ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಬದುಕು’ ಖುಷಿ ತಂದಿದೆ : ಗೀತಾ

By Staff
|
Google Oneindia Kannada News
  • ವಾದಿರಾಜ ವ್ಯಾಸಸಮುದ್ರ
ಗುಲ್ಬರ್ಗ : ‘ನನ್ನ ಬದುಕಿಗೆ ಇದು ಖುಷಿ ತಂದಿದೆ!’

ತಮ್ಮ ‘ಬದುಕು’ ಕೃತಿಗೆ 2004ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತ ಸುದ್ದಿ ತಿಳಿದ ಲೇಖಕಿ ಗೀತಾ ನಾಗಭೂಷಣ ತಮ್ಮ ಸಂತಸವನ್ನು ವ್ಯಕ್ತಪಡಿಸಿದುದು ಹೀಗೆ. ಬಡ, ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿ ಹೋರಾಟದ ಬದುಕು ನಡೆಸಿದ ಗೀತಾ ಈ ಪ್ರಶಸ್ತಿ ಪಡೆದ ಹೈದರಾಬಾದ್‌ ಕರ್ನಾಟಕದ ಮೊದಲ ಸಾಹಿತಿ.

‘ಈ ಪ್ರಶಸ್ತಿಗೆ ಹೈದರಾಬಾದ್‌ ಕರ್ನಾಟಕದ ಜನತೆ ಹಾಗೂ ರಾಜ್ಯದ ಮಹಿಳಾ ವರ್ಗವೂ ಪಾಲುದಾರರು’ ಎಂದು ಗೀತಾ ಸಂಭ್ರಮಿಸಿದರು.

An interview with Geetha Nagabhushanaಮಾರ್ಚ್‌ 31, 1942ರಲ್ಲಿ ಗುಲ್ಬರ್ಗ ಜಿಲ್ಲೆಯ ಸಾವಳಗಿ ಗ್ರಾಮದಲ್ಲಿ ಜನಿಸಿದ ಗೀತಾರ ತಂದೆ ಸ್ವಾತಂತ್ರ್ಯಯೋಧ. ಎಂಎಸ್‌ಕೆ ಮಿಲ್‌ನಲ್ಲಿ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದವರು. ತಾಯಿ ಮತ್ತಿತರ ಕುಟುಂಬದ ಸದಸ್ಯರ ವಿರೋಧದ ನಡುವೆಯೂ ಅಕ್ಷರಸ್ಥರಾಗಿ, ಬರಹಗಾರ್ತಿಯಾಗಿ ಅವರು ಈ ಎತ್ತರ ಏರಲು ತಂದೆಯ ಒತ್ತಾಸೆಯೇ ಮುಖ್ಯ ಕಾರಣವೆನ್ನಬೇಕು.

ತಳವಾರ ಶಾಂತಪ್ಪನ ಪುತ್ರಿ ಮುಂದೊಂದು ದಿನ ಇಷ್ಟೊಂದು ಉತ್ತುಂಗಕ್ಕೆ ಹೋಗುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. ಅಕ್ಷರ ಕಲಿಯುವುದು ಎಂದರೆ ಮಹಾ ಪಾಪ ಮಾಡಿದಂತೆ ಎಂಬ ಮೂಢ ನಂಬಿಕೆ ಹೊಡೆದೋಡಿಸುವ ಉದ್ದೇಶದಿಂದಲೇ ನಾನು ಓದು ಆರಂಭಿಸಿದೆ’ ಎಂದು ಗೀತಾ ನಾಗಭೂಷಣ ತಮ್ಮ ಹೋರಾಟದ ಹಾದಿ ವಿವರಿಸಿದರು.

ಎಂ.ಎ, ಬಿ.ಎಡ್‌. ಪದವೀಧರೆ ಗೀತಾ ಗುಲ್ಬರ್ಗದ ನಗರೇಶ್ವರ ಸಂಯುಕ್ತ ಕಿರಿಯ ಮಹಾವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ, ಪ್ರಾಂಶುಪಾಲರಾಗಿ ನಿವೃತ್ತರಾಗಿ ಇದೀಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

ತಮ್ಮ 62 ವರ್ಷಗಳ ಜೀವನದಲ್ಲಿ ಅವರು ಸಮಾರು 31 ಕಾದಂಬರಿ, ಎರಡು ಕಥಾ ಸಂಕಲನ, ದುರುಗಮುರುಗಿಯವರ ಸಂಸ್ಕೃತಿ ಎಂಬ ಸಂಶೋಧನಾ ಗ್ರಂಥ, ಖೇಮಣ್ಣ ಎಂಬ ಸಂಪಾದನಾ ಗ್ರಂಥ ರಚಿಸಿ ಸಾಹಿತ್ಯಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅವರ ಹಲವಾರು ಕತೆ ಮತ್ತು ನಾಟಕಗಳು ಗುಲ್ಬರ್ಗ, ಧಾರವಾಡ, ಮೈಸೂರು ಮತ್ತು ಬೆಂಗಳೂರು ಆಕಾಶವಾಣಿಗಳಿಂದ ಪ್ರಸಾರಗೊಂಡಿವೆ. ‘ಹಸಿ ಮಾಂಸ ಮತ್ತು ಹದ್ದುಗಳು’ ಕಾದಂಬರಿ ಮರಾಠಿಗೆ ಅನುವಾದಗೊಂಡಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಡಾ.ಶಿವರಾಮ ಕಾರಂತ ಆಯ್ಕೆ ಸಮಿತಿ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರಗಳ ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಗೀತಾ ಗುಲ್ಬರ್ಗಾ ವಿಶ್ವವಿದ್ಯಾಲಯದ ಸೆನೆಟ್‌ ಮತ್ತು 2000-2001ನೇ ಸಾಲಿನ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

1995 ರ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1998 ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2002 ರ ದಾನ ಚಿಂತಾಮಣಿ ಅತ್ತಿಮಬ್ಬೆಪ್ರಶಸ್ತಿಯಲ್ಲದೆ ಹಂಪಿ ವಿಶ್ವವಿದ್ಯಾಲಯದ ನಾಡೋಜ ಗೌರವವನ್ನೂ ಪಡೆದಿರುವ ಗೀತಾ ಅವರಿಗೆ ಇದೀಗ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ. ಇದು ತಮ್ಮ ಮೇಲಿನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎನ್ನುವ ಸವಿನಯ ಅವರದು.

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X