• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫ್ಲೈಓವರ್‌ : ಜಂಗಮಕ್ಕಳಿವುಂಟು ಸ್ಥಾವರಕ್ಕಳಿವಿಲ್ಲ

By Staff
|
  • ರಘುನಾಥ ಚ.ಹ.
‘ಹಾಯ್‌’ ಎನ್ನುತ್ತಿದೆ ಮಗು. ಹೆಣ್ಣೋ ಗಂಡೋ ಗೊತ್ತಾಗುತ್ತಿಲ್ಲ . ಅರಳುಮೊಗದ ಮಗುವಿನ ಕೈಯಲ್ಲಿ ಹೊಳೆಹೊಳೆಯುವ ಮೊಬೈಲ್‌ ಫೋನು. ಆಟಿಕೆಯೆಂದು ತಿಳಿದಿದೆಯೋ ಏನೋ ? ಕೆಂಪು ಮತ್ತು ಕಪ್ಪು ಚೌಕಳಿಗಳು ಕಲಸಿಹೋಗಿರುವ ಅರ್ಧಲಂಗ ಹಾಗೂ ಬಿಳಿ ಅಂಗಿ ತೊಟ್ಟ ಹುಡುಗಿ ಹೂ ನಗೆ ಅರಳಿಸಿದ್ದಾಳೆ ; ಅವಳ ಕೈಯ್ಯಲ್ಲಿ ಹಲ್ಲುಜ್ಜುವ ಪೇಸ್ಟು . ಅವರಿಬ್ಬರೂ ಆದರ್ಶ ದಂಪತಿಗಳೇ ಇರಬೇಕು. ಆಕರ್ಷಕ ದಂಪತಿಗಳಂತೂ ಹೌದು ; ಯಾರ ನಗು ಎಷ್ಟು ಆಕರ್ಷಕ ? ನೆಮ್ಮದಿಯಂತೂ ಇಬ್ಬರ ಮುಖದಲ್ಲೂ ತುಳುಕುತ್ತಿದೆ! ವಿಮಾ ಕಂಪನಿಯ ವಿಳಾಸ ದಪ್ಪಕ್ಷರಗಳಲ್ಲಿ ಇದೆ. ಯಾರು ಯಾರ ಮೇಲೆ ವಿಮೆ ತೆಗೆದಿದ್ದಾರೋ? ಎಷ್ಟು ಮೊತ್ತದ್ದೋ ?

ಬಸುರಿಯಂಥ ಬಸ್ಸು ತೇಕುತ್ತಾ ಓಡುತ್ತಿದ್ದರೆ ವೈಕುಂಠದ ಸಪ್ತದ್ವಾರಗಳ ಸಾಲಭಂಜಿಕೆಗಳಂತೆ ಮೇಲುಸೇತುವೆಯ ಕೆಳಗಿನ ಮೊಬೈಲ್‌ ಫೋನಿನ ಮಗು, ಪೇಸ್ಟು ಸುಂದರಿ, ವಿಮಾ ದಂಪತಿಗಳು ಹಾಗೂ ಇನ್ನಿತರ ಹುಡುಗ ಹುಡುಗಿಯರ ಚಿತ್ರಗಳು ಕ್ಷಣ ಕಣ್ತುಂಬಿ, ಮರುಕ್ಷಣ ಕಲಸಿಹೋಗುತ್ತವೆ..... ಒಂದಂಥೂ ನಿಜ, ಎಲ್ಲ ಮೋರೆಗಳಲ್ಲೂ ಅಳಿಸಲಾಗದಂಥ ನಗೆ ಅಂಟಿಕೊಂಡಿದೆ.

