ಸಂಸ್ಕೃತಿ ಹಬ್ಬ-2004 : ನಾಗತಿಹಳ್ಳಿ ‘ಋಣಪ್ರಜ್ಞೆ’ಯ ಅಭಿವ್ಯಕ್ತಿ
- ದಟ್ಸ್‌ಕನ್ನಡ ಬ್ಯೂರೊ
...... ಈ ಮಾತುಗಳನ್ನು ಅತ್ಯಂತ ವಿನಯ ಮತ್ತು ಸಂತೋಷದಿಂದ ಹೇಳುತ್ತಿದ್ದೇನೆ. ಹಳ್ಳಿಗಾಡಿನಿಂದ ಬಂದ ನಮ್ಮಂಥವರಿಗೆಲ್ಲ ನಮ್ಮ ಹಳ್ಳಿಗಳನ್ನು ಸಾಂಸ್ಕೃತಿಕ ಕೇಂದ್ರಗಳನ್ನಾಗಿ ರೂಪಿಸುವ ಮತ್ತು ಕಾಪಾಡುವ ದೊಡ್ಡ ಹೊಣೆಗಾರಿಕೆ ಇದೆ. ಬೇರು ಗಟ್ಟಿಯಾಗಿದ್ದರೇ ತೆನೆಗಳು ಹೊಮ್ಮಲು ಸಾಧ್ಯ. ಬೇರಿನಿಂದ ತೆನೆ, ತೆನೆಯಿಂದ ಸಾವಿರಾರು ಕಾಳು. ಪ್ರತಿ ಕಾಳು ಬೇರನ್ನು ಕೃತಜ್ಞತೆಯಿಂದ ನೆನೆದು ಪ್ರೀತಿಯನ್ನು ಮತ್ತು ಶಕ್ತಿಯನ್ನು ಮರಳಿ ಕೊಡುತ್ತದೆ. ಈ ಋಣಪ್ರಜ್ಞೆಯಿಂದ ನಮ್ಮ ಹಳ್ಳಿಯಲ್ಲಿ ಗ್ರಂಥಾಲಯ, ಕಂಪ್ಯೂಟರ್ ಕೇಂದ್ರ, ಬಯಲು ರಂಗಮಂದಿರವನ್ನು ನಿರ್ಮಿಸಲಾಗಿದೆ. ವಿಜ್ಞಾನ, ಶಿಕ್ಷಣ, ಭಾಷೆ ಮತ್ತು ಸಂಸ್ಕೃತಿಗಳ ಮೂಲಕ ನಮ್ಮ ಎಳೆಯರು ಹೊಸ ಕಾಲವನ್ನು ಹೊಸ ಜಗತ್ತನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಈ ಸಂದರ್ಭದಲ್ಲಿ ಗೆಳೆಯರು, ಹಿರಿಯರು, ಕಿರಿಯರು ಎಲ್ಲ ಕೂಡಿ ಆರು ದಿನಗಳ ಸಂಸ್ಕೃತಿ ಹಬ್ಬವನ್ನಾಚರಿಸುತ್ತಿದ್ದೇವೆ. ನಿಮ್ಮ ಅನುಕೂಲದ ದಿನಗಳಲ್ಲಿ ಬಂದು ಹೋಗಿ.
