ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುತ್ತೂರ ಸಂಜೆಯಲಿ ಹತ್ತು ವರುಷದ ನೆನಪು

By ಜೋಗಿ
|
Google Oneindia Kannada News

ಪ್ರಖರ ಸಂಜೆಗಳು ಅಪಾಯಕಾರಿ. ಅವು ಸೀದಾ ನಮ್ಮನ್ನು ಬಾಲ್ಯಕ್ಕೆ ಕೊಂಡೊಯ್ಯುತ್ತವೆ. ಮುಂಜಾನೆಯ ಮಂದ ಬೆಳಕು ಹುಟ್ಟಿನಂತೆ, ಮಧ್ಯಾಹ್ನದ ಸುಡುಸುಡು ಬಿಸಿಲು ಸಾವಿನಂತೆ ನಮ್ಮನ್ನು ತಲುಪಿದರೆ ಸಂಜೆಯ ಇಳಿಬಿಸಿಲಿಗೋ ಹಳೆಯ ನೆನಪುಗಳ ಹ್ಯಾಂಗೋವರ್‌. ಒಂದು ಪ್ರಖರ ಬೆಳಕಿನ ಸಂಜೆಗೆ ನಿಮ್ಮನ್ನು ಒಡ್ಡಿಕೊಂಡು ನೋಡಿ ಬೇಕಿದ್ದರೆ; ಜಲಪಾತದಲ್ಲಿ ಜಾರಿದಂತೆ ಕನಿಷ್ಠ ಹತ್ತು ವರುಷ ಹಿಂದಕ್ಕೆ ಹೊರಟು ಹೋಗುತ್ತೀರಿ. ಹಿಂದೆಂದೋ ಒಂದು ದಿನ ಇಂಥದ್ದೇ ಸಂಜೆಯಲ್ಲಿ ಧ್ಯಾನಿಸಿದ್ದೋ, ಪ್ರೇಮಿಸಿದ್ದೋ ಬರಿದೆ ಅಡ್ಡಾಡಿದ್ದೋ ನಿನ್ನೆಯಷ್ಟೆ ಓದಿದ ಕವಿತೆಯಷ್ಟು ನಿಚ್ಚಳವಾಗಿ ನೆನಪಾಗುತ್ತದೆ.

ಬಹುಶಃ ಅದಕ್ಕೇ ಇರಬೇಕು, ನಾವು ಬಹಳಷ್ಟು ಮಂದಿ ಸಂಜೆಗಳನ್ನು ನಿರಾಕರಿಸುತ್ತೇವೆ. ಹಳ್ಳಿಗಳಲ್ಲಿ ಸಂಜೆಗೂ ಮಧ್ಯಾಹ್ನಕ್ಕೂ ವ್ಯತ್ಯಾಸವೇ ಇರುವುದಿಲ್ಲ. ಮಲೆನಾಡಿನಲ್ಲಂತೂ ನೋಡನೋಡುತ್ತಿದ್ದ ಹಾಗೇ ಬಂಗಾರದ ಸಂಜೆ ಇರುಳೊಳಗೆ ಬಚ್ಚಿಟ್ಟುಕೊಂಡಿರುತ್ತದೆ. ಸಂಜೆಯ ಗುಣವೇ ಅದು. ಯಾವತ್ತೂ ಅದು ನಿಮಗೆ ಇಡಿಯಾಗಿ ಸಿಗುವುದಿಲ್ಲ. ಒಂದು ಒಳ್ಳೆಯ ಹವಳಗೆಂಪಿನ ಸಂಜೆ ನಿಮ್ಮ ಕೈಸೇರಬೇಕಿದ್ದರೆ ಜನ್ಮಾಂತರದ ಪುಣ್ಯ ಬೇಕು.

ಇಂಥ ಸಂಜೆಯ ಬಗ್ಗೆ ಯಾರೂ ಕವಿತೆ ಬರೆದಿಲ್ಲ. ಸಂಜೆಯ ರಾಗಕೆ ಬಾನು ಕೆಂಪೇರಿದೆ.. ಎನ್ನುವ ಸಾಲು ಓದಿ ಆಹಾ, ಸಂಜೆಯ ಮೇಲೊಂದು ಹಾಡು ಸಿಕ್ಕಿತು ಎಂದು ಖುಷಿಯಾದರೆ ಅಷ್ಟರಲ್ಲೇ ಅದು ಮುಸ್ಸಂಜೆಯ ಹಾಡಾಗಿ ರೂಪಾಂತರ ಹೊಂದುತ್ತದೆ-ತಿಂಗಳು ಮೂಡಿ ಬೆಳಕಿನ ಕೋಡಿ ಚೆಲ್ಲಾಡಿದೆ! ಬೇರೆ ಕವಿತೆಗಳನ್ನು ನೋಡಿದರೆ ಸಂಜೆಯ ಬಗ್ಗೆ ಕವಿತೆಗಳಿವೆಯೇ ಹೊರತು ಸಂಜೆಯೇ ಕವಿತೆಯಾಗಿ ರೂಪುಗೊಂಡಿಲ್ಲ. ಯಾಕೆ ಕವಿಗಳಿಗೆ ಸಂಜೆಯ ಬಗ್ಗೆ ಅಷ್ಟೊಂದು ಅವಜ್ಞೆ!