Fly Over; An essay by HC Raghunathaಕೋರೈಸುವ ವೀನೈಲ್‌ ಮೋರೆಗಳನ್ನು ಕಣ್ಣು ತುಂಬಿಕೊಳ್ಳುವ ಕ್ಷಣದಲ್ಲೇ , ಚೆಂದದ ಹುಡುಗ ಹುಡುಗಿಯರ ಜಾಗದಲ್ಲಿ ಈ ಮುನ್ನ ಕಾಣಿಸುತ್ತಿದ್ದ ಕಳ್ಳೆಕಾಯಿ ಬುಟ್ಟಿಯ ಮುದುಕ, ಪೇಪರ್‌ ಹುಡುಗ, ಬೊಂಬೆ ಮಾರುವ ಮಾಸಿದ ಕಂಗಳ ಯುವಕ, ಕಾಸಿಗಾಗಿ ಕಾಲಿಗೆ ಬೀಳುವ ಬಗಲ ಮಗುವಿನ ಬಾಣಂತಿ ಹೆಂಗಸಿನ ಚಿತ್ರಗಳನ್ನು ಮನಸ್ಸು ನೆನೆಯುತ್ತದೆ. ಅವರ್ಯಾರೂ ಎದ್ದುನಿಂತ ಫ್ಲೈಓವರ್‌ ಸುತ್ತಮುತ್ತ ಕಾಣುವುದಿಲ್ಲ . ಸುತ್ತುತ್ತಾ ಸುತ್ತುತ್ತಾ ಬೇರೆ ಯಾವ ಸರ್ಕಲ್ಲು ಹುಡುಕಿಕೊಂಡರೋ? ನಿಜ, ಫ್ಲೈಓವರ್‌ ನೆರಳಿನಲ್ಲಿ ಬದುಕುಗಳು ಅರಳುವುದಿಲ್ಲ ; ಜಾರಿ ಹೋಗುತ್ತವೆ. ವೇಗವೇ ಇಲ್ಲಿ ಪ್ರಧಾನ. ಮರೆತುಹೋಗಿರುವ ಪದ ‘ನಿಧಾನ’. ಮಂದಗಾಮಿಗಳಾಗಿದ್ದ ಜನ ಫ್ಲೈಓವರ್‌ ಹತ್ತಿರವಾಗುತ್ತಿದ್ದಂತೆ ತೀವ್ರಗಾಮಿಗಳಾಗುತ್ತಾರೆ. ಆ ಕಾರಣದಿಂದಲೇ, ಇಲ್ಲಿ ಬದುಕು ಕಂಡುಕೊಂಡಿದ್ದ ಜೀವಗಳು ಮತ್ತ್ಯಾವುದೋ ಸರ್ಕಲ್ಲಿಗೆ ವಲಸೆ ಹೋಗಿವೆ. ದೇವರೇ, ಅಲ್ಲೊಂದು ಫ್ಲೈಓವರ್‌ ಎದ್ದು ನಿಲ್ಲದಿರಲಿ.

ಫ್ಲೈಓವರ್‌ ದಾರಿ ಅರ್ಧ ಸವೆಯುತ್ತಿರುವಂತೆ ಕೆಲವರ ಬಲಮುಂಗೈ ಕಣ್ಣಿಗೆ ಮುತ್ತುಕೊಟ್ಟಿರುತ್ತದೆ. ಲೊಚಕ್‌ ಲೊಚಕ್‌ ಸದ್ದುಗಳೂ ಕೇಳಿಸುತ್ತವೆ. ಯಾರೂ ನಾಚಿಕೊಳ್ಳುವುದಿಲ್ಲ . ಯಾರೂ ದೂರುವುದಿಲ್ಲ . ಫ್ಲೈಓವರ್‌ ಎದ್ದು ನಿಲ್ಲುವ ಮುನ್ನ ಅಲ್ಲೊಂದು ದೇವಸ್ಥಾನವಿದ್ದುದು ಅವರಿಗೆ ನೆನಪಿದೆ. ಫ್ಲೈಓವರಿನಲ್ಲೀಗ ದೇಗುಲದ ಮುಳುಗಡೆಯಾಗಿದೆ. ಸರ್ಕಲ್ಲು ದಾಟುವಾಗಲೆಲ್ಲ ಬಸ್ಸಿನಲ್ಲಿ ಕುಳಿತೇ ಕೈಮುಗಿಯುತ್ತಿದ್ದವರು ಈಗಲೂ ಭಕ್ತಿವಶರಾಗುತ್ತಾರೆ. ಅಭ್ಯಾಸಬಲ. ಭಕ್ತಿ ಪ್ರಬಲ.

