ’ ಗೀತೆಯನ್ನು ನಾಡಗೀತೆಯನ್ನಾಗಿ ಸರ್ಕಾರ ಆಯ್ದುಕೊಂಡಾಗಿನಿಂದ ಚರ್ಚೆ ಪ್ರಬಲವಾಗಿಯೇ ಪ್ರಾರಂಭವಾಗಿ ಕುವೆಂಪುರವರ ವೈಚಾರಿಕತೆಯನ್ನು ಶೋಧಿಸಲು ಅಕ್ಷರಸ್ಥರನ್ನು ಆಹ್ವಾನಿಸಿದೆ. ಇನ್ನೊಂದು ಕಡೆ ಚಿತ್ರದುರ್ಗದ ಮುರುಘರಾಜೇಂದ್ರ ಮಠಾಧೀಶರಿಂದ ಬಸವಧರ್ಮ ಸ್ಥಾಪನೆ ಮತ್ತು ಮಾಂಸಾಹಾರಿಗಳಿಗೂ ಹೊಸಧರ್ಮದಲ್ಲಿ ಪ್ರವೇಶ ಮತ್ತು ಸ್ಥಾನ ಎಂಬ ನೀತಿಯಿಂದಾಗಿ ಬಸವಣ್ಣ ಮತ್ತು ವಚನಸಾಹಿತ್ಯ ಚಳವಳಿ ಹೊಸ ಚರ್ಚೆಗೆ ಬಾಗಿಲು ತೆರೆದಿದೆ. ಈ ನಿಟ್ಟಿನಲ್ಲಿ ವಚನ ಸಾಹಿತ್ಯ, ಕುವೆಂಪುರವರ ವೈಚಾರಿಕ ಬರಹಗಳು, ನಾಡಿನ ಜನರ ತವಕ-ತಲ್ಲಣ, ಚರ್ಚೆಗಳನ್ನು ಅಂತರ್ಜಾಲದಲ್ಲಿ ದಾಖಲಿಸಲು ‘ವಿಚಾರ ಮಂಟಪ’ ಮುಂದಾಗಿದೆ.
ಇದಷ್ಟೇ ಅಲ್ಲದೆ ಇಂಗ್ಲಿಷ್‌ನಲ್ಲಿ ಈಗಾಗಲೇ ಹಲವು ಜಾಲತಾಣಗಳಲ್ಲಿ ಲಭ್ಯವಾಗಿರುವಂತೆ ಮೂಲಕೃತಿಯ ಹಕ್ಕು ಹೊಂದಿಲ್ಲದ ವೈಚಾರಿಕ ವಚನ ಸಾಹಿತ್ಯ, ದಾಸ ಸಾಹಿತ್ಯ, ಮತ್ತು ಕಳೆದ ಶತಮಾನದ ಕನ್ನಡದ ಶ್ರೇಷ್ಠ ಚಿಂತಕರ ವೈಚಾರಿಕ ಬರಹಗಳನ್ನು ಪ್ರಕಟಿಸುವುದು ನಮ್ಮ ಸದ್ಯದ ಗುರಿ. ಇದಕ್ಕಾಗಿ ಇವೆಲ್ಲವುಗಳನ್ನು ಬರಹ ಲಿಪಿಗೆ ಕೀಲಿಸುವ ಸ್ವಯಂಸೇವಕರ ಅವಶ್ಯಕತೆ ಇದ್ದು , ಇಚ್ಛೆಯಿದ್ದವರು ದಯವಿಟ್ಟು ನಮ್ಮನ್ನು ಸಂಪರ್ಕಿಸಬೇಕೆಂದು (vicharamantapa@yahoo.com) ಕೋರುತ್ತೇವೆ.
ಸೈದ್ಧಾಂತಿಕ ಚಿಂತನಾ ಘರ್ಷಣೆ, ಭಿನ್ನ-ಅಭಿಪ್ರಾಯ, ಹಲವು ಮಜಲು-ಒಳನೋಟಗಳಿಲ್ಲದ ಒಂದು ವ್ಯವಸ್ಥೆ ಕಿಲುಬು ಹಿಡಿದು, ಅಲ್ಲಿ ಸೃಜನಶೀಲತೆ ಕ್ಷೀಣಿಸಿ, ಸಮಸ್ಯೆಗೆ ಪರಿಹಾರ ಹುಡುಕುವ ಧೈರ್ಯ ಇಲ್ಲವಾಗಿ, ವ್ಯವಸ್ಥೆಯಾಂದಿಗೆ ರಾಜಿಯಾಗುವ ಮನೋಭಾವ ಹೆಚ್ಚಾಗುತ್ತದೆ. ಅಂತಹ ಸಮಯದಲ್ಲಿ ಬಂದೇ ಬರುವ ಬದಲಾವಣೆ ಅಹಿಂಸಾತ್ಮಕವಾಗೇನೂ ಇರುವುದಿಲ್ಲ. ಸಮಸ್ಯೆಯನ್ನು ಕಂಡುಹಿಡಿಯುವುದು ಎಷ್ಟು ಮುಖ್ಯವೋ ಅದನ್ನು ತಾರ್ಕಿಕ ಅಂತ್ಯಕ್ಕೆ, ಕ್ರಿಯೆಯೆಡೆಗೆ ಕೊಂಡೊಯ್ಯುವುದೂ ಅಷ್ಟೇ ಮುಖ್ಯ. ಅದು ಅಹಿಂಸಾತ್ಮಕವಾಗಿದ್ದಷ್ಟೂ, ವಸ್ತುನಿಷ್ಠವಾಗಿದ್ದಷ್ಟೂ, ಆಧಾರಪೂರ್ವಕವಾಗಿದ್ದಷ್ಟೂ ಒಳ್ಳೆಯದು. ಹೀಗಾಗಿ, ಕನ್ನಡ ಅಂತರ್ಜಾಲ ಚಾರಣಿಗರಿಗೆ ನಮ್ಮ ಹಿಂದಿನ/ಇಂದಿನ ಚಿಂತಕರ ಚಿಂತನೆಯ ಆಧಾರಗಳ ಪರಾಮರ್ಶೆಗೆ ವಿಚಾರ ಮಂಟಪ ಒಂದು ಆನ್‌ಲೈನ್ ಗ್ರಂಥಾಲಯವಾಗಲಿ ಎಂಬ ಸಣ್ಣ ಸ್ಫೂರ್ತಿ ಈ ಜಾಲತಾಣ.
- ರವಿ ಕೃಷ್ಣಾ ರೆಡ್ಡಿ
ನಿರ್ವಾಹಕ, http://www.vicharamantapa.net