ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋವಿನಲಿ ಜೊತೆಗಿದ್ದ ಎಲ್ಲರಿಗೂ ಧನ್ಯವಾದ

By Staff
|
Google Oneindia Kannada News

Shikaripura Harihareshwara, Mysore।। ಶ್ರೀ ।।

ಕೃತಜ್ಞತಾ ಪತ್ರ

ಜುಲೈ 6, 2004 ರ ಮಂಗಳವಾರ ದೈವಾಧೀನರಾದ ನಮ್ಮ ತಾಯಿ ಶ್ರೀಮತಿ ಅನ್ನಪೂರ್ಣಮ್ಮ ಕೃಷ್ಣಸ್ವಾಮಿ ಅವರ ಉತ್ತರ ಕ್ರಿಯೆಗಳು ಮೈಸೂರಿನಲ್ಲಿ ಸಾಂಗವಾಗಿ ನೆರವೇರಿದವು.

ಸುದ್ದಿ ತಿಳಿದೊಡನೆ ಫೋನ್‌ ಮಾಡಿ (ಅಥವಾ ಕಾಗದ ಬರೆದು) ಸಂತಾಪಸೂಚಕ ಸಂದೇಶಗಳನ್ನ ಹಲವರು ಕಳಿಸಿದಿರಿ- ವಂದನೆಗಳು!

ನೆರೆಹೊರೆಯವರಾದ ನೀವು ಹಲವರು, ಬೆಂಗಳೂರಿನಲ್ಲಿ ನನ್ನ ತಮ್ಮ ಎಸ್‌.ಕೆ. ಸೀತಾರಾಮ-ವನಜಾಕ್ಷಿಯವರ ಮನೆಯಲ್ಲಿ , ನಮ್ಮ ತಾಯಿಯವರು ನಿಧನರಾದ ಸ್ಥಳದಲ್ಲಿ ನಿರಂತರ ವಿಷ್ಣುಸಹಸ್ರನಾಮ-ಗೀತಾಪಠನ ನಡೆಸಿದಿರಿ; ಶವಸಂಸ್ಕಾರ ಮುಂತಾದ ವ್ಯವಸ್ಥೆಯ ಹೊಣೆಯಲ್ಲಿ ಪಾಲುಗೊಂಡಿರಿ; ಸಂತಪ್ತ ವಾತಾವರಣದಲ್ಲಿದ್ದ ನಮಗೆ ಊಟೋಪಚಾರಗಳನ್ನು ಒದಗಿಸಿದಿರಿ, ಸಾಂತ್ವನ ನೀಡಿದಿರಿ- ನಿಮಗೆ ನಾವು ಆಭಾರಿಗಳು!

ಮೈಸೂರಿನ ‘ಶಾಂತಿ ವನ’ ದಲ್ಲಿ ನಡೆದ ‘ಧರ್ಮೋದಕ’ ಕಾರ್ಯಕ್ರಮದಲ್ಲಿ ನಿಮ್ಮಲ್ಲಿ ಹಲವರು ಆಪ್ತ ಬಂಧುಗಳು ಬಂದು ಭಾಗವಹಿಸಿದಿರಿ; ‘ನೀನು ಮಾಡಿದ ಪುಣ್ಯದ ಕೆಲಸಗಳ ಫಲದ ಜೊತೆಜೊತೆಗೆ ನಾವು ಮಾಡಿರಬಹುದಾದ ಪುಣ್ಯದ ಫಲವಾಗಿ ನೀನು ಸ್ವರ್ಗಕ್ಕೆ ಸೇರುವಂತಾಗಲಿ’- ಎನ್ನುತ್ತಾ ನಮ್ಮ ತಾಯಿಗೆ ‘ಧರ್ಮೋದಕ’ವನ್ನಿತ್ತಿರಿ; ನಿಮಗೆ ನಮ್ಮ ಕೃತಜ್ಞತೆಗಳು!

ಜುಲೈ 18, 2004ರ ಭಾನುವಾರ ಮೈಸೂರಿನ ‘ಶ್ರೀಕೃಷ್ಣಧಾಮ’ ದಲ್ಲಿ ನಡೆದ ‘ವೈಕುಂಠ ಸಮಾರಾಧನೆ’ಯಲ್ಲಿ ನೀವೆಲ್ಲಾ ಪಾಲ್ಗೊಂಡು ನಮ್ಮ ಅಮ್ಮನ ಆತ್ಮಕ್ಕೆಶಾಂತಿಯನ್ನು ಕೋರಿದಿರಿ. ನಿಮ್ಮ ಅತ್ಯವಶ್ಯಕ ಕೆಲಸಗಳನ್ನು ಬದಿಗೊತ್ತಿ ಆಗಮಿಸಿದ್ದಿರಿ; ದೂರದೂರದ ಊರುಗಳಿಂದಲೂ ಬಂಧುಗಳು ಬಂದಿದ್ದಿರಿ- ನಿಮಗೆಲ್ಲಾ ವಿಶೇಷ ಧನ್ಯವಾದಗಳು. ನಿಮ್ಮಲ್ಲಿ ಹಲವರು ನಮ್ಮಮ್ಮನ ಗುಣಕಥನ ಮಾಡಿ ಅವಳ ಬಗ್ಗೆ ಮಾತನಾಡಿ ನಮ್ಮನ್ನೆಲ್ಲಾ ಹರಸಿದಿರಿ.