ಸಂಜೆ ವಾಪಸ್ಸು ಬರುವಾಗಿನ ಚಿತ್ರಗಳೇ ಬೇರೆ. ಆಗಲೂ ಬಸ್ಸು ಬಸುರಿಯಾಗೇ ಇರುತ್ತದೆ. ಆದರೆ, ಮೇಲುಸೇತುವೆ ಹತ್ತಿರವಾದಂತೆ ಬಸ್ಸು ಬಾಣಂತಿಯಂತೆ ಬಳುಕತೊಡಗುತ್ತದೆ. ಮೇಲುಸೇತುವೆಯ ಮೇಲಂತೂ, ಅರೆಹೆಜ್ಜೆಯನ್ನಷ್ಟೇ ಊರುವ ಹದಿನಾರರ ಹುಡುಗಿಯಂತೆ ಬಸ್ಸು ಚಂಚಲ ವೇಗಿಯಾಗುತ್ತದೆ. ‘ನಮ್ಮಂಥ ಬಡವರಿಗೆ ಎರಡು ನಿಮಿಷದ ಏರೋಪ್ಲೇನು ಪ್ರಯಾಣ’ ಎಂದು ಪಕ್ಕ ಕುಳಿತ ಪ್ರಯಾಣಿಕ ಖುಷಿಯಿಂದ ಗೊಣಗುತ್ತಾನೆ. ಒಂದೆರಡು ನಿಮಿಷಗಳು ಅಷ್ಟೇ ; ಬಾಣಂತಿ ಮತ್ತೆ ಬಸುರಿಯಾಗುತ್ತಾಳೆ. ತೇಕುವ ಕರ್ಮ ತಪ್ಪುವುದಿಲ್ಲ . ಮೇಲುಸೇತುವೆಯ ಸ್ವರ್ಗದಿಂದ ಹಾರಿ ಮುನ್ನಡೆದ ಖುಷಿಯಲ್ಲಿದ್ದವರು, ಮುಂದಿನ ಸರ್ಕಲ್ಲಿನ ಚಕ್ರವ್ಯೂಹವೆಂಬ ನರಕದಲ್ಲಿ ಸಿಕ್ಕಿಬೀಳುತ್ತಾರೆ. ಚಕ್ರದ ಪ್ರತಿ ಉರುಳಿಗೂ ನಿಟ್ಟುಸಿರು ಹೊರಬೀಳುತ್ತವೆ. ಇಲ್ಲೊಂದು ಫ್ಲೈಓವರ್‌ ಮಾಡಬಾರದೇ ಎಂದು ತೆರಿಗೆ ಕಟ್ಟುವ ಜನ ಮಾತು ಖರ್ಚು ಮಾಡುತ್ತಾರೆ.

ಆಫೀಸಿನ ಕಿಟಕಿಯ ಗಾಜುಗಳ ಸೀಳಿ ನಡೆವ ದೃಷ್ಟಿಗೆ ಸಾಲುಸಾಲು ಹಕ್ಕಿಗಳ ಚಿತ್ರಗಳು ಕಾಣುತ್ತವೆ. ಫ್ಲೈಓವರ್‌ ಮೇಲಿನಿಂದ ಹಾರುವ ಹಕ್ಕಿ ಗುಂಪುಗಳು ಹತ್ತಿರದ ಕೆರೆಯಲ್ಲಿ ದಣಿವು ಕಳಕೊಂಡು ಸನಿಹದ ಮರಗಳಲ್ಲಿ ಪೊಟರೆಗಳಲ್ಲಿ ಹಗಲನ್ನು ಕಾಯುತ್ತ ಇರುಳನ್ನು ಸವೆಸುತ್ತವೆ. ಸೋತ ರೆಕ್ಕೆಗಳ ಬೀಸಿಕೊಂಡು ಹಾರುವ ಸಾವಿರಾರು ಹಕ್ಕಿಗಳಲ್ಲಿ ಒಂದಾದರೂ ಫ್ಲೈಓವರ್‌ ಭುಜಗಳ ಮೇಲೆ ಕ್ಷಣ ಕೂತು ದಣಿವಾರಿಸಿಕೊಳ್ಳಬಾರದೆ? ಉಹುಂ, ಹಕ್ಕಿಗಳು ಸೋಲುವುದಿಲ್ಲ , ನಿರೀಕ್ಷೆ ಕೊನೆಯಾಗುವುದಿಲ್ಲ . ಶಾಪಗ್ರಸ್ತ ಫ್ಲೈಓವರ್‌ಗೆ ಹಕ್ಕಿಯೆಂಬ ರಾಮ ಒಲಿಯುವುದಿಲ್ಲ .