- ನಾಗತಿಹಳ್ಳಿ ಚಂದ್ರಶೇಖರ
‘ನಾಗತಿಹಳ್ಳಿ ಸಂಸ್ಕೃತಿ ಹಬ್ಬ-2004’ರ ಆಹ್ವಾನ ಪತ್ರಿಕೆಯಲ್ಲಿನ ಸಾಲುಗಳಿವು. ಹನ್ನೆರಡು ಪುಟಗಳ ಆಹ್ವಾನ ಪತ್ರಿಕೆಯೆಂಬ ಈ ಪುಟ್ಟ ಪುಸ್ತಿಕೆ ಪ್ರೀತಿ ಉಕ್ಕಿಸುವಷ್ಟು , ಸೀದಾ ನಾಗತಿಹಳ್ಳಿಯ ಬಸ್ಸು ಹತ್ತುವಷ್ಟು ಮುದ್ದಾಗಿದೆ. ನಾಗತಿಹಳ್ಳಿಯೆಂದರೆ ಹಾಗೇನೇ, ಪ್ರತಿಯಾಂದರಲ್ಲೂ ಅಚ್ಚುಕಟ್ಟು : ‘ಅಭಿವ್ಯಕ್ತಿ ’ ವೇದಿಕೆಯ ಕಾರ್ಯಕ್ರಮವೊಂದರ ಅಹ್ವಾನ ಪತ್ರಿಕೆಯೇ ಇರಲಿ, ಸಿನಿಮಾದ ಸುದ್ದಿಗೋಷ್ಠಿಯ ಕರೆಯೋಲೆಯೇ ಆಗಲಿ, ಪತ್ರಿಕೆಗೆ ಕಳಿಸುವ ಲೇಖನವಾಗಲೀ, ಬಿಡಿಎ ಸೈಟ್‌ಗಾಗಿ ಸಲ್ಲಿಸುವ ಅರ್ಜಿಯಾದರೂ ಸರಿ- ಪ್ರತಿಯಾಂದರಲ್ಲೂ ನಾಗತಿಹಳ್ಳಿ ಗರಿಗರಿ ಇಸ್ತ್ರಿಯಂತೆ ಅಚ್ಚುಕಟ್ಟು . ಮಾತಲ್ಲೂ ಅಷ್ಟೇ ನಯ ನಾಜೂಕು; ಅಗತ್ಯಕ್ಕೆ ಬೇಕಾದಷ್ಟು ಬೆಣ್ಣೆಯಂಥ ಕೊಂಕು. ಅದು ನಾಗತಿಹಳ್ಳಿ ಸ್ಟೈಲ್!
‘ಚುಕ್ಕಿ ಚಂದ್ರಮರ ನಾಡಿನಲ್ಲಿ ’ ಕಾದಂಬರಿಯಾಗಲೀ, ಉಂಡೂ ಹೋದ ಕೊಂಡೂ ಹೋದ ಸಿನಿಮಾ ಆಗಲಿ, ವರ್ಷಂಪ್ರತಿಯ ಆಗಸ್ಟ್ 15ರ ಅಭಿವ್ಯಕ್ತಿಯ ಕಾರ್ಯಕ್ರಮವಾಗಲೀ, ವಿನಾಕಾರಣದ ಜಗಳ ಹಾಗೂ ಮುನಿಸು- ಯಾವುದರಲ್ಲೂ ನಾಗತಿಹಳ್ಳಿ ಸ್ಟೈಲ್ ಮಿಸ್ಸಾಗುವುದಿಲ್ಲ . ‘ನಾಗತಿಹಳ್ಳಿ ಸಂಸ್ಕೃತಿ ಹಬ್ಬ’ದಲ್ಲೂ ಇದೇ ಸ್ಟೈಲ್ ಮುಂದುವರಿದಿದೆ.
ಚೆಂದದ ಭಾವಗೀತೆ ಬರೆಯಬಲ್ಲ , ಕಾದಂಬರಿಯ ಸಾಲುಸಾಲುಗಳಲ್ಲೂ ಕಾವ್ಯದ ಬನಿ ತುಂಬಬಲ್ಲ, ಪಾಠ ಹೇಳುವಾಗಲೂ ತೇವ ಉಳಿಸಿಕೊಳ್ಳಬಲ್ಲ ನಾಗತಿಹಳ್ಳಿ ಚಂದ್ರಶೇಖರ್ ಮೂಲತಃ ಭಾವುಕರು. ಭಾವುಕತೆ ಎಂದರೆ ಸಿನಿಕತೆಯಲ್ಲ ; ಅದು ಒಳ್ಳೆಯತನದ ಒಂದಂಗ. ಈ ಒಳ್ಳೆಯತನದಿಂದಲೇ ನಾಗತಿಹಳ್ಳಿ ಹಳ್ಳಿಯ ಋಣ ಸಂದಾಯಕ್ಕೆ ಹೊರಟಿದ್ದಾರೆ. ಅದರ ಫಲವೇ- ‘ಸಂಸ್ಕೃತಿ ಹಬ್ಬ’.