Evening ! An essay by Janaki

ಸಂಜೆಗೊಂದು ಕನಸಿನ ಗುಣವಿದೆ. ಸಂಜೆಗೊಂದು ನಿರ್ಲಿಪ್ತತೆಯಿದೆ. ಅದು ಇರುಳಿನ ಹಾಗೆ ನಿರ್ಲಜ್ಜವಲ್ಲ. ಮುಂಜಾನೆಯ ಹಾಗೆ ನಿಗೂಢವೂ ಅಲ್ಲ. ಹಳೆಯ ಗೆಳೆಯನ ಹಾಗೆ ಸಂಜೆ ಹಾಜರಾಗುತ್ತದೆ. ಅದಕ್ಕೆ ನಿಮ್ಮ ವಿಶೇಷ ಗಮನ ಬೇಕಿಲ್ಲ. ಕರೆದು ಕೂರಿಸುವ ಅಗತ್ಯವಿಲ್ಲ , ಸತ್ಕರಿಸಬೇಕಾದ ಅವಶ್ಯಕತೆಯೂ ಇಲ್ಲ.

ಅಂಥ ಸಂಜೆಗಳಲ್ಲೇ ಪೂರ್ವಜನ್ಮ ನೆನಪಾಗುತ್ತದೆ. ಕಳೆದು ಹೋದ ದಿನಗಳು ನೆನಪಿಗೆ ಬರುತ್ತವೆ. ಹಳೆಯ ಪ್ರೇಮ ಕಣ್ಣೆದುರು ಕುಣಿಯುತ್ತದೆ. ಸುಮ್ಮನೆ ಒಂದು ಮುತ್ತು ಸಂಜೆಗೆ ಮೈಮನವನ್ನೊಡ್ಡಿ ಕುಳಿತುಕೊಳ್ಳಿ.

***

ಅಂಥ ಸಂಜೆಯಲ್ಲೇ ಕಾಡುವ ಹಾಡು ಇದು.

ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ
ಅತ್ತಿತ್ತ ಸುಳಿದವರು ನೀವಲ್ಲವೆ?
ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂರಿನಲಿ
ಒಪ್ಪಿ ಕೈಹಿಡಿದವರು ನೀವಲ್ಲವೆ?

ಅವರ ಮದುವೆಯಾಗಿ ಹತ್ತು ವರುಷಗಳು ಸಂದಿವೆ. ಅದೊಂದು ಮುತ್ತು ಸಂಜೆಗೆ ಮೈಯಾಡ್ಡಿ ಕುಳಿತ ಆಕೆಗೆ ಮುತ್ತೂರ ತೇರು ನೆನಪಾಗುತ್ತದೆ, ಅಲ್ಲಿ ಅತ್ತಿತ್ತ ಸುಳಿದವರು ನೆನಪಾಗುತ್ತಾರೆ.

ಸಂಜೆಯ ನೆಪವಿಲ್ಲದೇ ಹೋದರೆ ಅದು ಯಾಕಾದರೂ ನೆನಪಾಗಬೇಕು? ಅವರು ಎದುರೇ ಕೂತಿರುವಾಗ ಹಳೆಯದನ್ನು ಆಕೆ ನೆನಪಿಸಿಕೊಂಡು ಯಾಕೆ ಸುಮ್ಮಾನ ಪಡಬೇಕು. ಬೆಟ್ಟಗಳ ಬೆನ್ನಿನಲಿ ಬೆಟ್ಟಗಲ ದಾರಿಯಲಿ ಕಟ್ಟಿಕೊಂಡು ಅಲೆದ ಕ್ಷಣಗಳನ್ನು ವರ್ತಮಾನದ ತಂತಿಗೆ ಯಾಕಾದರೂ ತೂಗುಹಾಕಬೇಕು.

ಅವನಾದರೂ ಅಷ್ಟೇ; ತಿಟ್ಟಿನಲಿ ಮುಂದಾಗಿ, ಕಣಿವೆಯಲಿ ಹಿಂದಾಗಿ ನಡೆದವನು. ತಿಟ್ಟು ಹತ್ತುವ ಹೊತ್ತಿಗೆ ಆಕೆಯ ಕೈಹಿಡಿದು ಏರಿಸಿ, ಕಣಿವೆಯಲ್ಲಿ ಬೆನ್ನಹಿಂದಿನ ಭಯಕ್ಕೆ ಆಸರೆಯಾಗಿ, ಸೆರಗೆಳೆದು ನಿಲ್ಲಿಸಿ, ಜಡೆಯೆಳೆದು ನೋಯಿಸಿ, ತೊತ್ತೆಂದು ಜರೆದು, ಮುತ್ತೆಂದು ಕರೆದು ಮೊದಲಿರುಳ ಹೊಂಗಸನ ಮುನ್ನೀರ ದಾಟಿಸಿದವನು.

ಹತ್ತು ವರುಷದ ದಾಂಪತ್ಯದ ಚಿತ್ರ ಇಷ್ಟು ಸೊಗಸಾಗಿ ಮೂವತ್ತಾರು ಸಾಲುಗಳಲ್ಲಿ ಮೂಡಿದ್ದು ಎಂಥ ಅಚ್ಚರಿ. ಕವಿತೆಯ ಬೆಡಗೇ ಅದು. ಯಾರೋ ಒಬ್ಬರು ತಮ್ಮ ಮಧುರ ದಾಂಪತ್ಯದ ನೆನಪನ್ನು ಸಾವಿರ ಪುಟಗಳಲ್ಲಿ ಬರೆಯಬಹುದು. ಆ ಸಾವಿರ ಪುಟಗಳ ಅನುಭವ ಅವರೊಬ್ಬರದೇ ಆಗಿರುತ್ತದೆ. ಆದರೆ ಇಲ್ಲಿ ಹಾಗಲ್ಲ ; ಮೂವತ್ತಾರು ಸಾಲುಗಳ ಕವಿತೆಯಲ್ಲಿ ಮೂಡಿದ ಅನುಭವ ಎಲ್ಲರದ್ದೂ ಆಗಿಬಿಡುತ್ತದೆ. ಮದುವೆ ಆಗದವನೂ ಅದನ್ನು ಸವಿಯಬಲ್ಲ.

ಬಾಗಿಲಿಗೆ ಬಂದವರು ಬೇಗ ಬಾ ಎಂದವರು
ಬಂದುದೇಕೆಂದವರು ನೀವಲ್ಲವೆ?
ನೋಡು ಬಾ ಎಂದವರು ಬೇಡ ಹೋಗೆಂದವರು
ಎಂದಿಗೂ ಬಿಡದವರು ನೀವಲ್ಲವೆ?

ಇಲ್ಲಿಯ ಕೊನೆಯ ಸಾಲನ್ನು ವರ್ತಮಾನಕ್ಕೆ ತಂದರೆ ವಿನಂತಿಯಾಗುತ್ತದೆ; ಎಲ್ಲಿದೆಯೋ ಅಲ್ಲೇ ಇಟ್ಟು ನೋಡಿದರೆ ಪ್ರೀತಿಯಾಗುತ್ತದೆ. ಹಾಗೇ ಒಂದೇ ಮಾತಲ್ಲಿ ಆಸೆ ಮತ್ತು ತೃಪ್ತಿ ಎರಡನ್ನೂ ಹೇಳಿದ್ದಾರೆ ಕವಿ; ನೀನೇ ಸಾಕೆಂದವರು, ನೀನೇ ಬೇಕೆಂದವರು, ಚಿತ್ತದಲಿ ನಿಂತವರು ನೀವಲ್ಲವೆ?

ಸಾಕು ಅನ್ನುವುದು ತೃಪ್ತಿ, ಬೇಕು ಎನ್ನುವುದು ದಾಹ. ಎರಡೂ ದಾಂಪತ್ಯದಲ್ಲಿ ಹೇಗೆ ಫಲಿಸಿದೆ ನೋಡಿ.

ಆತ ತುರುಬಿಗಿಟ್ಟ ಮಲ್ಲಿಗೆಯನ್ನು ಆಕೆ ನೆನಪಿಸಿಕೊಳ್ಳುವ ರೀತಿ ನೋಡಿ. ಹೂ ಮುಡಿಸುವುದು ಗಂಡಸಿಗೆ ಗೊತ್ತಿಲ್ಲದ ಕೆಲಸ. ಹೆಣ್ಣಿನಷ್ಟು ನಾಜೂಕಾಗಿ ಆತ ಎಂದೂ ಹೂಮುಡಿಸಲಾರ; ಮಲ್ಲಿಗೆಯ ದಂಡೆಯನು ತುರುಬಿನಲಿ ಗಿಡಿದವರು.. ಅಂತಾಳೆ ಆಕೆ.

ಹೀಗೆ ಹತ್ತು ವರುಷದ ದಾಂಪತ್ಯದ ನೆನಪು ಕೊನೆಯಲ್ಲಿ ವರ್ತಮಾನದ ಜಗಲಿಗೆ ಬರುತ್ತದೆ. ಆಕೆ ಕೇಳುತ್ತಾಳೆ;

ಪಯಣದಲಿ ಜೊತೆಯಾಗಿ ನಾನಿಲ್ಲವೆ?

***

ಈ ಹಾಡಿಗೂ ಸಂಜೆಗೂ ಏನು ಸಂಬಂಧವೋ ಗೊತ್ತಿಲ್ಲ. ಆದರೆ ಪ್ರತಿ ಸಂಜೆಯಲ್ಲೂ ಇದು ನೆನಪಾಗುತ್ತದೆ.

ಮುಸ್ಸಂಜೆಯ ಮುಂದೆ ಬೆತ್ತಲೆ ನಿಂತ ಸಂಜೆಯೆಂಬ ಗರುಡಗಂಭಕ್ಕೆ ಮನ ಜೋತುಬೀಳುತ್ತದೆ.

English summary
Evening ! An essay by Janaki (Jogi)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X