ಹೌದು, ಫ್ಲೈಓವರ್‌ ಎಂದಾಕ್ಷಣ ಮನಸ್ಸಲ್ಲಿ ಚಿತ್ರವಾಗುವುದು ಕಲ್ಲು ಕಬ್ಬಿಣ ಸಿಮೆಂಟ್‌ ಎರಕದ ಆಕೃತಿಯೇ ಹೌದು. ಆ ತುದಿಯಿಂದ ಈ ತುದಿವರೆಗೆ ಅಳೆದರೂ ಹುಲ್ಲಿನ ಮೊಳಕೆ ಕಾಣುವುದಿಲ್ಲ , ಪಾಚಿಯ ಪಸೆಯೂ ಇಲ್ಲ. ಬಸ್ಸು ಕಾರುಗಳು ಸತತವಾಗಿ ಉಜ್ಜುತ್ತ ಅಬ್ಬರಿಸಿದರೂ ಮರುನುಡಿಯುವುದಿಲ್ಲ . ಮಳೆನೀರು ಅದೆಷ್ಟೋ ಬಾರಿ ತೊಳೆದರೂ, ಗಾಳಿ ನೇವರಿಸಿದರೂ, ಕೊಂಚವೂ ಜೀವಂತಿಕೆ ಕಾಣುವುದಿಲ್ಲ . ಫ್ಲೈಓವರ್‌ ಯಾವತ್ತಿಗೂ ನಿದ್ದೆ ತೀರದ ಕುಂಭಕರ್ಣ. ಇಂಥ ಸಿಮೆಂಟ್‌ ಸ್ಥಾವರದಲ್ಲಿ ಚಲನಶೀಲ ಪಕ್ಷಿಗಳಿಗೆ ತಂಗುದಾಣದ ಚಿತ್ರ ಕಾಣುವುದಾದರೂ ಹೇಗೆ ? ನಿಜ ಫ್ಲೈಓವರ್‌ನದು ಇಷ್ಟೇ ಕಥೆ ; ಫ್ಲೈಓವರ್‌ ಎಂದರೆ ಕಾಂಕ್ರೀಟು, ಫ್ಲೈಓವರ್‌ ಎಂದರೆ ನಿರ್ಜೀವ, ಫ್ಲೈಓವರ್‌ ಎಂದರೆ ನಿರ್ಭಾವುಕತೆ.