ಸಂಸ್ಕೃತಿ ಹಬ್ಬ ಆರು ದಿನಗಳ ಸುಗ್ಗಿ . ಏಪ್ರಿಲ್ 18ರಿಂದು ಪ್ರಾರಂಭವಾಗಿರುವ ಈ ಹಬ್ಬ ಏಪ್ರಿಲ್ 23ರವರೆಗೂ ನಡೆಯಲಿದೆ. ನಾಗತಿಹಳ್ಳಿಯಲ್ಲಿ ಈ ಆರುದಿನವೂ ಹಗಲಿರುಳೂ ವಿವಿಧ ಕಾರ್ಯಕ್ರಮಗಳು. ನಾಗತಿಹಳ್ಳಿ ಚಂದ್ರಶೇಖರರ ಕೂಸು- ಅಭಿವ್ಯಕ್ತಿ ವೇದಿಕೆ ಹಾಗೂ ನಾಗತಿಹಳ್ಳಿಯ ಸ್ವಾಮಿ ವಿವೇಕಾನಂದ ಯುವಕ ರೈತಸಂಘ ಈ ಹಬ್ಬವನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಏನೇನು ಗಮ್ಮತ್ತುಂಟು ಗೊತ್ತಾ ? ಕೆಳಗಿನ ಪಟ್ಟಿಯ ಮೇಲೆ ಸುಮ್ಮನೆ ಕಣ್ಣಾಡಿಸಿ, ನಾಗತಿಹಳ್ಳಿಯ ಮೇಲೆ ಹೊಟ್ಟೆಕಿಚ್ಚು ಪಡಿ.
ಆರು ದಿನಗಳ ಹಬ್ಬದಲ್ಲಿ ....
- ಉಚಿತ ವೈದ್ಯಕೀಯ ಶಿಬಿರ
- ಗಿಡ ನೆಡುವ ಕಾರ್ಯಕ್ರಮ
- ಕುವೆಂಪು ಜ್ಯೋತಿ ಆಗಮನ
- ಜನಪದ ಉತ್ಸವ
- ನಾಟಕೋತ್ಸವ
- ಸಂಗೀತೋತ್ಸವ
- ಚಿತ್ರಕಲಾ ಉತ್ಸವ
- ಕವಿ ಮೇಳ
- ಕ್ರೀಡಾ ಮೇಳ
- ತಾರಾ ಮೇಳ
- ಹಾಸ್ಯೋತ್ಸವ
- ಹರಿಕಥೆ
ನಾಗತಿಹಳ್ಳಿಯ ಸಂಸ್ಕೃತಿ ಹಬ್ಬ ಕೇವಲ ಊರ ಜನರಿಗೆ ಮಾತ್ರ ಸೀಮಿತವಾಗಿಲ್ಲ . ನಾಡಿನ ವಿವಿಧ ಕ್ಷೇತ್ರಗಳ ಪ್ರಮುಖರು ಈ ಹಬ್ಬದಲ್ಲಿ ಭಾಗವಹಿಸುತ್ತಿದ್ದಾರೆ. ವಿಮರ್ಶಕ ಡಾ.ರಾಜೇಂದ್ರ ಚೆನ್ನಿ , ಬೆಂಗಳೂರಿನ ಮಾನಸ ಆಸ್ಪತ್ರೆಯ ಡಾ.ಸಂಜಯ್ ಗುಬ್ಬಿ, ಶಿವಮೊಗ್ಗದ ಖ್ಯಾತ ಮಾನಸಿಕ ವೈದ್ಯ ಡಾ.ಅಶೋಕ್ ಪೈ, ಸುರೇಶ್ ಹೆಬ್ಳೀಕರ್, ಡಾ.ಹೆಚ್.ಎಲ್‌ನಾಗೇಗೌಡ, ಡಾ.ಹೆಚ್.ನರಸಿಂಹಯ್ಯ, ಕುವೆಂಪು ವಿವಿ ಕುಲಪತಿ ಡಾ.