ನಿಮ್ಮೆಲ್ಲರನ್ನು ನಾವು ಕೇಳಿಕೊಂಡೆವು:

‘ದಾತಾರೋ ನೋ ಅಭಿವರ್ದಂತಾಂ । ವೇದಾಸ್‌ ಸಂತತಿರ್‌ ಏವ ನಃ ।
ಶ್ರದ್ಧಾ ಚ ನೋ ಮಾ ವ್ಯಪಗಾತ್‌ । ಬಹುದೇಯಂ ಚ ನೋ ಅಸ್ತು ।।
ಅನ್ನಂ ಚ ನೋ ಬಹುಭವೇತ್‌ । ಅತಿಥಿಗ್‌ಂಶ್‌ ಚ ಲಭೇಮಹಿ ।
ಯಾಚಿತಾರಶ್‌ ಚ ನಸ್‌ ಸಂತು । ಮಾ ಚ ಯಾಚಿಷ್ಮ ಕಂಚನ ।।’

(ನಮ್ಮ ವಂಶದಲ್ಲಿ ಕೊಡುವವರೇ ಹೆಚ್ಚು ಹೆಚ್ಚಾಗಿರಲಿ. ನಮ್ಮ ಮಕ್ಕಳು ಜ್ಞಾನಿಗಳಾಗಿ ಮುಂದುವರೆಯಲಿ. ನಮ್ಮಲ್ಲಿ ಇರುವ ಶ್ರದ್ಧೆ ಕಡಿಮೆಯಾಗುವುದು ಬೇಡ. ನಾವು ಇನ್ನೂ ಹೆಚ್ಚು ಹೆಚ್ಚಾಗಿ ಕೊಡುವ ಮನಸ್ಸುಳ್ಳುವರಾಗಿರಲಿ. ನಮ್ಮ ಮನೆಗಳಲ್ಲಿ ಆಹಾರ ಪದಾರ್ಥಗಳು ಸಮೃದ್ಧಿಯಾಗಿರಲಿ. ನಮ್ಮ ಮನೆಗೆ ಮೇಲಿಂದ ಮೇಲೆ ಅತಿಥಿಗಳು ಬರುವಂತಾಗಲಿ. ಯಾವಾಗಲೂ ನಾವೇ ಕೊಡುವಂತಾಗಲಿ ನಾವು ಇನ್ನೊಬ್ಬರನ್ನು ಬೇಡುವಂತೆ ಆಗುವುದು ಬೇಡ.)

‘ಹಾಗೇ ಆಗಲಿ, ನಿಮ್ಮ ಇಷ್ಟಾರ್ಥಗಳು ಈಡೇರಲಿ, ನಿಮ್ಮ ಆಕಾಂಕ್ಷೆಗಳು ಪೂರೈಸಲಿ, ತಥಾಸ್ತು’- ಎಂದು ನೀವು ಹರಸಿದಿರಿ.

‘ಅದ್ಯ ಮೇ ಸಫಲಂ ಜನ್ಮ ಭವದ್‌ ಪಾದಾಬ್ಜ-ವಂದನಾತ್‌।
ಅದ್ಯ ಮೇ ವಂಶಜಾಃ ಸರ್ವೇ ಯಾತಾಃ ವೋ ಅನುಗ್ರಹಾದ್‌ ದಿವಂ ।।’

(ಇಂದು ನಿಮ್ಮ ಪಾದಕಮಲಗಳಿಗೆ ನಮಸ್ಕರಿಸಿದ್ದುದರಿಂದ ನಮ್ಮ ಜನ್ಮ ಸಫಲವಾಯಿತು. ನಿಮ್ಮ ಅನುಗ್ರಹದ ಫಲವಾಗಿ ನಮ್ಮ ವಂಶದಲ್ಲಿ ಹುಟ್ಟಿದ ಎಲ್ಲಾ ಹಿರಿಯರು ಪುಣ್ಯ ಲೋಕವನ್ನು ಸೇರಿದರು.)

- ಸ್ನೇಹದಲ್ಲಿ ನಿಮ್ಮ,

ಶಿಕಾರಿಪುರ ಹರಿಹರೇಶ್ವರ ([email protected])
ಮತ್ತು ದುಃಖತಪ್ತ ಬಂಧು-ಬಳಗ

== ಓಂ ==

ಮುಖಪುಟ / ಸಾಹಿತ್ಯ-ಸಂಸ್ಕೃತಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X