ಅರಳುಗಣ್ಣಿನ ಮಧ್ಯಾಹ್ನದಿಂದಾಗಿ ಇನ್ನೇನು ಸಾಯಲಿರುವ ಒಂದು ಬೆಳಗು, ಏದುಸಿರಿನೊಂದಿಗೆ ಸಾಗುತ್ತಿದ್ದ ಬಸ್ಸಲ್ಲಿ ಕೂತು ಫ್ಲೈ ಓವರ್‌ ನೋಡುತ್ತಿದ್ದಾಗ- ಫ್ಲೆ ೖಓವರ್‌ ಕುರಿತು ಹತ್ತಾರು ತಕರಾರುಗಳನ್ನು ಮನಸ್ಸು ಎತ್ತುತ್ತಿದ್ದಾಗ- ಫ್ಲೈಓವರ್‌ನ ಕಂಬವೊಂದರ ಸಂದಿಯಲ್ಲಿ ಬೂದಿಗಪ್ಪಿನ ಪಾರಿವಾಳವೊಂದು ತೂರಿ ಮಾಯವಾಗುವುದು. ನಿಂತುನಿಂತು ಸಾಗುತ್ತಿದ್ದ ಬಸ್ಸಿನ ಕಿಟಕಿಯಲ್ಲಿ ಜಿರಾಫೆ ಕತ್ತು ಮಾಡಿಕೊಂಡು ಇಣುಕಿದರೆ, ಕಾಂಕ್ರೀಟ್‌ ಪೊಟರೆಯಲ್ಲಿ ಪಾರಿವಾಳಗಳ ಸಂಸಾರ. ಅಬ್ಬಾ! ಹಾಗಿದ್ದರೆ ಫ್ಲೈಓವರ್‌ನಲ್ಲೂ ಜೀವಂತಿಕೆಯಿದೆ. ಜೀವಗಳು ಅಲ್ಲೂ ಅರಳುತ್ತವೆ. ‘ಕಾಂಕ್ರೀಟ್‌ ಕಂಬಗಳ ಹೊಟ್ಟೆ ಮಳೆನೀರಿಗೆ ಖೆಡ್ಡಾ’ ಎಂದು ಫ್ಲೈಓವರ್‌ ಅನಾವರಣದ ದಿನ ಓದಿದ ನೆನಪು. ಪಾರಿವಾಳಗಳ ಸಂಸಾರವಷ್ಟೇ ಅಲ್ಲ , ಬಯಸಿ ಬರುವ ಬಯಲ ಶಿಶುಗಳಿಗೂ ಫ್ಲೈಓವರ್‌ ಇರುಳಲ್ಲಿ ಸೂರಾಗುತ್ತದೆ.

ಸಂಜೆ ಐದರ ಮಳೆಯ ಯಾವುದಾದರೂ ಒಂದು ಸಂಜೆ, ಬಸ್ಸು ಕಾರು ಮೋಟಾರುಗಳೆಲ್ಲ ನಿಂತಲ್ಲೇ ನಿಂತಿರುವ ಹೊತ್ತು , ‘ಪಾದಚಾರಿಗಳ ಪ್ರವೇಶವನ್ನು ನಿಷೇಧಿಸಲಾಗಿದೆ’ ಎನ್ನುವ ಸೂಚನೆಯನ್ನು ಓದದೇನೇ ಫ್ಲೈಓವರ್‌ ಉದ್ದಕ್ಕೂ ಹೆಜ್ಜೆಗಳ ಮೂಡಿಸಬೇಕು. ತಟಪಟ ಸುರಿವ ಮಳೆಯಲ್ಲಿ ತೋಯಬೇಕು. ವಾಹನಗಳಂತೆ ಉರುಳಿಹೋಗುವ ಮಳೆನೀರಲ್ಲಿ ಓಡುತ್ತಾ ಅರಳಿದ ಕೊಡೆಯನ್ನು ಗಾಳಿಪಟವಾಗಿಸಬೇಕು. ಕೊಡೆಯ ಉದ್ದಕ್ಕೂ ಹಕ್ಕಿಯಾಗಬೇಕು. ತುಂತುರಿಗೆ ಮುಖವೊಡ್ಡಬೇಕು...... ಹಾಗೆ ಆಡುತ್ತಾ ಓಡುತ್ತಾ ಇರುವಾಗ....... ಸಾವಿರ ಕಾಗೆಗಳ ಮೇಳದಂತೆ ವಾಹನಗಳ ಕೂಗು; ಎದೆಯಲ್ಲಿನ ತೇವವೂ ಒಣಗುವಂತೆ.