ಚಿದಾನಂದ ಗೌಡ, ಚಂದ್ರಶೇಖರ ಕಂಬಾರ, ಸಿಜಿಕೆ, ಅಗ್ರಹಾರ ಕೃಷ್ಣಮೂರ್ತಿ, ಬರಗೂರು ರಾಮಚಂದ್ರಪ್ಪ , ಜಿ.ಎಸ್.ಶಿವರುದ್ರಪ್ಪ , ಜಯಂತ ಕಾಯ್ಕಿಣಿ, ನಿಸಾರ್ ಅಹಮದ್, ಬಿ.ಜಯಶ್ರೀ, ಮಹಾಬಲಮೂರ್ತಿ ಕೂಡ್ಲೆಕೆರೆ, ಡಿ.ಕೆ.ಚೌಟ, ಹಿರಣ್ಣಯ್ಯ, ವೈ.ಕೆ.ಮುದ್ದುಕೃಷ್ಣ, ಅಪ್ಪಗೆರೆ ತಿಮ್ಮರಾಜು, ಬಿ.ಚಂದ್ರೇಗೌಡ....... ಹೀಗೆ ಬೆಳೆಯುವ ಪಟ್ಟಿ , ನಾಗತಿಹಳ್ಳಿ ಚಂದ್ರಶೇಖರರ ಸ್ನೇಹಲೋಕದ ಉದ್ದಗಲಗಳಿಗೆ ಪುರಾವೆಯಂತಿದೆ.
ಅನಿವಾಸಿ ಕನ್ನಡಿಗರ ಪಾಲಿಗೆ ಆಚಾರ್ಯ ಸಮಾನರಾದ ಎಸ್.ಕೆ. ಹರಿಹರೇಶ್ವರ ಹಾಗೂ ನಾಗಲಕ್ಷ್ಮಿ ಹರಿಹರೇಶ್ವರ ಹಬ್ಬದ ಕವಿಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ದಂಪತಿಗಳಿಗೆ ಸನ್ಮಾನವೂ ಇದೆ.
ಕೋಲಾಟ, ಹರಿಕಥೆ, ಗ್ರಾಮದೇವತೆ ಹಬ್ಬ, ಎತ್ತುಗಳ ಅಲಂಕಾರ ಸ್ಪರ್ಧೆಯಂಥ ಅಪ್ಪಟ ಈ ನೆಲದ ಕಾರ್ಯಕ್ರಗಳು ಒಂದೆಡೆ, ಇನ್ನೊಂದೆಡೆ ತಾರಾಮೇಳ, ರಾಜ್ಯ ಪ್ರಶಸ್ತಿ ವಿಜೇತ (ಪ್ಯಾರಿಸ್ ಪ್ರಣಯ ಚಿತ್ರಕ್ಕೆ) ಸಂಗೀತ ನಿರ್ದೇಶಕ ಪ್ರಯೋಗ ಮತ್ತು ತಂಡದ ಸಂಗೀತೋತ್ಸವ, ಚಿತ್ರಕಲಾ ಪ್ರದರ್ಶನದಂಥ ಕಾರ್ಯಕ್ರಮಗಳೂ ಸಂಸ್ಕೃತಿ ಹಬ್ಬದಲ್ಲುಂಟು. ಬೆರಳ್‌ಗೆ ಕೊರಳ್, ಕಟ್ಟೆಪುರಾಣ, ನಮ್ಮೂರ ಗಾಂಧಿ, ಆಮ್ರಪಾಲಿ, ಆಲಿಬಾಬ ಮತ್ತು ನಲವತ್ತು ಕಳ್ಳರು, ಚಾರ್ಲಿ ಚಾಪ್ಲಿನ್, ಸುಲ್ತಾನ್ ಟಿಪ್ಪು , ವಿಶ್ವಬಂಧು ಮರುಳಸಿದ್ಧ ನಾಟಕಗಳನ್ನು ವಿವಿಧ ತಂಡಗಳು ಪ್ರದರ್ಶಿಸಲಿವೆ. ನಟ ಕರಿಬಸವಯ್ಯ ಭೂ ಕೈಲಾಸ ಹರಿಕಥೆ ಕಾರ್ಯಕ್ರಮ ನೀಡುವರು. ತಾರಾಮೇಳದಲ್ಲಿ ರಮೇಶ್, ಉಮೇಶ್, ಕರಿಬಸವಯ್ಯ, ಸುಂದರರಾಜ್, ಶಿವರಾಂ, ದತ್ತಣ್ಣ, ತಾರಾ, ಉಮಾಶ್ರೀ, ಮಿನಲ್, ಹೇಮಾ ಪಂಚಮುಖಿ, ಅಭಿನಯ, ಪವಿತ್ರಾ ಲೋಕೇಶ್ ಮುಂತಾದ ಸೆಳಕುಗಳಿವೆ.
ನಾಗತಿಹಳ್ಳಿ ಸಂಸ್ಕೃತಿ ಹಬ್ಬವನ್ನು ರಾಜಪ್ಪ ದಳವಾಯಿ ಮತ್ತು ಸಾಕ್ಷ್ಯಚಿತ್ರವನ್ನಾಗಿ ಚಿತ್ರೀಕರಿಸುವರು. ಛಾಯಾಗ್ರಹಣ ದುಬೈ ಚಂದ್ರು ಮತ್ತು ಡಿ.ಶ್ರೀನಿವಾಸ್ ಅವರದು.
ಅಂದಹಾಗೆ, ನೀವು ನಾಗತಿಹಳ್ಳಿಯ ಸಂಸ್ಕೃತಿಹಬ್ಬಕ್ಕೆ ಹೋಗುತ್ತೀರಾ ? ಯಾವುದಕ್ಕೂ ಈ ದಾರಿ ಗುರುತುಗಳು ನಿಮ್ಮ ನೆನಪಿನಲ್ಲಿರಲಿ : ಎ.ನಾಗತಿಹಳ್ಳಿ ಗ್ರಾಮವು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 48ರಲ್ಲಿ , ಬೆಂಗಳೂರಿನಿಂದ ನೆಲಮಂಗಲ- ಕುಣಿಗಲ್ ಮಾರ್ಗವಾಗಿ ನೂರಹತ್ತನೇ ಕಿ.ಮೀ.ನಲ್ಲಿದೆ.
ಎಲ್ಲೆಡೆ ಚುನಾವಣೆಯ ಜ್ವರ ಸಾಂಕ್ರಾಮಿಕವಾಗಿರುವ ಸಂದರ್ಭದಲ್ಲಿ , ಚಂದ್ರಶೇಖರ್ ತಮ್ಮೂರಿನಲ್ಲಿ ಹಬ್ಬ ಆಚರಿಸುತ್ತಿದ್ದಾರೆ. ಅದು ಊರಜನರ ಹಬ್ಬ. ‘ಕನಸುಗಾರ’ ನಾಗತಿಹಳ್ಳಿ ಚಂದ್ರಶೇಖರರಿಗೆ ಅಭಿನಂದನೆಗಳು. ನೀವೂ ಅಭಿನಂದನೆ ಹೇಳಿ. ನಾಗತಿಹಳ್ಳಿ ವಿಳಾಸ : ನಂ.166, ಸಿಹಿಕನಸು, 28 ನೇ ತಿರುವು, 11ನೇ ಮುಖ್ಯರಸ್ತೆ , ಬನಶಂಕರಿ 2ನೇ ಹಂತ, ಬೆಂಗಳೂರು- 560 070. ಇ-ಮೇಲ್- Nagathihalli@hotmail.com