*

ಸಿಮೆಂಟ್‌ ಕಬ್ಬಿಣ ಮಾತ್ರವಲ್ಲದೆ ಕನಸುಗಳೂ ಫ್ಲೈಓವರ್‌ ಚೌಕಟ್ಟಿನಲ್ಲಿ ಸೇರಿಕೊಂಡಿವೆ. ಒಂದೇ ಎರಡೇ... ಕಣಕಣವಾಗಿ ಕಂಬಕಂಬವಾಗಿ ಎದ್ದುನಿಲ್ಲುವ ಫ್ಲೈಓವರ್‌ನೊಂದಿಗೆ ನಿರೀಕ್ಷೆಗಳೂ ಕವಲೊಡೆಯುತ್ತವೆ. ಇನ್ನು ಸ್ವಲ್ಪೇ ಸ್ವಲ್ಪ ದಿನ. ಆನಂತರ ಚಕ್ರವ್ಯೂಹವನ್ನು ಭೇದಿಸಬೇಕಿಲ್ಲ , ಉಸಿರುಗಟ್ಟಬೇಕಿಲ್ಲ , ನಿಟ್ಟುಸಿರುಗಳಿನ್ನು ಹುಟ್ಟುವುದಿಲ್ಲ . ಫ್ಲೈಓವರ್‌ ಸ್ಥಾವರ ನಿಜ; ಆದರೆ ಸ್ಥಾವರದ ಮೇಲಿನ ಬದುಕುಗಳು ಮಾತ್ರ ಜಂಗಮ.

ಕೈಕಾಲು ಕೂಡಿಸಿಕೊಳ್ಳುತ್ತಿರುವ ಫ್ಲೈಓವರ್‌ನಿಂದಾಗಿ ಕೊಂಕಣ ಸುತ್ತಿಕೊಂಡೇ ಮೈಲಾರ ಸೇರಬೇಕಿದೆ. ಮೈ-ಮನಸ್ಸು ನಿಂತಲ್ಲೇ ನಿಂತಿದ್ದರೆ ಗಡಿಯಾರದ ಮುಳ್ಳುಗಳು ಮಾತ್ರ ಓಡುತ್ತಲೇ ಇರುತ್ತವೆ. ಪೆಟ್ರೋಲು ದಂಡ. ಬಳಸು ಮಾರ್ಗದ ನಂತರ ಇದೇ ಫ್ಲೈಓವರ್‌ನ ಒಂದು ಬದಿಯಿಂದಲೇ ನಿಂತೂ ನಿಂತು ಸಾಗಬೇಕು. ಮೂಗಿಗೆ ಅಡ್ಡವಾಗಿಟ್ಟ ಬಿಳಿ ಕರವಸ್ತ್ರದ ಬಣ್ಣ ಕ್ಷಣಗಳಲ್ಲೇ ಬದಲಾಗುತ್ತದೆ. ಉಸಿರುಕಟ್ಟುತ್ತದೆ. ಗಂಟಲಲ್ಲಿನ ಉಗುಳನ್ನು ನುಂಗಲೇಬೇಕು ; ಬಾಯಿಬಿಟ್ಟರೆ ಧೂಳೆಂಬ ಬೇತಾಳ. ಹಾಳು ಫ್ಲೈಓವರ್‌ಗೆ ಧಿಕ್ಕಾರ.

ನೂರಾರು ಹೆಣ್ಣುಗಂಡುಗಳ ಬೆವರು ಹಗಲಿರುಳೂ ಇಂಗುತ್ತದೆ. ಯಂತ್ರಗಳ ಅಬ್ಬರ ಧೂಳಿನೊಂದಿಗೆ ಬೆರತು ಭಯಹುಟ್ಟಿಸುತ್ತದೆ. ರಸ್ತೆಬದಿಗೆ ಬಿಸಾಡಿದ ಉಂಡ ಬಾಳೆಲೆಗಳಂತೆ ಚೆಲ್ಲಿದ ಚೂರು ಕಬ್ಬಿಣಗಳ ಆಯ್ದುಕೊಂಡು ಹೋಗುವ ಹುಡುಗನನ್ನು ಹಿಡಿದ ಕಾವಲುಗಾರ ಕಳ್ಳತನದ ಆಪಾದನೆ ಹೊರಿಸಿ ಕರ್ತವ್ಯನಿಷ್ಠೆ ಮೆರೆಯುತ್ತಾನೆ. ಅದ್ಯಾರಿಗೊ ಸುಸ್ತು , ಅದ್ಯಾರಿಗೊ ಗಾಯ, ಈ ಕೆಂಪು ಯಾರದೊ ?

ಕೋಟಿ ಕೋಟಿ ರುಪಾಯಿಗಳು ಸಿಮೆಂಟ್‌ ಕಬ್ಬಿಣವಾಗಿ ಬದಲಾಗಿ ಫ್ಲೈಓವರ್‌ ಪೂರ್ಣವಾಗುತ್ತದೆ. ಮುಖ್ಯಮಂತ್ರಿಗಳ ಪಾದಗಳು ಸಂಭ್ರಮದಿಂದ ಉದ್ದಗಲಗಳ ಅಳೆಯುವಾಗ ಸಿಂಗರಿಸಿಕೊಂಡ ಫ್ಲೈಓವರ್‌ ಪುಳಕಗೊಳ್ಳುತ್ತದೆ. ಸ್ವಲ್ಪ ಹೊತ್ತಿನಲ್ಲೇ ಸ್ಥಾವರದ ಮೇಲೆ ಜಂಗಮಲೀಲೆಗಳು ಶುರುವಾಗುತ್ತವೆ. ಕೆಲವರು ನಿರುಮ್ಮಳತೆಯಿಂದ, ಕೆಲವರು ಹೆಮ್ಮೆಯಿಂದ, ಕೆಲವರು ಭಾರ ಹೃದಯದಿಂದ ನಿಂತು ನೋಡುತ್ತಾರೆ. ಬೆವರಿನ ಕಸುವು ಇನ್ನೂ ಉಳಿಸಿಕೊಂಡ ಹೆಣ್ಣುಗಂಡುಗಳ ಒಂದು ಕನಸು ಕಳೆದುಹೋಗುತ್ತದೆ. ಇದೇ ನಗರದ ಇನ್ನೊಂದು ಮೂಲೆಯಲ್ಲಿ ಅವರ ಕನಸಿನ ಬೀಜ ಮಣ್ಣಿಗೆ ಬಿದ್ದಿದೆ.

*

ಕನಸುಗಳ ಬೆಲೆ ದೊಡ್ಡದು. ಫ್ಲೈಓವರ್‌ನಿಂದಾಗಿ ಉಸಿರು ಸುಗಮವಾಗಿದೆ. ಹಾಗೆಂದು ಖುಷಿಯಾಗುವಷ್ಟರಲ್ಲೇ, ಹೊಸ ಚಕ್ರವ್ಯೂಹವೊಂದು ಸ್ವಲ್ಪದೂರದಲ್ಲೇ ಸೃಷ್ಟಿಯಾಗಿದೆ. ಉಸಿರಿನ ಮೂಲ ಬಡವಾಗಿದೆ. ಇದು ಅಗಣಿತ ಚಕ್ರವ್ಯೂಹಗಳ ಗಂಟುಗೊಂಚಲು.

ಫ್ಲೈಓವರ್‌ ಮೇಲೆ ಮತ್ತೆ ಚಕ್ರಗಳು ಉರುಳುತ್ತವೆ. ಬೃಹತ್‌ ಸಮಾಧಿಯಾಂದರ ಮೇಲೆ ಭಯಗ್ರಸ್ತ ಬಸ್ಸು ಓಡುತ್ತಿದೆ ಎನ್ನಿಸುತ್ತದೆ. ಸಮಾಧಿಯಡಿಯಲ್ಲಿ ಹೂತ ಬದುಕು, ಬೀಜ ಹಾಗೂ ಪಕ್ಷಿಗೀತಕ್ಕಾಗಿ ಒಳಮನಸ್ಸಿನ ಕಿವಿಕಣ್ಣುಗಳು ಕಾತರಿಸುತ್ತವೆ. ಮನಸ್ಸಿನ ಸ್ಥಾವರ ಹಾಗೂ ಜಂಗಮ ಭಾವಗಳ ಬೆಸೆಯಲೊಂದು ಸೇತು ಬೇಕನ್ನಿಸುತ್ತದೆ. ಎಲ್ಲ ಸೂಕ್ಷ್ಮಗಳ ಅರೆದು ಕುಡಿಯುವಂತೆ ವಾಹನಗಳ ಮೇಳದ ಅಬ್ಬರ ಅಲೆಅಲೆಯಾಗುತ್ತದೆ.

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more